ಕಥಾ ಸಂಗಾತಿ
ಬಿ.ಟಿ.ನಾಯಕ್
‘ಅಮೋಘಸೇನ’
ಅದೊಂದು ಪಾಂಚಾಳ ರಾಜ್ಯ, ಅದರ ಮಹಾರಾಜಾ ತಾಂಡವಸೇನ ಬಹಳೇ ಕ್ರೂರಿಯಾಗಿದ್ದ. ಆತನಲ್ಲಿ ಅಲ್ಪ ಸ್ವಲ್ಪವಾದರೂ ಮಾನವೀಯತೆ ಇರಲಿಲ್ಲ. ಹಾಗಾಗಿ, ಆತನನ್ನು ಕಂಡು ಸುತ್ತಮುತ್ತಲಿನ ರಾಜ ಮಹಾರಾಜರು ಹೆದರುತ್ತಿದ್ದರು ಮತ್ತು ಆತನ ತಂಟೆಗೆ ಯಾರೂ ಬರುತ್ತಿರಲಿಲ್ಲ. ಆತ ತನ್ನ ರಾಜ್ಯದಲ್ಲಿ ಕೂಡಾ ದಬ್ಬಾಳಿಕೆಯಿಂದ ಕಾರ್ಯಭಾರ ಮಾಡುತ್ತಲಿದ್ದ. ಅಂದರೇ, ಆತ ಪರರ ಸುಗುಣಗಳನ್ನು ಲೆಕ್ಕಕ್ಕೆ ಪರಿಗಣಿಸದೇ ಮತ್ತು ಕಾರುಣ್ಯ ತೋರಿಸದೇ ತನ್ನದೇ ಆದ ದರ್ಪದ ದಾರಿಯಲ್ಲಿ ಸಾಗುತ್ತಿದ್ದ. ಆತನ ನಡೆ ಅರ್ಥ ಮಾಡಿಕೊಂಡ ಕೆಲ ಸಿಬ್ಬಂದಿ ಮತ್ತು ಹತ್ತಿರದ ಅನುಯಾಯಿಗಳು, ರಾಜನ ಮುಖ ನೋಡಿ ಅನೂಕೂಲ ಸಂದರ್ಭ ಮೂಡಿದಾಗ ಮಾತ್ರ ಮಾತಾಡುತ್ತಿದ್ದರು. ಆ ರಾಜನಿಗೆ ಸಲಹೆ ಕೊಡುವುದು ಒಂದು ಕಷ್ಟಕರ ಕೆಲಸವೇ ಆಗಿತ್ತು. ಹಾಗಾಗಿ, ಕೆಲವರು ಯಾವಾಗಲೂ ಅಂತರ ಕಾಯ್ದುಕೊಂಡು, ಆತನ ಕರೆ ಬಂದಾಗ ಮಾತ್ರ ಹೋಗಿ ತಲೆ ಅಲ್ಲಾಡಿಸಿ ವಿಧೇಯತೆ ತೋರಿಸಿ ಮರಳುತ್ತಿದ್ದರು. ಅವರು ಹೆದರುವ ಕಾರಣ ನಿಜವೇ ಇತ್ತು. ಏಕೆಂದರೇ, ಸುತ್ತಮುತ್ತಲಿನ ರಾಜರು, ಸಾಮಂತರು ಮತ್ತು ಮಾಂಡಲೀಕರ್ಯಾರೂ ರಾಜನ ತಂಟೆಗೆ ಬರುತ್ತಿರಲಿಲ್ಲ. ಅದೇ ಅವಗುಣವನ್ನು ತಾನು ಹೆಮ್ಮೆಯಾಗಿರಿಸಿಕೊಂಡು, ತನ್ನ ದಬ್ಬಾಳಿಕೆಯ ಆಡಳಿತವನ್ನು ಅನಿಯಮಿತಗೊಳಿಸಿಕೊಂಡ. ಅತನ ಕೆಲವು ಆಪ್ತ ಅಡಿಯಾಳುಗಳು ಅಸತ್ಯ ಮತ್ತು ದುರಾಚಾರದಿಂದ ಕೂಡಿದ್ದವರಾಗಿದ್ದವರು ತಮ್ಮ ಬೇಳೆ ಬೇಯಿಸಿಕೊಳ್ಳುವಲ್ಲಿ ಯಶಸ್ವಿಯಾದರು ಮತ್ತು ಬರೀ ಚಾಡೀ ಕೋರರಾದರು. ಹಾಗಾಗಿ, ಅಲ್ಲಿಯ ಅಮಾಯಕರು ಮತ್ತು ಮುಗ್ಧರು ಅಪರಾಧ ಮಾಡದೆಯೇ ರಾಜನ ಕಾರಾಗೃಹವನ್ನು ಸೇರಿಕೊಂಡರು. ಅಲ್ಲದೇ ಕಾರಾಗೃಹದಲ್ಲಿರುವವರಿಗೆ ಅನ್ನ, ನೀರು ಕೊಡದೆ, ಚಾಟಿ ಏಟಿನಿಂದ ಶಿಕ್ಷಿಸುತ್ತಿದ್ದರು. ಇದನ್ನೆಲ್ಲ ಅರಿತ ಕೆಲವು ರಾಜಭಕ್ತರು, ತಮ್ಮ ಅಹವಾಲನ್ನು ಸೌಮ್ಯ ಗುಣಹೊಂದಿದ್ದ ರಾಜಕುಮಾರ ಅಮೋಘ ಸೇನನ ಗಮನಕ್ಕೆ ತಂದರು. ರಾಜಕುಮಾರ ಅಮೋಘಸೇನನು ಮಹಾರಾಜನ ಏಕೈಕ ಪುತ್ರನಾಗಿ ತಂದೆಯೊಡನೆ ಸಲಿಗೆ ಹೊಂದಿದ್ದರೂ, ಒಮ್ಮೊಮ್ಮೆ ರಾಜನಿಗೆ ಮೂಡುವ ಕೋಪಕ್ಕೆ ಹೆದರಿಬಿಡುತ್ತಿದ್ದ. ಹಾಗಾಗಿ, ರಾಜ್ಯದ ಕಾರುಬಾರಿನಲ್ಲಿ ಏಂದೂ ಆತ ಮೂಗು ತೂರಿಸುತ್ತಿರಲಿಲ್ಲ.
ಅಮೋಘಸೇನನು ರಾಜನಷ್ಟು ಬಲಶಾಲಿಯಾಗಿರದಿದ್ದರೂ ಜನಮಾನಸವನ್ನು ಗೆಲ್ಲುವಂಥಹ ವ್ಯಕ್ತಿಯಾಗಿದ್ದ. ಆತನಿಗೆ ಚಾಣಾಕ್ಷತೆ ಮತ್ತು ಸಹನಶೀಲತೆ ಧಾರಾಳವಾಗಿತ್ತು. ಅಮೋಘ ರಾಜನಿಗೆ ಹೆದರುವುದಕ್ಕೆ ಇನ್ನೂ ಒಂದು ಕಾರಣವಿತ್ತು. ಅದು ಏನೆಂದರೇ, ಅಮೋಘ ಚಿಕ್ಕವನಾಗಿದ್ದಾಗ ತನ್ನ ತಾಯಿಯವರಾದ ರಾಣಿ ವಿಮಲಾದೇವಿಯನ್ನು ಮಹಾರಾಜ ಹಿಂಸಿಸುತ್ತಿದ್ದ. ಆ ಹಿಂಸೆಯು ಇನ್ನಷ್ಟು ಅತಿರೇಕಕ್ಕೆ ಹೋಗಿ, ಮಹಾರಾಣಿಯ ಮೃತ್ಯುವಿಗೆ ಕಾರಣವಾಯಿತು. ಅದಕ್ಕೆ ನೇರ ಕಾರಣ ತನ್ನ ತಂದೆಯೇ ಎಂದು ಅರಿತುಕೊಂಡಿದ್ದ. ಆದರೇ ಆತನಿಗೆ ಏನೂ ಮಾಡಲಾಗಲಿಲ್ಲ. ತನ್ನ ತಂದೆಯ ಅಟ್ಟಹಾಸ ಮುಂದುವರೆದು, ತಾನು ಅಸಹಾಯಕನಾಗಿ ನಾಡಿನ ಜನತೆಗೆ ಮರುಕ ತೋರಿಸುವುದೊಂದು ಬಿಟ್ಟು, ಏನೂ ಮಾಡಲಾಗುವುದಿಲ್ಲ ಏಂದು ವ್ಯಥೆ ಪಡುತ್ತಿದ್ದ. ಆಗೋ ಈಗೋ ತಂದೆಯನ್ನು ಎದುರಿಸಿ ಮಾತಾಡುತ್ತಿದ್ದ. ಆಗ ಮಹಾರಾಜಾ ಆತನನ್ನು ತನ್ನ ಪುತ್ರನೆಂದು ನೋಡದೇ ಕೊಂದು ಹಾಕುವುದಾಗಿ ಏಂದು ಹೇಳಿ ಬೆದರಿಸುತ್ತಿದ್ದ. ಹೀಗಾಗಿ, ರಾಜಕುಮಾರನಿಗೆ ರಾಜನನ್ನು ಮಟ್ಟ ಹಾಕಲು ಏನು ಮಾಡಬೇಕೆಂಬುದು ತಿಳಿಯದಾಯಿತು. ಅನಿವಾರ್ಯವಾಗಿ ಕೆಲ ಕಾಲ ಸುಮ್ಮನಾದ.
ರಾಜಕುಮಾರ ಅಮೋಘನಿಗೆ ಮರುಧರ ಎಂಬ ಆಪ್ತ ಸ್ನೇಹಿತನಿದ್ದ. ಅವರಿಬ್ಬರೂ ಒಂದೇ ಆಶ್ರಮದಲ್ಲಿ ವಿದ್ಯೆ ಕಲಿತಿದ್ದರು. ರಾಜಕುಮಾರನು ತಾಯಿ ಪ್ರೀತಿ ವಂಚಿತನಾಗಿದ್ದರಿಂದ, ಆತ ಆ ಪ್ರೀತಿಯನ್ನು ತನ್ನ ಸ್ನೇಹಿತನಲ್ಲಿ ಕಂಡುಕೊಂಡಿದ್ದ. ಆತನಿಗೆ ಮರುಧರ ಎಂದರೆ ಪಂಚಪ್ರಾಣ ಎಂದು ಬೇರೆ ಹೇಳಬೇಕಾಗಿಲ್ಲ. ಆದರೆ, ವಿಧಿಯ ಶಾಪವೋ ಏನೋ ಮರುಧರ ಬಡತನದಲ್ಲಿ ತೊಳಲಾಡುತ್ತಿದ್ದ. ಆತನ ವೃದ್ಧ ತಂದೆ ತಾಯಿಗಳು ಕಾಯಿಲೆಯಿಂದ ಕೃಶರಾಗಿ, ಅನ್ನ ನೀರು ಕೂಡಾ ಸೇರದ ಪರಿಸ್ಥಿತಿಯಲ್ಲಿ ಇದ್ದಾಗ, ರಾಜಕುಮಾರ ತನ್ನ ತಂದೆಗೆ ತಿಳಿಯದ ಹಾಗೆ ಆಸ್ಥಾನದ ವೈದ್ಯ ಪಂಡೀತರಿಗೆ ಬೇಡಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದ. ಆದರೆ, ಈ ವಿಷಯ ಹೇಗೋ ಮಹಾರಾಜನಿಗೆ ಆತನ ಅತ್ಯಾಪ್ತರು ಸುದ್ದಿ ತಲುಪಿಸಿದಾಗ, ಮಹಾರಾಜಾ ತನ್ನ ಪುತ್ರನಿಗೆ
‘ಇದು ಸಲ್ಲದು’ ಎಂದುಎಚ್ಚರಿಸಿದ್ದ ! ಆದರೂ, ರಾಜಕುಮಾರ ಶತ ಪ್ರಯತ್ನ ಮಾಡಿ ಮರುಧರನ ತಂದೆ ತಾಯಿಗಳಿಗೆ ಸಹಾಯಮಾಡುತ್ತಲೇ ಇದ್ದ. ಇದನ್ನು ಹೀಗೆಯೇ ಮುಂದುವರೆಸಲು ಸಾಧ್ಯವಿಲ್ಲವೆಂದರಿತ ರಾಜಕುಮಾರ, ಒಂದು ನಿರ್ಧಾರಕ್ಕೆ ಬಂದು ತನ್ನ ತಂದೆಯ ಬಳಿಗೆ ಹೋಗಿ ಧೈರ್ಯದಿಂದ ತನ್ನ ಮನದಾಳದ ಮಾತುಗಳನ್ನು ಹೇಳಿಕೊಂಡ;
‘ಅಪ್ಪಾಜಿ ಮಹಾರಾಜರೇ, ನನ್ನ ಸಲುವಾಗಿ ಇಲ್ಲಿಯವರೆಗೆ ನಿಮ್ಮ ಬಳಿ ನಾನು ಏನೂ ಕೇಳಿಲ್ಲ. ಹಾಗಾಗಿ, ನೀವು ನನಗಾಗಿ ಒಂದು ಸಹಾಯ ಮಾಡುವೀರೆಂದು ನಂಬಿ, ನಿಮ್ಮಲ್ಲಿ ಒಂದು ಬಿನ್ನಹ ಮಾಡುತ್ತಿದ್ದೇನೆ. ಅದನ್ನು ನಡೆಸಿಕೊಡಿ’ ಏಂದ.
‘ಕುಮಾರ..ಅದೇನದು ವಿಷಯ ?’ ಎಂದು ರಾಜ ಪ್ರಶ್ನಿಸಿದಾಗ;
‘ನೀವು ವಾಗ್ದಾನ ಮಾಡಿದರೆ ಮಾತ್ರ ತಿಳಿಸುತ್ತೇನೆ’ ಎಂದ.
‘ಅದೆಲ್ಲಾ ಯಾವ ಪೀಠಿಕೆ ಬೇಡ, ವಿಷಯ ತಿಳಿಸು. ಸಾಧ್ಯವಾದರೆ ಮಾಡುತ್ತೇನೆ ಇಲ್ಲದಿದ್ದರೆ ಇಲ್ಲ’ ಎಂದು ಖಡಾ ಖಂಡಿತವಾಗಿ ಹೇಳಿದಾಗ;
‘ನನ್ನ ಪ್ರಾಣ ಸ್ನೇಹಿತನ ತಂದೆ ತಾಯಿಗಳಿಗೆ ವೈದ್ಯಕೀಯ ಸೇವೆ ಮಾಡಿಸಲು ನನಗೆ ಅಪ್ಪಣೆ ಕೊಡಿ’ ಎಂದ. ಅದಕ್ಕುತ್ತರವಾಗಿ ಮಹಾರಾಜಾ ಹೀಗೆ ಹೇಳಿದ ;
‘ಮೂರ್ಖ ಪುತ್ರನೇ, ನನಗೆ ಸ್ನೇಹಿತ ಎಂಬ ಶಬ್ದ ಆಗಿ ಬರುವುದಿಲ್ಲವೆಂದು ನಿನಗೆ ಚೆನ್ನಾಗಿ ತಿಳಿದಿದೆ. ಅಲ್ಲದೇ, ನನಗೆ ನಾನೇ ಸ್ನೇಹಿತ ಮತ್ತು ಆಪತ್ಭಾಂದವ ಎಂದು ಕೂಡಾ ನಿನಗೆ ತಿಳಿದಿದೆ. ಇಷ್ಟು ತಿಳಿದರೂ ನನ್ನನ್ನು ಉದ್ರೇಕಿಸಲು ಬಂದಿದ್ದೀಯಾ ಹೇಗೆ ? ಅಥವಾ ಯಾರಾದರೂ ನನ್ನ ವೈರಿಗಳು ನಿನ್ನ ಬೆನ್ನ ಹಿಂದೆ ಇದ್ದಾರೆಯೇ ? ನನಗೆ ವಿರುದ್ಧವಾಗಿ ಹೋಗುವುದು ಸರಿಯಲ್ಲ ಎಂದು ಈ ಮೊದಲು ಎಚ್ಚರಿಸಿದ್ದೇನೆ ಮತ್ತು ಈಗಲೂ ಮತ್ತೊಮ್ಮೆ ಎಚ್ಚರಿಸುತ್ತಿದ್ದೇನೆ. ನಿನ್ನ ಸ್ನೇಹಿತನ ಹೆಸರು ಹೇಳಿ ನನಗೆ ಇಷ್ಟ ಇಲ್ಲದ ಸ್ನೇಹತ್ವದ ಬಗ್ಗೆ ನನ್ನನ್ನು ಕೆಣಕುವದು ಸರಿಯಲ್ಲ. ಈ ವಿಷಯವನ್ನು ಇಲ್ಲಿಗೆ ಬಿಟ್ಟು, ನಾನು ಹೇಳಿದಂತೆ ಕೇಳಿದರೆ ಮಾತ್ರ ನಿನಗೆ ರಾಜಭವನದಲ್ಲಿ ಬದುಕಲು ಅವಕಾಶ ಕೊಡುತ್ತೇನೆ. ಇಲ್ಲವಾದಲ್ಲಿ ನಿನ್ನನ್ನು ಕಾರಾಗೃಹಕ್ಕೆ ತಳ್ಳಿಬಿಡುತ್ತೇನೆ. ಆಗ ನಿನಗೆ ಯಾವ ಸ್ವಾತಂತ್ರ‍್ಯವೂ ಇಲ್ಲ ಮತ್ತು ಈ ರಾಜ್ಯದ ರಾಜಕುಮಾರನಾಗಿಯೂ ಇರುವುದಿಲ್ಲ. ಇನ್ನು ಮೇಲೆ ನೀನು ಸಹಾಯ, ಮರುಕ ಮತ್ತು ಇತರ ಶಬ್ದಗಳನ್ನು ನನ್ನ ಮುಂದೆ ಏಂದೂ ಪ್ರಯೋಗಿಸಬೇಡ. ನಾನು ಎಂದೂ ಅವುಗಳಿಗೆ ಬಾಗುವುದಿಲ್ಲ ಮತ್ತು ಮರುಳಾಗುವುದಿಲ್ಲ.’ ಎಂದು ಮಹಾರಾಜಾ ಖಡಾ ಖಂಡಿತವಾಗಿ ಹೇಳಿದ.
‘ಇಲ್ಲಾ ಅಪ್ಪಾಜಿ ಮಹಾರಾಜರೇ, ನಾನು ಪ್ರಾಮಾಣಿಕವಾಗಿ ಆತನ ಸ್ಥಿತಿ ಗತಿ ಅರಿತು ಹೇಳುತ್ತಿದ್ದೇನೆ. ಅಲ್ಲದೇ, ಪರಮಾತ್ಮ ನಮಗೆ ಎಷ್ಟೋ ಸಂಪತ್ತು ಕೊಟ್ಟಿದ್ದಾನೆ, ಅದರಲ್ಲಿ ಒಂದು ಹನಿಯಷ್ಟು ಹೊರಗೆ ಹೋದರೇ ನಮಗೆ ಏನೂ ಕೊರತೆ ಆಗುವುದಿಲ್ಲ ಅಲ್ಲವೇ ? ಅಲ್ಲದೇ, ನೀವು ನನ್ನ ಜನ್ಮದಾತರು, ನಾನು ನಿಮಗೆ ಕೆಟ್ಟ ಹೆಸರು ತರಲು ಸಾಧ್ಯವೇ ಯೋಚಿಸಿ ?’ ಏಂದು ವಿವರಿಸಿದ.
‘ಇಲ್ಲಾ, ಮತ್ತೆ ಮತ್ತೇ ನಿನ್ನ ಮಾತುಗಳಿಂದ ನನ್ನನ್ನು ಕೆಣಕಬೇಡ. ಈ ರೀತಿ ಮಾತಾಡಿ ನನಗೆ ಸಿಟ್ಟು ಮೂಡಿಸಬೇಡ. ಹಾಗೇನಾದರೂ, ನನ್ನ ಮನಸ್ಸಿಗೆ ಭಂಗ ತಂದರೆ, ನಾನು ನಿನ್ನ ತಂದೆಯಾಗಿರುವುದಿಲ್ಲ ಎಂಬುದು ಅರಿತುಕೊ. ಸಧ್ಯಕ್ಕೆ ಇಲ್ಲಿಂದ ನೀನು ತೊಲಗು’ ಎಂದು ಕಣ್ಣರಳಿಸಿ ಹೇಳಿ, ರಾಜಕುಮಾರನನ್ನು ಅಲ್ಲಿಂದ ಹೋಗುವಂತೆ ಮಾಡಿದ.
ಮಾರನೇದಿನ ಮಹಾರಾಜಾ ತನ್ನ ಭಟರಿಬ್ಬರನ್ನು ಮರುಧರನ ಮನೆಗೆ ಕಳಿಸಿದ. ಅವರು ಅಲ್ಲಿಗೆ ಹೋದಾಗ ಅಲ್ಲಿಯ ಪರಿಸ್ಥಿತಿ ನೋಡಿ ಅವರಿಗೆ ಮರುಕ ಮೂಡಿತು. ಆದರೆ, ಅವರು ರಾಜಾಜ್ಞೆ ಪಾಲಿಸುವುದನ್ನು ಬಿಟ್ಟು ಏನೂ ಮಾಡಲಾರದಾದರು. ಅದು ಒಂದು ಪುಟ್ಟ ಮನೆ. ಅಲ್ಲಿ ಇರೋದೇ ಒಂದು ಕೊಠಡಿ. ಅದರ ಒಂದು ಮೂಲೆಯಲ್ಲಿ ಸ್ನಾನ, ಇನ್ನೊಂದು ಮೂಲೆಯಲ್ಲಿ ಚಿಕ್ಕ ಪುಟ್ಟ ಸಾಮಾನುಗಳನ್ನು ಅವರು ಹೊಂದಿಸಿಟ್ಟು ಕೊಂಡಿದ್ದರು. ಅವರು ಮಲಗುವ ಸ್ಥಳ ಕೂಡಾ ಮಧ್ಯದಲ್ಲಿಯೇ ಇತ್ತು. ಆಗ ಮರುಧರ ತನ್ನ ತಂದೆ ತಾಯಿಯ ಸೇವೆ ಮಾಡುತ್ತಾ ಇದ್ದ. ಆಗ ಮಹಾರಾಜರ ಆಜ್ಞೆಯಂತೆ ಮರುಧರನ ಕೈಗಳನ್ನು ಹಗ್ಗದಿಂದ ಕಟ್ಟಿ ಎಳೆದು ಕೊಂಡು ಹೋಗಿ ಅರಮನೆಯ ಹಿಂಭಾಗದಲ್ಲಿ ಇರುವ ಬಂದೀ ಖಾನೆಯಲ್ಲಿ ಆತನನ್ನು ಕೂಡಿ ಹಾಕಿದರು. ಆಮೇಲೆ ಮಹಾರಾಜನು ಬಂದಿಖಾನೆಗೆ ಆಗಮಿಸಿ, ಮರುಧರನಿಗೆ ಉದ್ದನೆಯ ಚಾಟಿಯಿಂದ ತನ್ನ ಸಮಕ್ಷಮ ‘ಮನಸೋ ಇಚ್ಛೆ’ ಹೊಡೆಸಿದ. ಆ ಚಾಟಿಯ ಏಟಿಗೆ ತತ್ತರಿಸಿದ ಮರುಧರ ಹೆದರಿ ಕಂಗಾಲಾಗಿಬಿಟ್ಟ !. ಆಗ ಮಹಾರಾಜನಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಹೀಗೆ ಹೇಳಿದ;
‘ಮಹಾರಾಜರೇ, ನನ್ನ ಅಪರಾಧವಾದರೂ ಏನು ?’ ಎಂದು ಪ್ರಲಾಪಿಸಿದ.
‘ಏನೋ..ಭಡವಾ, ನೀನು ನನ್ನ ಪುತ್ರನ ತಲೆ ಕೆಡಿಸಿ, ಅದೇನು ಮಾಡಬೇಕೆಂದಿಯಾ ? ನಿನ್ನ ಸ್ಥಾನ ಏನು. ನಮ್ಮದು ಏನು ಅರಿವಿದೆಯಾ ?’.
‘ಇಲ್ಲಪ್ರಭು..ನಾನು ಆತನಿಗೆ ಏನೂ ಹೇಳಿಲ್ಲ. ನನ್ನ ಪರಿಸ್ಥಿತಿ ಅರಿತು ಆತನೇ ನಿಮ್ಮಲ್ಲಿ ಪ್ರಸ್ತಾಪಿಸಿರಬಹುದು. ನಾನು ಅದಾಗಲೇ ‘ಹಾಗೆ ಮಾಡಬೇಡ’ ಎಂದು ಆತನಿಗೆ ತಿಳಿಸಿದ್ದೇನೆ. ಅಲ್ಲದೇ, ನನಗೆ ಏನೂ ಬೇಡ ಪ್ರಭು. ನನ್ನನ್ನು ಬಿಟ್ಟು ಬಿಡಿ ನನ್ನ ತಂದೆ ತಾಯಿಗಳನ್ನು ಕರೆದು ಕೊಂಡು ಇಲ್ಲಿಂದ ಬಹಳ ದೂರ ಹೋಗಿ ಬಿಡುತ್ತೇನೆ’ ಎಂದು ಅಂಗಲಾಚಿದ. ಆದರೆ, ರಾಜನಲ್ಲಿ ಇರಲಾರದ ಕರುಣೆ ಏಲ್ಲಿಂದ ಮೂಡಬೇಕು ? ಆತ ಮತ್ತಷ್ಟು ಕೋಪಗೊಂಡು ಅವನಿಗೆ ಮತ್ತೇ ಸಾಯುವಂತೆ ಹೊಡೆಯಲು ಹೇಳಿ, ಕ್ಷುದ್ರತೆಯಿಂದ ಹೊರಟು ಹೋದ. ಅಲ್ಲಿಯ ಕಾವಲು ಭಟರು ಕೂಡ ಮರುಧರನ ಪರಿಸ್ಥಿತಿ ನೋಡಿ ಮರುಕಪಟ್ಟು, ರಾಜ ಹೋದ ಮೇಲೆ ಹೊಡೆಯುವುದನ್ನು ನಿಲ್ಲಿಸಿದರು.
ಈ ವಿಷಯ ತಿಳಿದು ಅಮೋಘ ತನ್ನ ತಂದೆಯ ಮೇಲೆ ಬಹಳೇ ಕೋಪಗೊಂಡ. ಮೊದಲು ಸ್ನೇಹಿತನನ್ನು ನೋಡಿಕೊಂಡು ಬರಲು ಕಾರಾಗೃಹಕ್ಕೆ ಹೋದ. ಅಲ್ಲಿದ್ದ ಭಟರನ್ನು ಉದ್ದೇಶಿಸಿ ಹೀಗೆ ಕೇಳಿದ; ‘ಅದೇಕೆ ಹಾಗೆ ಅವನನ್ನು ಬಂಧಿಸಿದ್ದೀರಿ’ ಎಂದು ಕೇಳಿದ. ಅದಕ್ಕವರು ‘ರಾಜಾಜ್ಞೆ’ ಎಂದು ಹೇಳಿದರಷ್ಟೇ. ಆಮೇಲೆ ಕಾರಾಗೃಹದ ಬಾಗಿಲು ತೆರೆಯಲು ಹೇಳಿದನು. ಆಗ ಅವರು ಮಹಾರಾಜರ ಅಪ್ಪಣೆಯಾದರೆ ಮಾತ್ರ ನಾವು ತೆಗೆಯಬಹುದು ಎಂದಾಗ;
‘ನಾನು ಅವರ ಪುತ್ರ ಮತ್ತು ಈ ನಾಡಿನ ರಾಜಕುಮಾರ, ನನ್ನ ಹೇಳಿಕೆಗೆ ಬೆಲೆ ಇಲ್ಲವೇ ?’ ಎಂದು ಅವರ ಮೇಲೆ ಕೋಪಗೊಂಡ.
‘ರಾಜಕುಮಾರರೇ, ನಾವು ನಿಮ್ಮ ಅಡಿಯಾಳುಗಳು. ನಮಗೆ ಮಹಾರಾಜರ ಆಜ್ಞೆ ಪಾಲಿಸುವುದೊಂದೇ ನಮ್ಮ ಧರ್ಮ. ಬಹುಶಃ ಇದು ನಿಮಗೆ ತಿಳಿದಿದೆ’ ಎಂದರು ಅಸಹಾಯಕರಾಗಿ.
ಆಗ ರಾಜಕುಮಾರ ಮುಖ ಕೆಂಡದಂತೆ ಮಾಡಿಕೊಂಡು ನೇರವಾಗಿ ಅರಮನೆಗೆ ಹೋಗಿ ತಂದೆಯನ್ನು ಹೀಗೆ ಪ್ರಶ್ನಿಸಿದ;ಅಪ್ಪಾಜಿ..ಮರುಧರನ ಅಪರಾಧವಾದರೂ ಏನು ?ಆತನನ್ನು ಇಲ್ಲಿ ಕೂಡಿ ಹಾಕಿದರೆ ಆತನ ತಂದೆ ತಾಯಿಗಳನ್ನು ಯಾರು ನೋಡಿ ಕೊಳ್ಳಬೇಕು ?’ ಎಂದಾಗ ರಾಜ ಹೀಗೆ ಹೇಳಿದ;
‘ಅವನು ನಿನ್ನ ಮನಸ್ಸನ್ನು ಕೆಡಿಸಿದ ರಾಜದ್ರೋಹಿ. ನೀನು ಅವನನ್ನು ಬಿಟ್ಟು ಇರುವುದಿಲ್ಲ ಎಂದು ನಮಗೆ ಚೆನ್ನಾಗಿ ಮನದಟ್ಟು ಆಗಿದೆ. ಹಾಗಾಗಿ, ಆತನನ್ನು ಕಾರಾಗೃಹದಲ್ಲಿ ಕೂಡಿ ಹಾಕಿದ್ದೇವೆ’
‘ಅಪ್ಪಾಜಿ, ಅಪರಾಧವೇ ಇಲ್ಲದಿರುವಾಗ, ಆತನನ್ನು ಕಾರಾಗೃಹದಲ್ಲಿ ಇಡುವುದು ಯಾವ ನ್ಯಾಯ ?’
‘ಅದು ನಿನಗೆ ಸಂಭಂದಿಸಲಾರದ ವಿಷಯ. ಇದರ ಬಗ್ಗೆ ನೀನು ಏನು ಹೇಳಿದರೂ ನಾನು ಕೇಳುವ ಸ್ಥಿತಿಯಲ್ಲಿಲ್ಲ. ಇನ್ನೂ ಪೀಡಿಸಿದರೆ, ಅವನನ್ನು ಕಾರಾಗೃಹದಲ್ಲಿ ಕೊಂದು ಹಾಕಿಸಿ ಬಿಡುತ್ತೇನೆ ಎಚ್ಚರವಿರಲಿ !’ ಎಂದ ಕೋಪಿಷ್ಠ ಮಹಾರಾಜಾ. ಆಗ ಅಮೋಘ ತನ್ನ ತಂದೆಗೆ ಹೀಗೆ ಹೇಳಿದ;
‘ನಿಮ್ಮನ್ನು ಅಪ್ಪಾಜಿ ಎಂದು ಕರೆಯಲೂ ನನಗೆ ನಾಚಿಕೆಯಾಗುತ್ತಿದೆ. ಒಬ್ಬ ಅಸಹಾಯಕ ವ್ಯಕ್ತಿಯ ಮೇಲೆ ದಾರುಣವಾಗಿ ಹತ್ಯೆಗೆ ಸಮನಾದ ಕೆಲಸವನ್ನು ಮಾಡಿದ್ದೀರಿ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ ಮತ್ತು ನಿಮ್ಮಂಥಹ ತಂದೆ ಅಥವಾ ರಾಜನ ಕೈ ಕೆಳಗೆ ಇರಲು ನಾನು ಬಯಸುವುದಿಲ್ಲ’ ಎಂದು ಹೇಳಿ ಸರಸರನೇ ಅಲ್ಲಿಂದ ಹೊರಟು ಹೋದ.
ಮಹಾರಾಜನು ಈಗ ಕೊಂಚ ಗಲಿ ಬಿಲಿಗೊಂಡು ವಿಚಲಿತನಾದ. ತಮ್ಮ ಪುತ್ರ ಹೊರಗೆ ಹೋಗುವಾಗ ಧ್ವನಿಸಿದ್ದ ಆ ಹೇಳಿಕೆ ನಿರಂತರವಾಗಿ ಮರುಧ್ವನಿಸುತ್ತಲೇ ಇತ್ತು !
ಆಗ ಮಹಾರಾಜನ ಕೋಪದ ಜ್ವಾಲೆ ಇನ್ನೂ ಹೆಚ್ಚಾದಾಗ, ಮತ್ತು ತಾಪದಿಂದ ಕೂಡಿದ್ದ ಆತನ ಮನಸ್ಸನ್ನು ತಣಿಸಿಕೊಳ್ಳಲು ಸುರಾಪಾನ ಮಾಡಲು ತನ್ನ ಖಾಸಗಿ ಕೊಠಡಿಗೆ ಹೊರಟು ಹೋದ. ಅಲ್ಲಿ ಮನಸೋ ಇಚ್ಛೆ ಸುರಾಪಾನ ಮಾಡಿ ವಿಶ್ರಾಂತಿ ಪಡೆಯಲು ಯತ್ನಿಸಿದ. ಆದರೆ, ತನ್ನ ಪುತ್ರನ ಆವೇಶದ ಮಾತು ಪುನಃ ಪುನಃ ಆತನ ಮನಸ್ಸಿಗೆ ಚುಚ್ಚತ್ತಲೇ ಇತ್ತು.
ಈ ಘಟನೆಯಾದ ಮೇಲೆ ಸುರಾಪಾನ ಮತ್ತನಾದ ಮಹಾರಾಜನಿಗೆ ನಿದ್ರೆಯ ಮಂಪರು ಆವರಿಸಿದಾಗ, ಅದರಲ್ಲೊಂದು
ಕನಸನ್ನು ಕಂಡನು. ಅದರಲ್ಲಿ ದೇವನೊಬ್ಬ ಮೂಡಿ ಈ ವಾಣಿಯನ್ನು ಹೊರಹಾಕಿದನು ;
‘ಮಹಾರಾಜಾ ನಿನ್ನ ಅಹಂಕಾರ ತಲೆಗೇರಿದೆ. ನಿನ್ನ ಸಮಾನರು ಯಾರೂ ಇಲ್ಲ ಎಂಬುದು ನಿನ್ನ ಭ್ರಮೆ ಅಷ್ಟೇ. ನೀನು ಎಷ್ಟೇ ಬಲಶಾಲಿಯಾಗಿದ್ದರೂ ನೀನು ಒಬ್ಬ ಮಾನವ ತಾನೇ ? ನೀನು ಚಿರಂಜೀವಿಯಾಗಿ ಇರಲು ಸಾಧ್ಯವೇ ಇಲ್ಲ ಎಂಬ ಅರಿವು ನಿನಗೆ ಏಕೆ ಮೂಡುವುದಿಲ್ಲ ? ಅದು ಅಲ್ಲದೇ, ನಿನ್ನ ಕುಲಪುತ್ರನೇ ವಿವೇಕ ಹೇಳಿದರೂ ಕೇಳುವ ಸ್ಥಿತಿಯಲ್ಲಿ ನೀನು ಇಲ್ಲವೆಂದರೆ ನಿನ್ನ ನಾಶ ನಿನ್ನ ಕೈಯಿಂದಲೇ ಏಂದರ್ಥ. ನೀನು ಮಾಡಿದ ಪಾಪ ಕಾರ್ಯಗಳಿಗೆ ಬೇರಾವ ದೇವಾನು ದೇವತೆಗಳು ಶಿಕ್ಷೆ ಕೊಡುವುದು ಬೇಕಾಗಿಲ್ಲ. ನಿನ್ನ ಶಿಕ್ಷೆ ಏನಿದ್ದರೂ ಈ ಭೂಮಿಯ ಮೇಲೆಯೇ, ಅದೂ ನಿನ್ನ ಪಾಪಗಳಿಂದಲೇ ಆಗುತ್ತದೆ. ಇಲ್ಲಿಂದ ನಿನ್ನನ್ನು ಕೊಂಡೊಯ್ಯಲು ಯಮಧರ್ಮ ಅಥವಾ ಅವರ ದೂತರು ಯಾರೂ ಬರುವುದಿಲ್ಲ, ಇದು ಸತ್ಯ !’ಎಂದು ಹೇಳಿ ಕ್ಷಣದಲ್ಲಿಯೇ ಮಾಯಾವಿ ದೇವನು ಅಗೋಚರವಾಗಿಬಿಟ್ಟ.!
ಮಹಾರಾಜನಿಗೆ ಒಮ್ಮಿಂದೊಮ್ಮೆಲೇ ಎಚ್ಚರವಾಯಿತು. ಆತ ಗಾಭರಿಯಿಂದ ಎದ್ದು ಕುಳಿತ. ಆಮೇಲೆ ಆತನ ಮಸ್ತಿಷ್ಕದಲ್ಲಿ ಯೋಚನಾ ಲಹರಿಗಳು ಸುಳಿಯುತ್ತಲೇ ಹೋದವು. ನನಗೆ ಶಿಕ್ಷೆ ಕೊಡುವವರು ಇಲ್ಲಿ ಯಾರಿದ್ದಾರೆ ? ಅಷ್ಟು ಧೈರ್ಯವನ್ನು ಹೊಂದಿದವರು ಯಾರಾದರೂ ಇದ್ದಾರೆಯೇ ? ನಾನು ಇನ್ನೂ ಮಹಾರಾಜಾ ಮತ್ತು ನನ್ನ ತೋಳ್ಬಲ ಪ್ರಚಂಡವಾಗಿದೆ. ಹೀಗಾಗಿ ನನ್ನ ಬಳಿ ಬಂದು ಶಿಕ್ಷಿಸುವವರು ಬಹುಶಃ ಯಾರೂ ಇರಲಿಕ್ಕಿಲ್ಲ. ಇದೊಂದು ಏನೋ ಆಕಸ್ಮಿಕ ಭ್ರಮೆಯು ಇರಬೇಕಷ್ಟೇ’ ಎಂದು ಮೈ ಕೊಡವಿ ಎದ್ದು ನಿಂತು ನೇರವಾಗಿ ರಾಜ ದರ್ಬಾರಿನ ಕಡೆಗೆ ಹೊರಟನು. ಅಲ್ಲಿ ವಿಚಿತ್ರ ಸನ್ನಿವೇಶವನ್ನು ಆತನು ಕಂಡ ! ಅಲ್ಲಿ ಸುಮಾರು ಜನರು ಜಮಾಯಿಸಿದ್ದು, ಒಂದು ಸಭೆ ನಡೆಯತೊಡಗಿತ್ತು. ಅದನ್ನು ಕಂಡ ಮಹಾರಾಜನಿಗೆ ಆಶ್ಚರ್ಯವಾಯಿತು ಮತ್ತು ಆತಂಕ ಕೂಡಾ ಆಯಿತು. ಇದು ಕೂಡಾ ಕನಸಾಗಿರಬಹುದೇ ಎಂದು ಕೊಂಡ. ಆದರೇ, ಅಲ್ಲಿ ನೈಜತೆ ಇತ್ತು. ಕೊಂಚ ಸಾವರಿಸಿಕೊಂಡ ಮಹಾರಾಜಾ ನೇರವಾಗಿ ಬಂದು ನಿಂತು, ತನ್ನ ಸಿಂಹಾಸನದ ಕಡೆಗೆ ನೋಡಿದ. ಅಲ್ಲಿ ಯಾರೋ ಅದರಲ್ಲಿ ಆಸಿನರಾದಂತೆ ಕಾಣಿಸಿತು. ಇನ್ನೂ ಹತ್ತಿರಕ್ಕೆ ಹೋದ. ಆ ದೃಶ್ಯ ಕಂಡವನೇ ದಿಗ್ಭ್ರಮೆಗೊಂಡ ! ಮಹಾರಾಜನ ಸಿಂಹಾಸನದಲ್ಲಿ ಆತನ ಪುತ್ರ ರಾಜಕುಮಾರ ಅಮೋಘ ಅದರಲ್ಲಿ ಕಂಡನು. ಅಲ್ಲಿಯ ಸಭೆಗೆ ಏನೋ ಸಂದೇಶ ನೀಡುತ್ತಿದ್ದ. ಆಗ ಮಹಾರಾಜಾ ಇನ್ನೂ ಹತ್ತಿರಕ್ಕೆ ಹೋದಾಗ;
‘ಬನ್ನಿ ಅಪ್ಪಾಜಿ ಮಹಾರಾಜರೇ, ನಿಮ್ಮ ಬಗ್ಗೆಯೇ ಇಲ್ಲಿ ಚರ್ಚೆ ನಡೆಯುತ್ತಿದೆ’ ಎಂದ.
‘ಏನದು..? ನಾನು ಮಾಡುವ ಕೆಲಸ ಅದ್ಹೇಗೆ ನೀನು ಮಾಡುತ್ತಿರುವೆ ?ನಿನಗೆ ಈ ಅಧಿಕಾರ ಕೊಟ್ಟವರು ಯಾರು ?’ ಎಂದ ಮಹಾರಾಜಾ. ಆಗ ರಾಜಕುಮಾರ ಹೀಗೆ ಹೇಳಿದ;
‘ಈ ಸಭೆಯು ನಿಮ್ಮ ನಡವಳಿಕೆ ಮತ್ತು ಅನ್ಯಾಯಗಳ ಸರಮಾಲೆಗಳನ್ನು ಚರ್ಚಿಸಿಯಾಗಿದೆ. ಈಗ ನೀವು ಈ ಆಸನದಲ್ಲಿ ಕೂಡ್ರಲು ಯೋಗ್ಯರಲ್ಲ ಎಂದು ಕೂಡಾ ಸಭಾ ನಿರ್ಣಯ ಮಾಡಿದೆ.’ ಎಂದಾಗ ; ಕೋಪ ಗೊಂಡ ಮಹಾರಾಜಾ ಹೀಗೆ ಕೂಗಿ ಕೊಂಡ;
‘ಯಾರಲ್ಲಿ..ಈ ಅಮೋಘ ರಾಜದ್ರೋಹ ಬಗೆದು, ಸಿಂಹಾಸನದ ಮೇಲೆ ಕುಳಿತಿದ್ದಾನೆ. ಆತನನ್ನು ಸೆರೆಮನೆಗೆ ತಳ್ಳಿರಿ’ ಎಂದಾಗ ಭಟರಿಬ್ಬರು ಬಂದು ಮಹಾರಾಜನನ್ನೇ ಎಳೆದು ಕೊಂಡು ಹೋದರು. ಹಾಗೆ ಅವರನ್ನು ಕೊಂಡೊಯ್ಯುವಾಗ ಏದುರಿಗೆ ಮರುಧರನನ್ನು ಇಬ್ಬರು ಭಟರು ಕರೆದು ತಂದಾಗ ಪರಸ್ಪರ ಮುಖಾ ಮುಖಿಯಾದರು. ಆಗ ಮಹಾರಾಜ ಕೆಟ್ಟ ಕೋಪದಿಂದ ಮರುಧರನ ಕಡೆಗೆ ನೋಡಿದ. ಆದರೆ, ಮಧುಧರನಿಗೆ ಏನೂ ಅರ್ಥವಾಗಲಿಲ್ಲ. ರಾಜಕುಮಾರ ಈಗ ಅಧಿಕಾರಯುಕ್ತ ರಾಜನಾಗಿ ಮರುಧರನನ್ನು ಬಿಡುಗಡೆಗೊಳಿಸಿದ್ದ ವಿಷಯ ಆತನಿಗೆ ತಿಳಿದಿರಲಿಲ್ಲ ಅಲ್ಲದೇ ಮಹಾರಾಜನನ್ನು ಬಂಧಿಸಿದ್ದೂ ತಿಳಿಯಲಿಲ್ಲ.
ಆ ಮೇಲೆ ಸ್ನೇಹಿತರಿಬ್ಬರೂ ಪರಸ್ಪರ ಸೇರಿ ಆಲಿಂಗನ ಮಾಡಿಕೊಂಡರು. ಆಗ ಮರುಧರ ಹೀಗೆ ಹೇಳಿದ;
‘ಮಿತ್ರಾ ..ನನ್ನ ಸಲುವಾಗಿ ನಿನ್ನ ಹೆತ್ತ ತಂದೆಯನ್ನೇ ಕಾರಾಗೃಹಕ್ಕೆ ಕಳಿಸಿದೆಯಲ್ಲ, ಇದು ನ್ಯಾಯ ಸಮ್ಮತವಲ್ಲ. ಏನೋ ತಪ್ಪು ಕಲ್ಪನೆಯಿಂದ ಮಹಾರಾಜರು ನನ್ನನ್ನು ಶಿಕ್ಷಿಸಿದ್ದಾರೆ. ಇಂದಲ್ಲ ನಾಳೆ ಅವರಿಗೆ ಪರಿಸ್ಥಿತಿ ಅರಿವಾಗುತ್ತಿತ್ತು. ಹಾಗಾಗಿ, ನೀನು ಕಾಯಬೇಕಾಗಿತ್ತು’ ಎಂದ.
‘ಮಿತ್ರಾ..ನಿನ್ನದು ಒಂದೇ ಪ್ರಕರಣವಲ್ಲ, ನಮ್ಮ ಕಾರಾಗೃಹದಲ್ಲಿ ನೂರಾರು ಜನರು ಬಂಧಿಗಳಿದ್ದಾರೆ. ಅವರೆಲ್ಲಾ ಮುಗ್ಧರು ಮತ್ತು ಅಮಾಯಕರು. ಅವರೆಲ್ಲಾ ಕೋಪಿಷ್ಠನಾದ ನಮ್ಮ ತಂದೆಯ ದುಷ್ಟ ಕಣ್ಣಿಗೆ ಬಿದ್ದು ಕಾರಾಗೃಹದಲ್ಲಿ ಊಟ ನಿದ್ದೆ ಇಲ್ಲದೆಯೇ ತಮ್ಮ ಆಯಷ್ಯವನ್ನು ಸವೆಸುತ್ತಿದ್ದಾರೆ. ಹಾಗಾಗಿ, ನಾನು ಈ ಬಗ್ಗೆ ಕೂಲಂಕುಷವಾಗಿ ಸಭೆಯಲ್ಲಿ ಚರ್ಚಿಸಿ, ಹಿರಿಯರ ಸಲಹೆ ಪಡೆದು, ಆ ಮುಗ್ಧರೂ ಸೇರಿ ನಿನ್ನನ್ನೂ ಬಿಡುಗಡೆ ಮಾಡಿದ್ದೇನೆ. ಈಗ ನೀನು ಸ್ವತಂತ್ರ ವ್ಯಕ್ತಿ, ಎಲ್ಲಿಗಾದರೂ ಹೋಗಬಹುದು ಎಂದು ಹೇಳಿ ಆತನನ್ನು ಕಳಿಸಿಕೊಟ್ಟ ! ಇತ್ತ ಕಾರಾಗೃಹ ಸೇರಿದ್ದ ಮಹಾರಾಜಾ ತನಗೆ ಮೂಡಿದ್ದ ಹಗಲು ಗನಸಿನ ಪರಿಣಾಮವೇ ನಿಜ ಎಂದು ಅನಿಸಿತು. ಯಾರೋ ಹೊರಗಿನವರು ಆಕ್ರಮಣ ಮಾಡುತ್ತಾರೆ ಎಂದು ಕೊಂಡವನಿಗೆ, ತನ್ನ ಸ್ವಂತ ಕುಮಾರನೇ ಶಿಕ್ಷೆ ನೀಡಿದ. ಹಾಗಾಗಿ, ಇದರಲ್ಲಿ ದೈವತ್ವದ ಪಾತ್ರ ಇದ್ದರೂ ಇರಬಹುದು ಎಂದು ಕೊಂಡ. ಆನಂತರ ಎಷ್ಟೋ ದಿನಗಳವರೆಗೆ ರಾಜಕುಮಾರ ಅಮೋಘ ತನ್ನ ತಂದೆಯನ್ನು ಭೇಟಿಮಾಡಿರಲಿಲ್ಲ. ಮುಂದೊಂದು ದಿನ ಆತನಿಗೆ ತನ್ನ ತಂದೆಯನ್ನು ನೋಡುವ ತವಕ ಮೂಡಿದಾಗ, ಕಾರಾಗೃಹಕ್ಕೆ ಹೋಗಿ ಭೇಟಿ ಮಾಡಿದ. ಆಗ ಮಹಾರಾಜಾ ಗುರುತು ಸಿಗದ ಹಾಗೆ ಕೃಶರಾಗಿ ಬಿಟ್ಟಿದ್ದರು. ತಂದೆ ಮಕ್ಕಳು ಸಂಧಿಸಿದಾಗ ಒಮ್ಮೆಲೆ ಇಬ್ಬರಿಗೂ ಕಣ್ಣೀರು ಮೂಡಿದವು. ಆಗ ಅವರಿಬ್ಬರೂ ಪರಸ್ಪರ ಆಲಿಂಗನ ಮಾಡಿಕೊಂಡರು. ಆಮೇಲೆ ಮಹಾರಾಜರನ್ನು ಬಿಡುಗಡೆ ಮಾಡಿ, ಹೊರಗೆ ಕರೆ ತಂದು ಆಸ್ಥಾನದ ವೈದ್ಯರಿಂದ ಅರೋಗ್ಯ ತಪಾಸಣೆ ಮಾಡಿಸಿದ. ಒಳ್ಳೆಯ ಔಷಧದ ಉಪಚಾರದಿಂದ ಮಹಾರಾಜರು ಮೊದಲಿನ ಸ್ಥಿತಿಗೆ ಬಂದರು. ಅಷ್ಟೊತ್ತಿಗೆ ಮಹಾರಾಜರ ‘ಅಹಂ’ ನಶಿಸಿತ್ತು ಮತ್ತು ಅವರಿಗರಿಯದ ಹಾಗೆ ಅವರಲ್ಲಿ ‘ಕಾರುಣ್ಯ’ ಸೇರಿಕೊಂಡಿತ್ತು. ರಾಜಕುಮಾರ ಮರಳಿ ತಂದೆಗೆ ರಾಜ್ಯಭಾರ ವಹಿಸಬೇಕೆಂದಿದ್ದ, ಆದರೆ, ಮಹಾರಾಜಾ ಅದನ್ನು ತಿರಸ್ಕರಿಸಿದ. ತಾನು ಈಗ ಸಲಹೆಗಳನ್ನು ಕೊಡಲು ಮಾತ್ರ ಯೋಗ್ಯ ಎಂದು ಹೇಳಿ ಪುತ್ರನಿಗೆ ಆಶಿರ್ವದಿಸಿದ. ಆಮೇಲೆ ಮಹಾರಾಜನು ಎಷ್ಟೋ ಕಾಲ ಪುತ್ರನ ಅದಮ್ಯ ಚೇತನದ ಆಡಳಿತವನ್ನು ನೋಡಿ ಕಣ್ಣು ತುಂಬಿ ಕೊಂಡು, ಕೊನೆಗೆ ವಯೋ ಸಹಜದಂತೆ ಇಹಲೋಕ ತ್ಯಾಗ ಮಾಡಿದ.
————————–
ಬಿ.ಟಿ.ನಾಯಕ್
ಅಮೋಘಸೇನ ಕಥೆ ಚನ್ನಾಗಿದೆ. ಸರಳವಾದ ನಿರೂಪಣೆ,
ನಿಮ್ಮ ಅನಿಸಿಕೆ ನನಗೆ ಹರ್ಷ ತಂದಿದೆ. ನಿಮಗೆ ತುಂಬು ಹೃದಯದ ಧನ್ಯವಾದಗಳು.
ಸರಳ ನಿರೂಪಣೆ ಬಿಡದೆ ಓದಿಸಿಕೊಂಡು ಹೋಗುವ ಸಾಹಿತ್ಯ
ಜಗನ್ನಾಥ ಕುಲಕರ್ಣಿ
ನಿಮ್ಮ ಧನಾತ್ಮಕ ಅನಿಸಿಕೆ ನನಗೆ ಸ್ಪೂರ್ತಿ ನೀಡಿದೆ. ಹಾಗಾಗಿ, ತಮಗೆ ಹೃತ್ಪೂರ್ವಕ ಧನ್ಯವಾದಗಳು.
Super mama
Thanq.
ರಾಜರ ಕತೆ ಓದಿ ಬಹಳ ದಿನಗಳಾಗಿದ್ದವು. ಈ ಮೊದಲು ಚಂದಮಾಮ ಮಾಸಿಕ ಪತ್ರಿಕೆಯಲ್ಲಿ ನೀತಿಭೋಧಕ ರಾಜರ ಕತೆಗಳು ಬರುತ್ತಿದ್ದವು.
ಆ ಪತ್ರಿಕೆ ಮುದ್ರಣ ನಿಂತನಂತರ ರಾಜರ ಕತೆಗಳು ಬರೆಯುವ ಹವ್ಯಾಸ ಕಡಿಮೆಯಾಗಿದೆ.
ಈಗಿನ ಮಕ್ಕಳಿಗೆ ಅಂತಹ ಒಂದು ಸದಭಿರುಚಿಯ ನೀತಿಭೋಧಕ ಕತೆಗಳು ಇಲ್ಲವಾಗಿವೆ.
ನೀವು ರಾಜರ ಹಿನ್ನೆಲೆಯಲ್ಲಿ ಕತೆ ಬರೆದದ್ದು ನೋಡಿ ಓದಿ ಸಂತೋಷವಾಯಿತು.
ಹೀಗೆ ನೀತಿಭೋಧಕ ಕತೆಗಳ ಬರಹ ಮುಂದುವರೆಸಿ .
ಅಭಿನಂದನೆಗಳು
– ಎಸ್ ಆರ್ ಸೊಂಡೂರು ಗಂಗಾವತಿ
ನಿಮ್ಮ ಧನಾತ್ಮಕ ಅನಿಸಿಕೆ ಟಿಪ್ಪಣಿ ಓದಿ ಸಂತೋಷವಾಯಿತು ಮತ್ತು ನನಗೆ ಸ್ಪೂರ್ತಿ ತುಂಬಿದಿರಿ. ಧನ್ಯವಾದಗಳು.
Super story Sir
Thanq sir for your valuable comment.
ಐತಿಹಾಸಿಕ ಕಥೆ ಸರಳ ನಿರೂಪಣೆಯಿಂದ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ. ಅಭಿನಂದನೆಗಳು
ಧನ್ಯವಾದಗಳು ಸರ್.