ಕವಿತೆ
ಇದ್ದಲ್ಲೆ ಇದ್ದು ಬಿಡಿ.

ಜ್ಯೋತಿ ಡಿ.ಬೊಮ್ಮಾ.
ಇದ್ದಲ್ಲೆ ಇದ್ದು ಬಿಡಿ.

ಇದ್ದಲ್ಲೆ ಇದ್ದು ಬಿಡಿ ನೀವು ಆರಾಮವಾಗಿ
ನಿಮ್ಮೂರಿಗೆ ನಿಮ್ಮ ಮನೆಗೆ ಕರೆಸಿಕೊಳ್ಳಲು
ಸರ್ಕಾರದ ಬಳಿ ಸೌಲಬ್ಯಗಳಿಲ್ಲ.
ವಿದೇಶದಿಂದ ಮರಳುವವರಿಗೆ
ಪ್ರತಿಷ್ಠಿತ ಶಾಲೆಗಳಲ್ಲಿ ಕಲಿಯುತ್ತಿರುವವರಿಗೆ
ಬಸ್ ,ಏರೋಪ್ಲೇನ್ ಗಳೆಲ್ಲ ಮೀಸಲಾಗಿವೆ.
ನೀವು ಇದ್ದಲ್ಲೆ ಇದ್ದುಬಿಡಿ
ಕಾರು ಜೀಪುಗಳಿದ್ದವರು ಬರಲಿ ಅವರವರ ಊರಿಗೆ
ಚೆಕ್ ಪೋಸ್ಟ್ ನಲ್ಲಿರುವವರಿಗೆ ಚಳ್ಳೆಹಣ್ಣು ತಿನ್ನಿಸಿ
ಹೊತ್ತು ಹರಿಯುವ ಮೊದಲು.
ನೀವು ಇದ್ದಲ್ಲೆ ಇದ್ದು ಬಿಡಿ
ಕೆಲಸವಿಲ್ಲ ,ತಿನ್ನಲು ಆಹಾರವಿಲ್ಲದಿದ್ದರೂ
ಹಿಡಿ ಅನ್ನಕೊಟ್ಟು ಕೈತೊಳೆದುಕೊಳ್ಳುವವರ
ದೊಡ್ಡಸ್ತಿಕೆಯ ಮುಂದೆ ಹಿಡಿಯಾಗುತ್ತ.
ಗೃಹ ಬಂಧನದಲ್ಲಿರುವವರು ಸಂಭ್ರಮಿಸಲಿ
ತಮ್ಮ ತಮ್ಮ ಸಂಸಾರದೊಂದಿಗೆ
ನೀವು ಇದ್ದಲ್ಲೆ ಇದ್ದು ಬಿಡಿ
ಸೂರಿಲ್ಲದೆ ,ಕೂಳಿಲ್ಲದೆ
ದಿನಗಳು ದೂಡುತ್ತ.
ಪರ್ಪ್ಯೂಮ್ ಹಾಕಿಕೊಂಡು ವಿದೇಶದಿಂದ ಬಂದು
ಸೋಂಕು ಹಬ್ಬಿಸುವವರನ್ನು ಬಿಟ್ಟು ಬಿಡಿ
ಕಾರ್ಮಿಕರ ಮೇಲೆ ಕ್ರಿಮಿನಾಶಕ ಸಿಂಪಡಿಸಿ
ವೈರಾಣುವನ್ನು ಓಡಿಸಿಬಿಡಿ.
ತುತ್ತಿನ ಚೀಲ ತುಂಬಿಕೊಳ್ಳಲು ರಾಜ್ಯ ಗಡಿಗಳನ್ನು
ದಾಟಿಹೋದ ಕಾರ್ಮಿಕರು ತಮ್ಮವರ
ಸೇರಬಯಸಿದ್ದು ತಪ್ಪೆ..!
ನೂರು ರಹದಾರಿ ಕಾಲ್ನಡಿಗೆಯಲ್ಲಿ ಕ್ರಮಿಸಿ
ಬಸವಳಿಯುತ್ತಿರುವ ನಿಮಗೆ ನಿಮ್ಮ ಗೂಡು
ಸೇರಿಸಲಾಗುತ್ತಿಲ್ಲ..ಕ್ಷಮಿಸಿ.
******
(ಕಾಯಕದಲ್ಲಿ ದೇವರನ್ನು ಕಾಣುತ್ತಿರುವ ಶ್ರಮಜೀವಿಗಳಿಗೆಲ್ಲ ಕಾರ್ಮಿಕ ದಿನಾಚರಣೆಯ ಶುಭಾಷಯಗಳು ).
ಸೂಪರ್
ಹೊರ ರಾಜ್ಯ, ಹೊರ ಜಿಲ್ಲೆಯಲ್ಲಿರುವ ಕಾರ್ಮಿಕರಿಗೆ ಅವರವರ ಊರಿಗೆ ತಲುಪಿಸುವ ವ್ಯವಸ್ಥೆ ಸರಕಾರ ಈಗಾಗಲೇ ಮಾಡಿದೆ. ಹಾನಗಲ್ ದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಚಿಂೋಳಿಯ ಕೊಟಗಾ ಗ್ರಾಮದ 22 ಕುಟುಂಬಗಳನ್ನು ಅವರ ಗ್ರಾಮಕ್ಕೆ ತಲುಪಿಸಿದ್ದೇವೆ.