ಅಲ್ಲಮಪ್ರಭು ವಚನ ವಿಶ್ಲೇಷಣೆ-ಪ್ರೊ. ಜಿ ಎ. ತಿಗಡಿ.

ವಚನ ಸಂಗಾತಿ

ಅಲ್ಲಮಪ್ರಭು ವಚನ ವಿಶ್ಲೇಷಣೆ-

ಪ್ರೊ. ಜಿ ಎ. ತಿಗಡಿ.

ರಕ್ಕಸಿಗಿಬ್ಬರು ಮಕ್ಕಳು, ತೊಟ್ಟಿಲ ಮೇಲೈವರು,
ರಕ್ಕಸಿ ಬಾಣತಿಯಾದಡೆ ಮಕ್ಕಳಿಗಿನ್ನೆಂತೊ!
ತೊಟ್ಟಿಲ ತೂಗುವೆ ಜೋಗುಳವಾಡುವೆ
ರಕ್ಕಸಿಬಾಣತಿಯ ತೊಟ್ಟಿಲು ನುಂಗಿತ್ತು.
ಇದೇನು ಹೇಳಾ ಗುಹೇಶ್ವರಾ?

ಭವಕ್ಕೆ ಬಂದ ಜೀವ ಅಜ್ಞಾನವಶದಿಂದಾಗಿ ಭವಾವಳಿಯ ಚಕ್ರದಲ್ಲಿ ಸಿಲುಕಿ ಒದ್ದಾಡುತ್ತಿದೆ ತನ್ನ ಅಜ್ಞಾನವನ್ನು ಕಳೆದುಕೊಳ್ಳದ ಹೊರತು ಆ ಜೀವಕ್ಕೆ ಮುಕ್ತಿ ಇಲ್ಲವೆಂಬುದನ್ನು ಈ ಬೆಡಗಿನ ವಚನ ಧ್ವನಿಸುತ್ತದೆ.

     ಎಲ್ಲವನ್ನೂ  ನುಂಗಿ ನೊಣೆದು ಹಾಕುವ ಅವಿದ್ಯೆಯೆಂಬ ಮಾಯೆಯೇ ರಕ್ಕಸಿ.  ಮನ,  ಬುದ್ಧಿಗಳೆಂಬವರು ಈಕೆಯ ಮಕ್ಕಳು. ದೇಹವೆಂಬುದೇ ತೊಟ್ಟಿಲು.  ಇದು ಇಂದ್ರಿಯ ಮನಸ್ಸು, ಬುದ್ಧಿಗಳಿಗೆ ಆಶ್ರಯ ಸ್ಥಾನವಾಗಿದೆ.  ಈ ಪಂಚ ಜ್ಞಾನೇಂದ್ರಿಯಗಳು ಒಂದರ್ಥದಲ್ಲಿ  ಮಾಯೆಯ ಮಕ್ಕಳೇ.   ಈ ಮಾಯೆಗೆ ಹೇಳತೀರದಷ್ಟು ಹಸಿವಿನ ದಾಹ.   ಹೀಗಾಗಿ ಈಕೆ ತನ್ನ ಮಕ್ಕಳನ್ನು ಗೋಳಾಡಿಸಿ ದುಃಖಕ್ಕೀಡುಮಾಡಿ ಜೀವ ಹಿಂಡುತ್ತಿದ್ದಾಳೆ.  ಹೀಗಿರುವಾಗ ಆ ಮಕ್ಕಳ ಹಸಿವಿನ ಗೋಳನ್ನು  ಕೇಳುವವರಾರು? ಈ ಮಕ್ಕಳಿಗೋ ವಿಷಯದ ವಿಪರೀತ ದಾಹ ಇವರನ್ನು ಸಮಾಧಾನಪಡಿಸಲು ತೊಟ್ಟಿಲ(ದೇಹ)ದ  ಅಭಿಮಾನಿಯಾದ ‘ಜೀವ ‘ ನು ತೊಟ್ಟಿಲನ್ನು ತೂಗತೊಡಗಿದನು. ಅಜ್ಞಾನಿಯಾದ ಜೀವನು  ವಿಷಯಸುಖಗಳಲ್ಲಿ ತಲ್ಲೀನನಾಗಿ, ಅದರಲ್ಲಿಯೇ ಮುಳುಗಿ ದಾಹ ತೀರದ್ದಕ್ಕಾಗಿ ಪ್ರಲಾಪಿಸತೊಡಗುತ್ತಾನೆ.  ಇದನ್ನೇ ಅಲ್ಲಮರು ‘ತೊಟ್ಟಿಲ ತೂಗುವೆ ಜೋಗುಳವಾಡುವೆ’ ಎಂದಿದ್ದಾರೆ. ಕೊನೆಗೆ  ಮಕ್ಕಳಿಗೆ ಆಶ್ರಯವಾದ ತೊಟ್ಟಿಲು, ಆ ದೇಹ ಮತ್ತು  ಬಾಣತಿಯನ್ನೇ ನುಂಗಿ ಹಾಕುತ್ತದೆ.  ರಾಕ್ಷಸ ಸ್ವರೂಪಿ ಮಾಯೆಯ ವಿಷಯಕ್ಕೆ ದೇಹ ಇಂದ್ರಿಯ ಮನ ಬುದ್ಧಿಗಳು ಬಲಿಯಾದವು.   ಹೀಗೆ ಮಾಯೆ ಅಂತರಂಗ ಬಹಿರಂಗದೊಳಗೆ ವ್ಯಾಪಿಸಿ, ತೀರದ ದಾಹವನ್ನುಂಟುಮಾಡಿ ಇಬ್ಬಗೆಯಲ್ಲೂ ಅಶಾಂತಿ, ಅತೃಪ್ತಿ, ಕಷ್ಟ – ನಷ್ಟಗಳನ್ನು ಅನುಭವಿಸುವಂತೆ ಮಾಡಿ, ಬದುಕು ನರಕಸದೃಶ್ಯವಾಗುವಂತೆ ಮಾಡಿತು.  ಇದೆಲ್ಲವೂ ಮಾಯೆಯ ವಿಲಾಸ.
———————————–


ಪ್ರೊ. ಜಿ ಎ. ತಿಗಡಿ.

One thought on “ಅಲ್ಲಮಪ್ರಭು ವಚನ ವಿಶ್ಲೇಷಣೆ-ಪ್ರೊ. ಜಿ ಎ. ತಿಗಡಿ.

Leave a Reply

Back To Top