‘ಕೊಬ್ಬಿನ ಕಥೆ’ ಎರಡನೇ ಭಾಗ-ಡಾ.ಅರಕಲಗೂಡು ನೀಲಕಂಠ ಮೂರ್ತಿ

ನಮ್ಮ ದಿನನಿತ್ಯದ ಆಹಾರದಲ್ಲಿ ಸೇವಿಸುವ ಕೊಬ್ಬು ನಮ್ಮ ದೇಹದ ದೈನಂದಿನ ಚಟುವಟಿಕೆಗಳಿಗೆ ಅವಶ್ಯವಾದ ಎನರ್ಜಿ  (ಊರ್ಜ/ಸಾಮರ್ಥ್ಯ) ಯನ್ನು ಕೊಡುವುದಷ್ಟೇ ಅಲ್ಲದೆ, ನಮ್ಮ ದೇಹದ ಅಂಗಗಳನ್ನು ರಕ್ಷಿಸುವ, ಕೋಶಗಳ ಬೆಳವಣಿಗೆಯನ್ನು ಬೆಂಬಲಿಸುವ, ರಕ್ತದೊತ್ತಡ ಮತ್ತು ಕೊಲೆಸ್ಟಿರಾಲಿನ ಪರಿಮಿತಿಯನ್ನು ಹತೋಟಿಯಲ್ಲಿಡುವಂಥ ಕಾಯಕಗಳ ಜೊತೆಗೆ, ಅವಶ್ಯಕವಾದ ಪ್ರಮುಖ ಪೋಷಕಾಂಶಗಳ ಆಪೋಶನಕ್ಕೂ  ಅತ್ಯಗತ್ಯ. ಹಾಗಾಗಿ ನಿತ್ಯದ ಆಹಾರದಲ್ಲಿ ನಮ್ಮ ಸಮಗ್ರ ಆರೋಗ್ಯ ನಿರ್ವಹಣೆಗೆ ನಮಗೆ ಕೊಬ್ಬು ಕೂಡ ಬೇಕೇ ಬೇಕು; ಪ್ರಮುಖವಾಗಿ ನಮ್ಮ ವಯಸ್ಸು ಏರುಗತಿಯಲ್ಲಿದ್ದಾಗ ಕೊಬ್ಬಿನ ಅವಶ್ಯ ಹೆಚ್ಚು. ಆದ್ದರಿಂದ, ಕೊಬ್ಬಿನ ಪದಾರ್ಥ ಕಡಿಮೆ ಮಾಡುವ ಹುರುಪಿನಲ್ಲಿ ನಾವು ನಮ್ಮ ದೇಹದ ಅತಿ ಅವಶ್ಯಕತೆಯಾದ ಕೊಬ್ಬಿಗೇ ಕತ್ತರಿ ಹಾಕುವ ಸಂದರ್ಭ ಬರಕೂಡದು!

ನಮ್ಮ ದೈನಂದಿನ ಆರೋಗ್ಯಕರ ಆಹಾರದಲ್ಲಿ ಕೊಬ್ಬು ವಹಿಸುವಂಥ ಪಾತ್ರದ ಬಗ್ಗೆ ತಿಳಿಯುವ ಮೊದಲು, ಕೊಬ್ಬಿನ ಪ್ರಮುಖ ಎರಡು ವಿಧಗಳಾದ ಪರ್ಯಾಪ್ತ ಹಾಗು ಅಪರ್ಯಾಪ್ತಗಳ ಬಗೆಗೆ ಹೆಚ್ಚು ಅರಿಯಬೇಕು. ಮೂರನೆ ಟ್ರಾನ್ಸ್ ಕೊಬ್ಬನ್ನು ಅನೇಕ ಪಾಶ್ಚಿಮಾತ್ಯ ದೇಶಗಳ ಬೃಹತ್ ಮಾಲ್ಗಳಲ್ಲಿ ಮಾರಾಟ ಮಾಡುವ ಆಹಾರದಲ್ಲಿ ಹೆಚ್ಚೂಕಮ್ಮಿ ಇಲ್ಲದಂತೆ ಮಾಡಿದ್ದಾರೆ.

ಪರ್ಯಾಪ್ತ:- ಅಥವ ಕೆಟ್ಟ ಕೊಬ್ಬು ಪ್ರಮುಖವಾಗಿ ಪ್ರಾಣಿಜನ್ಯ ದನ ಮತ್ತು ಹಂದಿ ಮಾಂಸ ಅಲ್ಲದೆ, ಅಧಿಕ ಕೊಬ್ಬುಳ್ಳ ಕ್ಷೀರೋತ್ಪನ್ನ ಪದಾರ್ಥಗಳಾದ  ಬೆಣ್ಣೆ, ಕೆನೆ, ಚೀಸ್ (ಗಿಣ್ಣು ಮತ್ತು ಖೋವಾ) ಮತ್ತು ಮಾರ್ಗರಿನ್ (ಕೃತಕ ತುಪ್ಪ) ಮುಂತಾದ ಪದಾರ್ಥಗಳಲ್ಲಿ ಕಂಡುಬರುತ್ತದೆ. ಅಷ್ಟಲ್ಲದೆ, ಅತ್ಯಧಿಕ ಪ್ರಮಾಣದ ಕೊಬ್ಬು ತ್ವರಿತ ಮತ್ತು ಸಂಸ್ಕರಿಸಿದ (fast and processed) ಆಹಾರ ಪದಾರ್ಥಗಳಾದ ಪೀಟ್ಸಾ (pizza), ಹ್ಯಾಂಬರ್ಗರ್, ಡೆಸರ್ಟ್ಸ್
(ಊಟದ ನಂತರದ ಸಿಹಿ) ಹಾಗು ಕುಕೀಸ್, ಪೇಸ್ಟ್ರೀಸ್ ಮುಂತಾದವುಗಳಲ್ಲಿ ಕಂಡುಬರುತ್ತದೆ.

ಅಪರ್ಯಾಪ್ತ:- ಈಗಾಗಲೆ ನಾವು ತಿಳಿದ ಹಾಗೆ ಇದು ಉತ್ತಮ ಅಥವ ಒಳ್ಳೆಯ ಕೊಬ್ಬು. ಇದರಲ್ಲಿ ಮಾನೊ ಅಪರ್ಯಾಪ್ತ ಮತ್ತು ಪಾಲಿ ಅಪರ್ಯಾಪ್ತ ಎಂಬ ಎರಡು ವಿಧ. ಮೊದಲನೆ, ಮಾನೊ ಅಪರ್ಯಾಪ್ತಗಳು ಅವೊಕಾಡೊ ಅಥವ ಬೆಣ್ಣೆ ಹಣ್ಣು, ಕಡಲೆ ಬೀಜದ ಬೆಣ್ಣೆ (peanut butter), ಬಾದಾಮಿ, ಗೋಡಂಬಿ, ಹ್ಯಾಜೆಲ್ನಟ್ ಅಲ್ಲದೆ, ಕುಂಬಳಬೀಜ, ಸೂರ್ಯಕಾಂತಿ ಬೀಜ, ಎಳ್ಳು ಮುಂತಾದ ಪದಾರ್ಥಗಳಲ್ಲಿ ಹೆಚ್ಚು. ಸಸ್ಯಜನ್ಯ ಎಣ್ಣೆಗಳಾದ ಎಳ್ಳು, ಸೂರ್ಯಕಾಂತಿ, ಕಾಳು, ಕಡಲೆ, ಆಲಿವ್ ಎಣ್ಣೆ , ಕ್ಯಾನೊಲಾ ಮುಂತಾದವುಗಳಲ್ಲಿ ಕಂಡುಬರುತ್ತದೆ.          

   


ಎರಡನೆ, ಪಾಲಿ ಅಪರ್ಯಾಪ್ತ ಕೊಬ್ಬಿನಲ್ಲಿ ಒಮೆಗಾ-6 ಮತ್ತು ಒಮೆಗಾ-3 ಎಂಬ ಎರಡು ವಿಧ. ಇವು ಮೊದಲು ತಿಳಿಸಿದ ಸಸ್ಯಜನ್ಯ ಎಣ್ಣೆಗಳಲ್ಲಲ್ಲದೆ, ಸೂರ್ಯಕಾಂತಿ, ಅಗಸೆ, ಅಕ್ರೋಟ ಮುಂತಾದ ಬೀಜಗಳಲ್ಲಿ ಮತ್ತು ಸ್ಯಾಲ್ಮನ್ – ರಾಮ್ಸಿ,ಗೋಲಿ,ಬಾಲಡೆ, ತೊರೆಮೀನು; ಮ್ಯಾಕೆರಲ್ – ಬಾಂಗಡೆ, ಬಂಗುಡೆ, ಚೆಂಬಳ್ಳಿ, ಮಡಲೆ ಮತ್ತು ಹಕ್ಕಿಮೀನು; ಹೆರ್ರಿಂಗ್ – ಅಟ್ಲಾಂಟಿಕ್ ಸಾಗರದ ಬೆಳ್ಳಿಮೀನು; ಟ್ಯೂನಾ; ಟ್ರೌಟ್ ಮೀನು ಮುಂತಾದವುಗಳಲ್ಲಿ ಹೇರಳವಾಗಿವೆ.  

ನಮ್ಮ ಆಹಾರದ ಕೊಬ್ಬಿನ ಬಹಳ ಮುಖ್ಯ ಆರೋಗ್ಯದ ವಿಷಯವೆಂದರೆ ಅದು ನಮ್ಮ ಕೊಲೆಸ್ಟಿರಾಲಿನ ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂಬುದು. ಹೆಚ್ಚುಹೆಚ್ಚು ಪರ್ಯಾಪ್ತ ಕೊಬ್ಬಿನ ಉಪಯೋಗ ಎಲ್.ಡಿ.ಎಲ್ ಕೊಲೆಸ್ಟಿರಾಲನ್ನು ಅಧಿಕಗೊಳಿಸಿ ನಮ್ಮ ಅಪಧಮನಿಗಳಲ್ಲಿ ‘ಪ್ಲಾಕ್’ (plaque) ಅಂದರೆ ತಗಡಿನ ಹಾಗೆ ಕೊಬ್ಬಿನ ಪದರವನ್ನು ಉತ್ಪತ್ತಿಮಾಡಿ ಹೃದಯ ಸಂಬಂಧಿ ಹಾಗೂ ಪಾರ್ಶ್ವವಾಯುವಿನಂಥ ಕಾಯಿಲೆಗಳಿಗೆ ದಾರಿಮಾಡಿಕೂಡುತ್ತದೆ.
ಅನೇಕ ತ್ವರಿತ ಹಾಗು ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಪರ್ಯಾಪ್ತ ಕೊಬ್ಬಿನಿಂದ ಮಾಡಿದ್ದು, ಅವುಗಳಲ್ಲಿ ಅಧಿಕ ಕ್ಯಾಲೋರಿಗಳೂ ಇರುವುದರಿಂದ, ದೇಹದ ತೂಕ ಮತ್ತೂ ಹೆಚ್ಚಲು ಕಾರಣವಾಗಿ ಹೃದಯ ಸಂಬಂಧಿ ಕಾಯಿಲೆಗಳನ್ನು ಇನ್ನೂ ಹೆಚ್ಚಿಸುತ್ತವೆ. ಇದಕ್ಕೆ ಹೋಲಿಸಿದರೆ, ಅಪರ್ಯಾಪ್ತ ಕೊಬ್ಬು ಎಚ್.ಡಿ.ಎಲ್ ಅಂಶವನ್ನು ಅಧಿಕಗೊಳಿಸುತ್ತದೆ. ಈ ಎಚ್.ಡಿ.ಎಲ್ ರಕ್ತದಲ್ಲಿನ ಅಧಿಕ ಎಲ್.ಡಿ.ಎಲ್ ಅನ್ನು ಯಕೃತ್ತಿನತ್ತ ಹರಿಸುತ್ತದೆ ಮತ್ತು ಯಕೃತ್ತಿನಲ್ಲಿ ಅದನ್ನು ತುಂಡುತುಂಡರಿಸಿ ಹೊರದಬ್ಬಲು ಸಹಾಯವಾಗುತ್ತದೆ.
ಆದರೆ ಸಂಶೋಧನೆಯ ಪ್ರಕಾರ ಕೇವಲ ಆರೋಗ್ಯಕರ ಕೊಬ್ಬನ್ನಷ್ಟೆ ಹೆಚ್ಚು ತಿಂದರೆ ಮಾತ್ರ ಸಾಲದು; ಜೊತೆಗೆ ಅನಾರೋಗ್ಯಕರ ಪರ್ಯಾಪ್ತ ಕೊಬ್ಬನ್ನೂ ಸೇವಿಸಬೇಕು, ಆದರೆ ಅದನ್ನು ಕಡಿಮೆ ತಿನ್ನುವುದು ಅವಶ್ಯ. ಅಷ್ಟಲ್ಲದೆ, ಮಾನೊ ಅಪರ್ಯಾಪ್ತ ಕೊಬ್ಬಿನ ಬಳಕೆ, ಅದರಲ್ಲೂ ಬೀಜಗಳನ್ನು (ನಟ್ಸ್) ಮತ್ತು ಆಲಿವ್ ಎಣ್ಣೆಯ ಉತ್ಪತ್ತಿಗಳ ಬಳಕೆ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿತ ಮಾಡುತ್ತವೆ – ಮುಖ್ಯವಾಗಿ ಪರ್ಯಾಪ್ತ ಕೊಬ್ಬಿಂದ ಆರೋಗ್ಯಕರ ಕೊಬ್ಬಿಗೆ ಬದಲಾದರೆ ಉತ್ತಮ; ಮತ್ತು ಸಂಸ್ಕರಿಸಿದ ಕಾರ್ಬೊಹೈಡ್ರೇಟ್ (refined carbs) ಗಳು ಕೂಡ ಎಲ್.ಡಿ.ಎಲ್ ಗಳನ್ನು ಅಧಿಕಗೊಳಿಸುವುದರಿಂದ ಅವುಗಳ ಬಳಕೆ ಸಹ ಕಡಿತವಾಗಬೇಕು. ಇಷ್ಟಲ್ಲದೆ, ಮಾನೊ ಅಪರ್ಯಾಪ್ತ ಕೊಬ್ಬಿನಿಂದ ದೊರಕುವ ಅಧಿಕ ಲಾಭಕ್ಕಾಗಿ ಅದರ ಸೇವನೆಯ ಜೊತೆಯಲ್ಲಿ ಪರ್ಯಾಪ್ತ ಕೊಬ್ಬನ್ನೂ ಹೆಚ್ಚು ಬಳಸಿದರೆ, ಖಂಡಿತ ದೇಹಕ್ಕೆ ಧಕ್ಕೆಯಾಗುತ್ತದೆ. ಕೆಟ್ಟದ್ದಕ್ಕಿಂತ ಹೆಚ್ಚುಹೆಚ್ಚು ಒಳ್ಳೆಯ ಕೊಬ್ಬನ್ನು ಬಳಸುವುದರಿಂದ ನಮ್ಮ ಮೆದುಳಿನ ಆರೋಗ್ಯ ಸಹ ಹೆಚ್ಚಾಗುತ್ತದೆಂದು ತಿಳಿದುಬಂದಿದೆ.

ನರಕೋಶಗಳ ಹಾನಿಯ ತಡೆಗೆ ಎಂಬ ಆಹಾರ ಪದ್ಧತಿಯನ್ನು (MIND diet) ಪಾಲಿಸುವವರಲ್ಲಿ ಆಲ್ಸೈಮರ್ಸ್ (Alzheimers) ಕಾಯಿಲೆಯ ಅಪಾಯ ಕಮ್ಮಿ ಎಂದು ತಿಳಿದುಬಂದಿದೆ. ಈ ಮೈಂಡ್ ಡೈಯಟ್ ಅಥವ ನರಕೋಶಗಳ ಹಾನಿಯ ತಡೆಗೆ ಅವಶ್ಯ ತಿನ್ನಬಹುದಾದ ಆಹಾರ ಪದಾರ್ಥಗಳು, ಕೊಬ್ಬಿನ ಮೀನು, ಆಲಿವ್ ಎಣ್ಣೆ, ನಟ್ಸ್ ಮುಂತಾಗಿ; ಹಾಗು ಕಡಿಮೆ ಮಾಡಬೇಕಾದವು ಬೆಣ್ಣೆ, ಚೀಸ್, ಮಾಂಸ, ಪೇಸ್ಟ್ರಿಗಳು, ಎಣ್ಣೆಯಲ್ಲಿ ಕರಿದ ಮತ್ತು ಫಾಸ್ಟ್ ಪದಾರ್ಥಗಳು ಮುಂತಾಗಿ. ಆರೋಗ್ಯಕರ ಕೊಬ್ಬಿನ ಪದಾರ್ಥಗಳಿಗು ಮತ್ತು ಆರೋಗ್ಯಕರ ಮೆದುಳಿಗು ಮಧ್ಯೆ ಇರುವ ಸಂಬಂಧ ಎಂದರೆ ಅದು ಉರಿಯೂತ (inflammation). ಪರ್ಯಾಪ್ತ ಕೊಬ್ಬಿನ ಪದಾರ್ಥಗಳು ಮೆದುಳಿನ ಉರಿಯೂತವನ್ನು ಉಲ್ಬಣಗೊಳಿಸುವ ಮತ್ತು ಅಪರ್ಯಾಪ್ತ ಪದಾರ್ಥಗಳು ಉರಿಯೂತವನ್ನು ತಣ್ಣಗಾಗಿಸುವ ಕೆಲಸ ಮಾಡುತ್ತವೆ ಎಂದು ತಿಳಿದುಬಂದಿದೆ.
ಹಾಗಂತ ಯಾರೂ ಸಹ ಆಹಾರದಲ್ಲಿ ಸರಿಯಾದ ಕೊಬ್ಬಿನ ಉಪಯೋಗಕ್ಕಾಗಿ ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ಉನ್ನತ ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ. ಆದರೆ, ಗುಣಮಟ್ಟದ ಬಗ್ಗೆ ಎಚ್ಚರ ವಹಿಸುವಂಥ ಜನರಲ್ಲಿ ಕೂಡ, ಅನೇಕರು ತಾವು ತಿನ್ನುವ ಪ್ರಮಾಣದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಾರೆ. ಅದೂ ಖಂಡಿತ ಒಳ್ಳೆಯದಲ್ಲ. ಇತ್ತೀಚಿನ ಅಮೆರಿಕದ ಆಹಾರದ ಮಾರ್ಗದರ್ಶನದ ಪ್ರಕಾರ, ಒಂದು ರೀತಿಯಲ್ಲಿ ನಿರ್ದಿಷ್ಟ ಆಹಾರ ಪ್ರಮಾಣದ ಅವಶ್ಯಕತೆಯ ಸೂಚನೆಯೆ ಇಲ್ಲವಂತೆ. ಆದರೂ ಸಹ ಪರ್ಯಾಪ್ತ ಕೊಬ್ಬಿನ ಪ್ರಮಾಣವನ್ನು ದಿನ ಒಂದಕ್ಕೆ ಶೇಕಡ ಹತ್ತರಷ್ಟು ದೈನಂದಿನ ಕ್ಯಾಲೋರಿಯ ಮಿತಿ ಬಗ್ಗೆ ಸೂಚಿಸಲಾಗಿದೆ.
ಅಂತ್ಯಕ್ಕೆ ಮುನ್ನ: ಅಮೆರಿಕದ ಹೃದಯ ತಜ್ಞರ ಪ್ರಕಾರ ತೆಂಗಿನ ಎಣ್ಣೆಯಲ್ಲಿ  (ಮಾರುಕಟ್ಟೆಯಲ್ಲಿ ಆರೋಗ್ಯಕರ ಎಂದು ಅದನ್ನು ಮಾರಿದರೂ ಸಹ), 82% ಪರ್ಯಾಪ್ತ ಕೊಬ್ಬಿನ ಅಂಶ ಇರುವುದಾಗಿಯೂ ಮತ್ತು ಅದರಿಂದ ಆರೋಗ್ಯಕ್ಕೆ ಉತ್ತಮ ಎಂಬುದರಲ್ಲಿ ಯಾವ ಸತ್ಯವೂ ಇಲ್ಲವೆಂದು ತಿಳಿಸಲಾಗಿದೆ. ಅದು ಪ್ರಾಣಿಜನ್ಯ ಪರ್ಯಾಪ್ತ ಕೊಬ್ಬಿಗಿಂತ ಉತ್ತಮವೇ ಎಂದಾಗಿದ್ದರೂ, ದೈನಂದಿನ ಕೊಬ್ಬಿನ ಬಳಕೆಗೆ ಅದು ಖಂಡಿತ ಸೂಕ್ತವಲ್ಲ ಎಂದಿದ್ದಾರೆ.


Leave a Reply

Back To Top