ಕಾರ್ಮಿಕ ದಿನಾಚರಣೆಯೂ ವರ್ತಮಾನದ ಆತಂಕವೂ
ರಾಮಸ್ವಾಮಿ ಡಿ.ಎಸ್.
ಕಾರ್ಮಿಕ ದಿನಾಚರಣೆಯೂ ವರ್ತಮಾನದ ಆತಂಕವೂ
ಮೇ ಒಂದನೇ ತಾರೀಖು ಬರುವ ವಾರ ಮೊದಲೇ ಬಂಟಿಂಗ್ಸ್, ಬ್ಯಾನರ್, ಪ್ಲಕಾರ್ಡುಗಳನ್ನು ಸಿದ್ಧಪಡಿಸಿ ಎಲ್ಲ ಕಛೇರಿಗಳ ಕಾರ್ಮಿಕ ಸಂಘಟನೆಗಳಿಗೆ ಮನವಿ ಪತ್ರ ಕಳಿಸಿ ಒಂದನೇ ತಾರೀಖಿನ ಬಹಿರಂಗ ಸಭೆ ಮತ್ತು ಮತಪ್ರದರ್ಶನಕ್ಕೆ ಬರಲು ಒತ್ತಾಯಿಸುತ್ತಿದ್ದ ದಿನಗಳು ನೆನಪಿಗೆ ಬಂದವು.
ನಾನಿರುವ ಊರಿನಲ್ಲಿ ದೊಡ್ಡ ಕಾರ್ಖಾನೆಗಳೇನೂ ಇಲ್ಲ. ಹಾಗಾಗಿ ನಮ್ಮ ಮೇ ದಿನದ ಸಭೆಗೆ ಬ್ಯಾಂಕ್, ಎಲ್ಲೈಸಿ, ಟೆಲಿಫೋನ್, ಅಂಚೆ ಕಛೇರಿಗಳ ನೌಕರರನ್ನು ಸೇರಿಸುತ್ತಿದ್ದೆವಾದರೂ ಉಳಿದ ಸರ್ಕಾರಿ ಕಛೇರಿಗಳ ಯಾವ ವರ್ಗವೂ ನಮ್ಮೊಂದಿಗೆ ಬರುತ್ತಿರಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನ ನೌಕರರು ಯಾವತ್ತೂ ನಮ್ಮ ಚಳವಳಿಗಳಲ್ಲಿ ಭಾಗವಹಿಸಿದ್ದೂ ಇಲ್ಲ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಕ್ಷರ ದಾಸೋಹದ ನೌಕರರು ನಮ್ಮ ಜೊತೆ ಇರುತ್ತಾರೆ ಮತ್ತು ಅವರ ಸಂಖ್ಯೆಯೇ ನಮ್ಮ ಸಾರ್ವಜನಿಕ ಸಭೆಗಳಿಗೆ, ಮೆರವಣಿಗೆಗೆ ಶೋಭೆ ತರುವುದು.
ಸಂಘಟಿತ ಮತ್ತು ಅಸಂಘಟಿತ ವಲಯದ ನೌಕರರ ಶ್ರಮ ಸಂಸ್ಥೆಯ ಲಾಭಕ್ಕೆ ಕಾರಣವಾದುದರಿಂದ ದುಡಿಯುವ ವರ್ಗಕ್ಕೆ ಸವಲತ್ತುಗಳಿಗಾಗಿ ಹಕ್ಕೊತ್ತಾಯ ಮಾಡುವುದು ವಿಹಿತ. ಸರ್ಕಾರಿ, ನಿಗಮ, ಮಂಡಲಿಗಳ ನೌಕರರಿಗೆ ಸಿಬ್ಬಂದಿ ಕಾಯ್ದೆ ಅನ್ವಯ ವಿವಿಧ ಸವಲತ್ತು ಇದ್ದರೂ ಅವರೆಲ್ಲ ತಮ್ಮ ಸಂಬಳ ಮತ್ತು ಇತರೆ ಸೌಲಭ್ಯಗಳಿಗಾಗಿ ಕಾಲಾನುಕಾಲದ ದ್ವಿಪಕ್ಷೀಯ ಸಂಧಾನದ ಮೂಲಕ ಸಾಧಿಸಿಕೊಳ್ಳುತ್ತಾರೆ. ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರ ವೇತನ ಪರಿಷ್ಕರಣೆ ಆಯೋಗಗಳ ವರದಿಗೆ ತಕ್ಕಂತೆ ಕಾಲಕ್ಕೆ ತಕ್ಕನಾಗಿ ಆಗುತ್ತಲೇ ಇರುತ್ತವೆ.
ಆದರೆ ಯಾವತ್ತೂ ಅಸಂಘಟಿತ ವಲಯದ ನೌಕರರು ಮಾತ್ರ ಕನಿಷ್ಠ ಸೌಲಭ್ಯಗಳೂ ಇಲ್ಲದೆ ಮತ್ತು ಉದ್ಯೋಗ ಖಾತ್ರಿಯೂ ಇಲ್ಲದೆ ಪರಿತಪಿಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಅಕ್ಷರ ದಾಸೋಹದ ನೌಕರರು ಮತ್ತು ಬೀಡಿ ಕಾರ್ಮಿಕರು ಬೆಂಗಳೂರಲ್ಲಿ ಆಗಾಗ ಧರಣಿ ಸತ್ಯಾಗ್ರಹಗಳ ಮೂಲಕ ಸುದ್ದಿಗೆ ಬರುತ್ತಾರಾದರೂ ಅವರ ಬೇಡಿಕೆ ಈಡೇರಿತೆ ಅಂದರೆ ಅದು ಯಾವತ್ತೂ ಮರೀಚಿಕೆಯಾಗಿಯೇ ಉಳಿದಿರುತ್ತೆ. ಇನ್ನು ಈ ವರ್ಗಕ್ಕೆ ಅಸಂಖ್ಯಾತ ಗಾರ್ಮೆಂಟ್ ಕೆಲಸಗಾರರು ಮತ್ತು ರಾಜ್ಯ ಸರ್ಕಾರದ ಅಧೀನದ ರಸ್ತೆ ಸಾರಿಗೆ ಸಂಸ್ಥೆಯ ನೌಕರರೂ ಸೇರುತ್ತಿದ್ದಾರೆ. ಈ ಎಲ್ಲ ನೌಕರರಿಗೆ ಕಾಲಾನುಕಾಲಕ್ಕೆ ವೇತನ ಪರಿಷ್ಕರಣೆ ಇತರೆ ಸೌಲಭ್ಯಗಳ ವಿಸ್ತರಣೆ ಆಗುವುದಿರಲಿ, ಕನಿಷ್ಠ ವಾರದ ರಜೆ, ಆರೋಗ್ಯ ಯೋಜನೆ ಇಲ್ಲದೇ ಅವರೆಲ್ಲ ತುಂಬ ಪರಿತಪಿಸುತ್ತಿದ್ದಾರೆ.
ಸಂಘಟಿತ ನೌಕರ ವರ್ಗಕ್ಕೆ ಕಾಲಾನುಕಾಲದ ವೇತನ ಮತ್ತು ಇತರೆ ಸೌಲಭ್ಯಗಳು ಅಲ್ಪ ಸ್ವಲ್ಪ ತಗಾದೆ ಮತ್ತು ಹೋರಾಟಗಳಿಂದ ಸಿಕ್ಕುತ್ತವೆಯಾದರೆ ಈ ಅಸಂಘಟಿತ ವಲಯದ ನೌಕರರಿಗೆ ಯಾವ ಅನುಕೂಲಗಳೂ ಇಲ್ಲ. ಇನ್ನು ಅನುಮೋದಿತ ಸಂಸ್ಥೆಗಳ ನೌಕರರಂತೂ ಯಾವ ಹೋರಾಟ ಹಾರಾಟಗಳೂ ಇಲ್ಲದೆ ಸರ್ಕಾರಿ ನೌಕರರ ಎಲ್ಲ ಸೌಲಭ್ಯ ಪಡೆಯುತ್ತಾರೆ.
ಹಾಗಾದರೆ ಇವತ್ತಿನ ಮೇ ದಿನದ ಸಂದೇಶ ಮತ್ತು ಈ ದಿನದ ಅಗತ್ಯ ಯಾರಿಗಿದೆ? ನೌಕರರಿಗೆ ಕನಿಷ್ಠ ವೇತನ, ವಾರದ ರಜೆ ಮತ್ತು ಎಂಟು ಗಂಟೆಗೂ ಮೀರದ ದುಡಿಮೆಯ ಅವಧಿ ಮೇ ಚಳವಳಿಯ ಮೂಲ ಧ್ಯೇಯ. ಅದೀಗ ಸಂಘಟಿತ ವಲಯಕ್ಕೆ ಸುಲಭದಲ್ಲಿ ಸಿಗುತ್ತಿದೆ. ಆದರೆ ಅಸಂಘಟಿತ ವಲಯದ ಜೊತೆಗೇ ಈ ನಡುವೆ ಔಟ್ ಸೋರ್ಸ್ಡ್ ಎಂಬ ಕಂಟ್ರಾಕ್ಟ್ ನೌಕರರ ಮೇಲಣ ದಬ್ಬಾಳಿಕೆ ಮಿತಿ ಮೀರಿದೆ. ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲದ ಯಾವ ಖಾತರಿಯೂ ಇಲ್ಲದ ಮತ್ತು ಕಂಟ್ರಾಕ್ಟರನ ಮೂಗಿನ ನೇರದ ಕಾನೂನಿನಡಿ ಇವರೆಲ್ಲ ನರಳುತ್ತಿದ್ದಾರೆ.
ನಮ್ಮ ಬಹುತೇಕ ಕಾರ್ಮಿಕ ಸಂಘಟನೆಗಳು ಒಂದಲ್ಲ ಒಂದು ರಾಜಕೀಯ ಪಕ್ಷಗಳ ಕೂಸುಗಳೇ ಆಗಿರುವುದು ಸುಳ್ಳೇನಲ್ಲ. ಶಾಸನ ಸಭೆಯಲ್ಲಿ ಅನುಮೋದನೆ ಆಗದೆ ಯಾವುದೂ ಕಾನೂನಾಗಿ ಪರಿವರ್ತನೆ ಆಗುವುದಿಲ್ಲ. ಈ ಎಲ್ಲ ರಾಜಕೀಯ ಪಕ್ಷಗಳು ಮತ್ತದರ ಆಶ್ರಿತ ಸಂಘಟನೆಗಳು ಯಾಕಾಗಿ ಈ ಔಟ್ ಸೋರ್ಸಿಂಗ್ ಎನ್ನುವುದನ್ನು ಅನುಮೋದಿಸಿದವು ಎಂದು ಆಲೋಚಿಸಲು ಈ ಮೇ ದಿನದಲ್ಲಾದರೂ ನಾವು ಪ್ರಯತ್ನ ಪಡಬೇಕು.
ಔಟ್ ಸೋರ್ಸಿಂಗ್ ಅಥವ ಹೊರ ಗುತ್ತಿಗೆ ಅನ್ನುವುದು ಕೆಳಹಂತದ ನೌಕರಿಗೆ ಮಾತ್ರ ಸೀಮಿತವಾದದ್ದು. ಅಂದರೆ ಕಸಗುಡಿಸುವುದು, ಪ್ಲಂಬಿಂಗ್, ಕ್ಲೀನಿಂಗ್, ಸ್ಯಾನಿಟೈಸಿಂಗ್, ಸೆಕ್ಯೂರಿಟಿ, ಲಿಫ್ಟ್ ಆಪರೇಷನ್ ತರದ ಕೆಲಸಗಳೆಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಈ ಹೊರ ಗುತ್ತಿಗೆಯಿಂದಲೇ ನಡೆಯುತ್ತಿದೆ. ಈ ನೌಕರರು ಆಯಾ ಕಛೇರಿಗಳಲ್ಲಿ ಕೆಲಸ ಮಾಡುತ್ತಾರಾದರೂ ಅವರ ಕಂಟ್ರಾಕ್ಟರ್ ಕೊಟ್ಟಷ್ಟಕ್ಕೆ ದುಡಿಯುತ್ತಾರೆ. ಆದರೆ ಈ ಕಂಟ್ರಾಕ್ಟರುಗಳು ಕನಿಷ್ಠ ಕೂಲಿಯ ಆಧಾರದಲ್ಲಿ ಬಿಲ್ಲು ಸಲ್ಲಿಸಿ ಸಂಬಂಧಿಸಿದ ಅಧಿಕಾರಿಯನ್ನು ಹಿಡಿದು ತಮ್ಮ ಹಣ ಪಡೆಯುತ್ತವಾದರೂ ನೌಕರರಿಗೆ ಮಾತ್ರ ಸಿಕ್ಕುವುದು ಎಳ್ಳು ಕಾಳು.
ಹೊರಗುತ್ತಿಗೆ ಆಧಾರದ ನೌಕರಿಯನ್ನು, ಕಂಟ್ರಾಕ್ಟ್ ಆಧಾರದ ನೌಕರಿಯನ್ನು ಕನಿಷ್ಠ ಕೂಲಿ ಕೊಡದ ಉದ್ಯೋಗದಾತರನ್ನು ನಿವಾರಿಸದ ಹೊರತು ಮೇ ದಿನದ ಚಳವಳಿಗೆ ಯಾವ ಅರ್ಥವೂ ಇರುವುದಿಲ್ಲ.
*****