ರೂಪಕ ಸಾಮ್ರಾಜ್ಯ ಚಕ್ರವರ್ತಿ ಕುಮಾರವ್ಯಾಸ (ಜನ್ಮದಿನ ನಿಮಿತ್ತ 5 ಜನವರಿ)ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

ವಿಷ್ಣು ಭಕ್ತ ನಾರಾಯಣಪ್ಪನಿಗೆ ಸ್ವತಹ ವೀರನಾರಾಯಣ ದೇವರು ಕನಸಿನಲ್ಲಿ ಪ್ರತ್ಯಕ್ಷವಾಗಿ ನೀನು ಪ್ರತಿದಿನ ಮುಂಜಾನೆ ದೇವಸ್ಥಾನದ ಬಾವಿಯಲ್ಲಿ ಮುಳುಗು ಹಾಕಿ ಆ ಒದ್ದೆ ಬಟ್ಟೆಯಲ್ಲಿಯೇ ದೇಗುಲದ ಕಂಬದ ಬಳಿ ಕುಳಿತು ನಾನು ಹೇಳುವ ಮಹಾಭಾರತವನ್ನು ಪುನರ್ ರಚಿಸಬೇಕು ಎಂದು ಹೇಳಿದನು. ಆದರೆ ಯಾವತ್ತೂ ನನ್ನನ್ನು ಹುಡುಕುವ ಪ್ರಯತ್ನ ಮಾಡಬಾರದು ಕೇವಲ ನನ್ನ ಧ್ವನಿಯನ್ನು ಕೇಳುತ್ತಾ ನೀನು ಕಾವ್ಯ ರಚನೆ ಮಾಡಬೇಕು ಎಂದು  ಷರತ್ತು ವಿಧಿಸಿದನು. ಅಕಸ್ಮಾತ್ ನೀನು ಹಾಗೆ ಮಾಡದೆ ನನ್ನನ್ನು ಹುಡುಕುವ ಪ್ರಯತ್ನ ಮಾಡಿದರೆ ಮುಂದೆ ನಿನಗೆ ನಾನು ಅಥವಾ ನನ್ನ ಧ್ವನಿ ಕೇಳ ಸಿಗುವುದಿಲ್ಲ ಎಂದು ಎಚ್ಚರಿಕೆ ಕೂಡ ನೀಡಿದನು. ದೇವರ ಮಾತಿನಂತೆ ಪ್ರತಿದಿನವೂ ನಾರಾಯಣಪ್ಪ ಬಾವಿಯಲ್ಲಿ ಮುಳುಗು ಹಾಕಿ ಅದೇ ಒದ್ದೆ ಬಟ್ಟೆಯಲ್ಲಿಯೇ ದೇಗುಲದ ಕಂಬದ ಬಳಿ ಕುಳಿತು, ದೇಗುಲದ ವಿಗ್ರಹದ ಹಿಂದಿನಿಂದ ಕೇಳಿ ಬರುವ ಧ್ವನಿಯನ್ನು ಆಲಿಸುತ್ತಾ ಮಹಾಭಾರತವನ್ನು ಬರೆಯಲಾರಂಭಿಸಿದ. ಒಂದೊಂದೇ ಪರ್ವಗಳು ಮುಗಿಯುತ್ತಾ ಸುಮಾರು ಹತ್ತು ಪರ್ವಗಳ ಬರವಣಿಗೆ ಮುಗಿಯುತ್ತಾ ಬಂದಿತ್ತು. ಜೊತೆಗೆ ನಾರಾಯಣಪ್ಪನ ಕುತೂಹಲವು ಹೆಚ್ಚುತ್ತಾ ಹೋಗಿ ಒಂದು ದಿನ ನಿಧಾನವಾಗಿ ದೇಗುಲದ ಮೂರ್ತಿಯ ಹಿಂಭಾಗಕ್ಕೆ ಇಣುಕಿ ನೋಡಿದ. ತಕ್ಷಣವೇ ದೇವರ ಮೂರ್ತಿಯ ಹಿಂದೆ ಬರುತ್ತಿದ್ದ ಧ್ವನಿ ನಿಂತು ಹೋಯಿತು. ಅದೇ ಕೊನೆ ಮುಂದೆಂದು ಆ ಧ್ವನಿ, ಆ ದೈವ ಕಾಣಿಸಲೇ ಇಲ್ಲ…. ಆಗ ಕವಿಗೆ ಅರಿವಾದದ್ದು ತನ್ನಿಂದ ವ್ಯಾಸ ಭಾರತವನ್ನು ಬರೆಸುತ್ತಿದ್ದುದು ಸಾಕ್ಷಾತ್ ವೀರನಾರಾಯಣ ದೇವರು ಎಂದು.ಇದು ಕುಮಾರವ್ಯಾಸ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧನಾದ ಗದುಗಿನ ನಾರಾಯಣಪ್ಪನ ಕಥೆ.
ಇಂದಿಗೂ ಕೂಡ ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಕುಮಾರವ್ಯಾಸನ ಕಂಬವಿದೆ ಬಾವಿಯಿದೆ ದೇಗುಲದಲ್ಲಿ ದೇವರ ವಿಗ್ರಹವಿದೆ.


.
ಹುಬ್ಬಳ್ಳಿ ಹತ್ತಿರದ ಕುಂದಗೋಳ ತಾಲೂಕಿನ ಕೋಳಿವಾಡ ಗ್ರಾಮದಲ್ಲಿ ಜನಿಸಿದ ಕುಮಾರವ್ಯಾಸನ ಮೂಲ ಹೆಸರು ನಾರಾಯಣಪ್ಪ. ಈತನ ಪೂರ್ವಜರು ಕೋಳಿವಾಡ ಗ್ರಾಮದ ಶಾನುಭೋಗರಾಗಿದ್ದರು. ಬಹಳ ಕಾಲದವರೆಗೆ ಕುಮಾರವ್ಯಾಸನ ಹುಟ್ಟೂರಿನ ಕುರಿತು ವಿವಾದಗಳಿದ್ದು ಇತ್ತೀಚೆಗೆ ಎ ವಿ ಪ್ರಸನ್ನ ಎಂಬ ಸಂಶೋಧಕರಿಗೆ ಈ ಕುರಿತು ಇಂದಿಗೂ ಕೋಳಿವಾಡ ಗ್ರಾಮದಲ್ಲಿ ನೆಲೆಸಿರುವ ಕುಮಾರವ್ಯಾಸನ ವಂಶಜರು ದಾಖಲೆಗಳನ್ನು, ತಾಳೆಗರಿಯ ಪ್ರತಿಗಳನ್ನು  ನೀಡಿದ್ದು ಕುಮಾರವ್ಯಾಸನ ಕುಮಾರವ್ಯಾಸನ ಹುಟ್ಟೂರು ಕೋಳಿವಾಡ ಎಂಬುದನ್ನು ಪುಷ್ಠಿಗೊಳಿಸಿದ್ದಾರೆ. ವಿಜಯನಗರದ (ಹಂಪಿಯ) 2 ನೆಯ ದೇವರಾಯನ ಕಾಲದಲ್ಲಿ ಅಂದರೆ 14ನೇ ಶತಮಾನದ ಉತ್ತರಾರ್ಧ ಮತ್ತು 15 ನೆಯ ಶತಮಾನದ ಪೂರ್ವಾರ್ಧದಲ್ಲಿ ಸುಮಾರು 70 ವರ್ಷಗಳ ಕಾಲ ಈತ ಜೀವಿಸಿರಬಹುದು ಎಂಬ ಕುರುಹುಗಳಿವೆ. ಕುಮಾರವ್ಯಾಸನು ಪ್ರಭುಲಿಂಗಲೀಲೆಯನ್ನು ರಚಿಸಿದ ಕವಿ ಚಾಮರಸನ ತಂಗಿಯ ಗಂಡ. ಈತನು ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿ ಇದ್ದನೆಂದು ಹೇಳಲಾಗುತ್ತದೆ. ತೊರವೆ ರಾಮಾಯಣ ರಚಿಸಿದ ತೊರವೆ ನರಹರಿರಾಯರು ಮತ್ತು ತಿಮ್ಮಣ್ಣ ಕವಿಯ ಸಮಕಾಲೀನನೆಂದು ಕೂಡ ಹೇಳಲಾಗುತ್ತದೆ. ಗದುಗಿನ ವೀರ ನಾರಾಯಣ ದೇಗುಲದ ಬಳಿಯ ಶಾಸನದಲ್ಲಿಯೂ ಕೂಡ ಕುಮಾರವ್ಯಾಸನು ಇಲ್ಲಿಯೇ ನೆಲೆಸಿ ಭಾರತವನ್ನು ಬರೆದ ಕುರಿತು ಮಾಹಿತಿ ಇದೆ. ಪುರಂದರದಾಸರು ಕೂಡ ಹರಿಶರಣರೆನ್ನ ಮನೆಯ ಮೆಟ್ಟಲು ಪಾವನವಾಯಿತು ನಮ್ಮ ಮನೆ ನೋಡ ಎಂದು ತಮ್ಮ ಸುಳಾದಿಗಳಲ್ಲಿ ಕುಮಾರವ್ಯಾಸರು ತಮ್ಮ ಮನೆಗೆ ಬಂದ ಮತ್ತು ಭಾರತವನ್ನು ಕುರಿತು ಮಾತನಾಡಿದ ಬಗ್ಗೆ ವಿವರಿಸಿದ್ದಾರೆ.

ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರವ್ಯಾಸ ಎಂದು ತನ್ನನ್ನು ತಾನು ಕರೆದುಕೊಂಡಿದ್ದಾನೆ.ಅವರ ಕಾವ್ಯನಾಮವು ಕನ್ನಡದಲ್ಲಿ ಮಹಾಭಾರತದ ನಿರೂಪಣೆಯ ಶ್ರೇಷ್ಠ ಕೃತಿಯಾಗಿದೆ. ಕುಮಾರ ವ್ಯಾಸ ಎಂದರೆ “ಪುಟ್ಟ ವ್ಯಾಸ” ಅಥವಾ “ವ್ಯಾಸನ ಮಗ” ಎಂದರ್ಥ.

ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕುಮಾರವ್ಯಾಸ ಭಾರತ,ಎಂದು ಕೂಡ ಕರೆಯುತ್ತಾರೆ. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ
ನಡುಗನ್ನಡದಲ್ಲಿದೆ. ಆದರೆ  ಗದುಗಿನ ಭಾರತವನ್ನು ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಸಂಪೂರ್ಣ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೭೯೭೧ ಪದ್ಯಗಳನ್ನು ಒಳಗೊಂಡಿದೆ. ‘ಕುಮಾರವ್ಯಾಸ ಭಾರತ’ದ ಭಾಷೆ ನಡುಗನ್ನಡ.
ಇದು ಮಹಾಭಾರತದ, ಮೊದಲಹತ್ತು ಪರ್ವಗಳ (ಅಧ್ಯಾಯಗಳು) ರೂಪಾಂತರವಾಗಿದೆ.
ಕೃಷ್ಣನ ಭಕ್ತನಾದ ಕುಮಾರ ವ್ಯಾಸನು ತನ್ನಮಹಾಕಾವ್ಯವನ್ನು ಪಾಂಡವರಲ್ಲಿ ಹಿರಿಯನಾದ ಯುಧಿಷ್ಠಿರನ ಪಟ್ಟಾಭಿಷೇಕದೊಂದಿಗೆ ಕೊನೆಗೊಳಿಸುತ್ತಾನೆ ಈ ಕೃತಿಯು ತನ್ನ ಸಾರ್ವತ್ರಿಕ ಆಕರ್ಷಣೆಯಿಂದಾಗಿ ಕನ್ನಡ ಸಾಹಿತ್ಯದಲ್ಲಿ ಆಚರಿಸಲ್ಪಡುತ್ತದೆ.
ಗದುಗಿನ ಭಾರತವನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಲಾಗಿದೆ , ಇದು ಆರು ಸಾಲಿನ ಚರಣಗಳ ರೂಪವಾಗಿದೆ.
ಕುಮಾರ ವ್ಯಾಸ ಮಾನವ ಭಾವನೆಗಳನ್ನು ಅತ್ಯಂತ ಆಪ್ತವಾಗಿ ಪರಿಶೋಧಿಸುತ್ತಾನೆ, ಮೌಲ್ಯಗಳನ್ನುಒರೆಗೆ ಹಚ್ಚುವ ಕೆಲಸ ಮಾಡುತ್ತಾನೆ ಮತ್ತು ಶಬ್ದಕೋಶದ ವಿಶಿಷ್ಟ ಜ್ಞಾನವನ್ನು ಹೊಂದಿದ್ದು ಪಾಂಡಿತ್ಯವನ್ನು ಪ್ರದರ್ಶಿಸುತ್ತಾನೆ.
ಈ ಕೃತಿಯು ಅತ್ಯಾಧುನಿಕ ರೂಪಕಗಳ ಬಳಕೆಗೆ ವಿಶೇಷವಾಗಿ ಹೆಸರುವಾಸಿಯಾಗಿದೆ. ಆದ್ದರಿಂದಲೇ ಕುಮಾರವ್ಯಾಸನನ್ನು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು ಕರೆಯುತ್ತಾರೆ.

ಬವರವಾದರೆ ಹರನ ವದನಕೆ
ಬೆವರ ತಹೆನವಗಡಿಸುವೆನು ವಾಸ
ವನ ಸದೆವೆನು ಹೊಕ್ಕಡಹುದೆನಿಸುವೆನು ಮಾಧವನ

ಎಂಬ ಅಭಿಮನ್ಯುವಿನ ವೀರ ವಾಣಿಯನ್ನು 9ನೇ ತರಗತಿಯಲ್ಲಿ ನಾವು ಓದುತ್ತಿದ್ದಾಗ ನಮ್ಮ ಗುರುಗಳು ಪದ್ಯವನ್ನು ವಿವರಿಸಿ ಹೇಳುತ್ತಿದ್ದರೆ ಅಭಿಮನ್ಯುವಿನ ಕುರಿತ ಅಭಿಮಾನ, ಗೌರವ ಹೆಚ್ಚಿ ರೋಮಾಂಚನವುಂಟು ಮಾಡುತ್ತಿತ್ತು. ಇಂದಿಗೂ ಬಾಯಿಪಾಠವಾಗಿ ಇದನ್ನು ಬರೆಯುವಾಗ ನಮ್ಮನ್ನು ಈ ಮಟ್ಟಿಗೆ ಕುಮಾರವ್ಯಾಸ ಭಾರತದಲ್ಲಿ ತೇಲಿಸಿದ ಕನ್ನಡ ಭಾಷಾ ಶಿಕ್ಷಕರ ಪಠ್ಯ ವೈಖರಿ ಕಣ್ಣ ಮುಂದೆ ತೇಲಿದಂತಾಗುತ್ತದೆ.
ಕರ್ಣಾಟ ಭಾರತ ಕಥಾಮಂಜರಿಯನ್ನು ದಶ ಪರ್ವ ಭಾರತ ಎಂದು ಕರೆಯುತ್ತಾರೆ ಏಕೆಂದರೆ ಇದು ಮೂಲ ಮಹಾಭಾರತದಲ್ಲಿ ಹದಿನೆಂಟಕ್ಕೆ ವಿರುದ್ಧವಾಗಿ ಕೇವಲ ಹತ್ತು
ಪರ್ವಗಳನ್ನು ಹೊಂದಿದ್ದು
ನಡುಗನ್ನಡ ಅಂದರೆ ಮಧ್ಯಯುಗದ ಕನ್ನಡ ಸಾಹಿತ್ಯದ ವಿಕಾಸದ ಹಂತಗಳಲ್ಲಿ ನಂತರದ ಕನ್ನಡ ಸಾಹಿತ್ಯದ ಮೇಲೆ ಕುಮಾರವ್ಯಾಸ ಭಾರತದ ಪ್ರಭಾವ ಗಮನಾರ್ಹವಾಗಿದೆ.

ಕುಮಾರವ್ಯಾಸನು ತನ್ನ ಕವನದಲ್ಲಿ “ರಾಜನು ಶೌರ್ಯವನ್ನು ಆನಂದಿಸುತ್ತಾನೆ, ಬ್ರಾಹ್ಮಣನು ಎಲ್ಲಾ ವೇದಗಳ ಸಾರವನ್ನು, ತತ್ವಜ್ಞಾನಿ ಅಂತಿಮ ತತ್ವಶಾಸ್ತ್ರ, ಮಂತ್ರಿಗಳು ಮತ್ತು ರಾಜ್ಯ ಆಡಳಿತಗಾರರು ಆಡಳಿತದ ತಂತ್ರ ಮತ್ತು ಪ್ರೇಮಿಗಳು ಪ್ರಣಯ ಟಿಪ್ಪಣಿಗಳನ್ನು ಆನಂದಿಸುತ್ತಾರೆ ಎಂದು ಹೇಳಿದ್ದಾನೆ.

ಗದುಗಿನ ಭಾರತವನ್ನು ಇಂದಿಗೂ ವ್ಯಾಪಕವಾಗಿ ಓದಲಾಗುತ್ತದೆ. ಗಮಕ ಎಂದು ಕರೆಯಲ್ಪಡುವ ವಿಶಿಷ್ಟ ಶೈಲಿಯಲ್ಲಿ ಇದನ್ನು ಜನಪ್ರಿಯವಾಗಿ ಹಾಡಲಾಗುತ್ತದೆ. ಇತ್ತೀಚೆಗೆ ಗದಗ ಜಿಲ್ಲೆಯ ವಿವಿಧೆಡೆಗಳಲ್ಲಿ ಕುಮಾರವ್ಯಾಸ ನ ಭಾರತದ ಗಮಕ ವಾಚನವನ್ನು ತಿಂಗಳ ಪರ್ಯಂತ ಪ್ರಸ್ತುತ ಪಡಿಸಿದರು.

ಕುಮಾರವ್ಯಾಸನ ಮಹತ್ವವನ್ನು ಕನ್ನಡಿಗರಿಗೆ ಸಾರಲೆಂದೇ ಕವಿ ಕುವೆಂಪು ಅವರು

*ಕುಮಾರವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲ್ಲಿ ಕುಣಿಯುವುದು

ಮಿಂಚಿನ ಹೊಳೆ ಕುಣಿದಾಡುವುದು

ಎಂದು ಹಾಡಿದ್ದಾರೆ. ಕನ್ನಡಕ್ಕೆ ಮಹಾಭಾರತವನ್ನು ತಂದುಕೊಟ್ಟ ಹಲವಾರು ರೂಪಕಗಳ ಮೂಲಕ ತಾನು ಬರೆದ ಗದ್ಯವನ್ನು ಅಜರಾಮರಗೊಳಿಸಿದ ಕುಮಾರವ್ಯಾಸನಿಗೆ ಆತನ ಜನ್ಮದಿನದಂದು ಕನ್ನಡ ಜನತೆಯ ಸಹಸ್ರ ಕೋಟಿ ನಮನಗಳು


One thought on “ರೂಪಕ ಸಾಮ್ರಾಜ್ಯ ಚಕ್ರವರ್ತಿ ಕುಮಾರವ್ಯಾಸ (ಜನ್ಮದಿನ ನಿಮಿತ್ತ 5 ಜನವರಿ)ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

  1. ಈ ದೇವಸ್ಥಾನಕ್ಕೆ ಹೋಗಿದ್ದೆ. ಒಂದು ಮಹಾ ಕಾವ್ಯವನ್ನು ರಚಿಸಿದ ಜಾಗದಲ್ಲಿ ನಿಂತಾಗ ತುಂಬಾ ಖುಷಿಯಾಗಿತ್ತು. ಆದ್ರೆ ಅಂಥಹಾ ಸ್ಥಳದ ನಿರ್ವಹಣೆ ಇನ್ನೂ ಚೆನ್ನಾಗಿ ಮಾಡಬೇಕಾಗಿತ್ತು ಅಂತ ಅನಿಸ್ತು. ಮಾಹಿತಿಗೆ ಧನ್ಯವಾದಗಳು.

Leave a Reply

Back To Top