ಧಾರಾವಾಹಿ
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಅದ್ಯಾಯ–ಒಂದು
ಸುಮತಿ ಎನ್ನುವ ಹೂ
ನಾರಾಯಣನ್ ನಾಯರ್ ಹಾಗೂ ಕಲ್ಯಾಣಿ ಅವರ ಮುದ್ದಿನ ಮಗಳು ಸುಮತಿ.
ನಾರಾಯಣನ್ ದಂಪತಿಗೆ ನಾಲ್ವರು ಮಕ್ಕಳು .ಇಬ್ಬರು ಹೆಣ್ಣು ಇಬ್ಬರು ಗಂಡು. ಇವರಲ್ಲಿ ಎರಡನೆಯವಳು ನನ್ನ ಅಮ್ಮ ಸುಮತಿ. ಕೊಯಿಕ್ಕಲ್ ತರವಾಡಿನಲ್ಲಿ ಅವರ ಜನನ ಇಸವಿ ನನಗೆ ನೆನಪಿಲ್ಲ. ಸುಮಾರು ಸ್ವಾತಂತ್ರ್ಯ ಪೂರ್ವ ಅಂತ ಅಮ್ಮ ಹೇಳಿದ ನೆನಪು. ಅವರ ತಂದೆ ನಾರಾಯಣನ್ ನಾಯರ್ ಅಂದಿನ ತಿರುವಾಂಕೂರು ಸಂಸ್ಥಾನದ ಪತ್ತನಮ್ ತಿಟ್ಟ ತಾಲೂಕಿನ ಆಗರ್ಭ ಶ್ರೀಮಂತರಲ್ಲಿ ಒಬ್ಬರು. ಅಲ್ಲಿನ ಪಂಚಾಯತಿಯ ಚೇರ್ಮನ್ ಕೂಡಾ ಆಗಿದ್ದರು. ಅವರು ಆಗಿನ ಕಾಲದಲ್ಲಿ ನೂರು ಏಕರೆ ಜಮೀನನ್ನು ಹೊಂದಿದ್ದರು. ಊರಿನ ಸುತ್ತಮುತ್ತಲ ಹಳ್ಳಿಗಳಿಂದ ಕೆಲಸಕ್ಕೆಂದು ಅವರ ಮನೆಗೆ ಜನರು ಬರುತ್ತಾ ಇದ್ದರು.
ಭತ್ತ ತೆಂಗು ನೇಂದ್ರ ಬಾಳೆ ಅಡಿಕೆ ಹೀಗೆ ಇನ್ನಿತರ ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದರು. ಪಂಚಾಯತಿಯ ಚೇರ್ಮನ್ ಆದ ಕಾರಣ ಎಲ್ಲರೂ ಅವರನ್ನು ವಿಶೇಷವಾದ ಗೌರವ ಆದರದಿಂದ ಕಾಣುತ್ತಿದ್ದರು.
ಅವರೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅವರದು ಸರಳ ಗುಣ. ಅವರು ನ್ಯಾಯ ಪ್ರಿಯ ಹಾಗೂ ಶಿಸ್ತಿನ ಸಿಪಾಯಿ ಆಗಿದ್ದರು. ಅವರಿಗೆ ಅನುರೂಪಳಾದ ಅವರ ಧರ್ಮಪತ್ನಿ ಕಲ್ಯಾಣಿಯವರು ಕೂಡಾ ಅಷ್ಟೇ ಸರಳ ಮೃದು ಸ್ವಭಾವದವರು. ನೋಡಲು ಅತ್ಯಂತ ಸುಂದರಳೂ ಸುಶೀಲೆಯೂ ಆಗಿದ್ದರು. ಇವರಿಬ್ಬರ ಅನ್ಯೋನ್ಯತೆ ಎಂತಹವರಿಗೂ ಅಸೂಯೆ ಹುಟ್ಟಿಸುವಂತೆ ಇತ್ತು.
ಯಾವುದೇ ಸಮಯದಲ್ಲಿ ಅತಿಥಿಗಳು ಬರಲಿ ಅವರನ್ನು ಆದರದಿಂದ ಸತ್ಕರಿಸುತ್ತಿದ್ದರು ದಂಪತಿಗಳು. ಅವರದು ಸಂತೋಷ ತುಂಬಿದ ಸುಖೀ ಕುಟುಂಬ.
ನಾಲ್ವರು ಮಕ್ಕಳಲ್ಲಿ ಸುಮತಿ ತುಂಬಾ ಚುರುಕಿನ ಹುಡುಗಿ. ಓದಿನಲ್ಲಿ ತನ್ನ ಓರಗೆಯ ಮಕ್ಕಳಿಗೆ ಹೋಲಿಸಿದರೆ ತುಂಬಾ ಬುದ್ಧಿವಂತೆ . ಶಾಲೆಯ ಇತರ ಚಟುವಟಿಕೆಗಳಲ್ಲಿಯೂ ಮೊದಲಿಗಳು. ಶಾಲೆಗೆ ಹೋಗುವುದು ಎಂದರೆ ಎಲ್ಲಿಲ್ಲದ ಖುಷಿ. ಯಾವುದೇ ಕಾರಣಕ್ಕೂ ಶಾಲೆಗೆ ಗೈರು ಹಾಜರಿ ಆಗುತ್ತಲೇ ಇರಲಿಲ್ಲ. ಹಾಗೇ ಪ್ರೈಮರಿ ಶಾಲೆಯಲ್ಲಿ ಓದುತ್ತಾ ಇರುವಾಗ ಒಂದು ದಿನ ಶಾಲೆಗೆ ಹೊರಡುವ ತಯಾರಿಯಲ್ಲಿ ಇದ್ದಳು ಸುಮತಿ. ಆಗ ಅಕ್ಕನ ಗೆಳತಿ ಬಂದು ಗೇಟಿನ ಹೊರಗೆ ನಿಂತು ಸುಮತಿ ಹಾಗೂ ಅವಳ ಅಕ್ಕನನ್ನು ಕೂಗಿ ಹೇಳಿದಳು….. ಬೇಗ ಬನ್ನಿ ಶಾಲೆಗೆ ತಡವಾಗುತ್ತದೆ ತಡವಾಗಿ ಹೋದರೆ ಅಧ್ಯಾಪಕರು ಬೈಯುತ್ತಾರೆ. ಇದನ್ನು ಕೇಳಿದ ಸುಮತಿಯ ಅಕ್ಕ… ಬಾರೇ ಬೇಗ ತಡವಾಯಿತು ಎಂದು ತಂಗಿಯನ್ನು ಕೂಗಿ ಬೇಗನೇ ಗೇಟಿನ ಬಳಿ ನಿಂತಿದ್ದ ಕಾರಿನ ಹತ್ತಿರ ಹೋದಳು. ಸುಮತಿ ಇನ್ನೂ ಪುಟ್ಟ ಹುಡುಗಿ ಆಗ ತಾನೇ ಸ್ನಾನ ಮುಗಿಸಿ ಶಾಲೆಯ ಸಮವಸ್ತ್ರ ಧರಿಸುತ್ತ ಇದ್ದಳು. ಇರು ಅಕ್ಕ ಬಂದೆ ಎಂದು ಹೇಳಿ ಪುಸ್ತಕದ ಚೀಲವನ್ನು ತೋಳಿಗೆ ಏರಿಸಿ ಅಡುಗೆ ಮನೆಯಲ್ಲಿ ತಿಂಡಿ ಮಾಡುತ್ತಾ ಇದ್ದ ಅಮ್ಮ ಕಲ್ಯಾಣಿಗೆ ಅಮ್ಮಾ ಶಾಲೆಗೆ ಹೋಗಿ ಬರುತ್ತೇನೆ ಸಂಜೆಗೆ ನನ್ನಿಷ್ಟದ ತಿಂಡಿ ಏನಾದರೂ ಮಾಡಿ ಕೊಡು ಎಂದು ಹೇಳಿ ಗಡಿಬಿಡಿಯಲ್ಲಿ ಗೇಟಿನ ಬಳಿ ನಿಂತಿದ್ದ ಕಾರಿನೆಡೆಗೆ ಓಡಿದಳು. ಇವಳನ್ನು ಕಂಡೊಡನೆ ಇಬ್ಬರೂ ಜೋರಾಗಿ ನಗಲು ಪ್ರಾರಂಭಿಸಿದರು. ಸುಮತಿಗೆ ಗಾಭರಿ ಜೊತೆಗೆ ಅಳುವೂ ಬಂದಿತು. ಅಲ್ಲಿಂದಲೇ ಕೂಗಿ ಅಮ್ಮಾ ನೋಡು ಇಬ್ಬರೂ ನನ್ನ ನೋಡಿ ನಗುತ್ತಾ ಇದ್ದಾರೆ. ಯಾವಾಗಲೂ ಹೀಗೆಯೇ ಎಂದು ಕಣ್ಣು ಉಜ್ಜಿಕೊಂಡು ಹೋ ಎಂದು ಜೋರಾಗಿ ಅಳುತ್ತಾ ನಿಂತಳು ಸುಮತಿ. ಹೊರಗಿನ ಗಲಾಟೆಯನ್ನು ಕೇಳಿ ಅಡುಗೆ ಮನೆಯಿಂದ ಕಲ್ಯಾಣಿ ನನ್ನ ಅಜ್ಜಿ ಕೈ ಒರೆಸಿಕೊಂಡು ಏನು ಅನಾಹುತ ಮಾಡಿಕೊಂಡರೋ ಮಕ್ಕಳು ಎಂದು ಹೊರಗೆ ಬಂದು ಅಲ್ಲಿನ ದೃಶ್ಯವನ್ನು ಕಂಡು ಅವರು ಕೂಡಾ ಜೋರಾಗಿ ನಗುತ್ತಾ ನಿಂತರು. ಇದನ್ನು ಕಂಡ ಸುಮತಿ ಇನ್ನೂ ಜೋರಾಗಿ ಅಳುತ್ತಾ ಅಮ್ಮಾ ನೀನು ಕೂಡಾ ಇವರೊಂದಿಗೆ ಸೇರಿ ನಗುತ್ತಾ ಇದ್ದೀಯಾ ಎಂದಾಗ ಅಮ್ಮ ಕಲ್ಯಾಣಿ ವಿಷಯ ಏನೆಂದು ಕೂಡಾ ಗಮನಿಸದೆ ಅಳುತ್ತಾ ನಿಂತಿದ್ದ ಸುಮತಿಯ ಬಳಿಗೆ ಬಂದು ಮಗೂ ನೀನು ಬಟ್ಟೆ ತೊಟ್ಟಿರುವ ರೀತಿಯನ್ನು ಒಮ್ಮೆ ನೋಡಿಕೋ. ಆಗ ನೀನೇ ಬಿದ್ದು ಬಿದ್ದು ನಗುತ್ತೀಯಾ ಎಂದರು. ಅಲ್ಲಿಯವರೆಗೂ ಕಾರಣ ತಿಳಿಯದೇ ಅಳುತ್ತಾ ಇದ್ದ ಸುಮತಿ ಒಮ್ಮೆ ತಾನು ತೊಟ್ಟಿರುವ ಬಟ್ಟೆಯ ಮೇಲೆ ಕಣ್ಣಾಡಿಸಿ ನಾಚಿ ನೆಲ ನೋಡುತ್ತಾ ಮುಖ ಕೆಂಪಗೆ ಮಾಡಿಕೊಂಡು ಬಂದ ನಗುವನ್ನು ತಡೆಯತ್ತಾ ಅಲ್ಲಿ ನಿಲ್ಲದೇ ಒಳಗೆ ಓಡಿ ಬಿಟ್ಟಳು. ತಾನು ತೊಟ್ಟಿದ್ದು ಮಂಡಿಯ ಮೇಲೆವರೆಗೂ ಇದ್ದ ಶೆಮ್ಮೀಸ್ ಹಾಗೂ ಅದರ ಮೇಲೆ ಸಮವಸ್ತ್ರದ ಬಿಳೀ ಅಂಗಿ ಮಾತ್ರ. ಸಮವಸ್ತ್ರದ ನೀಲಿ ಬಣ್ಣದ ಲಂಗವನ್ನು ತೊಡಲು ಅಕ್ಕ ಹಾಗೂ ಗೆಳತಿ ಕೂಗಿದ ಗಡಿಬಿಡಿಯಲ್ಲಿ ಮರೆತೇ ಬಿಟ್ಟಿದ್ದಳು. ಅವಳ ಅಮ್ಮ ಒಳಗೆ ಕರೆದುಕೊಂಡು ಹೋಗಿ ಸಮವಸ್ತ್ರದ ಲಂಗ ಹಾಕಿ ಕೊಟ್ಟ ಮೇಲೆ ಸುಮತಿಗೆ ಸಮಾಧಾನ ಆಗಿದ್ದು. ನಂತರ ಖುಷಿ ಖುಷಿಯಿಂದ ಅಲ್ಲಿನ ವೈಸರಾಯ್ ಮಗಳ ಜೊತೆ ಅಕ್ಕನ ಕೈ ಹಿಡಿದು ಕಾರನ್ನು ಏರಿ ಶಾಲೆಗೆ ಹೋದಳು. ಅಕ್ಕ ತಂಗಿಯರು ದಿನವೂ ವೈಸರಾಯ್ ಮಗಳ ಜೊತೆಗೇ ಶಾಲೆಗೆ ಹೋಗುವ ವಾಡಿಕೆ.
ಸುಮತಿ ತುಂಬಾ ಮುಗ್ಧೆ ಸಾಧು ಸರಳ ನಡೆ ಯಾರನ್ನೂ ನೋಯಿಸಲು ಅವಳಿಂದ ಆಗದು. ಎಲ್ಲರ ಬಗ್ಗೆಯೂ ಕಾಳಜಿ ಆ ಸಣ್ಣ ವಯಸ್ಸಿನಲ್ಲೇ. ಮನೆಯ ಕೆಲಸಗಾರ ರೊಂದಿಗೆ ಕರುಣೆ ಸಹಾನುಭೂತಿಯಿಂದ ನಡೆದುಕೊಳ್ಳುತ್ತಾ ಇದ್ದಳು. ಎಲ್ಲರಿಗೂ ಅವಳು ಅಚ್ಚುಮೆಚ್ಚು. ಹೂ ಗಿಡಗಳು ಎಂದರೆ ಪಂಚಪ್ರಾಣ ಅವಳಿಗೆ. ಸಂಜೆ ಶಾಲೆಯಿಂದ ಬಂದ ಕೂಡಲೇ ಗಿಡ ಬಳ್ಳಿಗಳನ್ನು ಮಾತನಾಡಿಸಿಯೇ ಅವಳು ಮನೆ ಪ್ರವೇಶಿಸುತ್ತಾ ಇದ್ದದ್ದು. ಪ್ರಾಣಿ ಪಕ್ಷಿಗಳ ಮೇಲೂ ಎಲ್ಲಿಲ್ಲದ ಪ್ರೀತಿ. ಕೊಟ್ಟಿಗೆಯಲ್ಲಿ ಕಟ್ಟಿದ ಹಸು ಕರುಗಳನ್ನು ಪ್ರೀತಿಯಿಂದ ನೇವರಿಸಿ ಮಾತನಾಡಿಸುತ್ತಾ ಇದ್ದಳು. ಕೊಟ್ಟಿಗೆಯ ಪಕ್ಕದಲ್ಲಿ ಕಟ್ಟಿದ ಕುರಿ ಮರಿಯನ್ನು ಎತ್ತಿಕೊಂಡು ಮುದ್ದಿಸಿ ಅದು ಕೈಯಿಂದ ಬಿಡಿಸಿಕೊಂಡು ಓಡಿದರೆ ಹಿಂದೆಯೇ ತಾನೂ ಓಡಿ ಬಿದ್ದು ಪೆಟ್ಟು ಮಾಡಿ ಕೊಳ್ಳುವುದು ಸಾಮಾನ್ಯವಾಗಿ ಇದ್ದದ್ದೇ. ಅದೆಲ್ಲಾ ಲೆಕ್ಕವೇ ಅಲ್ಲ ಅವಳಿಗೆ. ಕೋಳಿ ಮರಿಗಳನ್ನು ಕಂಡರೆ ಹೇಳುವುದೇ ಬೇಡ. ಅವನ್ನು ಎತ್ತಿಕೊಂಡು ಹೆಗಲ ಮೇಲೆ ತಲೆ ಮೇಲೆ ಕೂರಿಸಿಕೊಂಡು ಆಡುವುದು ಅದನ್ನು ಕಂಡು ತಾಯಿ ಕೋಳಿ ಅವಳನ್ನು ಅಟ್ಟಿಸಿಕೊಂಡು ಬಂದಿದ್ದೂ ಇದೆ. ಒಮ್ಮೆ ಕೋಳಿ ಮರಿಯನ್ನು ಬಿಸಿ ತಟ್ಟೆಯ ಮೇಲೆ ಇಟ್ಟು ಅದು ಕಾಲು ಬಿಸಿಯಾಗಿ ಒಂಟಿ ಕಾಲಲ್ಲಿ ನಿಂತು ಕಾಲು ಬದಲಿಸಿದರೆ ಸುಮತಿಗೆ ಖುಷಿಯೋ ಖುಷಿ ಅಮ್ಮನನ್ನು ಕರೆದು ನೋಡು ಅಮ್ಮಾ ಕೋಳಿ ಮರಿ ಭರತ ನಾಟ್ಯ ಆಡುತ್ತಾ ಇದೆ ಎಂದು ಕೂಗಿ ಹೇಳುವುದು ಬೇರೆ. ಅವಳಿಗೆ ಗೊತ್ತಾಗಲಿಲ್ಲ ಅದು ಬಿಸಿ ತಡೆಯಲಾರದೆ ಹಾಗೆ ಕುಣಿಯುತ್ತಿದೆ ಎಂದು ಅವಳಿಗೆ ಅದೊಂದು ವಿನೋದ ಇದನ್ನು ಕಂಡ ಅಮ್ಮ ಕಲ್ಯಾಣಿ ಕೋಲು ತೆಗೆದುಕೊಂಡು ಗದರಿದ್ದು ಇದೆ.
ಹೀಗೆ ತುಂಟಾಟ ಆಡುತ್ತಾ ಅಕ್ಕ ಹಾಗೂ ತನ್ನ ಇಬ್ಬರೂ ಪ್ರೀತಿಯ ತಮ್ಮಂದಿರ ಜೊತೆ ಕಾಲ ಕಳೆಯುತ್ತಾ ಹೈ ಸ್ಕೂಲ್ ಮೆಟ್ಟಲು ಏರಿದಳು. ಅಲ್ಲಿಯೂ ಅವಳು ಓದಿನಲ್ಲಿ ಮುಂದೆ ಇದ್ದಳು. ಹತ್ತನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾದಳು. ಅವಳ ಖುಷಿಗೆ ಪಾರವೇ ಇರಲಿಲ್ಲ. ಆಗಿನ ಕಾಲದಲ್ಲಿ ಹತ್ತನೇ ತರಗತಿಯವರೆಗೂ ಹೆಣ್ಣು ಮಕ್ಕಳು ಓದುವುದೇ ಹೆಚ್ಚು.
ಸುಮತಿಗೆ ಇನ್ನೂ ಹೆಚ್ಚು ಓದಬೇಕು ಎನ್ನುವ ಆಸೆಯಿತ್ತು.
ಓದಿ ಒಳ್ಳೆಯ ಕೆಲಸ ಸಂಪಾದಿಸಿ ಸಮಾಜ ಸೇವೆಯಲ್ಲಿ ತೊಡಗಬೇಕು ಎನ್ನುವುದು ಅವಳ ಹೆಬ್ಬಯಕೆ ಆಗಿತ್ತು. ಸುಮತಿಯು ಚಟುವಟಿಕೆಯಿಂದ ಕೂಡಿದ ಉತ್ಸಾಹದ ಚಿಲುಮೆ ಆಗಿದ್ದಳು. ಹಾಗೇ ಸಣ್ಣ ವಯಸ್ಸಿನಿಂದಲೂ ಕೃಷ್ಣ ಭಕ್ತೆಯು ಕೂಡಾ ಆಗಿದ್ದಳು.
(ಮುಂದಿನ ಸೋಮವಾರ ಎರಡನೆಯ ಅಧ್ಯಾಯ ನಿರೀಕ್ಷಿಸಿ)
ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು.
ಚಂದದ ಬರವಣಿಗೆ.ಇನ್ನಷ್ಟು ಸಾಹಿತ್ತಿಕವಾಗಿ ಬರೆಯಬಹುದು.ಇತಿಹಾಸ ಓದಿದಂತಾಗಬಾರದು.ಬರೆಯಿರಿ.ಬದಲಾವಣೆ ಬರುತ್ತದೆ.
ಅದ್ಯಾಪಕರು ಅನ್ನುವ ಬದಲು ಗುರುಗಳು ಅಂದಿದ್ದರೆ ಚೆನ್ನಾಗಿತ್ತೇನೊ.
ನಿಮ್ಮ ಅಭಿಪ್ರಾಯಗಳನ್ನು ಗಮನದಲ್ಲಿ ಇಟ್ಟುಕೊಂಡು ಕಥೆ ಮುಂದುವರೆಸುವೆ.
ಧನ್ಯವಾದಗಳು.
ಹೃತ್ಪೂರ್ವಕ ಧನ್ಯವಾದಗಳು ಸಂಗಾತಿ