ಧಾರಾವಾಹಿ-56
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಬಂಡೆ ಒಡೆಯುವ ಕೆಲಸಕ್ಕೆ ವೇಲಾಯುಧನ್
ಪತಿ ಕೆಲಸಕ್ಕೆ ಹೋದ ನಂತರ ಮನೆಯ ಮುಂದಿನ ಬಾಗಿಲು ಹಾಗೂ ಹಿತ್ತಲಿನ ಬಾಗಿಲನ್ನು ಭದ್ರಪಡಿಸಿ, ಕೋಣೆಗೆ ಹೋಗಿ ಮಕ್ಕಳನ್ನು ಮಂಚದ ಮೇಲೆ ಕುಳ್ಳಿರಿಸಿ ತಾನೂ ಮಕ್ಕಳ ಜೊತೆ ಕುಳಿತುಕೊಂಡಳು. ಹಿಂದಿನ ದಿನದಂತೆಯೇ ಅದೇ ಸಮಯಕ್ಕೆ ಸರಿಯಾಗಿ ಮತ್ತದೇ ಶಿಳ್ಳೆ ಹಾಗೂ ಬಿರುಸುಗುಡುವಿಕೆಯ ಶಬ್ದವು ಕಾಳಿಂಗನ ಆಗಮನದ ಸೂಚನೆ ಕೊಟ್ಟವು. ಸ್ವಲ್ಪ ಹೊತ್ತಿನ ನಂತರ ಮತ್ತೆ ಶಾಂತವಾಯಿತು. ನೋಡಿದರೆ ಎಂದಿನಂತೆಯೇ ದಾಸವಾಳ ಗಿಡದ ನೆರಳಲ್ಲಿ ಹೋಗಿ ಮಲಗಿತು ಕಾಳಿಂಗ. ಸಂಜೆಯವರೆಗೂ ಹೆದರಿಕೆಯಿಂದಲೇ ಕಾಲ ಕಳೆದಳು. ಪತಿಯು ಬಂದ ಕೂಡಲೇ ಅಂದಿನ ಅನುಭವವನ್ನು ಹೇಳಿಕೊಂಡಳು. ಮಾರನೇ ದಿನ ವೇಲಾಯುಧನ್ ಕೆಲಸಕ್ಕೆ ಹೋಗದೇ ಹೊರಗೆ ಬೇರೆಲ್ಲೋ ಹೋಗಿ ಬರುವಾಗ ಜೊತೆಗೆ ಒಬ್ಬಾತನನ್ನು ಕರೆದುಕೊಂಡು ಬಂದರು. ಸಮಯಕ್ಕೆ ಸರಿಯಾಗಿ ಕಾಳಿಂಗ ಹಾಜರ್!! ಮನೆಯ ಸುತ್ತಾ ಎಂದಿನಂತೆಯೇ ಸದ್ದು ಮಾಡುತ್ತಾ ಸ್ವಲ್ಪ ಸಮಯದ ನಂತರ ದಾಸವಾಳ ಗಿಡದ ಕೆಳಗೆ ಹೋಗಿ ಮಲಗಿತು. ವೇಲಾಯುಧನ್ ಹಾಗೂ ಜೊತೆಗೆ ಬಂದಿದ್ದ ವ್ಯಕ್ತಿ ಕಿಟಕಿಯಿಂದ ಎಲ್ಲವನ್ನೂ ಗಮನಿಸುತ್ತಿದ್ದರು. ಕಾಳಿಂಗವು ಸ್ವಲ್ಪ ಹೊತ್ತು ತನ್ನ ಸೀಳು ನಾಲಗೆಯನ್ನು ಆಗಾಗ ಹೊರ ಚಾಚುತ್ತಾ, ಅತ್ತಿಂದ ಇತ್ತ ಹೆಡೆ ಆಡಿಸುತ್ತಾ ಹಾಗೇ ಮಲಗಿತ್ತು. ಸ್ವಲ್ಪ ಹೊತ್ತಿನ ನಂತರ ಸುಮ್ಮನೇ ಮಲಗಿತು. ಇದೇ ಸಮಯವನ್ನು ಕಾಯುತ್ತಿದ್ದ ವೇಲಾಯುಧನ್ ಹಾಗೂ ಅವರ ಜೊತೆ ಬಂದಿದ್ದ ವ್ಯಕ್ತಿ ಹಿತ್ತಲ ಬಾಗಿಲಿನಿಂದ ಮೆಲ್ಲನೇ ಹೊರಗೆ ನಡೆದರು. ಅವರ ಕೈಯಲ್ಲಿ ಒಂದು ಚೀಲವೂ ಇತ್ತು. ಮೆಲ್ಲನೇ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಹಾಕುತ್ತಾ, ಕಾಳಿಂಗ ಇರುವಲ್ಲಿಗೆ ತಲುಪಿದರು. ಬಂದಾತನ ಕೈಯಲ್ಲಿ ಒಂದು ಕೊಕ್ಕೆಯಂತಹ ಕೋಲು ಇತ್ತು. ಅದರಿಂದ ಕಾಳಿಂಗನ ತಲೆಯನ್ನು ಅದುಮಿ ಹಿಡಿದ.
ಕೂಡಲೇ ಕಾಳಿಂಗವು ಎಚ್ಚರಗೊಂಡು ತನ್ನ ಉದ್ದನೆಯ ದೇಹವನ್ನು ಅತ್ತಿಂದ ಇತ್ತ ಆಡಿಸುತ್ತಾ ಬಾಲವನ್ನು ನೆಲಕ್ಕೆ ಬಡಿದು ಸದ್ದು ಮಾಡಿತು. “ವೇಲಾಯುಧನ್ ಅದರ ಬಾಲವನ್ನು ಭದ್ರವಾಗಿ ಹಿಡಿದುಕೊಳ್ಳಿ”…. ಎಂದು ಆತ ಹೇಳಿದಾಗ ವೇಲಾಯುಧನ್ ಅದರ ಬಾಲವನ್ನು ಹಿಡಿಯಲು ಯತ್ನಿಸಿದರು. ಆಗ ವೇಲಾಯುಧನ್ ರವರ ಕಾಲಿಗೆ ತನ್ನ ಬಲಿಷ್ಠ ಬಾಲದಿಂದ ಹೊಡೆಯಿತು. ನೋವಾದರೂ ಸಹಿಸಿಕೊಂಡು ವೇಲಾಯುಧನ್ ಅದರ ಬಾಲವನ್ನು ಹಿಡಿದರು. ಕಾಳಿಂಗವು ಅವರಿಂದ ಬಿಡಿಸಿಕೊಳ್ಳಲು ಯತ್ನಿಸಿತು. ಆದರೆ ಇಬ್ಬರೂ ಅದನ್ನು ಬಿಡಲೇ ಇಲ್ಲ. ಹಾಗೆಯೇ ನಿಧಾನವಾಗಿ ಕಾಳಿಂಗನನ್ನು ಚೀಲದ ಒಳಗೆ ತುಂಬಿಸಿದರು. ಇಬ್ಬರೂ ರಸ್ತೆಯ ಬದಿಗೆ ಹೋಗಿ ದಾರಿಯಲ್ಲಿ ಹೋಗುತ್ತಿದ್ದ ಜೀಪನ್ನು ನಿಲ್ಲಿಸಿ, ಕಾಳಿಂಗನನ್ನು ಚೀಲದ ಸಮೇತ ಜೀಪಿನಲ್ಲಿ ಹಾಕಿಕೊಂಡು ಸಕಲೇಶಪುರದ ಅರಣ್ಯ ಇಲಾಖೆಗೆ ತೆಗೆದುಕೊಂಡು ಹೋಗಿ ಅಲ್ಲಿನ ಅಧಿಕಾರಿಗೆ ಒಪ್ಪಿಸಿದರು. ನಂತರ ವೇಲಾಯುಧನ್ ಮನೆಗೆ ಮರಳಿದರು. ಮನೆಗೆ ಬಂದ ನಂತರ ತಾವು ಕಾಳಿಂಗನನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾಗಿ ಸುಮತಿಗೆ ಹೇಳಿದರು. ಪತಿಯ ಮಾತನ್ನು ಕೇಳಿದ ಸುಮತಿ ಸಮಾಧಾನದ ನಿಟ್ಟುಸಿರು ಹೊರಚೆಲ್ಲಿ, ಪತಿಗೆ ಚಹಾ ಮಾಡಲೆಂದು ಅಡುಗೆ ಮನೆಗೆ ಹೋದಳು. ಇಷ್ಟೂ ದಿನ ಹೆದರಿ ಹೊರಗೆ ಕಾಲಿಡದಿದ್ದ ಮಗಳು ಇಂದು ಖುಷಿಯಿಂದ ಅಂಗಳಕ್ಕೆ ಇಳಿದು ಆಟ ಆಡಿದಳು. ಸ್ವಲ್ಪ ದಿನಗಳ ನಂತರ ಅವರ ಮನೆಯ ಪಕ್ಕದಲ್ಲಿರುವ ಕಲ್ಲಿನ ಕ್ವಾರಿಯಲ್ಲಿಯೇ ಒಪ್ಪಂದದ ಮೇರೆಗೆ ವೇಲಾಯುಧನ್ ರಿಗೆ ಕೆಲಸ ಸಿಕ್ಕಿತು. ಮನೆಯಿಂದ ದೂರ ಕೆಲಸಕ್ಕೆ ಹೋಗುವುದು ತಪ್ಪಿತು. ಅಲ್ಲಿಯೇ ಪಕ್ಕದಲ್ಲಿ ಕೆಲಸ ಇದ್ದ ಕಾರಣ ಮಧ್ಯಾಹ್ನಕ್ಕೆ ಪತಿಗೆ ಊಟಕ್ಕೆ ಬುತ್ತಿ ಕಟ್ಟುವಂತೆ ಇರಲಿಲ್ಲ.
ಮಿಲಿಟರಿಯಲ್ಲಿ ಇದ್ದಾಗ ಮದ್ದು ಗುಂಡುಗಳ ಬಗ್ಗೆ ತಿಳಿದಿದ್ದ ವೇಲಾಯುಧನ್ ಬಂಡೆ ಒಡೆಯುವ ಕೆಲಸದಲ್ಲಿ ನಿಪುಣರಾಗಿದ್ದರು. ಹಾಗಾಗಿ ಇಂಥಹ ಕೆಲಸಗಳಿಗೆ ಅವರನ್ನು ಮೇಲ್ವಿಚಾರಕನನ್ನಾಗಿ ನೇಮಿಸುತ್ತಿದ್ದರು. ಸಂಜೆ ವೇಳೆಯಲ್ಲಿ ಉಳಿದ ಕೆಲಸಗಾರರನ್ನು ಮನೆಗೆ ಕಳುಹಿಸಿ ಮದ್ದು ಗುಂಡುಗಳನ್ನು ಉಪಯೋಗಿಸಲು ಅರಿತಂಥಹ ಮುಖ್ಯ ಕೆಲಸಗಾರರನ್ನು ಮಾತ್ರ ಅಲ್ಲಿ ಇರುವಂತೆ ಹೇಳಿ ಬಂಡೆಯನ್ನು ಸಿಡಿಸಲು ಬೇಕಾದ ತಯಾರಿಯನ್ನು ಮಾಡುತ್ತಿದ್ದರು. ಅಲ್ಲಿ ಹತ್ತಿರದಲ್ಲಿ ಯಾರೂ ಬರದಂತೆ ನಿಗಾವಹಿಸಲಾಗುತ್ತಿತ್ತು. ಮನೆಯ ಪಕ್ಕದಲ್ಲಿಯೇ ಕ್ವಾರಿ ಇದ್ದ ಕಾರಣ ಬಂಡೆಗೆ ಸಿಡಿಮದ್ದು ಇಟ್ಟು ಸಿಡಿಸುವಾಗಲೆಲ್ಲಾ ಭಯಂಕರ ಶಬ್ದಕ್ಕೆ ಸುಮತಿಯ ಮಕ್ಕಳಿಬ್ಬರೂ ಹೆದರಿ ಆಳುತ್ತಿದ್ದರು. ಜೋಲಿಯಲ್ಲಿ ಮಲಗಿದ್ದ ಮಗುವಂತೂ ಕಿಟಾರನೆ ಕಿರುಚಿ ಅಳಲು ಶುರು ಮಾಡುತ್ತಿತ್ತು. ಆಗೆಲ್ಲಾ ಸುಮತಿ ಮಗುವನ್ನು ಜೋಲಿಯಿಂದ
ಎತ್ತಿಕೊಂಡು ತನ್ನ ಮಡಿಲಲ್ಲಿ ಮಲಗಿಸಿ ತಟ್ಟಿ ಸಮಾಧಾನ ಮಾಡುವ ಪ್ರಯತ್ನ ಮಾಡುವಳು. ಅಮ್ಮನ ಮಡಿಲಲ್ಲಿ ಮಲಗಿದ ಕೂಡಲೇ ಅಳು ನಿಲ್ಲಿಸಿ ಆ ಪುಟ್ಟ ಕೂಸು ಸುಮ್ಮನಾಗುತ್ತಿತ್ತು. ಹಿರಿಯ ಮಗಳು ಕೂಡಾ ಶಬ್ದಕ್ಕೆ ಹೆದರಿ ಓಡಿ ಬಂದು ಅಮ್ಮನ ಬಳಿ ಬಂದು ಅಪ್ಪಿಕೊಳ್ಳುವಳು. ಹೀಗಿರುವಾಗ ಸುಮತಿಯ ಜೀವನದಲ್ಲಿ ಅವಳು ಎಂದೂ ಎದುರು ನೋಡದ ಪರಿಸ್ಥಿತಿಯೊಂದು ನಿರ್ಮಾಣವಾಯಿತು. ಸಣ್ಣ ಮಗುವಿಗೆ ಆಗಲೇ ಏಳು ತಿಂಗಳು ತುಂಬಿತು. ಆಗ ಕ್ವಾರಿಯಲ್ಲಿ ಕೆಲಸ ಮಾಡುವ ಹೆಣ್ಣಾಳುಗಳ ಸಂಖ್ಯೆ ಕಡಿಮೆ ಇತ್ತು. ಅಡುಗೆ ಹಾಗೂ ಮನೆಯ ಕೆಲಸವನ್ನು ಸುಮತಿ ಬೇಗನೇ ಮುಗಿಸಿ ಮಕ್ಕಳ ಪಾಲನೆಯಲ್ಲಿ ತೊಡಗಿರುತ್ತಿದ್ದಳು. ಹೇಗೂ ಬೆಳಗ್ಗಿನ ಕೆಲಸದ ನಂತರ ಪತ್ನಿಯು ಸುಮ್ಮನೇ ಇರುವಳಲ್ಲ ಮನೆಯಲ್ಲಿ ಎಂದು ತನ್ನ ಜೊತೆ ಕ್ವಾರಿಗೆ ಬಂದು ಕೆಲಸ ಮಾಡುವಂತೆ ವೇಲಾಯುಧನ್ ಪತ್ನಿಗೆ ಹೇಳಿದರು.
ಪತಿಯ ಮಾತನ್ನು ಕೇಳಿ ಸುಮತಿ ದಂಗಾದಾಳು. ಪತಿ ಇದೇನು ಹೇಳುತ್ತಿದ್ದಾರೆ? ತಾನೂ ಕೂಡಾ ಅಲ್ಲಿ ಹೋಗಿ ಕೂಲಿ ಆಳಿನಂತೆ ದುಡಿಯಲು ಹೇಳುತ್ತಿದ್ದಾರೆ!! ಶಾಲೆಗೆ ಹೋಗುವ ಸಂದರ್ಭ ಹೊರತುಪಡಿಸಿ ಅವಳಿಗೆ ಹೊರಗೆಲ್ಲೂ ಹೋಗಿ ಅಭ್ಯಾಸವಿರಲಿಲ್ಲ. ಅದರಲ್ಲೂ ಮನೆಯ ಕೆಲಸಗಳನ್ನು ಬಿಟ್ಟು ಹೀಗೆ ದುಡಿಯುವುದನ್ನು ಅವಳು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ತನಗೆ ಸರಕಾರಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಸಿಕ್ಕಾಗ ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬರುವುದು ಎಂದು ಬೇಡವೆಂದ ಪತಿ ಈಗ ತನ್ನ ಕೈಕೆಳಗೆ ಕೂಲಿ ಆಳಿನಂತೆ ಕೆಲಸ ಮಾಡಲು ಹೇಳುತ್ತಿದ್ದಾರೆ!! ಅಲ್ಲಿನ ಕೆಲಸಗಾರರು ಒಡೆದು ಇಟ್ಟ ಕಲ್ಲಿನ ಜೆಲ್ಲಿಯಿಂದ ದೊಡ್ಡ ಹಾಗೂ ಸಣ್ಣ ಜೆಲ್ಲಿಯನ್ನು ಬೇರ್ಪಡಿಸಿ ಇಡುವುದು ಹಾಗೂ ಅಗತ್ಯವಿದ್ದಾಗ ತಾನು ಕೂಡಾ ಜೆಲ್ಲಿಯನ್ನು ಒಡೆಯಬೇಕು ಎಂದು ಪತಿ ಹೇಳಿದಾಗ… “ಏನೂಂದ್ರೆ…. ಅದು ನನ್ನಿಂದ ಸಾಧ್ಯವಿಲ್ಲ… ಮಕ್ಕಳಿನ್ನೂ ಚಿಕ್ಕವರು…. ಅವರನ್ನು ಕೂಡಾ ನಾನು ನೋಡಿಕೊಳ್ಳಬೇಕಿದೆ… ಈಗಲೂ ನನಗೆ ನರ್ಸ್ ಕೆಲಸ ಸಿಕ್ಕಿದ ಆರ್ಡರ್ ಕೈಯಲ್ಲಿದೆ….ಈಗ ಹೋದರೂ ಇಲ್ಲಿನ ಆಸ್ಪತ್ರೆಯಲ್ಲಿ ಕೆಲಸ ಖಂಡಿತಾ ಸಿಗಬಹುದು….ನಾನೊಮ್ಮೆ ಅಲ್ಲಿ ಹೋಗಿ ಪ್ರಯತ್ನ ಮಾಡುವೆ…ದಯವಿಟ್ಟು ಈ ಕೆಲಸಗಳಿಗೆ ನನ್ನನ್ನು ಕರೆಯಬೇಡಿ”…ಎಂದು ಅಂಗಲಾಚಿ ಬೇಡಿಕೊಂಡಳು. ತಾನು ಹೇಳಿದ ಮಾತನ್ನು ಪತ್ನಿ ಅನುಸರಿಸಲಿಲ್ಲ ಎನ್ನುವ ಕೋಪ ಹಾಗೂ ಅವಳು ಈ ಕೆಲಸವನ್ನು ಮಾಡುವುದಕ್ಕೆ ತನ್ನ ವಿರೋಧವನ್ನು ವ್ಯಕ್ತ ಪಡಿಸಿದ್ದಲ್ಲದೇ ನರ್ಸ್ ಕೆಲಸಕ್ಕೆ ಹೋಗುತ್ತೇನೆ ಎಂದಳಲ್ಲ ಎಂಬುದು ವೇಲಾಯುಧನ್ಗೆ ಸಹಿಸಲಾರದ ಸಂಗತಿಯಾಗಿತ್ತು. ಕೋಪಗೊಂಡು ಉಗ್ರರೂಪ ತಾಳಿದ ವೇಲಾಯುಧನ್ ಸುಮತಿಯನ್ನು ಹಿಗ್ಗಾಮುಗ್ಗಾ ಥಳಿಸಿದರು.