ಕಾವ್ಯ ಸಂಗಾತಿ
ಪಿ.ವೆಂಕಟಾಚಲಯ್ಯ
“ಎಳೆಯ ವಯಸ್ಸಿನ ಒಂದು ಪ್ರಸಂಗ.(An Ode)”
ತಪ್ಪು ಮಾಡಿದವನು ಶಿಕ್ಷಿಸಲ್ಪಡುವುದು ಸಹಜ ಧರ್ಮ.
ತಪ್ಪು ಮಾಡದವನು ಶಿಕ್ಷಿಸಲ್ಪಡುವುದು ಅದ್ಯಾವ ಧರ್ಮ?
ಪ್ರೌಢಶಾಲೆಯ ಮೊದಲನೆ ವರ್ಷದ ಕಲಿಕೆಯ,
ಸಂದರ್ಭದಲಿ ನಡೆದೊಂದು ದೃಷ್ಟಾಂತವನು,
ವೃತ್ತಾಂತವಾಗಿ, ಮನಮಿಡಿಯೆ ನಾ ಹೇಳುವೆ.
ತಪ್ಪೊ,ಒಪ್ಪೊ, ನಿರ್ಧಾರವನು, ಓದುಗರಿಗೆ ಬಿಡುವೆ.
ಶಾಲೆಯ ಹಿಂದಿ ಪಂಡಿತರೆಂದರೆ ಶಿಕ್ಷಣಾರ್ಥಿಗಳಲ್ಲಿ,
ಮಡುಗಟ್ಟಿದ ಭಯವಿರುವುದೆರಡು ಕಾರಣಗಳಲ್ಲಿ.
ಹಿಂದಿ ಕಲಿಕೆಯಲ್ಲಿನ
ಕಠಿಣತೆ,ಪಂಡಿತರ ಮುಂಗೋಪ.
ಆ ಮುಂಗೋಪದಲಿ ನೀಡುವ ಶಿಕ್ಷೆಯ ಪರಿತಾಪ.
ಬಲಗೈಯ ಮುಂಬೆರಳುಗಳನು ಮಡಿಸಿ,
ಹಿಂಬದಿಯ ಕೀಳುಮಣಿಗಳನು ಬಿಗಿಗೊಳಿಸಿ,
ತಲೆಯಮೇಲೆ ಪಟಪಟನೆ ಬಡಿಯುವ,
ಎಡಗೈಯ್ಯಲ್ಲಿರುವ ಸಪೋರ ಕೋಲಿನಿಂದ,
ಎರಡೂ ಅಂಗೈ ಮೇಲೂ ಬಾರಿಸುವ.
ಇದು ಪಂಡಿತರು ನೀಡುವ ಶಿಕ್ಷೆಯ ವಿಧಾನ.
ಎಲ್ಲ ಶಿಕ್ಷಣಾರ್ಥಿಗಳನುಭವಿಸಿದ”ಶಿಕ್ಷಾದಾನ”
.ಪಂಡಿತರಿಗೆ ಬಲಗಾಲೊಂದು ಕುಂಟು.
ಹುಟ್ಟಿನಿಂದಲೆ ಬಂದಿರಬಹುದಾದರ ನಂಟು.
ಬಿಳಿಯ ಕಚ್ಚೆ ಪಂಚೆ, ಜುಬ್ಬವನುಟ್ಟು,
ನಿರಾಡಂಬರ ಬಿಳಿತ್ವಚೆಯ ಪಂಡಿತರು,
ನಡೆಯುವಾಗ ಎಡಗೈಯಲ್ಲಿ ಕಚ್ಚೆಯನಿಡಿದು,
ಬಲಗೈಯಲ್ಲಿ ಪುಸ್ತಕ ಬೆತ್ತವನಿಡಿದು,
ಬಲಗಾಲನ್ನು ಎತ್ತಿ ಹಾಕುತ್ತಾ, ಕುಂಟುತ್ತಾ ಬರುವ,
ವಿದ್ಯಾರ್ಥಿಗಳಿಗೆ ಕಂಡರವರನು, ಭಯಮಿಶ್ರಿತ ಗೌರವ.
ಅದೊಂದು ದಿನ ಮದ್ಯಾಹ್ನದ ತರಗತಿಯಲ್ಲಿ,
ಕುಳಿತಿದ್ದವು ನಾವು, ಬೆಂಚುಗಳಿಲ್ಲ, ನೆಲದಲ್ಲಿ.
ಪಂಡಿತರು ತರಗತಿಗಾಗಮಿಸಿ,ಹಾಜರಿ ತೆಗೆದು,
ತಮ್ಮ ಕುರ್ಚಿಯಲಿ ಆಸೀನರಾಗಿ, ತನ್ಮಯತೆಯಲಿ
ಯಾವುದೊ ಪುಸ್ತಕದಲ್ಲಿ ಕಣ್ಣಾಡಿಸುತಿದ್ದಾಗ,
ಗುಸುಗುಸು ಶಬ್ಧ, ನಿಶ್ಶಬ್ದವಾಗಿದ್ಧ ತರಗತಿಯಲ್ಲಿ.
ನನ್ನ ಪಕ್ಕದಲ್ಲಿ ಕುಳಿತಿದ್ದ ಸಹಪಾಠಿ,ಬಂಧು,
ಅದೇನು ಮಹದಾನಂದವೊ ಆತನಿಗಂದು,
ಹಾಡತೊಡಗಿದ, ಸಣ್ಣದೊಂದು ರಾಗದಲಿ.
ಇದೆಲ್ಲಾದರು ಉಂಟೆ, ಪಂಡಿತರ ತರಗತಿಯಲ್ಲಿ.!
ಸುಮ್ಮನಿರಲು ಮೆಲ್ಲನವನ ತೊಡೆ ಚಿವುಟಿದಾಗ,
ಕೊಡವಿಕೊಂಡವನು, ರಾಗವನು ಜೋರುಮಾಡಿದಾಗ,
“ಯಾವನೊ ಅವನು,ಹಾಡ್ತಾ ಇರೋದು” ಅಂದರು.
ಮತ್ತದೆ ಪುಸ್ತಕದಲ್ಲಿ ಕಣ್ಣಾಡಿಸುತ್ತ ಪಂಡಿತರು.
ಕ್ಷಣ ಕಾಲ ನಿಂತಿತು, ಸಹಪಾಠಿಯ ಸಂಗೀತ ರಾಗ.
ಅರೆ ನಿಮಿಷದ ನಂತರ, ತರಗತಿ ಗುಸುಗುಸು ದ್ವನಿಸಲು,
ಮತ್ತೆ ಶುರುವಾಯಿತು ನನ್ನ ಸಹಪಾಠಿಯ ರಾಗ.
ದ್ವನಿಯಲ್ಲಿತ್ತು, ಮೊದಲಿಗಿಂತಲೂ ಹೆಚ್ಚಿನ ವೇಗ.
ಕದಡಿದ ತನ್ಮಯತೆ, ಕೋಪದಿಂದ ಚೀರಿದರು ಪಂಡಿತರು.
“ಅದ್ಯಾವನೊ ಹಾಡೋದು? ಯಾರ್ ಹಾಡೋದು”?
ಸೂಜಿ ಬಿದ್ದರೂ ಶಬ್ಧ ಕೇಳಿಸುವಷ್ಟು ನಿಶ್ಶಬ್ದ.
ತರಗತಿಯ ಈ ಮೌನದಲಿ ಸಿಡಿಮಿಡಿಗೊಂಡರು.
ಕೋಲನಿಡಿದು, ಚಡಪಡಿಸುತ್ತಾ ಮೇಲೆದ್ದರು.
ಯಾರ್ ಹೇಳಿ?ಹಾಡಿದ್ಯಾರು?ಎಂದು ಗುಡುಗಿದರು.
ಇದಕ್ಕೆಲ್ಲ ಕಾರಣಕರ್ತ ನನ್ನ ಪಕ್ಕದ ಸ್ನೇಹಿತ.
ತಲೆ ತಗ್ಗಿಸಿ, ಓರೆಗಣ್ಣಿ ನಲಿ ನೋಡಿತಲಿ ಅತ್ತಿಂದಿತ್ತ.
ಮುಂದಿದ್ದ ಪುಸ್ತಕದ ಚೀಲದಲ್ಲೇನೊ ಹುಡುಕುತ್ತಿದ್ದ.
ಆ ಚೀಲವನ್ನೆತ್ತಿ ಮುಖವನು ಮರೆಮಾಚುತಲಿದ್ದ.
ನಡುಗುವ ಕೈಯನು ಮರೆಯಾಗಿಸಲು,ಕೈ ಚೀಲದಲ್ಲಿಟ್ಟನೆ?
ಅದುರುವ ತುಟಿಯ,ಪುಟಿಯುವ ಬೆವರಹನಿಯ
ಮರೆಮಾಚಲು,ಚೀಲವನು ಮುಖಕ್ಕೆ ಅಡ್ಡ ಇಟ್ಟನೆ?
ಅಯ್ಯೋ ಪಾಪ!ನಾನೆಚ್ಚರಿಸಿದಾಗ ಸುಮ್ಮನಿರಬಾರದಾಗಿತ್ತೆ!
ಪಂಡಿತರು ತಮ್ಮ ಕೋಪವನ್ನು ಹೇಗೆ ತೀರಿಸುವರೊ!
ಮನಸಿನಲಿ ಯೋಚಿಸುತ್ತಾ, ಪಂಡಿತರ ನೋಡಿದಾಗ,
ತರಗತಿಯ ಮದ್ಯದಲ್ಲಿ, ನಮ್ಮುಂದಿನ ಸಾಲಿನಲ್ಲಿ,
ಕುಳಿತಿದ್ದ ಹುಡುಗನನು, ಸುಡುವಷ್ಟು ತೀಕ್ಷದಲಿ,
ತಮ್ಮ ಕಣ್ಣಿನಲೆ ಪ್ರಶ್ನಿಸುವಂತೆ ನೋಡುತ್ತಿದ್ದರು.
ಚಕಿತನಾದನಾ ಹುಡುಗ, ಹಿಂತಿರುಗಿ ನಮ್ಮೆಡೆಗೆ ನೋಡಿ,
ಕ್ಷಣದಲ್ಲೆ ಮುಂತಿರುಗಿ, ಪಂಡಿತರ ನೋಡಿ,
ಬೆದರಿದ ಚಿಗುರಿಯಂತೆ,ಎಡಗೈಯ ಹಿಂಚಾಚಿ,
ತೋರು ಬೆರಳಿನಲಿ “ಅವನು ಸಾರ್” ಎಂದ.
ಆ ತೋರಬೆರಳ ಗುರಿ ಹಾಡಿದವನ ಮೇಲಿರಲಿಲ್ಲ.
ಆ ತೋರಬೆರಳ ಗುರಿ ನನ್ನ ಮೇಲಿತ್ತು.
“ನೀನೇನು ಹಾಡಿದ್ದು, ಎದ್ದೇಳೊ ಮೇಲೆ”.
ಅಂದ ಪಂಡಿತರು,ಬಲಗೈಯಲ್ಲಿ ಕಚ್ಚೆಯನಿಡಿದು,
ಎಡಗೈಯಲ್ಲಿ ಬೆತ್ತವನಿಡಿದು,
ಕುಂಟು ಬಲಗಾಲನು ಎತ್ತಿ ಹಾಕುತ್ತಾ,
ನಾನು ಎದ್ದು ನಿಂತಲ್ಲಿಗೆ ಬಂದರು ಬುಸುಗುಡುತ್ತ.
“ಕ್ಲಾಸಿನಲ್ಲಿ ಹಾಡ್ತೀಯೇನೊ?”ಎಂದವರು ಚೀರಿದಾಗ,
“ನಾನಲ್ಲ ಸಾರ್” ಎದೆ ನಡುಗುತಲಿ ನಾನಂದಾಗ,
“ಮತ್ಯಾರೊ ಬಡವ, ತೆಗೆಯೊ ಕೈಯ್ನ”.
ಎಂದವರೆ, ಕೋಲಿನಲಿ ಅಂಗೈಗಳನ್ನು ಬಿಡಿಸುತ್ತಾ,
“ಹಾಡ್ತೀಯೇನೊ,ಹಾಡ್ತೀಯಾ”, ಎಂದು ಹುಲ್ಲು ಕಡಿಯುತ್ತ,
ಅಂಗೈಯೆರಡರ ಮೇಲೂ ಬಾರಿಸಿದಾಗ.
ನನ್ನಿಂದ ಪ್ರತಿಭಟನೆಯ ಸೊಲ್ಲೇ ಇಲ್ಲ.
ಆ ನೋವನೆಂತು ತಾಳಿದನೊ ಗೊತ್ತಿಲ್ಲ.
ತಪ್ಪೆಸಗಿದವನ ವಿರುದ್ಧ ದೂರಲಿಲ್ಲ.
ಹಾಡಿದವನು ನಾನೆಂದು ತೋರಿಸಿದವನ ದೂಷಿಸಲಿಲ್ಲ.
ಪಂಡಿತರು ಕ್ಲಾಸಿನಲ್ಲಿ ಹಾಡಿತೀಯೇನೊ? ಎಂಬುದಕ್ಕೆ.
ಒತ್ತರಿಸುವ ಆ ನೋವಿನಲ್ಲೂ, “ನಾನಲ್ಲ”ಎಂಬುದೆ ಉತ್ತರ.
“ಮತ್ತಿನ್ಯಾರು?” ಎಂಬುದಕ್ಕೆ ನಿರುತ್ತರ.
ಹೊಡೆದು ಬಡಿದು ಸುಸ್ತಾದರು ಪಂಡಿತರು.
ಸತ್ಯಾಂಶವ ಹೊರದೆಗೆಯಲಾಗದೆ ತೆಪ್ಫಗಾದರು.
ನೋವುಂಡ ನಾನು, ಪಕ್ಕಕ್ಕೆ ತಿರುಗಿ ನೋಡಿದಾಗ,
ರಾಗವ ಹಾಡಿದ ಸಹಪಾಠಿ, ಬಗ್ಗಿಸಿದ್ದ ತಲೆ ಎತ್ತಿರಲಿಲ್ಲ.
ಹೊಡೆತದ, ಮನದಾಳದ ನೋವು, ನನಗಿನ್ನೂ ಆರಿರಲಿಲ್ಲ.
ತರಗತಿಯ ಎಳೆ ಮನಸ್ಸುಗಳಿಗಿದರ ಅರಿವಿಲ್ಲ.
ಇದ್ಯಾವುದನ್ನು ಅವು ಗಂಭೀರವಾಗಿ ಪರಿಗಣಿಸಿಲ್ಲ.
ಹಲವು ದಶಕಗಳು ಕಳೆದರೂ ನನ್ನ ಮನದಾಳದಲ್ಲಿ,
ಮರುಕಳಿಸುತ್ತಾ, ಯೋಚನೆ,ವಿಮರ್ಶೆಗೀಡು ಮಾಡಿದೆ.
ತಪ್ಪು ಮಾಡಿದವನು ಒಬ್ಬ, ಶಿಕ್ಷೆ ಅನುಭವಿಸಿದ ವನೊಬ್ಬ.
ಮಾನವನ ನಡುವಳಿಕೆಯಲ್ಲಿನ ಈ ಘೋರ ಲೋಪವು,
ಅರಿವಿಗೆ, ಎಣಿಕೆಗೆ ಸಿಗದ ಸೃಷ್ಟಿ ನಿಯಮ ದಲ್ಲಿನ ಲೋಪವು.
ಅಂದಿನ ಆ ದುರಂತಕ್ಕೆ ಸಾಕ್ಷಿಗಳು, ನನ್ನ ಸಹಪಾಠಿ ಗಳು.
ಇಂದು ಎಲ್ಲಿಹರೊ,? ಹೇಗಿಹರೊ? ನಾನರಿಯೆ.
ಅಂದಿನ ರಾಗಲಹರಿಯ ಸೂತ್ರದಾರ, ನನ್ನ ಸಹಪಾಠಿ,
ಇಂದು,ಜೀವನ ಪಯಣದಲ್ಲಿ,ಎಲ್ಲೊ ಒಂದೆಡೆ,
ವೃತ್ತಿ ನಿರತವಾದವಂಗೆ,ಇರುವುದೆ ಅದರ ನೆನಪು?
ನೆನಪಿದ್ದಲ್ಲಿ,ಪಚ್ಚಾತ್ತಾಪವೇನಾದರು ಉಂಟೆ? ಆತನಲ್ಲಿ.
ಪಿ.ವೆಂಕಟಾಚಲಯ್ಯ.