‘ಅಲ್ಲಮಪ್ರಭುವಿನ ವಚನ’ ವಿಶ್ಲೇಷಣೆ ಪ್ರೊ. ಜಿ ಎ.ತಿಗಡಿ ಸವದತ್ತಿ

ವಚನ ಸಂಗಾತಿ

‘ಅಲ್ಲಮಪ್ರಭುವಿನ ವಚನ’

ವಿಶ್ಲೇಷಣೆ ಪ್ರೊ. ಜಿ ಎ.ತಿಗಡಿ ಸವದತ್ತಿ

ಪ್ರಣತೆಯೂ ಇದೆ ಬತ್ತಿಯೂ ಇದೆ;
ಜ್ಯೋತಿಯ ಬೆಳಗುವಡೆ,
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ?
ಗುರುವಿದೆ ಲಿಂಗವಿದೆ;
ಶಿಷ್ಯನ ಸುಜ್ಞಾನ ಅಂಕುರಿಸದನ್ನಕ್ಕರ
ಭಕ್ತಿ ಎಲ್ಲಿಯದೊ?
`ಸೋಹಂ’ ಎಂಬುದಕ್ಕೆ ದಾಸೋಹವ ಮಾಡದಿರ್ದಡೆ
ಅತಿಗಳೆವ ನೋಡಾ ಗುಹೇಶ್ವರಾ.

   ಕೇವಲ ಹಣತೆ ಮತ್ತು ಬತ್ತಿ ಇದ್ದರೆ ದೀಪ ಬೆಳಗಲಾರದು.  ಅದಕ್ಕೆ ಅತ್ಯವಶ್ಯಕವಾದ ಎಣ್ಣೆಯು ಬೇಕೇ ಬೇಕು.  ಹೀಗೆ ಜ್ಯೋತಿ ಬೆಳಗಿ ಅದರ ಪ್ರಭೆ  ಹೊರಹೊಮ್ಮಬೇಕಾದರೆ ಹಣತೆ ಬತ್ತಿಯ ಜೊತೆಗೆ ಎಣ್ಣೆಯ ಅವಶ್ಯಕತೆ ಇದೆ.   ಹಾಗೆಯೇ ಭಕ್ತಿಯೆಂಬ ಜ್ಯೋತಿ ಹೊತ್ತಿ ಬೆಳಗಬೇಕಾದರೆ ಗುರು ಮತ್ತು ಲಿಂಗ ಇದ್ದರೆ  ಸಾಧ್ಯವಾಗದು.   ಶಿಷ್ಯನಲ್ಲಿ ಸುಜ್ಞಾನವೆಂಬ  ತೈಲ ಉದಿಸಿ ಬೆರೆಯಬೇಕು.  ಪರಾತ್ಪರ ಪರಮಸತ್ಯವಸ್ತುವಿನ  ಅರಿವು, ತಿಳುವಳಿಕೆಯೇ ಸುಜ್ಞಾನ.  ಆ ಪರಮಸತ್ಯವಸ್ತುವೇ ನಮ್ಮೆದುರು ಗುರು ಮತ್ತು ಲಿಂಗವಾಗಿ ಹೊರಹೊಮ್ಮಿವೆ ಎಂಬ ಅರಿವು ಹಾಗೂ ಆ ಕುರಿತ ಶ್ರದ್ಧೆ ಮೂಡಬೇಕು.  ತಾನೇ ದೇವ ಎಂಬ ‘ ಸೋಹಂ’ ಪ್ರಜ್ಞೆಯುಳ್ಳ  ಅನುಭಾವಿಯ ದರ್ಶನ ಪಡೆದಾಗ ಶಿಷ್ಯನಲ್ಲಿ ಭಕ್ತಿ ಭಾವವುಕ್ಕಿ,  ತನ್ನ  ತನು – ಮನ – ಧನಗಳನ್ನು  ಅವರಿಗೆ ಸಮರ್ಪಿಸಿ ಸೇವೆಗೈಯ್ಯುತ್ತ ದಾಸೋಹ ಮಾಡಬೇಕು.  ಇದೇ ಭಕ್ತಿ ಜ್ಯೋತಿಯನ್ನು  ಅಳವಡಿಸಿಕೊಂಡುದುದರ ಕುರುಹಾಗಿದೆ.   ತನ್ನ ಗುರುವಿನಿಂದ ಅನುಗ್ರಹಿತನಾಗಿ  ಲಿಂಗದೀಕ್ಷೆಯನ್ನು  ಪಡೆದುಕೊಂಡೂ,  ದಾಸೋಹ ಮಾಡದಿದ್ದರೆ ಆ ಭಕ್ತಿಗೆ ಏನೂ  ಅರ್ಥವಿಲ್ಲ.  ದಾಸೋಹಿಗಳಲ್ಲದ ಇಂತಹ ಡಾಂಬಿಕ ಭಕ್ತರನ್ನು  ಅಲ್ಲಮರು ವ್ಯಂಗ್ಯವಾಡಿ ಅಲ್ಲಗಳೆದಿದ್ದಾರೆ.

     ಹಣತೆ – ಬತ್ತಿ – ಎಣ್ಣೆ ಇವುಗಳ ಸಂಮಿಲನದಿಂದ ಜ್ಯೋತಿ  ಹೊತ್ತಿಕೊಂಡು ಸುತ್ತಲೂ ಪ್ರಭೆ ಬೀರುತ್ತದೆ. ಇವುಗಳಲ್ಲಿ ಒಂದು ಕೊರತೆಯಾದರೂ ಜ್ಯೋತಿ ಬೆಳಗಲಾರದು.  ಲೌಕಿಕದ ಈ ದೃಷ್ಟಾಂತವನ್ನು ನೀಡುವುದರ ಮೂಲಕ ಅಲ್ಲಮರು ಭಕ್ತಿ ಮೂಡಲು ‘ಗುರು- ಲಿಂಗ’ ವಿದ್ದರೆ ಸಾಲದು, ಶಿಷ್ಯನಲ್ಲಿ ಸುಜ್ಞಾನವೆಂಬ ತೈಲ ಉದಿಸಬೇಕು.  ಗುರು ಮತ್ತು ಲಿಂಗಗಳು ಆ ಪರಾತ್ಪರ ಪರಮಸತ್ಯ ವಸ್ತುವಿನ ಸಾಕಾರ ರೂಪಗಳು.  ಇವುಗಳ ಮೇಲೆ ಅಚಲ ಶ್ರದ್ಧೆ, ನಿಷ್ಠೆಗಳು ಮೂಡಿ ಸಾಕ್ಷಾತ್ ಶಿವನೇ ಗುರು ರೂಪವಾಗಿ ಬಂದಿದ್ದಾನೆಂದು ನಂಬಿ,  ಲಿಂಗದಲ್ಲಿ ಆತನ ಚಿತ್ಕಳೆಯ ಸ್ವರೂಪವನ್ನು ನಿರಂತರವಾಗಿ ಕಾಣುತ್ತಿರಬೇಕು.  ಇಂತಹ ಸದ್ಭಾವಪೂರ್ಣ ಜ್ಞಾನವು ಮೂಡಿದಾಗ ಭಕ್ತಿ ಎಂಬ ಜ್ಯೋತಿ ಹೊತ್ತಿಕೊಂಡು ಸರ್ವಾಂಗದಲ್ಲಿ ಅದರ ಪ್ರಭೆ ಪಸರಿಸತೊಡಗುತ್ತದೆ.    ಇಲ್ಲಿ, ‘ ಗುರು ಹಣತೆ, ಲಿಂಗ ಬತ್ತಿ,  ಸುಜ್ಞಾನವೆಂಬುದು ತೈಲವಾಗಿ ಭಕ್ತಿಯ ಜ್ಯೋತಿ ಬೆಳಗುತ್ತದೆ.  ಒಂದು ವೇಳೆ ಶಿಷ್ಯನಲ್ಲಿ ಸುಜ್ಞಾನವೆಂಬುದು ಉದಯಿಸದಿದ್ದರೆ ಭಕ್ತಿ ಎಂಬ ಜ್ಯೋತಿ ಬೆಳಗಲಾರದು.

      ‘ ಸೋಹಂ ‘ ಎಂದರೆ ನಾನೇ ದೇವರು, ಪರಾತ್ಪರ ಪರಮ ಸತ್ಯ .  ಅನುಭಾವಿ ಶರಣರೆಲ್ಲರೂ ಸೋಹಂಭಾವಿಗಳೇ ಆಗಿದ್ದಾರೆ.  ಅವರ  ದರ್ಶನವಾದ ಕೂಡಲೇ ಶಿಷ್ಯ ದಾಸೋಹಕ್ಕೆ ಅಣಿಯಾಗಬೇಕು.   ದಾಸನೆಂಬ ಭಾವವೇ ದಾಸೋಹಕ್ಕೆ ಮೂಲ.  ಗುರುವಿನ (ತನ್ನರಿವೇ ಗುರು) ಮನದಿಂಗಿತವನ್ನು ಅರಿತು ದಾಸೋಹಗೈಯ್ಯಬೇಕಾದದ್ದು ಶಿಷ್ಯನ ಪರಮ ಕರ್ತವ್ಯ,  ಹಾಗೂ ಭಕ್ತನ ಲಕ್ಷಣವೂ ಆಗಿದೆ.  ಭಕ್ತನೆಂದು ಹೇಳಿಕೊಂಡೂ  ಭಕ್ತಿಯ ರೂಪವಾದ ದಾಸೋಹವನ್ನು ಮಾಡದಿದ್ದರೆ ಆತ ಭಕ್ತನೇ ಅಲ್ಲವೆನ್ನುತ್ತಾರೆ ಅಲ್ಲಮರು. ಅಷ್ಟೇ ಅಲ್ಲ ಇಂತಹ  ಬಾಯ್ಮಾತಿನ, ಬಾಯ್ಬಡುಕ ಶಿಷ್ಯರನ್ನು  ಅಲ್ಲಗಳೆಯುತ್ತಾರೆ.
———————————–

ಪ್ರೊ. ಜಿ ಎ.ತಿಗಡಿ.

3 thoughts on “‘ಅಲ್ಲಮಪ್ರಭುವಿನ ವಚನ’ ವಿಶ್ಲೇಷಣೆ ಪ್ರೊ. ಜಿ ಎ.ತಿಗಡಿ ಸವದತ್ತಿ

  1. ಅತ್ಯಂತ ಮನೋಜ್ಞ, ಸರಳ‌ ಸುಂದರ ವ್ಯಾಖ್ಯಾನ. ಧನ್ಯವಾದಗಳು ಗುರುವೆ.‌

Leave a Reply

Back To Top