ಕಾವ್ಯ ಸಂಗಾತಿ
‘ಮತ್ತೆ ಓಣಂ ಹಬ್ಬ ಬಂದಿದೆ’
ಡಾ.ಸುಮತಿ ಪಿ ಕಾರ್ಕಳ.
ನಗರದ ಗಾಳಿ ಸೋಕದ ದೂರದ ಹಳ್ಳಿಯಲ್ಲಿ ರಾಘವನ್ ನ ಅವಿಭಕ್ತ ಕುಟುಂಬವು ವಿಶಾಲವಾದ ದೊಡ್ಡ ಮನೆಯಲ್ಲಿ ನೆಲೆಸಿತ್ತು.ಮನೆಯ ಸದಸ್ಯರು ಎಲ್ಲೇ ಇದ್ದರೂ ಓಣಂ ಹಬ್ಬಕ್ಕೆ ಮನೆ ಸೇರುತ್ತಿದ್ದರು.ಮತ್ತೆ ಅದೇಕೊ ವೈಮನಸ್ಸು ಉಂಟಾಗಿ ಮನೆಯ ಗಂಡು ಮಕ್ಕಳಾದ ಅಚ್ಯುತನ್,ಮಹೇಂದ್ರನ್,ಮುಳಿಚ್ಚನ್ ಎಲ್ಲರೂ ಬೇರ್ಪಟ್ಟು ಮನೆ ಬಿಟ್ಟು ಹೋಗಿದ್ದರಿಂದ,ಓಣಂ ಹಬ್ಬದ ಆಚರಣೆ ರಾಘವನ್ ದಂಪತಿಗೆ ಯಾವುದೇ ಸಂತಸ ತರುತ್ತಿರಲಿಲ್ಲ. ಮಗಳು ಶ್ರೀಜಳು ಮದುವೆಯಾಗಿ ಗಂಡನ ಮನೆ ಸೇರಿದವಳು ಆಗಾಗ ತವರಿಗೆ ಬಂದು ಹೋಗುತ್ತಿದ್ದಳು.ಇತ್ತೀಚ್ಚೆಗೆ ಅವಳು ತೀರಿಕೊಂಡಿದ್ದರಿಂದ,ಅದನ್ನು ಅರಗಿಸಿಕೊಳ್ಳಲಾಗದ ರಾಘವನ್ ಇಹಲೋಕ ತ್ಯಜಿಸಿದ.
ರಾಘವನ್ ನ ಹೆಂಡತಿ ಸೋಸಮ್ಮ ವಿಶಾಲವಾದ ದೊಡ್ಡದಾದ ಮನೆಗೆ ಒಬ್ಬಳೇ ಆದಳು.. ಮನೆಯ ಎದುರಿನ ಜಗಲಿಯಲ್ಲಿ ಸೋಸಮ್ಮ ಹಾಗೂ ಮಗಳ ಸಣ್ಣ ಮಗ ಮೋಹನ್ ಕುಳಿತು ಮಾತುಕತೆ ಆಡುತ್ತಿದ್ದರು.ಸೋಸಮ್ಮನ ಮನಸ್ಸು ಐವತ್ತು ಅರವತ್ತು ವರ್ಷಗಳ ಹಿಂದೆ ಹೋಯಿತು.ಆ ದಿನಗಳಲ್ಲಿ ಸಂಜೆಯ ತಂಪುಗಾಳಿಗೆ ಮೈಯೊಡ್ಡಿ ಮಕ್ಕಳು,ಮೊಮ್ಮಕ್ಕಳ ಜೊತೆ ಹರಟೆ ಮಾಡುತ್ತಿದ್ದದ್ದು ನೆನಪಾಗಿ ಕಂಬನಿ ತುಂಬಿ ಕೆನ್ನೆಯ ಮೇಲೆ ಇಳಿಯಲಾರಂಭಿಸಿದಾಗ,ಮೊಮ್ಮಗ “ಅಜ್ಜಿ ….ನೀನು ಅಳುತ್ತಿದ್ದಿಯಾ? ಏನಾಯಿತು ಅಜ್ಜಿ ?ಎಂದಾಗ ಸೋಸಮ್ಮ ಸಾವರಿಸಿಕೊಂಡು ಪುಟ್ಟ ಹಿಂದೆ ಈ ಮನೆ ಹೇಗಿತ್ತು ಗೊತ್ತಾ……ಎನ್ನುವಷ್ಟರಲ್ಲಿ ಮೋಹನ್”ಬಿಡಿಅಜ್ಜಿ…ನೀನೊಬ್ಬಳೇ ಅಂತ ನಾನು ಅಣ್ಣ,ಅಕ್ಕ ಅಪ್ಪ ಬಂದು ಇಲ್ಲೇ ಇದ್ದಿವಲ್ಲಾ ಅಜ್ಜಿ.. ನಾಳೆ ಬೇರೆ ಮೂರು ಜನ ಮಾವಂದಿರು ,ಅತ್ತೆಯಂದಿರು,ಮಕ್ಕಳು ಎಲ್ಲಾ ಬರ್ತಾ ಇದ್ದಾರೆ ಅಜ್ಜಿ …ಎಂದಾಗ ಸೋಸಮ್ಮನಿಗೆ ಮತ್ತೆ ಆಸೆ ಚಿಗುರಿತು.ಮಕ್ಕಳೆಲ್ಲಾ ಒಟ್ಟು ಸೇರ್ತಾರಲ್ಲ.ಹಳೆಯ ಕಾಲದ ಈ ಮನೆ ಮೊದಲಿನ ಕಳೆಯನ್ನು ಪಡೆಯಬೇಕು. ಮತ್ತೆ ಮನೆಯ ಜಂತಿ ತೋಳುಗಳಿಗೆ ,ಗೋಡೆಗಳಿಗೆ ಬಣ್ಣ ಬಳಿದು ಅರಮನೆಯಂತಾಗಬೇಕು .ಮತ್ತೆ ಎಲ್ಲರೂ ಸೇರಿ ಪ್ರೀತಿಯಿಂದ ಓಣಂ ಹಬ್ಬವನ್ನು ಆಚರಿಸಬೇಕು ಎಂದೆಲ್ಲಾ ಆಲೋಚಿಸುತ್ತಿದ್ದವಳಿಗೆ ಅಳಿಯ ಶಂಕರನ್ ಪೂಜೆಗೆ ಕರೆದಾಗ ವಾಸ್ತವಕ್ಕೆ ಬಂದಳು.
ಓಣಂ ಹಬ್ಬದ ಮೊದಲಿನ ರಾತ್ರಿಯಾಗಿದ್ದರಿಂದ ಶಂಕರನ್ ನ ಮಗಳು ಪೂಜಾ ಪೂಕಳಂ ಹಾಕುತ್ತಿದ್ದಳು. ಸಹೋದರ ಚಂದ್ರನ್ ತಂಗಿಗೆ ಸಹಾಯ ಮಾಡುತ್ತಿದ್ದ.ಸೋಸಮ್ಮ ಅದನ್ನು ಕಂಡು ಮೊಮ್ಮಗಳನ್ನು ಹೊಗಳುತ್ತ ,ರಾತ್ರಿ ಕಳೆದು ಬೆಳಗಾಗುವುದನ್ನೇ ಕನಸು ಕಾಣುತ್ತಿದ್ದಳು.ಅದುವರೆಗೆ ನಡೆದಿದ್ದೆಲ್ಲ ಕೆಟ್ಟ ಕನಸೆಂದು ತಿಳಿದು, ಮರುದಿನ ಎಲ್ಲರೂ ಜೊತೆ ಸೇರಿ ಓಣಂ ಆಚರಿಸುವ ಕನಸು ಕಾಣುತ್ತಿದ್ದವಳಿಗೆ ಬೆಳಗಾದದ್ದೇ ತಿಳಿಯಲಿಲ್ಲ. ಅವಸರವಸರವಾಗಿ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ, ಮನೆಯ ಕೆಲಸ ಮಾಡತೊಡಗಿದಳು.ಮೊಮ್ಮಕ್ಕಳು ಅಜ್ಜಿಗೆ ನೆರವಾದರು.ಆಳುಗಳನ್ನು ಕರೆದು ಅಂಗಳದಲ್ಲೇ ಇದ್ದ ತೆಂಗಿನ ಕಾಯಿಗಳನ್ನು ಸಂಗ್ರಹಣಾ ಕೋಣೆಗೆ ಸಾಗಿಸಿದರು.ಜನವಾಸವಿಲ್ಲದೆ ಪಾಳು ಬಿದ್ದಂತಿರುವ ಮನೆಯ ಕಸ ಗುಡಿಸಿ, ಧೂಳು ಹೊಡೆಸಿದರು.ಸುಣ್ಣ ಬಣ್ಣವಿಲ್ಲದಿದ್ದರೂ ಮನೆ ತೊರೆದು ಹೋಗಿದ್ದವರೆಲ್ಲ ಮತ್ತೆ ಮನೆ ಸೇರಿ ಓಣಂ ಹಬ್ಬದ ಆಚರಣೆಯ ಕ್ಷಣಕ್ಕಾಗಿ ಕಾಯುತ್ತಿದ್ದರು.
ಡಾ.ಸುಮತಿ ಪಿ ಕಾರ್ಕಳ