ವಿದ್ಯಾರ್ಥಿಸಂಗಾತಿ
ಪರೀಕ್ಷೆ ಎಂಬ ಹಬ್ಬಕ್ಕೆ
ತಯಾರಾಗುವ ಬಗೆ-
ವೀಣಾ ಹೇಮಂತ್ ಗೌಡ ಪಾಟೀಲ್
ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳು ಬಲು ಪ್ರಾಮುಖ್ಯತೆಯನ್ನು ಹೊಂದಿವೆ. ಹಬ್ಬಕ್ಕೆ ಹಲವಾರು ದಿನಗಳ ಮೊದಲು ಮನೆಯ ಮೂಲೆಗಳಲ್ಲಿ ಕಟ್ಟಿರುವ ಜೇಡರ ಬಲೆಗಳನ್ನು ತೆಗೆದು, ಧೂಳು ಜಾಡಿಸಿ,ಕಿಟಕಿ ಬಾಗಿಲುಗಳಿಗೆ ಹಾಕಿರುವ ಪರದೆಗಳನ್ನು ತೊಳೆದು ಒಣಗಿಸಿ ಮತ್ತೆ ನೇತು ಹಾಕಿ, ಇಡಿ ಮನೆಯ ಕಸಗುಡಿಸಿ ಒರೆಸಿ ಅಡುಗೆ ಮನೆಯಲ್ಲಿರುವ ಎಲ್ಲ ಡಬ್ಬಗಳನ್ನು ತೊಳೆದು ಒರೆಸಿ ಸ್ವಸ್ಥಾನಕ್ಕೆ ಸೇರಿಸುತ್ತೇವೆ. ನಂತರ ಹಬ್ಬಕ್ಕೆ ಬೇಕಾಗುವ ಸಿಹಿ ಮತ್ತು ಖಾರದ ತಿಂಡಿಗಳನ್ನು ತಯಾರು ಮಾಡಿಕೊಳ್ಳುತ್ತೇವೆ. ಪೂಜೆಗೆ ಬೇಕಾಗುವ ಪರಿಕರಗಳನ್ನು ಹಿಂದಿನ ದಿನವೇ ಸಜ್ಜಾಗಿಟ್ಟುಕೊಳ್ಳುವ ನಾವು ಹಬ್ಬದ ದಿನ ಮುಂಜಾನೆ ಮತ್ತೊಮ್ಮೆ ಇಡೀ ಮನೆಯನ್ನು ಕಸ ಗುಡಿಸಿ ಒರೆಸಿ ತಳಿರು ತೋರಣಗಳಿಂದ ಶೃಂಗರಿಸಿ ಪೂಜೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿ ಸಾಂಪ್ರದಾಯಿಕವಾಗಿ ಮನೆ ಮಂದಿ ಎಲ್ಲಾ ಸೇರಿ ಪೂಜೆಯನ್ನು ನೆರವೇರಿಸುತ್ತೇವೆ. ಹಬ್ಬದ ಅಡುಗೆಯನ್ನು ತಯಾರಿಸಿ ದೇವರಿಗೆ ನೈವೇದ್ಯವನ್ನು ಮಾಡಿ ಮನೆ ಮಂದಿಯಲ್ಲ ಒಟ್ಟಾಗಿ ಕುಳಿತು ಹರಟೆ ಹೊಡೆಯುತ್ತಾ ಊಟ ಮಾಡಿ ಸಂಭ್ರಮಿಸುತ್ತೇವೆ. ಹೀಗೆ ಬೇಸರವಿಲ್ಲದೆ ವರ್ಷಕ್ಕೆ ಹಲವಾರು ಹಬ್ಬಗಳನ್ನು ನಾವು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತೇವೆ. ಈ ಹಬ್ಬಗಳು ನಮ್ಮ ಮೈಮನಗಳ ಜಡತೆಯನ್ನು ಕಳೆದು ನಮ್ಮಲ್ಲಿ ಹೊಸ ಉತ್ಸಾಹವನ್ನು ತುಂಬಿಸುತ್ತವೆ.
ಅಂತೆಯೇ ಪರೀಕ್ಷೆ ಎಂಬ ಹಬ್ಬವು ಕೂಡ… ಹೌದು ಪರೀಕ್ಷೆ ಕೂಡ ಒಂದು ಹಬ್ಬವೇ!!
ಮನದ ಮೂಲೆಯಲ್ಲಿ ಕಟ್ಟಿಕೊಂಡಿರುವ ಜಡತ್ವ ಎಂಬ ಜೇಡರ ಬಲೆಯನ್ನು ತೆಗೆದು, ಅಶ್ರದ್ಧೆಯ ಕಸ ಗುಡಿಸಿ, ಸ್ವಚ್ಛ ಶುದ್ಧವಾದ ಮನಸ್ಥಿತಿಯಲ್ಲಿ ಅಭ್ಯಾಸ ಮಾಡುತ್ತಾ ಜ್ಞಾನದ ತಳಿರು ತೋರಣಗಳನ್ನು ಕಟ್ಟುತ್ತಾ, ಓದು ಬರಹಗಳ ಸಿಹಿ ಖಾರದ ತಿಂಡಿಗಳನ್ನು ತಯಾರಿಸಿ ಮನಕ್ಕೆ ಉಣಬಡಿಸಿ, ಕಲಿತ ವಿದ್ಯೆಯ ಪ್ರದರ್ಶನಕ್ಕೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪರೀಕ್ಷೆಯೆಂಬ ಹಬ್ಬದ ಮುಂಚೆ ರಿವಿಶನ್ ಎಂಬ ಪುನರಾವರ್ತಿತ ಓದು ಬರಹಗಳಲ್ಲಿ ತೊಡಗಿಕೊಳ್ಳಬೇಕು. ಪರೀಕ್ಷೆಗೆ ಬೇಕಾಗುವ ಅವಶ್ಯಕ ವಸ್ತುಗಳನ್ನು ಹಿಂದಿನ ದಿನವೇ ಎತ್ತಿಟ್ಟುಕೊಳ್ಳಬೇಕು. ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆಗೆ ಬರೆಯುವ ಮೂಲಕ ಪರೀಕ್ಷೆಯ ಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕು. ಅಂದಾಗ ಮಾತ್ರ ಜೀವನದಲ್ಲಿ ಯಶಸ್ವಿ ಫಲಿತಾಂಶದ ಸಮೃದ್ಧಿಯನ್ನು ಕಾಣಬಹುದು. ಹೀಗೆ ಮಾಡುವುದರಿಂದ ಪ್ರತಿ ಪರೀಕ್ಷೆಯ ಹಬ್ಬಗಳು ನೆನಪಿನ ಚಾದರದ ಪದರಗಳಲ್ಲಿ ಉಳಿದು ಮುಂದಿನ ಜೀವನದಲ್ಲಿ ಸುಖಾನುಭವ ಕೊಡಬಲ್ಲವು.
ಒಂದು ಕಥೆಯ ಮೂಲಕ ಪರೀಕ್ಷೆಗೆ ಹೇಗೆ ತಯಾರಾಗಬೇಕು ಎಂಬುದನ್ನು ಅರಿತುಕೊಳ್ಳೋಣ.
ಕಾಶಿ ರಾಜ್ಯವನ್ನಾಳುತ್ತಿದ್ದ ರಾಜನಿಗೆ ಮಕ್ಕಳಿಲ್ಲದ್ದರಿಂದ ಆತನ ಉತ್ತರಾಧಿಕಾರಿಯನ್ನು ಆರಿಸುವ ಸಂದಿಗ್ಧ ಪರಿಸ್ಥಿತಿ ಆತನ ಮಂತ್ರಿಮಂಡಲಕ್ಕೆ ಒದಗಿತ್ತು. ರಾಜ್ಯದೆಲ್ಲೆಡೆ ಡಂಗುರ ಸಾರಿ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಯನ್ನು ಘೋಷಿಸಿದರು. ಕಾಶಿ ರಾಜ್ಯವನ್ನು ಆಳಲು ಸಮರ್ಥ ಉತ್ತರಾಧಿಕಾರಿಯಾಗಿ ಆಯ್ಕೆಯಾಗಲು ಕೆಲ ಮಾನದಂಡಗಳನ್ನು ರೂಪಿಸಿ . ಆ ಮಾನದಂಡಗಳ ಪ್ರಕಾರ ಸಕಲ ವಿದ್ಯಾ ಪಾರಂಗತನಾದ ಸಾಹಸಿ ಯುವಕ ಕೇವಲ ಎರಡು ವರ್ಷ ಮಾತ್ರ ರಾಜ್ಯವನ್ನು ಆಳಲು ಅವಕಾಶವನ್ನು ಪಡೆಯುತ್ತಾನೆ, ನಂತರ ಆತನನ್ನು ನದಿಯಾಚೆಗಿನ ಕಾಡಿನಲ್ಲಿ ಬಿಟ್ಟು ಬರಲಾಗುವುದು ಎಂಬ ಶರತ್ತೊಂದನ್ನು ಹಾಕಿದ್ದರು. ಅತ್ಯಂತ ಕ್ರೂರ ಮೃಗಗಳ ವಾಸಸ್ಥಾನವಾಗಿದ್ದ ನದಿಯಾಚೆಗಿನ ಆ ಕಾಡಿನ ವಾಸದ ವಿಷಯ ಕೇಳಿಯೇ ಸಾಕಷ್ಟು ಜನ ಯುವಕರು ರಾಜನಾಗುವ ಆಸೆಯನ್ನು ಕೈಬಿಟ್ಟರು. ಆದರೆ ಓರ್ವ ಸ್ಫುರದ್ರೂಪಿ ಯುವಕ ಮಾತ್ರ ತಾನು ಎಲ್ಲದಕ್ಕೂ ಸಿದ್ಧನಾಗಿರುವೆ ಎಂದು ಮುಂದೆ ಬಂದನು. ಆತನ ಧೈರ್ಯ, ಸಾಹಸ, ಪರಾಕ್ರಮ ಮತ್ತು ವಿದ್ಯಾ ಪಾರಂಗತತೆಯನ್ನು ಒರೆಗೆ ಹಚ್ಚಿ ಆತನ ಆಯ್ಕೆಗೆ ಹಸಿರು ನಿಶಾನೆ ತೋರಿದ ಮಂತ್ರಿ ಮಾಗಧರು ಆತನಿಗೆ “ನಮ್ಮ ಎಲ್ಲಾ ಷರತ್ತಿಗೆ ಒಪ್ಪಿಗೆ ಇದೆಯೇ?? ಎಂದು ಕೇಳಿದಾಗ ಮುಗುಳ್ನಗುತ್ತಾ ಆ ಯುವಕ ತನ್ನ ಒಪ್ಪಿಗೆಯನ್ನು ಸೂಚಿಸಿದನು. ಮುಂದೆ ಶುಭ ಮುಹೂರ್ತದಲ್ಲಿ ಪಟ್ಟಾಭಿಷಿಕ್ತ ರಾಜನಾದನು.
ಹೊಸ ರಾಜನ ಉತ್ಸಾಹೀ ಆಡಳಿತದಲ್ಲಿ ಹಲವಾರು ಬದಲಾವಣೆಗಳಾಗಿ ಕೆಲವೇ ತಿಂಗಳುಗಳಲ್ಲಿ ಕಾಶಿ ರಾಜ್ಯವು ಸಾಮಾಜಿಕವಾಗಿ, ಧಾರ್ಮಿಕವಾಗಿ ಒಳ್ಳೆಯ ಹೆಸರನ್ನು ಆರ್ಥಿಕವಾಗಿ ಸಬಲತೆಯನ್ನು ಗಳಿಸಿತು. ಕೆರೆಕಟ್ಟೆಗಳನ್ನು, ಬಾವಿ,ಬಾಂದಾರಗಳನ್ನು ನಿರ್ಮಿಸಿ ರೈತರಿಗೆ ನೀರಾವರಿ ಯೋಜನೆಗಳ ಅನುಕೂಲ ಮಾಡಿಕೊಟ್ಟ ಹೊಸ ರಾಜನು ಸೈನಿಕರಿಗೆ ವಿಶೇಷ ತರಬೇತಿಗಳನ್ನು ಏರ್ಪಡಿಸಿ ಸುಸಜ್ಜಿತ ಸೈನ್ಯವನ್ನು ಕೂಡ ಕಟ್ಟಿದನು. ಜೊತೆಗೆ ಒಳ್ಳೆಯ ಆರೋಗ್ಯ ಚಿಕಿತ್ಸೆ ದೊರೆಯುವಂತೆ ಯೋಜನೆ ರೂಪಿಸಿ ಜನರ ಪ್ರೀತಿಗೆ ಪಾತ್ರನಾದನು. ಆತನ ಕಾರ್ಯಭಾರವನ್ನು ನೋಡುತ್ತಿದ್ದ ವೃದ್ಧ ರಾಜ ಮತ್ತು ಆತನ ಮಂತ್ರಿ ವರ್ಗದವರು ಈತನೇ ಇನ್ನೂ ಹಲವಾರು ವರ್ಷ ನಮ್ಮ ರಾಜನಾಗಿ ಇರಬಾರದೇ ಎಂದು ಯೋಚಿಸುವಂತೆ ಆಗಿತ್ತು.
ಆದರೆ ನಿಯಮ ಪಾಲನೆ ಆಗಲೇಬೇಕಲ್ಲ, ಅಂತೆಯೇ ಎರಡು ವರ್ಷಗಳ ಅವಧಿ ಪೂರೈಸಿದ ನಂತರ ನದಿಯ ದಡದಲ್ಲಿ ಯುವ ರಾಜನನ್ನು ಸರ್ವ ಪ್ರಜಾವರ್ಗದ ಸಮ್ಮುಖದಲ್ಲಿ ಗೌರವ ಸನ್ಮಾನ ಮಾಡಿ ಬೀಳ್ಕೊಟ್ಟರು. ನದಿಯಾಚೆಗಿನ ಕಾಡಿಗೆ ಬಿಟ್ಟು ಬರಲು ನಾವೆಯಲ್ಲಿ ಯುವಕ ರಾಜನೊಂದಿಗೆ ವೃದ್ಧ ರಾಜ ಮತ್ತು ಮಂತ್ರಿಮಂಡಲದ ಹಲವಾರು ಜನ ಕುಳಿತುಕೊಂಡಿದ್ದರು. ಎಲ್ಲರೂ ದುಗುಡದಿಂದ ಕುಳಿತಿದ್ದರೆ ಯುವಕ ರಾಜನೊಬ್ಬನೇ ಮಂದಸ್ಮಿತನಾಗಿದ್ದನು. ಅಂತೆಯೇ ಮಂತ್ರಿಮಂಡಲದ ಹಿರಿಯ ಮಂತ್ರಿಯೊಬ್ಬರು ರಾಜರೇ, ನದಿಯಾಚೆಗಿನ ಕಾಡಿನಲ್ಲಿ ನಾವು ನಿಮ್ಮನ್ನು ಬಿಡಲು ಹೋಗುತ್ತಿದ್ದೇವೆ ಆದರೂ ನಿಮ್ಮ ಮುಖದಲ್ಲಿ ಲವಲೇಶ ಬೇಸರ,ದುಗುಡಗಳಿಲ್ಲ!! ಕಾರಣ ತಿಳಿಯಬಹುದೇ?? ಎಂದು ಕೇಳಿದಾಗ ರಾಜನು ಮತ್ತದೇ ಮುಗುಳ್ನಗೆ ಸೂಸುತ್ತಾ ನದಿಯಾಚೆ ಕಾಡು ಎಲ್ಲಿದೆ? ಎಂದು ಕೇಳಿದನು. ಅದು ಅತ್ತ..ಎಂದು ಮಂತ್ರಿ ಕೈ ಮಾಡಿ ತೋರಿಸಲು ಹೋದರೆ ಆಶ್ಚರ್ಯಅಲ್ಲೇನಿದೆ!!?? ಹಲವಾರು ಸುಂದರ ಮಹಲುಗಳನ್ನು ಹೊಂದಿರುವ,ದೇವಾಲಯಗಳ ಸಮುಚ್ಚಯ, ಉದ್ಯಾನವನ, ಆರೋಗ್ಯಧಾಮ,ಕೊಳಗಳನ್ನು ಹೊಂದಿರುವ ಸುಸಜ್ಜಿತವಾದ ನಗರ ಅಲ್ಲಿ ತಲೆಯೆತ್ತಿ ನಿಂತಿದೆ.ಆಶ್ಚರ್ಯ ಚಕಿತನಾದ ಮಂತ್ರಿಗೆ ರಾಜನು “ನಾನು ರಾಜನಾಗಿ ನಿಯುಕ್ತನಾದ ಕೂಡಲೇ ಮೊದಲು ಆ ಕಾಡಿಗೆ ಬೇಟೆಗಾರರನ್ನು ಕಳುಹಿಸಿ ಕಾಡು ಪ್ರಾಣಿಗಳನ್ನು ತೀರ ಒಳಗಿನ ಕಾಡಿನ ಓಡುವಂತೆ ಮಾಡಿಸಿದೆ. ನಂತರ ಕಾಡಿನ ಕೆಲ ಭಾಗವನ್ನು ಸ್ವಚ್ಛಗೊಳಿಸಿ ಅಲ್ಲಿ ಒಂದು ನಗರವನ್ನೇ ನಿರ್ಮಿಸಿದ್ದೇನೆ. ಸಾಕಷ್ಟು ಜನರು ಕೂಡ ಈಗ ಅಲ್ಲಿ ನೆಲೆಸಿದ್ದಾರೆ. ಒಂದು ಪುಟ್ಟ ರಾಜ್ಯವನ್ನು ಅಲ್ಲಿ ನಿರ್ಮಿಸಿರುವ ನಾನು ಈಗ ನದಿಯ ಆಚೆ ದಡಕ್ಕೆ ಹೋಗುತ್ತಲೇ ಅಲ್ಲಿ ನೆರೆದಿರುವ ಜನರ ಸಮ್ಮುಖದಲ್ಲಿ ನಾನು ರಾಜನಾಗಿ ಪಟ್ಟಕ್ಕೇರಿ ಅಲ್ಲಿ ರಾಜ್ಯಭಾರ ಮಾಡುವೆ ಎಂದು ಹೇಳಿದನು. ರಾಜನ ದೂರದೃಷ್ಟಿ ಮತ್ತು ಚಾಣಾಕ್ಷ ನಿರ್ಧಾರಗಳಿಂದ ಸಂತಸಪಟ್ಟ ವೃದ್ಧ ರಾಜ ಮತ್ತು ಮಂತ್ರಿಗಳು ಅತ್ಯಂತ ಖುಷಿಯಿಂದ “ಹಾಗಾದರೆ ಆ ರಾಜ್ಯದ ಜೊತೆಗೆ ನಮ್ಮ ರಾಜ್ಯದಲ್ಲಿಯೂ ಕೂಡ ನೀವೇ ರಾಜನಾಗಿ ಮುಂದುವರೆಯಿರಿ” ಎಂದು ಒಕ್ಕೊರಳಿನಿಂದ ಕೇಳಿಕೊಂಡರು.ಇದಕ್ಕೆ ಒಪ್ಪಿದ ಯುವ ರಾಜ ಮುಂದೆ ಹಲವಾರು ವರ್ಷಗಳ ಕಾಲ ಎರಡೂ ರಾಜ್ಯಗಳನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸುತ್ತಾ ಒಳ್ಳೆಯ ರಾಜನೆಂದು ಹೆಸರು, ಕೀರ್ತಿಗಳಿಸಿದನು.
ಈ ಕಥೆಯಲ್ಲಿ ಬರುವ ಕಾಡು ನಮ್ಮ ವಿದ್ಯಾರ್ಥಿ ಜೀವನವಿದ್ದಂತೆ. ಆ ಕಾಡಿನಲ್ಲಿ ಬರುವ ಕ್ರೂರ ಮೃಗಗಳು ನಮ್ಮ ವಿದ್ಯಾರ್ಥಿ ಜೀವನಕ್ಕೆ ತೊಡಕಾಗುವ ಆಲಸಿತನ, ಅಶ್ರದ್ದೆ, ಅನಿಯಮಿತತೆ ಮತ್ತು ಸಮಯ ಪ್ರಜ್ಞೆ ಇಲ್ಲದಿರುವುದು. ಇತ್ತೀಚಿಗಿನ ದಿನಗಳಲ್ಲಿ ನಮ್ಮ ಸಮಯವನ್ನು ಕೊಂದು ಹಾಕುತ್ತಿರುವ ಮಾಧ್ಯಮಗಳು,ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್ ಎಂಬ ಕ್ರೂರ ಮೃಗಗಳೊಂದಿಗೆ ನಮ್ಮ ವಿದ್ಯಾರ್ಥಿ ಜೀವನದುದ್ದಕ್ಕೂ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಯಾವ ರೀತಿ ಮನೆಯ ಮೂಲೆ ಮೂಲೆಯನ್ನು ಸ್ವಚ್ಛಗೊಳಿಸುತ್ತೇವೆಯೋ ಹಾಗೆಯೇ ಮನದ ಮೂಲೆಯಲ್ಲಿರುವ ಭಯ, ಹಿಂಜರಿಕೆ , ಅರಿವಿನ ಕೊರತೆಗಳನ್ನು ಗುಡಿಸಿ ಹೊರ ಹಾಕಬೇಕು. ಸ್ವಚ್ಛವಾದ ಮನಸ್ಥಿತಿಯಲ್ಲಿ ಶಾಲೆಯ ಪಾಠ ಪ್ರವಚನಗಳನ್ನು ಆಲಿಸಬೇಕು. ಶಾಂತ ಮತ್ತು ಏಕಾಂತ ಪರಿಸರದಲ್ಲಿ ಓದಲು ಕುಳಿತರೆ ಜ್ಞಾನದ ಮಹಲಿನ ಒಂದೊಂದೇ ಹಂತಗಳನ್ನು ಕಟ್ಟುತ್ತಾ ಹೋಗಬಹುದು. ಸ್ವಲ್ಪವೇ ಏರುಪೇರಾದರೂ ಮಹಲು ಕುಸಿಯುವ ಸಾಧ್ಯತೆ ಇರುವುದರಿಂದ ಶ್ರದ್ಧೆ,ತಾಳ್ಮೆ ಮತ್ತು ಅಧ್ಯಯನಶೀಲತೆಗಳನ್ನು ಮೈಗೂಡಿಸಿಕೊಂಡು ಈ ವಿದ್ಯಾರ್ಥಿ ಜೀವನವನ್ನು ಕಟ್ಟಿಕೊಳ್ಳಬೇಕು. ಇನ್ನು ಪರೀಕ್ಷೆಗೆ ತಯಾರಿ ಪರೀಕ್ಷಾ ಅವಧಿಯಲ್ಲಿ ಮಾತ್ರ ಮಾಡಿಕೊಳ್ಳದೆ ಶಾಲೆ ಆರಂಭವಾದ ಮೊದಲ ದಿನದಿಂದಲೇ ಅಂದಂದಿನ ಪಾಠಗಳನ್ನು ಆಯಾ ದಿನವೇ ಓದಿಕೊಳ್ಳುತ್ತಾ ಅವಶ್ಯಕ ಟಿಪ್ಪಣಿಗಳನ್ನು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಬೇಕು, ಆಗಾಗ ಅವುಗಳನ್ನು ಪುನರಾವರ್ತಿಸಿ ಓದಿಕೊಳ್ಳಬೇಕು. ಹೀಗೆ ಮಾಡುವುದರಿಂದ “ಯುದ್ಧಕಾಲೇ ಶಸ್ತ್ರಾಭ್ಯಾಸ” ಎಂಬಂತಹ ಭಾವ ಹೋಗಿ ಸದಾ ಸನ್ನದ್ಧನಾಗಿರುವುದರಿಂದ ಯಾವುದೇ ರೀತಿಯ ಭಯ, ಹಿಂಜರಿಕೆ, ಕೀಳರಿಮೆಗಳು ವಿದ್ಯಾರ್ಥಿಗಳನ್ನು ಕಾಡುವುದಿಲ್ಲ. ಯಾವಾಗಲೂ ಸನ್ನದ್ಧನಾಗಿರುವ ಸೈನಿಕನಿಗೆ ಯುದ್ಧದ ಬಗ್ಗೆ ಭಯ ಇರುವುದಿಲ್ಲ. ಶ್ರದ್ಧೆ, ಉತ್ಸಾಹ ಮತ್ತು ಎಚ್ಚರ ಸ್ಥಿತಿ ಮಾತ್ರ ಇರುತ್ತದೆ. ಅಂತೆಯೇ ಯಾವಾಗಲೂ ಓದು ಮತ್ತು ಬರಹಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ವ್ಯಕ್ತಿ ಪರೀಕ್ಷೆಯನ್ನು ಹಬ್ಬದಂತೆ ಉತ್ಸಾಹದಿಂದ ಎದುರುಗೊಳ್ಳುತ್ತಾನೆ.
ಇದು ಪರೀಕ್ಷೆಯಲ್ಲಿ ಪಾಸಾಗುವ ಬಗೆ ಆಯಿತು, ಅಕಸ್ಮಾತ್ ಏನೆಲ್ಲ ಪ್ರಯತ್ನ ಮಾಡಿಯೂ ನಮ್ಮ ಆರೋಗ್ಯ ಕೈ ಕೊಟ್ಟರೆ ಇಲ್ಲವೇ ಆಕಸ್ಮಿಕ ಸಂಭವಿಸಿ ಪರೀಕ್ಷೆಯಲ್ಲಿ ಪಾಸಾಗಲು ಸಾಧ್ಯವಾಗದೆ ಹೋದರೆ??.ಖಂಡಿತ ಈ ಸಾಧ್ಯತೆಗಳು ಕೂಡ ಇರುತ್ತವೆ. ನಮ್ಮ ಆರೋಗ್ಯವನ್ನು ನಮ್ಮ ಅಂಗೈಯಲ್ಲಿರುವ ಗೆರೆಗಳಷ್ಟೇ ನಿಚ್ಚಳವಾಗಿ ನಾವು ಕಾಯ್ದುಕೊಳ್ಳಲೇಬೇಕು. ಒಳ್ಳೆಯ ಆಹಾರ ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸಿದರೆ ಉತ್ತಮ ನಿದ್ರೆ ನಮ್ಮ ಮೆದುಳಿಗೆ ವಿಶ್ರಾಂತಿ ನೀಡುವ ಮೂಲಕ ಶಕ್ತಿಯನ್ನು ಒದಗಿಸುತ್ತದೆ. ನಮ್ಮ ಮನೋದೈಹಿಕ ಆರೋಗ್ಯವನ್ನು ನಾವು ಕಾಯ್ದುಕೊಳ್ಳಬೇಕು. ಆದರೆ ಆಕಸ್ಮಿಕ ಘಟನೆಗಳು ಸಂಭವಿಸಿದಾಗ ಎದೆಗುಂದದೆ ಜೀವನವೇ ಮುಗಿದು ಹೋಯಿತು ಎಂಬಂತೆ ಆಘಾತಗೊಳ್ಳದೆ ‘ಮರಳಿ ಯತ್ನವ ಮಾಡು’ ಎಂಬ ಮಾತಿನಂತೆ ಇನ್ನಷ್ಟು ಶ್ರದ್ದೆಯನ್ನು ಮೈಗೂಡಿಸಿಕೊಂಡು ಪ್ರಯತ್ನವನ್ನು ಮುಂದುವರಿಸಬೇಕು.
‘ಪ್ರಯತ್ನಕ್ಕೆ ಫಲ ಕಟ್ಟಿಟ್ಟ ಬುತ್ತಿ’ ಎಂಬುದನ್ನು ಮರೆಯಬಾರದು. ಗೊತ್ತಾಯಿತಲ್ಲವೇ ಮಕ್ಕಳೇ …. ಇನ್ನೇಕೆ ತಡ ತಯಾರಾಗಿ ಪರೀಕ್ಷೆಯ ಹಬ್ಬಕ್ಕೆ. ಎಲ್ಲರಿಗೂ ಒಳಿತಾಗಲಿ.
ವೀಣಾ ಹೇಮಂತ್ ಗೌಡ ಪಾಟೀಲ್,