ಎ. ಹೇಮಗಂಗಾ ಗಜಲ್

ಪ್ರೀತಿಸಿದ ನಿನ್ನ ಕೈಗೆ ಕೈ ಬೆಸೆದೆ ಹುರುಪಲಿ ನಡೆದ ಹಾದಿಯುದ್ದಕ್ಕೂ
ಪುಳಕ ತುಂಬಿತು ಮೈಮನದಲಿ ಹೂ ಮಳೆ ಸುರಿದ ಹಾದಿಯುದ್ದಕ್ಕೂ

ಸಂಜೆ ಸೂರ್ಯನ ರಂಗು ಹೊತ್ತ ಗುಲ್ ಮೊಹರ್ ಮರಗಳು
ಸ್ವಾಗತ ಕೋರಿದವು ನಮಗೆ ಕೆಂಪು ಚಾದರದ ಹಾದಿಯುದ್ದಕ್ಕೂ

ನಲುಗಿದ ಬಾಳ ಬಳ್ಳಿಗೆ ಅಕ್ಕರೆಯ ಜೀವಜಲ ಎರೆದವ ನೀನು
ಜೊತೆ ನೀನಿರೆ ಕಾಡಲಿಲ್ಲ ನೋವು ಕ್ರಮಿಸಿದ ಹಾದಿಯುದ್ದಕ್ಕೂ

ಬಿಗಿ ಅಪ್ಪುಗೆಯ ಬಿಸುಪಿನಲಿ ಮತ್ತೆ ಮತ್ತೆ ಸುಖಿಸಿತು ಜೀವ
ಲಜ್ಜೆಯ ತೆರೆ ಮೊಗ ಆವರಿಸಿತು ಸಾಗಿದ ಹಾದಿಯುದ್ದಕ್ಕೂ

ಅಧರದ ಸವಿ ಮುತ್ತಿನ ಮತ್ತಿಗೆ ಎಲ್ಲವೂ ಅಯೋಮಯವೇ
ಭಾವಾಂಬುಧಿಯಲ್ಲಿ ತಲ್ಲಣ ತಂಪಾದ ಹಾದಿಯುದ್ದಕ್ಕೂ

ಒಲವ ಸಾಂಗತ್ಯದಿ ಧನ್ಯತೆ ಪಡೆಯಿತು ನನ್ನ ಜನ್ಮ ಇನಿಯಾ
ಕಂಗಳ ಬೆಳಕಿರೆ ಕತ್ತಲೆಗೆ ತಾವಿಲ್ಲ ಸವೆಸಿದ ಹಾದಿಯುದ್ದಕ್ಕೂ

ಸ್ವರ್ಗವೇ ಧರೆಗೆ ಇಳಿದಂತಿತ್ತು ನಿನ್ನ ಸಾಮೀಪ್ಯದಲಿ ಹೇಮ ಳಿಗೆ
ಪ್ರೇಮಗಂಗೆ ತಡೆಯಿಲ್ಲದೇ ಹರಿದಳು ಹಸನಾದ ಹಾದಿಯುದ್ದಕ್ಕೂ


Leave a Reply

Back To Top