ಎನ್. ಎಲ್. ಚನ್ನೇಗೌಡ ಅವರ ಕೃತಿ “ನುಡುತೋರಣ” ಅವಲೋಕನ ಗೊರೂರು ಅನಂತರಾಜು,

ಪುಸ್ತಕ ಸಂಗಾತಿ

ಎನ್. ಎಲ್. ಚನ್ನೇಗೌಡ ಅವರ ಕೃತಿ

“ನುಡುತೋರಣ” ಅವಲೋಕನ

ಗೊರೂರು ಅನಂತರಾಜು,

ನುಡಿ ತೋರಣ ಕಾವ್ಯ ವಿಮರ್ಶಾ ಕೃತಿ. ವಿಮರ್ಶಕಾರರು ಎನ್.ಎಲ್.ಚನ್ನೇಗೌಡರು. ಈ ಕೃತಿ ಮೊನ್ನೆ ನಡೆದ ೩೧೧ನೇ ತಿಂಗಳ ಮನೆ ಮನೆ ಕವಿಗೋಷ್ಠಿಯಲ್ಲಿ ಬಿಡುಗಡೆ ಆಯಿತು. ಕಟು ವಿಮರ್ಶಕರೆಂದೇ ಹೆಸರಾದ ಚನ್ನೇಗೌಡರು ಸ್ವತ: ಕವಿಗಳು. ಕಾವ್ಯಕ್ಷೇತ್ರದಲ್ಲಿ ಪಳಗಲು ಊರಲ್ಲಿ (ನಾಯಕರಹಳ್ಳಿ) ಜಮೀನಿದ್ದರೂ ಹಾಸನದಲ್ಲಿ ಕಾವ್ಯ ಕೃಷಿ ಮಾಡುತ್ತಾ ಹಸನಾದ ಬೆಳೆ ತೆಗೆದವರು. ಕಾವ್ಯದ ಆಳ ಅಗಲ ವಿಸ್ತಾರ ಅರಿತವರು. ಕಾವ್ಯ ಕನವರಿಸಬೇಕು ಎನ್ನುವ ಇವರು ಹಗಲು ರಾತ್ರಿ ಕಾವ್ಯದಲ್ಲೇ ಕನವರಿಸಿದವರು. ಒಂದು ಕಾವ್ಯ ರಚನೆಯೆಂದರೆ ಅದರಲ್ಲಿ ಆಳ ಮತ್ತು ಅರ್ಥಗಳ ಸಂಗಮವಿರಬೇಕು. ರಸ ಆತ್ಮಾನುಭವವನ್ನು ನೀಡಿದರೆ ಅರ್ಥ ಜೀವನಾನುಭವವನ್ನು ಕೊಡುತ್ತಾ ಹೋಗುತ್ತದೆ. ರಸ ಮಾನಸಿಕ ಅಂತರ್ಗತ ಸಂಬಂಧವನ್ನು ಹೊಂದಿದ್ದರೆ ಅರ್ಥ ಬೌದ್ಧಿಕ ಸಂಬಂಧದ ಬೆಸುಗೆಯಾಗಿರುತ್ತದೆ. ಒಬ್ಬ ಸಾಹಿತಿ ತನ್ನ ಸಾಹಿತ್ಯದಲ್ಲಿ ಬಳಸುವ ಭಾಷೆ, ಪದ ಪ್ರಯೋಗ, ಉಪಮೆ, ರೂಪಕ, ಉಪಮಾನಗಳು ನವರಸಗಳಿಂದ ಕೂಡಿದ್ದರೆ ಅದು ಸಾರ್ವಕಾಲಿಕವಾಗಿ ಉಳಿಯುತ್ತದೆ. ಸಾಹಿತ್ಯದಲ್ಲಿ ಬರೇ ಷಡ್ರಸಗಳಿದ್ದರೆ ಸಾಲದು.ಅಲ್ಲಿ ಸಮಕಾಲೀನ ಪ್ರಜ್ಞೆ ಸಹೃದಯ ಸ್ಫೂರ್ತಿಯಿಂದ ಹೊರಬಂದ ಭಾವನೆಗಳು ಆಳವಾಗಿ ಬೇರು ಬಿಟ್ಟು ತನ್ನ ಅರ್ಥ ವಿಸ್ತಾರತೆಯ ರೆಂಬೆಗಳನ್ನು ಚಾಚಿದರೆ ಓದುಗ ಆನಂದದ ತುತ್ತ ತುದಿ ತಲುಪುತ್ತಾನೆ ಎನ್ನುತ್ತಾರೆ.
ರವಿ ಕಾಣದ್ದನ್ನು ಕವಿ ಕಂಡ. ಕವಿ ಕಾಣದ್ದನ್ನು ವಿಮರ್ಶಕ ಕಂಡ. ವಿಮರ್ಶಕ ಕಾಣದನ್ನು ಕಟು ವಿಮರ್ಶಕ ಕಂಡ ಎಂಬಂತೆ ನುಡಿ ತೋರಣ ಅನಾವರಣ ಮಾಡಿದ ಯುವ ಕವಿ ರಾಜೇಶ್ ಬಿ. ಹೊನ್ನೇನಹಳ್ಳಿ ತಮ್ಮ   ಮೊಟಕು ಭಾಷಣದಲ್ಲಿ ಪುಸ್ತಕ ವಿಮರ್ಶಿಸದೇ ಕವಿಗಳನ್ನು ಕುಟುಕಿದರು. ಕವಿ ಚನ್ನೇಗೌಡರು ಬರೆವ ಮುನ್ನುಡಿಯ ಕಡೆಯಲ್ಲಿ ಉಗಿಯುವ ಕಾರ್ಯಕ್ರಮ ಇರುತ್ತದೆ ಎಂದು ವ್ಯಾಖ್ಯಾನಿಸುತ್ತಲೇ ಕವಿಯನ್ನು ಹೊಗಳಿದರು. ಇಲ್ಲಿ ಕವಿಗಳನ್ನು ನಾಲ್ಕು ಮೆಚ್ಚುಗೆಯ ಮಾತನಾಡಿ ಬೆನ್ನುತಟ್ಟಿ ಪ್ರೋತ್ಸಾಹಿಸುವುದೋ ಅಥವಾ ಟಿಕೀಸಿ ಕಾವ್ಯಕ್ಷೇತ್ರಕ್ಕೆ ಪಾದಾರ್ಪಣೆ ಮಾಡ ಹೊರಟ ಕವಿಯನ್ನು ಕಾವ್ಯಕ್ಷೇತ್ರದಿಂದ ಓಡಿ ಹೊಗುವಂತೆ ಮಾಡುವುದೋ ಬಿಡಿಸಲಾಗದ ಕಗ್ಗಂಟು..

ಇವರು ಅವರಂತೆ ಅವರು ಇವರಂತೆ
ಮತ್ತರವರ ಮನೋಧೋರಣೆಯಂತೆ
ಸತ್ತು ಬದುಕುವ ಬದುಕಿ ಸಾಯುವ ಕ್ರೀಡಾ ಸ್ಫರ್ಧೆಯಲ್ಲಿ
ತಾಮ್ರದ ಬಿಂದಿಗೆಯಲ್ಲಿ ಹೆಂಡ ತುಂಬಿ
ಮೇಲೆ ಉಜ್ಜಿ ತೊಳೆದಂತೆ ಬದುಕುತ್ತಿದ್ದಾರೆ ಇಲ್ಲಿ ಎಲ್ಲ..

ಈ ಕವಿತೆಯ ಕವಿ ಕೊಟ್ರೇಶ್‌ ಎಸ್. ಉಪ್ಪಾರ್. ಇವರು ಈ ಹಿಂದೆ ಮನೆ ಮನೆ ಕವಿಗೋಷ್ಠಿಯ ಸಂಚಾಲಕರು. ಆಗ ವಿವಿಧ ಕವಿಗಳ ಸಂಗ್ರಹಿತ ಮನೆ ಮನೆ ಮಲ್ಲಿಗೆ ಸಂಯುಕ್ತ ಕವನ ಸಂಕಲನ  ಪ್ರಕಟವಾಗಿತ್ತು. ಮನೆ ಮನೆ ಕವಿಗೋಷ್ಠಿಯಿಂದ ಹೊಸ ಹೊಸ ಕವಿಗಳು ಉದಯಿಸಿದ್ದಾರೆ ಎಂದು ಕೆಲ ಕವಿಗಳು ಹೆಮ್ಮೆಯಿಂದ ಹೇಳಿಕೊಳ್ಳುವುದುಂಟು.
 ಹೊಸಬರ ಹೊಸ ಕೃತಿಗಳಿಗೆ ಮುನ್ನುಡಿ ಬರೆಯುವುದು ವಿಮರ್ಶೆ ಮಾಡುವುದೆಂದರೆ ಸತ್ಯವಾಗಿಯೂ ಕಷ್ಟದ ಕೆಲಸ ಎಂದು ಸ್ವತ: ಗೌಡರೇ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ. ಹಿರಿಯ ಸಾಹಿತಿಗಳ ಕೃತಿಗೆ ಬರೆಯುವುದೊಂದು ಪುಣ್ಯದ ಕೆಲಸವೆನಿಸಿದರೂ ಒಮ್ಮೆ ಎದೆ ನೀವಿಕೊಳ್ಳಬೇಕು ಎಂದುಎದೆ ಮುಟ್ಟಿ ನೋಡಿಕೊಳ್ಳುತ್ತಾರೆ. ಬೆನ್ನು ಅವರಿಗೆ ಕಾಣುವುದಿಲ್ಲವಷ್ಟೇ..! ಓದುಗರು ಕೃತಿಯನ್ನು ಕೈಗೆತ್ತಿಕೊಂಡ ತಕ್ಷಣ ನೋಡುವುದು ಮುನ್ನುಡಿ, ಬೆನ್ನುಡಿ ಯಾರು ಬರೆದಿದ್ದಾರೆ ಎಂದು. ಮುನ್ನುಡಿಕಾರ ಕೃತಿಯ ಬಗ್ಗೆ ತೀರ ಹೊಗಳುವಂತಿಲ್ಲ. ಮುಖಸ್ತುತಿಯಾದೀತು ಎಂಬ ಭಯ..! ಅಂತೆಯೇ ತೆಗಳುವಂತೆಯೂ ಇಲ್ಲ ನಿಷ್ಟೂರವಾದೇನು ಎಂಬ ಆತಂಕ. ಮುನ್ನುಡಿಕಾರರಿಗೆ ಜಿಜ್ಞಾಸೆ..!

ಬದುಕಿಷ್ಟೆ ಎನ್ನದಿರು ಅಗೆದಷ್ಟು ಆಳ ಅಗಲ
ಬದುವ ಹಾಕಿದವರಿಲ್ಲ ಬಾಳೆಂಬ ಹೊನ್ನ ಹೊಲಕ್ಕೆ

ಟಿ.ಹೆಚ್.ಅಪ್ಪಾಜಿಗೌಡರ ಬಾಂದಳದ ಬೆಳಕು ಕವನ ಸಂಕಲನದ ಎರಡು ಸಾಲು ಆರಿಸಿಕೊಂಡು ಬಿತ್ತನೆ ಕಾಳು ಹೊಲದಲ್ಲಿ ಹರಡುತ್ತಾರೆ.
ಕಾವ್ಯಕ್ಕೂ ಜೀವ, ಆತ್ಮ, ಗುಣರೂಪ ಭೂಷಣಗಳಿವೆ. ಪದ ಮತ್ತು ಅರ್ಥಗಳ ಪರಸ್ಪರ ಸಹ್ಯ ಸಂಬಂಧವಿದೆ. ಅದಕ್ಕೆ ಹೇಳುವುದು ‘ರೀತಿರಾತ್ಮಾಕಾವ್ಯಸ್ಯ, ಕಾವ್ಯಸ್ಯಾತ್ಮಧ್ವನಿ, ಸಬ್ಧಾರ್ಥೌ ಸಹಿತೌಕವ್ಯಂ’ಯೆಂದು. ಕವಿತೆ ಬರೆಯುವುದೆಂದರೆ ಅದೊಂದು ಕಲೆ. ಪ್ರತಿಭೆಯಿಂದ ಹೊರಬಂದ ಕಾವ್ಯವೊಂದು ಅಕ್ಷಯ ಪಾತ್ರೆ. ಡಾ.ಹಂಪನಹಳ್ಳಿ ತಿಮ್ಮೇಗೌಡರ ದೇಶಿಯೊಳ್ ಚೆಲ್ವು.. ಕೃತಿಗೆ ಚೆನ್ನುಡಿ ಬರೆಯುತ್ತಾ ಕಾಲದ ಓಟಕ್ಕೆ ತಕ್ಕಂತೆ ಸಾಹಿತ್ಯದ ಓಘವನ್ನನುಸರಿಸಿ ಹೆಜ್ಜೆ ಹಾಕುವುದು ಒಬ್ಬ ಮುನ್ನುಡಿಕಾರನಿಗೆ ಅನಿವಾರ್ಯ. ಕಂಡರೂ ಕಾಣದಂತಿರುವುದು ಕಾಣದಿದ್ದರೂ ಕಂಡಂತೆ ಬರೆಯುವುದು ಕೆಲವು ಸಂದರ್ಭಗಳಲ್ಲಿ ಸಂದಿಗ್ಧತೆಯ ಅನಿವಾರ್ಯತೆಯನ್ನು ಮನ್ನುಡಿಕಾರ ಎದುರಿಸಬೇಕಾಗುತ್ತದೆ. ಆದರೂ ಸತ್ಯದ ಪರಿಭಾಷೆಯನ್ನು ಮೀರುವಂತಿಲ್ಲ. ರಿಯಾಲಿಟಿ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಂಡು ಆ ಸಾಹಿತ್ಯಕ್ಕೆ ತಮ್ಮದೇ ಆದ ಜೀವನ ದರ್ಶನ ಕೊಡುವ ಸಾಮಾರ್ಥ್ಯ ಮುನ್ನುಡಿಕಾರನಿಗೆ ಇರಬೇಕು.

ಹಲಗೆ ಹಿಡಿದಿಲ್ಲ ಬಳಪದಿ ಬರೆದಿಲ್ಲ
ಶ್ರೀ ಗುರುವು ನಮಗೆ ಬರೆಸಿಲ್ಲ ಕೇಳಿರವ್ವ
ಲೆಕ್ಕಣಿ ನಮಗೆ ಗೊತ್ತಿಲ್ಲ..

ಆದರೂ   ಅಂತರ್ಜಾಲ ಕಾವ್ಯ ಸಾಗರದಲ್ಲಿ ಬಾಯಾರಿಕೆ ನೀಗಿಸದ ಉಪ್ಪು ನೀರೆ ತುಂಬಿರುವ ಬರೇ ಬುರುಗು ಅಲೆಗಳ ಆರ್ಭಟದಲ್ಲಿ ದೇಶಿಯ ಛಂದಸ್ಸಿನ ನಮ್ಮಜನಪದರ ಮಾತಿದು.

ಕೋಲ್ಬಾನಿಟ್ಟು ಕೋಳಿ ಬಾಡ್ನೆಸ್ರು ತೊರೆ ಮೇಗಳ ಮರಳು
 ಹೊಂಗೆ ಮರದ ನೆರಳು ಸ್ವರ್ಗಸುಳು

 ಲೇಖಕರು ಹೇಳಿರುವ ದೇಶಿಯೊಳ್ ಚೆಲ್ವು ಎಂಬ ಪಂಪನ ಮಾತು, ಅರೆಭಟ್ಟನ ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯನ್ ಎಂಬ ತ್ರಿಪದಿ ಇಲ್ಲಿ ಅರ್ಥಪೂರ್ಣ ಅನ್ವಯ ಎನ್ನುತ್ತಾರೆ. ಕವಯಿತ್ರಿ ಎ.ಜಿ.ರತ್ನಕಾಳೇಗೌಡರ ರತ್ನಳ ಆಧುನಿಕ ವಚನಗಳಲ್ಲಿ ಆಯ್ದಿದ್ದು ಇದು:

ಮಸಣಕ್ಕೆ ಹೋಗುವ ಮೊದಲು
ಹಸನು ಮಾಡುವರು ಹೆಣವ..
ಸುಳ್ಳು ಜಾತಕ ಕೇಳಿ ಸೂತಕ ಕಳೆಯಲು ಹೋಗಿ
ನೀನೇ ಸೂತಕವಾದೆಯಯ್ಯಾ..

ಶ್ರೀಮತಿ ಮಾಳೇಟಿರ ಸೀತಮ್ಮ ವಿವೇಕ್‌ ಅವರ ಭಾವ ಕುಸುಮದಲ್ಲಿ ಅಂತರಂಗದ ಭಾವನೆಗಳನ್ನು ಹೊರ ಚೆಲ್ಲಲು ಭಾಷೆಗಳ ಬಂಧನವಿಲ್ಲ. ಹಾಗಾದರೆ ಭಾಷೆ ಎಂದರೇನು..? ಮನುಷ್ಯ ತನ್ನ ಅನಿಸಿಕೆಗಳನ್ನು ಬೇರೆಯವರಿಗೆ ಅಭಿವ್ಯಕ್ತಪಡಿಸುವುದಕ್ಕಾಗಿ ರೂಢಿಸಿಕೊಂಡಿರುವ ಒಂದು ಸಂಕೇತ ಹೌದಷ್ಟೇ..!

ಗರತಿ ಪರಿಪಕ್ವವಾದಾಗ
ಅರಿವಿನ ಹರಿವು ಒಳಗೆ..

ಕಾವ್ಯಾರ್ಥಗರ್ಭಿತ ಸಾಲುಗಳು ಓದುಗನನ್ನು ಚಿಂತನೆಗೆ ಒಳಪಡಿಸಬೇಕಷ್ಟೇ..!
ನವಾಬ್ ಬೇಲೂರು ಸ್ಥಳೀಯ ದಿನಪತ್ರಿಕೆಯಲ್ಲಿ ಪಕ್ಕದ ಸೀಟು  ಶೀರ್ಷಿಕೆಯಡಿ ಅಂಕಣ ಬರೆಯುತ್ತಿದ್ದರು. ಬಸ್ಸಿನಲ್ಲಿ ಇಳಿ ವಯಸ್ಸಿನ ಅಜ್ಜ ಅಜ್ಜಿಯರು ಸೀಟಿನಲ್ಲಿ ಅಕ್ಕಪಕ್ಕ ಕುಳಿತ್ತಿರುವುದನ್ನು ನೋಡಿ ಲೇಖಕರು ಈ ದೃಶ್ಯವನ್ನೇ ಜೀವನ ಪ್ರೀತಿಗೆ ಪೀಠಿಕೆಯಾಗಿಸಿಕೊಳ್ಳುತ್ತಾರೆ. ಇದಕ್ಕೆ ಗೌಡರು ಜನಪದ ಗೀತೆಯೊಂದನ್ನು ಥಳಕು ಹಾಕುತ್ತಾರೆ.

ಮುದುಕೀಗೂ ಮುದುಕನಿಗೂ ಎಲ್ಲೆಲ್ಲಿ ಮಾತಾಯ್ತು
ಮುತ್ತುಗದ ಮರದ ಬಡ್ಡೇಲಿ ಮುದುಕಯ್ಯ
ಮುದುಕೀಗೆ ಮುತ್ತ ಕೊಡುತ್ತಿದ್ದ..

ಬಸವರಾಜ್‌,ಹೆಚ್.ಎಸ್.ರವರ ಇಬ್ಬನಿಯಲ್ಲಿ ಕವಿ ಭಾವನಾ ಲೋಕದಲ್ಲಿ ಒಳ ನುಗ್ಗದ ಹೊರತು ಕಾವ್ಯದ ಭವ್ಯ ಲೋಕವನ್ನು ಕಾಣಲು ಸಾಧ್ಯವಿಲ್ಲ ಎಂದಿದ್ದಾರೆ.

ನಿಶೆ ರಾತ್ರಿ ಪಯಣದಲಿ ಚಂದ್ರನ
ಮೈ ಬೆವರಿ ಬಿದ್ದ ಬೆವರ ಹನಿ
ಈ ಇಬ್ಬನಿ..

ದೇಸು ಆಲೂರು ಮೌನ ಸಂಗ್ರಾಮದಲ್ಲಿನ ತುತ್ತಿನ ಚೀಲ ಕವಿತೆ ಆರಿಸಿಕೊಂಡು

ನಾನಿರುವುದು ಮುರಿದ ಗುಡಿಸಿಲಿನ ಒಳಗೆ..
ನೀನಿರುವುದು ಸುಂದರ ಉಡುಪುಗಳ ಮಳಿಗೆ
ಒಟ್ಟಿನಲ್ಲಿ ನಾವಿಬ್ಬರೂ ಒಂದೇ ಗೆಳೆಯ

ಬೊಂಬೆಯನ್ನು ಪ್ರತಿಮೆಯಾಗಿಟ್ಟುಕೊಂಡು ವಾಸ್ತವ ಬಡತನದ ಬದುಕನ್ನು ಕವಿತೆ ಚಿತ್ರಿಸಿದೆ. ಪವಿತ್ರ ಎಂ. ರವರ ಚೊಚ್ಚಲ ಕೃತಿ ಕೊನೆ..ಯಲ್ಲಿ

ಎರಡು ಹೃದಯದಲಿ ಒಲವ ಬಿತ್ತಿ ಮನಸೆ
ನೀ ಅಳಲು ಜಗದ ಗತಿಯೇನು.

ಬದುಕು ಹತಾಶ ಭಾವನೆಯಿಂದ ಕೊನೆಯಾಗಬಾರದು. ಇದೇ ಕೊನೆ ಎಂದು ಎಂದೂ ಭಾವಿಸಬಾರದು. ಕೊನೆಗೆ ಕೊನರುವ ಶಕ್ತಿಯಿದೆ. ಚಿಗುರುವ ಕಾಲಕ್ಕಾಗಿಯೇ ಆ ಕೊನೆ ಮಳೆಗಾಲ ಚಳಿಗಾಲ ಬೇಸಿಗೆ ಕಾಲಗಳೆಲ್ಲವನ್ನೂ ಸಹಿಸಿಕೊಂಡು ವಸಂತಕಾಲಕ್ಕೆ ಕಾಯುತ್ತದೆ. ಚೈತ್ರದಲ್ಲಿ ಚಿಗುರೊಡೆದು ಫಲ ಕೊಡುತ್ತದೆ. ಈ ಕ್ಷಣ ನಮ್ಮ ಬದುಕಿನ ಕೊನೆಯ ದಿನವಲ್ಲ. ಅದು ನಾಳೆ ಪ್ರತಿದಿನ ಪ್ರತಿಕ್ಷಣವೂ ಆರಂಭವೆಂದೇ ಭಾವಿಸಬೇಕು. ಆಗ ಗುರಿ ಮುಟ್ಟಬಹುದು.. ಹೀಗೆ ವಿಮರ್ಶಕರ ಮಾತನ್ನು ಉಲ್ಲೇಖಿಸುತ್ತಾ ನನ್ನ ಸಹೃದಯ ವಿಮರ್ಶೆಗೂ ಕೊನೆಯಾಡುತ್ತೇನೆ.


ಗೊರೂರು ಅನಂತರಾಜು,

Leave a Reply

Back To Top