ಹೆಣ್ಣು ಬದುಕಿನ ಘನತೆ

  ಹೆಣ್ಣು ಬದುಕಿನ ಘನತೆ

Is this Leonardo's only surviving sculpture? | Financial Times

ವಸುಂಧರಾ ಕದಲೂರು.

ವಸುಂಧರಾ ಕದಲೂರು.

ಒಪ್ಪಿಗೆ ಇಲ್ಲದೇ ಮಹಿಳೆ ಮೈ ಮುಟ್ಟುವಂತಿಲ್ಲ ( ದೆಹಲಿ ನ್ಯಾಯಾಲಯ ತೀರ್ಪು 22-1-2018) ‘ಅರೆ.., ಹೆಣ್ಣಿನ ಮೈ ಮುಟ್ಟಲು, ಆಕೆಯ ಒಪ್ಪಿಗೆಯ ಅಗತ್ಯವಿದೆಯಾ’ ಎಂದು ಕುಹಕವಾಡುವ ಮಂದಿಯ ನಡುವಲ್ಲೇ ‘ಇದನ್ನೂ ಸಹ ನ್ಯಾಯಾಲಯವೇ ಹೇಳಿಕೊಡಬೇಕೆ ಅಷ್ಟೂ ಸೂಕ್ಷ್ಮ ಅರ್ಥವಾಗದೇ’ ಎಂದು ನೊಂದುಕೊಳ್ಳುವ ಮನಸ್ಸುಗಳು ಎಷ್ಟಿವೆಯೋ..

     ಏನೆಲ್ಲಾ ಸಾಧಸಿ ಸೈ ಎನಿಸಿಕೊಂಡರೂ ಈ ಕ್ಷಣಕ್ಕೂ  ಹೆಣ್ಣುಮಗುವಾಗಿ  ಹುಟ್ಟುವ ಹಕ್ಕಿನಿಂದ ವಂಚಿತವಾಗಿ ಗರ್ಭ ಸೀಳಿಸಿಕೊಂಡು ಹೊರಬಂದು ಮಣ್ಣಾಗುತ್ತಿರುವ ಹೆಣ್ಣು ಭ್ರೂಣಗಳೆಷ್ಟೋ! ಸರ್ವೆ ಮಾಡಿ ಒಂದಷ್ಟು ಮಾಹಿತಿ ಕಲೆ ಹಾಕಬಹುದು. ಆದರೆ ಅದು ನಿಖರ ಸತ್ಯವಾಗಿರದು. ಬೆಳಕಿಗೆ ಬಾರದ, ವರದಿಯಾಗದ ಅದೆಷ್ಟು ಹೆಣ್ಣು ಭ್ರೂಣ ಹತ್ಯೆ ದಿನಂಪ್ರತಿ ನಡೆಯುತ್ತಿಲ್ಲ? ಹಾಗೋ ಹೀಗೋ ಹೆಣ್ಣಾಗಿ ಹುಟ್ಟಿದ ಮೇಲೂ ವಿದ್ಯೆ, ಉದ್ಯೋಗದ ಅವಕಾಶ ನಿರಾಕರಣೆಯಾಗಿಲ್ಲ? ಮದುವೆ, ಬಸಿರು, ಹೆರುವುದು ಮೊದಲಾದವು ಇಂದಿಗೂ ಆಕೆಯ ಆಯ್ಕೆಯ ಪರಿಧಿಯೊಳಗೆ ಬರುವುದಿಲ್ಲ ಎಂಬುದು ಗುಟ್ಟೇನಲ್ಲಾ. 

    ಭ್ರೂಣ ಹತ್ಯೆ, ಬಾಲ್ಯವಿವಾಹ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ಶೋಷಣೆ ಮೊದಲಾದವು ಯಾರೋ ನಿರಕ್ಷರಿಗಳ ಮನೆಯಲ್ಲೋ, ಬಡಕುಟುಂಬಗಳಲ್ಲೋ ನಡೆದುಬಿಡುವ ಸಾಮಾನ್ಯ ವಿದ್ಯಮಾನಗಳೆನ್ನುವುದು ಖಂಡಿತಾ ತಪ್ಪು. ಸ್ತ್ರೀ ಸಮಸ್ಯೆಗಳು ಲಿಂಗಾಧಾರಿತವಷ್ಟೇ. ಇದರಲ್ಲಿ ಜಾತಿ, ಕುಲ, ಶ್ರೀಮಂತಿಕೆ, ಸ್ಥರ, ಅಧಿಕಾರಸ್ಥಾನ ಎಲ್ಲವೂ ನಗಣ್ಯವಾಗುತ್ತವೆ.   

    ಮರ್ಯಾದಾ ಹತ್ಯೆಗಳು, ಸಣ್ಣ ವಯಸ್ಸಿನಲ್ಲೇ ಹೆಣ್ಣು ಮಕ್ಕಳಿಗೆ ಬಹಳ ಬೇಗ ಮದುವೆ, ಓದನ್ನು ನಿರಾಕರಿಸುವುದು ಅಥವಾ ಮೊಟಕುಗೊಳಿಸುವುದು, ಉದ್ಯೋಗದ ನಿರಾಕರಣೆ, ಭ್ರೂಣಲಿಂಗಪತ್ತೆ ಮಾಡಿಸುವುದು, ಗಂಡು ಸಂತಾನಕ್ಕಾಗಿಯೇ ಮೂರೋ ನಾಕೋ ಹಡೆಯುವಂತೆ ಮಾಡುವುದು, ವೇಶ್ಯಾವಾಟಿಕೆ, ಆಸ್ತಿ ಹಕ್ಕಿನ ನಿರಾಕರಣೆ…. ಹೇಳುತ್ತಾ ಹೊರಟರೆ ಶೋಷಣೆಯ ಹಲವು ರೂಪಗಳು ಅನಾವರಣಗೊಳ್ಳುತ್ತಲೇ ಹೋಗುತ್ತವೆ.

     ನಿಜಕ್ಕೂ ತನ್ನ  ಕೆಲಸದ ಸ್ಥಳದಲ್ಲಿ, ಅಕ್ಷರಿಗಳ ಎಡೆಯಲ್ಲಿ, ಬಡತನದ ನರಳಾಟವೋ, ಶ್ರೀಮಂತಿಕೆಯ ಡೌಲಿನ ನೆರಳೋ ಒಟ್ಟಿನಲ್ಲಿ ಸ್ತ್ರೀ ಮುಜುಗರಕ್ಕೆ ಒಳಗಾಗಿ ಅಭದ್ರತೆಯಿಂದ ನಲುಗುತ್ತಿರುವುದು ಇಂದು ಹೆಚ್ಚುಹೆಚ್ಚು ಬೆಳಕಿಗೆ ಬರುತ್ತಿದೆ. ಎಲ್ಲಾ ಪ್ರಕರಣಗಳು ಅಲ್ಲದಿದ್ದರೂ ಬಹಳಷ್ಟು ಹೊರಜಗತ್ತಿಗೆ ಗೊತ್ತಾಗುತ್ತಿವೆ. .

  ಇನ್ನು ಸ್ತ್ರೀ ಶೋಷಣೆಯ ವಿರುದ್ಧ ದನಿ ಎತ್ತಿದರೆ ಸಾಕು ಅವಳಿಗೆ ‘ಮಹಿಳಾವಾದಿ’ ಎಂಬ ಪಟ್ಟ ಕಟ್ಟಲಾಗುತ್ತದೆ ಅಥವಾ ಆಕೆ ‘ಪುರುಷದ್ವೇಷಿ’ ಎಂದು ಬಿಂಬಿಸಲಾಗುತ್ತದೆ. ಹಾಗಾದರೆ  ಮಹಿಳೆಯಾಗಿ ಮಹಿಳೆಯರ ಕುರಿತು ಮಾತನಾಡುವುದು ತಪ್ಪೇ? ಹಾಗೇನಾದರು ಆಕೆ ನಿರಂತರವಾಗಿ ಸ್ತ್ರೀ ಶೋಷಣೆಯ ವಿರುದ್ಧ ಮಾತನಾಡಿದರೆ ಆಕೆಗೆ ಬೇರೆ ವಿಚಾರಗಳ ಬಗ್ಗೆ ಮಾತನಾಡಲು ಬರುವುದಿಲ್ಲ. ಆಕೆ ನಾಲಾಯಕ್ ಎಂದು ನಿರ್ಧರಿಸಿಬಿಡುವ ಸ್ಥಬ್ಧ ಮನಸ್ಥಿತಿಯವರಿದ  ಹಾಗೆಯೇ ಸ್ತ್ರೀಯೊಬ್ಬಳು ತನ್ನ ಪರಿಸರದಲ್ಲಾಗುತ್ತಿರುವ  ಅನ್ಯಾಯಗಳ ವಿರುದ್ಧ ಕಿಂಚಿತ್ ಪ್ರತಿಭಟನೆ ತೋರಿದರೆ ಅಥವಾ ತನ್ನ ನಿಲವುಗಳನ್ನು ಖಚಿತವಾಗಿ ಸ್ಪಷ್ಟಪಡಿಸಿದರೆ, ನಾಳಿನ ಔದ್ಯೋಗಿಕ ಸವಾಲುಗಳನ್ನು ನಿಭಾಯಿಸಲು ಆಕೆಗೆ ಅವಕಾಶಗಳನ್ನು ನಿರಾಕರಿಸುವ ಹುನ್ನಾರಗಳನ್ನು ಮಾಡಲಾಗುತ್ತದೆ. ಷಡ್ಯಂತ್ರ ರಚಿಸಿ ಆಕೆಯ ವ್ಯಕ್ತಿತ್ವಕ್ಕೆ ಚ್ಯುತಿತರುವ ಕೆಲಸ ಮಾಡುತ್ತಾರೆ. ಆಕೆ ಧೈರ್ಯವಂತೆಯೂ ಗಟ್ಟಿಗಿತ್ತಿಯೂ ಆಗಿದ್ದರೆ, ಆಕೆಯ  ಕೌಟುಂಬಿಕ ಸಾಮರಸ್ಯ  ಹದಗೆಡಿಸುವ ಮಸಲತ್ತುಗಳನ್ನು ಹೊಸೆಯಲಾಗುತ್ತದೆ.       ಹಾಗಾದರೆ ಮಹಿಳೆಯರ ಕುರಿತು  ಮಾತನಾಡುವುದು ತಪ್ಪೇ?      ಮಹಿಳೆಯರ ಕುರಿತು ಮಾತನಾಡುವುದು ತಪ್ಪೇ..? ಈ ಪ್ರಶ್ನೆ ಉತ್ತರ ಸಿಗುವುದಿರಲಿ, ಇಷ್ಟಕ್ಕೂ ಮಹಿಳೆ ಏಕೆ ಮಾತನಾಡಬೇಕು.!? ಹೇಳಿದಷ್ಟು ಮಾಡಿಕೊಂಡಿದ್ದರೆ ಸಾಕು ಎನ್ನುವ ಅಭಿಪ್ರಾಯಕ್ಕೇ ಹೆಚ್ಚು ಓಟು ಹಾಕುತ್ತಾರೆ.          ಈ ನೆಲದ ಸಂಸ್ಕೃತಿ ಹಾಗೂ ಆಚರಣೆಗಳು ಬಹಳ ವಿಭಿನ್ನವಾಗಿವೆ. ವಿವಿಧ ಕಾಲಘಟ್ಟಗಳಲ್ಲಿ ಹರಿದು ಬಂದಿರುವ ಹಲವು ಬದಲಾವಣೆಗಳಿಗೆ ಒಗ್ಗಿಕೊಂಡೂ, ತನ್ನ  ಅಸ್ಮಿತೆ ಸಾರುತ್ತಿರುವ ಹೆಣ್ಣಿಗೆ ಸಾಮಾಜಿಕವಾಗಿ ಇಂದಿಗೂ ಸಮಾನಸ್ಥಾನದ ನಿರಾಕರಣೆಯಾಗುತ್ತಿದೆ. ಕೆಳಸ್ತರದಲ್ಲೇ ಇಟ್ಟು ನೋಡುವ, ಹಿರಿತನ ( seniority)ದಲ್ಲಿ ಮುಂಚೂಣಿಯಲ್ಲಿದ್ದರೂ ಅತ್ಯುನ್ನತ ಹುದ್ದೆಗಳನ್ನು, ಅವಕಾಶಗಳನ್ನು ನೇರವಾಗಿಯೇ ನಿರಾಕರಿಸಿರುವ/ ನಿರಾಕರಿಸುತ್ತಿರುವ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇವೆ.      ಇದರ ನಡುವಲ್ಲೂ ಹಲವು ಸ್ಥಾನಮಾನಗಳು ಹೆಣ್ಣಿನ ಪ್ರತಿಭೆಯ ಕಾರಣಕ್ಕೇ ದಕ್ಕುತ್ತಿರುವುದನ್ನೂ ಕಾಣಬಹುದು. ಹಾಗೆಂದು, ಮಹಿಳೆಯ ಮೇಲಾಗುತ್ತಿರುವ ದೈಹಿಕ ದಾಳಿಗಳ ವರದಿಗಳೇನೂ ಕಡಿಮೆಯಾಗಿಲ್ಲ. ವರದಿಮಾಡಲಾಗದ ಮಾನಸಿಕ ಹಿಂಸೆಗಳದೆಷ್ಟೋ…        ಮಹಿಳೆಯರ ಪ್ರಶ್ನೆ ಇಷ್ಟೇ…, ದೇಹ ಮನಸ್ಸು ತನ್ನದು ಅಲ್ಲವೇ ಅಲ್ಲ ಎಂದು ನಿರ್ಲಿಪ್ತವಾಗಿ ಬದುಕಬೇಕಾಗಿರುವ ತಮ್ಮ ಪರಿಸ್ಥಿತಿ ಎಂದಾದರು ಕೊನೆಗೊಂಡೀತೆ ? ಹೆಣ್ಣುಜೀವ ಒಂದು ಘನತೆಯ ಬದುಕನ್ನು ಕಂಡೀತೆ..?


Leave a Reply

Back To Top