The way forward.

ಸಾಧನೆ ಮಾಡಲು ಮಹಲುಗಳು ಬೇಕಿಲ್ಲ, ದುಡ್ಡು ದುಗ್ಗಾಣಿಗಳು ಅಷ್ಟೇನು ಮುಖ್ಯವಲ್ಲ… ಸಾಧಿಸುವ ಛಲವೊಂದಿದ್ದರೆ ಸಾಕು ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದ್ದಾಳೆ ಪ್ರೇಮ ಜಯ್ ಕುಮಾರ್ ಎಂಬ ಯುವತಿ. ಮುಂಬೈ ನಗರದ ಚಾಳ್ ಒಂದರಲ್ಲಿ ವಾಸವಾಗಿರುವ ಆಟೋರಿಕ್ಷಾ ಚಾಲಕರ ಪುತ್ರಿಯಾಗಿರುವ ಪ್ರೇಮ ಬದುಕು ಒಡ್ಡಿದ ಎಲ್ಲಾ ಸವಾಲುಗಳನ್ನು ಎದುರಿಸಿ ಇದೀಗ ಅಖಿಲ ಭಾರತ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯನ್ನು ಅತ್ಯುನ್ನತ ಅಂಕಗಳೊಂದಿಗೆ ಪೂರೈಸಿ ಆ ಕ್ಷೇತ್ರದಲ್ಲಿ ತನ್ನ ಹೆಸರನ್ನು ದಾಖಲಿಸಿ ಇತಿಹಾಸವಾಗಿದ್ದಾಳೆ.

ಮುಂಬೈಯ ಮಲಾಡ್ ಎಂಬ ಭಾಗದಲ್ಲಿ ಒಂದೇ ಕೋಣೆಯ ಮನೆಯಲ್ಲಿ ತನ್ನ ಪಾಲಕರು ಮತ್ತು ಸಹೋದರರೊಂದಿಗೆ ವಾಸಿಸುತ್ತಿರುವ ಪ್ರೇಮ ಅವರ ತಂದೆ ಜಯಕುಮಾರ್ ತಮಿಳುನಾಡು ಮೂಲದವರಾಗಿದ್ದು ಬದುಕಿನ ಬಂಡಿಯನ್ನು ಸಾಗಿಸಲು ಮಹಾರಾಷ್ಟ್ರದ ಮುಂಬೈಗೆ ವಲಸೆ ಬಂದಿದ್ದಾರೆ.ಚಿಕ್ಕಂದಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು ನಾನು ಓದುತ್ತಿರುವ ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ಮಂಚೂಣಿಯಲ್ಲಿ ಇರುತ್ತಿದ್ದಳು.

ಪ್ರೇಮ ತನ್ನ ಸಹೋದರ ಹೈಯರ್ ಸೆಕೆಂಡರಿಯಲ್ಲಿ ಓದುತ್ತಿರುವಾಗಲೇ ಸಿ ಎ ಪರೀಕ್ಷೆಗೆ ತಯಾರಾಗುತ್ತಿರುವುದನ್ನು ನೋಡುತ್ತಿದ್ದಳು… ತಾನು ಕೂಡ ಆ ಪರೀಕ್ಷೆಯನ್ನು ಪಾಸಾಗಬೇಕೆಂಬ ಮಹದಾಕಾಂಕ್ಷೆ ಆಕೆಯದಾಗಿತ್ತು.

2008ರಲ್ಲಿ ಮುಂಬೈಯ ನಾಗಿನ್ ದಾಸ್ ಕಂಡೇಲ್ ವಾಲ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು 90 ಅಂಕಗಳೊಂದಿಗೆ ಪೂರೈಸಿದ ಪ್ರೇಮ ಮುಂದೆ 2010ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಎಂಕಾಂ ಸ್ನಾತಕೋತ್ತರ ಪದವಿಯನ್ನು ಕೂಡ ಯಶಸ್ವಿಯಾಗಿ ಪೂರೈಸಿದಳು.

ಪ್ರೇಮಾಳ ಸಹೋದರ ಧನರಾಜ ಕೂಡ ತನ್ನ ಬಿಕಾಂ ಪದವಿಯ ನಂತರ ಕಾಲ್ ಸೆಂಟರ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಲೇ ಪರೀಕ್ಷೆಗೆ ತಯಾರಿ ನಡೆಸಿದ. ಮೊದಲ ಬಾರಿ ಇಬ್ಬರು ಸಿಎ ಪರೀಕ್ಷೆಗೆ ಕಟ್ಟಿದರು.ಆತ ಕಲೆ ಹಾಕಿದ ಮಾಹಿತಿಗಳನ್ನು ಅವರಿಬ್ಬರೂ ಒಟ್ಟಾಗಿ ಓದಿ ಚರ್ಚೆ ಮಾಡಿ ಪರೀಕ್ಷೆಗೆ ತಯಾರಾದರು.

2008 ರಲ್ಲಿಯೇ ಸಿಪಿಟಿ (ಕಾಮನ್ ಪ್ರೊಫೆಶಿಯನ್ಸಿ ಟೆಸ್ಟ್) ಪ್ರವೇಶ ಪರೀಕ್ಷೆಯಲ್ಲಿ ಪಾಸಾದ ಆಕೆ ಇಂಟಿಗ್ರೇಟೆಡ್ ಪ್ರೊಫೆಶಿಯನ್ಸಿ ಟೆಸ್ಟ್ನಲ್ಲಿಯೂ ಕೂಡ ಪಾಸಾಗಿ ಆರ್ಟಿಕಲ್ ಶಿಪ್ ಮತ್ತು ಸಿಎ ಪರೀಕ್ಷೆಗೆ ಅರ್ಹತೆಯನ್ನು ಗಳಿಸಿದಳು.

ಬೆಳಗಿನ ಜಾವ 7:30 ರಿಂದ ಮಧ್ಯ ರಾತ್ರಿಯವರೆಗೆ ಸತತವಾಗಿ ಓದುತ್ತಿದ್ದ ಆಕೆ ರಾತ್ರಿ ಮಲಗುವ ಮುನ್ನ ಅರ್ಧ ಗಂಟೆ ಟಿವಿ ನೋಡುವ ಮೂಲಕ ತನ್ನ ಏಕತಾನತೆಯನ್ನು ದೂರ ಮಾಡಿಕೊಳ್ಳುತ್ತಿದ್ದಳು. ಚೆನ್ನಾಗಿ ಓದಿ ಒಳ್ಳೆಯ ರಾಂಕ್ ಗಳಿಸಬೇಕು ಎಂಬ ಆಸೆ ಇದ್ದರೆ ನಿದ್ರೆಯೂ ಅಷ್ಟೇ ಅವಶ್ಯಕತೆ ಎಂಬುದನ್ನು ಆಕೆ ಒತ್ತಿ ಹೇಳುತ್ತಾರೆ

ಮುಂದೆ 2012ರಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ಮೊದಲ ಬಾರಿ ಪರೀಕ್ಷೆಯನ್ನು ಬರೆದ ಆಕೆ ಒಟ್ಟು 800 ಅಂಕಗಳಲ್ಲಿ 607 ಅಂಕಗಳನ್ನು ಪಡೆದು ದೇಶದ ಚಾರ್ಟೆಡ್ ಅಕೌಂಟೆನ್ಸಿ ಪರೀಕ್ಷೆಯ ಮೊತ್ತ ಮೊದಲ ಪ್ರಯತ್ನದಲ್ಲಿ ಗೆಲುವು ಸಾಧಿಸಿರುವ ಪ್ರೇಮಾ ಜಯಕುಮಾರ್ ಅವರು ಪ್ರಸ್ತುತ ಮುಂಬೈಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪಾಲಕರ ಬೆಂಬಲ ಮತ್ತು ಪ್ರೋತ್ಸಾಹ ಗುರಿಯನ್ನು ಸಾಧಿಸುವ ಛಲ ಮತ್ತು ಹಂಬಲ, ಸತತ ಪರಿಶ್ರಮ ಪಟ್ಟ ಪರಿಣಾಮವಾಗಿ ಇಂದು ಒಳ್ಳೆಯ ಜೀವನ ತಮ್ಮದಾಗಿದೆ ಎಂದು ಆಕೆ ಹೇಳುತ್ತಾರೆ.

ನೋಡಿದಿರಾ ಸ್ನೇಹಿತರೆ, ಪ್ರತಿ ಸಾಧನೆಯು ಒಂದು ತಪಸ್ಸಿನಂತೆ. ಪ್ರತಿಯೊಬ್ಬ ಸಾಧಕನು ಯಶಸ್ಸನ್ನು ಪಡೆಯಲು ಸತತವಾಗಿ ಅಭ್ಯಾಸ ಮಾಡಲೇಬೇಕು,
“ಶ್ರದ್ಧಾ ವಾನ್ ಲಭತೇ ಜಯಂ” ಎಂಬ ಮಾತಿನಂತೆ
ಶ್ರದ್ಧೆಯಿಂದ ಕಾರ್ಯನಿರ್ವಹಿಸುವವರಿಗೆ ಖಂಡಿತವಾಗಿಯೂ ಜಯವಿದೆ ಅಲ್ಲವೇ.


Leave a Reply