ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಬಾಹ್ಯ ಸೌದರ್ಯದ ಅಡಿಯಲ್ಲಿ
ಮಾಯವಾದ ಮಾನವೀಯತೆ.

ಚಂದ ಕಾಣಬೇಕು ಅನ್ನೊ ಹಂಬಲ ಯಾರಿಗಿರಲ್ಲ ಹೇಳ್ರಿ . ಇಡೀ ಲೋಕನೇ ಚಂದ ಅನ್ನುವದರ ಹಿಂದ ಬಿದ್ದ ಮ್ಯಾಲ ಚಂದಕ್ಕ ಇರೋ ಬೆಲೆ ಮತ್ಯಾವದಕ್ಕೂ ಇಲ್ಲ.
ಚಂದ ಅನ್ನೊದು ವಸ್ತು , ವಿಷಯ , ವ್ಯಕ್ತಿ, , ಎಲ್ಲದಕ್ಕೂ ಹಿಡಕ್ಕೊಂಡು ಬಿಟ್ಟದ. ಎಲ್ಲನೂ ಚಂದ ಇದ್ರ ಸಾಕು . ಬದುಕು ಕೂಡ. ಇಲ್ಲಿ ಬಾಹ್ಯ ಮತ್ತು ಅಂತರಿಕ ಚಂದ ಅನ್ನೊದು ಬರಿ ಹೇಳಿಕೆಗೆ ಮಾತ್ರ ಆಗತದ. ಮುಖವಾಗಿ ಬಾಹ್ಯ ಚಂದಕ್ಕ ಮರುಳಾಗುವವರು ನಾವುಗಳು.
ದೇವಾನುದೇವತೆಗಳ ಪೋಟೋಗಳನ್ನು ಚಂದವಾಗಿ ಚಿತ್ರಿಸಿ , ಇಲ್ಲ ಅಲಂಕರಿಸಿ ಆರಾಧಿಸೋ ನಾವು ಮನುಷ್ಯ ರ ಚಂದದ ಬಗ್ಗೆ ಮತ್ತಷ್ಟು ತಲೆ ಕೆಡಿಸಿಕೊಳ್ಳುತ್ತೇವೆ.ಸೌಂದರ್ಯ ಮಿಮಾಂಸೆಗಳೆಲ್ಲ ಚಂದ ಚಂದದ ವರ್ಣನೆಯಲ್ಲೆ ವಿವರಿಸಿರೋವಾಗ ಬಾಹ್ಯ ಸೌಂದರ್ಯ ಅಲ್ದೆ ಬರಿ ಅಂತರಿಕ ಸೌಂದರ್ಯ ನೆ ಶ್ರೇಷ್ಠ ಅಂಬೊದು ಬರಿ ಬಾಯಿ ಮಾತಾಗತದ.
ಸಿನಿಮಾ ತಾರೆ ಲಕ್ಷಿ ಅವರು ಹೇಳಿದ ಹೇಳಿಕೆ ಚರ್ಚೆಯ ವಿಷಯ ಆಗ್ಯಾದ.ಅವರು ಸಿನಿ ತಾರೆ , ಅವರಿಗೆ ಚಂದ ಅನ್ನೊದೆ ಒಂದು ಮಾನದಂಡ.ಅವರು ಚಂದ ಇರೊದರಿಂದಲೆ ಅವರನ್ನು ನಾವು ನೋಡತೇವೆ. ಆದ್ರ ನಾನು ಚಂದ ಇದ್ದವರೊಂದಿಗೆ ಮಾತ್ರ ಬೆರಿತೇನೆ ಅಂತ ಹೇಳೋದು ಅವದ ಅಹಂಕಾರ ತೊರಸ್ತದ.
ಅವರು ದಿನ ಬೆಳಗೆದ್ರ ದೇಹ ಸುಂದರವಾಗಿ ಇಟ್ಟಕೊಳ್ಳಕ ಏನು ಮಾಡ್ಬೇಕು ಅನ್ನೊದು ಒಂದೇ ಅವರ ಚಿಂತಿ ಆಗಿರತದ. ಯಾಕಂದ್ರ ಚಂದ ಅನ್ನೊದು ಅವರ ಆದಾಯದ ಮೂಲ.ಆದ್ರ ಸಾಮಾನ್ಯ ಮನುಷ್ಯರಿಗಿ ಬರೀ ತನ್ನ ದೇಹ ಅಂದ ಚಂದ ನೋಡಕ್ಕೊಂತ ಕೂಡಕ್ಕ ಎಲ್ಲಿ ಟೈಮ್ ಇರತದ.ಬದುಕಿನ ಹತ್ತಾರು ಭಾನಗಡಿಯೊಳಗ ಸಮಯ ತಮ್ಮ ಅಂದ ಹ್ಯಾಂಗ ಕರಗಿಸಿ ಬಿಡತದ ಅಂತ ಯೋಚಿಸೋಕು ಸಮಯ ಇಲ್ದಂಗ ಸಮಯ ಕರಗಿ ಬಿಡತದ.

ಪ್ರಪಂಚದಲ್ಲಿ ನಾನಾ ಚಹರೆಯ ಜನ ಇದ್ದಾರ.ಬೆಳ್ಳಗಿದ್ದವ್ರು ಕಪ್ಪು ಇದ್ದವರ ಬಗ್ಗೆ ಕಿಳರಿಮೆ ಹೊಂದಿರೊದು ಎಲ್ರಿಗೂ ಗೊತ್ತು. ಕಪ್ಪು ಬಣ್ಣದೊಳಡಗಿದ ಪ್ರತಿಭೆಗಿಂತ ಕಪ್ಪು ಬಣ್ಣನೆ ಹೆಚ್ಚು ಕಾಣತದ. ಬಿಳಿ ಯಾವಗ್ಲೂ ಶ್ರೇಷ್ಠ ಅನಿಸಿಕೊಂಡದ.ಅದಕ್ಕ ಜಗತ್ತೆಲ್ಲ ಬರಿ ಬಿಳಿ ಬಣ್ಣದ ಹಿಂದೆ ಓಡತದ.
ಒಬ್ಬರು ಹೇಳತಾರ ವಯಸ್ಸಾಗಿರೋದು ತೋರಸೊ ಅವಶ್ಯಕತೆ ಇಲ್ಲ ಅಂತ , ಅದೇ ವಿಷಯದ ಬಗ್ಗೆ ಮತ್ತೊಬ್ರ ಅಭಿಪ್ರಾಯ ವಯಸ್ಸಾಗುವದನ್ನ ಮರೆಮಾಚುವ ಅವಶ್ಯಕತೆ ಇಲ್ಲ ಅಂತ.ಆದ್ರೆ ಈ ಎರಡು ವಿಚಯಗಳಲ್ಲಿ ಮೇಲುಗೈ ಸಾಧಿಸೋದು ವಯಸ್ಸನ್ನು ಮರೆಮಾಚುವದೆ ಆಗಿರತದ.
ಪ್ರತಿಯೊಬ್ಬರಿಗೂ ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣೋ ಹಂಬಲ. ತಮ್ಮ ವಯಸ್ಸಿಗಿಂತ ಒಂದೆರಡು ವರ್ಷ ಕಡಿಮೆ ಹೇಳೊ ಹಂಬಲ. ಇಷ್ಟು ವಯಸ್ಸಾದ್ರೂ ಎಷ್ಟು ಸಣ್ಣವರಂಗ ಕಾಣ್ತಿವಿ ಅಂತ ತೋರಸೋ ಹಂಬಲ.ಇವೆಲ್ಲವೂ ಮನುಷ್ಯ ಸಹಜ ಹಂಬಲಗಳು.ಇವು ನಾವು ನಮ್ಮ ನಡವಳಿಕೆಗಳಲ್ಲಿ ರೂಢಿಸಿಕೊಂಡು ಬಿಡತಿವಿ.
ಮೊದಲು ಆಂಟೀ ,ಅಂಕಲ್ಲ ಅನ್ನಿಕೊಳ್ಳಕ್ಕ ಹ್ಯಾಂಗ ಮಜುಗರ ಪಡ್ತಿದ್ದೆವೋ ಈಗ ಅಜ್ಜ ಅಜ್ಜಿ ಅನ್ನಿಸಿಕೊಳ್ಳಕ್ಕ ಮಜುಗುರ ಪಡತಾರ.ಎಪ್ಪತೈದು ಹೆಂಬತ್ತು ಕೂಡ ಈಗ ವೃದ್ಧಾಪ್ಯದ ಅಂಕಿಗಳಲ್ಲ.ಯಾಕಂದ್ರ ಜೀವನೋತ್ಸಾಹ ಅನ್ನೊದು ವಾರ್ದಕ್ಯ ಹಿಮ್ಮೆಟ್ಟಿಸ್ತದ.
ಆದ್ರ ಇದು ಎಲ್ರ ಜೀವನದಲ್ಲೂ ಇರತದ ಅಂತ ಹೇಳಲಿಕ್ಕ ಆಗಲ್ಲ.ಜೀವನ ಅಂಬೋ ಕುಲುಮೆ ದಾಗ ಬಳಲಿ ಬೆಂಡಾದವ್ರಿಗಿ ವಯಸ್ಸು ಅನ್ನೊದು ಮಾಗಿಸಿ ಬಿಡತದ.
ಸಣ್ಣಂದಿನಲ್ಲಿ ಒಂದೇ ಕ್ಲಾಸ್ ನಲ್ಲಿ ಓದಿ ಆಡಿ ಬೆಳೆದವ್ರೆಲ್ಲ ಮುಂದ ಅವರವರ ಜೀವನದಾಗ ವ್ಯಸ್ತರಾಗತಾರ. ಮುಂದ ಎಷ್ಟೊ ವರ್ಷಗಳ ನಂತ್ರ ಭೆಟಿ ಆದಾಗ ಮೊದಲಿನ ಗುರುತು ಇರಲಾರದಂಗ ಬದಲಾಗಿರತಾರ. ಅವರವರ ಅಂದ ಚಂದಗಳೆಲ್ಲ ಅವರವರ ಆರ್ಥಿಕ ಪರಿಸ್ಥಿತಿ ಅವಲಂಬಿಸಿರತದ.ಸ್ವಲ್ಪ ಜೀವನೋತ್ಸಾಹನೂ ಕಾರಣ ಆಗತದ. ಹಾಗಂತ ಚಂದ ಕಾಣಲಾರದವ್ರೂ ವಯಸ್ಸಾದಂತೆ ಕಾಣೊವ್ರು , ಚಂದ ಕಾಣೋವರ ಕಣ್ಣಿಗಿ ಕನಿಷ್ಠ ವಾಗಿ ಕಾಣೋದು ವಿಪರ್ಯಾಸ. ದೇಹದ ಚಂದದ ಭೃಮೆಯಲ್ಲಿ ತನ್ನ ತಾ ವೈಭವಿಕರಿಸಿಕೊಂಡು ಮತ್ತೊಬ್ಬರ ಬಗ್ಗೆ ಅಸಹ್ಯ ಪಟ್ಟುಕೊಳ್ಳೊದು ಅಹಂಕಾರ ಮತ್ತು ಮಾನಸಿಕ ವಿಕೃತಿ.
ನಮ್ಮ ದೇಹ ಚಂದದ ದೇಹ ಆಗಿ ಇಟ್ಟಕೊಳ್ಳಾಕ ಬಾಳ ಹೋರಾಟ ಮಾಡಬೇಕಾಗತದ.
ಚಂದ ಕಾಣಬೇಕಾದ್ರ ಅದಕ್ಕ ಭಾಳ ದಂಡಿಸಿ ಇಡಬೇಕು. ಬಾಯಿ ಚಪಲಕ್ಕ ಕಡಿವಾಣ ಹಾಕಬೇಕು. ದೇಹ ಚಂದವಾಗಿ ಇಟ್ಟಕ್ಕೊಂಡವ್ರು ಇವೆಲ್ಲ ಮಾಡತಾರ. ಅದಕ್ಕಾಗಿ ಸಮಯ ಮೀಸಲಿಡತಾರ. ತಮ್ಮ ಚಂದದ ದೇಹಕ್ಕಾಗಿ ಅವರು ಅಹಂಕಾರನೂ ಪಡತಾರ.
ಆದ್ರ ಇದು ಎಲ್ರಿಗೂ ಸಾದ್ಯ ಆಗಲ್ಲ.ಬದುಕಲು ಹೆಣಗುವವರಿಗಿ ದೇಹ ಚಂದ ಎಲ್ಲಾ ನೇಪಥ್ಯ. ಬಿಸಿಲನಾಗ , ಚಳಿ ಮಳಿದಾಗ ದುಡಿಯೋರಿಗಿ ಚಂದಕ್ಕಿಂತ ತಮ್ಮ ಹೊಟ್ಟೆ ತುಂಬೊದು ಮುಖ್ಯ ಆಗಿರತದ. ಹೊಟ್ಟಿ ತುಂಬಿದವರಿಗಿ ಮಾತ್ರ ಚಂದದ ಬಗ್ಗೆ ಚಿಂತಿ ಇರತದ.ಬಿಸಿಲು ಚಳಿಗಿ ಒಣಗಿದ ಚರ್ಮ.ಬಿರುಕು ಬಿಟ್ಟ ತುಟಿಗಳು , ಮಾಸಿದ ಚರ್ಮ ದವರಿಗಿ ನೋಡಿ ಹೊಳೆಯುವ ಚರ್ಮ , ಮಿರುಗುವ ಕೂದಲಿನವರು ಅಸಹ್ಯ ಪಟ್ಟಕೊಳ್ಳೊದು ಮನಸ್ಥಿತಿ ಯೋ ಅಥವಾ ಸಮಾಜದ ರೂಢಿನೊ ತಿಳಿವಲ್ದು.
ಹೌದು , ದೇಹ ಸುಂದರವಾಗಿ ಕಾಣುವಂಗ ಇಟ್ಟಕೊಳ್ಳೊದು ಎಲ್ಲರ ಕರ್ತವ್ಯ. ಆದ್ರ ಕೆಲವೊಮ್ಮೆ ಸುತ್ತಲಿನವರ ಕೊಂಕು ಮಾತುಗಳು ಸಹಿಸಬೇಕಾಗತದ.ಅಧುನಿಕವಾಗಿ ಅಲಂಕಾದ ಮಾಡಕೊಂಡದ್ದು , ಅಧುನಿಕವಾದ ಉಡುಗೆಗಳು ಕೆಲವರ ಕಣ್ಣು ಕಿಸುರಿಗೆ ಕಾರಣ ಆಗತಾವ.ಎಷ್ಟೋ ಮನೆಗಳಲ್ಲಿ ಮಕ್ಕಳು ಸೊಸೆಯಂದಿರು ಅಧುನಿಕವಾಗಿ ಇರಲಕ್ಕೂ ಅಡ್ಡಿಪಡಸ್ತಾರ.ಸಂಪ್ರದಾಯದ ಹೆಸರಲ್ಲಿ ಅವರ ಆಕಾಂಕ್ಷೆ ಗಳನ್ನು ತಡೆ ಹಿಡಿತಾರ. ಅದಕ್ಕೆ ಎನನ್ನಬೇಕು..! ತನ್ನಿಷ್ಟದಂಗ ಇರಲಕ್ಕೂ ಬಿಡದ ಸಮಾಜದಲ್ಲಿ ನಾವುದ್ದೆವೆ. ಅಸ್ತವ್ಯಸ್ತವಾಗಿದ್ದರೆ ಎಷ್ಟು ಟೀಕಿಸ್ತೆವೋ ನೀಟಾಗಿದ್ದರೂ ಟೀಕೆಗಳನ್ನು ಎದುರಿಸಬೇಕಾಗತದ. ನಾವು ನೀವು ಎಲ್ಲಾ ವಿಚಾರಮಾಡೋದು ನಮಗ ತಿಳಿದಷ್ಟು ಇಲ್ಲ ಮತ್ತೊಬ್ಬರ ಅಭಿಪ್ರಾಯ , ಒಟ್ಟಿನಲ್ಲಿ ಬದುಕು ಇಲ್ಲಿ ಬೇರೆಯವರ ಇಷ್ಟಾನುಸಾರವಾಗಿ ನಡೆಯೋದೆ ಹೆಚ್ಚು.
ಸೌಂದರ್ಯ ಬಾಹ್ಯ ರೂಪದಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದಿದೆಯೋ ಅಂತರಿಕವಾಗಿಯೂ ನಾವು ಸುಂದರವಾಗಲು ಪ್ರಯತ್ನಿಸಬೇಕಾಗತದ.ಮತ್ತೊಬ್ರ ಬಗ್ಗೆ ಕೀಳಾಗಿ ಆಲೋಚನೆ ಮಾಡುವದು ಬಿಟ್ರ ಮಾತ್ರ ನಮ್ಮ ಅಂತರಿಕ ಸೌಂದರ್ಯ ವೃದ್ದಿ ಆಗತದ.ಇದು ಸತ್ಯ.
ಈಗಿನ ಸಮಾಜ ಒಂದು ರೀತಿಯಲ್ಲಿ ಸಾಮಾಜಿಕ ಜಾಲತಾಣದ ಹಿಡಿತದಾಗ ಅದ. ಎಲ್ರೂ ಹೈ ಸೊಸೈಟಿ ಯ ನ್ನೆ ಅನುಕರಿಸತಾರ. ಅವರ ಅಂದ ಚಂದ ಉಡುಗೆ ಅಲಂಕಾರ ಊಟ ತಿಂಡಿ ಎಲ್ಲವೂ ಚಂದ ಇರಬೇಕು ಅಷ್ಟೆ. ಇದರಂತೆ ಇರಲಾರದವ್ರು ಅನಾಗರಿಕರು ಅಂಬೊ ಭ್ರಮೆ ಗೆ ಒಳಗಾಗತಿದ್ದಾರ. ತಮ್ಮ ಊಟ ಒಡನಾಟ ಗೆಳತನ ಸಂಭಂದ ಎಲ್ಲವೂ ಮಾಡ್ರನ್ ಇರುವವರೊಂದಿಗೆ ಮಾತ್ರ ಇರಲಿ ಅನ್ನೊ ಆಕಾಂಕ್ಷೆ. ಹಾಗಿಲ್ಲದವರನ್ನು ನೋಡಿ ಅಸಹ್ಯಿಸಿಕೊಳ್ಳೊದು. ಇದು ಈಗ ನಾವು ಅನುಸರಿಸ್ತಿರೊ ಪದ್ದತಿ. ನಮ್ಮಂತಿರೋ ಮತ್ತೊಬ್ಬ ಮನುಷ್ಯ ನ ಬಗ್ಗೆ ಕಿಳರಿಮೆಯಿಂದ ವರ್ತಿಸುವ ನಮ್ಮ ಮನಸ್ಥಿತಿ ವಿಕೃತಿಯನ್ನು ತೋರಿಸ್ತದ. ಗೆಳೆತನ ಆಗ್ಲಿ ಸಂಭಂಧ ಆಗ್ಲಿ ವ್ಯಕ್ತಿ ಗಿಂತ ವ್ಯಕ್ತಿ ಯ ಭಾವನೆಯನ್ನು ನೋಡಿ ಬೆಳಸಬೇಕು , ಹೊರತಾಗಿ ಅವರ ಅಂದ ಚಂದ ಅಂತಸ್ತು ನೋಡಿ ಅಲ್ಲ.
ಜ್ಯೋತಿ ,ಡಿ.ಬೊಮ್ಮ.




