ಸಾಹಿತ್ಯ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
‘ದಾರ್ಶನಿಕ, ಕವಿ
ಖಲೀಲ್ ಗಿಬ್ರಾನ್’
[4:52 pm, 20/08/2024] Veena Hemanth Patil: ಸರಿಯಾಗಿ ಇಂಗ್ಲಿಷ್ ಮಾತನಾಡಲು ಬಾರದ, ಕಪ್ಪು ವರ್ಣದ ಆ ವ್ಯಕ್ತಿ ಆ ದೇಶಕ್ಕೆ ತನ್ನ ತಾಯಿ ಮತ್ತು ಸಹೋದರ ಸಹೋದರಿಯರೊಂದಿಗೆ ವಲಸೆ ಬಂದಾಗ ಆತನನ್ನು ಕೊಳಕ ಎಂದೇ ಕರೆದರು. ವಲಸೆ ಬಂದ ಮಕ್ಕಳಿಗಾಗಿಯೇ ಇರುವ ತರಗತಿಯಲ್ಲಿ ಆತನಿಗೆ ಕಲಿಸಲಾಗುತ್ತಿತ್ತು.ಆದರೆ ಕೆಲವೇ ಸಮಯದಲ್ಲಿ ಆತನ ಭಾವಗಳನ್ನು ಅರಿಯುವಲ್ಲಿ ಆತನ ಶಿಕ್ಷಕರು ಯಶಸ್ವಿಯಾದರು. ಚೆನ್ನಾಗಿ ಚಿತ್ರ ಬಿಡಿಸುವ, ಆ ಚಿತ್ರಗಳ ಮೂಲಕ ತನ್ನ ಮನದ ಭಾವಗಳನ್ನು ಹೊರ ಹಾಕುವ ಆತ ಮುಂದೆ ಕೆಲವೇ ದಿನಗಳಲ್ಲಿ ಇಂಗ್ಲಿಷ್ ಭಾಷೆಯ ಪ್ರಭುತ್ವವನ್ನು ಹೊಂದಿದನು.
ತನ್ನ ಮಕ್ಕಳ ಒಳ್ಳೆಯ ಭವಿಷ್ಯಕ್ಕಾಗಿ ತಾನಿರುವ ಸಿರಿಯ ಮತ್ತು ಲಿಬಿಯಾ ದೇಶದಿಂದ ಅಮೆರಿಕದ ದಕ್ಷಿಣ ಭಾಗದಲ್ಲಿರುವ ಬೋಸ್ಟನ್ ಎಂಬ ಪಟ್ಟಣಕ್ಕೆ ಬಂದು ನೆಲೆಸುವ ದೃಢ ನಿರ್ಧಾರ ಆತನ ತಾಯಿಯದು. ಆ ಸ್ಥಳ ಈಗಾಗಲೇ 2ನೇ ಅತಿ ದೊಡ್ಡ ಸಿರಿಯನ್ ಲಿಬಿಯನ್ ಅಮೆರಿಕನ್ ವಸಾಹತು ಸಮೂಹವಾಗಿ ಗುರುತಿಸಲ್ಪಟ್ಟಿತ್ತು. ಆತನ ತಾಯಿ ಕ್ಯಾನ್ಸರ್ನಿಂದ ಬಳಲುತ್ತಿದ್ದರೆ, ಓರ್ವ ಸಹೋದರ ಮತ್ತು ಸಹೋದರಿ ಕ್ಷಯ ರೋಗದಿಂದ ಒದ್ದಾಡುತ್ತಿದ್ದರು.
ನೋವು, ನಿರಾಶೆಯ ಕೂಪದಿಂದಲೇ ಅತಿ ಬಲಿಷ್ಠವಾದಂತ ಜೀವಗಳು ಉದ್ಭವಿಸುತ್ತವೆ, ಅತ್ಯಂತ ದೊಡ್ಡ ಪಾತ್ರಗಳು ಗಾಯದ ಕಲೆಗಳಿಂದ ಒಡಮೂಡುತ್ತವೆ ಎಂದು ಆತ ಬರೆದಿರುವುದು ಇದೇ ಕಾರಣಕ್ಕೆ ಇರಬಹುದು.
ಪ್ರಸ್ತುತ ಲೆಬನಾನ್ ಎಂದು ಗುರುತಿಸಲ್ಪಡುವ ದೇಶದಲ್ಲಿ ಅತ್ಯಂತ ಬಡ ಕುಟುಂಬದಲ್ಲಿ 1883 ಜನವರಿ 6 ರಂದು ಆತ ಹುಟ್ಟಿದನು.
ಆತನ ಕುಟುಂಬದಲ್ಲಿ ಆತನೊಬ್ಬನೇ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸಾಧ್ಯವಾಯಿತು. ಕುಟುಂಬದಲ್ಲಿ ತಾಂಡವವಾಡುತ್ತಿದ್ದ ಬಡತನದಿಂದಾಗಿ ಆತನ ಇಬ್ಬರು ಸಹೋದರಿಯರು ಶಿಕ್ಷಣದಿಂದ ವಂಚಿತರಾಗಿದ್ದರು. ಜೊತೆಗೆ ಮಧ್ಯ ಪೂರ್ವ ರಾಷ್ಟ್ರಗಳಲ್ಲಿನ ಸಂಪ್ರದಾಯಗಳು ಹೆಣ್ಣು ಮಕ್ಕಳಿಗೆ ಶಾಲೆಯಲ್ಲಿ ಕಲಿಯಲು ಅನುಕೂಲಕರವಾಗಿರಲಿಲ್ಲ.
ಅತ್ಯಂತ ಬಡತನ ಸಂಕಟ ನೋವುಗಳ ನಡುವೆ ಬೆಳೆದಿದ್ದ ಖಲೀಲ್ ಗಿಬ್ರಾನ್ ಗೆ ಹೆಣ್ಣು ಮಕ್ಕಳ ತಾಕತ್ತಿನ ಅರಿವಿತ್ತು. ಆತನ ಓರ್ವ ಸಹೋದರಿ, ಸಹೋದರ ಮತ್ತು ತಾಯಿಯ ಮರಣಾನಂತರ ಹಿರಿಯ ಸಹೋದರಿ ಮರಿಯಾನ ಅಂಗಡಿಯೊಂದರಲ್ಲಿ ಬಟ್ಟೆ ಹೊಲಿಯುವ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡಿದಳು. ಆಕೆಯೇ ಗಿಬ್ರಾನ್ ಗೆ ಆಸರೆಯಾಗಿ ನಿಂತಳು.
ಪ್ರೀತಿ, ಶಾಂತಿ ಮತ್ತು ತಿಳುವಳಿಕೆಯ ಮೇಲೆ ಆತನ ನಂಬಿಕೆ ಅಪಾರ… ತಮ್ಮೆಲ್ಲ ಕವನಗಳ ಮೂಲಕ ಮಾನವ ಜನಾಂಗದಲ್ಲಿನ ಮಾನವೀಯ ಮೌಲ್ಯಗಳನ್ನು ವಿವರಿಸಿದಾತನೇ ಖಲೀಲ್ ಗಿಬ್ರಾನ್.
ಆತನ ಮೊತ್ತ ಮೊದಲ ಕೃತಿ ದ ಪ್ರೊಫೆಟ್ 1923ರಲ್ಲಿ ಪ್ರಕಟವಾಗಿ ಅದರ 10 ಮಿಲಿಯ ಪ್ರತಿಗಳು ಮಾರಾಟವಾದವು. ಶೇಕ್ಸಪಿಯರ್ ಮತ್ತು ಲಿಯೋಜಿಯ ನಂತರ ವಿಶ್ವದ ಮೂರನೇ ಅತಿ ದೊಡ್ಡ ಲೇಖಕನಾಗಿ ಹೊರಹೊಮ್ಮಿದ ಆತನ ಕೃತಿಗಳಿಗೆ ಅತ್ಯಂತ ಬೇಡಿಕೆ ಇತ್ತು.
ವಿಶ್ವದಾದ್ಯಂತ ಒಟ್ಟು 108 ಭಾಷೆಗಳಲ್ಲಿ ಅನುವಾದಿಸಲ್ಪಟ್ಟು ಪ್ರಕಟವಾದ ಆತನ ಕೃತಿ ‘ದ ಪ್ರೊಫೆಟ್ ‘ನ ಸಾಲುಗಳನ್ನು ಮದುವೆಯ ಆಮಂತ್ರಣ ಪತ್ರಿಕೆಗಳಲ್ಲಿ, ರಾಜಕೀಯ ಭಾಷಣಗಳಲ್ಲಿ, ಅಂತ್ಯಸಂಸ್ಕಾರಗಳಲ್ಲಿ ಉಚ್ಛರಿಸಲಾಗುತ್ತಿತ್ತು.
ಅಮೆರಿಕದ ಪ್ರೆಸಿಡೆಂಟ್ ಆಗಿದ್ದ ಜಾನ್ ಎಫ್ ಕೆನಡಿ, ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ, ಎಲ್ವಿಸ ಪ್ರೆಸ್ಲಿ, ಜಾನ್ ಲೆನಿನ್ ಮತ್ತು ಡೇವಿಡ್ ಭೋವಿಯಂತಹ ಮಹಾನ್ ವ್ಯಕ್ತಿಗಳು ಆತನ ಕೃತಿಯ ಸಾಲುಗಳನ್ನು ತಮ್ಮ ಭಾಷಣಗಳಲ್ಲಿ ಬಳಸುತ್ತಿದ್ದರು.
ಸಮಾಜದ ಜನರ ಮೌಡ್ಯ, ಬೂಟಾಟಿಕೆ ಮತ್ತು ಲಂಚಗುಳಿತನವನ್ನು ಆತ ಬಹಿರಂಗವಾಗಿ ಖಂಡಿಸುತ್ತಿದ್ದನು. ಆತನ ಚಾಟಿ ಏಟಿನಂತಹ ಮಾತುಗಳು ಸುಳ್ಳಿನ ಮುಖವಾಡವನ್ನು ಕಳಚುತ್ತಿದ್ದವು. ಇದರಿಂದ ಆತನ ವಿರೋಧಿಗಳು ಆತನಿಗೆ ಜೀವ ಬೆದರಿಕೆಯನ್ನು ಒಡ್ಡಿದ್ದರು ಮತ್ತು ಆತನ ಕೃತಿಗಳು ಬೇರಟ್ ಮತ್ತು ಅಮೆರಿಕಗಳಲ್ಲಿ ದಹಿಸಲ್ಪಟ್ಟವು.
ತನ್ನ ತಾಯಿಯ ಕುರಿತಾಗಿ ಖಲೀಲ್ ಹೀಗೆ ಬರೆದಿದ್ದಾನೆ
“ಮಾನವ ಸಮುದಾಯದ ತುಟಿಯ ಮೇಲೆ ಮೂಡುವ ಅತ್ಯಂತ ಸುಂದರವಾದ ಶಬ್ದ ತಾಯಿ ಮತ್ತು ಅತ್ಯಂತ ಸುಂದರವಾದದ್ದು ಅಮ್ಮ ಎಂಬ ಕರುಳಿನ ಕರೆ. ಅತ್ಯಂತ ಸಿಹಿಯಾದ ಮತ್ತು ಕರುಣೆಯಿಂದ ಕೂಡಿದ ಈ ಕರೆ ಹೃದಯದ ಆಳದಿಂದ ಬರುತ್ತದೆ. ಅಮ್ಮ ಎಂಬ ಪದದಲ್ಲಿ ಭರವಸೆ ಮತ್ತು ಪ್ರೀತಿಗಳು ತುಂಬಿವೆ”.
ತಾಯಿಯೇ ನಮಗೆ ಎಲ್ಲವೂ…. ನಮ್ಮ ನೋವಿನಲ್ಲಿ ಸಮಾಧಾನವಾಗಿ, ನಿರಾಶೆಯಲ್ಲಿ ಭರವಸೆಯಾಗಿ, ದೌರ್ಬಲ್ಯದಲ್ಲಿ ಬಲವಾಗಿ ನಿಲ್ಲುವಾಕೆ ತಾಯಿ. ಪ್ರೀತಿ, ಮಮತೆ, ಕರುಣೆ, ಸಹಾನುಭೂತಿ ಮತ್ತು ಕ್ಷಮೆಯ ಮೂರ್ತಿ ತಾಯಿ ಎಂದು ಗಿಬ್ರಾನ್ ಬಣ್ಣಿಸಿದ್ದಾನೆ.
ಹೆಣ್ಣು ಮಕ್ಕಳ ಸ್ವಾತಂತ್ರ್ಯ ಮತ್ತು ಶಿಕ್ಷಣಕ್ಕಾಗಿ ಧ್ವನಿ ಎತ್ತಿದ ಗಿಬ್ರಾನ್ ಅದರಲ್ಲಿ ಭಾಗಶಹ ಯಶಸ್ವಿಯಾದನು.ಅನ್ಯರ ಹಕ್ಕುಗಳನ್ನು ರಕ್ಷಿಸುವುದು ಮಾನವ ಸಮುದಾಯದ ಅತ್ಯಂತ ಮಹತ್ವದ ಮತ್ತು ಸುಂದರವಾದ ಕಾರ್ಯ ಎಂಬುದು ಆತನ ನಂಬಿಕೆಯಾಗಿತ್ತು
ಹೊಸದಾಗಿ ವಲಸೆ ಬರುತ್ತಿದ್ದ ಜನರಿಗೆ ತನ್ನ ಒಂದು ಕವನದಲ್ಲಿ ಆತ ಹೀಗೆ ಬರೆದಿದ್ದಾನೆ
ಅಮೆರಿಕ ಎಂಬ ಬೃಹತ್ ರಾಷ್ಟ್ರಕ್ಕೆ ನೀವೆಲ್ಲರೂ ಹೀಗೆ ಹೇಳುವಿರೆಂದು ನಂಬಿದ್ದೇನೆ… ಇಲ್ಲಿದ್ದೇನೆ ನಾನು, ಓರ್ವ ಯುವಕನಾಗಿ ಒಂದು ಪುಟ್ಟ ಮರವಾಗಿ ನಾನು ಇಲ್ಲಿದ್ದೇನೆ,ನನ್ನ ಬೇರುಗಳನ್ನು ದೂರದ ಲೆಬನಾನಿನ ಗುಡ್ಡಗಳಿಂದ ಕಿತ್ತು ತಂದು ಇಲ್ಲಿ ಊರಿದ್ದೇನೆ. ಹೌದು ಬಲವಾಗಿ ಇಲ್ಲಿ ಊರಲ್ಪಟ್ಟಿದ್ದೇನೆ ಮತ್ತು ನಾನು ಫಲ ಭರಿತವಾಗುತ್ತೇನೆ ಎಂದು ಹೇಳಿದ್ದಾನೆ.
ತನ್ನ ಕೃತಿ ‘ದಿ ಪ್ರೊಫೆಟ್ನ’ಲ್ಲಿ ಆತ ಹೀಗೆ ಬರೆದಿದ್ದಾನೆ
ನಿಮ್ಮ ಸಾಂಗತ್ಯದಲ್ಲಿಯೂ ತುಸು ಅಂತರವಿರಲಿ, ಸ್ವರ್ಗದ ಗಾಳಿಯು ಆ ಅಂತರದಲ್ಲಿ ನೃತ್ಯ ಮಾಡುತ್ತಿರಲಿ. ಒಬ್ಬರನ್ನೊಬ್ಬರು ಪ್ರೀತಿಸಿ ಆದರೆ ಪ್ರೀತಿಯು ಬಂಧನವಾಗದಿರಲಿ, ಎರಡು ದಡಗಳ ನಡುವೆ ಹರಿಯುವ ನದಿಯಂತೆ ನಿಮ್ಮಿಬ್ಬರ ಆತ್ಮಗಳ
ಸಾಂಗತ್ಯವಿರಲಿ, ನಿಮ್ಮಿಬ್ಬರ ಪ್ರೀತಿಯ ಬಟ್ಟಲನ್ನು ಪರಸ್ಪರ ತುಂಬಿಕೊಳ್ಳಿ. ಆದರೆ ಒಂದೇ ಬಟ್ಟಲಿನಿಂದ ಆಸ್ವಾದಿಸಬೇಡಿ. ಒಬ್ಬರು ಮತ್ತೊಬ್ಬರಿಗೆ ನಿಮ್ಮ ರೊಟ್ಟಿಯನ್ನು ಕೊಟ್ಟುಕೊಳ್ಳಿ… ಆದರೆ ಒಂದೇ ರೊಟ್ಟಿಯನ್ನು ಇಬ್ಬರೂ ಹಂಚಿ ತಿನ್ನಬೇಡಿ. ಹಾಡು ಮತ್ತು ಕುಣಿತಗಳಲ್ಲಿ ನಿಮ್ಮನ್ನು ನೀವು ಜೊತೆಯಾಗಿ ತೊಡಗಿಸಿಕೊಂಡು ಸಂತಸಪಡಿ, ಆದರೆ ಅದರ ಜೊತೆಗೆ ಒಂಟಿಯಾಗಿಯೂ ಇರಿ. ಯಾವ ರೀತಿ ತಂತಿ ವಾದ್ಯದ ತಂತಿಗಳು ಜೊತೆಯಾಗಿದ್ದೂ ಬೇರೆಯಾಗಿರುತ್ತವೆ ಮತ್ತು ಮೀಟಿದಾಗ ಒಂದೇ ನಾದವನ್ನು ಹೊರಡಿಸುತ್ತವೆಯೋ ಹಾಗೆ ನೀವು ಇರಿ. ನಿಮ್ಮ ಹೃದಯವನ್ನು ಪರಸ್ಪರ ಕೊಟ್ಟುಕೊಳ್ಳಿ ಆದರೆ ನಿಮ್ಮ ಜೀವನ ನಿಮ್ಮ ಕೈಯಲ್ಲಿರಲಿ. ಒಬ್ಬರಿಗೊಬ್ಬರು ಜೊತೆಯಾಗಿ ನಿಲ್ಲಿರಿ ಆದರೆ ಹತ್ತಿರವಾಗಲ್ಲ… ದೇಗುಲದ ಕಂಬಗಳು ಹೇಗೆ ದೂರವಿದ್ದು ಜೊತೆಯಾಗಿರುತ್ತವೆಯೋ ಹಾಗೆ.
ಓಕ್ ಮತ್ತು ಸೈಪ್ರಸ್ ಮರಗಳು ಪರಸ್ಪರ ನೆರಳಲ್ಲಿ ಹೇಗೆ ಬೆಳೆಯುವುದಿಲ್ಲ. ಅಂತಯೇ ಪತಿ ಪತ್ನಿಯರ ಸಂಬಂಧ ಕೂಡ.
ಇಲ್ಲಿ ಗಿಬ್ರಾನ್ ದಂಪತಿಗಳಿಗೆ, ಸಂಗಾತಿಗಳಿಗೆ ಒಳ್ಳೆಯ ಕಿವಿ ಮಾತನ್ನು ಹೇಳಿದ್ದಾನೆ. ಪರಸ್ಪರರಿಗೆ ಒಂದಾಗಲು ನಮ್ಮ ಆತ್ಮಾಭಿಮಾನವನ್ನು ತೊರೆದು ಅಸ್ತಿತ್ವರಹಿತರಾಗಿರುವುದನ್ನು ಆತ ಒಪ್ಪುವುದಿಲ್ಲ.
ದಾಂಪತ್ಯ ಎನ್ನುವುದು ಕೊಟ್ಟು ತೆಗೆದುಕೊಳ್ಳುವ ಕ್ರಿಯೆ, ಒಬ್ಬರಿನ್ನೊಬ್ಬರಿಗೆ ಪೂರಕವಾಗಿ ಬೆಳೆಯುವ ಮತ್ತು ಬೆಳೆಸಲ್ಪಡುವ ಈ ಕ್ರಿಯೆಯಲ್ಲಿ ಹಂಚಿಕೊಳ್ಳುವುದನ್ನು ಆತ ಒಪ್ಪುವುದಿಲ್ಲ ಎಂಬುದು ಆತನ ಈ ಸಾಲುಗಳಿಂದ ಅರಿವಾಗುತ್ತದೆ.
ಆತನ ಕೃತಿ ದ ಪ್ರೊಫೆಟ್ ನ ಕೆಲ ಪ್ರಮುಖ ಸಾಲುಗಳು
*ಅರ್ಧಂಬರ್ಧ ಜೀವನವನ್ನು ಜೀವಿಸಬೇಡಿ ಮತ್ತು ಅರ್ಧಂಬರ್ಧ ಸಾಯಬೇಡಿ.
* ಮೌನವಾಗಿರುವುದು ನಿಮ್ಮ ಆಯ್ಕೆಯಾದರೆ ಮೌನವಾಗಿರಿ, ಮಾತನಾಡುವುದಾದರೆ ಸಂಪೂರ್ಣವಾಗಿ ನಿಮ್ಮ ಭಾವನೆಗಳನ್ನು ಹೊರಹಾಕಿ.
* ಯಾವುದೇ ಮುಚ್ಚು ಮರೆ ಇಲ್ಲದೆ ಮಾತನಾಡಿ.
* ಯಾವುದನ್ನಾದರೂ ನೀವು ಒಪ್ಪಿಕೊಳ್ಳುವುದಾದರೆ ಅದರ ಬಗ್ಗೆ ನಿಮಗೆ ಸ್ಪಷ್ಟತೆಯಿರಲಿ, ನಿಮ್ಮ ಅಪೂರ್ಣ ಒಪ್ಪಿಗೆ ನಿಮ್ಮ ನಿರಾಕರಣೆಯಲ್ಲಿನ ಅಸ್ಪಷ್ಟತೆಯನ್ನು ತೋರುತ್ತದೆ.
* ಅರ್ಧ ಪರಿಹಾರಗಳಲ್ಲಿ ಅರ್ಧ ಸತ್ಯಗಳಲ್ಲಿ ನಂಬಿಕೆ ಇಡಬೇಡಿ. ಅರ್ಧ ಕನಸುಗಳನ್ನು ಕೂಡ ಕಾಣಬೇಡಿ.
* ಅರೆಭರವಸೆಗಳ ಮೇಲೆ ನಂಬಿಕೆ ಬೇಡ
* ಅರ್ಧ ದಾರಿಯು ನಿಮ್ಮನ್ನೆಲ್ಲೂ ಕೊಂಡೊಯ್ಯದು
ನೀವು ಒಬ್ಬ ಸಂಪೂರ್ಣ ವ್ಯಕ್ತಿಯಾಗಿದ್ದು ಜೀವನವನ್ನು ಅನುಭವಿಸಿ.
ಮಕ್ಕಳ ಕುರಿತಾಗಿಯೂ ಗಿಬ್ರಾನ್ ನಿಮ್ಮ ಮಕ್ಕಳು ನಿಮ್ಮಿಂದ ಬಂದವರೇ ಹೊರತು ನಿಮ್ಮವರಲ್ಲ. ಅವರು ನಿಮ್ಮ ಮನೆಯಲ್ಲಿದ್ದಾರೆಯೇ ಹೊರತು ಅವರ ಮನೆಗಳು ನಿಮ್ಮವಲ್ಲ ಅವರಿಗೆ ಅವರದ್ದೇ ಆದ ಕನಸುಗಳಿವೆ ಆ ಕನಸುಗಳನ್ನು ನೀವು ನಿಮ್ಮ ಕನಸಿನಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದು ಬಹಳ ಮಾರ್ಮಿಕವಾಗಿ ಹೇಳಿದ್ದಾನೆ.
ವರ್ಣಚಿತ್ರಕಾರನಾಗಿ ಪರಿಚಿತನಾದ ಗಿಬ್ರಾನ್ ಮುಂದೆ ಕವಿ, ಕಥೆಗಾರ ಕಾದಂಬರಿ ಮತ್ತು ತತ್ವಜ್ಞಾನಿಯಾಗಿ ಜಗತ್ಪ್ರಸಿದ್ಧನಾದನು. ತನ್ನನ್ನು ಜಗತ್ತಿಗೆ ಪರಿಚಯಿಸಿದ ಹಕ್ಕೇಲಿ ಎಂಬ ಯುವತಿಯನ್ನು ಗಾಢವಾಗಿ ಪ್ರೀತಿಸಿದ್ದ ಗಿಬ್ರಾನ್. ಆದರೆ ಅವರಿಬ್ಬರ ವಿವಾಹಕ್ಕೆ ಹಕ್ಕೇಲಿಯ ಪಾಲಕರು ಒಪ್ಪದ ಕಾರಣ ಗಿಬ್ರಾನ್ ಕೊನೆಯವರೆಗೂ ಅವಿವಾಹಿತನಾಗಿಯೇ ಉಳಿದನು. ಆತನ ಗಾಢ ಪ್ರೀತಿಯ, ತ್ಯಾಗದ ಕುರಿತಾದ ಭಾವಗಳು ಆತನ ಮನಸ್ಸಿನ ಬಿಂಬಗಳೇ ಆಗಿದ್ದು ಆತನನ್ನು ಓರ್ವ ತತ್ವಜ್ಞಾನಿಯಾಗಿಸಿವೆ.
‘ದ ಪ್ರೊಫೆಟ್,’ ದ ಮ್ಯಾಡ್ ಮ್ಯಾನ್ ಮತ್ತು ಬ್ರೋಕನ್ ವಿಂಗ್ ಗಳು ಆತನ ಮುಖ್ಯ ಕೃತಿಗಳು.
ಏಪ್ರಿಲ್ 10 1931 ರಲ್ಲಿ ತನ್ನ 48ನೇ ವಯಸ್ಸಿನಲ್ಲಿ ನ್ಯೂಯಾರ್ಕ್ ನಗರದಲ್ಲಿ ನಿಧನನಾದ ಖಲೀಲ್ ಗಿಬ್ರಾನ್ ಸಮಾಧಿಯು ಇಂದಿನ ಲೆಬನಾನ್ ದೇಶದ ಶರ್ರಿ ಎಂಬ ಸ್ಥಳದಲ್ಲಿ ನಿರ್ಮಿಸಲ್ಪಟ್ಟಿದೆ
ಅತ್ಯಂತ ಬಡತನ, ಅನಾರೋಗ್ಯ, ವಲಸೆ ಬಂದ ಸಾವು ನೋವುಗಳನ್ನು ಎದುರಿಸಿಯೂ ಕೂಡ ಪ್ರಪಂಚ ಮೆಚ್ಚಿದ ಕವಿ ದಾರ್ಶನಿಕನಾದ ಖಲೀಲ್
ಗಿಬ್ರಾನ್ ತನ್ನ ಕೃತಿಗಳ ಮೂಲಕ ಓದುಗರ ಮನದಲ್ಲಿ ಅಜರಾಮರನಾಗಿದ್ದಾನೆ.
ವೀಣಾ ಹೇಮಂತ್ ಗೌಡ ಪಾಟೀಲ್