ಅನಿತಾ ಶೆಟ್ಟಿ ಮೂಡುಬಿದ್ರೆ ಕವಿತೆ ಮಾತು ಮರೆತಂತಿದೆ…

ಇನ್ನು ಏನು ಕೊಡಲಿ ನಿನಗೆ ಗೆಳತಿ
ನಿನಗೆ ಬೇಡವಾದುದೆಲ್ಲವ ನನಗೆ ಬೇಕಿದ್ದೆಲ್ಲವ
ನಿನ್ನ ಪದತಲದಲ್ಲಿಟ್ಟ ಬಳಿಕವೂ
ನಾ ಏನ ಬಿಡಲಿ ಹೇಳು ಗೆಳತಿ

ನಿನಗೆ ಪ್ರಿಯವಾಗಲಿಲ್ಲವೆಂದು
ಮನದ ಮಾತು ಮರೆತೆ
ನಿನ್ನ ಹುಂಗುಟ್ಟುವಿಕೆಯಲ್ಲಿ
ಹಿತವಿರಲಿಲ್ಲವೆಂಬ ಕಾರಣಕ್ಕೆ
ತುಟಿಬಿರಿಯುವುದನೆ ಬಿಟ್ಟೆ

ಹೇಳಬೇಕೆಂದ ಅಷ್ಟೂ ಮಾತುಗಳನು
ಬಚ್ಚಿಟ್ಟ ಜಾಗಕ್ಕೂ ಬೇಜಾರಾಗಿದೆ
ಮುಳ್ಳಿಗೂ ಮುಳುವಾಗಿದೆ
ಮುಚ್ಚಿಟ್ಟ ಪರದೆ

ಮಾತುಗಳಲಿ ಎರಡರ್ಥ
ನನ್ನಿಂದ ಹುಟ್ಟಿರಲಿಲ್ಲ
ನಿನ್ನದೇ ಹುಟ್ಟು ಸಾವಿನ ಮಧ್ಯೆ
ನನ್ನ ಸ್ನೇಹದ ರಕುತದ ಬಣ್ಣ

ಮುಸುಕು ಉಸಿರು
ಕಟ್ಟಿಸುತಿದೆ
ಮುಖವಾಡ ಕರಗಲಿದೆ ಸುಮ್ಮನಿರು
ಪಟ್ಟ ಬದಲಾಗಿದೆ
ನೇರ ಮಾತುಗಳು
ಮೊನಚೇನು ಸರಿ
ಸತ್ಯಕ್ಕೆ ನಾಚಿಕೆಯೇ..
ಸುಳ್ಳಿಗಿರದಿರುವಾಗ….
ನಾನು ಬದಲಾಗಿಲ್ಲ…ನಿನ್ನಂತೆ.


Leave a Reply

Back To Top