ಮೇ – ಒಂದು ಕಪ್ಪು ಹಾಡು
ನೂರುಲ್ಲಾ ತ್ಯಾಮಗೊಂಡ್ಲು
ಮೇ – ಒಂದು ಕಪ್ಪು ಹಾಡು
ಕಾರ್ಲ್ ಮಾರ್ಕ್ಸ್ ನ ಹೆಣ ಹೊತ್ತ ಕೈಗಳಿನ್ನು
ಬೀದಿ ಬೀದಿ ತರಗೆಲೆಯಂತೆ ತೆವಳುತ್ತಲೇ ಇವೆ
ಸಂಜೆಯ ಸೂರ್ಯ ಸದ್ದಿಲ್ಲದೆ ನೋಡುತ್ತಾನೆ
ಕೈಗಳಿಗಂಟಿದ ಕತ್ತಲನ್ನು
ಶತಮಾನಗಳಿಂದಲೂ ಹೀಗೆ ಬದುಕು
ಸಂಕೇತಗಳಲ್ಲಿ ಹರಿದು ಹೋಗಿದೆ
ಸಂಜೆ ಮಲ್ಲಿಗೆಯ ಕನಸಿನಲ್ಲಿ
ಕಂಪಿನ ಹಿತವಿಲ್ಲ
ಖಾಲಿ ಜೋಬುಗಳ ತುಂಬ
ಸ್ವೇದದ ಕಮಟು
ಹೆಂಡತಿ ಮಕ್ಕಳು ಕೈ ನೀಡಿದಾಗ
ತಬ್ಬಿಕೊಳ್ಳುವ ಕೈಗಳಲ್ಲಿ ನಿತ್ರಾಣವಿಲ್ಲ
ಒಂದು ಹಗಲು ಅಥವಾ
ಒಂದು ಇರುಳು ಸವೆದ ಬದುಕಿನ
ಹಿಸಾಬು ಹಾಕಲು ಕೈಗೆರೆಗಳೇ ಅಳಿಸಿ ಹೋಗಿವೆ
ಬಂಡವಾಳ ಶಾಹಿಗಳ ಬೂಟುಗಳಲಿ
ಬತ್ತಿ ಹೋದ ನಸಿಬು
ಯೌವ್ವನದ ಜೋಲು ಗೆರೆಗಳಲಿ
ತಪ್ತ ನಗೆ-
ಸೌಧಗಳಲಿ ನೇತಾಡುವ ರಕ್ತ ನಾಳಗಳು ;
ಹೆಪ್ಪುಗಟ್ಟಿದ ಮೇದುಳ ತಾರುಗಳಲಿ
ತೊಟ್ಟಿಕ್ಕುವ ಕೀವ್…
ಕರುನಾಳು ಸೂರ್ಯ ತನ್ನ ರೆಕ್ಕೆಗಳನ್ನು
ಅವುಚಿಕೊಳ್ಳುವಾಗ, ಮಾನವತೆಯ ಉಸಿರು
ದುಡಿದ ಕೈಗಳ ಹಾಡಾಗುತ್ತದೆ…
ಹ್ಞಾ , ಕರಿ ನೆರಳ ಕಪ್ಪು ಹಾಡಾಗುತ್ತದೆ.
********
ತುಂಬ ಧನ್ಯವಾದಗಳು ಮಧು ಸರ್…