ಲೇಖನ ಸಂಗಾತಿ
ಸುಧಾ ಹಡಿನಬಾಳ
ತಾಯ್ನುಡಿಯ ಬಗೆಗಿರಲಿ ಅಭಿಮಾನ ಬದ್ಧತೆ,
ಸಂಗಾತಿ ಬ್ಲಾಗ್: ಕನ್ನಡ ಶಾಲೆಯಲ್ಲಿ ಓದುವ ಮಕ್ಕಳಲ್ಲೆಲ್ಲ ಒಂದು ಗುರು ಭಾವನೆ ; ಬಹುಶಃ ನಾವು ಕೇಳುವ ಅಥವಾ ನಮಗೆ ಗೊತ್ತಿಲ್ಲದ ಎಲ್ಲ ಪ್ರಶ್ನೆಗಳಿಗೆ ಉತ್ತರ ನಮ್ಮ ಗುರುಗಳಿಗೆ ಗೊತ್ತಿರುತ್ತದೆ ಎಂಬ ಭಾವ! ಇದೊಂದು ಮುಗ್ಧ ಭಾವವೆನಿಸಿದರೂ ಎಲ್ಲರೂ ಎಲ್ಲಾ ವಿಷಯದಲ್ಲಿ ಸರ್ವಜ್ಞರಾಗಲು ಸಾಧ್ಯವಿಲ್ಲ, ಒಪ್ಪಿಕೊಳ್ಳಬೇಕಾದ ಸತ್ಯವೇ.. ಆದರೂ ಆ ಕ್ಷಣಕ್ಕೆ ಮಕ್ಕಳ ಜ್ಞಾನದಾಹವನ್ನು ತಣಿಸುವ, ಇಚ್ಛಾಶಕ್ತಿ ,ಪ್ರಯತ್ನವಂತೂ ಇರಲೇಬೇಕಲ್ಲವೇ? ತುಂಬಾ ಆಸೆಯಿಂದ ಯಾರು ಯಾರನ್ನೊ ಕೇಳಿ ಉತ್ತರ ದೊರೆಯದಿದ್ದಾಗ ಮಕ್ಕಳು ಮೊರೆ ಹೋಗುವುದು ಶಿಕ್ಷಕರನ್ನೇ; ಆ ಕ್ಷಣಕ್ಕೆ ಉತ್ತರ ಹೊಳೆಯದಿದ್ದರೂ ಕೇಳಿ ಹೇಳುತ್ತೇನೆ ;ನಾಳೆ ಹೇಳುತ್ತೇನೆ ಎಂಬ ಸಮಜಾಯಿಶಿ ಮಕ್ಕಳ ಮನಕ್ಕೆ ಸಮಾಧಾನ ತಂದೀತು. ಪ್ರೌಢ, ಕಾಲೇಜು ವಿಭಾಗದಲ್ಲಿ ವಿಷಯ ಶಿಕ್ಷಕರಿದ್ದು ಆಯಾ ವಿಷಯಗಳಿಗೆ ಅವರವರನ್ನೇ ಕೇಳಿ ಉತ್ತರ ಪಡೆಯಬೇಕು. ಅವರಿಲ್ಲದಿದ್ದರೂ ಉತ್ತರಕ್ಕೆ ಅವರನ್ನೇ ಕಾಯಬೇಕು. ಪ್ರಾಥಮಿಕ ಶಾಲಾ ಶಿಕ್ಷಕರು ಹಾಗಲ್ಲ; ಸರ್ವಜ್ಜನಂತೆ ಎಲ್ಲವನ್ನು ಬಲ್ಲವನಾಗಿರಬೇಕು ಎಂಬ ನಿರೀಕ್ಷೆ ಮಕ್ಕಳದ್ದು ಜೊತೆಗೆ ಪಾಲಕರದ್ದು ಕೂಡ.
‘ಇಲ್ಲ ನನಗೆ ಗೊತ್ತಿಲ್ಲ ‘ಎಂಬ ಬಿರುಸಿನ ಮಾತು ತುಂಬಾ ಆಸೆಯಿಂದ ಮಕ್ಕಳು ಊದಿದ ಬಲೂನಿಗೆ ಯಾರೋ ಸೂಜಿ ಚುಚ್ಚಿದಂತಾದೀತು; ಪದೇ ಪದೇ ಶಿಕ್ಷಕರಿಂದ ಪಡೆವ ಈ ಬಗೆಯ ಪ್ರತಿಕ್ರಿಯೆ ಅವರಲ್ಲಿ ಜ್ಞಾನದಾಹವನ್ನು ಕುಗ್ಗಿಸೀತಲ್ಲವೇ? ಆದ್ದರಿಂದ ಶಿಕ್ಷಕರಾದವರು ನನಗೆ ಗೊತ್ತಿಲ್ಲ ಎಂಬ ತಕ್ಷಣದ ಉತ್ತರ ನೀಡುವ ಬದಲು ಮಕ್ಕಳ ಮನಸ್ಸನ್ನು ಅರಿತು ಅವರನ್ನು ಸಮಾಧಾನಿಸುವ ಪ್ರಯತ್ನವಂತೂ ಮಾಡಲೇಬೇಕು! ಅಂದಾಗ ಮಾತ್ರ ಜ್ಞಾನದ ಬೀಜ ಮೊಳಕೆಯೊಡೆಯಲು ಸಾಧ್ಯ.
ಇತ್ತೀಚಿಗಂತೂ ಓದುವ ಪ್ರವೃತ್ತಿ ಎಲ್ಲರಲ್ಲೂ ಕುಂಠಿತವಾಗಿದ್ದು ಸುಳ್ಳಲ್ಲ. ಮೊಬೈಲ್ ಬಂದ ನಂತರ ಎಲ್ಲಾ ಪ್ರಶ್ನೆಗಳಿಗೂ ತಕ್ಷಣದಲ್ಲಿ ರೆಡಿಮೇಡ್ ಆನ್ಸರ್ ಮೊಬೈಲ್ ನಲ್ಲಿ ಸಿದ್ಧವಿರುವುದರಿಂದ ದಪ್ಪ ದಪ್ಪ ಪುಸ್ತಕಗಳನ್ನು ಓದಿ ತಡಕಾಡಿ ಪ್ರಬಂಧ ಸಿದ್ಧಪಡಿಸುವ ಗೋಜು ಯಾರಿಗೂ ಬೇಕಾಗಿಲ್ಲ… ನಾಳೆ ಯಾವುದೋ ಮಹನೀಯರ ಜಯಂತಿ ಎಂದೊಡನೆ ಶಿಕ್ಷಕರನ್ನೂ ಒಳಗೊಂಡಂತೆ ಆ ದಿನದ ಭಾಷಣಕ್ಕೆ ಎಷ್ಟು ಬೇಕೋ ಅಷ್ಟನ್ನು ಮೊಬೈಲ್ ನಲ್ಲಿ ಹುಡುಕಾಡಿ ೧೦ ನಿಮಿಷದಲ್ಲಿ ಸರ್ಚ್ ಮಾಡಿ ಮಾರನೇ ದಿನ ನೆನಪಿದ್ದಷ್ಟು ಭಾಷಣ ಮಾಡಿದರೆ ಬೀಸುವ ದೊಣ್ಣೆ ತಪ್ಪಿಸಿಕೊಂಡಂತೆ ಎಂಬ ಭಾವ ಇದು ಮಕ್ಕಳಿಗೂ ಶಿಕ್ಷಕರಿಗೂ ಅನ್ವಯವಾಗುತ್ತಿರುವ ಹೊಸದೊಂದು ಟೆಕ್ನಿಕ್! ಯಾವ ಗ್ರಂಥಾಲಯದ ಅವಶ್ಯಕತೆ ಇಲ್ಲ; ಪುಸ್ತಕಗಳ ಸಂಗ್ರಹ ಬೇಕಿಲ್ಲ; ಪತ್ರಿಕೆ ಓದಬೇಕೆಂದಿಲ್ಲ; ನ್ಯೂಸ್ ಕೇಳಬೇಕೆಂದಿಲ್ಲ. ಎಲ್ಲಕ್ಕೂ ಉತ್ತರ ಥಟ್ ಅಂತ ರೆಡಿ! ಬಹುಶಃ ಬೆರಳೆಣಿಕೆ ಅಷ್ಟಾದರೂ ಜ್ಞಾನದ, ಪುಸ್ತಕದ ಹಸಿವು ಇರುವ ಜನ, ಶಿಕ್ಷಕರು ಇಂದಿಗೂ ಇದ್ದಾರೆ ಎಂಬುದೇ ಸಂತಸದ ವಿಚಾರ ಬಲ್ಲವನೇ ಬಲ್ಲ ಬೆಲ್ಲದ ರುಚಿಯ’ ಎಂಬಂತೆ ಓದಲಾರದವನಿಗೆ ಪುಸ್ತಕದ ಸುಖ ಅರಿವಿಗೆ ಬಂದೀತೆ?
ಅಧ್ಯಾಪನವೃತ್ತಿ ಮತ್ತು ಓದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನು ಹೊರೆತುಪಡಿಸಿ ಇನ್ನೊಂದು ಇರಲಾರದು .ಬೇರೆ ಯಾವುದೇ ಇಲಾಖೆಯ ಉದ್ಯೋಗಿಗಳಿಗೆ ಅವರವರ ಇಲಾಖೆಯನ್ನು ಹೊರತುಪಡಿಸಿ ಹೊರಪ್ರಪಂಚದ ವಿಸ್ತಾರವಾದ ಓದಿನ ಹರವು ಅಗತ್ಯವಿರಲಿಕ್ಕಿಲ್ಲ ಏಕೆಂದರೆ ಬಹುತೇಕರ ಕೆಲಸ ಕಾರ್ಯ ಕಂಪ್ಯೂಟರ್ ,ಫೈಲ್, ಕಾಗದಪತ್ರಗಳು ,ಹಣಕಾಸಿನ ಲೆಕ್ಕಾಚಾರಗಳೊಂದಿಗೆ , ಅವರವರ ಒತ್ತಡದಲ್ಲಿರುವ ಜನಸಾಮಾನ್ಯರೊಟ್ಟಿಗೆ ಇರಬಹುದು; ಆದರೆ ಶಿಕ್ಷಕ ವೃತ್ತಿಯಲ್ಲಿರುವವರಿಗೆ ಪ್ರತಿ ದಿನ ನಮ್ಮೆದುರಿಗೆ ಕುಳಿತು ನಮ್ಮನ್ನು ಮೈಯೆಲ್ಲಾ ಕಣ್ಣಾಗಿ ವೀಕ್ಷಿಸುವ, ಅನುಕರಿಸುವ ಬೆಳೆಯುತ್ತಿರುವ ಚಿಗುರುಗಳು ಅವಲೋಕಿಸುತ್ತಿರುತ್ತವೆ . ಅವರ ಎಲ್ಲಾ ಬಗೆಯ ಕುತೂಹಲಗಳಿಗೆ, ನಿರೀಕ್ಷೆಗಳಿಗೆ ಶಿಕ್ಷಕರಿಂದ ಉತ್ತರವನ್ನು ಬಯಸುತ್ತಾರೆ .ಪ್ರೌಢ ಕಾಲೇಜು ಹಂತಗಳಲ್ಲಿ ವಿದ್ಯಾರ್ಥಿ ಶಿಕ್ಷಕರ ಸಂಬಂಧ ಅಷ್ಟೇನೂ ಅನ್ಯೋನ್ಯವಾಗಿರದಿದ್ದರೂ ಪ್ರಾಥಮಿಕ ಹಂತದಲ್ಲಿ ಮಾತ್ರ ಹಾಗಾಗಲಾರದು. ಅಪ್ಪ-ಅಮ್ಮನಿಗಿಂತ ಹೆಚ್ಚಾಗಿ ಕಲಿಕೆಯ ವಿಷಯ ಬಂದಾಗ ಮಕ್ಕಳು ಅವಲಂಬಿತರಾಗಿರುವುದು ಶಿಕ್ಷಕರನ್ನೇ .ಹೀಗಾಗಿ ಶಿಕ್ಷಕರಾದವರು ನಡೆದಾಡುವ ವಿಶ್ವಕೋಶದಂತಲ್ಲದಿದ್ದರೂ ಮಕ್ಕಳ ದಾಹವನ್ನು ತಣಿಸುವಷ್ಟರ ಮಟ್ಟಿಗಾದರೂ ಓದಿನ ಹಸಿವು, ಜ್ಞಾನದ ಹಂಬಲ ಹೊಂದಿರಬೇಕು. ‘ಸರ್ವಜ್ಞನೆಂಬವನು ಗರ್ವದಿಂದಾದವನೇ ಸರ್ವರೊಳಗೊಂದೊಂದು ನುಡಿಯ ಕಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ’ ಎಂಬ ಕವಿವಾಣಿಯಂತೆ ಗೊತ್ತಿಲ್ಲದ ವಿಷಯವನ್ನು ಕೇಳಿ ತಿಳಿಯುವ ಹಂಬಲವನ್ನಾದರೂ ಹೊಂದಿರಬೇಕು.
ಸಾಮಾನ್ಯವಾಗಿ ನಾನು ವರ್ಗ ಕೋಣೆಯಲ್ಲಿ ಪಾಠ ಮಾಡುವಾಗ ಪಠ್ಯದ ಆಚೆಗಿನ ಕೆಲವು ವಿಷಯಗಳ ಕುರಿತಾಗಿ ಒಂದಿಷ್ಟು ಪ್ರಶ್ನೆಯ ಹುಳವನ್ನು ಮಕ್ಕಳ ತಲೆಯಲ್ಲಿ ಕೊರೆಯಲು ಬಿಟ್ಟು ಉತ್ತರ ಹೇಳದೆ ಮನೆಯಲ್ಲಿರುವ ಹಿರೇಕರನ್ನ, ಅಕ್ಕಪಕ್ಕದವರನ್ನ. ಅಥವಾ ಶಿಕ್ಷಕರನ್ನ ಕೇಳಿ ತಿಳಿದು ಬರುವಂತೆ ಮಾಡುವುದು ನನ್ನ ಪರಿ . ಒಂದು ವರ್ಗದಲ್ಲಿ ಒಬ್ಬಿಬ್ಬರು ಮಕ್ಕಳಾದರೂ ಈ ತರದ ಕಾರ್ಯದಲ್ಲಿ ಉತ್ಸಾಹ ತೋರಿ ಯಾರ ಯಾರದೋ ತಲೆ ತಿಂದು ಉತ್ತರ ಕಂಡುಕೊಂಡು ಬರುತ್ತಾರೆ , ಹತಾಶರಾದರೆ ನಾನೇ ಉತ್ತರ ಹೇಳುತ್ತೇನೆ. ಇದು ನನ್ನ ಪಾಠ ಬೋಧನೆಯ ಒಂದು ವಿಧಾನ.
ಆರನೇ ವರ್ಗದ ‘ಕರ್ನಾಟಕ ಏಕೀಕರಣ’ ಪಾಠ ಮಾಡುವ ಸಂದರ್ಭ ; ಕನ್ನಡ ಸಾಹಿತ್ಯ ಪರಿಷತ್ತು ರಚನೆಯಾದ ವರ್ಷ, ಅದರ ಕೆಲಸ ಕಾರ್ಯಗಳು ,ಅಂದಿನ ಕಸಾಪ ದ ಉದ್ದೇಶ ,ಕಾರ್ಯ ವೈಖರಿ, ಕನ್ನಡವನ್ನು ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡ ರೀತಿ ಇವುಗಳ ಬಗ್ಗೆ ಪಾಠ ಮಾಡುತ್ತಾ ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ವಿವರಿಸುತ್ತಾ ಈಗಿನ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಳ್ಳುತ್ತಿರುವಂತಹ ಕೆಲಸ ಕಾರ್ಯಗಳು ,ಸಾಹಿತ್ಯ ಸಮ್ಮೇಳನಗಳು, ಆಗಾಗ ವರ್ಗ ಕೋಣೆಯಲ್ಲಿ ಪ್ರಸ್ತಾಪಿಸುತ್ತಿದ್ದ ಪುಸ್ತಕ ಬಿಡುಗಡೆ , ತಾಲೂಕು ,ಜಿಲ್ಲಾ ಹಂತದ ಸಮ್ಮೇಳನಗಳ ಬಗ್ಗೆ ಪ್ರಸ್ತಾಪಿಸುತ್ತಾ ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು, ಜಿಲ್ಲಾ ಅಧ್ಯಕ್ಷರು, ತಾಲೂಕಾ ಅಧ್ಯಕ್ಷರ ಯಾರೆಂದು ಪ್ರಶ್ನಿಸಿದೆ ; ಎಂದಿನಂತೆ ಮಕ್ಕಳಿಗೆ ಗೊತ್ತಿಲ್ಲದಾದಾಗ ಕೇಳಿ ತಿಳಿದು ಬರುವಂತೆ ಹೇಳಿದೆ. ಒಂದು ದಿನ ಕಳೆಯಿತು ,ಎರಡು ದಿನ ಕಳೆದರೂ ಮಕ್ಕಳಿಗೆ ಉತ್ತರ ಸಿಗಲಿಲ್ಲ .ತಮ್ಮ ಅಪ್ಪ ಅಮ್ಮಂದಿರು, ಅಕ್ಕಪಕ್ಕದ ಮನೆಯ ಅಣ್ಣಂದಿರು, ಅಕ್ಕಂದಿರನ್ನು ಕೇಳಿ ಉತ್ತರ ಸಿಗದೆ ನಿರಾಶರಾದ ಮಕ್ಕಳು ಶಾಲೆಯಲ್ಲಿರುವ ಮೂರ್ನಾಲ್ಕು ಹಿರಿಕಿರಿಯ ಶಿಕ್ಷಕರನ್ನು ಕೇಳಿದ್ದಾರೆ ಆಶ್ಚರ್ಯ! ಯಾರಿಂದಲೂ ಉತ್ತರವಿಲ್ಲ !!ಮಕ್ಕಳ’ ಗೊತ್ತಿಲ್ಲ ಟೀಚರ್ ಯಾರಿಗೂ ;ಯಾರಿಂದಲೂ ಉತ್ತರ ಸಿಗಲಿಲ್ಲ’ ಎಂಬ
ಉತ್ತರಕ್ಕೆ ವಿಷಾದವೆನಿಸಿತು.ಇಂದು ಸಾಹಿತ್ಯ ಪರಿಷತ್ತು ತಾಲೂಕು, ಜಿಲ್ಲಾ ಹಂತದಲ್ಲಯೂ ಕ್ರಿಯಾಶೀಲವಾಗಿ ಹತ್ತಾರು ಕಾರ್ಯಕ್ರಮ ಸಂಘಟಿಸುತ್ತ
ಜನಸಾಮಾನ್ಯರಿಗೆ, ಶಾಲೆಗಳಿಗೆ ಹತ್ತಿರವಾಗುತ್ತಿರುವಾಗ ಈ ಬಗ್ಗೆ ಅವಜ್ಞೆ , ನಿರ್ಲಕ್ಷ ಧೋರಣೆ ವಿದ್ಯಾವಂತರಿಂದ ,ಶಿಕ್ಷಕರಿಂದ ಸರಿಯಾದದೇ?
ಸುಧಾ ಹಡಿನಬಾಳ