ಲೋಕ ತಾಯ್ನುಡಿ ದಿನದ ವಿಶೇಷ-ಜೀವಾಳ,ಲೋಹಿತೇಶ್ವರಿ ಎಸ್ ಪಿ

ನುಡಿ ಎಂದಿಗೂ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ನುಡಿದಂತೆ ನಡೆದು ನುಡಿಗೆ ಅಪಾರ ಗೌರವ, ಪ್ರಾಮುಖ್ಯತೆ ನೀಡುತ್ತಿದ್ದ ಕಾಲದಿಂದ ನುಡಿಯನ್ನು ಕಡೆಗಣಿಸುವ, ಅಪಮಾನಗೊಳಿಸುವ ಕಾಲಕ್ಕೆ ತಲುಪಿದ್ದೇವೆ. ನುಡಿಗಾಗಿ ಜೀವತೆತ್ತು ನುಡಿಯ ಹಿರಿಮೆಯನ್ನು ಸಾರಿದ ಅಂದಿನ ನುಡಿಗರಿಗೂ, ನುಡಿ/ತಾಯ್ನುಡಿಯ ಬಗೆಗೆ ಕಿಂಚಿತ್ತೂ ಕಾಳಜಿ ಇಲ್ಲದ ಇಂದಿನ ನುಡಿಗರಿಗೂ (ಕೆಲವರು) ಭುವಿ ಮತ್ತು ಬಾನಿನ ನಡುವಿರುವಷ್ಟು ಅಂತರವಿದೆ. ಆ ಅಂತರವೇ ಇಂದು ಆತಂಕ ಸೃಷ್ಟಿಸಿದೆ.

ತಾಯ್ನುಡಿಯನ್ನು ಗೌರವಿಸದ ಅನೇಕರು ಇಂದು ನಮ್ಮ ನಡುವೆಯೇ ಜೀವಿಸುತ್ತಿದ್ದಾರೆ. ಕಲಿಕೆ, ವೃತ್ತಿ, ವ್ಯವಹಾರ ಕೊನೆಗೆ ಸಂವಹನದ ಸಂದರ್ಭದಲ್ಲಿಯೂ ಅವರಿಗೆ ಪರಕೀಯ ಪ್ರಜ್ಞೆ ಮೂಡಿಸುವ ಪರಕೀಯ ನುಡಿಯೇ(ಇಂಗ್ಲಿಶ್) ಶ್ರೇಷ್ಠ. ಅನೇಕ ಕಾರಣಗಳನ್ನು ನೀಡುತ್ತಾ ಕನ್ನಡವನ್ನು ಕಡೆಗಣಿಸಿ ಕೀಳರಿಮೆಯಿಂದ ನೋಡುವ ನುಡಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಬೇರೆ ನುಡಿಯನ್ನು ಕಲಿಯುವುದು, ಗೌರವಿಸುವುದು ತಪ್ಪಲ್ಲ. ಆದರೆ ನಮ್ಮ ತಾಯ್ನುಡಿಯನ್ನು ಕಡೆಗಣಿಸಿ ಇತರೆ ನುಡಿಗಳನ್ನು ಹೆಚ್ಚು ಮಾಡಿ ಮಾತನಾಡುವುದು ತಪ್ಪು.

ತಾಯ್ನುಡಿಯನ್ನು ಗೌರವಿಸುವಂತೆ ಮಾಡುವ ಜವಾಬ್ದಾರಿ ನೇರವಾಗಿ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳದ್ದು ಎಂದರೆ ತಪ್ಪಾಗಲಾರದು. ಕಾರಣ ಇಂಗ್ಲಿಶ್ ಮೀಡಿಯಂ ಸ್ಕೂಲ್ ಗಳ‌ ಹವಾ ಇಂದು ತಾಯ್ನುಡಿಯ ಕೂಗು ಆಕಾಶಕ್ಕೆ ತಲುಪುವಂತೆ ಮಾಡಿದೆ. ಕನ್ನಡ ತಾಯ್ನುಡಿಯಾದ ಕನ್ನಡ ನೆಲದಲ್ಲಿಯೇ ಇಂಗ್ಲಿಶ್ ಆವರಿಸಿದೆ. ಕಲಿಕೆಯ ಆರಂಭ ಹಂತದಿಂದಲೇ ಕನ್ನಡಕ್ಕೆ ಮನ್ನಣೆ ಇಲ್ಲ ಎಂದು ತೋರುತ್ತಾ ಹೋದರೆ ಕನ್ನಡ ನೆಲದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿ ಎಂದು ಘೋಷವಾಕ್ಯಗಳನ್ನು ಕೂಗುತ್ತಾ ಮನೆಮನೆಗೆ ತಿರುಗುವ ಸಂದರ್ಭ ಎದುರಾಗುತ್ತದೆ.
ಇಂತಹ ಸಂದರ್ಭ ಎದುರಾಗದ ಹಾಗೆ ನೋಡಿಕೊಳ್ಳುವ ಹೊಣೆ ಸರ್ಕಾರ, ಶೈಕ್ಷಣಿಕ ವಲಯ ಹಾಗೂ ನುಡಿಗರು ಹೊರಬೇಕಾಗುತ್ತದೆ. ಆಗಲೇ ಕನ್ನಡ ಕನ್ನಡಿಗರ ಜೀವಾಳವಾಗಲು ಸಾಧ್ಯ.


Leave a Reply

Back To Top