ಕಾರ್ಮಿಕ ದಿನದ ವಿಶೇಷ-ಬರಹ

ಮನೆಯ ಕಾರ್ಮಿಕರು

ವಸುಂಧರಾ ಕದಲೂರು

   ‘ಮನೆಯ ಕಾರ್ಮಿಕರು’

     ‘ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವ ‘ ಎಂದು ಪ್ರಾರಂಭವಾಗುವ ಬಸವಣ್ಣನವರ ಒಂದು ವಚನವಿದೆ.  ‘ಕಾಯಕವೇ ಕೈಲಾಸ’ ವೆಂದು ಜೀವನದ ನಿಜತತ್ವ ಸಾರಿದ ಬಸವಣ್ಣನವರದು ಶರಣ ಸತಿ ಲಿಂಗ ಪತಿಯ ಭಾವ. 

    ಲಾಕ್ ಡೌನ್ ಸಮಯದಲ್ಲಿ ಮನೆವಾರ್ತೆಗೆ ಎಳಸುತ್ತಿರುವ ಗಂಡಂದಿರು ಅದೆಷ್ಟು ಜನವೋ.. ಬಹುಶಃ ಕೆಲವರಿಗಾದರೂ ಈಗ ಮನೆಕೆಲಸದ ಮಹತ್ವ ಅರಿವಾಗಿರಬಹುದು. ಇಲ್ಲವಾದರೆ, “ನನ್ನ ಹೆಂಡತಿಯೇ..? ಎಲ್ಲೂ ಕೆಲಸಕ್ಕೋಗಲ್ಲ, ಮನೇಲಿರ್ತಾಳೆ” ಎಂದು ಮೂಗು ಮುರಿಯುವ ಮಂದಿಗೆ ಈಗ ಅಲ್ಲವಾದರೆ, ಮತ್ತೆಂದೂ ಮನೆಕೆಲಸದ ಮಹತ್ವ ತಿಳಿಯದೇ ಹೋಗಬಹುದು. 

I won't do toilets': the unvarnished reality of life as a maid in ...

    ನಿಜವಾಗಿಯೂ ಅಡುಗೆ ಸುಮ್ಮನೆ ಆಗದು, ಬಟ್ಟೆ ಅದಷ್ಟಕ್ಕೆ ಸಾಪಾಗಿ ಗರಿಗರಿಯಾಗದು, ಪಾತ್ರೆ ಸುಮ್ಮನೆ ನೀರಿಗೆ ಹಿಡಿದರೆ ಫಳಫಳ ಹೊಳೆಯದು, ನೆಲ ತನ್ನಷ್ಟಕ್ಕೆ ಥಳಥಳಿಸದು. ಮಕ್ಕಳ ರಚ್ಚೆ  ಅದರಷ್ಟಕ್ಕೆ ನಿಲ್ಲದು, ಹಿರಿಯರ ಹಾರೈಕೆ ಹೊತ್ತೇರಿ ಇಳಿದಂತೆ ನಡೆದು ಹೋಗದು. ಆದರೆ ಇವೆಲ್ಲಾ ಬೆಳಗಾಗೆ ಎದ್ದು ಶೌಚಾದಿ ಕ್ರಿಯೆ ಮುಗಿಸಿ, ಬಿಸಿ ಬಿಸಿ ಕಾಫಿಯೋ – ಟೀಯೋ ಹೀರುತ್ತಾ ಲೋಕ ವಾರ್ತೆಗೆ ಕಣ್ಣುಕಿವಿ ಮನಸ್ಸುಕೊಟ್ಟು ಕುಳಿತುಕೊಳ್ಳುವ, ಕುಳಿತಲ್ಲಿಗೇ ಬರುವ ತಿಂಡಿಯನ್ನು ತಿಂದು, ಮಧ್ಯಾಹ್ನದ ಬುತ್ತಿ ಹಿಡಿದು ಆಫೀಸಿಗೆ ಹೊರಟು, ರಾತ್ರಿ ಹೊತ್ತಿಗೆ ಸುಸ್ತಾಗಿ ಬಂದು ಧೊಪ್ಪೆಂದು ಕುಕ್ಕರಿಸುತ್ತಿದ್ದ ಗಂಡಂದಿರಿಗೆ ಹೇಗೆ ತಿಳಿಯ ಬೇಕಿತ್ತು ಹೇಳಿ? ಈಗ ಲಾಕ್ ಡೌನಿನ ಸಲುವಾಗಿ ಮನೆಯಲ್ಲಿ ದಿನದೂಡುತ್ತಿರುವವರಿಗೆ ಈಗಲಾದರೂ ಇಷ್ಟೆಲ್ಲಾ ಮನೆವಾರ್ತೆಗಳು ಅರಿವಿಗೆ ಬಂದಿರಬಹುದೇ..? 

   ಎಲ್ಲರೂ ಹೀಗೆಯೇ ಎಂದು ಶರಾ ಬರೆಯುತ್ತಿಲ್ಲ. ಆದರೆ ಬಹುಪಾಲು ಹೀಗೆಯೇ ಎಂದು ಹೇಳಲು ಯಾವ ಭೀತಿಯೂ ಇಲ್ಲ. 

               ಇನ್ನು ಕೆಲವು ಹೆಂಗಸರ ಕತೆ ನೆನೆದುಕೊಂಡರೆ ಹರೋಹರ ಎಂದು ಕೈ ಮುಗಿಯಬೇಕು. ಅವರು ದಿನಂಪ್ರತಿ ಮನೆಯಲ್ಲೂ ಮಾಡಿಟ್ಟು, ಹೊರಗೂ ದುಡಿದು ಹೈರಾಣಾಗುತ್ತಿರುತ್ತಾರೆ. ಇಂತಹ ಹೆಂಗಸರ ಹಣೆಬರಹ ತಿದ್ದುವಂತಾಗಿದ್ದರೇ ಎನಿಸುತ್ತದೆ. ಪಾಪ, ಆಕೆ ಸರಿಯಾಗಿ ಉಂಡಿರುತ್ತಾಳೋ.., ಅರೆ ಹೊಟ್ಟೆ ಹಸಿದಿರುತ್ತಾಳೋ.., ಹಬ್ಬಕ್ಕೋ, ಖುಷಿಗೋ ಹೊಸಬಟ್ಟೆ ಕೊಂಡಿರುತ್ತಾಳೋ.. ಕೇಳುವವರಾರು? ‘ದುಡಿ ನೀ ಹೆಣ್ಣೇ.. ನಿನ್ನ ಹಣೆ ಬರಹವೇ ಇಷ್ಟು‘ ಎನ್ನುವವರೇ ನಮ್ಮಲ್ಲಿ ಬಹುಮಂದಿ. 

Can The Govt Get My Husband To Make Tea?' Indian Housewives are ...

      ಲಾಕ್ ಡೌನ್ ಸಮಯದಲ್ಲಂತೂ ಮುಂಚಿನಂತೆ ಮನೆ ಕೆಲಸದ ಸಹಾಯಕರಿಲ್ಲದೇ, ಮನೆಯವರ ಸಹಕಾರವೂ ಸಿಗದೆ ತಾನೇ ಎಲ್ಲಾ ಕೆಲಸ ಮಾಡಿಟ್ಟು, ಕಚೇರಿಗೂ ಓಡುವ ಮಹಿಳೆಯರ ಸ್ಥಿತಿ ನೆನೆದರೇ ಬೇಜಾರೆನಿಸುತ್ತದೆ. ನಾನೂ ಸಹ ಸರಕಾರಿ ನೌಕರಳೇ ಆಗಿದ್ದರೂ ಮನೆಯಲ್ಲಿ ನನ್ನ ಮಕ್ಕಳನ್ನು ಸಂಭಾಳಿಸಿಕೊಂಡು, ಅಡುಗೆ ಹಾಗೂ ಇತರೆ ಮನೆವಾರ್ತೆಗಳ ಕುರಿತು ನಾನು ತಲೆಕೆಡಿಸಿಕೊಳ್ಳದಂತೆ ನೋಡಿಕೊಳ್ಳುವಲ್ಲಿ ಅಪಾರ ಬೆಂಬಲ ನೀಡುತ್ತಿರುವ ನನ್ನತ್ತೆ ಹಾಗೂ ನಾದಿನಿಯರ ಸಹಕಾರವನ್ನು ಪ್ರತೀಕ್ಷಣವೂ ನೆನೆಯುತ್ತೇನೆ. ಮನೆಯವರ ಹೃತ್ಪೂರ್ವಕ ಸಹಕಾರವೇ ನಿಶ್ಚಿಂತೆಯಿಂದ ಹೊರಗಿನ ಕೆಲಸದಲ್ಲಿ ನಮ್ಮಂತಹ ಮಹಿಳೆಯರು ತೊಡಗಿಕೊಳ್ಳುವಂತೆ ನೋಡಿಕೊಳ್ಳುವುದು. ಅದು ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಆದರೆ ಈ ಬಗೆಯ ಸಹಕಾರ ಎಲ್ಲರಿಗೂ ದಕ್ಕುವುದೇ ಎಂಬುದು ನಿಜವಾದ ಪ್ರಶ್ನೆ. ಹಾಗಾಗಿ, ಮನೆ ಕೆಲಸಕ್ಕೆ, ಅಡುಗೆ ಕೆಲಸಕ್ಕೆ ಎಂದು  ಹೊರಗಿನಿಂದ ಬರುವ ಸಹಾಯಕರಿಗೆ ತಿಂಗಳಿಗೆ ಇಷ್ಟೆಂದು ಸಂಬಳ ನಿಗದಿ ಮಾಡಿ ನಿಗದಿತ ಅವಧಿಗೆ ಕೊಡುವ ನಾವು, ನಮ್ಮದೇ ಮನೆಯಲ್ಲಿ ನಮಗಾಗಿಯೇ ದುಡಿಯುವ ನಮ್ಮವರಿಗೆ ಅದೇನು ಬೆಲೆ ಕೊಡುತ್ತಿದ್ದೇವೆ ಎಂಬುದನ್ನು ಕುರಿತು ಆಲೋಚಿಸಲು ಇದು ಸಕಾಲ. 

   ‘ಕಾಯಕವೇ ಕೈಲಾಸ’ ಎಂದ ಬಸವಣ್ಣನವರಂತೆ  ದುಡಿಮೆಯನ್ನು ಗೌರವಿಸಬೇಕು ನಾವು. ಅವರ ವಚನದ ವಾಕ್ಯವೊಂದನ್ನು ಈ ಲೇಖನದ ಶುರುವಿಗೆ ಬಳಸಿರುವೆ. ಪೂರ್ಣ ವಚನದ ಸಾರ ಬೇರೆಯಿದೆ. ಆದರೆ, ಲೇಖನದ ಆಶಯವಿಷ್ಟೇ… ಮನೆವಾರ್ತೆಗೆ ಒದಗಿಬಂದು,  ಜೊತೆಗೆ ಕೈ ಜೋಡಿಸುವ ಸುಬುದ್ಧಿ ಲಾಕ್ ಡೌನಿನ ಕಾರಣಕ್ಕೆ ಈಗ ಮನೆಯ ಒಳಗೆ ಬಂಧಿಯಾಗಿರುವ ಎಲ್ಲರಿಗೂ ಬರಲಿ. ಮರೆಮಾಚಲ್ಪಟ್ಟಿರುವ ಮನೆಯ ಕಾರ್ಮಿಕರ ದುಡಿಮೆಯನ್ನು ಗುರುತಿಸಿ ಗೌರವಿಸುವ ಮನಸ್ಥಿತಿ ಎಲ್ಲರಲ್ಲೂ ಮೂಡಲಿ. 

           ••••••••••••••••••••••••••••••••

Leave a Reply

Back To Top