ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ನೈತಿಕತೆಯ ಹೊಣೆ ಯಾರು ಹೊರಬೇಕು?
ಒಂದು ಜಾಹಿರಾತು…ಒಂದು ಪುಟ್ಟ ಬಡಮಗು ಖಾಲಿ ಬಿಸಲರಿ ಬಾಟಲ್ ಹಿಡಿದು ಕೊಂಡು ಇನ್ನೊಂದು ಖಾಲಿ ಬಾಟಲ್ ನ್ನು ಹುಡುಕಿಕೊಂಡು ಬರುತ್ತೆ…ಅಲ್ಲಿ ತಂದೆ ಮಗ ಇಬ್ಬರು ಬರುತ್ತಿರುವಾಗ ಅವರ ಕೈಯಲ್ಲಿ ಸ್ವಲ್ಪ ನೀರಿರುವ ಬಾಟಲ್ ಬೇಕಂತ ಕೈಯೊಡ್ಡತ್ತೆ…ಆ ತಂದೆ ಅದರಲ್ಲಿರುವ ಸ್ವಲ್ಪ ನೀರನ್ನು ಚೆಲ್ಲಿ ಕೊಡುತ್ತಾನೆ…ಆ ಮಗು ಅದನ್ನು ತಗೊಂಡು ಅಲ್ಲೇ ದೂರದಲ್ಲಿ ಕಟ್ಟೆಯ ಮೇಲೆ ಕುಳಿತು ತನ್ನ ಕಾಲುಗಳಿಗೆ ಅವಶ್ಯವಿರುವ ಚಪ್ಪಲಿಗಾಗಿ ಬಾಟಲ್ ನ್ನು ಚಪ್ಪಟೆಮಾಡಿ ಹಾಕಿಕೊಂಡು ಕುಣಿಯುತ್ತೆ…ಅಷ್ಟೇ.. ತಂದೆ ಮಗನಿಗೆ ಆಶ್ಚರ್ಯ ಆಗುತ್ತೆ
ಹಾಗೆ ಮನವು ಕರುಗುತ್ತೆ…ಅಷ್ಟರಲ್ಲಿ ಪುಟ್ಟ ಮಗ ತನ್ನ ಕಾಲೊಳಗಿನ ಚಪ್ಪಲನ್ನು ತೆಗೆದು ಆ ಪುಟ್ಟ ಬಾಲಕನಿಗೆ ಕೊಡುತ್ತಾನೆ…ತಂದೆ ಮಗನ ಕೆಲಸ ನೋಡಿ ಖುಷಿ ಪಡುತ್ತಾನೆ….ಇದೊಂದು ಪುಟ್ಟ ಕೆಲಸ..ಆದರೆ ಅರ್ಥೈಸಬೇಕಾದ ವಿಷಯ ಆಳವಾಗಿದ್ದು,ಇಂತಹ ಘಟನೆಗಳು ನೂರಾರು ನಮ್ಮ ಕಣ್ಮುಂದೆ ಹಾದು ಹೋದರು ನಮಗದರ ಅರಿವು ಬಾರದು..ಯಾಕೆ ಹೀಗೆಲ್ಲ ಎಂಬ ಪ್ರಶ್ನೆಯು ಸುಳಿಯದು.
ಒಮ್ಮೆ ನಾನು ಮನೆಯವರು ಮಗಳು ಸೇರಿ ಒಂದು ಜ್ಯೂಸ್ ಅಂಗಡಿಗೆ ಹೋಗಿದ್ದೆವು.ಯಾರಿಗೆ ಯಾವ ಜ್ಯೂಸ್ ಬೇಕು ಅನ್ನುವಷ್ಟರಲ್ಲಿ ಪಕ್ಕದಲ್ಲಿರುವ ಮಗಳು ನಾಪತ್ತೆ!. ಗಾಬರಿಯಾಗಿ ಅತ್ತ ಇತ್ತ ಹುಡುಕುವಾಗ,ಎದುರಿನ ರೋಡನಿಂದ ಒಬ್ಬ ವೃದ್ಧನನ್ನು ಕೈ ಹಿಡಿದು ರಸ್ತೆ ದಾಟಿಸುತ್ತಿದ್ದ ದೃಶ್ಯ ಕಂಡು ಹೆಮ್ಮೆ, ಆತಂಕ ಎರಡು ಆಯಿತು.ಅಜ್ಜನನ್ನು ರೋಡ ದಾಟಿಸಿ.ಹಣ್ಣು ಹಾಗೂ ದುಡ್ಡು ಕೊಟ್ಟು ಬಂದ ರೀತಿಗೆ ಮಾತಿಲ್ಲದೆ ಮಗಳ ಬೆನ್ನು ಚಪ್ಪರಿಸಿದ್ದೆವು.ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದು ಪಾಲಕರ ಜವಾಬ್ದಾರಿ. ಸಂಕಷ್ಟಗಳು ಯಾರಿಗೂ ಹೇಳಿ ಕೇಳಿ ಬರುವುದಿಲ್ಲ.ಸಮಯ,ಪರಿಸ್ಥಿತಿಗಳು ಯಾರ ಕೈಗೊಂಬೆ? ಕಾಲ ಬದಲಾದಂತೆ ಮನುಷ್ಯನ ಮನಸ್ಸುಗಳು ಬದಲಾಗಿವೆ.”ಎಲ್ಲವೂ ಪ್ರಾಕ್ಟಿಕಲ್”.
ಹೌದು..ತಾನೆ ನಾವಷ್ಟೇ ಯೋಚಿಸುವುದು, ಮತ್ಯಾರಿಗೂ ಅದರ ಗೊಡವೆ ಬೇಡ!. ಜಗತ್ತಿನಲ್ಲಿ ಅಷ್ಟೇ ಯ್ಯಾಕೆ? ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗುವ ಘಟನೆಗಳು ನಮ್ಮ ಕಣ್ಣು ತೆರೆಸದೆ ಇರುವುದು
ಸಂಗತಿ.ಬಡವ ಶ್ರೀಮಂತ ಎಂಬ ಭೇದಭಾವ ಮಕ್ಕಳಿಗೆ ಗೊತ್ತೆಯಿಲ್ಲ…ಅದನ್ನು ಸೃಜಿಸಿದವರು ನಾವುಗಳು.ಕೈಕೆಸರಾದರೆ ಬಾಯಿ ಮೊಸರು”ಎಂಬುದನ್ನು ಬಲ್ಲವರು ಮಾತ್ರವೇ ಎಲ್ಲವನ್ನೂ ಅನ್ವಯಿಸಿಕೊಳ್ಳಲು ಸಾಧ್ಯ.ಆಗಸದ ನಕ್ಷತ್ರ ಯಾರ ಕೈಗೂ ಸಿಗದೇ ಆಗಸದಲ್ಲಿ ಮಾತ್ರ ಮಿನುಗುತ್ತಿರುತ್ತದೆ.ಅದನ್ನು ಭೂಮಿಗೆ ತಂದು ನಾಟಿ ಮಾಡಲು ಆಗಲ್ಲ.ಅದರ ಪ್ರತಿಬಿಂಬಿಸುವ ಕೃತಕವಾಗಿ ಸೃಷ್ಟಿಸಿ ಆನಂದಿಸಬಹುದು.
ಮೌಲ್ಯಗಳ ಬಗ್ಗೆ ಧಾರಾಳವಾಗಿ ಮಾತನಾಡುವ ನಾವುಗಳು,ಅದನ್ನು ಎದುರಿಸುವ ಸಮಯ ಬಂದಾಗ ಸ್ವಾರ್ಥಿಯಾಗುತ್ತೇವೆ.ನಾವು ನಮ್ಮ ಕುಟುಂಬದ ಬಗ್ಗೆ ಮಾತ್ರ ಯೋಚಿಸುತ್ತಾ ಹಿಂದೇಟು ಹಾಕುತ್ತೇವೆ. ಯಾಕೆಂದರೆ,ಜಗತ್ತಿನ ಅಸ್ತಿತ್ವ ಮಾನವೀಯ ಮೌಲ್ಯಗಳನ್ನು ಒಳಗೊಂಡಿದ್ದು ಹಾಗೂ ಪಂಚ ಭೂತಗಳಲ್ಲಿ ಲೀನವಾಗುವ ಈ ಮನುಷತ್ವಕ್ಕೆ ಬೆಲೆ ಬರುವುದು ನಡವಳಿಕೆಯಿಂದ ಮಾತ್ರ.”ಸಾವಿತ್ರಬಾಯಿ ಪುಲೆ” ಜ್ಯೋತಿಬಾಯಿ ಪುಲೆ” ಯಂತಹ ಶಿಕ್ಷಣದ ಜೊತೆಗೆ ಮೌಡ್ಯತೆಯನ್ನು ಹೋಗಲಾಡಿಸಲು ಪಣತೊಟ್ಟು ಶಿಕ್ಷಣ ಕ್ಷೇತ್ರದಲ್ಲಿ ಅಗಾಧವಾದ ಕೊಡುಗೆಯನ್ನು ನೀಡಿದ್ದನ್ನು ಮರೆಯಲು ಯಾರಿಂದಲೂ ಸಾಧ್ಯವಿಲ್ಲ. ಅಜ್ಜ ನೆಟ್ಟ ಆಲದ ಮರಕ್ಕೆ ಮೊಮ್ಮಗ ಆತ್ಮಹತ್ಯೆ ಮಾಡಿಕೊಂಡರೆ? ಏನು ಲಾಭ? ಗಾಳಿಗೂ ಒಂದು ನೆಲೆಬೇಡ್ವಾ?
ಪ್ರತಿನಿತ್ಯ ನೋಡುವ ಟಿ.ವಿಯಲ್ಲಿ ಒಂದಿಲ್ಲೊಂದು ಕೊಲೆ,ಸುಲಿಗೆ, ಆತ್ಮಹತ್ಯೆ, ಅತ್ಯಾಚಾರ ಎಲ್ಲವೂ ದಿನನಿತ್ಯದ ಕರ್ಮ ಕಾಂಡಗಳಲ್ಲಿ ಒಂದು. ಇದನ್ನೆಲ್ಲ ನೋಡಿ ನೋಡಿ ಅಯ್ಯೋ ಹೀಗಾಯಿತಲ್ಲ ಎಂದು ಛೀ ಥೂ ಛೀ ಥೂ ಅಂತ ಬೈದು ಮುಂದೆ ಸಾಗುವ ಕ್ಷಣಗಳು ಹಿಂಸೆಯಾದರೂ,ಏನು ಮಾಡಲು ಸಾಧ್ಯವಿಲ್ಲದ ಹತಾಶ ಮನಸ್ಸು.ಪ್ರತಿ ಮನೆಯ ಪಾಲಕರು ತಮ್ಮ ಹೆಣ್ಣು ಮಕ್ಕಳ ಬಗ್ಗೆ ಗಂಡು ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸುವಲ್ಲಿ ತಾರತಮ್ಯ ಭಾವನೆಯಿಂದ ನೋಡುವ ಕೃತ್ಯದಿಂದ ಹೊರಬಂದಷ್ಟು ಹಾಗೂ ಹೊರಬರುವಷ್ಟು ಮಟ್ಟಿಗೆ ಪ್ರಾಪಂಚಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು.ಮೌಲ್ಯಗಳು ಕೇವಲ ಹೇಳಿ ಕೊಳ್ಳುವ ಸ್ಥಾನದಿಂದ ಆಚೆಬರಬೇಕಿದೆ.”ಎಷ್ಟು ವಿಚಿತ್ರ ನೋಡಿ ಯಾರಿಗೂ,ನುಡಿದಂತೆ ನಡೆಯಬೇಕೆಂಬ ಛಲ” ತುಂಬಾ ಕಡಿಮೆ. ಮೊದಲಿದ್ದ ಹುಮ್ಮಸ್ಸು…ಕಾಲಕ್ರಮೇಣ ಅದರ ಆಯಸ್ಸು ಕಡಿಮೆಯಾಗುತ್ತ ಕೊನೆಗೆ ನಾನ್ಯಾಕೆ ಒಬ್ಬನೇ ಸಾಯಬೇಕು?ಇನ್ನೊಬ್ಬರಿಗಾಗಿ ತನ್ನ ಬದುಕು ಹಾಳಾಗಲು ಬಿಡಬೇಕು? ಆಗ ನುಸುಳಿಕೊಂಡು ಬರುವ ಆಮಿಷೆಗಳಿಗೆ ತಲೆದಂಡ ನೀಡಿದ ಎಷ್ಟೋ ತರೆಮರೆಯ ಕಾಯಿಗಳು ಮುನ್ನಲೆಗೆ ಬಂದಿಲ್ಲ ಬರೋದು ಇಲ್ಲ.ಇಷ್ಟೆಲ್ಲ ಮೌಲ್ಯಗಳು ತಮ್ಮ ಅಸ್ತಿತ್ವವನ್ನು ಮರೆಮಾಚಲು ಬಳಸಲಾಗಿದೆಯೆಂದರೆ ತಪ್ಪಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಾಥಮಿಕ ಶಾಲೆ,ಪ್ರೌಢಶಾಲೆ, ಕಾಲೇಜು ಹೀಗೆ…ಎಲ್ಲ ತರಗತಿಗಳಲ್ಲಿ ಮೌಲ್ಯ ಹಾಗೂ ನೈತಿಕ ಶಿಕ್ಷಣ ನೀಡುವುದರ ಮೂಲಕ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ನಡೆಯುತ್ತಿದೆ.ಕೇವಲ ಶಾಲೆಗಳಲ್ಲಿ ಮಾತ್ರ ಈ ಕೆಲಸ ಆಗದೇ.. ಪ್ರತಿ ಮನೆಮನೆಗಳಲ್ಲಿ ಈ ಕೆಲಸ ಆಗಬೇಕಾಗಿದೆ.ನೈತಿಕತೆ ಮೀರಿ ಬದುಕುವ ನಾವುಗಳು ಪ್ರಾಣಿಗಳಿಗಿಂತ ಕೀಳಾಗಿ ನಮ್ಮ ಮನಸ್ಸು ಒಪ್ಪದಿದ್ದರೂ ಅಲ್ಲದ್ದನ್ನು ಹೊದ್ದು ಮಲಗುವ ನಿಷ್ಕ್ರಿಯ ಮನೋಭಾವದವರಾಗಿ ಜೀವನ ಕಳೆಯುತ್ತಿರುವುದು ದುರಂತವೇ ಸರಿ.
ಅದೇನೇ ಇದ್ದರೂ, ಪುಣ್ಯವಂತರ ಕಾಲಗುಣದಿಂದ ಮಳೆಬೆಳೆಯಾಗುತ್ತಿದೆ.ಅಲ್ಪಸ್ವಲ್ಪ ಒಳ್ಳೆಯ ಕರ್ಮಾದಿಗಳು ಇರೋದ್ರಿಂದ ಕರುಣೆ,ಕಾಳಜಿ ಮಾನವೀಯ ಮೌಲ್ಯಗಳು ಪರಿಸರ ಸ್ನೇಹಿಯಾಗಿ ನಿಂತಿರುವುದು…ಇದರ ಪ್ರಭಾವ ಆಕ್ಸಿಜನ್ ತರ ಪ್ರಕೃತಿಯಲ್ಲಿ ಸಕಾರಾತ್ಮಕ ಚಿಂತನೆಗಳು ಹೂವಿನ ಮಕರಂದದಂತೆ ಹರಡಿದಷ್ಟು ಸೊಗಸು…ಬೆಕ್ಕಿಗೆ ಗಂಟೆ ಕಟ್ಟುವವರು ಯಾರಂತ ಚಿಂತಿಸುವ ಕಥೆ ನೆನಪಾದರೆ,ನೈತಿಕತೆಯ ಹೊಣೆ ಹೊರುವವರು ಯಾರು? ಎಂಬ ಪ್ರಶ್ನೆಗೆ ಉತ್ತರ ನಾವುಗಳು ಕಂಡುಕೊಳ್ಳುವಲ್ಲಿ ಯಶಸ್ಸಿಯಾದರೆ ಸಾರ್ಥಕತೆ ಮೆರೆದಂತೆ….ಅಷ್ಟು ಸುಲಭವಾ??? ಅಸಾಧ್ಯವೆನಿಲ್ಲ!.
ಶಿವಲೀಲಾ ಶಂಕರ್
ಮಾನವೀಯತೆ ಕುರಿತು ಬರೆದ ಲೇಖನ ಸುಂದರವಾಗಿ ಮೂಡಿ ಬಂದಿದೆ.