ಮಹಿಳಾ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
‘ನಿರ್ವಹಣಾ ಸಾಮರ್ಥ್ಯ
ಮತ್ತು ಹೆಣ್ಣು ಮಕ್ಕಳು’
[4:18 pm, 10/08/2024] Veena Hemanth Patil: ಕಳೆದ ಕೆಲ ದಶಕಗಳಿಂದ ಹೆಣ್ಣು ಮಕ್ಕಳನ್ನು ಸೂಪರ್ ವುಮನ್ ಎಂಬಂತೆ ಬಿಂಬಿಸಿ, ಆಕೆ ತ್ಯಾಗಮಯಿ,ವಾತ್ಸಲ್ಯಮಯಿ, ಸ್ನೇಹಮಯಿ, ಕಾರ್ಯಶೀಲೆ, ಸದ್ಗುಣಿ ಏಕಕಾಲಕ್ಕೆ ಮನೆ ಮಕ್ಕಳು ಗಂಡ ಆಫೀಸು ಅತ್ತೆ ಮಾವ ಸಂಬಂಧಿಕರು ಹಬ್ಬ ಹರಿದಿನಗಳು ಎಲ್ಲವನ್ನು ಸಂಭಾಳಿಸಬಲ್ಲ ಸೂಪರ್ ಪವರ್ ಎಂಬ ಬಿರುದು ಬಾವಲಿಗಳಿಂದ ಆಕೆಯನ್ನು ಅಟ್ಟಕ್ಕೇರಿಸಿ ತಮ್ಮ ಕಾರ್ಯ ಸಾಧಿಸಿಕೊಳ್ಳುವ ಮನೆಯವರು, ಸ್ನೇಹಿತರು, ಸಂಬಂಧಿಗಳು ಆಕೆಯನ್ನು ಮನುಷ್ಯಳು ಎಂದು ಮಾತ್ರ ಪರಿಗಣಿಸುವುದಿಲ್ಲ ಎಂಬುದು ಅತ್ಯಂತ ಖೇದಕರ ಸಂಗತಿ.
ಇದರಲ್ಲಿ ಹೆಣ್ಣು ಮಕ್ಕಳದೂ ತಪ್ಪಿದೆ… ಸಂಬಂಧಗಳನ್ನು ಉಳಿಸಿಕೊಳ್ಳಲೆಂದು ಅನಿವಾರ್ಯತೆಗೆ ಕಟ್ಟು ಬಿದ್ದು, ಮತ್ತೆ ಕೆಲವೊಮ್ಮೆ ತಮ್ಮ ಕೈಲಾಗದೆ ಹೋದಾಗಲೂ ಕೂಡ ಬೇರೆಯವರನ್ನು ಮೆಚ್ಚಿಸಲು, ತಮ್ಮ ಆರೋಗ್ಯವನ್ನು ಮನೋದೈಹಿಕ ಸ್ಥಿತಿಗತಿಗಳನ್ನು ಕೂಡ ಕಡೆಗಣಿಸಿ ಕಾರ್ಯನಿರ್ವಹಿಸುವ ಆಕೆ… ಒಂದು ಹಂತದಲ್ಲಿ ತನ್ನ ತಪ್ಪಿನ ಅರಿವಾದರೂ ಹಿಂತಿರುಗಿ ನೋಡಲಾರದಷ್ಟು ಮುಂದೆ ಸಾಗಿ ಹೋಗಿರುತ್ತಾಳೆ. ಅಂತಹ ಸಮಯದಲ್ಲಿ ಸೊ ಕಾಲ್ಡ್ ಸಮಾಜ ಕೊಡುವ ಸೂಪರ್ ಪವರ್ ವುಮನ್ ಎಂಬ ಬಿರುದುಗಳು ಆಕೆಯ ಅಹಂ ಅನ್ನು ತೃಪ್ತಿಪಡಿಸುತ್ತವೆಯೇ ಹೊರತು ಆಕೆಯ ಆತ್ಮವನ್ನಲ್ಲ.
“ಇಟ್ಸ್ ಓಕೆ ಟು ಸೇ ವೆನ್ ಯು ಆರ್ ನಾಟ್ ಓಕೆ”… ಎಂಬ ಮಾತನ್ನು ಇಂತಹ ಹೆಣ್ಣು ಮಕ್ಕಳ ಕರ್ಣ ಪಟಲವನ್ನು ಸೀಳಿ ಮೆದುಳಿಗೆ ನಾಟುವಂತೆ ಜೋರಾಗಿ ಕೂಗಿ ಹೇಳಬೇಕು.
ಅಳುವ ಮಕ್ಕಳಿಗೆ ಹಾಲು ಕುಡಿಸುವುದು ಕಷ್ಟ, ಅಂತದ್ದರಲ್ಲಿ ಅಳದೇ ಇರುವ ಮಕ್ಕಳಿಗೆ!?
ಅಂತೆಯೇ ದನಿಯೆತ್ತಿ ಇಂತಹ ಧೋರಣೆಗಳನ್ನು ಖಂಡಿಸಿ ಮಾತನಾಡುವ ಹೆಣ್ಣು ಮಕ್ಕಳನ್ನು ನಿರ್ಲಕ್ಷದಿಂದ ತಳ್ಳಿ ಬಿಡುವ ಈ ಸಮಾಜ, ಮಾತು ಬಂದರೂ ಮೂಕವಾಗಿರುವ ಹೆಣ್ಣು ಮಕ್ಕಳಿಗೆ
ಮಣೆ ಹಾಕುತ್ತದೆಯೇ? ಖಂಡಿತ ಇಲ್ಲ. ಆದ್ದರಿಂದ ಹೆಣ್ಣು ಮಕ್ಕಳು ತಮ್ಮ ಕಾಳಜಿಯನ್ನು ತಾವೇ ಮಾಡಿಕೊಳ್ಳಬೇಕು, ಕುಟುಂಬದ ಜೊತೆ ಜೊತೆಗೆ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಕೂಡ ನೋಡಿಕೊಳ್ಳಬೇಕು.
ಇಲ್ಲಿ ಹೆಣ್ಣು ಮಕ್ಕಳಿಗೆ ಎರಡು ಆಯ್ಕೆಗಳಿವೆ. ಕೆಲ ವಿಷಯಗಳು ಅವರ ನಿಯಂತ್ರಣದಲ್ಲಿದ್ದರೆ , ಮತ್ತೆ ಕೆಲ ವಿಷಯಗಳನ್ನು ಅದೆಷ್ಟೇ ಪ್ರಯತ್ನ ಪಟ್ಟರೂ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ.
ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುವ ಆಯ್ಕೆಗಳು
* ನಿಮ್ಮ ವೈಯುಕ್ತಿಕ ಹಿತಾಸಕ್ತಿಗೆ ಧಕ್ಕೆ ಬಾರದಂತೆ ಒಂದು ಚೌಕಟ್ಟನ್ನು ರೂಪಿಸಿಕೊಂಡು, ಅಲ್ಲಿ ನಿಮಗೆ ನೀವೇ ಸಮಯಾವಕಾಶವನ್ನು ಕೊಟ್ಟುಕೊಂಡು ನಿಮ್ಮನ್ನು ನೀವು ನಿಮಗಿಷ್ಟವಾದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.
* ಬೇರೆಯವರ ಅಭಿಪ್ರಾಯಗಳು ನಿಮಗೆ ಸರಿ ಬರದೆ ಹೋದಲ್ಲಿ ನೀವು ಅದನ್ನು ನಯವಾಗಿ ಆದರೆ ಅಷ್ಟೇ ದೃಢವಾಗಿ ತಿರಸ್ಕರಿಸಬಲ್ಲಿರಿ .
* ನಿಮ್ಮ ವೈಯುಕ್ತಿಕ ಏಳಿಗೆಗಾಗಿ ನೀವು ಸಮಯವನ್ನು ಕೊಟ್ಟುಕೊಳ್ಳಲೇಬೇಕು
.
* ದಿನದ ಕೆಲ ಗಂಟೆಗಳು ನಿಮಗಾಗಿ ನೀವು ಮೀಸಲಿಟ್ಟುಕೊಳ್ಳಲೇಬೇಕು
* ಬೇರೆಯವರು ಹೇಳುವ ನಿಮ್ಮ ಕುರಿತಾದ ಅಭಿಪ್ರಾಯಗಳಿಗೆ ನೀವು ವಿಪರೀತವಾಗಿ ಪ್ರತಿಕ್ರಿಯಸಬಾರದು,
* ನಿಮ್ಮ ಜೀವನದಲ್ಲಿ ಬರುವ ಏರಿಳಿತದ ಸವಾಲುಗಳನ್ನು ಮತ್ತು ಒತ್ತಡಗಳನ್ನು ನಿರ್ವಹಿಸಲು ಸದಾ ಸಿದ್ದರಾಗಿರಿ
ಮೇಲಿನ ಎಲ್ಲ ವಿಷಯಗಳು ನಿಮ್ಮ ನಿಯಂತ್ರಣದಲ್ಲಿ ಇರುತ್ತವೆ, ಆದರೆ ಮತ್ತೆ ಕೆಲ ವಿಷಯಗಳು ನಿಮ್ಮ ನಿಯಂತ್ರಣ ಮೀರಿ ಘಟಿಸುತ್ತವೆ ಅವುಗಳಿಗೆ ಚಿಂತಿಸಿ ಫಲವಿಲ್ಲ.
* ನಿಮ್ಮ ಸುತ್ತಣ ಜನ ಹೇಗೆ ವರ್ತಿಸುತ್ತಾರೆ ಎಂಬುದು ನಿಮ್ಮ ನಿಯಂತ್ರಣದಲ್ಲಿ ಇರದ ವಿಷಯ… ಆದ್ದರಿಂದ ಬೇರೆಯವರ ವರ್ತನೆಯ ಕುರಿತು ಚಿಂತಿಸದಿರಿ.
* ನಿಮ್ಮ ಕುರಿತಾಗಿ ಬೇರೆಯವರ ಅಭಿಪ್ರಾಯ ಅವರದು ಮಾತ್ರ…ನಿಮ್ಮದಲ್ಲ ನೋ ಪ್ರಾಬ್ಲಮ್.
* ಬೇರೆಯವರ ನಂಬಿಕೆ ಮತ್ತು ಗ್ರಹಿಕೆಗಳು ಅವರವು ಮಾತ್ರ… ಅವು ನಿಮ್ಮ ನಿಯಂತ್ರಣದಲ್ಲಿ ಇಲ್ಲ.
ಚಿಂತಿ ಮಾಡಲಿ ಬೇಡ, ಛಿ! ಹುಚ್ಚಿ ಹಡೆದವ್ವ
ಚಿಂತ್ಯಾಗ ಕಾಯ ಅಳಿತಾದ ಎಂದು ನಮ್ಮ ಹಿರಿಯರು ಹೇಳಿರುವುದು ಈ ಕಾರಣಕ್ಕೆ.
ಚಿಂತೆ ಮತ್ತು ಚಿತೆಗೆ ಇರುವ ವ್ಯತ್ಯಾಸ ಕೇವಲ ಒಂದು ಸೊನ್ನೆಯದ್ದು,
ಚಿಂತೆ ಸಜೀವ ಮನುಷ್ಯನನ್ನು ಸುಟ್ಟರೆ, ಚಿತೆ
ನಿರ್ಜೀವ ವ್ಯಕ್ತಿಯನ್ನು ಸುಡುತ್ತದೆ.
ಸಾಧ್ಯವಾದರೆ ನಿಮ್ಮ ನಿರ್ವಹಣಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ…ಅದೂ ನಿಮಗೆ ಇಷ್ಟವಿದ್ದಲ್ಲಿ, ಅವಶ್ಯಕತೆ ಎನಿಸಿದಲ್ಲಿ ಮಾತ್ರ. ಎಲ್ಲರಿಗೂ ಕೊಟ್ಟಿರುವಂತೆ ಆ ಭಗವಂತ ನಿಮಗೂ ಒಂದು ಜನ್ಮವನ್ನು ನೀಡಿದ್ದಾನೆ… ಸರಿಯಾಗಿ ಅವಕಾಶಗಳನ್ನು ಉಪಯೋಗಿಸಿಕೊಂಡು ನೀವೂ ಬೆಳೆಯಿರಿ ಮತ್ತು ಮತ್ತೊಬ್ಬರನ್ನು ಬೆಳೆಸಿರಿ.
ವೀಣಾ ಹೇಮಂತ್ ಗೌಡ ಪಾಟೀಲ್