ಕಾವ್ಯ ಸಂಗಾತಿ
ʼಬಾಲ್ಯದ ದಿನಗಳುʼ
ಶಾಲಿನಿ ಕೆಮ್ಮಣ್ಣು

ಬಾಲ್ಯದ ದಿನಗಳೆ ಚೆನ್ನಾಗಿತ್ತು
ಚಿಕ್ಕ ಮನೆಯಲಿ ಚೊಕ್ಕ ಮನವಿತ್ತು
ಅಮ್ಮನ ಸೆರಗಲಿ ರಕ್ಷಣೆ ಇತ್ತು
ಅಪ್ಪನ ನೋಟದಿ ನಲ್ಮೆಯು ಇತ್ತು
ಅಣ್ಣನ ಜಗಳದಿ ಗೆಳೆತನವಿತ್ತು
ಅಕ್ಕನ ಬೈಗುಳದಿ ಕಾಳಜಿ ಇತ್ತು
ಬಾಲ್ಯದ ದಿನಗಳೆ ಚೆನ್ನಾಗಿತ್ತು
ಮನೆ ಮೂಲೆಗಳು ವಿಶಾಲವಾಗಿತ್ತು
ಮನೆಮಂದಿಯೊಳಗೆ ಮಮತೆಯು ಇತ್ತು
ಜಗುಲಿ ಎಲ್ಲರ ಬೆಡ್ರೂಮ್ ಆಗಿತ್ತು
ಮನೆಯಂಗಳವೇ ಮೈದಾನವಾಗಿತ್ತು
ಬಾಲ್ಯದ ದಿನಗಳೆ ಚೆನ್ನಾಗಿತ್ತು
ಮನೆಯಲ್ಲಿ ದಿನವೂ ನಗುವಿತ್ತು
ಅಳುವನು ಅಳಿಸುವ ಅಕ್ಕರೆ ಇತ್ತು
ಸಣ್ಣ ತೋಷಕೆ ಮನ ಹಿಗ್ಗುತ್ತಿತ್ತು
ಹಿರಿಯರ ಕಂಡರೆ ಭಯವಿತ್ತು
ಬಾಲ್ಯದ ದಿನಗಳೆ ಚೆನ್ನಾಗಿತ್ತು
ಹರಿದ ಬಟ್ಟೆಯ ಚೀಲವಿತ್ತು
ಹಾಕಲು ಅಕ್ಕನ ಬಟ್ಟೆಯು ಇತ್ತು
ಚಪ್ಪಲಿ ಇಲ್ಲದೆ ದಿನ ಕಳೆದಿತ್ತು
ಮಣ್ಣಾಟದಲ್ಲಿ ಹರುಷವಿತ್ತು
ಬಾಲ್ಯದ ದಿನಗಳೆ ಚೆನ್ನಾಗಿತ್ತು
ಮನೆಯ ಡಬ್ಬವೇ ಬ್ಯಾಂಕ್ ಆಗಿತ್ತು
ತೋಟದ ಗಿಡಗಳೇ ಮದ್ದಾಗಿತ್ತು
ಕರುವಿನ ಆಲಿಂಗನ ಮುದ್ದಾಗಿತ್ತು
ಬೆಕ್ಕಿನ ಜೊತೆಯಲಿ ಆಟವಿತ್ತು
ಬಾಲ್ಯದ ದಿನಗಳೆ ಚೆನ್ನಾಗಿತ್ತು
ಗದ್ದೆಯ ಗಾಳಿ ಹಿತವಾಗಿತ್ತು
ತೋಟದ ತರಕಾರಿ ರುಚಿಯಾಗಿತ್ತು,
ಅರೆ ಹೊಟ್ಟೆಯಲ್ಲೆ ನೆಮ್ಮದಿ ಇತ್ತು
ಕಷಾಯದಲಿ ಆರೋಗ್ಯವು ಇತ್ತು
ಬಾಲ್ಯದ ದಿನಗಳೆ ಚೆನ್ನಾಗಿತ್ತು
ಶಾಲೆ ಎಂದರೆ ಶ್ರದ್ದೆ ಇತ್ತು
ಗುರುಗಳ ಕಂಡರೆ ಗೌರವವಿತ್ತು
ಪಾಠಕ್ಕಿಂತ ಆಟ ಹೆಚ್ಚಾಗಿತ್ತು
ಸುತ್ತಲ ಪರಿಸರ ಹಿರಿದಾಗಿತ್ತು
ಬಾಲ್ಯದ ದಿನಗಳೆ ಚೆನ್ನಾಗಿತ್ತು
ಹಂಚಿ ತಿನ್ನುವ ಬುದ್ಧಿ ಇತ್ತು
ಕೂಡಿ ಬಾಳುವ ಮನಸಿತ್ತು
ಕರುಣೆ ತೋರುವ ಕರುಳಿತ್ತು
ಸಹಕರಿಸುವ ಸಹನೆ ಇತ್ತು
ಬಾಲ್ಯದ ದಿನಗಳೆ ಚೆನ್ನಾಗಿತ್ತು
ಕಲಿತು ಬೆಳೆಯುವ ಛಲವಿತ್ತು
ಗೆಳೆಯರ ಕೂಡ ನಲಿವಿತ್ತು
ನೆರೆಯವರ ಸಂಗ ಒಲವಿತ್ತು
ನಾಳೆಗಳ ಹುಡುಕಾಟವಿತ್ತು
ಬಾಲ್ಯದ ದಿನಗಳೆ ಚೆನ್ನಾಗಿತ್ತು
ಬಾಲ್ಯದ ದಿನಗಳೆ ಚೆನ್ನಾಗಿತ್ತು
ಮನೆ ಚಿಕ್ಕದು ಮನಸು ದೊಡ್ಡದಿತ್ತು
ಚಿಕ್ಕ ಮನೆಯಲಿ ಚೊಕ್ಕ ಮನವಿತ್ತು
ಶಾಲಿನಿ ಕೆಮ್ಮಣ್ಣು

