ಕಾವ್ಯ ಸಂಗಾತಿ
ರೇಖಾ ಗಜಾನನ
ಹೂ ಬಿಡುವ ಗಿಡ
ನಾನು ಪರಿಮಳದ ಹೂ
ಬಿಡುವ ಗಿಡವೆಂದು ತಿಳಿಯುವ ತನಕ
ಆರಾಮಾಗಿದ್ದೆ ಸಿಕ್ಕ ಸತ್ವವ ಹೀರಿ
ಬದುಕ ಧೇನಿಸುವುದೊಂದೇ ತವಕ
ಬೆಳೆಯುತ್ತಿದ್ದೆ
ನನ್ನತನವ ಸಾಕಾರಗೊಳಿಸಿ
ವಿಕಾಸದ ಹಾಡಿಗೆ
ನನ್ನದೇ ಲಯ ತಾಳ ಬೆರೆಸಿ
ಪುಟಾಣಿ ಕವಲುಗಳಾಗಿ
ಎಲೆಯ ಮೇಲೆ ಎಲೆ ಮೂಡಿ
ಹರಡಿಕೊಂಡರೂ ತಂಟೆ ತಕರಾರಿಲ್ಲ
ಒಂದಿಂಚೂ ಬಸವಳಿದಿರಲಿಲ್ಲ ಬಾಡಿ
ಬಲಿದ ಒಡಲಿಗೋ ಸಗ್ಗದ ಮುದ
ಮೂಡಿ ಬಂದಿತು ಸಾಲು ಮೊಗ್ಗು
ವರ್ಣ ರಂಜಿತ ಹೂಗಳಲಿ ಅದೆಂಥ
ಹೊಸ ಪರಿಮಳದ ಹಿಗ್ಗು
ಶುರುವಾಯಿತಲ್ಲಿ ಹೊಸ ಒಸಗೆ
ಹರಿದಳು ಗುಣಗಾನದ ಗಂಗೆ
ಉನ್ಮಾದದಲಿ ತೇಲಿ ಹೋಗದಂತೆ
ಕಟ್ಟಬೇಕಲ್ಲವೇ ಒಡ್ಡು ಒಳಗೆ
ಅಯ್ಯೋ
ನಾನೀಗ ಹೂ ಬಿಡುವ ಗಿಡ
ಸುತ್ತ ಬಿದ್ದಿತು ಮುಳ್ಳಿನ ಬೇಲಿ
ಯಾರಾದರೂ ಕದ್ದೊಯ್ದರೆ
ಆಗಬಹುದಲ್ಲವೇ ಈ ಸೈಟು ಖಾಲಿ
ಬಿಟ್ಟ ಹೂ ಚಿಕ್ಕದೆಂದು ಜರಿದರೆ
ಕಳ್ಳ ಕೈಯೊಂದು ಮೊಗ್ಗಲ್ಲೇ ಹರಿದರೆ
ಹುಳ ಹುಪ್ಪಟಿ ತಿಂದು ಅಂದ ಕೆಡಿಸಿದರೆ
ಮನದಲ್ಲಿ ಕುಂಟು ನೆಪದ ರೆ.. ರೆ ..ರೆ..
ನಾನು ಹೂ ಬಿಡುವ ಗಿಡ
ತಿಳಿದ ಮೇಲೆ ಎಲ್ಲಾ ಸಲೀಸಲ್ಲ
ಮೈ ಅರಳಿಸಲೇನೊ ಅಂಜಿಕೆ
ಹೂವಾಗಿ ನಗುವುದು ಸುಲಭವಲ್ಲ
ಅಸೂಯೆ ಬಳ್ಳಿ ಅವರಿಸಿ ಬಂದು
ಕತ್ತು ಹಿಸುಕುವ ಆತಂಕ
ಜಾಗ್ರತೆ.. ಎನ್ನುವುದು ಬೇರು
ಸಿಗದಿದ್ದರೂ ಸರಿ ಪ್ರಶಂಸೆಯ ಅಂಕ
ನಾನೀಗ ಹೂ ಬಿಡುವ ಗಿಡ
ದಯಮಾಡಿ ದೃಷ್ಟಿದಾರವಿದ್ದರೆ ಕಟ್ಟಿಬಿಡಿ
ಕನಸ ದಾರಿಯ ತುಂಬಾ
ಅರಳಿ ಕಂಪೆರೆಯಲೆಂದು ಹರಸಿಬಿಡಿ
ರೇಖಾ ಗಜಾನನ
ತುಂಬಾ ಸುಂದರವಾಗಿ ಭಾವ ವ್ಯಕ್ತವಾಗಿದೆ ಗೆಳತಿ..
ಹೂವ ರಕ್ಷಣೆ ಗಿಡಕ್ಕಿಂತ ಸುತ್ತಲ ಪರಿಸದ ಜವಾಬ್ದಾರಿ ಆಗಬೇಕು…
ಗಿಡದ ಸಂಕಟವನರಿಸಿ, ಸಾಮಾಜಿಕ ಅರಿವು ಮೂಡಿಸುವ ಪ್ರಯತ್ನ ಯಶಸ್ವಿಯಾಯಿತು ಗೆಳತಿ…
ಶುಭವಾಗಲಿ ಗೆಳತಿ
ಧನ್ಯವಾದ ಗೆಳತಿ
ಸೂಪರ್ ಚೆನ್ನಾಗಿ ಮೂಡಿ ಬಂದಿದೆ.