ಅನುಭವ ಸಂಗಾತಿ
ಹೆಚ್.ಗೋಪಾಲಕೃಷ್ಣ
‘ತಿರುವನಂತಪುರ ೨
ಒಂದುನವಿರು ಅನುಭವ’
ಇದು ಹಿಂದಿನ ಸಂಚಿಕೆಗೆ ಹೀಗೆ ಮುಕ್ತಾಯ ಹೇಳಿದ್ದೆ:
ಅಂದ ಹಾಗೆ ಈ ಊರಿನಲ್ಲಿ ನಮ್ಮಲ್ಲಿ ಸಿಗುವ ಹಾಗೆ ಅರಿವೆ, ಚಕ್ಕೋತ, ಮೆಂತ್ಯ, ಸಬ್ ಸಿಗೆ ಮೊದಲಾದ ಸೊಪ್ಪುಗಳು ಸಿಗಲ್ಲ. ಇಲ್ಲಿ ಸಿಗೋ ಸೊಪ್ಪು ಅಂದರೆ ಕರಿಬೇವು, ಕೊತ್ತಂಬರಿ ಹಾಗೂ ಕೆಂಪು ದಂಟು. ಹಸಿರು ದಂಟು ದೇವಸ್ಥಾನದ ಹತ್ತಿರ ಸಿಗುತ್ತೆ ಅಂದಿದ್ದರು, ಅಲ್ಲೆಲ್ಲೂ ಕಾಣಿಸಲಿಲ್ಲ. ಸೊಪ್ಪು ಅಂದಕೂಡಲೇ ನನಗೆ ಒಬ್ಬ ನನ್ನ ಕಲಿಗು ರಾಜಶೇಖರನ್ ಎನ್ನುವ ಕೇರಳ ದ ಆಳು ನೆನಪಿಗೆ ಬಂದ. ದಿವಸ ಬಂದು ನನ್ನ ಬಳಿ ಅವನ ಕಷ್ಟ ಸುಖ ಹೇಳಿಕೊಳ್ಳೋನು. ಒಂದು ಸಲ ತುಂಬಾ ಕೋಪದಲ್ಲಿದ್ದ. ಮನೆ ಪಕ್ಕದವನ ಹತ್ತಿರ ಜಗಳ ಆಗಿದೆ. ಅದನ್ನು ವಿವರಿಸಿ ಅವನು ಹೇಳಿದ್ದು.. ನಾನು ಅವನ ಹಾಗೆ ಐದು ರೂಪಾಯಿ ಸೊಪ್ಪು ತಂದು ಸಾರು ಮಾಡಲ್ಲ, ಐವತ್ತು ರೂಪಾಯಿ ಕೇಜಿ ತರಕಾರಿ ತರ್ತಿನಿ…..! ಅವರ ಊರಿನಲ್ಲಿ ಸೊಪ್ಪು ಸಿಗುತ್ತಾ ಇರಲಿಲ್ಲ ಅಂತ ಆಗ ಗೊತ್ತಿರಲಿಲ್ಲ!
ಆಸ್ಪತ್ರೆ ಕತೆ ಬಿಟ್ಟು ಮಿಕ್ಕಿದ್ದು ಬುರುಡೆ ಬಿಡ್ತಾ ಇದಾನೆ ಅಂತ ನೀವು ಅಂದುಕೊತಿರಿ ಅಂತ ನನಗೆ ಗೊತ್ತು.ಆಸ್ಪತ್ರೆ ಪುರಾಣ ಮುಂದೆ ಹೇಳ್ತಿನಿ.
ಈಗ ಮುಂದೆ..
ಅನಂತ ಪದ್ಮನಾಭ ಸ್ವಾಮಿ ದೇವಾಲಯ ನೋಡಿದೆವು. ತಿರುವನಂತಪುರಕ್ಕೆ ಬರುವ ಹೊರಗಿನ ಯಾರಿಗೇ ಆಗಲಿ ಇಲ್ಲಿನ ವಿಶೇಷ ಅನಿಸಿದ ನೇಂದ್ರ ಬಾಳೆಕಾಯಿ ಚಿಪ್ಸ್ ಮತ್ತು ಹಲ್ವಾ ಕೊಂಡು ಮನೆಗೊಯ್ಯುವ ಇರಾದೆ ಇರುತ್ತದೆ.ದೇವಸ್ಥಾನದ ಸುತ್ತ ಇಂತಹ ಸುಮಾರು ಅಂಗಡಿಗಳು ಇವೆ. ಅದರಲ್ಲಿ ಒಂದು ಅಂಗಡಿ ಸುಮಾರು ವರ್ಷದಿಂದ ದೊಡ್ಡ ಹೆಸರು ಮಾಡಿದೆ. ಮಹಾ ಚಿಪ್ಸ್ ಅಂತ ಅದರ ಹೆಸರು. ಒಳ ಹೊಕ್ಕರೆ ನಿಮಗೆ ವಿವಿಧ ರೀತಿಯ ಚಿಪ್ಸ್ ಹಾಗೂ ಚೌ ಚೌ ಮತ್ತು ಸಿಹಿ ಹಾಗೂ ಉಂಡೆಗಳು ಶೋ ಕೇಸ್ ನಿಂದ ಕೈ ಬೀಸಿ ಕರೆಯುತ್ತವೆ. ಅಲ್ಲೇ ನಿಂತು ಜೇಬಿನಿಂದ ಮೊಬೈಲ್ ತೆಗೆದು ನಂಟ ರಿಗೆ ಗೆಳೆಯರಿಗೆ ಏನೇನು ಎಷ್ಟೆಷ್ಟು ಬೇಕು ಎನ್ನುವ ವಿಚಾರ ವಿನಿಮಯ ನಡೆದು ವ್ಯಾಪಾರ ಸಾಗುತ್ತದೆ. ಐದು ಹತ್ತು ಸಾವಿರದ ವ್ಯಾಪಾರ ಒಬ್ಬನೇ ಗ್ರಾಹಕ ಮಾಡುತ್ತಾನೆ! ಈ ಉದ್ಯಮ ಬಹಳ ಸೊಗಸಾಗಿ ಇಲ್ಲಿ ಬೆಳೆದಿದೆ. ಹೊರ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿಯೂ ಈ ಉತ್ಪನ್ನಗಳು ಜನಪ್ರಿಯ ವಾಗಿವೆ. ಕೇರಳದ ಜನ ಎಲ್ಲೆಲ್ಲಿ ಇರುವರೋ ಅಲ್ಲೆಲ್ಲ ಈ ವಸ್ತುಗಳು ಅವಶ್ಯಕವಾಗಿ ಸಿಗುವ ವ್ಯವಸ್ಥೆ ಇದೆ. ಆನ್ ಲೈನ್ ನಲ್ಲಿ ಸಹ ಈ ಸೇವೆ ಇತರೆ ಅಂಗಡ್ ಗಳಲ್ಲಿ ಇದೆಯಂತೆ. ಇದೇ ರೀತಿಯ ಹಲವು ಅಂಗಡಿಗಳು ಇವೆ.ಸಹಜವಾಗಿಯೇ ನಮ್ಮೂರು ನೆನಪಾಗುತ್ತದೆ ಮತ್ತು ನಮ್ಮಲ್ಲಿನ ತಿಂಡಿ ಪಂಡಿ ಗಳು ಪಾಪ್ಯುಲರ್ ಆಗಲಿ ಎಂದು ಯಾರೂ ಯಾಕೆ ಮುನ್ನುಗಿಲ್ಲ ಎನ್ನುವ ನೋವು ಹುಟ್ಟುತ್ತದೆ. ಕೊನೇ ಪಕ್ಷ ನಮ್ಮ ನಂದಿನಿ ಉತ್ಪನ್ನಗಳನ್ನಾದರೂು ಹೊರ ರಾಜ್ಯಗಳಲ್ಲಿ ಚಿರಪರಿಚಿತ ಮಾಡಬಹುದು. ನಮ್ಮ ರಾಜಕಾರಣಿಗಳಿಗೆ ಈ ಬಗ್ಗೆ ಆಸಕ್ತಿ ಸೊನ್ನೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಾರು?
ಮೀನು ವ್ಯಾಪಾರ ಮುಖ್ಯ ರಸ್ತೆಗಳಲ್ಲಿ ಅಷ್ಟು ಇಲ್ಲ. ಸಮುದ್ರ ತೀರದ ಆಸುಪಾಸು ಹಾಗೂ ಜನ ಸಾಂದ್ರತೆ ಹೆಚ್ಚಿರುವ ಸ್ಥಳದಲ್ಲಿ ಒಂದು ಟೇಬಲ್ ಮೇಲೆ ಮೀನು ಇಟ್ಟು ಅದರ ಪಕ್ಕ ತಕ್ಕಡಿ ಇಟ್ಟು ಮಾರಾಟ ಮಾಡುತ್ತಾರೆ. ಪುಟ್ಟ ಮೀನುಗಳು ಅಂದರೆ ಬೆರ ಳಿಗಿಂತ ಚಿಕ್ಕವು ಗುಡ್ಡೆ ಲೆಕ್ಕ ಅಂತ ಅಂದುಕೊಂಡೆ. ಪುಟ್ಟ ಮೀನು ಮಾರುವವರು ತಕ್ಕಡಿ ಇಟ್ಟು ಕೊಂಡಿರುವುದಿಲ್ಲ. ಇವುಗಳ ಸುತ್ತ ನೊಣ ಶುಯ್ ಎಂದು ಹಾರಾಡುತ್ತಾ ಇರುತ್ತದೆ. ದೊಡ್ಡ ಮೀನು ಕತ್ತರಿಸುವ ಹೋಳು ಮಾಡಿಕೊಡುವ ವ್ಯವಸ್ಥೆ ಕೆಲವೆಡೆ ಇದೆ. ಸುಮಾರು ಮೀನು ವ್ಯಾಪಾರದವರು ಮಹಿಳೆಯರೇ, ಕೆಲವೆಡೆ ಮಾತ್ರ ಪೆಚ್ಚು ಮುಖ ಹೊತ್ತ , ಯಾಕಪ್ಪಾ ದೇವರೇ ನನ್ನನ್ನು ಹುಟ್ಟಿಸಿದೆ ಎನ್ನುವ ಮುಖಭಾವದ ಗಂಡಸರು.ಸುಮಾರು ಎಲ್ಲಾ ಈಟ್ ಔಟ್ಸ್ ಗಳಲ್ಲಿ ವಿವಿಧ ಮೀನು ಖಾದ್ಯ ಲಭ್ಯ, ಬಾಳೆ ಎಲೆಯಲ್ಲಿ ಮೀನು ಊಟ ಬಡಿಸುತ್ತಾರೆ, ಮಂಗಳೂರು ಹೋಟೆಲ್ ಗಳ ಹಾಗೆ. ಕನ್ಫ್ಯೂಸ್ ಮಾಡಿಕೊಂಡು ಬಾಳೆ ಎಲೆ ಚಿತ್ರ ನೋಡಿ ನೀವು ಹೊಟೆಲ್ ಹೊಕ್ಕರೆ ನಿಮಗೆ ಸಖತ್ ಬೇಸ್ತು ಅಷ್ಟೇ. ಪ್ಯೂರ್ ವೆಜ್ ಹೊಟೇಲು ಸಹ ಇವೆಯಂತೆ ,ಹುಡುಕ ಬೇಕು ಅಷ್ಟೇ! ಪಾಲ್ಗಾಟ್ ಕಡೆಯ ಆಯ್ಯರುಗಳ ಹೋಟೆಲ್ ಇವೆ ಚದುರಿದ ಹಾಗೆ ಇರುವುದರಿಂದ ಬೇಗ ಸಿಗವು. ಇಲ್ಲಿ ಮಾಮೂಲಿನಂತೆ ಕುಸುಬಲ ಕೆಂಪು ಅಕ್ಕಿಯಲ್ಲಿ ಅನ್ನ ಮಾಡುವುದು. ಅದು ಅಭ್ಯಾಸ ಇಲ್ಲ ಅಂದರೆ ಬೇರೆ ಆಪ್ಷನ್ ಅಂದರೆ ಬಿಳಿ ಅಕ್ಕಿ ಅನ್ನ. ಅದೂ ಸ್ಟೀಮ್ಡ್ ಅಕ್ಕಿ. ಎರಡೂ ಸಾಂಪ್ರದಾಯಿಕ ಹುಟ್ಟಾ ಬೆಂಗಳೂರಿಗ ಇಷ್ಟ ಪಡದಿರುವುದು.ಈ ಗುಂಪಿನಲ್ಲಿ ನಾನೂ ಒಬ್ಬ.ಹೀಗಾಗಿ ಒಂದು ಸಲ ಅಕ್ಕಿ ಹುಡುಕಿ ಹೊರಟೆ. ಕೆಂಪು ಆಕ್ಕಿ ತೋರಿಸಿದರು. ಬಿಳಿದು ಬೇಕು ಅಂದೆ. ಬಿಳೀ ದೂ ತೋರಿಸಿದ, ದಪ್ಪಕ್ಕಿ. ದಪ್ಪಕ್ಕಿ ಒಂದೇ ಆಗಿದ್ದರೆ ಕೊಳ್ಳುತ್ತಾ ಇದ್ದೆ.ಅದೂ ಸಹ ಸ್ಟೀಮ್ ಹಾಯಿಸಿರೋದು ಅಂದ.ಬೇಡ ಅಂತ ಬಿಟ್ಟೆ.ಕೊನೆಗೆ ನನಗೆ ಏನು ಬೇಕು ಅಂತ ವಿಚಾರಿಸಿದ.ಬೆಂಗಳೂರು, ಕನ್ನಡ ಪೇಸರದಿ, ಬೆಂಗಳೂರು ಸಾಪಾಟು ಅಂತ ಹಾವ ಭಾವ ಸಮೇತ ವಿವರಿಸಿದೆ.ಎಲ್ಲಾ ವಿಚಾರಿಸಿದ ನಂತರ ಸೋನಾ ಮಸೂರಿ ಅಂತ ಕೇಳು ಅಂತ ಅಂಗಡಿಯವನು ಐಡಿಯಾ ಕೊಟ್ಟ.ಐದಾರು ಅಂಗಡಿ ಹುಡುಕಿದ ಮೇಲೆ ಸೋನಾ ಮಸೂರಿ ಅಕ್ಕಿ ಸಿಕ್ಕಿತು. ಅದು ರಾರೈಸ್ ಅಂದರೆ ಆವಿ ಹಾಯಿಸಿಲ್ಲ ತಾನೇ ಅಂದೆ.ಇಲ್ಲ ಅಂದ.ವಾಪಸ ತಗೋತೀಿ ತಾನೇ ಅಂತ ಕೇಳಿ ಆವಿ ಹಾಯಿಸಿಲ್ಲದಿರುವುದು ಎಂದು ಖಚಿತ ಮಾಡಿಕೊಂಡು ತಂದೆ. ಅನ್ನ ಚೆನ್ನಾಗಿ ಆಯಿತು. ಇದರ ಉಪಯೋಗ ಆಲ್ಲಿ ಅಷ್ಟು ಇಲ್ಲದ ಕಾರಣವೋ ಏನೋ ಒಂದು ಕೇಜಿ ಪೊಟ್ಟಣ ಮಾಡಿ ಅದನ್ನು ಪಾಲಿಥಿನ್ ಕವರ್ ನಲ್ಲಿ ಇಟ್ಟಿರುತ್ತಾರೆ. ಇಲ್ಲಿ ನಮ್ಮಲ್ಲಿ ಅದು ಇಪ್ಪತ್ತೈದು ಕೇಜಿ ಬ್ಯಾಗು, ಲೂಸು ಸಹ ಸಿಗತ್ತೆ. (ಒಂದು ಜೋಕ್ ನೆನಪಾಯಿತು.ಒಬ್ಬ ಅಂಗಡಿಯಲ್ಲಿ ಚಿಪ್ಸ್ ರೇಟ್ ಕೇಳುತ್ತಾನೆ.ಕೇಜಿ ನಾನೂರು ಅಂತ ಉತ್ತರ ಬರುತ್ತೆ.ಲೂಸ್ ಆದರೆ ಎಷ್ಟು ಅಂತ ಸಪ್ಲಿಮೆಂಟರಿ ಪ್ರಶ್ನೆ ಕೇಳುತ್ತಾನೆ.ಅಂಗಡಿಯವನು ಲೂಸ್ ಆದರೂ ಅಷ್ಟೇ ಸರಿಯಿರೋನು ಆದರೂ ಅಷ್ಟೇ ಅನ್ನುತ್ತಾನೆ!) ಒಂದು ಸಲ ಅಕ್ಕಿ ಅಂಗಡಿ ನೋಡಿದ ನಂತರ ಅಲ್ಲೇ ಮತ್ತೆ ಮತ್ತೆ ಹೋಗಿ ಕೊಂಡಾಯಿತು. ಒಂದುಕಡೆ ಲಿಂಬೆ ಹಣ್ಣಿನ ಉಪ್ಪಿನಕಾಯಿ ನೋಡಿದೆ. ಕೇಜಿ ಡಬ್ಬಕ್ಕೆ ನೂರಾ ಹದಿನೈದು ರೂಪಾಯಿ. ಆಶ್ಚರ್ಯ ಆಯ್ತು. ಬೆಂಗಳೂರಿನಲ್ಲಿ ಉಪ್ಪಿನ ಕಾಯಿ ಮುನ್ನೂರಕ್ಕ ಕಮ್ಮಿ ಇಲ್ಲ. ಹೇಗಿದೆಯೋ ಅಂದುಕೊಂಡೆ ಒಂದು ಬಾಟಲ್ ಕೇಜಿದು ಕೊಂಡೆ. ಅದಕ್ಕೆ ಡಿಸ್ಕೌಂಟ್ ಅಂತೆ!ತೊಂಬತ್ತ ಎಂಟಕ್ಕೆ ಕೊಟ್ಟ. ಮನೆಗೆ ಬಂದ ಮೇಲೆ ತಿಂದೇವಾ?ಉಪ್ಪಿನಕಾಯಿ ಸೂಪರ್..
ಟಿಪಿಕಲ್ ಮಲಯಾಳಿಗಳು ಹೊರ ನೋಟಕ್ಕೆ ಹೀಗಿರ್ತಾರೆ. ತುಂಬು ತೋಳಿನ ಶರ್ಟು. ತೋಳು ಅರ್ಧಕ್ಕೆ ಅಥವಾ ಇನ್ನೂ ಮೇಲೆ ಮಡಿಸಿರ್ತಾರೆ. ಮಡಿಕೆ ಎರಡೂವರೆ ಇಂಚು ಇರುತ್ತೆ. ನನಗೆ ನನ್ನ ಮಗಳ ಮದುವೆಯಲ್ಲಿ ನನ್ನ ನಂಟರು ಗಳು ಪ್ಯಾಂಟು ಶರ್ಟು ಬಟ್ಟೆ ಕೊಟ್ಟರು, ನೋ ಗಿಫ್ಟ್ಸ್ ಅಂತ ಹಾಕಿದ್ದರೂ ಸಹ.. ಹೊಲಿಸಕ್ಕೆ ಟೈಲರ್ ಕೂಲಿ ಸಾವಿರ ರೂಪಾಯಿ ಮೇಲೆ ಒಂದು ಸೆಟ್ ಗೆ, ಅಂದರೆ ಒಂದು ಶರ್ಟು ಒಂದು ಪ್ಯಾಂಟಿಗೆ.ಹೊಲಿಸೋದು ಬೇಡ ಅಂತ ಎರಡು ಮೂರು ವರ್ಷ ಸುಮ್ಮನಿದ್ದೆ.ಹಾಳಾ ದೋರು ದುಡ್ಡು ಕೊಟ್ಟಿದ್ದರೆ ಆಗ್ತಾ ಇರ್ಲಿಲ್ಲ ವಾ… ಅಂತ ಶಾಪ ಹಾಕ್ತಿದ್ದೆ.ಮನೇಲಿ ವರಾತ ಹೆಚ್ಚಾಯಿತು, ಹೊಸ ಬಟ್ಟೆ ಹಾಗೇ ರಾಶಿ ರಾಶಿ ಇದೆ, ಹೊಲಿಸಬಾರದೇ ಅಂತ. ಶರಟು ಹೊಲಿಸಲು ಹೋದರೆ ಅದು ಫುಲ್ ಆರ್ಮ್ ಲೆಂತು. ಸರಿ ಫುಲ್ ಹೊಲಿ ಅಂದನಾ. ಶರಟು ಮನೆಗೆ ಬಂತಾ ನಾಲ್ಕು ಶರ್ಟು ಹಾಗೇ ಕೂತಿದೆ. ಕಾರಣ ಎಲ್ಲಾ ಫುಲ್ ಆರ್ಮು! ನಮ್ಮೂರಲ್ಲಿ ಯಾರೂ ಫುಲ್ ಆರ್ಮ್ ಹಾಕೋದಿಲ್ಲ.ಇಲ್ಲಿ ತಂದಿದ್ದರೆ ಹಾಕೋ ಬಹುದಿತ್ತು!
ಫ್ಯಾಕ್ಟರಿಯಲ್ಲಿ ಯೂನಿಫಾರ್ಮ್ ಬಟ್ಟೆ ಕೊಡ್ತಾ ಇದ್ದರು. ಅಲ್ಲೂ ಅಷ್ಟೇ ಫುಲ್ ಆರ್ಮ್ ಗೆ ಆಗೋಷ್ಟು ಕೊಡೋರು. ಅರ್ಧ ತೋಳಿನ ಅಂಗಿ ಸುಖ ಉಂಡ ನಮಗೆ ಅದು ಹೆಚ್ಚು. ಆದರೂ ಅದನ್ನ ತಗೊಂಡು ಅರ್ಧ ತೋಳಿನ ಶರ್ಟು ಹೊಲಿಸಿ ಮಿಕ್ಕ ಬಟ್ಟೆ ಟೈಲರ್ ಗೇ ದಾನ ಮಾಡುತ್ತಿದ್ದೆವು, ಅವನ ಮಗೂಗೆ ಏನಾದರೂ ಹೊಲಿದು ಕೊಳ್ಳಲಿ ಅಂತ…..! ನಾವು ನಮಗೆ ಬೇಡದಿರುವುದನ್ನು ದಾನಿಸುವ ದಾನ ಶೂರ ಕರ್ಣರು!ಇದು ಬೆಂಗಳೂರಿನವರು ಮಾಡಿದರೆ ಕೇರಳದವರು ದಾನ ಶೂರ ಕರ್ಣರು ಅಲ್ಲ.ತುಂಬು ತೋಳಿನದ್ದೆ ಹೊಲಿಸಿ ಅದನ್ನು ಮುಂಗೈ ವರೆಗೆ ಮಡಿಸಿ ಹಾಕುತ್ತಿದ್ದರು. ಮಲಯಾಳಿ ಸಿನೆಮಾಗಳನ್ನು ಮಧ್ಯಾಹ್ನದ ಹೊತ್ತು ನಿಮ್ಮ ಟಿವಿಯಲ್ಲಿ ನೋಡ್ತೀರಿ ತಾನೇ. ಅಲ್ಲಿ ಹೀರೋ ಡ್ರೆಸ್ ಗಮನಿಸಿ. ಮಡಿಸಿದ ತೋಳು, ಕೆಲವು ಸಲ ಬಿಗಿ ಟೀ ಶರ್ಟು, ಚೌಕಳಿ ಚೌಕಳಿ ಲುಂಗೀ ಅಥವಾ ಪ್ಯಾಂಟು… ಇದಲ್ಲದೆ ಬೇರೆ ಡ್ರೆಸ್ ಆದರೆ ಅಂದರೆ ಅವನು ಹೊರಗಿನ ಪಾತ್ರ ಅಂದರೆ ನಾನ್ ಕೇರಳಿಗ…!
ಟಿಪಿಕಲ್ ಮಲಯಾಳಿಗಳ ಶರ್ಟ್ ಆಯ್ತಾ. ಶರ್ಟಿಗೆ ಎಡಭಾಗದಲ್ಲಿ ಒಂದು ಸುಮಾರು ದೊಡ್ಡ ಜೇಬು ಇದರಲ್ಲಿ ಬೀಡಿ ಸಿಗ ರೇಟು, ಬೆಂಕಿ ಪೊಟ್ಟಣ ಅಥವಾ ಲೈಟರ್,ದುಡ್ಡು…ಹೀಗೆ ಸರ್ವ ವಸ್ತು ಭಂಡಾರ.ಇನ್ನು ದೇಹದ ತಳ ಭಾಗಕ್ಕೆ ಚೌಕಳಿ ದಟ್ಟೀ ಪಂಚೆ. ಅದು ಯಾವುದೇ ಬಣ್ಣ ಇರಬಹುದು. ಬಿಳೀ ಬಣ್ಣ ಆದರೆ ಅದಕ್ಕೆ ಕರೀ ಅಂಚು. ಕರೀ ಅಂಚು ಯಾಕೆ ಅಂದರೆ ಅದು ಅಯ್ಯಪ್ಪ ದೇವರ ಊರು ತಾನೇ? ಅಯ್ಯಪ್ಪನಿಗೆ ಕರಿ ಬಣ್ಣ ಅಂತ ಇವರು ಡಿಸೈಡ್ ಮಾಡಿಬಿಟ್ಟಿದ್ದಾರೆ.. (ಇವತ್ತು ಫೇಸ್ ಬುಕ್ ನಲ್ಲಿ ಈ ಸುದ್ದಿ ನೋಡಿದೆ .
ಬ್ರಾಹ್ಮಣರು ಪಂಚೆ ಹೇಗೆ ಉಡಬೇಕು ಎನ್ನುವ ಪ್ರಶ್ನೆ. ಅದಕ್ಕೆಉತ್ತರ ಹೀಗಿತ್ತು..ಇದರ ಹಿಂದೆ ಕೆಲವು ನಿಯಮ ಇದೆ ಗೃಹಸ್ಥ ಎಡಗಡೆ ಅಂಚು ಬರುವ ಹಾಗೆ, ವಿದುರ ಬಲಗಡೆ ಹಾಗೂ ಬ್ರಹ್ಮಚಾರಿಗಳು ಮಧ್ಯೆ..ಅಂತ ನಿಯಮ ಇದೆ .ನೋಡಿ ನಮ್ಮ ಪೂರ್ವಿಕರು ಎಷ್ಟು ಬುದ್ದಿವಂತರು ಇದ್ದರು ಅಂತ ಪಂಚೆ ಉಡುವ ವಿಧಾನದಲ್ಲಿ ಅವರ ಜೀವನ ಯಾವುದು ಎಂದು ತಿಳಿದು ಕೊಳ್ಳಬಹುದು ಹಾಗಿತ್ತು….)
ಕಚ್ಚೆ ಪಂಚೆ ನಿಮಗೆ ದೇವಸ್ಥಾನದಲ್ಲಿ ಮಾತ್ರ ಕಾಣಿಸುತ್ತೆ, ಅದೂ ಪೂಜೆ ಸಮಯದಲ್ಲಿ.ಪೂಜಾರಿಗಳು ಅವರು ಕಚ್ಚೆ ಹಾಕಿರುವ ಪಂಚೆ ಇಲ್ಲ ಅಂದರೆ ದಟ್ಟಿ.ಒಮ್ಮೆ ಒಬ್ಬರು ಜರಿ ಇದ್ದ ಸಿಲ್ಕ್ ದಟ್ಟೀ ಉಟ್ಟು ನಂಟರನ್ನು ನೋಡಲು ಬಂದರು. ನೋಡಿದರೆ ಕೆಂಪಗೆ ಆರಡಿ ಎತ್ತರ ದಪ್ಪ ದಪ್ಪ . ರಾಘವೇಂದ್ರ ಸ್ವಾಮಿ ಮಠದ ಮಾಧ್ವ ಬ್ರಾಹ್ಮಣರ ಹಾಗಿದ್ದರು. ಮಾತು ಆಡುತ್ತಾ ಅವರ ಹೆಸರು ಕೇಳಿದೆ. ಮಾಥ್ಯೂ ಅಂದರು…!
ಕೇರಳ ದವರ ಕೈಯಲ್ಲಿ ಎಲ್ಲಾ ಕಾಲದಲ್ಲೂ ಒಂದು ಛತ್ರಿ ಬೇಕೇ ಬೇಕು.ಇದು ಕಂಪಲ್ಸರಿ. ಬರಿಗೈ ಇದ್ದರೆ ನೀವು ಅವರ ಕಡೆ ಅವನು ಅಲ್ಲ ಅಂತ ಖಾತ್ರಿ.
ತಿರುವನಂತಪುರಕ್ಕೆ ಬಂದ ಎರಡು ಮೂರನೇ ದಿವಸ ಬೆಳಿಗ್ಗೆ ಹಾಲು ತರಲು ಮತ್ತು ವಾಕಿಂಗ್ ಅಂತ ಹೋದೆ. ದಾರಿಯಲ್ಲಿ ಸಿಕ್ಕ ಗಂಡಸರು ಕುತ್ತಿಗೆಯನ್ನು ಒಂದು ಕ್ಷಣ ಹತ್ತು ಡಿಗ್ರಿ ಬಲಕ್ಕೆ ವಾಲಿಸಿ, ನಂತರ ಹತ್ತು ಡಿಗ್ರಿ ಮೇಲಕ್ಕೆ ಎತ್ತಿ, ನಂತರ ಮುಖದಲ್ಲಿ ನಗೆ ತೋರಿ ವಿಶ್ ಮಾಡುತ್ತಿದ್ದರು. ಇಂತಹ ವಿಶಿಷ್ಟ ವಾದ ವಿಶ್ ನಾನು ಇನ್ನೆಲ್ಲೂ ಕಾಣೆ.ಮನೆಗೆ ಬಂದು ಕನ್ನಡಿ ಮುಂದೆ ನಿಂತು ಅದರ ಪ್ರಯತ್ನ ಮಾಡಿದೆ ಮತ್ತು ಎಂದಿನ ಹಾಗೆ ನಪಾಸು!
ಎದುರು ಬರುವ ಹೆಂಗಸರು ಎಲ್ಲೋ ನೋಡಿಕೊಂಡು ಹೋಗುತ್ತಿರುವ ಹಾಗೆ ಆಕ್ಟ್ ಮಾಡಿ ಅಕಸ್ಮಾತ್ ನನ್ನನ್ನು ನೋಡಿದವರ ಹಾಗೆ ಮುಖ ಅರಳಿ ಸುತ್ತಿದ್ದರು, ನಸು ನಗೆ. ಇನ್ನು ಕಾಲೇಜು ಹೈಸ್ಕೂಲ್ ಹುಡುಗಿಯರು ಕೊಂಚ ಮಾತ್ರ ಸ್ಮೈಲ್ ಕೊಡುತ್ತಿದ್ದರು. ಮಿಡಲ್ ಸ್ಕೂಲ್ ಹುಡುಗಿಯರು ಬಾಯಿ ಅಗಲಿಸಿ ನಕ್ಕು ಕೆನ್ನೆಯ ಗುಳಿ ಕಾಣಿಸುತ್ತಿದ್ದರು.ಹೀಗೆ ಕೆಲವರ ಪರಿಚಯ ಆಯಿತು. ಒಂದು ದಿನ ಬೆಳಿಗ್ಗೆ ಮಳೆ ಬಂದು ನಿಂತ ನಂತರ ವಾಕಿಂಗ್ ಹೊರಟೆ. ಕೈಯಲ್ಲಿ ನಾಯಿಗಳನ್ನು ದೂರ ಇರಿಸಲು ವಾಕಿಂಗ್ ಸ್ಟಿಕ್ ಇತ್ತು. ಹಾಗೇ ಹೋಗಬೇಡಿ, ನಾಯಿ ಕಾಟ ಇರುತ್ತೆ,ಕೈಯಲ್ಲಿ ವಾಕಿಂಗ್ ಸ್ಟಿಕ್ ಇರಲಿ ಅಂತ ಭಾಮೈದ ವಾಕಿಂಗ್ ಸ್ಟಿಕ್ ಕೊಟ್ಟಿದ್ದರು. ವಾಕಿಂಗ್ ನಲ್ಲಿ ಎದುರು ಬಂದವರ ಕೈಯಲ್ಲಿ ಛತ್ರಿ. ನನ್ನ ಕೈಲಿ ವಾಕಿಂಗ್ ಸ್ಟಿಕ್.ನನ್ನನ್ನು ನೋಡಿ ಆಶ್ಚರ್ಯ ದಿಂದ ಅವರು ಕೇಳಿದ್ದು ಛತ್ರಿ ಎವುಡೇ…..
ಕೇರಳದ ಜನರ ಮೆಚ್ಚಿನ ನ್ಯೂಸ್ ಚಾನಲ್ ಯಾವುದು ಅಂದರೆ ಏಸಿಯ ನೆಟ್. ಹೋಟಲ್ಲು, ಆಸ್ಪತ್ರೆ, ಮನೆಗಳು… ಎಲ್ಲಾ ಕಡೆ ಇದನ್ನು ಹಾಕಿರುತ್ತಾರೆ. ಅಲ್ಲಿನ ಆಂಕರ್ ಗಳು ಸಹ ಟಿಪಿಕಲ್ ಕೆರಲೈಟ್ಸ್. ಮಡಿಸಿದ ತೋಳಿನ ಅಂಗಿ ಮತ್ತು ದ ಟ್ಟಿ ಪಂಚೆ. ಕೆಲವು ಸಲ ಪಂಚೆಗೆ ಬದಲು ಪ್ಯಾಂಟು, ಅದರ ಮೇಲೆ ಶರ್ಟು! ಶರ್ಟ್ ಒಳಗೆ ತೂರಿಸಿ ಇರುಲ್ಲ. ಇನ್ನು ಲೇಡಿ ಆಂಕರ್ ಗಳು ನೈಟಿ ರೀತಿಯ ಒಂದು ಡ್ರೆಸ್ ಹಾಕಿರ್ತಾರೆ. ಅದಕ್ಕೆ ಸಲ್ವಾರ ಅಂತ ಕರಿಬಹುದೇನೋ… ಇನ್ನು ನ್ಯೂಸ್ ಹೇಗಿರುತ್ತೆ? ನಮ್ಮ ಕನ್ನಡ ವಾಹಿನಿಗಳ ಹಾಗೆ ನಿಮಿಷ ನಿಮಿಷಕ್ಕೂ ಬ್ರೇಕಿಂಗ್ ನ್ಯೂಸ್ ಅಂತ ತೋರಿಸುತ್ತಾರೆ. ಮೊದಲನೇ ದಿವಸ ಈ ಚಾನಲ್ ನೋಡಬೇಕಾದರೆ ಒಂದು ಮಗೂನ ನಾಯಿ ನೂಕುವುದನ್ನು ಅಸ್ಪಷ್ಟವಾಗಿ ತೋರಿಸಿದರು. ಅದರ ನಂತರ ಒಂದು ಇಪ್ಪತ್ತು ಇಪ್ಪತ್ತೆರೆಡರ ಹುಡುಗಿ, ಅದಾದಮೇಲೆ ಒಂದು ಇಪ್ಪತ್ತರ ಹುಡುಗ. ನಾನು ಹೀಗೆ ಅರ್ಥೈಸಿ ದೆ. ಮಗೂನ ನಾಯಿ ತಳ್ಳಿದೆ, ಮಗು ಸುಮ್ಮನಿದೆ. ಅದರಿಂದ ನಾಯಿಗೆ ಕೋಪ ಬಂದು ಹುಡುಗಿಯನ್ನು ಸಾಯಿಸಿದೆ, ಕೋಪ ಕಡಿಮೆ ಆಗದೆ ಹುಡುಗನನ್ನು ಸಾಯಿಸಿದೆ ಅಂತ. ನಾದಿನಿಗೆ ಇದನ್ನು ವಿವರಿಸಿದೆ. ನಾದಿನಿ ಸಹ ಟಿವಿ ಮುಂದೆ ಕೂತು ಈ ದೃಶ್ಯ ಹಲವು ಬಾರಿ ನೋಡಿದ್ದಳು.ನಾದಿನಿ ನಕ್ಕಳು ಮತ್ತು ದೃಶ್ಯ ವಿವರಿಸಿದಳು..ಸರಿ ದೃಶ್ಯ ಹೀಗಂತೆ. ಮಗುವನ್ನ ನಾಯಿ ದೂಕಿತು ಆಮೇಲೆ ತೋರಿಸಿದ ಹುಡುಗಿ ಅದೇನೋ ಮಾಲ್ ಪ್ರಾಕ್ಟೀಸ್ ನಲ್ಲಿ ಸಿಕ್ಕಿಬಿದ್ಲು, ಕೊನೆಲಿ ತೋರಿಸಿದ ಹುಡುಗ ಬೀ ಕಾಮ್ ನಲ್ಲಿ ಮಾರ್ಕ್ಸ್ ಕಾರ್ಡ್ ತಿದ್ದಿದ್ದ ಅಂತ. ಈ ಸುದ್ದಿ ಆಗಲೇ ನಾಲ್ಕು ದಿವಸದಿಂದ ಬರ್ತಾ ಇತ್ತಂತೆ ಮತ್ತು ಅದಾದಮೇಲೆ ಸಹ ಒಂದು ವಾರ ಆದರೂ ಮುಂದುವರೆದಿತ್ತು! ನಮ್ಮ ಸೇತುರಾಂ(ಸೀತಾರಾಮ್ ಅಲ್ಲ)ಅವರ ಈ ಚಿ ನ ಸೀರಿಯಲ್ ನೆನೆಪಿಗೆ ಬಂತು. ಪೊಲೀಸಿನವರು ನಿವೃತ್ತ ಉನ್ನತ ಅಧಿಕಾರಿಯನ್ನು ಬಂಧಿಸುತ್ತಾರೆ. ಅವನು ಪಂಚೆ ಉಡಲೂ ಬಿಡದೆ ಅವನನ್ನು ನಡೆಸಿಕೊಂಡು ಕರೆದೊಯ್ಯುತ್ತಾರೆ. ಟಿವಿ ಕ್ಯಾಮೆರಾ ಈ ದೃಶ್ಯ ಚಿತ್ರೀಕರಿಸಿ ಕೊಳ್ಳುತ್ತದೆ. ಅವನು ಆಗ ಹಾಕಿರುವ ಚೆಡ್ಡಿ ಹರಿದಿರುತ್ತೆ. ಅವನ ಹರಿದ ಚೆಡ್ಡಿಯನ್ನು ಒಂದು ತಿಂಗಳು ಪ್ರಸಾರ ಮಾಡುತ್ತಾರೆ!ಈ ಪಾತ್ರದಲ್ಲಿ ಸೀತಾರಾಮ್ ನಟಿಸಿದ್ದರು, ಆದರೆ ಅದು ಬರೀ ಡೈಲಾಗ್ ಅಷ್ಟೇ!
ಆಸ್ಪತ್ರೆಗೆ ನ್ಯೂಸ್ ಗೆ ಬರುವಮುನ್ನ ಮತ್ತೆ ಕೆಲವು ಸಂಗತಿ ಹೇಳಬೇಕು ನಿಮಗೆ. ಆಟೋ ದವರು ಮತ್ತು ಕ್ಯಾಬ್ ನವರು ಬುಕಿಂಗ್ ಕ್ಯಾನ್ಸಲ್ ಮಾಡಲ್ಲ, ನಮ್ಮ ಊರಿನವರ ಹಾಗೆ ಅಂದೆ. ಅದಕ್ಕೆ ಕಾರಣ ಏನು ಅಂದರೆ ತಿರುವನಂತಪುರ ಬೆಂಗಳೂರಿಗೆ ವಿಸ್ತಾರದಲ್ಲಿ ಐದನೇ ಒಂದು ಭಾಗ ಮತ್ತು ಜನಸಂಖ್ಯೆ ಆರನೇ ಒಂದು ಭಾಗ. ಬೆಂಗಳೂರಿನಲ್ಲಿ ಇರುವಷ್ಟು ಉದ್ದಿಮೆಗಳು ಇಲ್ಲಿ ಇಲ್ಲ ಮತ್ತು ಇಲ್ಲಿ ಟ್ರಾಫಿಕ್ ಜಾಮ್ ಆಗುವುದು ತುಂಬಾ ತುಂಬಾ ಇಕ್ಕಟ್ಟಾದ ರಸ್ತೇಲಿ ಮಾತ್ರ. ತುಂಬಾ ಅಪರೂಪಕ್ಕೆ ಲುಲು ಮಾಲ್ ಮುಂದೆ ಶನಿವಾರ ಟ್ರಾಫಿಕ್ ಜಾಮ್ ಆಗುತ್ತಂತೆ.ಇಲ್ಲೂ ಒಂದು ಲುಲು ಮಾಲ್ ಇದೆ.ಮಿಕ್ಕ ಹಾಗೆ ಬೆಂಗಳೂರಿನ ಹಾಗೆ ಇಲ್ಲಿ ಉದ್ಯಮ ಯಾಕಿಲ್ಲ ಅಂದರೆ ಇಲ್ಲಿನ ಸರ್ಕಾರಗಳು ಖಾಸಗಿ ಉದ್ಯಮಕ್ಕೆ ಅಷ್ಟು ಪ್ರೋತ್ಸಾಹ ಕೊಟ್ಟಿಲ್ಲ ಮತ್ತು ಕೆಲವರು ಹಠ ಹಿಡಿದು ಉದ್ದಿಮೆ ಸ್ಥಾಪಿಸಿದ್ದರು ಸಹ ಅವರು ಗಂಟು ಮೂಟೆ ಕಟ್ಟಿ ಓಡುವ ಹಾಗೆ ಇಲ್ಲಿನ ಲೇಬರ್ ಪ್ರಾಬ್ಲಂ ಮಾಡಿದೆ. ಇದಕ್ಕೆ ಪೂರಕವಾಗಿ ಇಲ್ಲಿನ ಟ್ರೇಡ್ ಯೂನಿಯನ್ ಗಳು ವರ್ತಿಸುತ್ತವೆ.ಪ್ರತಿದಿನ ಕನಿಷ್ಠ ಒಂದಾದರೂ ಮೆರವಣಿಗೆ ಇದ್ದೇ ಇರುತ್ತೆ ಅಂತ ನನ್ನ ಮಲಯಾಳಿ ಸ್ನೇಹಿತ ಹೇಳುತ್ತಾನೆ.ಮೂರುವರ್ಷ ಹಿಂದೆ ಇಲ್ಲಿನ ಒಂದು ಉದ್ಯಮ ರಾತ್ರೋ ರಾತ್ರಿ ಬೇರೆ ರಾಜ್ಯಕ್ಕೆ ಸ್ಥಳಾಂತರ ಆಯಿತು.ಜತೆಗೆ ಸರ್ಕಾರಗಳು ಇಲ್ಲಿ ಸಾರ್ವಜನಿಕ ಉದ್ದಿಮೆಗಳಿಗೆ ಮೊದಲಿನಿಂದಲೂ ಒತ್ತಾಯ ಹಾಕಿಲ್ಲ. ಕೇರಳ ರಾಜ್ಯದಲ್ಲಿ DRDO ಸಂಶೋಧನಾ ಲಯಗಳು,ISRO ,RBI , ಓಶಿಯಾನಿಕ್ ಲ್ಯಾ ಬೋರೇಟರಿ ಇವೆ ಮತ್ತು ಇಲ್ಲಿ ಕೆಲಸ ಅಂದರೆ ಸರ್ಕಾರಿ ಕೆಲಸ, ಕೊಂಚ ಮಟ್ಟಿಗೆ ಖಾಸಗಿ. ಎಲ್ಲಾ ಸರ್ಕಾರಗಳೂ ಈ ಅನ್ ರಿಟ ನ್ ಲಾ ಅನ್ನು ಅಂದರೆ ಉದ್ದಿಮೆ ಸ್ಥಾಪನೆಗೆ ಒತ್ತು ನೀಡದಿರುವುದನ್ನು ಮೊದಲಿಂದ ಪಾಲಿಸಿಕೊಂಡು ಬಂದಿವೆ. ಈ ಕಾರಣವೇ ಕೇರಳಿಗರು ಹೊರಗೆ ಹೋಗಲೆ ಬೇಕಾದ ಒತ್ತಡ ತಂದವು.ಇಲ್ಲಿ ಅವರಿಗೆ ಬದುಕಲು ಅವಕಾಶ ಇಲ್ಲದಾಗ ಸಹಜವಾಗಿ ಬೇರೆಡೆ ಅನ್ನ ಹುಡುಕಿ ಹೋಗಲೇಬೇಕು ಅಂತಹ ಪರಿಸ್ಥಿತಿಯನ್ನು ಇಲ್ಲಿ ಲಾಗಾಯ್ತಿನಿಂದ ಕಾಪಾಡಿಕೊಂಡು ಬರಲಾಗಿದೆ. ಈ ಸಂಗತಿಯನ್ನು ಒಬ್ಬರು ಅಲ್ಲಿನ ಗೆಳೆಯರ ಸಂಗಡ ಹಂಚಿಕೊಂಡೆ.ಅವರು ಹಾಗೇನೂ ಇಲ್ಲ, ನಮ್ಮಲ್ಲಿ ಫಿಷರಿ, ಶಿಪ್ ಬಿಲ್ಡಿಂಗ್ ಇಲ್ಲವಾ.ಅದು ನಿಮ್ಮಲ್ಲಿ ಇದೆಯಾ ಅಂದರು! ಫಿಲ್ಮ್ ಇನ್ಸ್ಟಿಟ್ಯೂಟ್ ಓಪನ್ ಆಗುತ್ತೆ IT ಪಾರ್ಕ್ ಗೆ ಜಾಗ ಕೊಟ್ಟಿದೆ ಸರ್ಕಾರ ಅಂತ ಸೇರಿಸಿದರು. ಸಮುದ್ರದ ದಡದಲ್ಲಿ ಇದ್ದುಕೊಂಡು ಫಿಶರಿ ಗಿಷರಿ ಅವೂ ಮಾಡಲಿಲ್ಲ ಅಂದರೆ ಅಷ್ಟೇ ಅಂದೆ.ಈಗ ನೋಡಿ ನಮ್ಮಲ್ಲಿ ಐ ಟಿ ಸಾಕಷ್ಟು ಹರಡಿದೆ ಅಂದರು.ಈಗೊಂದು ಐದಾರು ವರ್ಷದಲ್ಲಿ ಟೆಕ್ನೋ ಪಾರ್ಕ್ ಆಗಿದೆ.ಇನ್ಫೋಸಿಸ್ ಇಲ್ಲೂ ಇದೆ.ಆದರೆ ಬೆಂಗಳೂರಿಗೆ ಹೋಲಿಸಿದರೆ ನೂರಕ್ಕೆ ಒಂದು ಪಾಲು ಐ ಟಿ ಉದ್ಯಮ ಅಷ್ಟೇ ಇಲ್ಲಿ.ಅಲ್ಲಿನವರ ಒಂದು ದೊಡ್ಡ ಕೊರಗು ಅಂದರೆ ಇಲ್ಲಿಯವರನ್ನೆ ಕೆಲಸಕ್ಕೆ ತಗೋತಾರೆ ಆದರೆ ಸಂಬಳ ಕಡಿಮೆ ಅಂತೆ! ಸದ್ಯ ಅಷ್ಟು ಜನ ಹೊರಗೆ ಅಂದರೆ ಬೆಂಗಳೂರಿಗೆ ವಲಸೆ ಹೋಗೋರು ತಪ್ಪಿದರಲ್ಲಾ ಅಂದೆ.ಅವರೂ ನಕ್ಕರು ನನ್ನ ಸಂಗಡ.ಆದರೆ ವಿಪುಲವಾಗಿ ನರ್ಸುಗಳನ್ನು ಕೇರಳದಲ್ಲಿ ತಯಾರಿಸುತ್ತಾರೆ.ಕೆಲವರು ನಮ್ಮ ಊರುಗಳಲ್ಲಿಯೂ ತರಬೇತಿ ತೆಗೆದುಕೊಳ್ಳುತ್ತಾರೆ. ಇವರೆಲ್ಲ ಒಂದೇ ಗುರಿ ಹೊಂದಿರುತ್ತಾರೆ.ಗಲ್ಫ್ ಅಥವಾ ಬೇರೆ ದೇಶಕ್ಕೆ ಹೋಗಿ ಚೆನ್ನಾಗಿ ಸಂಪಾದಿಸಬೇಕು ಎಂದು. ಕೇರಳವನ್ನು ಮೊದಲಿನಿಂದಲೂ ನರ್ಸ್ ಫ್ಯಾಕ್ಟರಿ ಎಂದು ಕರೆಯಬಹುದು. ಕೇರಳದ ನರ್ಸ್ ಗಳು ಒಂದೇ ಒಂದು ದಿವಸ ಮುಷ್ಕರ ಮಾಡಿದರೆ ಇಡೀ ಪ್ರಪಂಚದ ಯಾವುದೇ ಆಸ್ಪತ್ರೆ, ನರ್ಸಿಂಗ್ ಹೋಂ ನಡೆಯೋ ದಿಲ್ಲ ವಂತೆ!
ಆದರೆ ಬೆಂಗಳೂರಿನ ಪರಿಸ್ಥಿತಿ ತದ್ವಿರುದ್ದ.ಎಷ್ಟೇ ಕೋಟಿ ಕೋಟಿ ಹೊಟ್ಟೆಗಳು ಪ್ರತಿ ರೈಲು ಬಸ್ಸು ವಿಮಾನದಲ್ಲಿ ಬಂದರೂ ಅವಕ್ಕೆ ಊಟ ಉಣಿಸುವ ಶಕ್ತಿ ಹೊಂದಿದೆ.ತಿರುವನಂತಪುರದಲ್ಲಿ ಆಟೋ ದವರೆ ಆಗಲಿ ಕ್ಯಾಬ್ ನವರೆ ಆಗಲಿ ಒಬ್ಬ ಗಿರಾಕಿ ಬಿಟ್ಟರೆ ಬೇರೆ ಗಿರಾಕಿ ಸಿಗುತ್ತಾನೆ ಎನ್ನುವ ಗ್ಯಾರಂಟಿ ಇಲ್ಲದಿರುವುದು, ಅವರು ಬುಕಿಂಗ್ ಕ್ಯಾನ್ಸಲ್ ಮಾಡದಿರುವ ಕಾರಣ! ಬೆಂಗಳೂರಿನಂತೆ ಇಲ್ಲಿ ಫ್ಲೋಟಿಂಗ್ ಪಾಪ್ಯುಲೇಷನ್ ಪೂರ್ತಿ ಸೊನ್ನೆ ಅಂದರೆ ಸೊನ್ನೆ.ಅನಿವಾರ್ಯವಾಗಿ ಅವರು ಬುಕಿಂಗ್ ಕ್ಯಾನ್ಸಲ್ ಮಾಡದ ಹಾಗೆ ಆಗಿದೆ. ಬೆಂಗಳೂರಿನಲ್ಲಿ ಪರಿಸ್ಥಿತಿ ಇದಕ್ಕೆ ತದ್ವಿರುದ್ದ ವಾದ್ದರಿಂದ ಆಟೋ ಕ್ಯಾಬ್ ಚಾಲಕರದು ಕೊಂಚ ಮೇಲುಗೈ. ಕೆಲವು ಸಲ ಮಿತಿ ಮೀರಿ ವರ್ತಿಸುತ್ತಾರೆ. ಬೆಂಗಳೂರಿಗರಿಗೆ ಒಂದು ಅಡ್ವಾಂಟೇಜ್ ಇದೆ ಅದು ಅಂದರೆ ಮೆಟ್ರೋ ರೈಲು.ಆಟೋ ರವರ ಮೇಲೆ ಕೋಪಿಸಿಕೊಂಡು ಮೆಟ್ರೋ ಹತ್ತಬಹುದು!ತಿರುವನಂತಪುರದಲ್ಲಿ ಮೆಟ್ರೋ ರೈಲು ಇಲ್ಲ. ಮೋನೋ ರೈಲಿನ ಪ್ರಸ್ತಾಪ ಇದೆ. ಅದು ಯಾಕೆ ಒತ್ತಡ ಹಾಕಿ ಮೆಟ್ರೋ ತರಿಸಿ ಕೊಂಡಿಲ್ಲವೋ ತಿಳಿಯದು…
ತಿರುವನಂತಪುರದ ಆಟೋ ಅಥವಾ ಕ್ಯಾಬ್ ಡ್ರೈವರ್ ಗಳ ಯೂನಿಫಾರ್ಮ್ ಅಂದರೆ ಒಂದು ಖಾಕಿ ಶರ್ಟು ಮತ್ತು ಅಡ್ಡ ಸುತ್ತಿದ ಪಂಚೆ. ಪಂಚೆ ಅಂದರೆ ದ ಟ್ಟಿ ಯಾವುದೇ ಬಣ್ಣ ಇರಬಹುದು. ಪಂಚೆ ಜಾರದಿರಲಿ ಅಂತ ಸೊಂಟಕ್ಕೆ ಬೆಲ್ಟ್ ಹಾಕುತ್ತಾರೆ ಇಲ್ಲ ಅಂದರೆ ಗಂಟು ಕಟ್ಟಿರುತ್ತಾರೆ.ಪೊಲೀಸರು ಇವರ ಯೂನಿಫಾರ್ಮ್ ಬಗ್ಗೆ ನಮ್ಮಲ್ಲಿನ ಹಾಗೆ ಕಾನೂನು ಜಾರಿ ಮಾಡರು ಎಂದು ಅಂದುಕೊಂಡೆ. ಇಲ್ಲಿನ ಆಟೋ ಮೀಟರ್ ದರ ನೋಡುವ ಪ್ರಸಂಗ ಹುಟ್ಟಿತು. ಒಂದು ಆಟೋ ಹತ್ತಿದೆವು. ಡ್ರೈವರ್ ಹಿಂದೆ ಮೀಟರ್ ದರ ಪಟ್ಟಿ, ಸಾರಿಗೆ ಇಲಾಖೆ ಕೊಟ್ಟಿದ್ದು ಅಂಟಿ ಸಿದ್ದ. ಅದರ ಪ್ರಕಾರ ಮಿನಿಮಮ್ ಮೂವತ್ತು, ಮೊದಲ ಒಂದೂವರೆ ಕಿಮೀ ಗೆ. ನಂತರ ಇದು ಎರಡು ಕಿಮೀಗೆ ಮುವತ್ತ ಏಳೂವರೆ, ಹೀಗೆ ಏರುತ್ತಾ ಹೋಗುತ್ತದೆ. ಹತ್ತು ಕಿಮೀಗೆ ನೂರಾ ಐವತ್ತೇಳು ವರೆ. ಆದರೆ ಯಾರೂ ಅಷ್ಟಕ್ಕೇ ಬರರು. ಉಬರ್ ಬುಕ್ ಆದರೆ ಬೇರೆ ದಾರಿ ಇಲ್ಲದೇ ಬರುತ್ತಾರೆ..! ಆದರೆ ಉಬರ್ ಕಿಮೀಗೆ ಇಪ್ಪತ್ತೈದರ ಹಾಗೆ ಲೆಕ್ಕ ತೋರಿಸುತ್ತೆ.
(ತಿರುವನಂತಪುರ ಜನಸಂಖ್ಯೆ1.68ದಶಲಕ್ಷ ಆದರೆ ಬೆಂಗಳೂರು
ಒಂದು ಕೋಟಿ, 36ಲಕ್ಷ )
ಇಲ್ಲಿ ನಮ್ಮ ನಂದಿನಿ ಹಾಗೆ milma ಮಿಲ್ಮಾ ಅಂತ ಕೇರಳ ಮಿಲ್ಕ್ ಫೆಡರೇಶನ್ ಸಂಸ್ತೆ ಇದೆ. ಅದು ಪ್ರತಿ ಲೀ ಹಾಲಿಗೆ 56, ಮೊಸರಿಗೆ 80 ದರ ನಿಗದಿ ಮಾಡಿದೆ. (ಇದು ಒಂದೂವರೆ ವರ್ಷದ ಹಿಂದೆ ಇದ್ದ ರೇಟು)ಜನ ಏನೂ ಕು ಸ ಕುಸ್ ಅನ್ನದೇ ಕೊಳ್ಳುತ್ತಾರೆ. ನೂರು ಗ್ರಾಂ ತುಪ್ಪ 156. ನಮ್ಮ ನಂದಿನಿ ಬೆಲೆ ಹೋಲಿಸಿದರೆ ಇದು ಕೊಂಚ ಹೆಚ್ಚು! ಇಲ್ಲಿ milma ಉತ್ಪನ್ನಗಳನ್ನು ಸಾಗಿಸುವ ಒಂದು ವಾಹನ ನೋಡಿದೆ.ಅದರ ಮೇಲೆ milma ಉತ್ಪನ್ನಗಳ ಬೊಂಬೆ ಇತ್ತು.ಅದರ ಪ್ರಕಾರ ನಮ್ಮ ನಂದಿನಿ ಹಾಗೆ ಲೆಕ್ಕವಿಲ್ಲದಷ್ಟು ಉತ್ಪನ್ನಗಳು ಇಲ್ಲ.ಒಂದೇ ಒಂದು ನಂದಿನಿಯಲ್ಲಿ ಇಲ್ಲದ್ದು ವಿಶೇಷ ಅಂದರೆ ಸಣ್ಣ ಪೇಪರ್ ಕಪ್ ನಲ್ಲಿ ಸೀಲ್ ಮಾಡಿದ ಮೊಸರು ಮಾರಾಟ ಇದೆ.ಅದು ಇಲ್ಲಿನ ಆಸ್ಪತ್ರೆ ಕ್ಯಾಂಟೀನ್ ಗಳಲ್ಲಿ ಚೆನ್ನಾಗೇ ಮಾರಾಟ ಆಗುತ್ತದೆ.ನಂದಿನಿಯಲ್ಲಿ ಪೇಪರ್ ಕಪ್ ನಲ್ಲಿ ಮೊಸರು ಮಾರಾಟ ಇಲ್ಲ! ಆದರೆ ದೋಸೆ ಇಡ್ಲಿ ಹಿಟ್ಟು ಇಲ್ಲಿ ತುಂಬಾ ಅಂದರೆ ತುಂಬಾ ಕಡಿಮೆ ರೇಟು.4೦ ರೂಪಾಯಿಗೆ ಕೇಜಿ ಲೋಕಲ್ ಹಿಟ್ಟು ಸಿಕ್ಕರೆ ಬ್ರಾಂಡೆಡ್ ಹಿಟ್ಟು 50ರಿಂದ 60. ಬೆಂಗಳೂರಲ್ಲಿ ಇದು ಹೆಚ್ಚು. ಅಂದ ಹಾಗೆ ತಮ್ಮ ಅಡುಗೆ ಮತ್ತು ತಿಂಡಿಗಳನ್ನು , ಈ ಸಂಸ್ಕೃತಿಯನ್ನು ಕೇರಳದವರು ತುಂಬಾ ಚೆನ್ನಾಗಿ ಕಾಪಾಡಿಕೊಂಡು ಬಂದಿದ್ದಾರೆ. ಯಾವುದೇ ಪುಟ್ಟ ಹೊಟೇಲಿಗೆ ಹೋದರೂ ನಿಮಗೆ ಪುಟ್ಟು, ನುಲಪ್ಪ, ಊತಪ್ಪ ಮತ್ತಿತರ ಕೇರಳದ ಬ್ರೇಕ್ ಫಾಸ್ಟ್ ಸಿಕ್ಕೇ ಸಿಗುತ್ತೆ. ಪೂರಿ ಸಾಗು ನಾನು ಇಲ್ಲಿ ಸುಮಾರು ಹೋಟಲ್ಲುಗಳಲ್ಲಿ ನೋಡಲಿಲ್ಲ! ಅಲ್ಲೆಲ್ಲೋ ಒಂದು ಕಡೆ ಇಡಲ್ಲಿ, ಪೂರಿ ಅನ್ನುವ ಬೋರ್ಡ್ ಇತ್ತು.ನಮ್ಮ ಪುರಿ (ಕಡ್ಲೆ ಪುರಿ) ಇಲ್ಲಿ ಪೋರಿ ಆಗುತ್ತೆ!ದೊಡ್ಡ ದೊಡ್ಡ ಆಸ್ಪತ್ರೆಯ ಕ್ಯಾಂಟೀನ್ ಗಳಲ್ಲಿ ನಿಮಗೆ ಹುಯ್ ಗಡುಬು, ಬಾಳೆ ಎಲೆಯಲ್ಲಿ ಸುತ್ತಿ ಆವಿಯಲ್ಲಿ ಬೇಯಿಸಿ ಇಟ್ಟಿರುತ್ತಾರೆ (ಇದರ ಹೆಸರು ಎಲೆ ಅಡ)ಮತ್ತು ಅದೇ ಹೂರ್ಣ ವನ್ನ ಅಕ್ಕಿ ಹಿಟ್ಟಿನ ರೊಟ್ಟಿಯಲ್ಲಿ ಇಟ್ಟು ಗುಂಡು ಆಕಾರ( ಇದರ ಹೆಸರು ಕೊಲ ಕಟ)ಮಾಡಿರುತ್ತಾರೆ. ಈ ಕೋಲ ಕಟ ನೋಡಲು ನಮ್ಮ ಬಿಳಿ ಟೆನಿಸ್ ಬಾಲ್ ತರಹ ಮತ್ತು ರುಚಿಯ ಹಾಯ್ ಗಡುಬು. ಆವಿಯಲ್ಲಿ ಬೆಂದಿರುತ್ತೆ.
ನಮ್ಮಲ್ಲಿ ಯಾವ ಹೋಟೆಲ್ ನಲ್ಲಿ ಹುಯ್ ಗಡುಬು ಸಿಗುತ್ತೆ ಅಥವಾ ನಮ್ಮದೇ ಆದ ಯಾವ ತಿನಿಸು ಸಿಗುತ್ತೆ? ಚಿತ್ರಾನ್ನ ಫುಟ್ ಪಾತ್ ಗಾಡಿಯಲ್ಲಿ ಸಿಗುತ್ತೆ, ಆದರೆ ಹೊಟೆಲ್ ನಲ್ಲಿ ಅಪರೂಪ!ಬೆಂಗಳೂರಿನಲ್ಲಿ ಈ ಚೆ ಗೆ ರಾತ್ರಿ ಹೊತ್ತು ಅನ್ನ ಸಾರು ಬೇಕು ಅಂದರೂ ನಿಮಗೆ ಸಿಗದು.ಹುಯ್ ಗಡುಬು , ಪುಟ್ಟು ಮತ್ತು ಕೊಲ ಕಟ ಇದೂ ಸಹ ಇಡ್ಲಿ ಹಾಗೆ ಆವಿಯಲ್ಲಿ ಬೇಯುತ್ತದೆ. ಒಂದು ಒಳ್ಳೆಯ ಪೌಷ್ಟಿಕ ಆಹಾರ ಅಂತ ಅದಕ್ಕೆ ಹೆಸರು. ಇದನ್ನು ಸುಮಾರು ಎಲ್ಲ ಕೇರಳಿಗರು ತಿನ್ನುತ್ತಾರೆ. ಒಂದು ಪುಟ್ಟ ಅಂಗಡಿಗೆ ಟೀ ಕುಡಿಯಲು ಪ್ರತಿ ದಿವಸ ಹೋಗುತ್ತೇನೆ.ಬೆಂಗಳೂರಿನಲ್ಲಿ ನಾನು ಟೀ ಕುಡಿಯಲ್ಲ. ಟೀ ಅಂಗಡಿಗೆ ಒಬ್ಬರು ಬಂದು ಊತ ಪ್ಪ ಹೇಳಿದರು.ಒಂದು ತಟ್ಟೆಯಲ್ಲಿ ಮೂರು ಊತ ಪ್ಪ ಹಾಕಿ ಅದರ ಮೇಲೆ ಅರ್ಧ ಲೀಟರ್ ಅಷ್ಟು ಚಟ್ನಿ ಸುರುವಿ ಒಂದು ಬೋಲ್ ನಲ್ಲಿ ಸಾಂಬಾರ ಕೊಟ್ಟ.ಇವರು ಎಲ್ಲವನ್ನೂ ತಟ್ಟೆಗೆ ಸುರುವಿಕೊಂಡು ಕಲಸಿ ಕಲಸಿ ತಿಂದರು! ಇಲ್ಲಿ ಬ್ರೇಕ್ ಫಾಸ್ಟ್ ಮಾಡುವವರು ಬೆಂಗಳೂರಿನಲ್ಲಿ ಇಷ್ಟ ಪಟ್ಟು ತಟ್ಟೆ ತುಂಬಾ ಚಿತ್ರಾನ್ನ ತಿನ್ನುವವರನ್ನು ನೆನಪಿಗೆ ತರುತ್ತಾರೆ. ನಮ್ಮ ಫ್ಯಾಕ್ಟರಿಯಲ್ಲಿ ಬೆಳಿಗ್ಗೆ ತಿಂಡಿಗೆ ಚಿತ್ರಾನ್ನ ಮಾಡಿದ್ದ ದಿನ ಕೆಲವರಿಗೆ (ಇದರಲ್ಲಿ ನಾನೂ ಸೇರಿದ್ದೆ,) ತುಂಬಾ ಬೇಸರ ಆಗಿಬಿಡೋದು. ಬೆಳಿಗ್ಗೆ ಬೆಳಿಗ್ಗೆ ಅನ್ನ ತಿನ್ನಬೇಕೇ ಅಂತ. ನಮ್ಮ ಸಹೋದ್ಯೋಗಿಗಳು ಖುಷಿಯಿಂದ ಅದನ್ನು ತಿನ್ನುತ್ತಿದ್ದರು.ನನ್ನ ಗೆಳೆಯ ಶಾಸ್ತ್ರಿ ಇದನ್ನ ಹೀಗೆ ವಿವರಿಸೋರು.”… ಚಿತ್ರಾನ್ನ ಇತ್ತು.ಬೇಡ ಅಂತ ಕ್ಯಾಂಟೀನ್ ನಿಂದ ಹೊರಗೆ ಹೊರಡುತ್ತಾ ಇದ್ದೆ. …..ಮುಂಡೆ ಮಕ್ಕಳು ಅವರೆಲ್ಲಾ ತಿಂತಾ ಇದ್ದಾರೆ ಅಂತ ಚಿತ್ರಾನ್ನ ತಿನ್ನೋವರನ್ನ ನೋಡಿ ಸಂಕಟ ಆಗೋದು. ನಾನೂ ತಟ್ಟೆ ತುಂಬಿಸಿಕೊಂಡು ಬಂದು ಗೋಡೆ ಕಡೆ ಮುಖ ಮಾಡಿ ತಟ್ಟೆ ಖಾಲಿ ಮಾಡ್ತಿದ್ದೆ..!” ಏರ್ ಪೋರ್ಟ್ ರಸ್ತೆಯಲ್ಲಿ ಚಿತ್ರಾನ್ನ ತುಂಬಾ ಚೆನ್ನಾಗಿರುತ್ತೆ ಅಂತ ಇಪ್ಪತ್ತು ಮೂವತ್ತು ಕಿಮೀ ದೂರ ಕ್ರಮಿಸಿ ಬರುವ ಬೆಂಗಳೂರಿನ ಸ್ನೇಹಿತರು ನನಗೆ ಗೊತ್ತು.
ಕಮ್ಯುನಿಸ್ಟರು ಹೆಚ್ಚು ಸಮಯ ಇಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದರು ಮತ್ತು ಅದರ ಪರಿಣಾಮ ಈಗಲೂ ಇದೆ. ಜನ ಸಂಘಟಿತರು ಮತ್ತು ಪ್ರತಿದಿನ ಯಾವುದಾದರೂ ಹೋರಾಟ ಚಳವಳಿ ಇರುತ್ತೆ.
ಇಲ್ಲಿನ ಸೆಕ್ರೆ ಟೇ ರಿ ಯ ಟ್ ಮುಂದಿನ ಗೋಡೆ ರಸ್ತೆ ತುಂಬಾ ಪೋಸ್ಟರ್ ನೋಡಿದೆ. ಧರಣಿ ಮುಷ್ಕರಕ್ಕೆ ಸಂಬಂಧ ಪಟ್ಟವು ಅವು. ಮಲಯಾಳ ಭಾಷೆಯವು. ಧರಣಿ ಮಾಡುವವರು ಅಲ್ಲಿ ಬಂದು ಧರಣಿ ಮಾಡುತ್ತಾರೆ ಮತ್ತು ಹೋರಾಟದ ಅಂಗಳ ವಂತೆ ಅದು. ಎರಡು ತಿಂಗಳ ಹಿಂದೆ ಒಂದು ಮಹಿಳೆ ಎರಡು ಮಕ್ಕಳ ಸಹಿತ ಬಂದು ಒಂದು ವಾರ ಧರಣಿ ಮಾಡಿದರಂತೆ.ಇಲ್ಲಿನ ರಸ್ತೆಗಳಲ್ಲಿ citu ಮತ್ತು aituc(ಇವು ಕಮ್ಯೂನಿಸ್ಟ್ ಸಂಘಟನೆಗಳು)ಬಾವುಟಗಳು ಹೆಚ್ಚಾಗಿ ಕಾಣಿಸಿತು.intuc (ಇದು ಕಾಂಗ್ರೆಸ್)ಸಹ ಇಲ್ಲಿದೆ ಎಂದು ಟೀ ಕುಡಿಯಬೇಕಾದರೆ ಒಬ್ಬರು ಹೇಳಿದರು.bems (ಇದು ಬಿಜೆಪಿ ಅವರದ್ದು) ಇಲ್ಲಿ ಕಾಣಿಸಲಿಲ್ಲ.ನನಗೆ ನಮ್ಮೂರಿನ ನಮ್ಮ ಕಾಲದ ನೆನಪು ಬಂತು. ವಿಧಾನ ಸೌಧದ ಮುಂದೆ ಮಾಡುತ್ತಿದ್ದ ಧರಣಿ ಮುಷ್ಕರ ತಲೆಯಲ್ಲಿ ಓಡಿತು. ನಾವು ಫ್ಯಾಕ್ಟರಿಯಲ್ಲಿ ಕೆಲಸದಲ್ಲಿದ್ದ ಕಾಲದಲ್ಲಿ ಸರಾಸರಿ ಎರಡು ವರ್ಷಕ್ಕೊಮ್ಮೆ ವಿಧಾನ ಸೌಧ ಚಲೋ ಕಾರ್ಯಕ್ರಮ ಇರುತ್ತಿತ್ತು.ಜಾಲಹಳ್ಳಿಯಂದ ವಿಧಾನ ಸೌಧಕ್ಕೆ ನಡೆದು ಕೊಂಡು ಹೋಗಿ(ಸುಮಾರು ಇಪ್ಪತ್ತು ಇಪ್ಪತ್ತೈದು ಕಿಮೀ)ಅಲ್ಲಿ ಕೂತು ಘೋಷಣೆ ಕೂಗುವುದು ಈ ಚಲೋವಿನ ಒಂದು ಪ್ರಮುಖ ಘಟ್ಟ. ಗಂಡಸರು, ಹೆಂಗಸರು, ಕ್ರಿಷ್ ನಲ್ಲಿ ಬಿಟ್ಟಿರುತ್ತಿದ್ದ ಮಕ್ಕಳನ್ನು ಹೊತ್ತು ತಾಯಮ್ಮಗಳು ಅಷ್ಟು ದೂರ ನಡೆದು ಹೋರಾಟದಲ್ಲಿ ಭಾಗವಹಿಸುತ್ತಿದ್ದರು. ಕಾರ್ಖಾನೆ ಟ್ರೇಡ್ ಯೂನಿಯನ್ ಗಳಲ್ಲಿ AITUC ಕಮ್ಯುನಿಸ್ಟ್ ಪಕ್ಷದ ಹಿಡಿತ ಇದ್ದ ಕಡೆ ಈ ಕಾರ್ಯಕ್ರಮ ಇರುತ್ತಿತ್ತು! ಅದರ ಲೀಡರ್ ಎಂ ಎಸ್ ಕೃಷ್ಣನ್.ನಿಧಾನಕ್ಕೆ ಈ ಚಲೋ ನಿಂತಿತು ಮತ್ತು ಈಗ ಅದು ಒಂದು ಇತಿಹಾಸ. ವಿಧಾನ ಸೌಧದ ಮುಂದೆ ನಡೆಯುತ್ತಿದ್ದ ಧರಣಿ, ಹೋರಾಟ, ಚಳುವಳಿ ಹತ್ತಿಕ್ಕಲು ಪೊಲೀಸರು ಹರ ಸಾಹಸ ಪಡುತ್ತಿದ್ದರು. ಕೊನೆಗೂ ಪ್ರಭುತ್ವ ಇದರಲ್ಲಿ ಯಶಸ್ಸು ಸಾಧಿಸಿಯೇ ಬಿಟ್ಟಿತು. ಸೆಂಟ್ರಲ್ ಜೈಲ್ ಗೆ ಮತ್ತೊಂದು ಕಟ್ಟಡ ಪರಪ್ಪನ ಅಗ್ರಹಾರದಲ್ಲಿ ಸಿದ್ಧವಾಯಿತು. ಜೈಲು ಅಲ್ಲಿಗೆ ಸ್ಥಳಾಂತರ ಆಯಿತು. ನಗರದ ಹೃದಯ ಭಾಗದಲ್ಲಿ ಅಷ್ಟು ದೊಡ್ಡ ಜಾಗ ಖಾಲಿ ಬಿಡಲು ಸಾಧ್ಯವೇ?
ರಾಜಕಾರಣಿಗಳು ಮತ್ತು ಬ್ಯುರಕ್ರಾಟ್ಸ್ ಸೇರಿದರು, ಚಿಂತನ ಮಂಥನ ನಡೆಯಿತು. ಹಳೇ ಸೆಂಟ್ರಲ್ ಜೈಲ್ ಸ್ವಾತಂತ್ರ ಉದ್ಯಾನವನ ಹೆಸರು ಪಡೆಯಿತು. ವಿಧಾನ ಸೌಧದ ಮುಂಭಾಗದ ಮುಷ್ಕರ ಧರಣಿ ಇತ್ಯಾ ದೀ ಚಟುವಟಿಕೆಗಳು ಇಲ್ಲೇ ನಡೆಯಬೇಕು ಎಂದು ತೀರ್ಮಾನ ವಾ ಗಿ. ಆಚರಣೆಗೂ ಬಂದಿತು…!
ವಿಧಾನ ಸೌಧದ ಮುಂದಿನ ಧರಣಿ ಇತಿಹಾಸದ ಪುಟಕ್ಕೆ ಸೇರಿತು.ತಿರುವನಂತಪುರದಲ್ಲಿ ಸಹ ಈ ರೀತಿಯ ಒಂದು ಯೋಜನೆ ಯಾರದಾದರೂ ತಲೆಯಲ್ಲಿ ಹೊಳೆದು ಜಾರಿ ಆಗಬಹುದು ಅನಿಸುತ್ತೆ, ಕಾರಣ ಎಲ್ಲಾ ರಾಜಕಾರಣಿಗಳ ತಲೆಗಳು ಒಂದೇ ರೀತಿ ಇರುತ್ತದೆ ಮತ್ತು ಒಂದೇ ರೀತಿ ಓಡುತ್ತದೆ.
ಕೇರಳ ದವರು ಒಳ್ಳೆ ಸಿನಿಮಾ ಮಾಡ್ತಾರೆ, ಅಲ್ಲಿ ಸಹಕಾರಿ ಪುಸ್ತಕ ಪ್ರಕಾಶನ ಇಡೀ ಪ್ರಪಂಚಕ್ಕೆ ಮಾದರಿ. ಇದು ಯಾವುದೂ ನಿನ್ನ ಕಣ್ಣಿಗೆ ಬೀ ಳಲಿಲ್ಲವೆ ಅಂತ ಕ್ವೈರಿ ಹಾಕ್ತೀರಿ ಅಂತ ಗೊತ್ತು. ಜತೆಗೆ ಕೇರಳದ ಮಂತ್ರವಾದಿಗಳು ನಮ್ಮ ವಾಮಾಚಾರ ಬೇಸ್ ಆಗಿರುವ ಪುಸ್ತಕದಲ್ಲಿ ಬರ್ತಾರೆ.ಅದರ ಅನುಭವ ಸಹ ಎಲ್ಲಿ ಅಂತ ಕ್ವೇಯರಿ ಹಾಕ್ತೀರಿ ಅಂತ ಗೊತ್ತು.ಈಗ ಮೊದಲ ಎರಡು ಹೇಳ್ತೀನಿ,ಮಂತ್ರವಾದಿಯದ್ದು ಮುಂದೆ..
ಕೇರಳ ಸಾಸ್ಕೃತಿಕ ಮತ್ತು ಸಾಹಿತ್ಯಿಕವಾಗಿ ಹೆಸರು ಮಾಡಿರುವ ಪ್ರದೇಶ. ಸಿನಿಮಾ ಕ್ಷೇತ್ರದಲ್ಲಿ ಚೆಮ್ಮೀನ್ ಎನ್ನುವ ಸಿನಿಮಾ ರಾಷ್ಟ್ರ ಪ್ರಶಸ್ತಿ ಗಳಿಸಿ ಹೆಸರು ಮಾಡಿತು. ಆರು ಜ್ಞಾನಪೀಠ ಪ್ರಶಸ್ತಿ ಮಲಯಾಳ ಭಾಷೆಗೆ ಸಂದಿದೆ. ನಮ್ಮ ಬುದ್ಧಿಜೀವಿ ವಲಯದಲ್ಲಿ ಸುಮಾರು ಸಾಹಿತಿಗಳು, ಇನ್ನೂ ಭ್ರೂಣಾವಸ್ತೆಯ ಕವಿಗಳು ಇಲ್ಲಿನ ಸಾಹಿತ್ಯೋತ್ಸವದಲ್ಲಿ ಭಾಗ ವಹಿಸುತ್ತಾರೆ ಮತ್ತು ಅವುಗಳ ನೆನಪನ್ನು ನಮ್ಮ ಪತ್ರಿಕೆಗಳಲ್ಲಿ ಭಾರೀ ಮುತುವರ್ಜಿ ಇಂದ ದಾಖಲಿಸುತ್ತಾರೆ. ಒಳ್ಳೇ ಟಿ ಏ ಡಿ ಎ. ಕೈತುಂಬಾ ಸಿಗುತ್ತೆ ಅಂತ ಕೇಳಿದ್ದೀನಿ! ನಮ್ಮ ಜ್ಞಾನ ಪೀಠ ಪ್ರಶಸ್ತಿ ವಿಜೇತ ಅನಂತ ಮೂರ್ತಿ ಅವರು ಇಲ್ಲಿನ ವಿಶ್ವ ವಿದ್ಯಾಲಯದ ಚಾನ್ಸಲರ್ ಆಗಿದ್ದರು ಹಾಗೂ ಕೆಲವು ಉನ್ನತ ಹುದ್ದೆಗಳನ್ನು ನಿರ್ವಹಿಸಿದರು. ಚೆಮ್ಮಿನ್ ಬಂದ ನಂತರ ಬೆಂಗಳೂರಿನಲ್ಲಿ ಅದರ ಪ್ರದರ್ಶನ ಆದಾಗ ಗೆಳೆಯರ ಸಂಗಡ ಅದನ್ನು ನೋಡಿ ಮೆಚ್ಚಿದ್ದು ಈಗ ತುಂಬಾ ತುಂಬಾ ಹಳೆಯ ನೆನಪು.
ಅದರ ನಂತರ ಸಾಲು ಸಾಲಾಗಿ ಮಲಯಾಳಿ ಚಿತ್ರಗಳು ಬೆಂಗಳೂರು ಹಾಗೂ ಕರ್ನಾಟಕದ ಸಿನಿಮಾ ಗಲ್ಲಾ ಪೆಟ್ಟಿಗೆಗೆ ಲಗ್ಗೆ ಇಟ್ಟವು. ಸಾಲು ಸಾಲಾಗಿ ಹಸಿ ಹಸಿ ಚಿತ್ರಗಳು ತುಂಬಿಹೋಯಿತು. ಕೆಲವು ಸಿನಿಮಾಗಳು ನೂರು ದಿನ ಓಡಿದವು, ಮಾರ್ನಿಂಗ್ ಶೋ ಗಳಲ್ಲಿ. ಕೆಲವು ಸಿನಿಮಾಗಳಿಗೆ ಒಬ್ಬೊಬ್ಬರೇ ಬಚ್ಚಿಟ್ಟುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆಗಿನ ಮಲಯಾಳಿ ಸಿನಿಮಾಗಳ ಹೆಸರುಗಳು…ಅವಳೊ ಡೇ ರಾವುಕಲ್, ಅವಳೊಡೇ ರಾತ್ರಿ ಕಲ್, ಉವರ್ಶಿ ಯೊಡನೆ ಕೆಲ ಆಟಂ… ರಂಭಾ ಸಂಗಮಂ…
ನೇರ ರಾತ್ರಿಯ ಸುಗಮ್,ರಂಭಾ ರಾತ್ರಿ….. ಹೀಗೆ.ಅವಳೊಡೆ ರಾವುಕಲ್ ಸೀರಿಸಿನ ಹಲವಾರು ಚಿತ್ರಗಳು ಬೆಂಗಳೂರಿನಲ್ಲಿ ಮತ್ತು ಇತರ ಎಡೆಗಳಲ್ಲಿ ಮಾರ್ನಿಂಗ್ ಶೋಗಳಲ್ಲಿ ಪ್ರದರ್ಶಿಸಿ ಕೊಂಡವು ಮತ್ತು ಜನರಲ್ಲಿ ಅಭಿರುಚಿ ಹಾಳುಮಾಡುತ್ತಿದೆ ಎನ್ನುವ ಆರೋಪ ಸಹ ಹೊತ್ತಿತ್ತು…!
ಇಂತಹ ಚಿತ್ರ ತೆಗೆದವರು ಮುಂದೆ ಕ್ಲಾಸಿಕ್ ಚಿತ್ರಗಳನ್ನು ಮಲಯಾಲದಲ್ಲಿ ತೆಗೆದರು.
ನಿಧಾನಕ್ಕೆ ಅದು ತನ್ನ ಹಾದಿ ಬದಲಿಸಿದ್ದು ಈಗ ಇತಿಹಾಸ. ಮಾರ್ಕೆಟ್ ಹಿಡಿಯುವಲ್ಲಿ ಈ ರೀತಿಯ ಚಿತ್ರಗಳು ಪ್ರಮುಖ ಪಾತ್ರ ವಹಿಸಿದ್ದವು. ಈಗ ಇಲ್ಲಿ ಒಂದೂ ಸಿನಿಮಾ ನಾನು ನೋಡಲಿಲ್ಲ ಹಾಗೂ ಒಂದೇ ಒಂದು ಪುಸ್ತಕದ ಅಂಗಡಿಯೂ ನಾನು ಓಡಾಡಿದ ಪ್ರದೇಶದಲ್ಲಿ ಕಾಣಿಸಲಿಲ್ಲ. ಪುಸ್ತಕದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ?ಟೀಕಡೆ ಟೀ ಅಂಗಡಿಯಲ್ಲಿ ಕೂತ ಜನ ಪೇಪರು ಓದುತ್ತಾರೆ ಮತ್ತು ಒಂದೇ ಪೇಪರು ಹಲವಾರು ಜನ ಓದುತ್ತಾರೆ, ನಮ್ಮ ಹಾಗೆ!
ಇಲ್ಲಿರಬೇಕಾದರೆ ಮಲಯಾಳಿ ಸಿನೆಮಾಗಳನ್ನು ವಿಶ್ವದಾದ್ಯಂತ ಪರಿಚಯಿಸಲು ತಮ್ಮ ಉತ್ತಮ ಅಭಿರುಚಿಯ ನಿರ್ಮಾಣ ದಿಂದ ಹೆಸರು ಮಾಡಿದ್ದ ಶ್ರೀ ರವೀಂದ್ರ ನಾಥ ನಾಯರ್ ಮೃತರಾದ ಸುದ್ದಿ ಹಿಂದೂ ಇಂಗ್ಲಿಷ್ ಪತ್ರಿಕೆಯ ನಾಲ್ಕನೇ ಪುಟದಲ್ಲಿ ಬಂದಿತ್ತು! ರಾಜ್ಯಕ್ಕೆ ರಾಷ್ಟ್ರಕ್ಕೆ ಹೆಸರು ತಂದು ಕೊಟ್ಟವರ ಸಾವು ಸಣ್ಣ ಸುದ್ದಿ ಆಗಬಾರದು ಎನ್ನುವ ಸ್ಕೂಲ್ ಆಫ್ ಥಿಂಕಿಂಗ್ ನನ್ನದು. ಆದರೆ ನನ್ನಂತಹವರ ಥಿಂಕಿಂಗ್ ಕೇಳೋರು ಯಾರು…?
ಎಚ್. ಗೋಪಾಲಕೃಷ್ಣ
ಆಹಾ! ಉತ್ತಮ ಲೇಖನ (ಚಿತ್ರಣ) ನೀಡಿದ್ದೀರಿ ಗೋಪಾಲಣ್ಣಾ. ನಿಮ್ಮ ಲೇಖನಿಗೆ ಮತ್ತು ನಿಮಗೆ ಅಭಿನಂದನೆಗಳು
ಅನಾಮಿಕ ಮೇಡಂ,
ತುಂಬು ಹೃದಯದ ಧನ್ಯವಾದಗಳು
Chandrika Sridhar
Good and interesting narration
ಶ್ರೀಮತಿ ಚಂದ್ರಿಕಾ ಶ್ರೀಧರ್ ಅವರೇ,ಧನ್ಯವಾದಗಳು
Your narration well describes Thiruvananthapuram, it’s food habits and militant trade unions . This sure is after silently watching the events there indicates your capacity to translate your observations to a beautiful narration in a easy flowing of your thoughts. I appreciate your keenness of observation and putting them in a likable narration keeping the reader engrossed.
ಶ್ರೀ ಹರಿ ಸರ್ವೋತ್ತಮ ಅವರೇ,
ಬೆನ್ನು ತಟ್ಟಿಕೊಂಡೆ!ಧನ್ಯವಾದಗಳು