ಮಾರನೇ ದಿನವೂ ಹೀಗೇ ಕಾಳಿಂಗ ಸರ್ಪದ ಶಿಳ್ಳೆಯಂತಹ ಸೀತ್ಕಾರವು ಹಿಂದಿನ ದಿನದಂತೆ ಅದೇ ಸಮಯಕ್ಕೆ ಸರಿಯಾಗಿ ಸ್ವಲ್ಪ ದೂರದ ಕುರುಚಲು ಕಾಡಿನಿಂದ ಕೇಳಿಸಿತು. ಕೂಡಲೇ ಸುಮತಿ ಮನೆಯ ಬಾಗಿಲು, ಕಿಟಕಿಗಳನ್ನು ಭದ್ರ ಪಡಿಸಿದಳು. ಮಗುವನ್ನು ಎತ್ತಿಕೊಂಡು, ಮಗಳನ್ನು ಕರೆದುಕೊಂಡು ಹಜಾರದಲ್ಲಿ ಇರುವ ಕುರ್ಚಿಯಲ್ಲಿ ಕುಳಿತಳು. (ಮಗಳಿಗೆ ಬೇಸಿಗೆ ರಜೆ ಇದ್ದ ಕಾರಣ ಹಿರಿಯ ಮಗಳು ಶಾಲೆಗೆ ಹೋಗಿರಲಿಲ್ಲ). ಕುರುಚಲು ಕಾಡಿನಿಂದ ಕಾಳಿಂಗನು ಕೆಲವೇ ಕ್ಷಣಗಳಲ್ಲಿ ಮನೆಯ ಅಂಗಳ ತಲುಪಿದನು. ಅವನ ಬುಸುಗುಡುವಿಕೆ ಮನೆಯ ಸುತ್ತಾ ಆಗಾಗ ಕೇಳಿಸುತ್ತಿತ್ತು. ಹೆದರಿದ ಸುಮತಿ ಮನೆಯ ಬಾಗಿಲು, ಕಿಟಕಿಯನ್ನು ತೆರೆಯಲೇ ಇಲ್ಲ. ಸ್ವಲ್ಪ ಹೊತ್ತಿಗೆ ಶಬ್ದ ನಿಂತಿತು. ಸದ್ದು ಮಾಡದೇ ಮೆಲ್ಲನೆ ಕಿಟಕಿಯನ್ನು ಸ್ವಲ್ಪವೇ ತೆರೆದು ಅಂಗಳವನ್ನು ನೋಡಿದಳು. ಅಂಗಳದಲ್ಲಿ ಇದ್ದ ತುಳಸೀ ಕಟ್ಟೆಯ ಪಕ್ಕದಲ್ಲಿ ಬೆಳೆದಿದ್ದ ಕೆಂಪು ದಾಸವಾಳ ಗಿಡದ ನೆರಳಲ್ಲಿ ಕಾಳಿಂಗ ಸರ್ಪ ಮಲಗಿತ್ತು. ಹಿತ್ತಲ ಬಾಗಿಲನ್ನು ತೆರೆದು ಹೊರಗೆ ಹೋಗಿ ತರಕಾರಿಗಳನ್ನು ಬಿಡಿಸಿ ಅಡುಗೆ ಮಾಡುವ ಧೈರ್ಯವೂ ಬಾರದೇ ಬರೀ ಕುಸುಲಕ್ಕಿ ಗಂಜಿಯನ್ನು ಮಾಡಿ ತೆಂಗಿನಕಾಯಿ, ಒಣಮೆಣಸಿನಕಾಯಿ,ಹುಣಸೇ ಹಣ್ಣು, ಸಣ್ಣ ಈರುಳ್ಳಿ, ಕರಿಬೇವಿನ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಟ್ನಿ ಮಾಡಿ ಅಡುಗೆ ಮುಗಿಸಿದಳು. ಅನ್ನ, ಸಾರು, ಪಲ್ಯ ಏಕೆ ಮಾಡಿಲ್ಲ ಎಂದು ಪತಿಯು ಕೋಪದಿಂದ ಕೇಳುವರು ಎಂದು ತಿಳಿದಿತ್ತು. ಇವೆಲ್ಲವನ್ನೂ ಮಾಡಲು ಹಿತ್ತಲಿಗೆ ಹೋಗಿ ತರಕಾರಿ ಬಿಡಿಸಬೇಕು. ಕಾಳಿಂಗ ಸರ್ಪಕ್ಕೆ ಹೆದರಿ ಹೊರಗೆ ಹೋಗುವಂತೆ ಇರಲಿಲ್ಲ. ಬಾಗಿಲು ತೆರೆದರೆ ಎಲ್ಲಿ ಕಾಳಿಂಗ ಸರ್ಪವು ಒಳಗೆ ಬರುವುದೋ ಎನ್ನುವ ಆತಂಕ. ಸಂಜೆಯಾಗುತ್ತಾ ಬಂತು. ದೀಪ ಹಚ್ಚುವ ಸಮಯವಾಯಿತು. ಕಿಟಕಿಯಿಂದ ಹೊರಗೆ ನೋಡಿದಾಗ ಸರ್ಪವು ಕಾಣಲಿಲ್ಲ. ಮಕ್ಕಳನ್ನು ಕೋಣೆಯಲ್ಲಿ ಕುಳ್ಳಿರಿಸಿ, ದೇವರಿಗೆ ದೀಪ ಹಚ್ಚಿ ಅಳುಕುತ್ತಲೇ ಬಾಗಿಲು ತೆರೆದಳು. 

ಮನೆಯ ಸುತ್ತ ಹೋಗಿ ನೋಡಿದಾಗಲೂ ಕಾಳಿಂಗವು ಎಲ್ಲೂ ಕಾಣಲಿಲ್ಲ. ಅಂಗಳದ ಮಣ್ಣಿನಲ್ಲಿ ಸರ್ಪವು ತೆವಳಿ ಹೋದ ಗುರುತು ಕಾಣಿಸಿತು. ತುಳಸೀ ಕಟ್ಟೆಯ ಬಳಿ ಬಂದು ದೀಪ ಬೆಳಗಿದಳು.  ಸ್ವಲ್ಪ ಹೊತ್ತಿಗೆಲ್ಲಾ ವೇಲಾಯುಧನ್ ಮನೆಗೆ ಬಂದರು. ಕೈ ಕಾಲು ಮುಖ ತೊಳೆದು ಚಹಾ ಮಾಡಿಕೊಡುವಂತೆ ಸುಮತಿಗೆ ಹೇಳಿದರು. ಬೇಗನೇ ಚಹಾ ಮಾಡಿ ಪತಿಗೆ ಕೊಟ್ಟು ಅಡುಗೆ ಕೋಣೆಗೆ ಹೋಗದೇ ಅಲ್ಲಿಯೇ ನಿಂತಳು. ಸುಮತಿ ಏನಾದರೂ ಮುಖ್ಯವಾದ ವಿಷಯ ಹೇಳುವುದಿದ್ದರೆ ಮಾತ್ರ ಅಲ್ಲಿ ಹಾಗೆ ನಿಲ್ಲುವಳು. ಅದನ್ನು ತಿಳಿದಿದ್ದ ವೇಲಾಯುಧನ್ ಏನು ವಿಷಯ ಎಂಬಂತೆ ಪ್ರಶ್ನಾರ್ಥಕವಾಗಿ ಸುಮತಿಯನ್ನು ನೋಡಿದರು.

ಪತಿಯು ತನ್ನೆಡೆಗೆ ನೋಡಿದ್ದೇ ತಡ, ನಿನ್ನೆ ನಡೆದ ಘಟನೆ ಹಾಗೂ ಇಂದಿನದನ್ನೂ ಹೆದರಿಕೆಯಿಂದಲೇ ವಿವರಿಸಿ ಹೇಳಿದಳು. ಅದನ್ನು ಕೇಳಿದ ವೇಲಾಯುಧನ್ ರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು. ಏನೂ ಹೇಳದೇ ಒಂದು ನಿಮಿಷ ಆಲೋಚಿಸುತ್ತಾ ಮೌನವಾಗಿ ಚಹಾ ಹೀರಿದರು. ನಂತರ ಸುಮತಿಯೆಡೆಗೆ ನೋಡುತ್ತಾ…”ನಾಳೆಯೂ ಒಂದು ದಿನ ನೋಡು… ಹೀಗೇ ಕಾಳಿಂಗವು ಮತ್ತೆ ಅದೇ ಸಮಯಕ್ಕೆ ಬರುತ್ತದೆಯೋ ಎಂದು…ನಂತರ ಏನಾದರೂ ವ್ಯವಸ್ಥೆ ಮಾಡೋಣ”…. ಎಂದರು.  ಸರಿ ಎನ್ನುತ್ತಾ ತಲೆಯಾಡಿಸಿ….”ಈವತ್ತು ಸರ್ಪಕ್ಕೆ ಹೆದರಿ ಹಿತ್ತಲಿನಿಂದ ತರಕಾರಿ ಬಿಡಿಸಿ ತಂದಿಲ್ಲ…. ಹಾಗಾಗಿ ಗಂಜಿ ಹಾಗೂ ಚಟ್ನಿ ಮಾಡಿರುವೆ….ಜೊತೆಗೆ ಈಗ ಹಪ್ಪಳ ಹುರಿಯುತ್ತೇನೆ”…ಎಂದು ಹೇಳಿ ಹೆದರಿಕೆಯಿಂದ ಪತಿಯ ಮುಖವನ್ನೇ ನೋಡುತ್ತಾ ಅಲ್ಲಿಯೇ ನಿಂತಳು. ವೇಲಾಯುಧನ್ ಪತ್ನಿಯನ್ನೊಮ್ಮೆ ದಿಟ್ಟಿಸಿ ನೋಡಿ ಸರಿ ಎನ್ನುವಂತೆ ತಲೆ ಆಡಿಸಿದರು. ಎಲ್ಲಿ ಬೈಸಿಕೊಳ್ಳುವೆನೋ ಎಂದು ಹೆದರಿದ್ದ ಅವಳಿಗೆ ಸ್ವಲ್ಪ ಸಮಾಧಾನವಾಯಿತು.

ಪತಿಗೆ ಹಾಗೂ ಮಗಳಿಗೆ ಊಟ ಕೊಟ್ಟು, ಮಗುವಿಗೆ ಫಾರೆಕ್ಸ್ ತಿನ್ನಿಸಿ ತಾನೂ ಊಟ ಮಾಡಿ ಅಡುಗೆ ಮನೆಯ ಕೆಲಸವನ್ನೆಲ್ಲಾ ಮುಗಿಸಿ ಮಕ್ಕಳ ಜೊತೆ ಮಲಗಿದಳು. ಮಕ್ಕಳು ನಿದ್ರಿಸಿದ ನಂತರ ಪತಿಯ ಕೋಣೆಗೆ ಬಂದು ಸ್ವಲ್ಪ ಹೊತ್ತು ಅಲ್ಲಿದ್ದು ಅವರ ಇಂಗಿತವನ್ನು ತಣಿಸಿ ಮತ್ತೆ ಬಂದು ಮಕ್ಕಳ ಜೊತೆ ಮಲಗುವುದು ವಾಡಿಕೆ. ಕೆಲವೊಮ್ಮೆ ಮಕ್ಕಳು ನಿದ್ರಿಸುವುದು ತಡವಾದರೆ ಪತಿಯು ಕೋಪಗೊಳ್ಳುತ್ತಿದ್ದರು. ಆಗ ಏನೂ ಮಾತನಾಡದೇ ಸುಮತಿ ಸುಮ್ಮನಿರುವಳು. ಏನಾದರೂ ತಿರುಗಿ ಹೇಳಿದರೆ ಕೋಪಿಷ್ಠ ಪತಿ ಹೊಡೆದರೆ ಎಂದು ಹೆದರಿ ಮೌನಕ್ಕೆ ಶರಣಾಗುವಳು. 

ದಾಂಪತ್ಯವು ಅವಳ ಮನಸ್ಸಿಗೆ ನೆಮ್ಮದಿ ಕೊಡುವ ಸಂಗತಿಯಾಗಿರಲಿಲ್ಲ. ಅದೊಂದು ಕರ್ತವ್ಯದಂತೆ ಕಾಣುತ್ತಿದ್ದಳು ಅಷ್ಟೇ. ಏಕೆಂದರೆ ಪತಿಯಿಂದ ಪ್ರೇಮ ಹಾಗೂ ಪ್ರೀತಿಯ ಮಾತುಗಳನ್ನು ಎದಿರು ನೋಡುವಂತೆಯೇ ಇರಲಿಲ್ಲ ಅವಳು. ಯಾಂತ್ರಿಕವಾದ ಜೀವನಕ್ಕೆ ಒಗ್ಗಿಹೋಗಿದ್ದಳು ಸುಮತಿ. ಪ್ರೇಮದ ಮೃದು ಭಾವನೆಗಳು ಎಂದೋ ಸತ್ತು ಗೋರಿಯನ್ನು ಸೇರಿದ್ದವು. ಆದರೆ ಅಕ್ಕರೆ, ಮಮತೆ, ವಾತ್ಸಲ್ಯಗಳು ಎಂದೂ ಅವಳಲ್ಲಿ ಬತ್ತಲಾರದ ಸೆಲೆಯಾಗಿತ್ತು. ಮಕ್ಕಳೆಂದರೆ ಅವಳಿಗೆ ಪಂಚಪ್ರಾಣ. ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡಬೇಕು ಎನ್ನುವುದೇ ಅವಳ ಧ್ಯೇಯವಾಗಿತ್ತು. ಸಣ್ಣ ವಯಸ್ಸಿನಿಂದಲೇ ಮಕ್ಕಳಲ್ಲಿ ಸದ್ಗುಣಗಳನ್ನು ಬೆಳೆಸುವತ್ತ ಸದಾ ಗಮನ ಹರಿಸುವಳು. ಮಲಗಿ ನಿದ್ರಿಸುವ ಮೊದಲು ಮಕ್ಕಳಿಗೆ ನೀತಿ ಕಥೆಗಳು ಹಾಗೂ ಪುರಾಣ ಕಥೆಗಳನ್ನು ಹೇಳಿ ಮಲಗಿಸುವಳು. ಅಮ್ಮ ಹೇಳುವ ಕಥೆಗಳನ್ನು ಕೇಳುತ್ತಾ ಮಕ್ಕಳು ಅರಿವಿಲ್ಲದೇ ನಿದ್ರೆಗೆ ಜಾರುವರು. ಕೆಲವೊಮ್ಮೆ ತಡರಾತ್ರಿಯಾದರೂ ಸುಮತಿಗೆ ನಿದ್ರೆಯೇ ಬರುತ್ತಿರಲಿಲ್ಲ. ಆಗೆಲ್ಲಾ ಹಲವು ಆಲೋಚನೆಗಳು ಮನಸ್ಸಲ್ಲಿ ಸುಳಿಯುತ್ತಿದ್ದವು. ಕೆಲವು ನೋವನ್ನು ತಂದರೆ ಇನ್ನೂ ಕೆಲವು ಸಂತೋಷವನ್ನು ಕೊಡುತ್ತಿದ್ದವು.

ಪ್ರತೀ ದಿನವೂ ತಾವು ಕೇರಳದಲ್ಲಿ ಕಳೆದ ದಿನಗಳನ್ನು ನೆನೆಯುವಳು. ತಾವೆಲ್ಲರೂ ಒಟ್ಟಾಗಿ ಕಳೆದ ಸುಂದರ ದಿನಗಳನ್ನು ಅವಳಿಂದ ಮರೆಯಲು ಸಾಧ್ಯವೇ ಇರಲಿಲ್ಲ.

ಆ ಸುಂದರ ದಿನಗಳನ್ನು ನೆನೆದ ಮರುಕ್ಷಣವೇ ತಾವು ಅಲ್ಲಿಂದ ಇಲ್ಲಿಗೆ ಬಂದಿದ್ದು, ನಂತರ ಆದ ಬದಲಾವಣೆಗಳು ಎಲ್ಲವನ್ನೂ ನೆನೆದು ಬಿಕ್ಕಿ ಬಿಕ್ಕಿ ಅತ್ತು ರಾತ್ರಿಯ ಯಾವದೋ ಆಯಾಮದಲ್ಲಿ ನಿದ್ರೆಗೆ ಜಾರುವಳು. ಕೆಲವೊಮ್ಮೆ ನಿದ್ರೆ ಬಾರದೇ ಮಗ್ಗಲು ಬದಲಿಸುತ್ತಾ ಹೇಗೋ ನಿದ್ರೆ ಮಾಡಲು ಶ್ರಮಿಸುವಳು. ತೀರಾ ನಿದ್ರೆ ಬಾರದೇ ಇದ್ದಾಗ ಯಾವುದಾದರೂ ಪುಸ್ತಕವನ್ನು ಓದುತ್ತಾ ರಾತ್ರಿ ಕಳೆಯುವಳು. ಆದರೂ ಬೆಳಗ್ಗೆ ಬೇಗನೇ ಹಾಸಿಗೆ ಬಿಟ್ಟು ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಸ್ನಾನ ಮಾಡಿ ತಿಂಡಿ, ಅಡುಗೆ, ಮನೆ ಕೆಲಸಗಳನ್ನು ಮಾಡುವಳು. ನಂತರ ಸಮಯ ಸಿಕ್ಕಾಗ ಮಕ್ಕಳ ಜೊತೆ ಮಲಗುವಳು. 

ಅಂದೂ ಹಾಗೆಯೇ ಬೇಗನೇ ಎದ್ದಳು. ನಿತ್ಯಕರ್ಮ ಮುಗಿಸಿ ಸ್ನಾನ ಮಾಡಿ, ದೇವರಿಗೆ ದೀಪ ಹಚ್ಚಿ, ಅಡುಗೆ ಮನೆಯ ಇನ್ನಿತರ ಕೆಲಸಗಳನ್ನು ಮುಗಿಸಿ, ನಿನ್ನೆಯಂತೆ ಇಂದು ಆಗುವುದು ಬೇಡ ಎಂದು ಹಿತ್ತಲಿಗೆ ಹೋಗಿ ತರಕಾರಿ ಬಿಡಿಸಿ ತಂದಳು. ಬೇಗನೇ ಅಡುಗೆ ಮಾಡಿ ಮುಗಿಸಿದಳು. ಪತಿಗೆ ಮಧ್ಯಾಹ್ನ ಊಟಕ್ಕೆ ಡಬ್ಬಿ ಕಟ್ಟಿದಳು. ಅಷ್ಟು ಹೊತ್ತಿಗೆಲ್ಲ ಮಕ್ಕಳಿಬ್ಬರೂ ಎದ್ದು ಕೋಣೆಯಲ್ಲಿ ಆಡುತ್ತಿದ್ದರು. ಅವರ ಬಳಿಗೆ ಹೋಗಿ ಇಬ್ಬರನ್ನೂ ಬಚ್ಚಲಿಗೆ ಕರೆದುಕೊಂಡು ಹೋಗಿ ದೊಡ್ಡ ಮಗಳಿಗೆ ಹಲ್ಲು ಉಜ್ಜುವಂತೆ ಹೇಳಿ,  ಮಗುವನ್ನು ಸ್ನಾನ ಮಾಡಿಸಿ ನಂತರ ದೊಡ್ಡ ಮಗಳನ್ನೂ ಸ್ನಾನ ಮಾಡಿಸಿ, ದೇವರ ಮುಂದೆ ಮಕ್ಕಳನ್ನು ಕುಳ್ಳಿರಿಸಿ ವಂದಿಸುವಂತೆ ಹೇಳಿ, ಅಡುಗೆ ಮನೆಗೆ ಹೋಗಿ ಮಗಳಿಗೆ ತಟ್ಟೆಯಲ್ಲಿ ತಿಂಡಿಯನ್ನು ಹಾಕಿ ತಿನ್ನಲು ಕೊಟ್ಟಳು. ಅಷ್ಟು ಹೊತ್ತಿಗೆ ವೇಲಾಯುಧನ್ ಕೆಲಸಕ್ಕೆ ಹೊರಟು ನಿಂತರು.


Leave a Reply

Back To Top