
ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಭಾಗ-6
ಭವಿಷ್ಯವೇನೋ ಭಗವಂತ ಬಲ್ಲ…
ಇನ್ನೊಂದೇ ಪರೀಕ್ಷೆ ಮುಗಿದರೆ ನನ್ನ ಪಿಯುಸಿ ಶಿಕ್ಷಣ ಮುಗಿಯುತ್ತದೆ ಅಮ್ಮಾ ಎಂದೊಬ್ಬ ಮಗ ಹೇಳಿದರೆ,
ಇನ್ನೊಬ್ಬ ಅಮ್ಮನ ಮಗ ಹತ್ತನೆಯ ತರಗತಿಯ ಪರೀಕ್ಷೆಗೆ ಓದುತ್ತಿದ್ದ. ಒಬ್ಬಳ ಮಗಳು ಎಂಟನೆಯ ಪರೀಕ್ಷೆಗೆ ಓದುತ್ತಿದ್ದರೆ ಮತ್ತೊಬ್ಬಳ ಮಗಳು ಡಿಗ್ರಿ ಪರೀಕ್ಷೆಗೆ ಓದುತ್ತಿದ್ದಳು. ಎಲ್ಲ ಶಾಲಾ ಕಾಲೇಜು ಬಾಗಿಲುಗಳು ಮುಚ್ಚಿ ‘ಕೊರೊನಾ ದೆಸೆಯಿಂದ ನಿಮಗೆ ಅನಿರ್ದಿಷ್ಟ ಅವಧಿಯವರೆಗೆ ರಜಾ’ ಎಂದವು. ಅನೇಕರು ಪರೀಕ್ಷೆ ಬರೆಯದೇ ಪಾಸಾದರು. ಅರ್ಧಮರ್ಧ ಪರೀಕ್ಷೆ ಬರೆದವರು ಮುಂದಿನ ಪರೀಕ್ಷೆಗಳಿವೆಯೇ ಇಲ್ಲವೇ ತಿಳಿಯದೇ ಪರದಾಡುತ್ತಿದ್ದಾರೆ. ನ್ಯೂಸ್ ನಲ್ಲಿ ಏನಾದರೂ ಪರೀಕ್ಷಾ ವಿವರ ಹೇಳಬಹುದೆಂದು ಟಿವಿಯ ಮುಂದೆ ಕುಳಿತ ವಿದ್ಯಾರ್ಥಿಗಳು ಕೊರೊನಾ, ರೋಗಿಗಳು, ಶಂಕಿತರು, ಕ್ವಾರಂಟೈನಿನಲ್ಲಿರುವವರು, ಕಾನೂನು ಮುರಿದವರ ಲೆಕ್ಕಾಚಾರಗಳನ್ನೆ ಮತ್ತೆ ಮತ್ತೆ ಪ್ರಸಾರ ಮಾಡುವುದನ್ನು ನೋಡಿ ನೋಡಿ ಬೇಸತ್ತು ಕಡು ಬಿಸಿಲು ಬರುವವರೆಗೂ ಮುಸುಕೆಳೆದು ಮಲಗಲು ಶುರು ಮಾಡಿದ್ದಾರೆ. ಮಗನೇ ಏಳೊ, ಮಗಳೇ ಏಳು… ಹಿಂದೆ ಲಾಲಿ ಹಾಡಿ ಮಲಗಿಸುತ್ತಿದ್ದ ಅಮ್ಮಂದಿರು ಈಗ ಎಂಟು ಗಂಟೆಗೆ ಉದಯ ರಾಗ ಹಾಡುತ್ತಿದ್ದಾರೆ.
‘ನಾವು ಯಂಗ್ ಜನರೇಶನ್ ಯೋಚಿಸುವುದು ನಿಮಗರ್ಥ ಅಗುವುದಿಲ್ಲ. ನಮ್ಮ ಫ್ರೆಂಡ್ಸ ನಮಗೆ ಸಿಗುತ್ತಿಲ್ಲ’ ಎನ್ನುವ ಮಕ್ಕಳನ್ನು ನೋಡುತ್ತಾ ಬಾರದ ಮುಗುಳುನಗುವನ್ನು ಮುಖದ ಮೇಲೆ ತರುವ ಪಾಡು ಎಲ್ಲ ಹೆತ್ತವರದ್ದು. ಮಕ್ಕಳಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಸಾಲಸೊಲ ಮಾಡಿ ಇದ್ದ ಬಿದ್ದ ಹಣ ಒಂದುಗೂಡಿಸಿ ವಿದೇಶಕ್ಕೆ ಮಕ್ಕಳನ್ನು ಕಳಿಸಿದ ಅಮ್ಮಂದಿರಂತೂ ಅಂಗೈಲಿ ಜೀವ ಹಿಡಿದಿದ್ದಾರೆ. ಇಪ್ಪತ್ತೈದರಿಂದ ಎಪ್ಪತ್ತೈದು ಲಕ್ಷದವರೆಗೆ ಸಾಲ ತೆಗೆದುಕೊಂಡು ವಿದೇಶಕ್ಕೆ ಹೋದವರು ಅಕ್ಷರಶಃ ಪರದೇಶಿಯಾಗಿದ್ದರೂ ದಿನವೂ
ಪೋನ್ ಮಾಡಿ ‘ನಾನಿಲ್ಲಿ ಸುರಕ್ಷಿತವಾಗಿದ್ದೇನೆ. ಚಿಂತೆ ಮಾಡಬೇಡಿ’ ಎಂದು ಹೆತ್ತವರಿಗೆ ಸಾಂತ್ವನ ಹೇಳುತ್ತಾರೆ. ಎದೆಯಲ್ಲಿ ಭಯದ ಭತ್ತ ಕುಟ್ಟಿ ಅಕ್ಕಿ ಮಾಡುತ್ತಿದ್ದೇವೆನಿಸುತ್ತದೆ.. ಎಂದೆಲ್ಲ ಅಳಲು ತೋಡಿಕೊಳ್ಳುವ ಗೆಳತಿಯರು ಕೆಲವರು. ಇನ್ನೂ ಕೆಲವರು ಎಷ್ಟ ನಮನಿ ಅಡುಗೆ ಮಾಡಿದ್ರೂ ಕಡಿಮೆ.. ಇಡೀ ದಿನಾ ಅಡುಗೆ ಮಾಡು.. ಪಾತ್ರೆ ತೊಳೆ ಎನ್ನುವುದೇ ಆಗಿದೆ. ವಿವಿಧ ಬಗೆಯ ಅಡುಗೆ ಮಾಡು ಎಂದು ಜೀವ ತಿನ್ನುತ್ತವೆ ಈ ಮಕ್ಕಳು.. ಒಂದೇ ಒಂದು ಕೆಲಸಾ ಮಾಡೋದಿಲ್ಲ ಮಕ್ಕಳು ಎಂದು ಗೋಳಾಡುತ್ತಾರೆ.
ಮಕ್ಕಳು ಮುಂದೇನು ಅರಿಯದೇ ಆತಂಕಕ್ಕೊಳಗಾಗಿದ್ದಾರೆ. ಅನೇಕ ಶಾಲಾ ಕಾಲೇಜುಗಳು ಆನ್ಲೈನ್ ಕ್ಲಾಸು ಆರಂಭಿಸಿದರೂ ಅದೆಷ್ಟು ಉಪಯುಕ್ತವೋ ತಿಳಿಯದಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳೊಂದಿಗೆ
ಪಾಲಕರ ಸ್ನೇಹಪೂರ್ವಕ ನಡೆ ಅತ್ಯಂತ ಮಹತ್ವದ್ದು. ಚಿಕ್ಕ ಪುಟ್ಟ ಮನೆಕೆಲಸದಲ್ಲಿ ಮಕ್ಕಳನ್ನು ತೊಡಗಿಸಿ. ಕೆಲಸ ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಬರದಿದ್ದರೆ ಕಟುವಾಗಿ ಟೀಕಿಸಬೇಡಿ. ಅನವಶ್ಯಕವಾಗಿ ಉಪದೇಶ ಮಾಡಬೇಡಿ. ಶಾಲಾ ಕಾಲೇಜುಗಳ ಬಾಗಿಲು ತೆರೆದು ಮಕ್ಕಳ ಭವಿಷ್ಯ ಉಜ್ವಲವಾಗುವ ದಿನಗಳು ಬರಲಿ..
(ಮುಂದುವರಿಯುವುದು….)
******

ಮಾಲತಿ ಹೆಗಡೆ