ಜೀವನೋತ್ಸಾಹವನ್ನು,
ಕಿತ್ತೊಗೆಯಲು ಜೀವದುಸಿರು ಸಾಕು!.
ಆತ್ಮಾಹುತಿಯನ್ನು ಕಂಗೆಡಿಸಿದಷ್ಟು
ಆನಂದದ ಅನುಭೂತಿಯು!.
ಜೀವನಾನುಭವದ ಸಂಸ್ಕಾರವು

ಬ್ರಹ್ಮಾನಂದದ ಸಾಕ್ಷಾತ್ಕಾರವು!.

ವಯಸ್ಸಾದ ತಂದೆ ತಾಯಿ ನಮ್ಮ ಮುಂದೆ ತಮ್ಮಲೆಲ್ಲ ಜೀವನ ವೃತ್ತಾಂತ ಹೇಳುವಾಗ, ಅವರ ಮುಖ ಭಾವದಲ್ಲಿ ಆಗತಕ್ಕ ಬದಲಾವಣೆಗಳು, ಖುಷಿಯಾದಾಗ ಅವರ ಕಂಗಳು ಇಡೀ ಜಗತ್ತೆ ತಮ್ಮ ಕಂಗಳಲ್ಲಿ ಸಮೀಕರಿಸಿದಂತೆ.ಅದೇ ಸಂಕಷ್ಟದ ದಿನಗಳನ್ನು ಹೇಳುವಾಗ ಕಣ್ಮುಂದೆ ಕಷ್ಟದ ಕ್ಷಣಗಳ ಕಣ್ಣೀರು ಕಂಗಳಲಿ ತುಂಬಿದ್ದನ್ನು ಕಂಡಾಗ ಅಯ್ಯೋ! ಇದೆಂತಹ ಸನ್ನಿವೇಶ!. ವೃದ್ಧರ ವಯೋಮಾನದಲ್ಲಿ “ಯವ್ವನ” ಹೇಳಹೆಸರಿಲ್ಲದೆ ಮರೆಯಾಗಿದ್ದು ಅರ್ಥೈಸಲು ಸಾಧ್ಯವಿಲ್ಲ!.ಅವರೆಲ್ಲ ಆನಂದದ ಸುಖ ಅನುಭವಿಸಿದ್ದು,ಪರಿಸ್ಥಿತಿಗಳ ಒತ್ತಡದಲ್ಲಿ.ನಿಜವಾದ ಆನಂದ ತಮ್ಮ ಜೀವನದಲ್ಲಿ ಹಿಂತಿರುಗಿ ನೋಡುವಷ್ಟು ಸುಲಭವಾಗಿ ದಕ್ಕಿತೆ? ಪ್ರಶ್ನೆ ಮಾಡುವ ಕಾಲಾವಧಿ, ಕಾಲಚಕ್ರದಲ್ಲಿ ಸಿಲುಕಿ ಕಣ್ಮರೆಯಾಗಿದೆ…ಎಲ್ಲಿದೆ ಸುಖಾ? ಯಾರಿಂದ ಸಿಕ್ಕಿದೆ ಸಂತೋಷ? ನೋವು ಕಾಣದ ಆನಂದ ನಮ್ಮದಾಗಿದೆಯೇ? ಸತ್ಯದ ಹುಡುಕಾಟ ಕಣ್ಣೇದುರು ಪ್ರತ್ಯಕ್ಷವಾಗುವ ಹೊತ್ತಿಗೆ “ಆನಂದ “ವೆಂಬುದು ಬದುಕಿನ ಪುಟದಲ್ಲಿ ಲೀನವಾಗುವುದೇ?… ಸಂದೇಹ.

“ಆನಂದ” ಎನ್ನುವುದು ಎಲ್ಲರ ಕೈಗೆಟುಕುವ ಸುಲಭ ಸಾಧನವಲ್ಲ, ಒಬ್ಬ ತಾಯಿ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಅನುಭವಿಸುವ ನೋವನ್ನು ಯಾರಿಗೂ ಹಂಚಿಕೊಳ್ಳದ ಸ್ಥಿತಿಯಲ್ಲಿ ಇದ್ದಾಗ,ಅವಳಿಗೆ ಹೆರಿಗೆ ನೋವು ಸಹಜವೆಂದು ಹೇಳಿದರೂ,ಅದೇ ಹೆರಿಗೆ ನೋವಿನಿಂದ ಸಾವನ್ನಪ್ಪಿದವರ ಸಂಖ್ಯೆ ನೋವು ತರಿಸುತ್ತದೆ.ಆದರೆ,ತಾಯಿಗೆ ತನ್ನ ಮಗುವಿಗೆ ಜನ್ಮ ಕೊಟ್ಟ ಮೇಲೆ ಅವಳಿಗೆ ತಾನು ಅನುಭವಿಸಿದ ಸಂಕಷ್ಟಗಳನ್ನೆಲ್ಲ ಮರೆತು ಮಗುವಿನ ಮುಗ್ದ ನಗುವನ್ನು ತನ್ನ ಜೀವನದ ಸಾರ್ಥಕ ಆನಂದವನ್ನು ಅನುಭವಿಸುವ ಪರಿ ಯಾರಿಂದಲೂ ತಡೆಯದ ತಡೆಗೋಡೆ.ಭಗವಂತ ನೀಡುವ” ಆನಂದ ಆತ್ಮಾನಂದ ” ಎಂದರೆ ತಪ್ಪಾಗದು..ಪ್ರಕೃತಿ ನೀಡುವ ‘ಸಹಜಾನಂದ’ವನ್ನು ಸ್ವೀಕರಿಸುವ ವಿಶಾಲ ಮನೋಭಾವ ಅಂತರಂಗದಲ್ಲಿ ಜಾಗೃತವಾಗಬೇಕೆನಿಸುತ್ತದೆ.

ಪ್ರತಿಯೊಂದು ಜೀವಿಗೂ ಬದುಕುವ ಹಾಗೂ ಜೀವನ ಮುನ್ನಡೆಸುವ ಸಾಮರ್ಥ್ಯ ಇದ್ದೆ ಇದೆ. ಅದು ಬಡವ ಶ್ರೀಮಂತ ಎಂಬ ಬೇಧಭಾವ ಖಂಡಿತ ಇಲ್ಲ.ನಗುವುದು ಸಹಜವಾದರೂ,ನಗುವಿನ ಹಿಂದೆ ಅಡಗಿರುವ ನೋವಿಗೆ,ನಿವಾರಕ ಔಷಧವೇ ಆನಂದವೆಂದರೆ ನಂಬಲಾದಿತೇ?. ನಿಜ, ಮನುಷ್ಯನ ಜೀವಿತಾವಧಿ ಈಗ” ನೂರು” ವರ್ಷಗಳ ತನಕ ಇರುತ್ತೆ ಎಂಬುದು ಭರವಸೆಯ ಮಾತಿಲ್ಲ.ಅಕಾಲಿಕ ಮರಣವೇ ಹೆಚ್ಚುತ್ತಿರುವಾಗ ಐವತ್ತು ವರ್ಷ ದಾಟಿದರೆ ಸಾಕೆನಿಸುವ ಮಟ್ಟಕ್ಕೆ ಜೀವನ ಬಂದು ನಿಂತಿದೆ
ಯಾವಾಗ? ಯಾವ ಕ್ಷಣ? ಈಗಿದ್ದವರು ಇನ್ನೊಂದು ಗಳಿಗೆಯಲ್ಲಿ ಕಣ್ಮರೆಯಾಗುವಾಗ ಇನ್ನೆಲ್ಲಿಯ ಚಿಂತೆ?’ ಆನಂದ’ ಎಂಬುದು ಕೈಗೆಟುಕುವ ವಿಷಯವಲ್ಲ!. ಹುಟ್ಟು ಹಾಗೂ ಸಾವಿನ ನಡುವೆ ಎಲ್ಲರದೂ ಒಂದು ಥರ ಡೊಂಬರಾಟ!. ವಿಚಿತ್ರವಾದರೂ ಇದನ್ನು ನಿವಾರಿಸಲು ಬಾಹ್ಯ ಕೊಂಡಿಗಳು ಸಡಿಲವಾದಷ್ಟು ಆನಂದಕ್ಕೆ ಬೆಂಕಿ ಬಿದ್ದಂತೆಯೇ ಸರಿ!.

“ವೈರಾಗ್ಯ” ಅಥವಾ ಜಗತ್ತಿನ ಎಲ್ಲ ಮೋಹ ಮಾಯಗಳನ್ನು ತ್ಯಜಿಸುವ ತ್ಯಾಗ ಮನೋಭಾವ ಯಾರದಿದೆ? ಗಳಿಸಬೇಕು,ಇನ್ನೂ ಗಳಿಸಬೇಕು, ಮೂರು ತಲೆಮಾರು ಕೂತು ತಿಂದರು ತೀರದಷ್ಟು ಗಳಿಸಿ ಕೊನೆಗೆ ಸುಖ,ಸಂತೋಷ ಅನುಭವಿಸದೆ ಸತ್ತಾಗ ಅವನ/ಳ ಮುಖ ತಿಥಿಯ ಪೋಟೋದಲ್ಲಿ ಭಯಾನಕ ಅಥವಾ ಅತೃಪ್ತಿ ಹೊಂದಿದ ಚಹರೆ ಕಾಣುವಾಗ,ಆ ವ್ಯಕ್ತಿ ಜೀವನ ಪರ್ಯಂತ ತನ್ನ ಕುಟುಂಬಕ್ಕಾಗಿ ಹಗಲು ಇರುಳು ದಣಿವನ್ನು ಕಾಣದೆ  ದುಡಿದು ದುಡಿದು ಬ್ಯಾಂಕ ಬ್ಯಾಲೆನ್ಸ್, ಆಸ್ತಿ ಮಾಡಿ ಇನ್ನೇನು ‘ಆನಂದ’ ಕಾಣಬೇಕೆನ್ನುವ ಹೊತ್ತಿಲ್ಲಿ ಮರೆಯಾಗುವ
ದಿನಗಳು…ಇಷ್ಟೆಲ್ಲ ಯಾರಿಗಾಗಿ? ನಾಳೆಯ ಬಗ್ಗೆ ಗೊತ್ತಿಲ್ಲದ ನಮಗೆ ಇಂದಿನ ದಿನವನ್ನು ದುಃಖದಲ್ಲಿ ಕಳೆಯುವುದ್ಯಾಕೆ?. ಗೊತ್ತಿದ್ದೊ,ಗೊತ್ತಿಲ್ಲದೆಯೋ‌ ನಾವುಗಳು ನಾವೇ ಶಾಶ್ವತವೆಂದುಕೊಂಡು‌ ನಮ್ಮ ಹೆಸರನ್ನು ನಮ್ಮವರು ಉಳಿಸಿ ಅಜರಾಮರ ಗೊಳಿಸುವರೆಂಬ ಭ್ರಮೆಯಲ್ಲಿ ಬಿಗಿದ್ದಂತು ಸತ್ಯ.ಅವರಿಗೇನು ಗೊತ್ತು, ನಿನ್ನುಸಿರು ನಿಂತ ಕ್ಷಣವೇ ನಿನ್ನ ಮರೆಯುವರೆಂದು!.

“ಶ್ರೀ ವಿದ್ಯಾರಣ್ಯರ ಪಂಚದಶಿ”ಗ್ರಂಥದಲ್ಲಿ ಪಂಚಕೋಶಗಳೆಂದು ಐದು ಸ್ಥಿತಿಗಳನ್ನು ವಿವರಿಸಿ ಆ ಐದು ಸ್ಥಿತಿಗಳಲ್ಲೂ ” ವಿಷಯಾನಂದ, ಭಾವಾನಂದ,ವಿಜ್ಞಾನಾನಂದ,ಆತ್ಮಾನಂದ,ಬ್ರಹ್ಮಾನಂದ” ಎಂದು ಆನಂದವನ್ನು ಬಹುವಾಗಿ ವರ್ಣಿಸಿದ್ದಾರೆ.ಆತ್ಮನ ಸಹಜಾಸ್ಥಿತಿಯಲ್ಲಿ‌ ಆಗುವ ಅನುಭವವನ್ನು ಆತ್ಮಾನಂದವೆಂದು,ಜೀವಾತ್ಮ ಪರಮಾತ್ಮರ ಐಕ್ಯತೆಯ ಆನಂದವನ್ನು ಬ್ರಹ್ಮಾನಂದವೆಂದು ಉಲ್ಲೇಖಿಸಿರುವುದು ಯುಕ್ತವಾಗಿದೆ.ನಮಗೆ ಆನಂದವೆಂಬ ಪದ‌ವು ಬದುಕಿನ‌ ಸರ್ವೇಸಾಮಾನ್ಯ ಪದವಾಗಿದ್ದರು,ಅದರ ಅನುಭೂತಿ‌ಯನ್ನು ಅನುಭವಿಸಿದವನಿಗೆ ಮಾತ್ರ ಅದರ ಸುಖ ಲಭಿಸಲು ಸಾಧ್ಯ!.ಇಂತಹ ನಿರ್ಲಿಪ್ತ ಭಾವ ಉಕ್ಕುವುದು ಕೇವಲ ಆತ್ಮನಾಂದದಿಂದ ಮಾತ್ರ!.

ಒಟ್ಟಾರೆಯಾಗಿ ಹೇಳುವುದಾದರೆ, ಕಣ್ಣಿಗೆ ಕಾಣುವ ಮುಖವಾಡದ ಖುಷಿಗಿಂತ,ಆತ್ಮದಲ್ಲಾಗುವ ಖುಷಿಗೆ ಹೆಚ್ಚಿನ ಆದ್ಯತೆ.ನಮ್ಮ ಜೀವನ ವೃತ್ತಾಂತ ಒಂದು ಚಕ್ರದಡಿಯಲ್ಲಿ ಹೇಳಲಾರದ ನೋವನ್ನು, ನೆಮ್ಮದಿಯನ್ನು ಕಿತ್ತುಕೊಂಡು ಬದುಕುವ ಜನರ ನಡುವೆ,ಹಿಂದೆ ಆಗಿ ಹೋದ ಮಹಾನ್ ವ್ಯಕ್ತಿಗಳು ತಮ್ಮೆಲ್ಲ ಸಕಾರಾತ್ಮಕ ಚಟುವಟಿಕೆಗಳಿಂದ ಕಾನನದಲ್ಲಿ ದೈವತ್ವವನ್ನು ಅರಸಿ ದೈವದಲ್ಲಿ ಲೀನವಾಗಿ ಆತ್ಮಾನಂದದಿಂದ,ಬ್ರಹ್ಮಾನಂದ ಕಾಣುವ ಮನಸ್ಥಿತಿ ನಮಗೆ ಈ ಜನ್ಮದಲ್ಲಿ ಬರವುದಾ? ಅದು ಸಾಧ್ಯವಾ? ಗೊತ್ತಿಲ್ಲ.ಹೇಳಿದ್ದೆಲ್ಲವೂ ನಮ್ಮ ಬಳಿ ಬಂದು ಸೇರುವುದಿದ್ದರೆ ನಮ್ಮಂತಹ ಪುಣ್ಯವಂತರು ಯಾರಿಹರು?.ದೈವ ಸಂಕಲ್ಪದ ಮುಂದೆ ಪ್ರಕೃತಿಯ ರಹಸ್ಯ ಬೇಧಿಸುವುದು ಒಂದು ಕಗ್ಗಂಟಿನಂತೆ!. ಆತ್ಮದ ಅನುಭೂತಿ ಆತ್ಮದೊಳು.


2 thoughts on “

  1. ನಿಸ್ವಾರ್ಥ ಭಾವದಿಂದ ಬದುಕಿದವರ ಜೀವನ ನಿಜವಾಗಿಯೂ ಪಾವನ‌‌.ಅಲ್ಲದೆ ಏನೇ ಕಳೆದುಕೊಂಡರೂ ಮಾಡಿದ ಕೆಲಸದಲ್ಲಿ ತೃಪ್ತಿ ಇದ್ದಾಗ ಆನಂದದ ಅನುಭೂತಿ ಖಂಡಿತವಾಗಿ ಸಿಗುವುದು.ಎಷ್ಟೋ ಜನರ ಬದುಕಿನಲ್ಲಿ.. ಬಾಲ್ಯದಲ್ಲಿ, ಯೌವ್ವನದಲ್ಲಿ,ತುಂಬಾನೆ ಕಷ್ಟ ಪಟ್ಟು ಒಂದು ಹಂತಕ್ಕೆ ಉದ್ಯೋಗ ಮಾಡ್ತಾ ಇನ್ನೇನು ಚೇತರಿಸಿಕೊಳ್ಳಬೇಕೆನ್ನುವುದರಲ್ಲಿ ಕಾಯಿಲೆಗೆ ಬಲಿಯಾಗಿ ನಿಷ್ಪ್ರಯೋಜಕ ಆಗಿಬಿಡುತ್ತಾನೆ.ಲೇಖನ ಅರ್ಥಗರ್ಭಿತ ಆಗಿದ್ದು ಒಬ್ಬ ವ್ಯಕ್ಕಿಯ ಬದುಕು ಹೇಗೆಲ್ಲ ತಿರುವು ಕಾಣುವುದೆಂದು ಬಿಂಬಿಸಿದ್ದಾರೆ.ಶಿವಲೀಲಾ ಮೆಡಮ್ ಅವರ ಸಾಹಿತ್ಯ ಓದಿದಾಗ ನರಳುವವನು ಎದ್ದು ಕುಳಿತುಕೊಳ್ಳುವನು.ಹೃದಯಕ್ಕೆ ನಾಟುತ್ತವೆ ಅಭಿನಂದನೆಗಳು.

Leave a Reply

Back To Top