ವಾಣಿ ಯಡಹಳ್ಳಿಮಠ ಕವಿತೆ-ಪ್ರೇಮಗಾಥೆ

ನಿಲ್ಲದೇ ನಡೆದರೂ ಅದೆಲ್ಲೋ
ಉಳಿದು ಹೋಗಿದ್ದೇನೆ
ಮತ್ತೇ ಮರಳದ ಕ್ಪಣಗಳಲಿ
ಕಳೆದು ಹೋಗಿದ್ದೇನೆ

ನಾ ಕೊಡದ ಗುಲಾಬಿಯೊಂದು
ಈಗಲೂ ಪುಸ್ತಕದಿ ಗುಲ್ಲೆಬ್ಬಿಸುತಿದೆ
ಕಳುಹಿಸದ ಪ್ರೇಮ ಪತ್ರ
ವಿಳಾಸ ಕಾಣದೇ ವಿಲಾಪಿಸುತಿದೆ

ಬದುಕು ವಿರಮಿಸದ ಪಯಣದಂತೆ
ಸಾಗುತಲೇನೋ ಇದೆ
ನಿವೇದಿಸದ ಒಲವೊಂದು
ಎದೆಗೊರಗಿ ತಳಮಳಿಸುತಲೇ ಇದೆ

ಇಂದು ಪ್ರೇಮಿಗಳ ದಿನವಂತೆ
ಜಗದೆಲ್ಲೆಡೆ ಪ್ರೀತಿಯ ರಂಗೇ ರಂಗಂತೆ
ಹೇಳದ ಪ್ರೀತಿ ಹೇಳಿಕೊಳ್ಳುವ ದಿನವಂತೆ
ಪ್ರೇಮಿಯೆದುರು ಮನತೆರೆದಿಡುವ ದಿನವಂತೆ

ಸ್ಮೃತಿಯ ಜೋಳಿಗೆಯ ಜಾಲಾಡಿ
ನಿನ್ನೆನಪುಗಳ ಹೆಕ್ಕಿ ತರಲೇ ಇಂದು ?
ಯುಗ ಯುಗಾದಿಯಂತೆ ಮನ
ವಸಂತಗೊಳಿಸಲೇ ಇಂದು?

ಪ್ರತಿ ಭಾವನೆಗೆ ಅಕ್ಷರದ
ಮೊಹರು ಒತ್ತಲೇ ?
ಕಣ್ಣು ಹೇಳಿದ್ದನ್ನು
ಕವಿತೆಯಾಗಿಸಲೇ ?
ಒಂದಕ್ಷರವೂ ಉಸುರದೇ ,
ಎದೆಸೇರಿದ ಪ್ರೀತಿಗೆ ,
ಸಾವಿರ ಪದಗಳ ಮಾಲೆ ತೊಡಿಸಲೇ ?
ಪ್ರೇಮಿಗಳ ಪಟ್ಟಿಗೆ ನಮ್ಹೆಸರು ಸೇರಿಸಲೇ?
ಹಳೆಯ ಪ್ರೇಮಿಗಳ ಹಳಸದ ಪ್ರೇಮಗಾಥೆ ಹೇಳಲೇ ??


Leave a Reply

Back To Top