ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿ ವಚನ

ಬಸವಣ್ಣಾ ನಿಮ್ಮಂಗದಾಚಾರವ ಕಂಡು ಎನಗೆ ಲಿಂಗ ಸಂಗವಾಯಿತಯ್ಯಾ ಬಸವಣ್ಣಾ ನಿಮ್ಮ ಮನದ ಸುಜ್ಞಾನವ ಕಂಡು ಎನಗೆ ಜಂಗಮ ಸಂಬಂಧವಾಯಿತಯ್ಯ
ಬಸವಣ್ಣಾ ನಿಮ್ಮ ಸದ್ಭಕ್ತಿಯ ತಿಳಿದು ಎನಗೆ ನಿಜವು ಸಾಧ್ಯವಾಯಿತಯ್ಯ ಚೆನ್ನಮಲ್ಲಿಕಾರ್ಜುನನಯ್ಯನ ಹೆಸರಿಟ್ಟ ಗುರುವೆ ನೀವಾದ ಕಾರಣ ನಿಮ್ಮ ಶ್ರೀ ಪಾದಕ್ಕೆ ನಮೋ ನಮೋ ಎನುತಿರ್ದೆನು ಕಾಣಾ ಸಂಗನ ಬಸವಣ್ಣಾ
೧೨ ನೇ ಶತಮಾನದ ಶ್ರೇಷ್ಠ ಅನುಭಾವ ನುಡಿ ಶರಣೆ ಅಕ್ಕಮಹಾದೇವಿಯವರು . ಕೌಶಿಕ ರಾಜನನ್ನು ದಿಕ್ಕರಿಸಿ . ಅನುಭವ ಮಂಟಪದಲ್ಲಿ ಇರುವ ಅಲ್ಲಮ ಪ್ರಭುಗಳು ಹಾಗೂ ಗುರು ಬಸವಣ್ಣನವರ ಅಮೃತದ ನುಡಿ ವಚನಗಳು ಮನವನ್ನು ತಿಳಿಗೊಳಿಸಿದ ಪರಿ ನಿಜಕ್ಕೂ ಅದಮ್ಯ ಅಗೋಚರವಾದ ಲಿಂಗವನ್ನು ಕಾಣುವ ಬಗೆ ಕುತುಹಲಕಾರಿಯಾದುದು .
*ಬಸವಣ್ಣಾ ನಿಮ್ಮಂಗದಾಚಾರವ ಕಂಡು ಎನಗೆ ಲಿಂಗ ಸಂಗವಾಯಿತಯ್ಯಾ*
ಇಲ್ಲಿ ಅಕ್ಕಮಹಾದೇವಿಯವರು ಎಲ್ಲವೂ ಬಸವಣ್ಣನಿಂದ ನನ್ನ ಜ್ಞಾನ , ನನ್ನ ಲಿಂಗ, ಗುರು ಜಂಗಮದ ನೆಲೆ ಇದಕ್ಕೆಲ್ಲ ಮೂಲ ಬಸವಣ್ಣವರೇ ಕಾರಣ ಎನ್ನುವರು ಅಕ್ಕ.ದೇವರನ್ನು ಕಂಡು ದೇವರಾಗುವ ಪರಿ .
ಸಾಮಾನ್ಯವಾಗಿ ಅರಿವು ಎಂದರೆ , ತಿಳುವಳಿಕೆ ಮತ್ತು ಜಾಗ್ರತೆ ಎಂದರ್ಥ .ಈ ಸಮಾಜದಲ್ಲಿ
ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನುವುದು. ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬುವ ತಿಳುವಳಿಕೆ.ಈ ಸಮಾಜದಲ್ಲಿ ಯಾವುದು ವಾಸ್ತವ.ಈ ಸಮಾಜಕ್ಕೆ ಹಾಗೂ ಕುಟುಂಬಕ್ಕೆ ನಾವು ಕೊಡುವ ಕೊಡುಗೆ.ಅದು ಪರಿಶ್ರಮ ಹಾಗೂ ಫಲದ ಪ್ರತೀಕ . ನೋವು ನಲಿವಿನ ಸಂಕೇತ.ಒಲವು ನೇಹದ ಬಾಂಧವ್ಯ.ಒಡಲಾಳದಲಿ ಬೆಸೆದ ಅಂತಃಕರಣದ ಮಾತು.
ತನ್ನ ತಾನು ಅರಿತು ಮುಂದಡಿ ಇಡುವ ಸಂಕೇತ .
ನಮ್ಮ ಒಳಿತಿನ ಜೊತೆಗೆ ಸಮಾಜವನ್ನು ತಿದ್ದುವ ಎಚ್ಚರದ ನಡೆಯೇ ನಮ್ಮ ಅರಿವು .
ಈ ಅರಿವಿನ ಪರಿಜ್ಞಾನ ನನಗೆ ಬಸವಣ್ಣವರಿಂದ ಬಂದುದು ಎನ್ನುವರು ಅಕ್ಕ.
ಬಸವಣ್ಣನವರಲ್ಲಿ ಇರುವ ಮೃದು ಮನಸ್ಸಿನ ಧೋರಣೆ, ಸಮಾಜವನ್ನು ತಿದ್ದುವ ನಡೆ .ಸಕಲರಲ್ಲೂ ಒಳ್ಳೆಯದನ್ನು ಬಯಸುವ ಸಹೃದಯ ಎನ್ನಲ್ಲಿ ಗುರು ಸ್ಥಾನ ಪಡೆಯುವಂತಾಯಿತು ಎನ್ನುವರು ಅಕ್ಕ.
ನಮ್ಮ ನಡೆ ಮತ್ತು ನುಡಿಗಳು ಒಂದಾಗಿ ಅರಿವಿನೆಡೆಗೆ ಸಾಗುವ ಸುಪಥ. ಅಂಗದಲ್ಲಿ ಆಚಾರವನ್ನು ತೋರಿಸುವುದು ಆಚಾರವೇ ಲಿಂಗವೆಂದು ಅರಿವನ್ನು ಮೂಡಿಸುವುದು .
ಲಿಂಗಕ್ಕೆ ಶರಣನು ಯಾವಾಗಲೂ ಅಂಗನಾಗಿರುತ್ತಾನೆ.ಇಲ್ಲಿ ಶರಣರೆಂದರೆ ಲಿಂಗ .ಲಿಂಗವೆಂದರೆ ಶರಣ. ಪ್ರಾಣ ಚೈತನ್ಯ ವಾದ ಈ ಲಿಂಗ ನನಗೆ ಒಲಿದಿದ್ದು ಬಸವಣ್ಣನವರಿಂದ ಎನ್ನುವರು ಅಕ್ಕ.ಶರೀರದ ಲಿಂಗೇಂದ್ರಿಯಗಳು ಜಾಗೃತಗೊಂಡು ಸಚ್ಚಿದಾನಂದ ರೂಪವನ್ನು ಹೊಂದುವ ಬಗೆ.
ಅರಿವು ಗುರುವಾಗಿ ,ಆಚಾರವೇ ಲಿಂಗವಾಗಿ , ಅನುಭಾವವೇ ಜಂಗಮವಾಗಿ ನಿಲ್ಲುವ ಪರಿ ಅತ್ಯಂತ ಸೋಜಿಗವಾದುದು .ಇಲ್ಲಿ
ಗುರು ,ಲಿಂಗ, ಹಾಗೂ ಜಂಗಮ ಎಲ್ಲವೂ ಪರಮಾತ್ಮನೇ ಇಂಥಹ ಪರಮಾತ್ಮ ದಿವ್ಯ ನೆಲೆ ನನಗೆ ಬಸವಣ್ಣವರಿಂದ ಬಂದುದು ಎನ್ನುವರು ಅಕ್ಕ.
ಬಸವಣ್ಣಾ ನಿಮ್ಮ ಮನದ ಸುಜ್ಞಾನ ವ ಕಂಡು ಎನಗೆ ಜಂಗಮ ಸಂಬಂಧವಾಯಿತಯ್ಯ
ಇಲ್ಲಿ ಜಂಗಮ ಎಂದರೆ, ಪರಮಾತ್ಮ ,ಚೈತನ್ಯ ಎಂತಲೂ ಕರೆಯಬಹುದು .ಜಂಗಮವು ಅರಿವು ರೂಪಾಗಿರುತ್ತದೆ . ಇಲ್ಲಿ ಭವಿಯು ಗುರುವಿನಿಂದ ದೀಕ್ಷೆ ಪಡೆದು ಭಕ್ತನಾಗುವ ಪರಿ .ಜನನ ನಾಸ್ತಿಯಾಗಿ ,ಗಮನ ನಾಸ್ತಿಯಾಗಿ ,ಮರಣ ನಾಸ್ತಿಯಾಗಿ , ಸುಜ್ಞಾನಿಯಾಗಿ ಒಂದಡೆ ನಿಲ್ಲದೆ ಸಂಚರಿಸುವನೇ ಜಂಗಮ .
ಇಲ್ಲಿ ಜಂಗಮ ಕಾವಿ ತೊಟ್ಟು ತಿರುಗುವುದಲ್ಲ .ತನ್ನಲ್ಲಿ ಅರಿವನ್ನು ಜಾಗೃತ ಮಾಡಿಕೊಂಡು ಸಮಾಜದ ನಡೆ ನುಡಿಗೆ ತಕ್ಕಂತೆ ಹೊಂದಿಕೊಂಡು ಹೋಗುವ ಬದುಕಿನ ಪಯಣ . ಶುದ್ಧ ಮನದ ಭಾವದಲ್ಲಿ ಸದ್ಬುದ್ಧಿ ಹೊಂದಿ ನಮ್ಮ ಅರಿವಿಗೆ ಬಂದು ಜಂಗಮ ಕಳೆಯನ್ನು ಹೊಂದುವುದು .
ಅರಿವೇ ಜಂಗಮವೆಂದು ತೋರಿಸುವುದು ಗುರುವಿನ ಕಾರ್ಯ.ಈ ಕಾರ್ಯವನ್ನು ನಾನು ಎನ್ನ ಗುರು ಸ್ವರೂಪಿ ಬಸವಣ್ಣನವರಿಂದ ಪಡೆದೆ ಎನ್ನುವರು ಅಕ್ಕ.
ಅಕ್ಕನ ಚಿತ್ತ ಅಕ್ಕನ ಜ್ಞಾನ.ಅಕ್ಕನ ವೈರಾಗ್ಯ ಎಲ್ಲವೂ ಬಸವಣ್ಣನವರೇ, ಎನ್ನುವ ಅಕ್ಕನ ವೈರಾಗ್ಯದ ನಡಿಗೆ ಜಂಗಮಕ್ಕೆ ಕಾರಣವಾಯಿತು.
ಬಸವಣ್ಣಾ ನಿಮ್ಮ ಸದ್ಭಕ್ತಿಯ ತಿಳಿದು ಎನಗೆ ನಿಜವು ಸಾಧ್ಯವಾಯಿತಯ್ಯ
ಓಂ ಬಸವಣ್ಣಾ ನಿಮ್ಮ ಒಳ್ಳೆಯ ಭಕ್ತಿ ಎನ್ನ ಮನವನ್ನು ಜಾಗೃತವಾಗಿಸಿತು . ದಿವ್ಯ ತೇಜ ಮೂರ್ತಿಯೇ ಎನ್ನ ಮನದಲ್ಲಿ ನಿಜವು ಸಾಧ್ಯವಾಯಿತಯ್ಯ.
ಈ ಶರೀರ ಎನ್ನುವುದು ಸತ್ಯ ಶುದ್ಧವಾದುದು .ಈ ಕಾಯದಲ್ಲಿ ಅಜ್ಞಾನ ಕಳಿದು ಲಿಂಗಮಯ ಜಂಗಮಮಯ ಮಾಡಿದೆ . ಶಾಂತಿಯ ನೆಲೆಗಟ್ಟಿನಲ್ಲಿ ಅರಿವಿನ ಗುರುವಾಗಿ , ಸೃಷ್ಟಿಯೊಳಗಡಗಿದ ದಿವ್ಯ ಜ್ಞಾನಿಯಾದೆ .ಮನದ ಕಾಮನೆಯ ವೈರಿಗಳನ್ನು ಮೆಟ್ಟಿ ನಡೆದ ಪ್ರಭುವೇ ಎಲ್ಲವೂ ಎನಗೆ ನಿಮ್ಮಿಂದ ಸಾಧ್ಯವಾಯಿತಯ್ಯ .ಎನ್ನುವರು ಅಕ್ಕ.
ಚೆನ್ನಮಲ್ಲಿಕಾರ್ಜುನನಯ್ಯನ ಹೆಸರಿಟ್ಟ ಗುರುವೆ ನೀವಾದ ಕಾರಣ ನಿಮ್ಮ ಶ್ರೀ ಪಾದಕ್ಕೆ ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣಾ
ಹೆಸರಿಲ್ಲದ ಎನ್ನ ದೇವ ಚೆನ್ನಮಲ್ಲಿಕಾರ್ಜುನನಿಗೂ ಹೆಸರಿಟ್ಟರು ನೀವು ಬಸವಣ್ಣ.
ಅರಿವಿಲ್ಲದ ಬಾಳಿನಲಿ ಬೆಳಕಾದೆ ಬಸವಣ್ಣ.ಬಾಗುತ್ತಿದೆ ಎನ್ನ ಶಿರ ನಿಮ್ಮ ಅಡಿದಾವರೆಗೆ ಭಕ್ತಿಯ ನಮನಗಳು ತಂದೆ .
ತಾಯಿ ಎನ್ನಲೇ ? ಬಂಧು ಎನ್ನಲೇ?
ಭಯವಿಲ್ಲದ ಬಸವಣ್ಣ ಬಲವಾಗಿ ನಿಂತು ಹರಿಸಿದೆ .
ನಡೆ ಪರುಷ ನುಡಿ ಪರುಷ ನಡೆ ನುಡಿಯಲಿ ಒಂದಾದ ಬಸವಣ್ಣ ದೇವರಿಗೂ ಹೆಸರಿಟ್ಟ ಪರಮಾತ್ಮ ಸ್ವರೂಪ.ನಿಮ್ಮ ದಿವ್ಯ ಪಾದ ಕಮಲಗಳಿಗೆ ಅನಂತ ಶರಣು ಶರಣಾರ್ಥಿಗಳು ಎಲೇ ತಂದೆ ಬಸವಣ್ಣ ನಮೋ ಎನ್ನುವೆ.
ಡಾ ಸಾವಿತ್ರಿ ಕಮಲಾಪೂರ




