ನನ್ನ ಬದುಕಿನಲ್ಲಿ ಬದಲಾವಣೆ ತಂದ ಆಂಡ್ರಾಯ್ಡ್ ಪೋನ್-ಸುಲೋಚನಾ ಮಾಲಿಪಾಟೀಲ

ವಿಶೇಷಲೇಖನ

ನನ್ನ ಬದುಕಿನಲ್ಲಿ ಬದಲಾವಣೆ ತಂದ

ಆಂಡ್ರಾಯ್ಡ್ ಪೋನ್-

ಸುಲೋಚನಾ ಮಾಲಿಪಾಟೀಲ

ಮನುಷ್ಯನ ಚಲನವಲನೆಗಳು ಚಟುವಟಿಕೆಗಳು ಆತನ ಆಚಾರ ವಿಚಾರ, ಅರಿವು ಜ್ಞಾನಕ್ಕೆತಕ್ಕಂತೆ ಬದಲಾಗುತ್ತಲೇ ಇರುತ್ತವೆ.  ಆಧುನಿಕ ಜಗತ್ತಿನ ತಂತ್ರಜ್ಞಾನದಲ್ಲಿ  ಆಂಡ್ರಾಯ್ಡ್ ಫೋನ್ ಮಾನವನ ಪ್ರಮುಖ ಅವಿಷ್ಕಾರ ಎಂದು ಪರಿಗಣಿಸಲಾಗಿದೆ. ಮನುಷ್ಯ ತನ್ನ ಜೀವನ ಶೈಲಿಗೆ ಸರಿಹೊಂದಲು, ಅನುಕೂಲಕರವಾಗಲು ಆರಿಸಿಕೊಂಡಂತಹ ಸಾಧನವೇ ಆಂಡ್ರಾಯ್ಡ್ ಫೋನ್. ದಿನನಿತ್ಯದ ಜೀವನದಲ್ಲಿ  ಆಂಡ್ರಾಯ್ಡ್ ಫೋನ್ ಕೂಡ ಇಂದು ಅನಿವಾರ್ಯವಾಗಿದೆ. ಇದರ ಸದ್ಬಳಕೆಯನ್ನು ಯಾವ ರೀತಿಯಲ್ಲಿ ಬಳಿಸುತ್ತೆವೆಯೋ ಅದಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ. ಇದರಿಂದ ಋಣಾತ್ಮಕ ಮತ್ತು ಧನಾತ್ಮಕ ಫಲಗಳನ್ನು ಪಡೆದುಕೊಳ್ಳುವುದು ಮನುಷ್ಯನಿಗೆ ಬಿಟ್ಟ ವಿಚಾರ. ಆಂಡ್ರಾಯ್ಡ್  ಸ್ಮಾರ್ಟ್ಫೋನ್ ಪ್ರಭಾವ ಕರೋನಾ ಸಮಯದಲ್ಲಿ ಮತ್ತು ತದನಂತರ ಕೂಡ ಸಾಕಷ್ಟು ಮಾರ್ಗಸೂಚಿಯಾಗಿ ಕಾರ್ಯ ನಿರ್ವಹಿಸಿದೆ ಎನ್ನಬಹುದು.
     ನನ್ನ ಅನಿಸಿಕೆ ಹೇಳುವುದಾದರೆ ಆಂಡ್ರಾಯ್ಡ್ ಫೋನ್ ಲಾಭದಾಯಕವಾಗಿ ಹೌದು ಹಾನಿಕಾರಕವು ಹೌದು . ಹೊಸದಾಗಿ ತಂದ ಆಂಡ್ರಾಯ್ಡ್ ಫೋನ್ ನನ್ನ ಕೈಸೇರಿತು. ಅದನ್ನು ಬಳಸುವುದು ಕಲಿಯಲು ತಿಂಗಳುಗಳೇ ಬೇಕಾಯ್ತು. ನನ್ನದೇ ಆದ ಒಂದು ಸ್ನೇಹಿತರ ಗುಂಪನ್ನು ವಾಟ್ಸಾಪ್ನಲ್ಲಿ ಮಾಡಿದೆ. ಕಾಲ ಕ್ರಮೇಣ  ಸಂದೇಶಗಳು, ನುಡಿಮುತ್ತುಗಳು, ನಗಿಸುವ ವ್ಹಿಡಿಯೋಗಳು, ಸುಂದರ ತಾಣಗಳ ದರ್ಶನ, ಅಷ್ಟೇ ಅಲ್ಲ ಮಹಿಳೆಯರು ಸ್ಪರ್ದೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಂತಹ ಫೋಟೋಗಳು, ಭಿನ್ನಭಿನ ಆಟಗಳ ವ್ಹಿಡಿಯೋ ಒಬ್ಬರಿಗೊಬ್ಬರು ಕಳಿಸುವುದನ್ನು ನೋಡಿ ಪ್ರಪಂಚ ಎಷ್ಟು ಸುಂದರವಾಗಿದೆ. ಈ ಐನ್ಡ್ರಾಯ್ಡ ಪೋನ್ ದಲ್ಲಿ ಇಷ್ಟೊಂದು ವಿಷಯಗಳನ್ನು  ತಿಳಿಯಬಹುದ? ಎಂದುಕೊಂಡಾಗ ಬಹಳ ಸಂತಸವಾಯಿತು. ಇನ್ನು ಇದರ ಬಗ್ಗೆ ಸಾಕಷ್ಟು ಅರಿಯಬೇಕು ಎಂಬ ಹುಮ್ಮಸ್ಸು ನನ್ನಲ್ಲಿ ಬೆಳೆಯಿತು. ಬೇಗ ಬೇಗ ಕೆಲಸ ಮುಗಿಸಿ ಉಳಿದ ಸಮಯದಲ್ಲಿ  ಕಲಿಯಲು ಪ್ರಾರಂಭಿಸಿದೆ. ಜಾಲತಾಣದಲ್ಲಿ ಹೊಸ ಹೊಸ ವಿಷಯಗಳನ್ನು  ಹುಡುಕಿ ತೆಗೆದು ಅದರ ಆಳ ಅಧ್ಯಯನ ಮಾಡಲು ಪ್ರಾರಂಭಿಸಿದೆ.


ನನಗೆ ಆಗ ಸ್ವಲ್ಪ ಸ್ವಲ್ಪ ಸಾಹಿತ್ಯಿಕ ವಿಷಯಗಳ ಪರಿಚಯವಾದದ್ದು ನನ್ನ ಸ್ನೇಹಿತೆಯರಿಂದ. ನನ್ನ ಜವಾಬ್ದಾರಿಗಳನ್ನು ನಿಗಿಸಿ ದಂಪತಿಗಳಿಬ್ಬರು  ಧಾರವಾಡದಲ್ಲಿನ ಹಲವಾರು ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಭೆಟ್ಟಿ ನೀಡುತ್ತಿರುವಾಗ ಸಾಕಷ್ಟು ಜನರು ಪರಿಚಯವಾದರು. ಅವರ ಹವ್ಯಾಸಗಳನ್ನು ಆನ್ಡ್ರಾಯ್ಡ ಫೋನಿನಲ್ಲಿ ಫೇಸ್ಬುಕ್ ಮುಖಾಂತರ ತಿಳಿದುಕೊಂಡೆ. ನಾನೂ ಏನಾದರೂ ಹೀಗೆಯೇ ಗೀಚಿ ನೋಡೋಣವೆಂದು ನನ್ನ ಮೊದಲ ಕವನ ‘ಹಳ್ಳಿಯ ಸೊಗಡು ‘ ಬರೆದು ಫೇಸ್ಬುಕ್ ಗೆ ಹಾಕಿದೆ. ಸಾಕಷ್ಟು ಜನರ ಕಾಮೆಂಟ್ಸ್ ನೋಡಿ ಮತ್ತಷ್ಟು ಖುಷಿಯಾಯಿತು. ತದನಂತರ ವಾಟ್ಸಾಪ್ನಲ್ಲಿ ಮತ್ತು ಫೇಸ್ಬುಕ್ ನಲ್ಲಿ ಸಾಹಿತ್ಯದ ಚಟುವಟಿಕೆಯ, ಸಂಗೀತದ ಹಾಡುಗಳ ಗುಂಪುಗಳಲ್ಲಿ ಸದಸ್ಯಳಾಗಿ ನಾನೂ ಬರೆಯಲು ಹಾಡಲು ಪ್ರಾರಂಭಿಸಿದೆ. ನನಗೆ ಸಂಗೀತದ ಗೀಳು ಕೂಡಾ ಇದೆ. ಒಳ್ಳೆಯ ಮ್ಯುಜಿಕ್. ಕೊಳಲು ವಾದನ, ಹಳೇಯ ಹಿಂದಿ, ಕನ್ನಡ, ಮರಾಠಿ, ಹಾಡುಗಳನ್ನು ಮತ್ತು ಭಕ್ತಿಗೀತೆಗಳನ್ನು ಕೇಳುವ ಹವ್ಯಾಸವಿದೆ. ಭಾವಗೀತೆಗಳು ಇಷ್ಟ , ಇವೆಲ್ಲವುಗಳ ಸಂಗ್ರಹ ಮೊಬೈಲಿನಲ್ಲಿ ಮಾಡಿಕೊಂಡು ಆಗಾಗ ಕೇಳ್ತಾ ಇರ್ತೆನೆ. ಇದರಿಂದ ನಮ್ಮ ಬದುಕಿನ ಬ್ಯಾಟರಿ ರಿಚಾರ್ಜ್ ಆಗುತ್ತದೆ.  ನನ್ನ ಕವನ ‘ಹಳ್ಳಿಯ ಸೊಗಡು’ ಸ್ಪರ್ದೆಗೂ ಕಳುಹಿಸಿದೆ. ಆಗ ನಾನು ಎರಡೆರಡು ಸಾಹಿತ್ಯಿಕ ಗುಂಪುಗಳ ಸದಸ್ಯಳಾಗಿದ್ದೆ ಒಂದು ಸಾಹಿತ್ಯ ಸುಧೆ ಮತ್ತೊಂದು ಕನ್ನಡ ಕಥಾ ಗುಚ್ಛ. ಸಾಹಿತ್ಯ ಸುಧೆಯಲ್ಲಿ ನನ್ನ ಕವನ ಕಳುಹಿಸಿದಾಗ ಎಲ್ಲರೂ ಮೆಚ್ಚುಗೆ ಸೂಚಿಸಿದರು. ಆದರೆ ನನ್ನಲಿ ಯಾವುದೇ ಮರು ಅಪೇಕ್ಷೆಗಳು ಇದ್ದಿತ್ತಿಲ್ಲ. ನಾನು ಬೆಳೆಯುವ ಸಣ್ಣ ಕುಡಿ. ಒಟ್ಟಾರೆ ನಾನು ನನ್ನ ಹವ್ಯಾಸಗಳನ್ನು ಈ ಆನ್ಡ್ರಾಯ್ದ ಫೋನ್ ಮೂಲಕ, ಅದರ ಸಹಾಯದಿಂದ ಬೆಳೆಸಿಕೊಳ್ಳಬೇಕೆಂಬ ಉತ್ಸಾಹ  ವ್ಯಾಕುಲತೆ ನನ್ನಲ್ಲಿ ಚಿಗುರಿತ್ತು. ‘ಕೈಯಾಗ ಕ್ಯಾಮೆರಾ ಹಿಡಿದಾಕಿ’ ಎರಡನೆ ಕವನ ಬರೆದು ಕನ್ನಡ ಕಥಾ ಗುಚ್ಛ ಗೆ ಕಳಿಸಿದಾಗ ಇನ್ನೊಬ್ಬರ ಕವನಗಳನ್ನು ಓದಿ ನನ್ನ ಮತ್ತು ಅವರ ಬರೆಯುವ ವಿಧಾನವನ್ನು ಪರಿಕ್ಷಿಸಿದೆ. ನಾನು ನನ್ನ ಬರಹದಲ್ಲಿ ಇನ್ನೂ ಬದಲಾವಣೆಗಳನ್ನು ತಂದುಕೊಳ್ಳಬೇಕೆಂಬ ಮನವರಿಕೆಯಾಯಿತು. ಮೋಬೈಲ್ ನಲ್ಲಿ ಪ್ರತಿದಿನ ಬರುವ ಕಥೆ ಕವನಗಳನ್ನು ಓದಲು ಪ್ರಾರಂಭಿಸಿದೆ. ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಯುತ್ತಾ ಹೋಯಿತು. ಸ್ಪರ್ಧೆಯಲ್ಲಿ ಮೊಟ್ಟಮೊದಲು ತೃತೀಯ ಸ್ಥಾನ ಲಭಿಸಿದ್ದಕ್ಕೆ ಎಲ್ಲಿಲ್ಲದ ಸಂತಸ. ಮನೆಯವರಿಗೆಲ್ಲ ಹೇಳಿದ್ದೆ ಹೇಳಿದ್ದು. ಏನಿದ್ದರು ಏನೋ ಒಂದು ಸಾಧಿಸಿಬಿಟ್ಟೆ ಎಂಬ ಹುಚ್ಚು ಹುಮ್ಮಸ್ಸು. ನನ್ನ ಸ್ನೇಹಿತೆಯರ ಜೊತೆ ಕನ್ನಡ ಸಾಹಿತ್ಯದ ಸಂಘ ಸಂಸ್ಥೆಗಳಲ್ಲಿ ನನ್ನ ಪಾದ ಸ್ಪರ್ಶವಾಯಿತು. ಅಲ್ಲಿ ಕೆಲವರ ಮಾತುಗಳು ಕೇಳಿ ನಾನೂ ಇನ್ನೂ ಸಾಕಷ್ಟು ಓದಬೇಕು ಇದರಲ್ಲಿಯೇ ಬೆಳೆಯಬೇಕು ಎಂದು ನಿರ್ಧರಿಸಿ ಯೂಟ್ಯೂಬ್ ಮುಖಾಂತರ ವಿಷಯಗಳ ಆಳವನ್ನು ಅರಿಯಲು ನಿರ್ಧರಿಸಿದೆ. ನಿಜವಾಗಿಯೂ ಆನ್ಡ್ರಾಯಿಡ್ ಫೋನ್ ಎಷ್ಟು ಸಹಕಾರಿಯಾಗಿದೆ. ಒಂದಲ್ಲ ಎರಡಲ್ಲ ಇದರ ಮೂಲಕ ಸಾಕಷ್ಟು ವಿಷಯಗಳ ಕಲೆಹಾಕಲು ಪ್ರಾರಂಬಿಸಿದೆ. ಅಧ್ಯಯನ ಕೂಡ ಅಷ್ಟೇ ಮಹತ್ವದ್ದಾದ ಕಾರಣ ಫೋನಿನಲ್ಲಿ ನನ್ನದೆ ಒಂದು ಫೋಲ್ಡರ್ ತೆರೆದು ನಾನು ಬರೆದ ಕವನ, ಕಥೆ, ಚುಟುಕು, ಹನಿಗವನ, ಟಂಕಾ, ರುಬಾಯಿ, ಪ್ರಬಂಧ ಮುಂತಾದ  ಲೇಖನಗಳನ್ನು ಒಂದು ಕಡೆ ಶೇಖರಿಸಲು ಪ್ರಾರಂಭಿಸಿದೆ. ಆತ್ಮಿಯರಲ್ಲಿ  ನನ್ನ ಬರಹಗಳನ್ನು ಮೊಬೈಲ್ ಮೂಲಕ ಹಂಚಿಕೊಳ್ಳಲು ಪ್ರಾರಂಭಿಸಿದೆ. ಕೆಲವರು ನನ್ನ ಬರವಣಿಗೆಗೆ ಪ್ರೋತ್ಸಾಹ ನೀಡುವುದಲ್ಲದೆ ಅವರ ಅಭಿಪ್ರಾಯವನ್ನು ನನಗೆ ಮತ್ತಷ್ಟು ಬೆಳೆಯಲು ಹುರಿದುಂಬಿಸಿದಂತಾಯಿತು.
ಯಾವ ಯಾವ ಆಪ್ ಗಳಲ್ಲಿ ಯಾವುದನ್ನು ಕಲಿಯಲು ಸಾಧ್ಯವಾಗುವುದೆಂದು ಅರಿತುಕೊಂಡು ಕೆಲವೊಂದು ಆಪ್ ಡೌನಲೋಡ ಮಾಡಿಕೊಂಡು ಸೇವ್ ಮಾಡಿಕೊಂಡೆ. ದಿನಬೆಳಗಾದರೆ ಇಂದೆನು ಹೊಸದಾಗಿ ಬಂದಿದೆ ಎಂದು ಪರಿಕ್ಷಿಸಿ, ನನಗೆ ಸಾಧ್ಯವಾದಷ್ಟು ನಾನು ನನ್ನ ಅನಿಸಿಕೆ, ಅಭಿರುಚಿ ಹಂಚಿಕೊಳ್ಳಲು ಪ್ರಾರಂಭಿಸಿದೆ. ಆನ್ಡ್ರಾಯ್ಡ ಫೋನ ಪ್ರಪಂಚದ ಮೂಲೆ ಮೂಲೆಗಳಿಂದ  ಕಂಡುಬರುವ ಆಗುಹೋಗುಗಳ, ಸಮಯ ಸಂದರ್ಭಗಳ, ಜಾಡನ್ನು ಕಂಡಾಗ ಅಬ್ಬಾ ಹೀಗೂ ಇರಬಹುದಾ? ಎನ್ನುವ ಪ್ರಶ್ನೆ ಮನದೊಳಗೆ ಮೂಡಿತು. ಬಾಹ್ಯ ಪ್ರಪಂಚದ ಇಡೀ ಚಿತ್ರಣಗಳನ್ನು ಫೋನಿನಿಂದ ನೋಡಿ ಅರಿಯಬಹುದು ಎಂದು  ತಿಳಿದುಕೊಂಡೆ. ಇದೆಲ್ಲವುದರೊಳಗೆ ಸಮಯ ಹೇಗೆ ಕಳಚಿ ಹೊಗುತ್ತಿದೆ ಎಂಬುದು ಗೊತ್ತಾಗುತ್ತಲೆ ಇರಲಿಲ್ಲ. ಕರೋನಾ ಸಮಯದಲ್ಲಿ ಎಲ್ಲಿಯೂ ಹೊರಗೆ ಹೋಗಲಾಗದೆ ಈ ಆನ್ಡ್ರಾಯ್ದ ಫೋನದಿಂದ ಒಳ್ಳೆಯ ವಿಷಯಗಳು ಸಂಗ್ರಹಣೆ ಮಾಡಿಕೊಂಡೆ. ಅಂದರೆ ಯೂಟ್ಯೂಬ್ ಗೂಗಲ್ ದಿಂದ ಮನಸ್ಸಿಗೆ ಮುದ ನೀಡುವ, ಸಂತಸಹಂಚುವ, ನಮಗೆ ಒಂದು ರೀತಿಯಲ್ಲಿ ಸಮಾಧಾನ ಶಾಂತ ಚಿತ್ತದಿಂದ ಬದುಕುವ ಮಾರ್ಗಸೂಚಿ ಕಂಡುಕೊಳ್ಳುವದನ್ನೆಲ್ಲ ಆರಿಸಿಕೊಂಡೆ. ಗೂಗಲ್ ಮಿಟಿಂಗನಿಂದ ನಾನು ಎಂದು ಅರಿಯದ ವಿಷಯಗಳು ಐತಿಹಾಸಿಕ , ಪೌರಾಣಿಕ, ಸಾಹಿತ್ಯಿಕದ ಬಗ್ಗೆ ಚರ್ಚೆ ಕೂಟದಲ್ಲಿ ಭಾಗಿಯಾಗಿ ಸಾಕಷ್ಟು ಸಂಗತಿಗಳನ್ನು ತಿಳಿದುಕೊಂಡೆ. ಇದರಿಂದ ನನ್ನ ಅಧ್ಯಯನ, ಬರವಣಿಗೆಯ ಮೇಲೆ ಬಹಳ ಪ್ರಭಾವ ಬೀರಿತು. ಎಲ್ಲೋ ಅವುಚಿ ಕುಳಿತಂತಹ ವಿಷಯಗಳ ಬಗ್ಗೆ ಅಧ್ಯಯನಮಾಡಲು ಈ ಫೋನ್ ಬಹಳ ಸಹಕಾರಿಯಾಯಿತು. ಅಷ್ಟೇ ಅಲ್ಲ ನನ್ನ ಬರವಣಿಗೆಗೆ ಸ್ಪೂರ್ತಿಯೂ ತುಂಬಿತು ಅನ್ನಬೇಕು. ಭಿನ್ನ ವಿಭಿನ್ನ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. ಅದರಲ್ಲಿ ವಿಜಯಳಾಗಿ ಹಿಂದೆ ನೋಡದೆ ಮುಂದೆ ಸಾಗುತ್ತಲೆ, ನಾನು ಒಬ್ಬ ಕವಿಯಿತ್ರಿಯಾಗಿ, ಲೇಖಕಿಯಾಗಿ ಕಥೆ, ಕವನ , ಲೇಖನ, ಪ್ರಬಂದಗಳನ್ನು ಬರೆದು ಎಲ್ಲರೂ ಜೊತೆಗೆ ಹಂಚಿಕೊಂಡೆ. ಆನ್ಡ್ರಾಯ್ಡ ಫೋನ ನನ್ನ ಬದುಕಿನ ಚಿತ್ರಣವನ್ನೇ ಬದಲಿಸಿತು. ಮೊಬೈಲ್ ಬಳಕೆಯಿಂದ ನನ್ನ ಹವ್ಯಾಸಗಳಿಗೆ ಒಂದು ಗುರಿ ಸಿಕ್ಕಂತಾಯಿತು.

ನನಗೆ ಮೊದಲಿನಿಂದಲೂ ಕನ್ನಡ ಸಾಹಿತ್ಯದಲ್ಲಿ  ಬಹಳ ಆಸಕ್ತಿ . ನಿಜ ಹೇಳಬೇಕೆಂದರೆ ಶಾಲೆ ಕಲಿಯುವಾಗ ಇಷ್ಟೊಂದು ವಿಷಯ ತಿಳಿಯುವ ಅರಿಯುವ ಗೋಜಿಗೆ ಹೋಗುತ್ತಿರಲಿಲ್ಲ. ಆಗ ಆಟ ಮನೆಗೆಲಸದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದೆ.


ಈವಾಗ ಅರವತ್ತು ವರ್ಷ ನಾನು ದಾಟಿದ ಮೇಲೆ ಮೊಬೈಲ ಬಳಕೆಯಿಂದಾಗಿ ಹೆಚ್ಚು ಹೆಚ್ಚು ಕಲಿಯುವ ಹುಚ್ಚು ಮನೆಮಾಡಿತ್ತು. ಎಷ್ಟೊಂದು ಸಮಯ ನನ್ನ ಕೈಯಿಂದ ವ್ಯರ್ಥವಾಗಿ ಜಾರಿಹೊಯಿತಲ್ಲ. ಇನ್ನು ಹಾಗಾಗಬಾರದು ಎಂದು ನನ್ನ ದಿನಚರಿಯಲ್ಲಿ ನನ್ನಷ್ಟಕ್ಕೆ ನಾನೇ ಸಮಯದ ಉಳಿತಾಯ ಮಾಡಿಕೊಂಡು ಗಾರ್ಡನಿಂಗ್,  ಟೇಲರಿಂಗ್, ಹೊಸ ಹೊಸ ತಿಂಡಿಗಳು, ಕಲಿಯಲು ಮೊಬೈಲ್ ಮೂಲಕ ಪ್ರಾರಂಬಿಸಿದೆ. ಸಂಸಾರದಲ್ಲಿ ಬಳಸುವ ವಸ್ತುಗಳು ಹಳೆಯದಾದ ಮೇಲೆ ಬಿಸಾಡದೆ ಬೇರೆ ರೀತಿಯಲ್ಲಿ ಮರು ಬಳಕೆ ಹೇಗೆ ಮಾಡಿಕೊಳ್ಳುವುದೆಂಬುದು ಮೊಬೈಲ್ ಮುಖಾಂತರ ಕಲಿತು ಕಾರ್ಯರೂಪಕ್ಕೆ ತಂದುಕೊಂಡೆ. ನಾವು ಎಷ್ಟು ಆಲಸ್ಸಿಗಳಾಗಿದ್ದೆವೆ, ಮತ್ತು ಎಷ್ಟು ವಸ್ತು, ಪದಾರ್ಥಗಳನ್ನು ವೇಸ್ಟ ಮಾಡ್ತಾಯಿದ್ದೆವೆ. ಹಾಳು ಹರಟೆ, ಬರೀ ಧಾರಾವಾಹಿ ನೋಡುವುದಕ್ಕಿಂತ ಬದುಕನ್ನು ಎಷ್ಟು ಸುಂದರವಾಗಿ ರೂಪಿಸಿಕೊಳ್ಳಬಹುದು ಎಂಬುದು ನನಗೆ ಕಲಿಸಿದ್ದು ನನ್ನ ಆನ್ಡ್ರಾಯ್ದ ಫೋನ. ನಮ್ಮ ಆರೋಗ್ಯದಲ್ಲಿ ಸಂಪೂರ್ಣ ಶರೀರ, ಶಾಂತಿ ನೆಮ್ಮದಿ ಸಂತಸ ಕೂಡ  ನಾವೇ ಗಳಿಸಿಕೊಳ್ಳಲು ಅದು ನನಗೆ ಮೊಬೈಲ್ ದಿಂದ ಸಾಧ್ಯವಾಯಿತು.  ಒಳ್ಳೆಯ ಸ್ನೇಹಿತರ ಪರಿಚಯವಾಗಿ ಒಬ್ಬರಿಗೊಬ್ಬರು ಮಾರ್ಗದರ್ಶಿಗಳಾಗಲು , ನಮ್ಮ ಮನದ ದುಗುಡ ಅಳಿಸಿ ಹೊಸ ಮನುಷ್ಯನನ್ನಾಗಿ ಮಾಡಲು ನನ್ನ ಮೊಬೈಲ್ ಬಹಳ ಸಹಾಯಕಾರಿ ಆಗಿದೆ. ನಿಜವಾಗಿಯೂ ನಾನು ವ್ಯರ್ಥ ಸಮಯ ಕಳೆಯಲು ಸಾಧ್ಯವೇ ಇಲ್ಲ. ಅದನ್ನು ಕಲಿಸಿದ್ದು ನನ್ನ ಮೊಬೈಲ್. ಜಗತ್ತು ಬಹಳ ದೊಡ್ಡದಾಗಿದೆ ನಮಗೆ ಏನು ಬೇಕು ಅದನ್ನು ಆಯ್ದುಕೊಳ್ಳುವ  ಮನಸ್ಸು ನಮ್ಮಲ್ಲಿದ್ದಾರೆ ನಾವು ನಮ್ಮ ಬದುಕಿನಲ್ಲಿ ಯಾವಾಗಲೂ ವಿಜಯಶಾಲಿಗಳು.

ನನ್ನ ಲೇಖನಗಳನ್ನು ವಾರಪತ್ರಿಕೆ, ಮಾಸಪತ್ರಿಕೆ, ದಿನಪತ್ರಿಕೆಗೆ ಕಳುಹಿಸಲು ಮೊಬೈಲಿನಲ್ಲಿ ಸಂಪಾದಕರು ಫೋನ್ ನಂಬರ್ ಹುಡುಕಾಡಿದೆ. ಅಷ್ಟರಲ್ಲಿ ಒಂದು ದಿನ ನಾನು ಬರೆದ ಮಕ್ಕಳ ಕವನ ರಾಯಚೂರು ದಿನಪತ್ರಿಕೆಯಲ್ಲಿ ಪ್ರಕಟವಾದದನ್ನು ಓದಿ ಸಂತಸಗೊಂಡೆ. ನನ್ನ ಆತ್ಮಿಯರೂ ಪತ್ರಿಕೆಗಳಿಗೆ ಕಳುಹಿಸಲು ಒತ್ತಾಯಿಸಿದರು. ನಿಜವಾಗಿಯೂ ನನಗೆ ಆನ್ಡ್ರಾಯಿಡ್ ಫೋನ್ ಒಬ್ಬ ಸ್ನೇಹಿತೆಯಂತೆ ಹುಡುಕುವ ವಿಷಯಗಳಿಗೆ ಸಹಾಯ ನೀಡಿದೆ. ಪತ್ರಕರ್ತರ ಫೋನ್ ನಂಬರ್ ಕೂಡ ಮೊಬೈಲಿನಲ್ಲಿ ದೊರೆತವು. ಸಾಕಷ್ಟು ದಿನ ಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ , ಮ್ಯಾಗಝಿನ್ ಗಳಲ್ಲಿ ಹಲವಾರು ಸಾಹಿತಿಗಳು ತಮ್ಮ ಪುಸ್ತಕ ಪ್ರಕಟಣೆಯಲ್ಲಿ ನನ್ನ ಕವನ, ಕಥೆ, ಪ್ರಬಂಧ, ಲೇಖನಗಳನ್ನು ಕೇಳಿ ತೆಗೆದುಕೊಂಡು ಪ್ರಕಟಿಸಿದ್ದಾರೆ. ನಾನು ಸಾಮಾನ್ಯ ಮನುಷ್ಯಳು. ಅದರಲ್ಲಿ ನನ್ನ ಮದುವೆಯಾದ ನಂತರ ಬದುಕಿನ  ೩೦ ವರ್ಷಗಳು ಬರೀ ಮನೆಯ ಕೆಲಸದಲ್ಲಿಯೇ ಕಳೆದಿವೆ. ಯಾವಾಗ ನನ್ನೆದೆ ಆದ ಆನ್ಡ್ರಾಯ್ದ ಫೋನ್ ನನಗೆ ಲಭಿಸಿತೋ, ನನ್ನ ಬದುಕು ನನ್ನ ಮನಸ್ಸಿನ ಆಸೆಯ ಗೋಪುರಗಳು ಬಿಚ್ಚಿಡಲು ಅವಕಾಶ ದೊರೆಯಿತು. ನನ್ನ ಯಜಮಾನರ ಸಹಕಾರ, ಮಕ್ಕಳ ಸಹಾಯದಿಂದ ಮೊಬೈಲ್ ಅನ್ನುವುದು ನನ್ನ ಕೈಯಲ್ಲಿ ಒಂದು ಗೊಂಬೆಯಂತಾಯಿತು.  ಬರಬರುತ್ತಾ ನನಗೆ ಶರಣ ಸಾಹಿತ್ಯದಲ್ಲಿ ಆಸಕ್ತಿ ಹೆಚ್ಚಾಯಿತು. ನಾವು ಕಲಿಯುವಾಗ ಶರಣ ಸಾಹಿತ್ಯದ ಆಳದ ಬಗ್ಗೆ ನಮಗೆ ಕಲಿಯಲು ಆಗಲಿಲ್ಲ. ಯಾವುದೇ ಗುರುಗಳು ಅದರ ಬಗ್ಗೆ ಅಷ್ಟಕಷ್ಟೇ ತಿಳಿಹೇಳಿದ್ದರು. ನಾನು ನನ್ನ ಮೊಬೈಲಿನಲ್ಲಿ ಈ ವಿಷಯಗಳ ಬಗ್ಗೆ ಹುಡುಕಾಟ ನಡೆಸಿದೆ. ಕೆಲವು ಗೂಗಲ್ ಮೀಟನಲ್ಲಿ ಭಾಗಿಯಾಗಿದೆ. ಶರಣ ಸಾಹಿತ್ಯದ ಬಗ್ಗೆ ಸಾಕಷ್ಟು ತಿಳಿದುಕೊಂಡೆ ಆದರೂ ಇನ್ನೂ ಏನಾದರೂ ಶರಣರ ಬಗ್ಗೆ ಸಿಗಬಹುದೆಂಬ ಹುಡುಕಾಟ ಮೊಬೈಲ್ ನಲ್ಲಿ ಪ್ರಾರಂಬಿಸಿದೆ. ಹಲವು ಪ್ರಾಧ್ಯಾಪಕರ ಶರಣ ಸಾಹಿತ್ಯ ವಿಷಯದ ಕುರಿತು ವಿಶೇಷ ಉಪನ್ಯಾಸಗಳನ್ನು ಕೇಳಿದೆ, ರೆಕಾರ್ಡಿಂಗ್ ಮಾಡಿಕೊಂಡೆ. ನಿಜವಾಗಿಯೂ ಶರಣರ ಜೀವನ, ಅವರ ವಚನಗಳ ಅಧ್ಯಯನ ಮಾಡಿದಾಗ ಏನೋ ಮನಸ್ಸು ಪ್ರಶಾಂತತೆಯಿಂದ  ಅವರ ದಾರಿ ನಾವು ಎಷ್ಟರ ಮಟ್ಟಿಗೆ ತುಳಿಯಲು ಸಾಧ್ಯ ಅನ್ನಿಸಿತು. ಅದು ಈ ಆಧುನಿಕ ಬದುಕಿಗೆ ಬಹಳ ಅತ್ಯವಶ್ಯಕವಾಗಿದೆ ಎಂದು ಮನವರಿಕೆಯಾಯಿತು. ಸಾಧ್ಯವಾದಷ್ಟು ನನ್ನಲ್ಲಿಯೇ ಹಳೇಯ ಆಚಾರ ವಿಚಾರಗಳಿಗೆ ಪೂರ್ಣವಿರಾಮ ನೀಡಿ ನನ್ನದೆ  ಹೊಸ ಬದುಕನ್ನುಕಂಡುಕೊಂಡು ಪ್ರಾರಂಭಿಸಿದೆ. ನೋಡುವ, ಕೇಳುವ, ಮಾತಾಡುವ ದೃಷ್ಟಿಕೋನ ಬದಲಾಯಿಸಿಕೊಂಡೆ. ನಿಜ ಹೇಳಬೇಕೆಂದರೆ ಆನ್ಡ್ರಾಯ್ದ ಮೊಬೈಲ್ ನನಗೆ ಹೊಸ ಬದುಕಿಗೆ ಕರೆದೊಯ್ದಿದೆ.

ನಾನು ನನ್ನ ಒಳ್ಳೆಯ ಹವ್ಯಾಸಗಳಿಂದ ಒಳ್ಳೆಯ ಸ್ನೇಹಿತರು, ಸ್ನೇಹಿತೆಯರು, ಶುಭಚಿಂತಕರು, ಹಿತೈಷಿಗಳ ಬಳಗವನ್ನೆ ಪಡೆದುಕೊಂಡಿದ್ದೇನೆ. ನನ್ನ ಬರಹಗಳ ಸಂಗ್ರಹದಿಂದ ಒಂದು ಕವನ ಸಂಕಲನ ಬಿಡುಗಡೆ ಮಾಡಿದ್ದೆನೆ. ಇದಕ್ಕೆ ಮೊದಲ ಸಹಕಾರ ನನ್ನ ಆನ್ಡ್ರಾಯ್ದ ಮೊಬೈಲ್ ಅನ್ನಬೇಕು. ನಂತರ ಸಧ್ಯದಲ್ಲೆ ಇನ್ನು ಎರಡು ಕವನ ಸಂಕಲನ ಬಿಡುಗಡೆ ಮಾಡುವವಳಿದ್ದೆನೆ. ಶರಣ ಸಾಹಿತ್ಯದ ಬಗ್ಗೆಯೂ ಸಂಗ್ರಹ ನಡೆದಿದೆ. ನನ್ನ ಸುತ್ತಮುತ್ತ ಕೂಡ ನನ್ನಂತೆ ಹವ್ಯಾಸವಿರುವ ಹವ್ಯಾಸಿಗಳನ್ನು ಬೆಳೆಸಿಕೊಂಡಿದ್ದೆನೆ. ನಡುನಡುವೆ ಮೊಬೈಲ್ ಬಳಕೆ ಸಾಕಷ್ಟು ಮಾಡಿದ್ದರಿಂದ ಊಟ ನಿದ್ದೆ ಸರಿಯಾಗದೆ ನನ್ನ ಶರೀರವು ಸ್ವಲ್ಪ ಕೈಕೊಟ್ಟಿತ್ತು. ಅಂದರೆ ಕೂತಲ್ಲೇ ಕುಳಿತು ಬರೆಯುವ, ಒದುವುದರಿಂದ ತೂಕ ಹೆಚ್ಚಾಗಿತ್ತು. ನಮ್ಮ ಮನೆಯವರಿಂದ ಬೇಯಿಸಿಕೊಂಡೆ. ತದನಂತರ ಗಾರ್ಡನಿಂಗ್ ದಲ್ಲಿಯೂ ಸಮಯ ಕಳೆಯಲು ಪ್ರಾರಂಭಿಸಿದೆ.  ಆನ್ಡ್ರಾಯ್ದ ಮೊಬೈಲ್ ಮೂಲಕ ಗಿಡಗಳನ್ನು ಬೆಳೆಸುವ ಪೊಸಿಸುವ ಮಾರ್ಗದ ಬಗ್ಗೆಯೂ ಅಧ್ಯಯನ ಮಾಡಿದೆ. ಮನೆಯಲ್ಲಿಯೇ ವಿಧ ವಿಧ ಗೊಬ್ಬರಗಳನ್ನು ತಯಾರಿಸುವ ವಿಧಾನವನ್ನು ಮೊಬೈಲ್ ದಿಂದ ಕಲಿತುಕೊಂಡೆ. ನಾನು ಅಪಾರ್ಟಮೆಂಟ್ ನಲ್ಲಿ ಇರುವ ಕಾರಣ ಚಿಕ್ಕ ಚೊಕ್ಕದಾದ ಹಸಿರಿನಿಂದ ಕಂಗೊಳಿಸುವ ಗಾರ್ಡನ್ ಮಾಡಿಕೊಂಡಿದ್ದೇನೆ. ಬಂದವರೆಲ್ಲ ಎಷ್ಟು ಸುಂದರವಾಗಿದೆ ಹೇಗೆ ನಿಭಾಯಿಸುತ್ತಿರುವಿರಿ ಅಂತ ಕೇಳ್ತಾರೆ. ಅದಕ್ಕೆ ನನ್ನ  ಸ್ನೇಹಿತೆ ಆನ್ಡ್ರಾಯ್ದ ಮೊಬೈಲ್ ಮೂಲಕ ಅಂತ ಹೇಳ್ತಿನಿ. ಕೆಲವು ಸ್ಪರ್ಧೆಗಳಿಗೆ ನಿರ್ಣಾಯಕಳಾಗಿಯೂ ಕಾರ್ಯವಹಿಸುತ್ತಿದ್ದೆನೆ.  ಹಾಸಿಗೆಯಿಂದ ಎದ್ದ ತಕ್ಷಣ ಒಂದರ ಹಿಂದೆ ಒಂದರಂತೆ ನನ್ನ ಕೆಲಸಗಳು ಮಲಗುವ ತನಕ ನಡೆದೇ ಇರುತ್ತವೆ. ನನಗೆ ನನ್ನ ಮನೆ ಕೂಡ ಅಷ್ಟೇ ಅಚ್ಚುಕಟ್ಟಾಗಿ ಇರಬೇಕು. ಇದಕ್ಕೂ ಮೊಬೈಲ್ ಬಳಕೆಯಿಂದ ನನ್ನ ಮನೆ ಮತ್ತು ಮನ ಶಾಂತಿ ನೆಮ್ಮದಿ ಸಂತಸದ ವಾತಾವರಣದಿಂದ ಇಟ್ಟುಕೊಂಡಿದ್ದೇನೆ. ನಮ್ಮ ದೇಶದ ಮೂಲೆ ಮೂಲೆಯ ವಿಷಯಗಳು ತಿಳಿದುಕೊಳ್ಳುವ ಹವ್ಯಾಸ ನನ್ನ ಮೊಮ್ಮಗನಿಗೆ ಬೆಳೆದಿದೆ. ಅವನು ಮಾಡುವ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಹುಡುಕಾಟವನ್ನು ಮೊಬೈಲನಲ್ಲಿ ಪ್ರಾರಂಭಿಸಿ ಸರಿಯಾದ ಉತ್ತರಗಳನ್ನು ಹೇಳುತ್ತೆನೆ.  ಆತನಲ್ಲಿಯೂ ಶೋಧನೆ ಏನಾದರೂ ಶೋಧನೆ ಮಾಡುವ ತಿಳಿದುಕೊಳ್ಳುವ ಆಸಕ್ತಿ ಹೆಚ್ಚು ಇರುವುದರಿಂದ ನಮ್ಮಿಬ್ಬರ ಆಸಕ್ತಿ ಅರಳಿಸಲು ಮೊಬೈಲ್ ಸಹಾಯ ಮಾಡುತ್ತದೆ. ಈ ಆಧುನಿಕ ಜೀವನಕ್ಕೆ ನಿಜವಾಗಿಯೂ  ಮೊಬೈಲ್ ಬಹಳ ಸಹಕಾರಿಯಾಗಿದೆ. ಆದರೆ ಸರಿಯಾಗಿ ಹಿತಮಿತವಾಗಿ ಒಳ್ಳೆಯ ವಿಷಯಗಳಿಗಾಗಿ ಉಪಯೋಗಿಸಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ.


ಸುಲೋಚನಾ ಮಾಲಿಪಾಟೀಲ 

Leave a Reply

Back To Top