ಭಾಷಾ ಸಂಗಾತಿ
ಅಪ್ಪಾಜಿ ಎ ಮುಸ್ಟೂರು
“ಭಾಷೆಯನ್ನು ಬೆಳೆಸುವಲ್ಲಿ
ಸಾಹಿತ್ಯ ಸಮ್ಮೇಳನಗಳು ಸೋತಿವೆ”
ಕನ್ನಡ ಸಾರಸ್ವತ ಲೋಕ ಅಗಾಧವಾಗಿ ಬೆಳೆದ ಕ್ಷೇತ್ರ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡು ಬೀಗುತ್ತಿದೆ ಕನ್ನಡ ಸಾಹಿತ್ಯ. ಬರೆದವರು ಯಾರೆಂದು ತಿಳಿಯದ ಜನರ ಬಾಯಿಂದ ಬಾಯಿಗೆ ಬೆಳೆದು ಬಂದ ಜಾನಪದ ಸಾಹಿತ್ಯ, ಜನಸಾಮಾನ್ಯರಿಗೆ ಅರ್ಥವಾಗುವ ತಮ್ಮದೇ ಭಾಷೆಯಲ್ಲಿ ಕೈಕೆಟುಕಿದ ಶರಣರ ವಚನ ಸಾಹಿತ್ಯ, ಜಗದ ಅಂಕುಡೊಂಕುಗಳನ್ನು ತಿದ್ದುತ್ತಾ ತ್ರಿಪದಿಗಳ ಮೂಲಕ ಜನಮಾನಸದಲ್ಲಿ ಉಳಿದ ಸರ್ವಜ್ಞನ ತ್ರಿಪದಿಗಳು, ದಾಸವರೇಣ್ಯರ ಕೀರ್ತನೆಗಳು, ನವ್ಯ, ನವೋದಯ , ದಲಿತ, ಬಂಡಾಯ ಸಾಹಿತ್ಯಗಳೆಲ್ಲವೂ ಬದುಕಿನ ಭಾಗವಾಗಿ ಸಾಹಿತ್ಯದ ಓದುಗನ ಅಭಿರುಚಿಗೆ ತಕ್ಕಂತೆ ಬೆಳೆದು ಉಳಿದು ಬಂದಿವೆ. ಪ್ರತಿಯೊಂದು ಪ್ರಕಾರವು ತನ್ನದೇ ಆದ ಪ್ರಭಾವವನ್ನು ಸಮಾಜದ ಮೇಲೆ ಬೀರುತ್ತಾ ತನ್ನ ಪ್ರಸ್ತುತತೆಯನ್ನು ಅರ್ಥ ಮಾಡಿಸುತ್ತಾ ಬೆಳೆದು ಬಂದಿದೆ. ಅದಕ್ಕಾಗಿ ಶ್ರಮಿಸಿದವರು ಅನೇಕರು. ತನು ಮನ ಧನಗಳನ್ನು ಅರ್ಪಿಸಿ ಅವರು ಈ ಸಾಹಿತ್ಯದ ಪ್ರಕಾರಗಳನ್ನು ಜೀವಂತವಾಗಿರಿಸಿ ಹೋಗಿದ್ದಾರೆ. ಪ್ರತಿಯೊಂದು ಪ್ರಕಾರವು ತನ್ನದೇ ಆದ ಓದುಗ ಬಳಗವನ್ನು ಹೊಂದಿದ್ದು ಅದರ ಸಾಧಕ ಬಾಧಕಗಳನ್ನು ಪ್ರತಿಯೊಬ್ಬರು ಅರಿಯುತ್ತಿದ್ದಾರೆ.
ಕವಿ ಲೇಖಕ ಬರಹಗಾರ ವಿಮರ್ಶಕ ಓದುಗ ಇವರೆಲ್ಲ ಸಾಹಿತ್ಯದ ಕೊಂಡಿಗಳು. ಇಲ್ಲಿ ಯಾವುದೇ ಒಂದು ಕೊಂಡಿ ತಪ್ಪಿದರೂ ಸಾಹಿತ್ಯದ ಹರಿವು ನಿಂತಂತೆಯೇ ಸರಿ. ಬರಹಗಾರ ತನ್ನ ಓದು ಪಾಂಡಿತ್ಯ ಅನುಭವ ಹಾಗೂ ವಿಷಯ ಮಂಡನೆಯಲ್ಲಿ ತನ್ನದೇ ಛಾಪನ್ನು ಮೂಡಿಸಲು ಪ್ರಯತ್ನಿಸುತ್ತಿರುತ್ತಾನೆ. ಹಾಗೆ ಒಬ್ಬ ವಿಮರ್ಶಕ ಬರೆದಿರುವ ಬರಹಗಳು ಎಷ್ಟರಮಟ್ಟಿಗೆ ಸತ್ವಯುತವಾಗಿದೆ ಸಮಾಜಕ್ಕೆ ಅದರಿಂದ ಆಗುವ ಪ್ರಯೋಜನಗಳು ಅಪಾಯಗಳು ಸದರಿ ಬರಹ ಇನ್ನಷ್ಟು ಸದೃಢ ಸತ್ವಯುತವಾಗಲು ಬರಹಗಾರನಿಗೆ ಸಲಹೆ ಸೂಚನೆಯನ್ನು ನೀಡುತ್ತಾನೆ. ಇನ್ನು ಓದುಗ ತನ್ನ ಆಸಕ್ತಿಯ ಕ್ಷೇತ್ರದ ಬರಹಗಳನ್ನು ಓದುವ ಮೂಲಕ ಅದರ ಪ್ರಸ್ತುತತೆಯನ್ನು ಅರಿಯುವುದರ ಜೊತೆಗೆ ತನ್ನ ಅನುಭವದ ಮೂಸೆಯಲ್ಲಿ ಅದನ್ನು ಅರ್ಥ ಮಾಡಿಕೊಂಡು ಆ ಸಾಹಿತ್ಯವನ್ನು ಮತ್ತಷ್ಟು ಪ್ರಚಾರಪಡಿಸಿ ಮುಂದುವರಿಸುತ್ತಾನೆ. ಹೀಗೆ ಈ ಎಲ್ಲರೂ ಸೇರಿ ಸಾಹಿತ್ಯದ ಗುರಿ ಉದ್ದೇಶಗಳನ್ನು ಸಾಧಕ ಬಾಧಕಗಳನ್ನು ಸದಾ ಚರ್ಚೆಗೊಳಪಡಿಸಿ ಅದನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುತ್ತಾರೆ.
ಸಾಹಿತ್ಯವೆಂಬುದು ಹಿಂದೆ ಅನುಭವದಲ್ಲಿ ಅನುಭಾವದಲ್ಲಿ ವ್ಯಕ್ತವಾಗುತ್ತಾ ಅದಕ್ಕೆ ಲಿಪಿಯನ್ನು ಹೊಂದಿಸಿ ತಾಳೆಗರಿ, ಶಿಲಾ ಶಾಸನ, ಲೋಹ ಶಾಸನ ಪುಸ್ತಕ ಹೀಗೆ ಅವುಗಳನ್ನು ಹಿಡಿದಿಡುವ ಕೆಲಸ ಸಾಹಿತ್ಯ ಬರಹದ ಜೊತೆ ಜೊತೆಗೆ ಸಾಗಿದೆ. ಪ್ರಕಾಶನ , ದೃಶ್ಯ ಮಾಧ್ಯಮ , ಶವ್ಯ ಮಾಧ್ಯಮಗಳ ಮುಖಾಂತರ ಈ ಎಲ್ಲ ಸಾಹಿತ್ಯ ಪ್ರಕಾರಗಳು ತಲತಲಾಂತರದಿಂದ ಮುನ್ನಡೆದುಕೊಂಡು ಬಂದಿದೆ. ಬರಹಗಾರನ ಬರಹಗಳನ್ನು ಪ್ರಕಾಶಕ ಹಚ್ಚಿಗೆ ಹಾಕಿ ಪುಸ್ತಕ ರೂಪದಲ್ಲಿ ತಂದು ಮಾರಾಟ ಮಾಡಿ ಅದರಿಂದ ಬರುವ ಸಂಪಾದನೆಯನ್ನು ಬರಹಗಾರನಿಗೂ ಪ್ರಕಾಶಕನಿಗೂ ಮಾರಾಟಗಾರರಿಗೂ ಹಂಚುವ ಮೂಲಕ ಒಂದು ವ್ಯವಸ್ಥೆಯಲ್ಲಿ ಸಾಹಿತ್ಯವನ್ನು ಉಳಿಸಿ ಬೆಳೆಸಿ ಪ್ರಚಾರ ಮಾಡಿ ಜನರಿಗೆ ತಲುಪಿಸುತ್ತಾರೆ. ಹಿಂದೆಲ್ಲ ಈ ಕಾರ್ಯಕ್ಕೆ ರಾಜಶ್ರಯವೂ ಸಿಗುತ್ತಿತ್ತು. ಎಲ್ಲಾ ಕೃತಿಗಳನ್ನು ಬರಹಗಾರ ವಿಮರ್ಶಕ ವಿದ್ವಾಂಸ ಓದುಗ ಇವರು ಸೇರಿಕೊಂಡು ಅದರ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ ಸಮಾಜದ ಒಳಿತಿಗಾಗಿ ಬಳಸಿಕೊಳ್ಳುತ್ತಿದ್ದರು. ಇದರಿಂದ ಸಾಹಿತ್ಯ, ಭಾಷೆ, ಬರಹಗಾರ ಎಲ್ಲರೂ ಬದುಕುತ್ತಿದ್ದರು.
ಸಾಹಿತ್ಯ ಎಂಬುದು ಸದಾ ಚಲನಶೀಲವಾಗಿರಬೇಕು. ಅದು ಎಲ್ಲಿಯೂ ನಿಲ್ಲಬಾರದು ಬದಲಾಗಿ ಕಾಲ ದೇಶ ಭಾಷೆಯನ್ನು ಮೀರಿ ಸಾಗುತ್ತಿರಬೇಕು. ಅದಕ್ಕಾಗಿ ಆಗಾಗ ಜನರ ಬಳಿಗೆ ಸಾಹಿತ್ಯವನ್ನು ಕೊಂಡಯುವ ಕೆಲಸವನ್ನು ಸಮಾವೇಶಗಳು ಸಮ್ಮೇಳನಗಳು ಮಾಡುತ್ತಾ ಬಂದವು. ಇಲ್ಲಿ ಪ್ರತಿಯೊಂದು ಕೃತಿಯು ಓದುಗನಿಗೆ ಒಂದೇ ವೇದಿಕೆಯಲ್ಲಿ ದೊರೆಯುವ ಅವಕಾಶ ಸಿಕ್ಕಿತು. ಇದರಿಂದ ಓದುವವನಿಗೆ ಹುಡುಕುವ ಕೆಲಸ ಕಡಿಮೆಯಾಗಿ ಒಂದೇ ಸೂರಿನಲ್ಲಿ ಹಲವಾರು ಪ್ರಕಾರಗಳ ಕೃತಿಗಳು ಕೈಗೆಟಕುವಂತಾಯಿತು. ಪುಸ್ತಕ ಮಾರಾಟದ ಧ್ಯೇಯದೊಂದಿಗೆ ಆರಂಭವಾದ ಸಮ್ಮೇಳನಗಳು ಮುಂದೆ ಬರುಬರುತ್ತಾ ಜಾತ್ರೆಯ ಸ್ವರೂಪವನ್ನು ಹಬ್ಬದ ಸಂಭ್ರಮವನ್ನು ತಂದುಕೊಡುವ ವೇದಿಕೆಯಾಯಿತು. ಇದಕ್ಕಾಗಿ ಆಯೋಜಕರು ಲಕ್ಷ ಕೋಟಿಗಳ ಲೆಕ್ಕದಲ್ಲಿ ಆಯವ್ಯಯವನ್ನು ಬಳಸುವಂತಾಯ್ತು. ಲಕ್ಷಾಂತರ ಜನ ಸಮೂಹ ಒಂದೆಡೆ ಸೇರಿ ಸಾಹಿತ್ಯದ ಈ ಸಂಭ್ರಮವನ್ನು ಸವಿಯುವಂತಾಯ್ತು.
ಸಾಹಿತ್ಯ ಸಮ್ಮೇಳನಗಳನ್ನು ಸರ್ಕಾರಗಳು ನಡೆಸುವ ವ್ಯವಸ್ಥೆ ಜಾರಿಗೆ ಬಂದ ಮೇಲೆ ಅಲ್ಲಿ ಸಾಕಷ್ಟು ಬದಲಾವಣೆಗಳಾದವು. ಸರ್ಕಾರ ಸಾಹಿತ್ಯ ಸಮ್ಮೇಳನಗಳಿಗೆ ಇಂತಿಷ್ಟು ಕೋಟಿಗಳಲ್ಲಿ ಅನುದಾನವನ್ನ ಒದಗಿಸಲು ಶುರುವಾಯಿತು. ಇದರಿಂದ ಸಾಹಿತ್ಯದ ಜಾತ್ರೆ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿತು. ಕೇವಲ ಸಾಹಿತ್ಯದ ಕುರಿತು ಚರ್ಚೆಗಳಾಗುತ್ತಿದ್ದು ಇತ್ತೀಚೆಗೆ ಸಾಹಿತ್ಯಕ್ಕಿಂತ ಅಲ್ಲಿ ಕೊಡುವ ಸವಲತ್ತುಗಳ ಬಗ್ಗೆ ಹೆಚ್ಚು ಗಮನಹರಿಸುತ್ತಿರುವುದು ವಿಷಾದವನಿಸುತ್ತದೆ. ಸಾಹಿತ್ಯ ಮತ್ತು ಸಾಹಿತ್ಯ ಪ್ರೇಮಿಗಳ ನಡುವಿನ ಕೊಂಡಿಯಾಗಿ ಸಾಹಿತ್ಯ ಸಮ್ಮೇಳನಗಳು ನಡೆಯುವ ಬದಲು ವ್ಯವಹಾರದ ವ್ಯರ್ಥ ಖರ್ಚುಗಳ ಅನರ್ಥ ಅಭಿಪ್ರಾಯಗಳ ಸ್ವಾರ್ಥ ಚಿಂತನೆಗಳ ವೇದಿಕೆಗಳಾಗುತ್ತಿರುವುದು ವಿಪರ್ಯಾಸವಾಗಿದೆ. ಸಮ್ಮೇಳನಗಳ ವ್ಯವಸ್ಥೆಗೆ ಹತ್ತಾರು ಸಮಿತಿಗಳು ಅದಕ್ಕೆ ನೂರಾರು ಸದಸ್ಯರುಗಳು ಸೇರಿಕೊಂಡು ಮೂರು ದಿನದ ಸಂತೆಯನ್ನು ಮಾಡುವ ಪರಿ ಪಾಠ ಹೆಚ್ಚಾಗಿದೆ. ಸಮ್ಮೇಳನಗಳಲ್ಲಿ ಸೇರಿರುವ ಜನ ಸಮೂಹಕ್ಕೆ ಊಟ ವಸತಿ ಸಾರಿಗೆ ವ್ಯವಸ್ಥೆ ಮಾಡುವುದೇ ದೊಡ್ಡ ಸಮಸ್ಯೆ. ಇದಕ್ಕಾಗಿಯೇ ಲಕ್ಷಾಂತರ ಹಣವನ್ನ ವ್ಯಯ ಮಾಡಬೇಕಾಗುತ್ತದೆ. ಇದನ್ನು ಆಯೋಜಿಸಿರುವವರಿಗೆ ಕುಂದು ಕೊರತೆಗಳಾಗದಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರೆ ಅದೇ ಒಂದು ದೊಡ್ಡ ಯುದ್ಧವನ್ನು ಗೆದ್ದ ಅನುಭವ. ಇಲ್ಲಿಗೆ ಬಂದು ಹೋಗುವ ನೂರರಲ್ಲಿ 10 ಜನ ಸಾಹಿತ್ಯದ ಕುರಿತು ಚರ್ಚೆಗಳನ್ನು ಮಾಡಿದರೆ ಸಾರ್ಥಕ ಎನ್ನಬಹುದು. ಆದರೆ ಇಲ್ಲಿ ಆಗುವುದೇ ಬೇರೆ ಸಮ್ಮೇಳನಕ್ಕೆಂದು ಬಂದ ಜನ ಸಮ್ಮೇಳನದಲ್ಲಿ ನಡೆಯುವ ಅದೆಷ್ಟೋ ಗೋಷ್ಠಿಗಳಿಗೆ ಖಾಲಿ ಕುರ್ಚಿಯ ಬಳುವಳಿ ಸಿಕ್ಕಿರುತ್ತದೆ. ವೇದಿಕೆಯ ಮೇಲೆ ಗಣ್ಯಾತಿ ಗಣ್ಯರು ಭಾಗವಹಿಸಿ ಸಂಬಂಧ ಪಡೆದ ವಿಚಾರಗಳಿಗೆ ಮನ್ನಣೆ ನೀಡಿ ಹೋಗುತ್ತಾರೆ. ಸಾಹಿತಿಗಳು ವಿದ್ವಾಂಸರು ಸೇರಿ ಭಾಷೆ ಸಾಹಿತ್ಯದ ಕುರಿತು ಚರ್ಚೆಗಳು ವಿಚಾರ ಮಂಡನೆಗಳ ಕುರಿತು ಮಾತನಾಡುತ್ತಿದ್ದರೆ ಕೆಲವೇ ಕೆಲವು ಪ್ರೇಕ್ಷಕರನ್ನು ಹೊರತುಪಡಿಸಿ ಉಳಿದವರು ಫೋಟೋಪಚಾರ ಆಕರ್ಷಣೀಯ ಅಗತ್ಯ ವಸ್ತುಗಳ ಖರೀದಿಯಲ್ಲಿ ಮಗ್ನರಾಗಿರುತ್ತಾರೆಯೇ ಹೊರತು ಸಮಾವೇಶದ ಉದ್ದೇಶವನ್ನು ಯಾರು ಅರ್ಥ ಮಾಡಿಕೊಳ್ಳುವುದಿಲ್ಲ. ಹೀಗಾಗಿ ವ್ಯವಸ್ಥೆಗೆ ಖರ್ಚು ಮಾಡಿದ ಹಣ ಸಾಹಿತ್ಯದ ಬೆಳವಣಿಗೆಗೆ ಎಳ್ಳಷ್ಟು ಪ್ರಯೋಜನಕಾರಿಯಾಗುವುದಿಲ್ಲ. ಆಯೋಜಕರಿಗೆ ಸಮ್ಮೇಳನಗಳಿಗಾಗಿ ಮಾಡುವ ವೆಚ್ಚದ ಬಹು ಪಾಲು ಅಲ್ಲಿ ಹಾಕಿರುವ ವಿವಿಧ ಪ್ರಕಾರದ ಮಳಿಗೆಗಳ ಮೂಲಕ ಹಿಂಪಡೆಯುವ ಲೆಕ್ಕಾಚಾರಗಳೇ ಅಧಿಕವಾಗಿರುತ್ತವೆ. ಹಾಗಾಗಿ ಅಲ್ಲಿ ಸಾಹಿತ್ಯಕ್ಕೆ ಪೂರಕವಲ್ಲದ ಜನರ ಆಕರ್ಷಣೆಗೆ ಯುಕ್ತವಾದ ಅಂಗಡಿ ಮುಂಗಟ್ಟುಗಳನ್ನು ಕಾಣುತ್ತೇವೆ.
ಸಾಹಿತ್ಯ ಸಮ್ಮೇಳನಗಳಿಗೆ ಖರ್ಚು ಮಾಡುವ ಹಣವನ್ನು ಪ್ರತಿ ವರ್ಷ ಇಂತಿಷ್ಟು ಹೊಸಬರ ಬರಹಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತಿನ ಪ್ರಕಾಶನದೊಂದಿಗೆ ಹೊಸ ಬರಹ ಕಾರ್ಯಗಳನ್ನು ಪ್ರೋತ್ಸಾಹಿಸಿದಾಗ ಸಾಹಿತ್ಯ ಇನ್ನಷ್ಟು ಉತ್ಕೃಷ್ಟವಾಗುತ್ತದೆ. ಹೊಸಬರ ಅನ್ವೇಷಣೆಯಿಂದ ಹೊಸತನದ ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸಾಹಿತ್ಯ ಸಮ್ಮೇಳನಗಳು ಇಂದು ತಿಂದು ಉಂಡು ಮಜವಾಗಿ ಕಾಲ ಕಳೆದುಹೋಗುವ ಜಾತ್ರೆಗಳಾಗುತ್ತಿವೆ. ವೇದಿಕೆಯ ಮೇಲೆ ಸಾಹಿತ್ಯದ ಕುರಿತಾದ ಚರ್ಚೆಗಳು ನಡೆಯುತ್ತಿದ್ದರೆ ಖಾಲಿ ಕುರ್ಚಿಗಳು ಮಾತ್ರ ಪ್ರೇಕ್ಷಕರಂತೆ ಕುಳಿತಿರುತ್ತವೆ. ನಮ್ಮ ಪುರುಷಾರ್ಥಕ್ಕಾಗಿ ಎಂಬುದು ಅರ್ಥವಾಗುತ್ತಿಲ್ಲ. ಕೋಟ್ಯಂತರ ಹಣ ಖರ್ಚು ಮಾಡಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡಿದರು ಕೇಳುವ ಪ್ರೇಕ್ಷಕರಿಲ್ಲದೆ ಹೋದರೆ ಯಾವ ಕಾರ್ಯಕ್ರಮವು ಯಶಸ್ವಿಯಾಗಲಾರದು. ಅದೆಷ್ಟೋ ಕವಿ ಗೋಷ್ಠಿಗಳಲ್ಲಿ ಕವನ ವಾಚನ ಮಾಡುವ ಕವಿಗಳು ಮಾತ್ರ ಕುಳಿತಿರುತ್ತಾರೆ. ಅವರಿಗೆ ಚಪ್ಪಾಳೆ ಹೊಡೆಯುವುದಕ್ಕಾಗಿಯಾದರೂ ಪ್ರೇಕ್ಷಕರು ಇರುವುದಿಲ್ಲ. ಇಂದಿನ ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಅಂಗೈಯೊಳಗಿನ ಸಾಧನಕ್ಕೆ ಜನ ಮಾರು ಹೋಗಿ ವೇದಿಕೆಗಳಲ್ಲಿ ಕೂತು ಕೇಳುವ ವ್ಯವಧಾನ ಕಳೆದುಕೊಂಡಿದ್ದಾರೆ. ಹಾಗಾಗಿ ಸಾಹಿತ್ಯ ಸಮ್ಮೇಳನಗಳ ಪ್ರಸ್ತುತತೆ ವ್ಯರ್ಥವೆನಿಸುತ್ತದೆ. ಪುಸ್ತಕ ಮಳಿಗೆಯವರು ವ್ಯಾಪಾರವಿಲ್ಲವೆಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ತಿಂಡಿ ತಿನಿಸುಗಳು ಉಡುಪು ಫ್ಯಾನ್ಸಿ ಆಭರಣಗಳು ಇತ್ಯಾದಿಯವರು ಒಳ್ಳೆಯ ಹಣ ಮಾಡುತ್ತಾರೆ. ಇದನ್ನು ನೋಡಿದರೆ ಜನ ಸಾಹಿತ್ಯಸಕ್ತಿಯಿಂದ ಭಾಗವಹಿಸುವುದಿಲ್ಲ ಬದಲಾಗಿ ಅಲ್ಲಿ ಬಂದಿರುವ ತರಹೇವಾರಿ ಮುಂಗಟ್ಟುಗಳ ಗ್ರಾಹಕರಾಗಿ, ಓಓಡಿ ಸೌಲಭ್ಯದ ರಜೆ ಅನುಭವಿಸುವುದಕ್ಕಾಗಿ, ಸಮಯ ಕಳೆಯುವ ಸಲುವಾಗಿ ಸೇರುವವರೇ ಹೆಚ್ಚು. ಇದರಿಂದ ಯಾವ ಸಾಹಿತ್ಯ ಪ್ರಕಾರಗಳು ಸಾಹಿತಿಗಳು ಉದ್ದಾರವಾಗುವುದಿಲ್ಲ. ಹಾಗಾಗಿ ಸಾಹಿತ್ಯ ಸಮ್ಮೇಳನಗಳು ಸಾಹಿತ್ಯದ ಚರ್ಚೆಗಳಿಗೆ ಮತ್ತು ಸಾಹಿತ್ಯಿಕ ಸಂಪನ್ಮೂಲಗಳ ಆಗರಗಳಾಗಿ ಸಾಹಿತ್ಯಾಸಕ್ತರ ಹಬ್ಬವಾದಾಗ ಮಾತ್ರ ಸಾಹಿತ್ಯ ಕ್ಷೇತ್ರ ಅಭ್ಯುದಯ ಕಾಣುತ್ತದೆ.
ಇತ್ತೀಚೆಗೆ ಸಾಹಿತ್ಯ ಸಮ್ಮೇಳನಕ್ಕೆ ಅವಕಾಶ ಮಾಡಿಕೊಡುವುದು, ಸಮ್ಮೇಳನ ಅಧ್ಯಕ್ಷರನ್ನ ಆಯ್ಕೆ ಮಾಡುವುದು, ವಿವಿಧ ಸಮಿತಿಗಳಿಗೆ ಕಾರ್ಯಭಾರ ಹಂಚುವುದು, ಕವಿಗೋಷ್ಠಿಗಳಿಗೆ ಕವಿಗಳನ್ನು ಆಯ್ಕೆ ಮಾಡುವುದು ಎಲ್ಲವೂ ಗೊಂದಲಮಯವಾಗಿ ರಾಜಕೀಯ ಒಳನುಸುಲುವಿಕೆಯಿಂದಾಗಿ ಸಾಹಿತ್ಯ ಸಮ್ಮೇಳನಗಳು ಅರ್ಥವನ್ನು ಕಳೆದುಕೊಳ್ಳುತ್ತಿವೆ. ಅಲ್ಲದೆ ಪ್ರತಿ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಸರ್ಕಾರದ ಹಂತದಲ್ಲಿ ಎಷ್ಟರಮಟ್ಟಿಗೆ ಜಾರಿಯಾಗುತ್ತವೆ ಎಂಬುದರ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಸಾಹಿತ್ಯ ಸಮ್ಮೇಳನಗಳ ಸಂಪ್ರದಾಯದಂತೆ ಆ ನಿರ್ಣಯಗಳು ಪ್ರತಿ ಬಾರಿಯೂ ಪ್ರಸ್ತಾಪಿತವಾದರೂ ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಯಾವುದೇ ಸರ್ಕಾರಗಳು ಸಾಹಿತ್ಯ ಪರಿಷತ್ತು ಸಾಹಿತಿಗಳು ಯಾರು ಬದ್ಧತೆಯನ್ನು ತೋರಿಸುತ್ತಿಲ್ಲ. ಪ್ರತಿ ಬಾರಿ ಸಮ್ಮೇಳನಗಳು ನಡೆಯುವಾಗ ಒಂದಷ್ಟು ಟೀಕೆ ಟಿಪ್ಪಣಿಗಳಿಗೆ ಆಹಾರವಾಗಿ ಸಾಹಿತ್ಯಾಸಕ್ತರಲ್ಲಿ ತಾತ್ಸಾರ ಮೂಡುವಂತೆ ಆಗಿದೆ. ಸಾಹಿತ್ಯ ಸಮ್ಮೇಳನಗಳು ನಿಜಕ್ಕೂ ಸಾಹಿತ್ಯದ ಜೊತೆಗೆ ಭಾಷೆಯ ಬೆಳವಣಿಗೆಗೆ ಪೂರಕವಾದ ವೇದಿಕೆಯನ್ನು ಕಲ್ಪಿಸುವಂಥಾಗಲಿ ಎಂದು ಆಶಿಸೋಣವೇ
ಅಪ್ಪಾಜಿ ಎ ಮುಸ್ಟೂರು
ಶಿಕ್ಷಕರು ಮುಸ್ಟೂರು ಅಂಚೆ ಜಗಳೂರು ತಾಲೂಕು ದಾವಣಗೆರೆ ಜಿಲ್ಲೆ
ಫೋನ್ ೮೪೯೬೮೧೯೨೮೧
One thought on ““ಭಾಷೆಯನ್ನು ಬೆಳೆಸುವಲ್ಲಿ ಸಾಹಿತ್ಯ ಸಮ್ಮೇಳನಗಳು ಸೋತಿವೆ”ವಿಶೇಷ ಲೇಖನ-ಅಪ್ಪಾಜಿ ಎ ಮುಸ್ಟೂರು”