‘ಬದುಕು ಬದಲಿಸಬಹುದು’ ಸಣ್ಣಕಥೆ-ವೀಣಾ ಹೇಮಂತ್ ಗೌಡ ಪಾಟೀಲ್

 ಇದರ ಜೊತೆಗೆ ತಂದೆ ವಿಪರೀತ ಶಿಸ್ತಿನ ಮನುಷ್ಯ… ಮಗಳನ್ನು ಒಬ್ಬಳೇ ಎಲ್ಲಿಯೂ ಕಳುಹಿಸುತ್ತಿರಲಿಲ್ಲ… ಯಾವಾಗಲೂ ಬೆಂಗಾವಲಾಗಿ ಆಕೆಯ ಅಣ್ಣಂದಿರಲ್ಲಿ ಯಾರಾದರೂ ಒಬ್ಬರು ಇರಲೇಬೇಕಿತ್ತು. ಮನೆಯ ಪ್ರತಿಯೊಂದು ಕಾರ್ಯವು ಆತನ ಆಣತಿಯಂತೆಯೇ ನಡೆಯಬೇಕಿತ್ತು. ಪುಟ್ಟ ಹುಡುಗಿಯಾದ ಆಕೆಯ ಪಾಲಿಗೆ ಈ ಎಲ್ಲ ಕ್ರಿಯೆಗಳು ಉಸಿರುಗಟ್ಟಿಸುವಂತೆ ತೋರುತ್ತಿತ್ತು.

 ಮುಂದೆ ಪಿಯುಸಿ ಮುಗಿಸಿದ ಆಕೆ ತಾನು ಇಷ್ಟಪಟ್ಟ ಸೋದರತ್ತೆಯ ಮಗನನ್ನು ಮದುವೆಯಾಗಲು ಕೇಳಿದಾಗ ಅಪ್ಪ ಅರಮನೆಸ್ಸಿನಿಂದಲೇ ಒಪ್ಪಿ ಮದುವೆ ಮಾಡಿಕೊಟ್ಟರು. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುವಾಗ ನೌಕರಿಯನ್ನು ಕಳೆದುಕೊಂಡ ಆಕೆಯ ಪತಿ ಬೇರೆ ಉದ್ಯೋಗಕ್ಕಾಗಿ ಹಲವೆಡೆ ತಿರುಗಿದರೂ ಸಿಗದೇ ಹೋದಾಗ ನಿರಾಶನಾಗಿ ಬಿಟ್ಟ. ಜೊತೆಗೆ ಆತನ ಆರೋಗ್ಯವು ಕೂಡ ಹದಗೆಟ್ಟಿತು.ಬೆಳೆಯುತ್ತಿರುವ ಸಂಸಾರ ಎರಡೆರಡು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ಆಕೆ ಮನೆಗೆ ಹತ್ತಿರದಲ್ಲಿ ಇರುವ ಶಾಲೆಯಲ್ಲಿ ಸಂಗೀತ ಪಾಠ ಹೇಳಿಕೊಡಲು ಶಿಕ್ಷಕಿಯಾಗಿ ನೇಮಕವಾದಳು.
 ಅಷ್ಟಾಗಿಯೂ ಹಣದ ತಾಪತ್ರಯ ಕಾಡುತ್ತಲೇ ಇತ್ತು.ಇದರ ಜೊತೆಗೆ ಮತ್ತೊಂದು ಗಂಡು ಮಗುವನ್ನು ಆಕೆ ಹೆತ್ತಿದ್ದಳು.

 ಮುಂದಿನ ಎರಡು ವರ್ಷಗಳಲ್ಲಿ ಆಕೆಗೆ ದೊಡ್ಡ ಸಂಸ್ಥೆಯೊಂದರಲ್ಲಿ ಸಂಗೀತ ಶಿಕ್ಷಕಿಯಾಗಿ ಕೆಲಸ ದೊರೆತುದಲ್ಲದೆ, ಆಕೆಯ ಮಕ್ಕಳಿಗೆ ಅಲ್ಲಿ ಉಚಿತ ವಿದ್ಯಾಭ್ಯಾಸದ ಅವಕಾಶ ಕೂಡ ದೊರೆತದ್ದು ಆಕೆಗೆ ತುಸು ನೆಮ್ಮದಿಯನ್ನು ಉಂಟು ಮಾಡಿತು. ಮನೆಯ ಹದಗೆಟ್ಟ ಆರ್ಥಿಕ ಪರಿಸ್ಥಿತಿ, ಅನಾರೋಗ್ಯದಿಂದ ಬಳಲುತ್ತಿದ್ದ ಅತ್ತೆ ಮತ್ತು ಪತಿ, ಬೆಳೆಯುತ್ತಿರುವ ಹೆಣ್ಣು ಮಕ್ಕಳು ಎಷ್ಟೋ ಬಾರಿ ಆಕೆಯಲ್ಲಿ ಬದುಕಿನ ಕುರಿತು ನಿರಾಶೆಯನ್ನು ಉಂಟುಮಾಡುತ್ತಿದ್ದವು.

 ತಾನು ಕೆಲಸ ಮಾಡುವ ಕಡೆ ಒಳ್ಳೆಯ ಹೆಸರನ್ನು ಸಂಪಾದಿಸಿದ ಆಕೆ ತೀರಾ ಅನಿವಾರ್ಯವಾದಾಗ ತನಗಿಂತ ತುಸು ದೊಡ್ಡವರಾದ ಸ್ನೇಹಿತೆಯೊಬ್ಬರಿಂದ ಎರವಲು ತಂದ ಹಣದಿಂದ ಮನೆಗೆ ಬೇಕಾಗುವ ದಿನಸಿ ಮತ್ತು ತರಕಾರಿಗಳನ್ನು ತಂದು ಮನೆಯ ಖರ್ಚು ವೆಚ್ಚಗಳನ್ನು ಸರಿದೂಗಿಸುತ್ತಿದ್ದಳು. ಮತ್ತೆ ತನ್ನ ಅಕೌಂಟಿಗೆ ತನ್ನ ಸಂಬಳ ಬಂದ ದಿನವೇ ಸ್ನೇಹಿತೆಯ ಮನೆಗೆ ಹೋಗಿ ಆಕೆಯ ಹಣವನ್ನು ಮರಳಿಸಿ ಆಕೆಯ ಜೊತೆ ಹರಟೆ ಹೊಡೆದು ತಿಂಡಿ ತಿಂದು ಚಹಾ ಕುಡಿದು ಬರುತ್ತಿದ್ದಳು. ಸದಾ ತನಗೆ ಬೆಂಬಲವಾಗಿ ನಿಲ್ಲುತ್ತಿದ್ದ ಈ ಅಕ್ಕನ ಜೊತೆ ತನ್ನ ಮನದ ಎಲ್ಲ ದುಗುಡವನ್ನು ಹಂಚಿಕೊಂಡು ಹಗುರಾಗುತ್ತಿದ್ದಳು ಆಕೆ.

 ಆಗಾಗ ಅಲ್ಲಲ್ಲಿ ಸಂಗೀತದ ಕಾರ್ಯಕ್ರಮಗಳನ್ನು ಕೊಡುವ ಪ್ರಸಂಗ ಬಂದಾಗ ತಾನು ಮತ್ತು ತನ್ನ ಮಕ್ಕಳು ಹಾಡುವಾಗ ತಬಲಾ ಬಾರಿಸಲು  ತನ್ನ ತಂದೆ ಇಲ್ಲವೇ ಸಹೋದರರನ್ನು ಕರೆಯುತ್ತಿದ್ದ ಆಕೆ ತನಗೆ ದೊರೆಯುತ್ತಿದ್ದ ಪುಟ್ಟ ಸಂಭಾವನೆಯಲ್ಲಿ ಎಷ್ಟೋ ಬಾರಿ ಅವರಿಗೆ ಮುಕ್ಕಾಲು ಭಾಗ ಕೊಟ್ಟು ಕಳುಹಿಸುವ ಪರಿಸ್ಥಿತಿ ಆಕೆಯದು.
 ನಿವೃತ್ತ ನೌಕರರಾದ ಆಕೆಯ ತಂದೆ ಆಕೆಗೆ ಒಂದು  ಸ್ಕೂಟರ್ ಕೊಡಿಸಿದ್ದು ಅದು ಆಕೆಯ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಇನ್ನಷ್ಟು ಅನುಕೂಲ ಒದಗಿಸಿ ಕೊಟ್ಟಿತು.

 ಸುತ್ತ ಹಳ್ಳಿಗಳಲ್ಲಿ ಶ್ರಾವಣ ಮಾಸದಲ್ಲಿ ತಿಂಗಳ ಮತ್ತು ದಸರೆಯ ದಿನಗಳಲ್ಲಿ ಹತ್ತು ದಿನಗಳ ಪರ್ಯಂತ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಅದು ಆಕೆಗೆ ತುಸು ಹೆಚ್ಚಿನ ದುಡಿಮೆಗೆ ಅವಕಾಶ ಮಾಡಿಕೊಡುತ್ತಿತ್ತು.

 ಊರಿನಲ್ಲಿ ಯಾವುದೇ ಸರಕಾರಿ ಅರೆ ಸರಕಾರಿ ಖಾಸಗಿ ಕಾರ್ಯಕ್ರಮಗಳಿಗೆ ವಿವಿಧ ಮಕ್ಕಳಿಗೆ, ಹೆಣ್ಣು ಮಕ್ಕಳಿಗೆ  ಹಾಡುಗಳನ್ನು ಕಲಿಸಲು ಈಕೆಯ ಬೇಕಾಗಿತ್ತು. ಹಾಡುಗಳಿಗೆ ತಾನೇ ಹಾರ್ಮೋನಿಯಂ ನುಡಿಸುತ್ತಾ ಎಲ್ಲರಿಗೂ ಹಾಡು ಕಲಿಸಿಕೊಡುವುದಕ್ಕೆ ಆಕೆಗೆ ದೊರೆಯುತ್ತಿದ್ದದ್ದು ಪುಡಿಗಾಸು ಮಾತ್ರ. ಆದರೂ ಆಕೆ ತನ್ನ ಶ್ರದ್ಧೆಯಲ್ಲಿ ಒಂದಿನಿಂತು ವ್ಯತ್ಯಾಸ ಮಾಡಲಿಲ್ಲ, ಇಷ್ಟಾದರೂ ಅವಕಾಶ ದೊರೆಯುತ್ತದೆಯಲ್ಲ ಎಂಬ ಸಮಾಧಾನ ಆಕೆಯದು.
 ತನ್ನ ಶಾಲೆಯ ಮಕ್ಕಳೊಂದಿಗೆ ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ವಚನಗಳನ್ನು ರಾಗಬದ್ಧವಾಗಿ ಹಾಡುವ ಮೂಲಕ ಕಾರ್ಯಕ್ರಮಗಳನ್ನು ಆಕೆ ನೀಡಿದಳು.

 ಆಕೆ ತನ್ನ ಮಕ್ಕಳನ್ನು ಅತ್ಯಂತ ಶಿಸ್ತಿನಿಂದ ಬೆಳೆಸುತ್ತಿದ್ದಾಳೆ. ಎಲ್ಲ ಗೃಹ ಕೃತ್ಯಗಳನ್ನು ಮಾಡಿಕೊಂಡು ವಿದ್ಯೆಯನ್ನು ಮುಂದುವರೆಸುತ್ತಿರುವ ಮಕ್ಕಳು ಹಾಡು ನೃತ್ಯಗಳಲ್ಲಿ ನಿಷ್ಣಾತರು.
 ಓರ್ವ ಮಗಳು ತಾಯಿಯಂತೆ ಸಂಗೀತದಲ್ಲಿ ಆಸಕ್ತಿಯನ್ನು ಹೊಂದಿದ್ದು ಆಕೆಯನ್ನು ಚೆನ್ನಾಗಿ ತರಬೇತಿ ನೀಡಿ ಸ್ಪರ್ಧೆಗಳಿಗೆ ತಯಾರು ಮಾಡಿದ್ದಾಳೆ ಆಕೆಯ ಅಮ್ಮ. ಇನ್ನೊಬ್ಬ ಮಗಳು ತನ್ನ ತಾಯಿ ಮತ್ತು ಸಹೋದರಿಗೆ ಬೆಂಬಲವಾಗಿ ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿಕೊಂಡು ತಾನು ಕೂಡ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾಳೆ.

 ಇದೇ ಸಮಯದಲ್ಲಿ ಆ ಊರಿನಲ್ಲಿ ಪ್ರಾರಂಭವಾದ ಕರೋಕೆ ಸಂಸ್ಥೆಯ ಮಾಲೀಕರು ಮತ್ತು ಅವರ ಪತ್ನಿಯ ಸಹಾಯದಿಂದ ಆಕೆ ತನ್ನ ಮಗಳನ್ನು ಹೆಚ್ಚು ಹೆಚ್ಚು ತರಬೇತಿ ಗಳಿಸಲು ಆ ಕರೋಕೆಯಲ್ಲಿ ಆಕೆಗೆ ಉಚಿತವಾಗಿ ಹಾಡಲು ಅವಕಾಶ ನೀಡಲಾಯಿತು. ಸಂಸ್ಥೆಯ ವತಿಯಿಂದ ಹಲವಾರು ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿದ ಆಕೆಯ ಮಗಳಿಗೆ ಪ್ರಥಮ ಇಲ್ಲವೇ ದ್ವಿತೀಯ ಬಹುಮಾನ ಬಹುಮಾನಗಳು ಕಟ್ಟಿಟ್ಟ ಬುತ್ತಿಯಾಗಿದ್ದವು. ಉತ್ತರ ಕರ್ನಾಟಕದಲ್ಲಿ ಮನೆಮಾತಾದ ಆಕೆಯ ಮಗಳ ಯಶಸ್ಸು ಮುಂದೆ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಆಕೆ ಆಯ್ಕೆಯಾಗುವಲ್ಲಿ ಅನುಕೂಲವಾಯಿತು.

  ದಿಗ್ಗಜ ಗಾಯಕರ, ನುರಿತ ಸಂಗೀತಜ್ಞರ ತಿದ್ದಿ ತೀಡುವಿಕೆಯಲ್ಲಿ ಮತ್ತಷ್ಟು ಪರಿಣತಿಯನ್ನು ಗಳಿಸಿದ ಆಕೆಯ ಮಗಳು ಸ್ಪರ್ಧೆಯ  ಅಂತಿಮ ಹಂತಗಳನ್ನು ತಲುಪಿದ್ದಳು.

 ಕಾರ್ಯಕ್ರಮ ಒಂದರಲ್ಲಿ ಆಕೆಯ ಪತಿಯ ಕುರಿತು ಮಗಳು ಹೇಳಿದ ಮಾತುಗಳನ್ನು ವೀಕ್ಷಿಸಿದ ಔಷಧ ತಯಾರಿಕಾ ಕಂಪನಿಯೊಂದು ಆಕೆಯ ಪತಿಯ ಯೋಗ ಕ್ಷೇಮದ ಹೊಣೆಯನ್ನು ಹೊತ್ತುಕೊಂಡಿದ್ದು ಇದೀಗ ಆಕೆಯ ಪತಿಯ ಆರೋಗ್ಯವು ಕೂಡ ಸುಧಾರಿಸಿದೆ.

 ಚಿಕ್ಕಂದಿನಲ್ಲಿ  ನನ್ನ ತಂದೆ ನನ್ನನ್ನು ಒತ್ತಾಯದಿಂದ ನಸುಕಿನಲ್ಲಿ ಎಬ್ಬಿಸಿ  ಕೂರಿಸಿ ಹೇಳಿಕೊಟ್ಟ ಸಂಗೀತ ಪಾಠ ನನ್ನ ಕೈ ಹಿಡಿದಿದೆ. ಅದುವೇ ನನಗೆ ಬದುಕು ನಡೆಸಲು ಸಹಕಾರಿಯಾಗಿದೆ. ಅದುವೇ ನನ್ನ ಸಂಪಾದನೆಯ ಹಾದಿಯಾಗಿದೆ ಎಂದು ಇದೀಗ ಆಕೆ ತಂದೆಯನ್ನು ಕೃತಜ್ಞತೆಯಿಂದ ನೆನೆಯುತ್ತಾಳೆ.


Leave a Reply

Back To Top