ಕಾರ್ಮಿಕ ದಿನದ ವಿಶೇಷ-ಕಥೆ
ತಿಥಿ
ಟಿ. ಎಸ್. ಶ್ರವಣ ಕುಮಾರಿ.
ತಿಥಿ
“ನಾಗೂ… ಏ ನಾಗೂ… ಇದಿಯನೇ ಒಳಗೆ…” ಅಡುಗೆಮನೆಯನ್ನಿಸಿಕೊಂಡ ಆ ಮನೆಯ ಮೂಲೆಯಲ್ಲಿ ಹೊಗೆಯೊಂದಿಗೆ ಗುದ್ದಾಡುತ್ತಾ ಹುಳಿಗೆ ಹಾಕಲು ಹುಣಿಸೇಹಣ್ಣು ಕಿವುಚುತ್ತಾ ಕುಳಿತಿದ್ದ ನಾಗುವಿಗೆ ಸುಬ್ಬಣ್ಣನ ದನಿ ಕೇಳಿ ʻಯಾಕ್ ಬಂದ್ನೋ ಮಾರಾಯ ಈಗ, ಕೆಲಸಿಲ್ದೆ ಈ ದಿಕ್ಕಿಗ್ ಕೂಡಾ ತಲೆಯಿಟ್ಟು ಮಲಗೋನಲ್ಲʼ ಎಂದುಕೊಂಡೇ “ಇದೀನೋ ಇಲ್ಲೇ ಒಲೆಮುಂದೆ ಅಡುಗೆಮಾಡ್ತಾ” ಎಂದುತ್ತರಿಸಿದಳು. ಬಿಸಿಲಿನಿಂದ ಒಳಗೆ ಬಂದವನಿಗೆ ಅಡುಗೆಮನೆಯೆಂದು ಮಾಡಿದ್ದ ಅಡ್ಡಗೋಡೆಯ ಒಳಗಿನ ಕತ್ತಲೆ, ಹೊಗೆಯ ಮಧ್ಯೆ ʻನಾನೂ ಇದೀನಿʼ ಎನ್ನುವಂತೆ ಸಣ್ಣಗೆ ಉರಿಯುತ್ತಿದ್ದ ಬೆಂಕಿಯ ಬೆಳಕಲ್ಲಿ ಅಸ್ಪಷ್ಟವಾಗಿ ಅವಳ ಆಕೃತಿ ಕಂಡಿತು. “ಈ ಹೊಗೇಲಿ ಅದೆಂಗಾರ ಇದಿಯೇ ಮಾರಾಯ್ತಿ, ನಿನ್ ಮಖ್ವೇ ಸಮಾ ಕಾಣಲ್ವಲ್ಲೇ” ಎಂದ ಕೆಮ್ಮುತ್ತಾ. “ಕಾಣ್ದಿದ್ರೆ ಬಿಡತ್ಲಾಗೆ, ಮಾತಾಡ್ತಿರದು ಕೇಳ್ತಿದ್ಯಲ್ಲ, ಏನು ಸವಾರಿ ಈ ಕಡೆ” ಎಂದಳು. ಇಷ್ಟು ಹೊತ್ತಿಗೆ ಆ ಕತ್ತಲಿಗೆ ಸ್ವಲ್ಪ ಕಣ್ಣನ್ನು ಹೊಂದಿಸಿಕೊಂಡಿದ್ದವನು ಅಲ್ಲೇ ಎದುರಿನ ಗೋಡೆಗೊರಗಿ ಕೂತು “ಇವತ್ತು ಸೋಮಾರ ಅಲ್ವನೇ, ನಾಳೆ ಬರಾ ಶುಕ್ರಾರ ಅಜ್ಜಿ ಬರ್ತಳೆ. ಈ ಸಲ ʻಮೇ ಡೇʼ ರಜಾದಿನ್ವೇ ಬಂದಿದೆ ನೋಡು. ಕರ್ದೋರೆಲ್ರೂ ಬರ್ತರೆ. ದೊಡ್ಡೋರೆ ಒಂದು ಮೂವತ್ತು ಜನ್ರ ಮೇಲೇ ಆಗ್ತರಪ್ಪ. ಅಮ್ಮಂಗೆ ಒಬ್ಳಿಗೇ ಅಷ್ಟು ಅಡುಗೆ ಮಾಡಕ್ಕೆ ಕೈಲಾಗುಲ್ವಲ್ಲೆ. ಅದ್ಕೇ ನಾಗೂನ ಸಹಾಯಕ್ಕೆ ಬರ್ಬಕಂತೆ ಅಂತ ಹೇಳ್ಬಾ ಅಂದ್ಳು” ಅಂದ. ಅವನ ಕಡೆ ತಿರುಗಿ “ಈ ಶುಕ್ರಾರಾನಾ… ಅವತ್ತೇ ನಾರಣಪ್ಪನೋರ ಮನೇಲಿ ಮಗನ್ ಮದ್ವೆ ದೇವರ ಸಮಾರಾದ್ನೆ ಇಟ್ಕಂಡಿದರೆ. ಮದ್ವೆ ಮನೆ ಚಕ್ಲಿ, ಉಂಡೆ ಎಲ್ಲಾ ನಾನೇ ಮಾಡ್‌ಕೊಟ್ಟಿರದು. ನಿನ್ನೇಂದ ಶುರುಮಾಡ್ದೋಳು ಇವತ್ತು ಬೆಳಗ್ಗೆನೂ ಏಳುತ್ಲೇ ಹೋಗಿ ಕೆಲ್ಸ ಮುಗಿಸ್ಕೊಟ್ಟು ಬಂದು ಒಲೆ ಹಚ್ಚಿದೀನಿ. ತಪ್ದೇ ಅವತ್ತು ಸುತ್ತು ಕೆಲ್ಸಕ್ಕೆ ಜತಿಗೆ ಹೂವೀಳ್ಯಕ್ಕೂ ಬರ್ಬೇಕು ಅಂತ ಹೇಳಿಯಾರೆ. ನಾನೂ ಒಪ್ಕಂಡಿದಿನಿ. ತಿಥಿ ಅಡ್ಗೆಗೆ ನಂಗೆ ಬರಕ್ಕಾಗಲ್ಲ” ಅಂದು ಆರುತ್ತಿದ್ದ ಒಲೆಯನ್ನೊಮ್ಮೆ ಊದುಗೊಳವೆಯಿಂದ ಜೋರಾಗಿ ಊದಿದಳು. “ಹಂಗಂದ್ರೆ ಹ್ಯೆಂಗೇ? ವರ್ಷ್ವಷ್ವೂ ಮಾಘ ಶುದ್ಧ ಅಷ್ಟ್ಮಿ ದಿನ ಅಜ್ಜಿ ತಿಥಿ ಅನ್ನದು ನಿಂಗೊತ್ತಲ್ವನೆ. ಪ್ರತಿ ಸಲ್ವೂ ನಿಂಗೇ ಹೇಳುದು ನೀನೇ ಜತಿಗ್ ಬರದು. ಮರ್ತೇಂದ್ರೆ ಹ್ಯಂಗೆ?” ಮರೆತು, ಬೇರೆಯ ಕಡೆ ಒಪ್ಪಿಕೊಂಡದ್ದು ಅವಳದೇ ತಪ್ಪು ಅನ್ನೋ ಹಾಗೆ ಸುಬ್ಬಣ್ಣ ದಬಾಯಿಸಿದ. “ನಾನೊಬ್ಳೆನಾ ಇರದು ಅಜ್ಜಿಗೆ ಮೊಮ್ಮಗ್ಳೂಂತ, ಪ್ರತಿಸಲ್ವೂ ಬರ್ತಿರ್ಲಿಲ್ವ. ಈ ಸಲ ನಂಗಾಗಲ್ಲ. ಇನ್ಯಾರಾದ್ರೂ ಮಾಡ್ಲಿ” ಎಂದವಳೇ ಮತ್ತೆ ಆರುತ್ತಿದ್ದ ಒಲೆಯತ್ತ ತಿರುಗಿದಳು. “ನಂಗೊತ್ತಿಲ್ಲಪ್ಪ, ನೀ ಹೀಗಂದಿ ಅಂತ ಅಮ್ಮನ ಹತ್ರ ಹೇಳ್ತಿನಿ. ನೀನುಂಟು, ಅವ್ಳುಂಟು. ಹೇಳ್‌ಬಾ ಅಂದ್ಲು, ಹೇಳಿಯೀನಿ” ಎನ್ನುತ್ತಾ ಕೋಪಿಸಿಕೊಂಡು ಅಲ್ಲಿಂದ ಎದ್ದ. ʻಹೋದ್ರೆ ಹೋಗ್ತಾನೆ. ನಾನೊಬ್ಳು ಸಿಕ್ತೀನಿ ಇವ್ರಿಗೆ ಬಿಟ್ಟಿ ಚಾಕ್ರಿ ಮಾಡಿ ಸಾಯಕ್ಕೆ… ಹಾಳಾದ್ ಈ ಒಲೆ… ಹತ್ಕೊಂಡು ಅಡುಗೆಯಾದ್ರೆ ಸಾಕಾಗಿದೆ. ಮುಲ್ಲಾ ಕೂಗಿ ಎಷ್ಟೊತ್ತು ಆಗೋಯ್ತು. ಇನ್ನರ್ಧ ಗಂಟ್ಗೆ ಹಸ್ಕಂಡು ಬರಾ ಹೊತ್ಗೆ ಆಗಿಲ್ದಿದ್ರೆ ಒಂದು ರಾಮಾಣ್ಯವೇ ಆಗೋಗತ್ತೆ…ʼ ಅಂದುಕೊಂಡು ಮತ್ತೆ ಮತ್ತೆ ಊದಿ ಅಂತೂ ಒಲೆ ಉರಿಸುವುದರಲ್ಲಿ ಗೆದ್ದಳು.
ಗಂಡನ ಊಟವಾದ ಮೇಲೆ ತಾನೂ ಒಂದಷ್ಟು ಉಂಡು ಮಿಕ್ಕದ್ದನ್ನ ಸ್ಕೂಲಿಂದ ಬರುವ ಮಕ್ಕಳಿಗೆ ಮುಚ್ಚಿಟ್ಟು ಅಡುಗೆ ಮಾಡಿದ ಜಾಗವೆಲ್ಲಾ ಒರಸಿ ಉಸ್ಸಪ್ಪಾ ಅಂತ ಬಾಗಿಲೆದುರಿಗೆ ಕುಳಿತುಕೊಂಡಳು. ಎದುರಿನ ಹೊಂಗೆಮರದಿಂದ ಬೀಸುತ್ತಿದ್ದ ಗಾಳಿಗೆ ಜೀವವೆಲ್ಲಾ ಹಾಯೆನಿಸಿ ಬಾಗಿಲು ತೆರೆದಿದ್ದಂತೆಯೇ ʻಓಣಿ ಕೊನೇಮನೆ, ಯಾರ್ ಹಾಯ್ತಾರಿಲ್ಲಿʼ ಎನಿಸಿ ಚಾಪೆ ಬಿಡಿಸಿ ಉರುಳಿಕೊಂಡಳು. ಬೆಳಗ್ಗೆ ಎದ್ದಾಗಿಂದ ಒಲೆ ಮುಂದೆ ದಣಿದಿದ್ದು ಬೆನ್ನು ನೆಲಕ್ಕೆ ಹಾಕಬೇಕೆನಿಸಿತ್ತು. ʻಪ್ರತಿಸಲವೂ ಜಯತ್ತೆ ನನ್ನೇ ಯಾಕ್ ಕರಿಬೆಕು? ಕೃಷ್ಣವೇಣಿ, ಶಾರದಾ, ವಿಮಲಾ ಯಾರೂ ಅವ್ಳ ಕಣ್ಣಿಗ್ಯಾಕ್ ಕಾಣಲ್ಲ. ಅವ್ರನ್ನ ಕರ್ಯದು, ಅವ್ರೂ ಎಲ್ಲಾ ನನ್ನಂಗೆ ಮಾವನ್ ಅಕ್ತಂಗೀರ್ ಮಕ್ಳೇ ಅಲ್ವಾ ಅವರತ್ರ ಕೆಲಸ ತೆಗೆಯೋದು ನನ್ನ ಹತ್ರ ತೆಗೆದಷ್ಟು ಸುಲಭ್ವಾ. ಯಾರೂ ಜಯತ್ತೆ ಜೋರಿಗೆ ಸೊಪ್ಪು ಹಾಕಲ್ಲ, ನೀನೂಂದ್ರೆ ನಿಮ್ಮಪ್ಪ ಅಂತರೆ. ಅವ್ರೆಲ್ಲಾ ಮನೆಕಡೆ ಹಚ್ಚಗೆ, ಬೆಚ್ಚಗೆ ತಕ್ಮಟ್ಟಿಗೆ ಚೆನ್ನಾಗಿದರೆ, ಹಾಗಂದ್ರೆ ತಡಕಳತ್ತೆ. ಅದೇ ನಾನು ಎದುರು ಮಾತಾಡಿದ್ರೆ ಊರಲ್ಲೆಲ್ಲಾ ʻಎರ್ಡೊತ್ತು ನೆಟ್ಗೆ ಊಟ್ಕಿಲ್ದಿದ್ದೂ ಎಷ್ಟು ಸೊಕ್ಕುʼ ಅಂತ ಕತೆಕತೆಯಾಗಿ ಹೇಳ್ಕಂಡು ಬರ್ತಳೆ. ತಥ್, ಬಡ್ತನಾ ಅನ್ನೋದು ಬಾಯ್ನೂ ಹೊಲ್ದ್ಬಿಡತ್ತಲ್ಲ…ʼ ಅನ್ನಿಸಿ ಇರುಸುಮುರುಸಾಯ್ತು. ಪಕ್ಕಕ್ಕೆ ತಿರುಗಿಕೊಂಡಳು.
ʻಹಾಳಾಗ್ಲಿ ಆ ವಿಷ್ಯ, ಹೇಗೂ ಈ ಸಲ ಬರಲ್ಲʼ ಅಂತ ಹೇಳಾಯ್ತಲ್ಲಾ, ನಾಳೆ ತುಂಗಮ್ನೋರ ಮನೆ ಸಾರಿನ್ ಪುಡಿ, ಹುಳಿಪುಡಿ ಕೆಲ್ಸ ಇದೆ. ದುಡ್ಡಿನ್ ಜತಿಗೆ ಒಂದು ವಾರ ಹತ್ದಿನಕ್ಕಾಗಷ್ಟು ಪುಡೀನು ಕೊಡ್ತರೆ. ಬುದ್ವಾರ ಲಲಿತಮ್ನೋರಿಗೆ ದೋಸೆಹಿಟ್ಟು ರುಬ್ಬುಕೊಡಕ್ಕೆ ಬರ್ತಿನಿ ಅಂತ ಹೇಳಾಗಿದೆ. ಎರಡ್ಸೇರು ಅಕ್ಕಿ ನೆನ್ಸಿರೂ ಒಂದು ಹೊತ್ಗಾಗೋಷ್ಟು ಹಿಟ್ಟು ತಗಂಡೋಗೆ ಅಂತೇಳಿ ಮೇಲಿಷ್ಟು ದುಡ್ಡೂ ಕೈಗಾಕ್ತಾರೆ. ಗುರ್‌ವಾರ ಬೆಳಗ್ಗೇನೇ ನಾರಣಪ್ಪನೋರ ಮನೆಗೆ ಹೋಗಿ ಮಡೀಲಿ ಚಿಗಳಿ, ತಂಬಿಟ್ಟು ಮಾಡಿಟ್ಟು ಬಂದ್ಬಿಡ್ಬೇಕು. ಶುಕ್ರಾರ ಬೆಳಗ್ಗೆದ್ದು ಕೋಸಂಬ್ರಿ, ಪಾನಕ ಎಲ್ಲಾ ಮಾಡೋ ಹೊತ್ಗೆ ಸರೀ ಹೋಗತ್ತೆ. ಹತ್ತೂವರೆಗೆ ರಾಹುಕಾಲ ಬಂದ್ಬಿಡತ್ತೆ, ಬೇಗ್ನೇ ಶುರು ಮಾಡ್ಕಂಬಿಡಣ ಅಂದ್ರಲ್ಲ ಕಮಲಮ್ಮʼ ಅಂತ ಯೋಚನೆ ಬಂತು. ಕೆಲ್ಸಕ್ಕೆ ನಾನೇನು ಇಂತಿಷ್ಟೂ ಅಂತ ಹೇಳ್ದಿದ್ರೂ ಸೈತಾ ಅವ್ರ ಕೈ ಧಾರಾಳಾನೆ. ʻಹೂವೀಳ್ಯಕ್ಕೆ ಕೊಡಕ್ಕೇಂತ ಐದು ಜನ ಮುತ್ತೈದೇರಿಗೆ ಕಾಟನ್ ಸೀರೆ ತಂದಿದೀನಿ ಕಣೆ. ನಿಂಗೂ ಒಂದು ಕೊಡ್ತಿನಿ. ನೋಡಿಲ್ಲಿʼ ಅಂತ ತೋರ್ಸಿದ್ರು ಬೇರೆ. ಗಳದ ಮೇಲೊಂದು, ಮೈಮೇಲೊಂದು ಅನ್ನೋ ಹಾಗಾಗಿದೆ ನಂಗೀಗ. ಆ ಸೀರೆ ಬಂತೂಂದ್ರೆ ಹೊರಗೆಲ್ಲಾದ್ರೂ ಹೋಗೋವಾಗ ಉಡಕ್ಕಾಗತ್ತೆ. ಆಗದನ್ನ ಪೆಟ್ಗೆಲಿಟ್ಟು ಅಲ್ಲಿರೊ ಇನ್ನೊಂದೇ ಒಂದು ಸ್ವಲ್ಪ ಗಟ್ಟಿಯಾಗಿರೊ ಸೀರೇನ ಹೊರಗೆ ತೆಕ್ಕೋಬೋದುʼ ಅಂದುಕೊಳ್ತಾ ಮತ್ತೆ ಈ ಪಕ್ಕಕ್ಕೆ ತಿರುಗಿದಳು. ʻಜೊತೆಗೆ ಜಾನಕೀನೂ ಕರ್ಕಂಬಾ, ಕನ್ಯಾಮುತ್ತೈದೆಗೆ. ಅವ್ಳಿಗೂ ಎಲಡಿಕೆ ಕೊಡೋದು ಅನ್ಕಂಡಿದೀನಿ ಅಂದ್ರು. ಅವ್ಳ ಕೈಗೂ ಏನಾರ ಕೊಡ್ತರೆನೋ. ಕೊಟ್ಟೇ ಕೊಡ್ತರೆ. ಒಳ್ಳೇ ಊಟ್ವಂತೂ ಸಿಗತ್ತೆ.ʼ ಕಣ್ಣು ತೂಗುವ ಹಾಗಾಯ್ತು ʻಎದ್ದು ಬಾಗಿಲು ಮುಂದೂಡಲೇʼ ಅನ್ನಿಸಿದರೂ ʻಅಯ್ಯೋ ಕೊಳ್ಳೆ ಹೊಡ್ಕಂಡು ಹೋಗಕ್ಕೆ ಏನಿದೆ. ಸ್ವಲ್ಪ ಗಾಳಿಯಾದ್ರೂ ಆಡಲಿʼ ಅಂದುಕೊಂಡು ಮತ್ತೆ ಯೋಚನೆಯಲ್ಲಿ ಮುಳುಗಿರುವಂತೆಯೇ ಒಂದು ಜೋಂಪು ಹತ್ತಿತು…
“ಏನೇ ಬಾಗಿಲು ತೆಕ್ಕೊಂಡೇ ಮಲ್ಗಿದೀಯಲ್ಲೇ. ಯಾರಾದ್ರೂ ನುಗ್ಗಿದ್ರೇನು ಗತಿ” ಅಂತ ಕೇಳಿದ ತಕ್ಷಣ ಬೆಚ್ಚಿಬಿದ್ದು ಎದ್ದಳು. ಬಾಗಿಲಿಗಡ್ಡವಾಗಿ ಜಯತ್ತೆ ನಿಂತಿದ್ದಳು. ತಕ್ಷಣವೇ ಎದ್ದು, ಅದೇ ಚಾಪೆಯನ್ನು ಇನ್ನೊಂದು ಗೋಡೆಗೆ ಹಾಕಿ “ಕೂತ್ಕೋತ್ತೆ, ಮಕ ತೊಳ್ಕಂಡು ಬರ್ತಿನಿʼ ಎನ್ನುತ್ತಾ ಹಿತ್ತಿಲಿನ ಬಾಗಿಲಿನ ಪಕ್ಕದಲ್ಲಿದ್ದ ತಗಡಿನ ಮರೆಗೆ ಹೋಗಿ ಕೈಕಾಲು, ಮುಖ ತೊಳೆದುಕೊಂಡು ಬಂದು ಹೊಗೆಹಿಡಿದಿದ್ದ ಕನ್ನಡಿಯಲ್ಲಿ ಮಸಕುಮಸಕಾಗಿ ಕಂಡೂ ಕಾಣದಂತಿದ್ದ ಮುಖವನ್ನು ನೋಡಿಕೊಂಡು ಹಣೆಗಿಟ್ಟುಕೊಂಡು ಅವಳು ಬಂದಿದ್ದೇಕೆಂದು ತಿಳಿದಿದ್ದರೂ, “ಏನತ್ತೆ ಬಂದೆ, ಕೂತ್ಕಾ, ಒಂಚೂರು ಕಾಫಿ ಮಾಡ್ತಿನಿ” ಎನ್ನುತ್ತಾ ಅವಳೆಡೆಗೆ ತಿರುಗಿದಳು. “ಕಾಫೀನೂ ಬೇಡ, ಏನೂ ಬೇಡ, ನೀ ಬಾಯಿಲ್ಲಿ ಮದ್ಲು. ಇಲ್ಲಿ ಬಾ” ಅಂದಳು ಜಯಮ್ಮ ಜೋರಾದ ಅತ್ತೆ ಪಾಪದ ಸೊಸೆಗೆ ಹೇಳುವ ಜರ್ಬಿನಲ್ಲಿ. ಈ ಧಾಳಿಗೆ ಸಿದ್ದವಾಗಿಲ್ಲದ ನಾಗು ಬಂದು ಅಡುಗೆಮನೆಯ ಅಡ್ಡಗೋಡೆಗೆ ಒರಗಿ, ʻಈಗ ಅತ್ತೆ ಏನು ಗಿಲೀಟು ಮಾತು ಹೇಳಿದ್ರು ಸೈತ ಒಪ್ಕಬಾರ್ದುʼ ಅಂತ ನಿರ್ಧರಿಸಿಕೊಂಡವಳಂತೆ ಒರಗಿ ನಿಂತಳು.
“ಅಲ್ವೇ, ಬೆಳಗ್ಗೆ ಸುಬ್ಬಣ್ಣನ್ ಕೈಲಿ ಹೇಳ್ಕಳಿಸಿದ್ರೆ ಬರಕ್ಕಾಗುಲ್ಲಾ ಅಂದ್ಯಂತೆ. ನಿಮ್ಮಜ್ಜಿ ತಿಥೀನೇ… ತಿಳ್ಕ, ನಿಮ್ಮಮ್ಮನ ಹೆತ್ತವ್ಳಲ್ವಾ… ಸ್ವಲ್ಪ ಸಹಾಯಕ್ಕೆ ಬಾಂದ್ರೆ ಎಷ್ಟು ಜಂಭ ನಿಂದು. ಅಜ್ಜಿ ತಿಥೀಗಿಂತ ಯಾರ್ದೋ ಮನೆ ದೇವ್ರಸಮಾರಾದ್ನೆ ಹೆಚ್ಚಾಯ್ತ ನಿಂಗೆ. ನಾನೇ ಬೇಕಾರೆ ಅವ್ರ ಮನೇಗೆ ಹೇಳಿ ಕಳಿಸ್ತೀನಿ, ʻಹೀಗಿದೆ ನಿಂಗ್ ಬರಕ್ಕಾಗಲ್ಲʼ ಅಂತ. ಬೇಕಾರೆ ನಿನ್ ಬದ್ಲು ಶಾರೀನ ಮಗ್ಳನ್ ಕರ್ಕಂಡೋಗಕ್ಕೆ ವಪ್ಸಿ, ಕಮಲಮ್ಮಂಗೆ ಹೇಳ್ತಿನಿ. ಹಿಂದಿನ್ದಿನ ಹೋಗಿ ಕೆಲ್ಸ ಮಾಡ್ಕೊಟ್ಟು ಬಾ. ಆವತ್ತು ನಮ್ಮನಿಗೆ ತಪ್ಪಸ್ಬೇಡ. ಎಲ್ಲಿ ಮಡಿಸೀರೇಗೆ ಒಣಗ್‌ಹಾಕಕ್ಕೆ ನಿಂದೊಂದು ಸೀರೆ ಕೊಡು” ಜಬರ್ದಸ್ತಿಯಿಂದ ತಾನೇ ಎಲ್ಲಾ ತೀರ್ಮಾನವನ್ನೂ ಮಾಡಿಬಿಟ್ಟಳು ಜಯಮ್ಮ. “ಹಾಗಲ್ಲತ್ತೇ…” ಏನೋ ಹೇಳಲು ಹೋದ ನಾಗುವನ್ನು ಅಲ್ಲೇ ತಡೆದು “ಹಂಗೂ ಇಲ್ಲ, ಹಿಂಗೂ ಇಲ್ಲ ಮದ್ಲು ಮಡಿಗೆ ಹಾಕಕ್ಕೆ ನಿನ್ ಸೀರೆ ಕೊಡು ಅಷ್ಟೇಯ. ನೋಡು, ಪುರೋಹಿತ್ರು ನಮ್ಮನೇ ಕೆಲ್ಸ ಮುಗಿಸ್ಕಂಡು ಮೂರು ಗಂಟೆ ಬಸ್ಸಿಗೆ ತೀರ್ಥಳ್ಳಿಗೆ ಹೋಗ್ಬಕಂತೆ. ಅಡ್ಗೆ ತಡಾಗೋ ಹಾಂಗಿಲ್ಲ. ಅವತ್ತು ಅದೇನೋ ರಜ ಇದ್ಯಂತಲ್ಲ, ಜನ ಬೇರೆ ಜಾಸ್ತಿ, ಬೆಳಗ್ಗೆ ಆರು ಗಂಟ್ಗೇ ಬಂದ್ಬಿಡು. ಈಗ ಮದ್ಲು ಸೀರೆ ಕೊಡು” ಎನ್ನುತ್ತಾ ಅವಳು ಮಾತನಾಡಕ್ಕೆ ಅವಕಾಶವನ್ನೇ ಕೊಡದೆ ʻಇಕಾ ನಾನೆ ತಗಂಡೆʼ ಎನ್ನುತ್ತಾ ಪಕ್ಕದ ಗಳುವಿನ ಮೇಲಿದ್ದ ಸೀರೆ, ರವಿಕೆಯನ್ನು ಎಳೆದು ಸುತ್ತಿಕೊಂಡು ಹೊರಟೇಬಿಟ್ಟಳು ಜಯಮ್ಮ. ಬೆಪ್ಪಾಗಿ ನಿಂತುಬಿಟ್ಟಳು ನಾಗು
ʻಅದ್ಹೇಗೆ ನಂಗೆ ಮಾತಾಡಕ್ಕೂ ಬಿಡ್ದೆ ಅತ್ತೆ ಹೀಗ್ಮಾಡ್ಬಿಟ್ಳೂʼ ಅಂತ ತಲೆಮೇಲೆ ಕೈಹೊತ್ತು ಕೂತಿದ್ದ ನಾಗುವನ್ನು ಜಾನಕಿ ಕೂಗಿದ್ದು ಎಚ್ಚರಿಸಿತು. ಸ್ಕೂಲಿನ ಚೀಲವನ್ನು ಮೂಲೆಯಲ್ಲಿಡುತ್ತಾ “ಅದೇನು ಯೋಚ್ನೆ ಮಾಡ್ತ ಕೂತಿದೀಯೇ. ನಂಗೆ ಹಸಿವು. ಬೇಗ ಒಂದಿಷ್ಟು ಕಲ್ಸಿ ಕೊಡು” ಎನ್ನುತ್ತಾ ಕೈಕಾಲು ತೊಳೆಯಲು ಹೋದಳು. ಒಳಗೆ ಮುಚ್ಚಿಟ್ಟಿದ್ದ ಅನ್ನದಲ್ಲಿ ಹುಳಿಯನ್ನ, ಮಜ್ಜಿಗೆಯನ್ನ ಎರಡನ್ನೂ ಕಲಿಸಿ ಸ್ವಲ್ಪ ಸ್ವಲ್ಪವನ್ನು ಜಾನಕಿಯ ತಟ್ಟೆಗೆ ಹಾಕಿ ಕೊಟ್ಟಳು. ಮಿಕ್ಕದ್ದನ್ನು ಇನ್ನೇನು ಬರುವ ಶೇಷಾದ್ರಿಗೆ ಮುಚ್ಚಿಟ್ಟಳು. ಹುಳಿಯನ್ನ ಬಾಯಿಗಿಟ್ಟ ಜಾನಕಿ “ಇವತ್ತೂ ಪಪಾಯ ಕಾಯಿನ ಹುಳೀನೇ ಮಾಡಿದೀಯಾ… ಥೂ ನಂಗಿಷ್ಟ ಇಲ್ಲ” ಎನ್ನುತ್ತಾ ತಟ್ಟೆ ಕುಕ್ಕಿದಳು. ನಾಗುವಿಗೂ ಕೋಪ ಬಂತು. “ಏನ್ ನಿಮ್ಮಪ್ಪ ಇಪ್ಪತ್ತುಮೂವತ್ತು ಸಾವ್ರ ಸಂಬಳ ತರೋ ಸರ್ದಾರ. ದಿನದಿನಾನೂ ಅಂಗ್ಡೀಯಿಂದ ತರ್ಕಾರಿ ತಂದು ಮಾಡ್ತೀನಿ. ಮನೆ ಹಿತ್ಲಲ್ಲಿ ಏನು ಬೆಳ್ದಿರತ್ತೋ ಅಷ್ಟೇನೆ. ಹಸಿವಾಗಿದ್ರೆ ತಿನ್ನು ಇಲ್ದಿದ್ರೆ ಅಲ್ಲೇ ಮೂಲೇಲಿ ಮುಚ್ಚಿಟ್ಟು ಹೋಗು. ರಾತ್ರಿ ಹೊಟ್ಟೆ ಕಾದ್ರೆ ತಿನ್ನೋವಂತೆ” ಎನ್ನುತ್ತಾ ಮತ್ತೆ ರಾತ್ರಿಯ ಅಡಿಗೆಗೆ ಒಲೆ ಹಚ್ಚತೊಡಗಿದಳು. ಅಷ್ಟರಲ್ಲಿ ಶೇಷಾದ್ರಿಯೂ ಬಂದ. ಮಾತಿಲ್ಲದೆ ತನ್ನ ತಟ್ಟೆಗೆ ಹಾಕಿಕೊಟ್ಟಿದ್ದನ್ನು ಸ್ವಾಹಾ ಮಾಡತೊಡಗಿದ. ಗುಮ್ಮೆಂದು ಕೂತಿದ್ದ ಜಾನಕಿಯನ್ನು ನೋಡಿ “ತಿನ್ನಲ್ವೇನೆ, ತಿಂದಿದ್ರೆ ನಂಗ್ಹಾಕು” ಎಂದು ತಟ್ಟೆಯನ್ನು ಮುಂದೆ ಚಾಚಿದ. ಮರುಮಾತಿಲ್ಲದೆ ಜಾನಕಿ ತಿನ್ನತೊಡಗಿದಳು. ಒಲೆ ಹೊತ್ತಿದ ತಕ್ಷಣ ಸ್ವಲ್ಪ ನೀರುಕಾಸಿ ತೊಟ್ಟೇತೊಟ್ಟಿದ್ದ ಹಾಲು ಸೋಕಿಸಿ ನಾಗು ಬೆಲ್ಲದ ಕಾಫಿ ಮಾಡಿಕೊಂಡು ರಾತ್ರಿಯ ಊಟಕ್ಕೆ ಎಸರಿಟ್ಟಳು. ತಟ್ಟೆ ತೊಳೆದಿಟ್ಟ ಶೇಷಾದ್ರಿ ಎದ್ದು ಆಟಕ್ಕೆ ಹೊರಗೋಡಿದ. ಹೆದಹೆದರುತ್ತಲೇ ಜಾನಕಿ “ನಂಗೊಂತೊಟ್ಟು ಕಾಫಿನಾದ್ರು ಕೊಡ್ತಿಯೆನೇ?” ಕೇಳಿದಳು. ʻಅಯ್ಯೋʼ ಅನ್ನಿಸಿ “ತಗಾ” ಎನ್ನುತ್ತಾ ತಳಮುಳುಗುವಷ್ಟು ಕಾಫಿಯನ್ನು ಸಣ್ಣಲೋಟಕ್ಕೆ ಬಗ್ಗಿಸಿಕೊಟ್ಟಳು. ಇನ್ನಷ್ಟು ಬಿಸಿನೀರು ಬೆಲ್ಲವನ್ನು ಬೆರಸಿಕೊಂಡು ತನ್ನ ಲೋಟದ ತುಂಬ ಮಾಡಿಕೊಂಡು ನಿಧಾನವಾಗಿ ಕುಡಿಯುತ್ತಾ “ಈ ಕಾಫಿ ಕೊಟ್ಟಿದ್ರೆ ನಿಜ್ವಾಗೂ ಜಯತ್ತೆ ಕುಡಿತಿದ್ಲಾ” ಅಂದುಕೊಳ್ಳುತ್ತಲೇ ಎರಡೂ ಲೋಟ ತೊಳೆದಿಡು ಎಂದು ಜಾನಕಿಗೆ ಕೊಟ್ಟು ಸಿಟ್ಟು ತೀರಿಸಿಕೊಳ್ಳುವಂತೆ ಆರುತ್ತಿದ್ದ ಒಲೆ ಊದಿದಳು…
ರಾತ್ರಿ ಎಷ್ಟೋ ಹೊತ್ತು ನಿದ್ರೆ ಬರಲಿಲ್ಲ… ನಂಗ್ಯಾಕೆ ʻನಾ ಬರಲ್ಲಾಂದ್ರೆ ಬರಲ್ಲʼ ಅಂತ ಹೇಳಕ್ಕಾಗ್ಲಿಲ್ಲ… ಹೇಳಕ್ಕೆ ಅವ್ಳು ಬಿಟ್ಟಿದ್ರಲ್ವಾ… ನಾರ್ಣಪ್ಪನೋರ ಮನೆಗ್ಹೋದ್ರೆ ಸೀರೆ, ದಕ್ಷಿಣೆ, ಒಂದಷ್ಟು ಹಣ್ಣು ಎಲ್ಲಾ ಸಿಗತ್ತೆ ಅಂತ ಅವ್ಳಿಗ್ ಗೊತ್ತಿಲ್ವಾ. ಹಂಗ್ಸಿ ಮಾತಾಡ್ತಳಲ್ಲ. ಬದ್ಲಿಗೆ ಶಾರೀನ ಕಳಿಸ್ತಿನಿ ಅಂತಾಳಲ್ಲ, ಅವ್ಳಿಗೇನು ಕಮ್ಮಿಯಾಗಿದೆ? ಗಂಡ ಬಸ್ ಕಂಡಕ್ಟರ್, ದಿನ್ವೂ ಟಿಕೇಟು ಹರೀದೆ ಒಂದ್ನೂರಿನ್ನೂರು ರುಪಾಯಾದ್ರು ಕಮಾಯಿಸ್ತನೆ. ಊಟತಿಂಡಿಗೆ ಕಮ್ಮಿಯಿಲ್ಲ. ಬಸ್ಸಲ್ಲಿ ಬರೋ ರೈತ್ರ ಹತ್ರ ಒಂದಷ್ಟು ತರ್ಕಾರಿ ಮತ್ತೊಂದು ಅಂತ ಬೇರೆ ಕೀಳ್ತಿರ್ತನೆ. ಹಬ್ಬ, ಹುಣ್ಮೆಂತ ಹೆಂಡ್ತಿ, ಮಕ್ಳಿಗೆ ವರ್ಷದಲ್ಲಿ ಮೂರ್ನಾಲ್ಕು ಸಲ ಸೀರೆ, ಬಟ್ಟೆ ತಂದ್ಕೊಡ್ತನೆ. ಮೊನ್ನೆ ಸಲದ ಗೌರಿ ಹಬ್ದಲ್ಲಿ ಓಲೆ, ಜುಮುಕಿ ಬೇರೆ ಮಾಡ್ಸಿಕ್ವಟ್ನಂತೆ. ಅವ್ನೇನು ನನ್ ಗಂಡ್ನಂಗೆ ವಾಚ್ಮನ್ನಾ. ಇವ್ರಿಗೋ ಹೋಗೋಬರೋರಿಗೆ ಸಲಾಮು ಹಾಕಾದ್ಬಿಟ್ರೆ ಮೂರ್ಕಾಸು ಗಿಟ್ಟಲ್ಲ. ಅವ್ರಿವ್ರು ಮನೇಲಿ ಉಟ್ಟು ಕೊಟ್ಟಿದ್ದು ಬಿಟ್ರೆ ʻಹೊಸ್ದುʼ ಅಂತ ನಾನಾಗ್ಲೀ, ಮಕ್ಳಾಗ್ಲೀ ಕಂಡಿದ್ದೇ ಇಲ್ಲ. ಇದೆಲ್ಲ ಅತ್ತೆಗೆ ಗೊತ್ತಿಲ್ವ….! ಕಣ್ಣಲ್ಲಿ ನೀರುತುಂಬಿ ಉಟ್ಟಿದ್ದ ತುಂಡಿನ ಅಂಚನ್ನು ಬಾಯಿಗಡ್ಡವಿಟ್ಟುಕೊಂಡು ಸದ್ದು ಹೊರಕೇಳದಂತೆ ಅತ್ತಳು. ಸ್ವಲ್ಪ ಹೊತ್ತಾದ ಮೇಲೆ ಇದ್ದಕ್ಕಿದ್ದಂತೆ ʻಓ… ಈಗ ನಾಳೆಗೆ ಸೀರೆ ಇಲ್ದಂಗೆ ಮಾಡ್ಬಿಟ್ಳಲ್ಲಾʼ ಅನ್ನೋ ಯೋಚ್ನೆ ಬಂತು. ʻಪೆಟ್ಗೆ ಒಳ್ಗೆ ಇರೋದೊಂದೇ ಒಂದು ಗಟ್ಟಿಯಾಗಿರೋ ಸೀರೆ. ಎಲ್ಲಾದ್ರೂ ಅರಿಶ್ನ,ಕುಂಕ್ಮಕ್ಕೆ ಕರದ್ರೆ ಉಟ್ಕಂಡು ಹೋಗೋಂತದು. ಅದ್ನೂ ಹೊರ್ಗೆ ಎಳದ್ಬಿಟ್ರೆ ಸಮಯಾಂದ್ರೂ ಇನ್ನೊಂದು ಸೀರೆ ಇಲ್ದಂಗೆ ಆಗತ್ತಲ್ಲ…ʼ ಎನ್ನುವ ಹೊಸ ಯೋಚನೆಗೆ ಬಿದ್ದಳು. ʻಇದೆಂತಾ ಬಾಳು ನಂದುʼ ಅನ್ನಿಸಿ ದುಃಖ ಒತ್ತೊತ್ತಿಕೊಂಡು ಬಂತು. ಮನಸ್ಸಿನೊಳಗೆ ಒತ್ತಿ ಹೂತಿಟ್ಟಿದ್ದ ಎಷ್ಟೆಷ್ಟೋ ಹಳೆ ಘಟನೆಗಳು ʻನಾನಿದೀನಿ, ನಾನೂ ಇಲ್ಲೇ ಇದೀನಿʼ ಅನ್ನುತ್ತಾ ಅವಳನ್ನು ಕಾಡತೊಡಗಿದವು. ಸೆಕೆಯೆಂದರೆ ಸೆಕೆ ಬೇರೆ. ʻಅದ್ಹೇಗೆ ಎಲ್ರಿಗೂ ಈ ಸೆಕೇನಲ್ಲೂ ನಿದ್ದೆ ಬರ್ತಿದೆʼ ಎಂದುಕೊಂಡ ತಕ್ಷಣವೇ ʻಅಯ್ಯೋ, ಈ ಅತ್ತೆ ಬಂದಿಲ್ದಿದ್ರೆ ನಾನೂ ಮರದ ಕೊರಡಂಗೆ ಬಿದ್ಗತಿದ್ದೆ ಅಲ್ವಾʼ ಅನ್ನಿಸಿತು. ಎಷ್ಟು ಹೊರಳಿದರೂ ನಿದ್ರೆ ಬರಲಿಲ್ಲ…
ಬೆಳಗಿನ ಝಾವ ಮುಲ್ಲಾ ಕೂಗಿದ್ದು ಕೇಳಿತು. ಎದ್ದು ಬಚ್ಚಲ ಒಲೆಗೆ ಒಂದಷ್ಟು ತೆಂಗಿನ ಸೋಗೆ, ಗರಿಯನ್ನು ತುಂಬಿ ಒಲೆ ಹಚ್ಚಿ ಹಂಡೆಗೆ ನೀರು ತುಂಬಿದಳು. ಬೆಳಗಿನ ಕಾಫಿಗಾಗೇ ಇಟ್ಟುಕೊಂಡಿದ್ದ ಸೀಮೆಎಣ್ಣೆ ಬತ್ತಿ ಸ್ಟೋವನ್ನು ಹಗುರಾಗಿ ಅಲ್ಲಾಡಿಸಿ ನೋಡಿದಳು. ಇವತ್ತು ಕಾಫಿಗಾಗಬಹುದು ಅನ್ನಿಸಿತು. ಸ್ಟೋವಿನ ಮೇಲೆ ನೀರಿಟ್ಟು ಶೇಷಾದ್ರಿಯನ್ನು ಎಬ್ಬಿಸಿ ಪಕ್ಕದ ಬೀದಿಯ ಸೂರಪ್ಪನ ಮನೆಯಿಂದ ಅರ್ಧ ಪಾವು ಹಾಲು ತರಲು ಕಳಿಸಿದಳು….. ಮೇಲಿದ್ದ ರಾಗಿ ಹುರಿಟ್ಟಿನ ಡಬ್ಬಿಯಿಂದ ಎಲ್ಲರಿಗೂ ಸಾಕಾಗುವಷ್ಟು ಹುರಿಟ್ಟನ್ನು ಒಂದು ಬೋಗುಣಿಗೆ ಸುರಿದು ಒಂದಷ್ಟು ಬೆಲ್ಲವನ್ನು ಹೆರೆದು ಹಾಕಿ, ನೀರು ಹಾಕಿ ಕಲಸಿದಳು. ಕಾಫಿಯಾದ ಮೇಲೆ ಉಳಿದಿದ್ದನ್ನ ಸಾಯಂಕಾಲದ ತನ್ನ ಕಾಫಿಗೆ ಮುಚ್ಚಿಟ್ಟುಕೊಳ್ಳಬೇಕು. ತುಂಗಮ್ಮನ ಮನೆಯಿಂದ ಬಂದ ಮೇಲೆ ಇಲ್ಲಿನ ಅಡುಗೆ, ಹಂಬಿನಲ್ಲಿ ಬಸಳೆ ಸೊಪ್ಪಿದೆ. ಅವರ ಮನೇಲಿ ʻಬೆಣ್ಣೆ ಕಡೆದ ಮಜ್ಜಿಗೆ ಇದೆ ತಗಂಡು ಹೋಗ್ತಿಯನೇʼ ಅಂತ ಹೋದಾಗೆಲ್ಲಾ ಕೊಡ್ತಾರೆ. ತಂದು ತಂಬುಳಿ ಮಾಡಿದ್ರೆ ಮಧ್ಯಾಹ್ನದ ಊಟಕ್ಕೆ ಆಯಿತು… ಎಂದು ದಿನದ ಕೆಲಸದ ಲೆಕ್ಕಾಚಾರವನ್ನು ಮನಸ್ಸಿನಲ್ಲೇ ಹಾಕಿಕೊಂಡಳು. ಅಷ್ಟರಲ್ಲಿ ಶೇಷಾದ್ರಿ ಹಾಲು ತಂದ. ʻನಂಗೂ ಒಂತೊಟ್ಟು ಕಾಫಿ ಕೊಡೆʼ ಅಂದ. ಆಗಲೇ ಮುಖ ತೊಳೆದು ಕೂತಿದ್ದ ಗಂಡನಿಗೆ ಮುಕ್ಕಾಲು ಲೋಟ ಕಾಫಿ ಕಳಿಸಿ, ಮಿಕ್ಕದ್ದಕ್ಕೆ ಇನ್ನೊಂದು ಲೋಟ ಬಿಸಿ ನೀರು, ಬೆಲ್ಲ ಸೇರಿಸಿ, ತನಗೂ, ಶೇಷಾದ್ರಿಗೂ, ಅದೇ ಹೊತ್ತಿಗೆ ಎದ್ದು ಬಂದ ಜಾನಕಿಗೂ ಬಗ್ಗಿಸಿದಳು. ಬೇಗನೆ ಸ್ನಾನ ಮಾಡಿಬಂದವಳೆ ಹುರಿಟ್ಟನ್ನು ತಿಂದು ಮಿಕ್ಕವರಿಗೆ ಮುಚ್ಚಿಟ್ಟು ಬೀಗದಕೈಯನ್ನು ಪಕ್ಕದ ವನಜಮ್ಮನವರ ಮನೆಯಲ್ಲಿ ಕೊಡಲು ಹೇಳಿ ಹೊರಟಳು. ಬದುಕಿನ ಇನ್ನೊಂದಿನ ಹೀಗೇ ಆರಂಭವಾಯಿತು… ಹಾಗೆಯೇ ಗುರ್ವಾರ ನಾರ್ಣಪ್ಪನವರ ಮನೆಗೆ ಚಿಗಳಿ ತಂಬಿಟ್ಟು ಮಾಡಲು ಹೋದಾಗ ಕಮಲಮ್ಮ “ಜಯಮ್ಮ ಹೀಗೆ ಹೇಳ್ಕಳ್ಸಿದ್ರಲೆ, ಏನ್ಮಾಡೋದು. ನಾನು ಆಗಲ್ಲಾಂದ್ರೆ ಇನ್ನು ಗಂಡಸ್ರ ತಂಕ ಸಮಾಚಾರ ತಗಂಡು ಹೋಗ್ತಾರೆ ಆಕೆ. ಅದ್ಕೆ ಸರಿಯಂದೆ ಕಣೆ” ಎಂದಿದ್ರು. ನಾಗು ತಾನೆ ಏನುತ್ತರ ಕೊಟ್ಟಾಳು? ಸುಮ್ಮನಾದಳು.
ಹಾಗೆಯೇ ಶುಕ್ರವಾರ ಬೆಳಗ್ಗೆಯೂ ಬಂದೇ ಬಂತು. ದಡಬಡಿಸಿ ಎದ್ದು ಸ್ನಾನ ಮಾಡಿ, ಎಲ್ಲರಿಗೂ ಅವತ್ತು ರಜವಿದ್ದುದರಿಂದ ಅಕ್ಕಿ, ಬೇಳೆ ತೆಗೆದಿಟ್ಟು ʻಒಂದನ್ನ ಸಾರು ಮಾಡ್ಕಳಿ. ರಾತ್ರಿಗೆ ಅಲ್ಲೇನಾದ್ರೂ ಕೊಡ್ತರೆನೊ, ತರ್ತಿನಿʼ ಎಂದು ಗಂಡನಿಗೇ ಅಡುಗೆ ಮಾಡಿಕೊಳ್ಳಲು ಹೇಳಿ, ಜಯತ್ತೆಯ ಮನೆಗೆ ಹೊರಟಳು. ಬಾಗಿಲೆದುರಿಗೆ ಕುರ್ಚಿಯಲ್ಲಿ ಕೂತು ಕಾಫಿ ಲೋಟ, ಪೇಪರು ಹಿಡಿದಿದ್ದ ಮಾವ ಸದ್ದಾದ ತಕ್ಷಣ ಪೇಪರ್ ಸರಿಸಿ ನೋಡಿ, ʻಓ ನಾಗು ಬಂದ್ಯಲಾ. ಬರಕ್ಕಾಗುಲ್ಲ ಅಂತ ಹೇಳಿದ್ಯಂತೆ ಸುಬ್ಬಣ್ಣನ್ ಕೈಲಿ. ನಿಮ್ಮತ್ತೆಯೇ ಬರ್‌ಬೆಕಾ ನಿಂಗ್ ಒಸಗೆ ಇಟ್ಟು ಕರಿಯಕೆ. ನೀನೂ ಭಾಳಾ ಕಲ್ತುಬಿಟ್ಟೆ ಬಿಡುʼ ಎನ್ನುತ್ತಾ ಮತ್ತೆ ಪೇಪರ್‌ನಲ್ಲಿ ಮುಳುಗಿಹೋದರು. ʻಬಂದ್ಮೇಲೂ ಹೀಗೆ ಹಂಗ್ಸಿ ಮಾಡಾಡ್ಬೆಕಾʼ ಅನ್ನಿಸಿ ಬೇಜಾರಾದರೂ ಉತ್ತರಿಸದೆ ಒಳಗೆ ಹೋದಳು.
ಒಳಗೆ ತರಕಾರಿ ರಾಶಿಯ ಮುಂದೆ ಕೂತಿದ್ದ ಅತ್ತೆ ʻಸಧ್ಯ ಬಂದ್ಯಲಾ. ಎಲ್ಲಿ ಕೈಕೊಟ್ಟೇ ಬಿಡ್ತಿಯೋ ಅನ್ಕಂಡಿದ್ದೆʼ ಎಂದವಳೇ ʻಇಕಾ ಇಲ್ನೋಡು ಗೆಣ್ಸು, ಸುರ್ಣಗೆಡ್ಡೆ, ಬಾಳೆಕಾಯಿಂದು ಪಲ್ಯ, ಗೊತ್ತಲಾ, ಹಾಗಲ್ಕಾಯಿಂದು ಗೊಜ್ಜು, ಬೆಂಡೀಕಾಯಿಂದು ಗೊಡ್ಡುಳಿ, ದಿಂಡಿಂದು ಮೊಸರು ಬಜ್ಜಿ, ಎಳ್ಳಿಂದು, ಶುಂಟಿದು ಎರ್ಡು ಚಟ್ನಿ, ಹದಾದ್ದು ಒಂದು ಮೆಣ್ಸಿನ ಸಾರು. ಮಿಕ್ಕಿದ್ದೆಲ್ಲಾ ಗೊತ್ತಲಾ ಒಂದು ನೂರು, ನೂರಿಪ್ಪತ್ತು ವಡೆ, ಎಪ್ಪತ್ತೆಂಭತ್ತು ಸಜ್ಜಪ್ಪ, ರವೆ ಉಂಡೆ, ಹೆಸ್ರುಬೇಳೆ ತವ್ವೆ, ಪಾಯಸ. ಅನ್ನ. ಎಲ್ಲಾ ಒಂದು ಮೂವತ್ತು ಮೂವತ್ತೈವತ್ತು ಜನೀಗಾಗೋಷ್ಟು ಕಣೆ. ಇಕಾ, ಸ್ನಾನ ಆಯ್ತಾ. ಹಂಗರೆ ಬಚ್ಚಲಿಗೆ ಹೋಗಿ ಕೈಕಾಲು ತೊಳ್ಕಂಡು ಬಂದು ಅಲ್ನೋಡು ದೇವ್ರಮನೇಲಿ ನಿನ್ನ ಮಡಿಸೀರೆ ಹರ್ವಿದೀನಿ. ಉಟ್ಕಂಡು ಬಂದು ಮದ್ಲು ಉದ್ದಿನ್ ಬೇಳೆ ನೆನಸ್ಕೋ ಆಯ್ತಾ… ನೆನ್ನೇನೇ ಮಡ್ನೀರೆಲ್ಲಾ ತುಂಬ್ಸಿಟ್ಟಿದೀನಿ. ನೀನು ಮಡಿಯುಟ್ಕಂಡು ಬಂದು ಕೆಲ್ಸ ಶುರು ಹಚ್ಕಂಡ್ರೆ ನಾನ್ ಸ್ನಾನಕ್ಕೆ ಹೋಗ್ತಿನಿʼ ಒಂದೇ ಸಮನೆ ಮಾತು ಸುರಿಸಿ ಅವಳ ಮುಂದಿದ್ದ ಕೆಲಸದ ಪಟ್ಟಿಯನ್ನು ಕೊಟ್ಟರು. ಇನ್ನೂ ನಿಂತೇ ಇದ್ದವಳನ್ನು ನೋಡಿ ʻಯಾಕ್ ನಿಂತ್ಕಂಡೆ… ಓ… ನಿನ್ನ ಮೋಟಾರು ಚಾಲೂ ಆಗಕ್ಕೆ ಕಾಫಿ ಬೀಳ್ಬಕಲ್ವಾ. ಅದೇನು ವಚ್ಚೇನೋ ನಿಂಗೆ ಕಾಫೀದು. ಕೊಟ್ಟೆ ತಡಿ. ಈಗ್ ಕುಡಿದ್ರೆ, ಇನ್ನು ಅಡ್ಗೇ ಮುಗ್ದು ಮಡಿ ಕೆಲ್ಸ ಮುಗ್ಯೂತಂಕ ಕುಡಿಯೂ ಹಾಂಗಿಲ್ಲ ಗೊತ್ತಿದ್ಯಲ್ಲʼ ಎನ್ನುತ್ತಾ ಕಾಫಿ ಮುಂದಿಟ್ಟಳು. ಅಡುಗೆ ಮನೆಯಿಂದ ಹೊರಬಂದು ಕುಡಿಯುತ್ತಾ ʻಇನ್ನೊಂದು ಸ್ವಲ್ಪ ದೊಡ್ಡ ಲೋಟದಲ್ಲಿ ಕೊಡಕ್ಕೆ ಕೈಬರಲ್ವಲ್ಲ ಇವ್ಳಿಗೆʼ ಎಂದು ಬೈದುಕೊಂಡರೂ ಮುಂದಿರುವ ರಾಶಿ ಕೆಲಸ ನೆನಪಿಸಿಕೊಂಡು ಮೇಲೆದ್ದು ಬಚ್ಚಲಿಗೆ ನಡೆದಳು…
ಮಡಿಯುಟ್ಟು ಬಂದ ತಕ್ಷಣ ಅವಳ ಯಂತ್ರ ಚಾಲೂ ಆಯಿತು. ʻನಿನ್ ಹಿಂದೇನೇ ಸ್ನಾನ ಮಾಡ್ಕಂಡು ಬರ್ತೀನಿʼ ಅಂದಿದ್ದ ಅತ್ತೆ ಏನೇನೋ ಕೆಲಸ ಹೊಂಚಿಕೊಳ್ಳುತ್ತಾ ಅಂತೂ ಇಂತೂ ಹತ್ತು ಗಂಟೆಯ ವೇಳೆಗೆ ʻಅಯ್ಯೋ ಹೊತ್ತಾಗೋಯ್ತು. ಇನ್ನೂ ಎಷ್ಟು ಕೆಲ್ಸ ರಾಶಿ ಬಿದ್ದಿದೆ. ಎಲ್ಲಿಗ್ ಬಂತೇ… ಕಾಯಿ ತುರಿದಾಯ್ತೆನೆ, ಹುರ್ಕೊಂಡ ಕೆಲ್ಸ ಮುಗೀತಾ… ಸಜ್ಜಪ್ಪದ ಕಣಕ ಕಲ್ಸಿದ್ಯಾ… ಎಂದು ಜೋರಾಗಿ ಆಡುತ್ತಾ ಬಂದು ಅಡುಗೆಮನೆಯ ಉಸ್ತುವಾರಿಯನ್ನು ತನ್ನ ಕೈಗೆ ತೆಗೆದುಕೊಂಡಳು. ʻಪುಡಿಯೆಲ್ಲ ಮಿಕ್ಸರಿಗೆ ಹಾಕಿ ಬಿಡ್ತೀನಿ. ಉದ್ದನ್ನ ಮಾತ್ರ ಒರಳಲ್ಲೇ ರುಬ್ಬು, ಇಲ್ದಿದ್ರೆ ಹುದ್ಗು ಬರಲ್ಲ. ವಡೆ ಚೆನ್ನಾಗಲ್ಲ. ಅದಕ್ಮೊದ್ಲು ಕಾಯಿ ರುಬ್ಬಿ ಕೊಟ್ಬುಡು, ನಾನು ಹೂರ್ಣ ಮಾಡ್ತಿನಿ. ಆಮೇಲೆ ನೀನು ಬಾಣಲೆ ಮುಂದೆ ಕೂತ್ಕೋ, ನಾನು ಮಿಕ್ಕಿದ್ ಕೆಲ್ಸ ಮುಗುಸ್ತಿನಿʼ ಎಂದವರೇ ಹಗೂರದ ಕೆಲಸವನ್ನೆಲ್ಲಾ ತಾವು ತೆಗೆದುಕೊಂಡು ಆಗಲೇ ದಣಿವಾಗಿಬಿಟ್ಟವರಂತೆ ʻಉಶ್ಶಪ್ಪಾ..ʼ ಎನ್ನುತ್ತಾ ಮಿಕ್ಸರಿನ ಮುಂದೆ ಕೂತರು. ಇದು ಪ್ರತಿಸಲದ ಕತೆಯೇ. ಗೊತ್ತಿದ್ದ ನಾಗು ಅವರಾಡುತ್ತಿದ್ದ ಮಾತಿಗೆಲ್ಲಾ ʻಹೂನತ್ತೆʼ, ʻಸರಿಯತ್ತೆʼ ಎನ್ನುತ್ತಾ ಕೆಲಸ ಮುಂದುವರೆಸಿದಳು.
ಅವಳು ರುಬ್ಬಿದ್ದು ಮುಗಿಯುತ್ತಲೇ ತಾವೇ ತೀರಾ ಚಿಕ್ಕದಲ್ಲದ, ದೊಡ್ಡದಲ್ಲದ ಬಾಣಲೆಗೆ ಎಣ್ಣೆ ಬಗ್ಗಿಸುತ್ತಾ, ʻನೋಡು ಮದ್ಲು ಸಜ್ಜಪ್ಪ ಕರಿದ್ಬಿಡು. ಆಮೇಲೆ ವಡೆ ಕರಿಯೋಣ. ಎರಡಕ್ಕೂ ಬೇರ್‌ಬೇರೆ ಎಣ್ಣೆ ಇಟ್ಕಂಡ್ರೆ ಕರ್ದೆಣ್ಣೆ ತುಂಬಾ ಮಿಕ್ಕೋಗತ್ತೆ. ಉಪ್ಯೋಗ್ಸಕ್ಕಾಗಲ್ಲ; ಚೆಲ್ಲಕ್ಕಾಗಲ್ಲ. ಹೊಟ್ಟೆ ಉರ್ಯತ್ತೆ, ಎಣ್ಣೆ ಇಷ್ಟು ಸಾಕೂನ್ಸತ್ತೆ, ಬೇಕಾದ್ರೆ ಮತ್ತೆ ಹಾಕ್ಕಂಡ್ರಾಯ್ತುʼ ಎನ್ನುತ್ತಾ ಬಾಣಲೆಯ ಅರ್ಧಕ್ಕಿಂತ ಸ್ವಲ್ಪ ಮೇಲಕ್ಕೆ ಎಣ್ಣೆ ಬಗ್ಗಿಸಿ ಕೊಟ್ಟರು. “ಇದ್ರಲ್ಲಿ ಕರೀತ ಕೂತ್ರೆ ಪೂರೈಸಲ್ಲ ಅತ್ತೆ, ದೊಡ್ಡ ಬಾಣಲೇನೇ ಕೊಡು” ಅಂದರೆ “ಸಾಕು ಬಿಡೆ, ಬ್ರಾಹ್ಮಣ್ರ ಊಟದ ಹೊತ್ತಿಗೆ ಸಜ್ಜಪ್ಪ ಮುಗ್ಸಿ, ವಡೆ ಕರೆಯಕ್ಕೆ ಶುರು ಮಾಡು, ಆಮೇಲೇನು ಅವಸ್ರ ಇಲ್ವಲ್ಲಾ ನಿಧಾನ್ವಾಗಿ ನಾಜೂಕಾಗಿ ಕರೆದ್ರಾಯ್ತು. ನಿನ್ ಕೈಲಿ ಎಣ್ಣೆ ಕೊಟ್ಬಿಟ್ರೆ ವಿಪ್ರೀತ ದಂದ್ರಾಳಿತನ ಮಾಡ್ತಿ. ಜಾಣ್ತನ ಕಲ್ತಕಾಬೇಕು ನಾಗು” ಎನ್ನುತ್ತಾ ರವೆ ಉಂಡೆಗೆ ಬೆರೆಸಿಟ್ಟಿದ್ದ ಬೇಸನ್ನನ್ನು ತೆಗೆದುಕೊಂಡು “ನಾನು ಸ್ವಲ್ಪ ಒಲೆಯಿಂದ ದೂರ ಆ ಕಡೆ ಕೂತ್ಕಂಡು ಉಂಡೆ ಕಟ್ತೀನಿ. ನಂಗೀ ಕಾವು ಆಗಲ್ಲ, ಮಿಕ್ಕಿದ್ದೆಲ್ಲಾ ಆದ ಹಾಗಾಯ್ತಲ್ಲ. ಅನ್ನ ಬಸಿದಿಟ್ಟಿದೀಯಲ್ಲ. ಅವ್ರು ಶುರು ಮಾಡಿ ಆಗ್ಲೇ ಅರ್ಧ ಗಂಟೆ ಆಯ್ತು. ಇನ್ನೇನು ಬ್ರಾಹ್ಮಣ್ರ ಎಲೆ ಹಾಕೋದೆ. ಕೈ ಸ್ವಲ್ಪ ಚುರ್ಕಾಗಿ ಓಡ್ಸು” ಎಂದು ಉಂಡೆ ಕಟ್ಟಲು ಶುರುಮಾಡಿದಳು. ʻಇಷ್ಟು ಎಣ್ಣೆ ಕೊಟ್ಟು ಕೈ ಚುರ್ಕಾಗಿ ಓಡ್ಸು ಅಂದ್ರೆ ಅದ್ಹೇಗೆ ಮಾಡೋದೋʼ ಅನ್ನಿಸಿದರೂ ಮಾತಾಡದೆ ಕರಿಯಲು ಕೂತಳು. ಹಾಗೂ ಹೀಗೂ ಸಜ್ಜಪ್ಪ ಕರಿದು ಮುಗ್ಸೋ ಹೊತ್ಗೆ ಎಣ್ಣೆ ಬಾಣಲೆ ತಳ ಕಂಡಿತ್ತು. ʻಅತ್ತೆ ಇನ್ನಿಷ್ಟು ಎಣ್ಣೆ ಹಾಕದೆ ವಡೆ ಕರಿಯಕ್ಕಾಗಲ್ಲ. ನೂರಿಪ್ಪತ್ತು ವಡೆ ಮೇಲೆ ಆಗ್ಬೇಕು. ಎಲ್ಲೋ ಬುಡದಲ್ಲಿ ಒಂಚೂರಿದೆ ಅಷ್ಟೆ” ಅಂದಳು. “ಏನೋ ಈಗಿನವಕ್ಕೆ ನಾಜೂಕಾಗಿ ಮಾಡಕ್ಕೇ ಬರಲ್ಲ. ಎಲ್ಲಾ ದಂಡಿದಂಡಿಯಾಗಿ ಹಾಕ್ಕೊಂಡು ಮಾಡೋದ್ರಲ್ಲೇನಿದೆ ಜಾಣ್ತನ” ಗೊಣಗಿಕೊಳ್ಳುತ್ತಲೇ ಎದ್ದು ಬಂದ ಜಯತ್ತೆ ಬಾಣಲೆ ನೋಡುತ್ತಾ ಅರ್ಧ ಬಾಣಲೆಗೆ ಒಂದು ಗೆರೆಯೂ ಹೆಚ್ಚದಂತೆ ನಾಜೂಕಾಗಿ ಎಣ್ಣೆ ಹಾಕಿ “ನೋಡು ಹತ್ತತ್ತೇ ವಡೆ ಹಾಕಿ ಕರಿ ಸಾಕು. ಬ್ರಾಹ್ಮಣರ ಪಂಕ್ತಿ ಹೊತ್ತಿಗೆ ಎರಡೊಬ್ಬೆ ಆಗ್ಬಿಟ್ರೆ ಸಾಕು. ಆಮೇಲೆ ಸ್ವಲ್ಪ ನಿಧಾನಾದ್ರೂ ಪರ್ವಾಯಿಲ್ಲ” ಎನ್ನುತ್ತಾ ಎಲ್ಲ ಅಡುಗೆಯೂ ಮುಗಿದಿದೆಯೇ ಎಂದು ಒಂದು ಸಲ ನೋಡಿ ಮತ್ತೆ ಉಂಡೆ ಕಟ್ಟಲು ಕುಳಿತರು. ಮಧ್ಯೆ ಮಧ್ಯೆ ಅವರಿಗೆ, ಇವರಿಗೆ ಎಂದು ನಾಕೈದು ಸಲ “ಏನೋ ಈ ಸುಡುಗಾಡು ಕಾಫಿ ಕತೆಯೇ ಮುಗಿಯಲ್ಲ” ಎಂದು ಗೊಣಗಿಕೊಂಡೇ ಕಾಫಿ ಬೆರೆಸಿಕೊಟ್ಟರು. ಒಂದೊಂದು ಸಲಕ್ಕೂ ನಾಗು ಮೂಗರಳಿಸಿದಳು ಅಷ್ಟೇ ಬಾಯಿಯ ತನಕ ಬರಲಿಲ್ಲ.
“ಎಲ್ಲಾ ತಯಾರಿದ್ಯಾ ಬ್ರಾಹ್ಮಣ್ರ ಎಲೆ ಹಾಕ್ಬೋದಾ” ಎನ್ನುತ್ತಾ ಮಾವ ಒಳಬಂದರು. ಎಲ್ಲಾ ತಾವೇ ಮಾಡಿಟ್ಟ ಹಾಗೆ “ಓ ಹಾಕೋದೇ ನೋಡಿ ಎಲ್ಲಾ ತಯಾರಿದೆ. ಇನ್ನೇನು ವಡೇನೂ ಆಗೋಗತ್ತೆ. ಆಯ್ತಲ್ಲನೆ?” ಎನ್ನುತ್ತಾ ನಾಗುವಿನ ಕಡೆಗೆ ತಿರುಗಿದರು. ಮಾತಿಲ್ಲದೆ ಸುಮ್ಮನೆ ತಲೆಯಾಡಿಸಿ ಕೆಲಸ ಮುಂದುವರೆಸಿದಳು ನಾಗು. ಬ್ರಾಹ್ಮಣರ ಊಟ ಮುಗಿದು ಕಾರ್ಯ ಮುಂದುವರೆಯಿತು. ಬೆಳಗಿಂದ ಬೆಂಕಿಯ ಮುಂದೆ ಕೂತು ಕೂತು ಅವಳಿಗೆ ನಿತ್ರಾಣವಾಗಿ ಹೋಗಿತ್ತು. ಹೇಗೂ ಬ್ರಾಹ್ಮಣ್ರ ಊಟ್ವಾಯ್ತು. ಅತ್ತೆ ಅಲ್ಲಿಂದ ಎದ್ದು ಹೋಗಿದ್ರೆ ಹೇಗೋ ಒಂದರ್ಧ ಲೋಟ ಕಾಫಿಯಾದ್ರೂ ಕುಡ್ಕೋಬೋದಿತ್ತೇನೋ. ಕಾವಲು ಕಾಯೋ ಹಾಗೆ ಜಾಗ ಬಿಟ್ಟು ಎದ್ದಿಲ್ಲ. ತನ್ನವಸ್ಥೆಗೆ ತನಗೇ ತಥ್ ಎನಿಸಿತು. ಅಷ್ಟರಲ್ಲಿ “ನಮಸ್ಕಾರ ಮಾಡಕ್ಕೆ ಬನ್ನಿ” ಎಂದು ಕರೆದಿದ್ದು ಕೇಳಿಸಿತು. ಹಾಗೆ ಹೋಗಿ ಹೀಗೆ ಬಂದು ಮತ್ತೆ ಪ್ರತಿಷ್ಠಾಪನೆಯಾಗಿ ಒಲೆಯ ಮುಂದೆ ಕುಳಿತಳು. ಇನ್ನೂ ಒಂದೈವತ್ತು ವಡೆ ಕರೆಯುವಷ್ಟು ಹಿಟ್ಟಿದೆ. ಇರೋ ಎಣ್ಣೇಲಿ ಎಂಟು ವಡೆಯನ್ನೂ ಒಂದು ಸಲಕ್ಕೆ ಬಿಡಲು ಆಗುತ್ತಿಲ್ಲ. ಒಂದಾನೊಂದು ಕಾಲದಿಂದ ನಾನು ಹೀಗೇ ಕರ್ಕಂಡೇ… ಕೂತುಬಿಟ್ಟಿದೀನೇನೋ ಎನ್ನಿಸಿತು ನಾಗುಗೆ.
ತಿಥಿ ಮುಗಿದು ಎಲ್ಲರಿಗೂ ಎಲೆ ಹಾಕಿ ಬಡಿಸಲು ಶುರು ಮಾಡಿದರು. “ಒಳಮನೆ, ಪಡಸಾಲೆ ಎಲ್ಲ ಕಡೆ ಎಲೆ ಹಾಕಿದೆ. ನೀನು ಒಂದ್ಸಲ ಬಡಿಸಕ್ಕೆ ಹೋಗೆ; ಆಮೇಲೆ ಸುಬ್ಬೂನೂ, ರಾಮನೂ ಬಡಿಸ್ತಾರೆ. ಪಲ್ಯದ ಬಟ್ಟಲು ತಗೋ” ಅಂದಳು ಜಯತ್ತೆ. “ಬಿಟ್ಟು ಎದ್ದೋದ್ರೆ ಇಲ್ಲಿ ಸೀದೋಗತ್ತೆ” ಅಂದ್ಳು. “ಈ ಒಬ್ಬೆ ತೆಗೆದು ಸೌದೆ ಪಕ್ಕಕ್ಕೆ ಎಳೆದು ಹೋಗು, ಒಂದ್ಸಲ ಎಲ್ಲ ಬಡಿಸಿದ ಮೇಲೆ ಮತ್ತೆ ಕರಿಯೋದನ್ನ ಮುಂದರ್ಸಿಯಂತೆ” ಅಂದಳು. ವಿಧಿಯಿಲ್ಲದೆ ಪಲ್ಯದ ಬಟ್ಟಲುಗಳನ್ನು ಹಿಡಿದು ಹೊರನಡೆದಳು. ಕೃಷ್ಣವೇಣಿ, ವಿಮಲಾ ಎಲ್ಲಾ ಸಂಸಾರ ಸಮೇತರಾಗಿ ಬಂದಿದಾರೆ. ಶಾರದೆ, ಅವಳ ಕಿರಿ ಮಗ್ಳು ದೇವ್ರಸಮಾರಾದ್ನೆಗೆ ಹೋದ್ರೇನೋ, ಅವ್ಳ ಗಂಡ ಮಗ ಎಲ್ರೂ ಬಂದಿದಾರೆ. ಅತ್ತೆಯ ಅಕ್ಕ ತಂಗೀರ ಸಂಸಾರಗಳೂ ಬಂದಿವೆ. ʻಅಂದ್ರೆ ತನ್ನ ಗಂಡ, ಮಕ್ಳನ್ನು ಬಿಟ್ಟು ಮಿಕ್ಕವ್ರೆಲ್ರುನೂ ಕರ್ದಿದಾರೆ. ನಂಗಂಡ, ಮಕ್ಳೇನು ಪಾಪ ಮಾಡಿದ್ರು?ʼ ಅನ್ನಿಸಿ ಅವಮಾನವಾಗಿ ಕೈಯಲ್ಲಿನ ಪಾತ್ರೆ ಎಲ್ಲಿ ಬಿದ್ದೇ ಹೋಗತ್ತೋ ಅನ್ನುವ ಹಾಗಾಯಿತು. ಸಾವರಿಸಿಕೊಂಡು ಒಳಬಂದವಳು “ಅತ್ತೆ ನಂಗೆ ತುಂಬಾ ಸುಸ್ತಾಗ್ತಿದೆ. ಬಡ್ಸಕ್ಕೆ ಕೈಲಾಗಲ್ಲ” ಎಂದವಳೇ ಮತ್ತೆ ಒಲೆಯ ಮುಂದೆ ಕುಳಿತಳು. “ಏನು ನಾಜೂಕೋ ಈಗಿನವ್ರು” ಎನ್ನುತ್ತಾ ಅತ್ತೆ ಹೊರಗೆದ್ದು ಹೋಗಿ ಎಲ್ರಿಗೂ “ನಿಧಾನ್ವಾಗಿ ಕೂತ್ಕಳಿ. ಇವತ್ತೇನೋ ರಜಾ ಇತ್ತು ಅಂತ ಎಲ್ರೂ ಹಿರಿಯರ ಪ್ರಸಾದಕ್ಕೆ ಸಿಕ್ಕ ಹಾಗಾಯ್ತು. ತುಂಬಾ ಸಂತೋಷ ಎಲ್ರೂ ಬಂದಿದ್ದು. ಸುಬ್ಬಣ್ಣ ರಾಮು ಬಡುಸ್ತಾರೆ. ಕೇಳಿ ಹಾಕುಸ್ಕಂಡು ಊಟ ಮಾಡಿ. ಹೋಗ್ವಾಗ ಮರೀದೆ ಪ್ರಸಾದ ತಗಂಡು ಹೋಗಿ” ಎಂದು ಜೋರಾಗಿ ಹೇಳುತ್ತಿದ್ದದ್ದು ಕೇಳಿಸಿ ನಾಗೂಗೆ ಅಳು ಒತ್ತರಿಸಿಕೊಂಡು ಬಂತು. ಇನ್ನೂ ಹತ್ತು ವಡೆಯಾದರೂ ಆಗಬೇಕು. ಬಾಣಲೆಯ ತಳದಲ್ಲಿದೆ ಎಣ್ಣೆ ಎರಡೆರಡೇ ಏನು ಒಂದನ್ನೇ ಹಾಕಿದರೂ ಎಣ್ಣೆಯಲ್ಲಿ ಮುಳುಗುತ್ತಿಲ್ಲ. ಅರೆ ಬರೆ ಬೇಯುತ್ತಿದೆ. ಹೇಗೋ ಅಂತೂ ಮುಗಿಸಿದೆ ಅನ್ನುವ ಹಾಗೆ ಮುಗಿಸಿ ಎದ್ದವಳೇ ಬಚ್ಚಲಿಗೆ ಹೋಗಿ ಬಾಗಿಲು ಹಾಕಿಕೊಂಡು ಮನಸಾರೆ ಅತ್ತಳು. “ಮಜ್ಗೆ ತೊಗೋ ರಾಮು” ಸುಬ್ಬಣ್ಣ ಕೂಗಿದ್ದು ಕೇಳಿತು. ʻಊಟ ಮುಗೀತಾ ಬಂತನೋ, ಇನ್ನು ಎಲ್ರೂ ಕೈತೊಳೆಕ್ ಬರ್ತರೆʼ ಎಂದು ತಡಬಡಿಸಿ ತಣ್ಣೀರಿನಲ್ಲಿ ಮುಖ ತೊಳೆದು ಬಂದಳು.
“ಓ ನಿಂದೇನೇನೆ ಅಡ್ಗೆ, ಚೆನ್ನಾಗಿತ್ತೇ” ಕೈ ತೊಳೆಯಲು ಬಂದ ಕೃಷ್ಣವೇಣಿ ತಾರೀಫು ಮಾಡಿದಳು. ಏನೂ ಮಾತಾಡದೆ ಸುಮ್ಮನೆ ನಕ್ಕಂತೆ ಮಾಡಿ ನಾಗು ಹೊರನಡೆದಳು. ಜಯಮ್ಮ, ನಾಗು, ಸುಬ್ಬಣ್ಣ, ರಾಮು ನಾಲ್ಕು ಜನರಿಗೂ ಎಲೆ ಹಾಕಿ ವಿಮಲಾ ಬಡಿಸತೊಡಗಿದಳು. ಎಲೆ ಮುಂದೆ ಕೂತವಳಿಗೆ ಊಟ ಸೇರಲಿಲ್ಲ. “ಕಷ್ಟ ಪಟ್ಟಿದೀಯ, ಸರ್ಯಾಗಿ ಊಟ ಮಾಡೆ” ಅಂದಳು ವಿಮಲಾ. ಹಾಗಂದಾಗ ಇನ್ನೂ ಬೇಜಾರಾಗಿ “ಯಾಕೋ ಸೇರ್ತಿಲ್ಲ” ಎಂದ ನಾಗು ಅರ್ಧಕ್ಕೇ ಊಟ ಬಿಟ್ಟು ಎದ್ದಳು. “ಹಾಳು ಹೊಟ್ಟೆಗೆ ಕಾಫಿ ಕುಡೀತಾಳೆ. ಹಾಳಾದ್ದು ಉಷ್ಣಪಿತ್ತ, ಹೇಳಿದ್ರೆ ಕೇಳಲ್ಲ” ಜಯತ್ತೆ ಎಷ್ಟು ಸಲ ತುಂಬಿ ತುಂಬಿ ಕೊಟ್ಟಳೋ ಎಂಬಂತೆ ಹೇಳುತ್ತಿದ್ದಳು. ʻಕೊಟ್ಟ ಮುಕ್ಕಾಲು ಲೋಟ ಕಾಫಿಗೆ ಇಷ್ಟು ಮಾತು ಬೇಕಾʼ ಎನ್ನಿಸಿ ಕೈ ತೊಳೆಯುತ್ತಿದ್ದವಳಿಗೆ ದುಃಖ ಉಕ್ಕಿ ಬಂತು. ತಡೆದುಕೊಂಡು ಹೊರಗೆ ಬಂದಳು. ಅಷ್ಟರಲ್ಲಾಗಲೇ ಯಾರೋ ವಡೆ, ಸಜ್ಜಪ್ಪ ಮತ್ತು ರವೆಉಂಡೆಗಳನ್ನು ಕವರುಗಳಲ್ಲಿ ಹಾಕಿ ಇರಿಸಿದ್ದರು. ಜಯಮ್ಮನ ಕೈಮೇಲೆ ನೀರು ಬಿದ್ದು ಬರುತ್ತಿದ್ದಂತೆಯೇ ಒಬ್ಬೊಬ್ಬರೇ ʻನಾನು ಹೊರಟೆʼ ಎಂದು ಹೊರಡಲು ತುದಿಗಾಲಲ್ಲಿ ನಿಂತಿದ್ದರು. ಜಯಮ್ಮನೂ ಸಂತೋಷದಿಂದ “ಈ ಸಲ ಎಲ್ರೂ ಬಂದಿದ್ದೇ ವಿಶೇಷ ಕಣ್ರೇ. ಇಕೊಳಿ ಪ್ರಸಾದ ತಗಂಡು ಹೋಗಿ” ಎನ್ನುತ್ತಾ ಎಲ್ಲರ ಕೈಗೂ ಪ್ರಸಾದದ ಕವರುಗಳನ್ನು ಎತ್ತಿ ಕೊಟ್ಟರು. ಇನ್ನೊಂದು ಉಳಿದಿತ್ತು. “ಶಾರದೆ ಗಂಡ ಹಾಗೆ ಹೊರಟ್ರನೊ. ಅವ್ಳಿಗೆ ಸಾಯಂಕಾಲ ಬರಕ್ಕೆ ಹೇಳಿದೀನಿ. ಆಗ ಕೊಟ್ರಾತು” ಎಂದು ಆ ಕವರನ್ನು ಅಡುಗೆಯ ಕಟ್ಟೆಯ ಮೂಲೆಯಲ್ಲಿ ಎತ್ತಿಟ್ಟರು.
ನಾಗು ದೇವರಮನೆಗೆ ಹೋಗಿ ಬೆಳಗ್ಗೆ ಉಟ್ಟು ಬಂದಿದ್ದ ಸೀರೆಯನ್ನು ತಂದಿದ್ದ ಚೀಲದಲ್ಲಿಟ್ಟುಕೊಂಡು ಬಂದಳು. “ಹೊರಟ್ಯನೇ. ನಂಗೂ ಸುಸ್ತಾಗಿದೆ, ಇದಿಷ್ಟು ಪಾತ್ರೆ ಬಿಡುವು ಮಾಡಿ ಹಾಕ್ತಿಯೆನೋ ಮಾಡಿದ್ದೆ” ಅಂದರು ಜಯಮ್ಮ. “ತುಂಬಾ ತಲೆ ನೋಯ್ತಿದೆ ಅತ್ತೆ. ನಂಗಾಗಲ್ಲ. ಇನ್ನು ಬರ್ತಿನಿ” ಎಂದಳು. “ಅಲ್ಲಿ ಉಳಿದಿದ್ಯಲ್ಲ ವಡೆ ಅದಷ್ಟನ್ನ ತಗಂಡು ಹೋಗೆ, ಮಕ್ಳು ತಿಂತರೆ” ಎಂದು ಅರೆಬರೆ ಬೆಂದಿದ್ದ ವಡೆಗಳ ಕಡೆ ಕೈತೋರಿದರು. “ಸಜ್ಜಪ್ಪ ರವೆ ಉಂಡೆ ಎಲ್ಲೋ ನಾಕೇ ನಾಕಿದೆ. ನಾಳೆ ಪಿತೃಶೇಷ ತಿನ್ನಬೇಕು ಅಂತಾರೆ ನಿಮ್ಮಾವ. ಅದ್ಕೇ ಎತ್ತಿಟ್ಟಿದೀನಿ. ಹಾಗ್ಲಕಾಯಿ ಗೊಜ್ಜೇನಾದ್ರೂ ಕೊಡ್ಲನೇ. ತಡಿ, ಯಾವ್ದಾರೂ ಪ್ಲಾಸ್ಟಿಕ್ ಕವರ್ ಇದ್ಯೆನೊ ನೋಡ್ತೀನಿ” ಎಂದು ಕವರ್ ಹುಡಕಕ್ಕೆ ಹೊರಟರು. “ಅತ್ತೆ ನಂಗೇನೂ ಬೇಡ. ಕರ್ದಿದ್ದು ತಿಂದ್ರೆ ಮಕ್ಳ ಮೈಗಾಗಲ್ಲ, ಹಾಗಲಕಾಯಿ ಗೊಜ್ಜು ನಮ್ಮನೇಲಿ ಯಾರ್‌ಗೂ ಸೇರಲ್ಲ” ಎಂದು ತನ್ನ ಹಳೆಯ ಸೀರೆಯ ಚೀಲವನ್ನೆತ್ತಿಕೊಂಡು ಪಡಸಾಲೆಯಲ್ಲಿ ಕುಳಿತಿದ್ದ ಮಾವನಿಗೆ “ಬರ್ತೀನಿ ಮಾವ” ಎಂದು ಹೊರಟಳು. “ಅವ್ಳಿಗೇನಾರೂ ಕೊಟ್ಟು ಕಳಿಸಿದ್ಯಾ” ಮಾವ ಕೇಳುತ್ತಿದ್ದರು. “ಅದೇನೋ, ಅವ್ಳಿಗೇನೂ ಬೇಡ್ವಂತೆ. ನಾವು ನಾರ್ಣಪ್ಪನವ್ರ ಮನೆ ತಪ್ಸಿ ಬಲವಂತವಾಗಿ ಕರ್ಸಿ ಅಡುಗೆ ಮಾಡಿಸ್ಕಂಡ್ವಿ ಅಂತ ಕೋಪ್ವೇನೋ” ಅತ್ತೆ ಹೇಳುತ್ತಿದ್ದದ್ದು ನಾಲ್ಕು ಮನೆಯಾಚೆಗೂ ಕೇಳುತ್ತಿತ್ತು. ಮೈಯಲ್ಲಿ ದೆವ್ವ ಹೊಕ್ಕವಳ ಹಾಗೆ ಮನೆಯ ಕಡೆ ಹೆಜ್ಜೆ ಹಾಕಿದಳು. ದಾರಿಯಲ್ಲಿ “ಕಾರ್ಮಿಕರಿಗೆ ಜಯವಾಗಲಿ; ಅವರ ಬೇಡಿಕೆಗಳು ಈಡೇರಲಿ; ದುಡಿತಕ್ಕೆ ತಕ್ಕ ವೇತನ ನಮ್ಮ ಹಕ್ಕು…..” ಹೀಗೆ ಏನೇನೋ ಘೋಷಣೆಗಳನ್ನು ಬರೆದಿದ್ದ ಫಲಕಗಳನ್ನು ಹಿಡಿದುಕೊಂಡು ಜಯಕಾರ ಹಾಕುತ್ತಾ ರಸ್ತೆಯಲ್ಲಿ ಮೆರವಣಿಗೆ ಹೋಗುತ್ತಿತ್ತು. ಅದೇನೋ ಅರ್ಥವಾಗದವರಂತೆ ನೋಡುತ್ತಾ ಮೆರವಣಿಗೆಗೆ ದಾರಿಬಿಟ್ಟು ನಿಂತು ಅವರು ಮುಂದೆ ಹೋದ ಮೇಲೆ ತನ್ನ ಮನೆಯ ದಾರಿಗೆ ತಿರುಗಿದಳು.
*********
ಥ್ಯಾಂಕ್ಯೂ ಟೀಮ್ ಸಂಗಾತಿ
ಎಷ್ಟು ಸಲ ಓದಿದ್ರೂ ಮತ್ತೆ ಮತ್ತೆ ಓದಬೇಕೆನಿಸುವ ನಿಮ್ಮ ಶೈಲಿ ತುಂಬಾ ಇಷ್ಟ ವಾಣಿಯವರೇ.