ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಸೋತು ಗೆದ್ದವರು

ನಾನು ನೂರಾರು ಬಾರಿ ಸೋತೆ. ಜನ ನನ್ನನ್ನು ನೋಡಿ ನಗುತ್ತಿದ್ದರು ಅಂತಿಮವಾಗಿ ಚಾಕ್ಲೆಟ್ ನನ್ನ ಬದುಕನ್ನು ಬದಲಾಯಿಸಿತು.ನನ್ನ ತಂದೆ ಬಹುದೊಡ್ಡ ಕನಸುಗಾರ. ದೊಡ್ಡ ದೊಡ್ಡ ಯೋಜನೆಗಳನ್ನು ರೂಪಿಸುತ್ತಿದ್ದ ನನ್ನ ತಂದೆ ಆದರೆ ಅದರ ಪರಿಣಾಮ ಮಾತ್ರ ಶೂನ್ಯವಾಗಿರುತ್ತಿತ್ತು.ನಮ್ಮ ಬೆರಳ ತುದಿಯಲ್ಲಿನ ಅವಕಾಶಗಳು ಕೈ ತಪ್ಪಿ ಹೋಗುವುದನ್ನು ನಾನು ನೋಡುತ್ತಲೆ ಬೆಳೆದೆ.
ನಾನು ನಾಲ್ಕನೇ ತರಗತಿಯಲ್ಲಿ ಇದ್ದಾಗ ಶಾಲೆಯಿಂದ ನನ್ನನ್ನು ಹೊರಗೆ ಹಾಕಿದರು. ಮಾಡಲು ಬೇರೆ ಏನೂ ಕೆಲಸವಿರಲಿಲ್ಲ… ಆದರೆ ನನ್ನೊಳಗಿನ ಸುಪ್ತ ಮನಸ್ಸು ನನಗೆ ನೀನು ಸೋಲಲು ಹುಟ್ಟಿಲ್ಲ,ಒಂದಲ್ಲ ಒಂದು ದಿನ ನೀನು ಗೆದ್ದೇ ಗೆಲ್ಲುವೆ ಎಂದು ಸದಾ ಪಿಸುಗುಡುತ್ತಿತ್ತು ಎಂದು ಮುಂದೆ ತನ್ನ ಯಶಸ್ಸಿನ ಅಂತಿಮ ತುದಿಯಲ್ಲಿ ಇದ್ದಾಗ ಹೇಳಿದ ವ್ಯಕ್ತಿ ಮಿಲ್ಟನ್ ಹರ್ಷಿ ಮುಂದೆ ಬದುಕಿನಲ್ಲಿ ಅದ್ಭುತ ಯಶಸ್ಸನ್ನು ಕಂಡ ಕನಸು ಕಂಗಳ ಬಹುದೊಡ್ಡ ಚಾಕಲೇಟ್ ಉದ್ಯಮಿ. ತನ್ನ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಹಲವಾರು ಏಳು ಬೀಳುಗಳನ್ನು ಕಂಡರೂ ನಿರಂತರ ಪ್ರಯತ್ನವನ್ನು ಮುಂದುವರಿಸಿ ಬದುಕಿನಲ್ಲಿ ಯಶಸ್ವಿಯಾದಾತ. ಆತನ ಜೀವನದ ಕಥೆ ಅತ್ಯದ್ಭುತ, ಪ್ರೇರಣಾದಾಯಿಯಾದದ್ದು ಕೂಡ.
18ರ ವಯಸ್ಸಿನಲ್ಲಿ ಆತ ತನ್ನ ಮೊಟ್ಟ ಮೊದಲ ಕ್ಯಾಂಡಿ ಶಾಪ್ ತೆರೆದ ಆದರೆ ವ್ಯವಹಾರ ಪ್ರಜ್ಞೆಯ ಕೊರತೆಯಿಂದ ವಿಫಲನಾದ. ಮತ್ತೆ ಮತ್ತೆ ಪ್ರಯತ್ನಿಸಿದ್ರೂ ವಿಫಲನಾದ ಆತ ತನ್ನ ಸಂಪೂರ್ಣ ಬಂಡವಾಳವನ್ನು ಕೂಡ ಕಳೆದುಕೊಂಡ. ಖಾಲಿ ಕೈಯಲ್ಲಿ ಮರಳಿದ ಆತನಿಗೆ ಕುಟುಂಬದ ಸೋಲಿನ ಖ್ಯಾತಿಯನ್ನು ಮುಂದುವರೆಸಿದ ಎಂಬ ಮಾತು ಮಾತ್ರ ಕೇಳಬಂತು. ಜನರು ಆತನನ್ನು ನಂಬುವುದನ್ನು ಬಿಟ್ಟುಬಿಟ್ಟರು.ಆತನು ಕೂಡ ಜನರ ಕುರಿತು ಯೋಚಿಸುವುದನ್ನು. ಆದರೆ ಜನರ ಮಾತುಗಳಿಗೆ ಆತ ಕಿವಿಗೊಡಲಿಲ್ಲ…. ಮುಖ್ಯವಾಗಿ ಆತ ತನ್ನ ಮೇಲಿನ ನಂಬಿಕೆಯನ್ನು, ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ
ವರ್ಷಗಳ ನಂತರ ಆತ ಮತ್ತೊಂದು ಬಾರಿ ಹೊಸದೊಂದು ಕ್ಯಾಂಡಿ ಚಾಕ್ಲೇಟ್ಗಳ ವ್ಯವಹಾರವನ್ನು ಆರಂಭಿಸಿದ. ಪೆನ್ಸಿಲ್ವೇನಿಯಾ ರಾಜ್ಯದ ಲಾಂಚೆಸ್ಟರ್ ನಲ್ಲಿ ಆತ ಆರಂಭಿಸಿದ ಕ್ಯಾಂಡಿಗಳ ಉದ್ಯಮ ತುಂಬಾ ಚೆನ್ನಾಗಿ ನಡೆದು ಆತನ ಕೈ ಹಿಡಿಯಿತು.ಇಲ್ಲಿ ಆತ ಹೊಸದೊಂದು ಸಂಶೋಧನೆಯನ್ನು ಮಾಡಿದ್ದ. ಜಾತ್ರೆಯೊಂದರಲ್ಲಿ ಹಾಲಿನಿಂದ ಚಾಕಲೇಟನ್ನು ತಯಾರಿಸಿ ಮಾರಿದ್ದ ಆತ ಚಾಕಲೇಟು ಉದ್ಯಮಕ್ಕೆ ಹೊಸದೊಂದು ಭವಿಷ್ಯವನ್ನು ರೂಪಿಸಿದ್ದ.
ಇದೀಗ ಆತ ತನ್ನ ಮೊದಲಿನ ಕಂಪನಿಯನ್ನು ಮಾರಿ ಮತ್ತೆ ಹೊಸದಾಗಿ ಉದ್ಯಮವನ್ನು ಆರಂಭಿಸಿದ. ಈ ಬಾರಿ ಆತ ಬಳಸಿದ್ದು ಕೋಕೋ ಪುಡಿಯನ್ನು. ಈ ರೀತಿ ಹರ್ಷಿ ಕಂಪನಿಯು ಬೆಳೆಯಿತು. ಅಮೆರಿಕಾದಾದ್ಯಂತ ತನ್ನ ಉದ್ಯಮವನ್ನು ವಿಸ್ತರಿಸಿದ ಆತ ಜಗತ್ತಿನೆಲ್ಲೆಡೆ ಅದು ಪಸರಿಸುವಂತೆ ಮಾಡಿದ.
ಪ್ರತಿ ಬಾರಿಯೂ ಆತ ಹೊಸದಾಗಿ ಉದ್ಯಮವನ್ನು ಆರಂಭಿಸಿದಾಗ ಜನ ಆತನನ್ನು ಹುಚ್ಚ, ತಲೆತಿರುಕ ಎಂದು ತಮಾಷೆ ಮಾಡಿದರು… ಆದರೆ ಆತನಿಗೆ ಮಾತ್ರ ಗೊತ್ತಿತ್ತು ತಾನು ಒಂದಲ್ಲ ಒಂದು ದಿನ ತನ್ನ ಕೆಲಸದಲ್ಲಿ ಯಶಸ್ಸನ್ನು ಕಂಡೆ ಕಾಣುತ್ತೇನೆ ಎಂದು.
ಇದೀಗ ಆತ ಕೇವಲ ಚಾಕಲೇಟ್ ಫ್ಯಾಕ್ಟರಿಯನ್ನು ಮಾತ್ರ ನಿರ್ಮಿಸಲಿಲ್ಲ ಬದಲಾಗಿ ತನ್ನ ಚಾಕಲೇಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಗೌರವಯುತವಾಗಿ ತಲೆಯೆತ್ತಿ ಬಾಳುವಂತಹ ಒಂದು ಊರನ್ನೇ ನಿರ್ಮಿಸುವ ದೊಡ್ಡ ಕನಸನ್ನು ಕಂಡಿದ್ದ. ಏನೂ ಇಲ್ಲದೆ ಬದುಕುವ ನೋವನ್ನು ಖುದ್ದು ಅನುಭವಿಸಿದ್ದ ಆತ ಯಾವುದೇ ಮನುಷ್ಯನಾಗಿರಲಿ ಗೌರವಯುತ ಜೀವನ ನಡೆಸಲಿ ಎಂದು ಕಾತರಿಸಿದ್ದ.
ಇಡೀ ಜಗತ್ತಿಗೆ ಆತ ಚಾಕಲೇಟ್ ಕೊಡುವ ಮುನ್ನ ಬದುಕು ಆತನಿಗೆ ಮಣ್ಣು ತಿನ್ನಿಸಿತ್ತು… ಆದರೂ ಕೂಡ ಆತ ಸಿಹಿಯಾದ ಚಾಕ್ಲೇಟ್ ತಯಾರಿಸುವುದನ್ನು ಕೈ ಬಿಡಲಿಲ್ಲ.
ನೀನು ಸೋತೆ ಎಂಬ ಕಾರಣಕ್ಕಾಗಿ ನೀನು ಕೈಗೊಂಡ ಕೆಲಸಗಳನ್ನು ಬಿಡಬೇಡ. ನೀನು ನಿನ್ನನ್ನು ನಂಬದೇ ಹೋದಾಗ ಮಾತ್ರ ನಿನ್ನ ಕೆಲಸವನ್ನು ಕೈಬಿಡು ಎಂದು ಆತನ ಅಂತಃಸಾಕ್ಷಿ ಆತನಿಗೆ ಒತ್ತಿ ಹೇಳುತ್ತಿತ್ತು.
ಅಂತೆಯೇ ತನ್ನ ಆತ್ಮಸಾಕ್ಷಿಯ ಕರೆಗೆ ಓಗೊಟ್ಟ ಆತ ಮುಂದೆ ಜಗತ್ತಿನ ಪ್ರಖ್ಯಾತ ಚಾಕಲೇಟ್ ಕಂಪನಿಗಳಲ್ಲಿ ಒಂದಾದ ಹರ್ಷಿಸ್ ಚಾಕಲೇಟು ಉದ್ಯಮಿಯಾದ. ಅತಿ ದೊಡ್ಡ ಚಾಕಲೇಟ್ ಬ್ರಾಂಡ್ ಅನ್ನು ಉತ್ಪಾದಿಸಿದ ಆತ ಜಗತ್ತಿನ ಕೆಲವೇ ಕೆಲವು ಯಶಸ್ವಿ ಉದ್ಯಮಿಗಳಲ್ಲಿ ಒಬ್ಬನಾದ.
ಹೌದಲ್ಲವೇ ಸ್ನೇಹಿತರೆ,
ಯಾವ ವಸ್ತು, ವಿಷಯಗಳು ಇಂದು ಬದುಕನ್ನು ಹಾಳು ಮಾಡಬಲ್ಲದು ಎಂದು ನಾವು ಯೋಚಿಸುತ್ತೇವೆಯೋ ಅದು ನಮ್ಮ ಮುಂದಿನ ಬದುಕಿನ ಕನಸುಗಳ ಸಾಕಾರ ರೂಪವಾಗಬಹುದು. ಇಲ್ಲವೇ ಉನ್ನತ ಬದುಕಿಗೆ ಭದ್ರಬುನಾದಿಯನ್ನು ಹಾಕಬಹುದು.
ನದಿಯು ತನ್ನ ಉಗಮ ಸ್ಥಾನದಲ್ಲಿ ನಲ್ಲಿಯಂತೆ ಸಣ್ಣದಾಗಿ ಹರಿಯುವುದನ್ನು ನೋಡಿದಾಗ ಇದು ಮುಂದೆ ದೊಡ್ಡ ನದಿಯಾಗಿ ಸುತ್ತಲಿನ ಜಾಗವನ್ನು ತನ್ನ ಒಡಲಲ್ಲಿ ತುಂಬಿಕೊಂಡು ಬೆಟ್ಟ ಗುಡ್ಡಗಳನ್ನು ಹಾಯ್ದು ಕಣಿವೆಗಳಲ್ಲಿ ಇಳಿದು ಅಗಾಧ ಭೂಪ್ರದೇಶವನ್ನು ಆಕ್ರಮಿಸಿಕೊಂಡು ಬೆಳೆಯುತ್ತದೆ, ಮುಂದೆ ಹರಿಯುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ.ನದಿಯ ನಿರಂತರ ಪ್ರವಾಹ ನಮ್ಮ ಬದುಕಿನಂತೆಯೇ ಎಲ್ಲ ಏರಿಳಿತಗಳನ್ನು ಹಾಯ್ದು ತನ್ನ ಗಮ್ಯವನ್ನು ಸೇರುವಲ್ಲಿಗೆ ಮುಕ್ತಾಯವಾಗುತ್ತದೆ.
ಸದಾ ಮುಂದಿನ ಬದುಕಿನ ಕುರಿತು ಚಿಂತೆ ಕಳವಳವನ್ನು ವ್ಯಕ್ತಪಡಿಸುವ ಬದಲು ಇರುವುದನ್ನು ಸ್ವೀಕರಿಸಿ ಧೈರ್ಯಗೆಡದೆ ಮುನ್ನುಗ್ಗಿದ ವ್ಯಕ್ತಿ ಬದುಕಿನಲ್ಲಿ ಯಶಸ್ಸನ್ನು ಸಾಧಿಸುತ್ತಾನೆ. ಅಂತಹ ಯಶಸ್ಸನ್ನು ಗಳಿಸಲು ಅಪಾರ ತಾಳ್ಮೆ ಮತ್ತು ಶ್ರದ್ಧೆ ಅತ್ಯವಶ್ಯಕ. ನಿರಂತರ ಪ್ರಯತ್ನವು ಇದಕ್ಕೆ ಜೊತೆಗೂಡಿದರೆ ಯಶಸ್ಸು ಖಂಡಿತ.
ಅಂತಹ ಶ್ರದ್ಧೆ ತಾಳ್ಮೆ ಮತ್ತು ಅಪರಿಮಿತ ಪ್ರಯತ್ನಗಳು ನಮ್ಮದಾಗಲಿ ಎಂದು ಆಶಿಸುವ
——————————————————-̲̲————————-
ವೀಣಾ ಹೇಮಂತ್ ಗೌಡ ಪಾಟೀಲ್





ಬದುಕಿಗೆ ಸ್ಪೂರ್ತಿ ನೀಡುವಂತಹ ಲೇಖನ ಚೆನ್ನಾಗಿದೆ ಮೇಡಂ ಧನ್ಯವಾದಗಳು