ಅಂಕಣ ಬರಹ

ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಪ್ರಸಕ್ತ ಸಂಗಾತಿಯಲ್ಲಿ ಸಾವಿಲ್ಲದ ಶರಣರು ಎಂಬ ಮಾಲಿಕೆಯಲ್ಲಿ ಪ್ರತಿ ವಾರ ತಮ್ಮ ಲೇಖನವನ್ನು ಪ್ರಕಟಿಸುವರು, ಅವರ ಜ್ಞಾನ ವಿದ್ವತ್ತು ಅನುಭವಗಳನ್ನು ಮುಂಬರುವ ದಿನಗಳಲ್ಲಿ ಓದಿ ಆನಂದಿಸಿರಿ

ಸಾವಿಲ್ಲದ ಶರಣರು

ಸಾವಿಲ್ಲದ ಶರಣ ಡಾ ಡಿ. ಸಿ. ಪಾವಟೆ

ಗೋಕಾಕ ತಾಲೂಕಿನ ಅತ್ಯಂತ ಕುಗ್ರಾಮ  ಮಮದಾಪುರ ಚಿಂತಪ್ಪ ಎಂಬ ಲಿಂಗಾಯತ ಶಿವ ಸಿಂಪಿ  ಸಮಾಜದ ಸಾಧಾರಣ ವರ್ತಕ ಕೃಷಿಕ ಮನೆ ತುಂಬಾ ಮಕ್ಕಳು . ಒಮ್ಮೆ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಅಂಕಲಗಿ ಮಾರ್ಗವಾಗಿ ಮಮದಾಪೂರಕ್ಕೆ ಬಂದು ಶ್ರೀ  ಚಿಂತಪ್ಪ ಪಾವಟೆ ಅವರ ಮನೆಯಲ್ಲಿ ತಂಗಿದರು. ದುಂಡು ಮುಖದ ದಾದಪ್ಪ ಅಥಣಿಯ ಶಿವಯೋಗಿಗಳ ಜೊತೆಗೆ ಸುತ್ತ ಮುತ ಓಡಾಡಿಕೊಂಡು ಇರುತಿದ್ದ. ದಾದಪ್ಪ ತುಂಬಾ ಚುರಕು ಶ್ರೀಗಳಿಗೆ ಬೆಳಿಗ್ಗೆ ನೀರು ಕಾಯಿಸಿಕೊಡುವುದು ಅವರಿಗೆ ಸ್ನಾನಕ್ಕೆ  ನೀರು ಕೊಡುವುದು ಹೀಗೆ ಶಿವಯೋಗಿಗಳ ಕೃಪಾಕಟಾಕ್ಷಕ್ಕೆ   ಒಳಗಾದವರು. ತಂದೆ ಚಿಂತಪ್ಪ ಒಮ್ಮೆ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳನು ತನ್ನ ಮಗ ದಾದಪ್ಪನ ಶಿಕ್ಷಣ ಭವಿಷ್ಯದ  ಚಿಂತೆ ಮಾಡುತ್ತಿರುವಾಗ ಶ್ರೀಗಳು ಮುಗುಳು ನಕ್ಕು ಚಿಂತಪ್ಪ ನೀನು ದಾದಪ್ಪನ ಚಿಂತೆ ಬಿಡು ಅವನು ಸಮಾಜದ ಶಿಕ್ಷಣದ ನಂದಾದೀವಿಗೆಯಾಗುತ್ತಾನೆ ಎಂದು ಹರಸಿದರು. ಅವರೇ ನಮ್ಮ  ಡಾ  ಡಿ. ಸಿ. ಪಾವಟೆ ಅವರು ದಕ್ಷ ಆಡಳಿತಗಾರರಾಗಿ, ಶಿಕ್ಷಣತಜ್ಞರಾಗಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭದ್ರಬುನಾದಿ ಹಾಕಿದವರು.

     ಜನನ ಬಾಲ್ಯ ಶಿಕ್ಷಣ

ದಾನಪ್ಪ ಚಿಂತಪ್ಪ ಪಾವಟೆಯವರು  1899ರ  ಆಗಸ್ಟ್‌ 2ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಮದಾಪುರದಲ್ಲಿ ಜನಿಸಿದರು.   ಡಾ ಡಿ ಸಿ ಪಾವಟೆಯವರ ಪ್ರಾರಂಭಿಕ ಶಿಕ್ಷಣ ಗೋಕಾಕ ಮತ್ತು ಕೊಲ್ಲಾಪುರದಲ್ಲಿ ನಡೆಯಿತು. 1923ರಲ್ಲಿ  ಧಾರವಾಡದ ಕರ್ನಾಟಕ ಕಾಲೇಜಿನಿಂದ ಗಣಿತದ ಪ್ರಥಮದರ್ಜೆ ಆನರ್ಸ್  ಪದವಿ ಪಡೆದ ಪಾವಟೆಯವರು  ಲಿಂಗರಾಜ ಟ್ರಸ್ಟ್ ನೀಡಿದ  ಬೆಂಬಲದಿಂದ  ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಸಿಡ್ನಿ  ಸಸೆಕ್ಸ್‌ ಕಾಲೇಜು ಸೇರಿ ಗಣಿತಶಾಸ್ತ್ರದ ಟ್ರೈಪ್ರಾಸ್‌ ಭಾಗ 1 ಮತ್ತು 2ರಲ್ಲಿ ಪ್ರಥಮಶ್ರೇಣಿಯಲ್ಲಿ ಉತ್ತೀರ್ಣತೆ ಸಾಧಿಸಿದರು. 1927ರಲ್ಲಿ ರ್‍ಯಾಂಗ್ಲರ್ ಆಗಿ ಆಯ್ಕೆಗೊಂಡು ಕಾಲೇಜಿನ ಸಂಶೋಧನ ವಿದ್ಯಾರ್ಥಿವೇತನವನ್ನು ಪಡೆದು ಸಂಶೋಧನೆಯನ್ನೂ ಪೂರ್ಣಗೊಳಿಸಿ  1928ರಲ್ಲಿ ಭಾರತಕ್ಕೆ ಹಿಂದಿರುಗಿದರು.

 ಸೇವೆ ಮತ್ತು  ವೃತ್ತಿ



ಡಾ ಡಿ ಸಿ ಪಾವಟೆ ಅವರು ಭಾರತಕ್ಕೆ ಮರಳಿದ ಕೂಡಲೇ  ಬನಾರಸ್‌ ಹಿಂದು ವಿಶ್ವವಿದ್ಯಾಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರಾಗಿ 1928-30 ಅವಧಿಯಲ್ಲಿ  ಸೇವೆ ಸಲ್ಲಿಸಿದರು. ಮುಂದೆ ತಮ್ಮ ಹುಟ್ಟೂರಿಗೆ ಹತ್ತಿರವಾಗ ಬೇಕೆಂದು ಮುಂಬೈ ಕಡೆಗೆ ಪಯಣ ಬೆಳೆಸಿದರು. ಡೆಪ್ಯೂಟಿ ಚೆನ್ನಬಸಪ್ಪನವರ ಒತ್ತಾಸೆಯ ಮೇರೆಗೆ  1930ರಲ್ಲಿ ಮುಂಬಯಿ ವಿದ್ಯಾ ಇಲಾಖೆ ಸೇರಿ ಶಿಕ್ಷಣ ಖಾತೆಯ ಹಲವಾರು ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿ  1947ರಲ್ಲಿ ಶಿಕ್ಷಣ  ಇಲಾಖೆಯ ನಿರ್ದೇಶಕರಾದರು. ಈ ಅವಧಿಯಲ್ಲಿ ಅವರು ಮುಂಬಯಿ ಪ್ರಾಂತ್ಯದ ಶಿಕ್ಷಣ ಸುಧಾರಣೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದರು.

ಕರ್ನಾಟಕ ವಿಶ್ವ ವಿದ್ಯಾಲಯದ  ನವ ನಿರ್ಮಾಪಕ


       ನಿವೃತ್ತಿಯ ನಂತರ ಪಾವಟೆಯವರು ಕರ್ನಾಟಕ ವಿಶ್ವವಿದ್ಯಾಲಯದ  ಕುಲಪತಿಗಳಾಗಿ ನೇಮಕಗೊಂಡರು.   ಕುಲಪತಿಗಳಾಗಿ ಬಂದನಂತರ  ಕರ್ನಾಟಕ  ವಿಶ್ವವಿದ್ಯಾಲಯವನ್ನು ಮಾದರಿಯ ವಿಶ್ವವಿದ್ಯಾಲಯವನ್ನಾಗಿಸಬೇಕೆಂಬುದನ್ನು ಬಿಟ್ಟು ಬೇರೇನನ್ನೂ ಯೋಚಿಸದೆ ಸದಾ ವಿಶ್ವವಿದ್ಯಾಲಯದ  ಉನ್ನತಿಗಾಗಿ ದುಡಿದರು. ವಿದ್ಯಾರ್ಥಿಗಳಿಗೆ ಉಚ್ಚಮಟ್ಟದ ಶಿಕ್ಷಣ ದೊರೆಯಬೇಕು ಸ್ಪರ್ಧಾತ್ಮಕ ಜಗತ್ತಿನಲ್ಲಿ  ಉತ್ತರ ಕರ್ನಾಟಕದ ಮಕ್ಕಳು  ಜಯ ಗಾಳಿಸುವಂತಾಗಬೇಕು , ಕನ್ನಡನಾಡಿನ ವಿದ್ಯಾರ್ಥಿಗಳು ಆದರ್ಶ ವಿದ್ಯಾರ್ಥಿಗಳಾಗಬೇಕು, ವಿಶ್ವವಿದ್ಯಾಲಯದ  ಹೆಸರು ಹೇಳುವಂತಾಗಬೇಕು, ಕನ್ನಡನಾಡಿಗೆ ಕೀರ್ತಿ ತರಬೇಕು ಎಂಬ ಆಶಯಗಳನ್ನು ಹೊಂದಿದ್ದಷ್ಟೇ ಅಲ್ಲದೆ ವಿಶ್ವವಿದ್ಯಾಲಯದಲ್ಲಿ  ನೆಲೆಸುವ ಪ್ರಾಧ್ಯಾಪಕರು, ಉದ್ಯೋಗಿಗಳು ಮತ್ತು  ಅವರ ಕುಟುಂಬಗಳು ನೆಮ್ಮದಿಯ ಜೀವನ ನಡೆಸಬೇಕೆಂಬ ಸಹೃದಯತೆಯಿಂದ ಅವರಿಗೆ ಹಲವಾರು ಅನುಕೂಲಗಳನ್ನು ಕಲ್ಪಿಸಿದರು.

    ಹಲವಾರು ಮಂದಿ ಶಿಕ್ಷಣವೇತ್ತರ ಅಹರ್ನಿಶಿ ದುಡಿತದ ಫಲವಾಗಿ ರೂಪುಗೊಂಡ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಆರ್.ಎ. ಜಾಗೀರದಾರ,ಸಿ ಸಿ  ಹುಲಕೋಟಿ ಇವರ ನಂತರ ಕುಲಪತಿಗಳಾಗಿ ಆಯ್ಕೆಯಾಗಿ 1954ರ ವರ್ಷದಲ್ಲಿ ಬಂದ  ಡಿ. ಸಿ. ಪಾವಟೆಯವರು  ಒಟ್ಟು 14 ವರ್ಷಗಳ ಕಾಲ ಆಡಳಿತ ನಡೆಸಿ  350 ಎಕರೆ ವಿಸ್ತೀರ್ಣದ ಛೋಟಾ  ಮಹಾಬಳೇಶ್ವರ ಗುಡ್ಡದ ಮೇಲೆ ಕರ್ನಾಟಕ ವಿಶ್ವವಿದ್ಯಾಲಯವು  ಕಂಗೊಳಿಸುವಂತೆ ಮಾಡಿದರು.

ಎಲ್ಲಾ ವಿಭಾಗದ ಕಟ್ಟಡದ ನಿರ್ಮಾಣದ ಜೊತೆಗೆ ಆಯಾಯ ವಿಭಾಗಗಳಿಗೆ ಸಮರ್ಥರಾದ ವಿದ್ವಾಂಸರನ್ನೂ ಆಯ್ಕೆಮಾಡಿಕೊಂಡರು. ಗ್ರಂಥಭಂಡಾರವನ್ನೂ ಆಧುನಿಕ ರೀತಿಯಲ್ಲಿ ಸಜ್ಜುಗೊಳಿಸಿದರು.  ಶೈಕ್ಷಣಿಕವಾಗಿ ಸುಧಾರಣೆ ತರಲು ಯೂರೋಪ್‌, ಅಮೆರಿಕ, ಏಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ದೇಶಗಳನ್ನೂ ಸಂದರ್ಶಿಸಿದರು. ಜಿನೀವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಭಾರತೀಯ ನಿಯೋಗದ ನಾಯಕರಾಗಿದ್ದರು. 1955-56ರಲ್ಲಿ ಅಧಿಕೃತ ಭಾಷಾ ಸಮಿತಿಯ ಸದಸ್ಯರಾಗಿ, ಭಾರತ ಸರಕಾರದ ಕೇಂದ್ರ ಸಲಹಾ ಮಂಡಳಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದರು.ಉತ್ತರಕ ಕರ್ನಾಟಕ ವಿಶೇಷವಾಗಿ ಕೆ ಎಲ್ ಈ ಶಿಕ್ಷಣ ಸಂಸ್ಥೆಗೆ ಅಪಾರ ಕೊಡುಗೆ ನೀಡಿದ ಡಾ ಡಿ ಸಿ ಪಾವಟೆಯವರು ನಿತ್ಯ ಚಿರಸ್ಮರಣೀಯರು.

ಪ್ರಶಸ್ತಿಗಳು


 ಡಾ ಡಿ. ಸಿ. ಪಾವಟೆಯವರ ಸರ್ವತೋಮುಖ ಸೇವೆಗೆ ಭಾರತ ಸರ್ಕಾರವು 1966ರಲ್ಲಿ  ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.  1967ರಲ್ಲಿ ಅವರನ್ನು ಪಂಜಾಬಿನ ರಾಜ್ಯಪಾಲರನ್ನಾಗಿ ನೇಮಿಸಿದಾಗ 5 ವರ್ಷಗಳ ಕಾಲ ಪಂಜಾಬ್‌ ರಾಜ್ಯದ ಅಭ್ಯುದಯಕ್ಕಾಗಿ ದುಡಿದರು.

ಗ್ರಂಥಕರ್ತ ಡಾ ಡಿ ಸಿ ಪಾವಟೆ


 ಡಾ ಡಿ. ಸಿ. ಪಾವಟೆಯವರು  ‘ಎಲಿಮೆಂಟ್ಸ್‌ ಆಫ್‌ ಕ್ಯಾಲುಕುಲಸ್‌’ ಎಂಬ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥವನ್ನು ರಚಿಸಿದ್ದಾರೆ.  ಇದಲ್ಲದೆ  ‘ಮೆಮೋರಿಸ್ ಆಫ್‌ ಎನ್ ಎಜುಕೇಷನಲ್‌ ಅಡ್ಮಿನಿಸ್ಟ್ರೇಟರ್ ‘ ಹಾಗೂ ‘ಮೈ ಡೇಸ್ ಅಸ್‌ ಗೌವರ್ನರ್’ ಎಂಬ ಗ್ರಂಥಗಳನ್ನೂ ರಚಿಸಿದ್ದಾರೆ.  ಈ ಎರಡು ಗ್ರಂಥಗಳು  ಕೇವಲ ಆತ್ಮಚರಿತ್ರೆಯಾಗಿಲ್ಲದೆ  ಸ್ವಾತಂತ್ರ್ಯಾ ನಂತರದ ಭಾರತೀಯ ರಾಜಕೀಯ ಮತ್ತು ಶೈಕ್ಷಣಿಕ ವಿಷಯಗಳ ಮೇಲೆ ಬೆಳಕು ಚೆಲ್ಲುವಂತದ್ದೆನಿಸಿವೆ.

    ಬಯಲಲ್ಲಿ ಬಯಲಾದ ಶರಣರು

ದೀರ್ಘಾವಧಿ ಸಾರ್ವಜನಿಕ ಸೇವೆಯ ನಂತರ ಬೆಂಗಳೂರಿನಲ್ಲಿ ನೆಲೆಗೊಂಡು ಸಂತೃಪ್ತ ಜೀವನ ನಡೆಸಿದ ಡಿ. ಸಿ. ಪಾವಟೆಯವರು  1979ರ ಜನವರಿ 17ರಂದು ಬದುಕಿಗೆ ವಿದಾಯ ಹೇಳಿದರು. ಶಿಕ್ಷಣ ಕ್ಷೇತ್ರಕ್ಕೆ ಇವರು ನೀಡಿದ ಮಹತ್ತರ ಕೊಡುಗೆಯ ನೆನಪಿಗಾಗಿ ಇವರ ಕುಟುಂಬವರ್ಗದವರು, ಇವರ ಹುಟ್ಟೂರಾದ ಮಮದಾಪುರದಲ್ಲಿ ಇವರ ತಂದೆ ಚಿಂತಪ್ಪ ಪಾವಟೆಯವರ ಹೆಸರಿನಲ್ಲಿ ಮಾಧ್ಯಮಿಕ ಶಾಲೆಯನ್ನು ಪ್ರಾರಂಭಿಸಿ, ಇವರ ಹೆಸರನ್ನು ಚಿರಸ್ಥಾಯಿಯಾಗಿಸಿದ್ದಾರೆ. ಕನ್ನಡ ನಾಡು ನುಡಿ ಸಂಸ್ಕೃತಿಗೆ ಲಿಂಗಾಯತ ಧರ್ಮಕ್ಕೆ ನಿರಂತರವಾಗಿ ದುಡಿದು ಪ್ರತಿಯೊಬ್ಬರಿಗೂ ಪ್ರೇರಕ ಶಕ್ತಿಯಾದ ಡಾ ಡಿ ಸಿ ಪಾವಟೆಯವರು ಸಾವಿಲ್ಲದ ಶರಣರು.


ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ ಶಶಿಕಾಂತ ಪಟ್ಟಣ – ಇವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸ್ವಾತಂತ್ರ ಹೋರಾಟದ ಮನೆತನದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಸೈನಿಕ ಶಾಲೆ ವಿಜಯಪುರದಲ್ಲಿ ಪೂರೈಸಿದರು. ವೃತ್ತಿಯಲ್ಲಿ ಔಷಧ ವಿಜ್ಞಾನಿ ಪ್ರವೃತ್ತಿಯಲ್ಲಿ ಸಾಹಿತಿ ವಿಮರ್ಶಕ ಸಂಶೋಧಕ ಮತ್ತು ಹೊರತಾಗಾರರು. ಇವರು ಇಲ್ಲಿಯವರೆಗೆ 37 ಪುಸ್ತಕಗಳನ್ನು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಇವರ ಗಾಂಧಿಗೊಂದು ಪತ್ರ ಡಾ ಡಿ ಎಸ ಕರ್ಕಿ ಸಾಹಿತ್ಯ ಪ್ರತಿಷ್ಠಾನದ 2022 ಶಾಲಿನ ಶ್ರೇಷ್ಠ ಕವನ ಸಂಕಲನ ಪ್ರಶಸ್ತಿ ಪಡೆದಿದ್ದಾರೆ. ಜನೆವರಿ 2023 ರಲ್ಲಿ ಡಾ ಎಂ ಎಂ ಕಲಬುರ್ಗಿ ಅವರ ಸಮಗ್ರ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. ಪ್ರಸಕ್ತ ಸಂಗಾತಿಯಲ್ಲಿ ಸಾವಿಲ್ಲದ ಶರಣರು ಎಂಬ ಮಾಲಿಕೆಯಲ್ಲಿ ಪ್ರತಿ ವಾರ ತಮ್ಮ ಲೇಖನವನ್ನು ಪ್ರಕಟಿಸುವರು, ಅವರ ಜ್ಞಾನ ವಿದ್ವತ್ತು ಅನುಭವಗಳನ್ನು ಮುಂಬರುವ ದಿನಗಳಲ್ಲಿ ಓದಿ ಆನಂದಿಸಿರಿ

13 thoughts on “

  1. ಡಾ || ಡಿ. ಸಿ. ಪಾವಟೆ ಅವರ ಬಗೆಗೆ ಎಲ್ಲ
    ವಿವರಗಳನ್ನು ಒಳಗೊಂಡಂತೆ ಅತ್ಯಂತ ಒಳ್ಳೆಯ ಮಾಹಿತಿಯುಳ್ಳ ಪ್ರಬುದ್ಧ ಲೇಖನ … ಸರ್

    1. ಶರೀರ ನಶ್ವರ, ಕಾರ್ಯ ಚಿರಸ್ಥಾಯಿ ಎನ್ನುವಂತೆ ಈ ಸಾವಿಲ್ಲದ ಶರಣರು ಎಂಬ ಮಾಲಿಕೆಯಲ್ಲಿ ಶರಣರಿಗೆ ಸಾವು ಇಲ್ಲ ಎಂಬ ನಿದರ್ಶನವನ್ನು ಸ್ಪಷ್ಟಪಡಿಸುವ ಈ ನಿಮ್ಮ ಕಾರ್ಯ ಶ್ಲಾಘನೀಯ ಸರ್

  2. ಡಿ ಸಿ ಪಾವಟೆ ಅವರನ್ನು ಮತ್ತೆ ಕರ್ನಾಟಕಕ್ಕೆ ಪರಿಚಯಿಸುವ ಪ್ರಯತ್ನ ತಮ್ಮದು ಸರಳ ಸುಂದರ ಲೇಖನ

  3. ತಮ್ಮ ಲೇಖನ ಮರೆತು ಹೋದ ಮಹಾನುಭಾವರ ಮತ್ತೆ ನನಪಿಸಿ ಕೊಡುತ್ತೀರಿ ಧನ್ಯವಾದ ಮುಂದಿನ ವಾರದ ಲೇಖನ ಓದಲು ಕೂತೂಹಲ

  4. Excellent………….. Sir
    ತಮ್ಮ ಜ್ಞಾನ ದಾಸೋಹಕ್ಕೆ ಶರಣು ಶರಣಾರ್ಥಿಗಳು

  5. ಸರ್ ನಿಮ್ಮ ಲೇಖನ ಅರ್ಥಪೂರ್ಣ ಮತ್ತು ವೈಚಾರಿಕ

Leave a Reply

Back To Top