ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ

ಅಮೀರುದ್ದೀನ್ ಖಾಜಿಯವರ

ಗಜಲ್ ಗಳಲ್ಲಿ ಜೀವನಶ್ರದ್ಧೆ

ಗಜಲ್ ಪ್ರೇಮಿಗಳಿಗೆ ಗಜಲ್ ಪಾಗಲ್ ನ ದಿಲ್ ಸೇ ನಮಸ್ಕಾರಗಳು..

ಗುರುವಾರ ಎಂದರೆ ಹಲವು ಆಚರಣೆಗಳ ತವರೂರು, ಆದರೆ ಗಜಲ್ ಮನಸುಗಳಿಗೆ ಗಜಲ್ ವಾರ. ಪ್ರತಿ ವಾರದಂತೆ ಈ ವಾರವೂ ಸಹ ತಮ್ಮ ನಿರೀಕ್ಷೆಯಂತೆ ಒಬ್ಬ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರುತ್ತಿರುವೆ. ಅವರ ಗಜಲ್ ಅಶಅರ್ ನಲ್ಲಿ ಒಂದು ಸುತ್ತು ವಿಹರಿಸಿ ಬರೋಣವೇ … ಮತ್ತೇಕೆ ತಡ … ಚಲೋ, ಹೋಗಿ ಬರೋಣ.

“ನನ್ನ ಮೇಲೆ ಅವರು ಕೋಪಗೊಂಡಿದ್ದರೊ ಅಥವಾ ನಾ ಕೋಪಗೊಂಡಿದ್ದೆನೊ
ನಿನ್ನೆ ಅವರ ಸಮಯವಿತ್ತು, ಇಂದು ನಮ್ಮ ಸಮಯವಿದೆ”
-ಜಿಗರ್ ಮುರಾದಾಬಾದಿ

        ಈ ಜಗತ್ತು ಅನುಭವಿಸುವವರಿಗೆ ದುರಂತವೆಂದು ಅನಿಸಬಹುದು, ಆದರೆ ಯೋಚಿಸುವವರಿಗೆ ಹಾಸ್ಯವಾಗಿ ಕಾಣಿಸುತ್ತದೆ. ಮನುಷ್ಯ ತನ್ನ ಜೀವನದುದ್ದಕ್ಕೂ ಪರಿಪೂರ್ಣತೆಯನ್ನು ಬಯಸುತ್ತಾನೆಯಾದರೂ ಯಾವುದೂ ಇಲ್ಲಿ ಉದ್ಭವ ಮೂರ್ತಿಯಲ್ಲ. ತನ್ನಿಂದ ತಾನೇ ಯಾವುದೂ ಮುಖಮ್ಮಲ್ ಆಗುವುದಿಲ್ಲ. ಅದಕ್ಕೆ ಶ್ರದ್ಧೆ, ಕಲಿಯುವ ಆಸಕ್ತಿ, ಪರಿಶ್ರಮ, ಪ್ರಯತ್ನ ಬೇಕು.‌ ಅಂತೆಯೇ ಅಮೇರಿಕಾದ ಹಾಡುಗಾರ್ತಿ ಬೆಯಾನ್ಸ್ ನೋಲ್ಸ್ ರವರ ಈ ಮಾತು “ಎಲ್ಲವೂ ಪರಿಪೂರ್ಣವಾಗಿದ್ದರೆ, ನೀವು ಎಂದಿಗೂ ಕಲಿಯುವುದಿಲ್ಲ ಮತ್ತು ನೀವು ಎಂದಿಗೂ ಬೆಳೆಯುವುದಿಲ್ಲ” ತುಂಬಾ ಅರ್ಥಪೂರ್ಣವಾಗಿದೆ. ನಾವು ಒಬ್ಬ ಮನುಷ್ಯನನ್ನು ಅವನ ಉತ್ತರಗಳಿಗಿಂತ ಅವನ ಪ್ರಶ್ನೆಗಳಿಂದ ನಿರ್ಣಯಿಸಬಹುದು. ಕಾರಣ, ಪ್ರಶ್ನೆಗಳಲ್ಲಿ ಕಲಿಯುವ ಹಂಬಲ ವ್ಯಕ್ತವಾಗುತ್ತದೆ. ಈ ನೆಲೆಯಲ್ಲಿ ಗಮನಿಸಿದಾಗ ಸ್ಪಷ್ಟ ಚಿಂತನೆಗೆ, ಯೋಚನೆಗೆ ಬುದ್ಧಿವಂತಿಕೆಗಿಂತ ಧೈರ್ಯ ಬೇಕು ಎಂಬುದು ಮನದಟ್ಟಾಗುತ್ತದೆ. ಜೀವನದಲ್ಲಿ ನಂಬುವುದು ಸುಲಭ, ಆದರೆ ಯೋಚಿಸುವುದು ಕಷ್ಟ. ನಾವು ಏಕೆ ನಂಬುತ್ತೇವೆ ಎಂಬುದರ ಕುರಿತು ಯೋಚಿಸಿದರೆ, ಅದು ಇನ್ನೂ ಹೆಚ್ಚು ಜಟಿಲವಾಗುತ್ತ ಹೋಗುತ್ತದೆ. ಜನರು ಓದುವುದನ್ನು ನಿಲ್ಲಿಸಿದಾಗ ಯೋಚಿಸುವುದನ್ನು ನಿಲ್ಲಿಸುತ್ತಾರೆ. ಈ ಕಾರಣಕ್ಕಾಗಿಯೇ ಪದಗಳು ಆಲೋಚನೆಗಳು ಧರಿಸುವ ಬಟ್ಟೆಗಳಾಗಿವೆ ಎನ್ನಲಾಗುತ್ತದೆ. ಓದುವ ಕಲೆಯ ಜೊತೆಗೆ ಆಲೋಚನಾ ಕಲೆಯೂ ಇದೆ, ಬರೆಯುವ ಕಲೆಯೂ ಇದೆ. ವಿಭಿನ್ನವಾಗಿ ಯೋಚಿಸಲು ವಿಭಿನ್ನವಾಗಿ ಓದುವ ಅವಶ್ಯಕತೆ ಇದೆ. ಏಕೆಂದರೆ ಜಗತ್ತು ಈಗಾಗಲೇ ಇಲ್ಲಿ ರೇಸ್‌ನಲ್ಲಿದೆ. ಓದು-ಬರಹ-ಆಲೋಚನೆ ಒಂದಕ್ಕೊಂದು ಪೂರಕವಾಗಿವೆ. ಓದುಗನಿಲ್ಲದೆ ಬರೆಯಲಾಗದು, ಇದು ನಿಖರವಾಗಿ ಚುಂಬನದಂತಿದೆ. ಏಕಾಂಗಿಯಾಗಿ ಮಾಡಲು ಸಾಧ್ಯವಿಲ್ಲ. ಹಾಗಂತ ಓದುಗರು ಯಾವತ್ತೂ ಕುರಿಗಳಲ್ಲ. ಪ್ರತಿ ಬರಹ ಅವರನ್ನು ಪ್ರಚೋದಿಸುವುದಿಲ್ಲ. ಬರಹದಲ್ಲಿ ಆ ಶಕ್ತಿ ಇರಬೇಕು, ಅಂದಾಗ ಮಾತ್ರ ಸಹೃದಯ ಓದುಗರ ಮನವನ್ನು ಸೆಳೆಯಲು, ತಣಿಸಲು ಸಾಧ್ಯವಾಗುತ್ತದೆ. “ಓದಲು, ಯೋಚಿಸಲು ಮತ್ತು ಮಾತನಾಡಲು ವಿಭಿನ್ನ ನಿಯಮಗಳಿವೆ. ಬರವಣಿಗೆ ಈ ಮೂರನ್ನೂ ಬೆಸೆಯುತ್ತದೆ” ಎಂಬ ಅಮೇರಿಕಾದ ಹಾಸ್ಯಗಾರ ಮೇಸನ್ ಕೂಲಿ ಯವರ ಈ ಹೇಳಿಕೆ ಅಕ್ಷರದ ಮಹತ್ವವನ್ನು ಸಾರುತ್ತದೆ. ಸಾಹಿತ್ಯ, ಬರಹ; ಪುಸ್ತಕಗಳು ಮನುಕುಲದ ಯೋಚನೆಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತಿವೆ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಜನರು ಇನ್ನೂ ಯೋಚಿಸುತ್ತಿದ್ದಾರೆ ಎಂದರೆ ನಮ್ಮಲ್ಲಿರುವ ಪುಸ್ತಕದ ಅಂಗಡಿಗಳ ಪಾತ್ರ ಅನನ್ಯವಾದದ್ದು ಎಂದರೆ ಉತ್ಪ್ರೇಕ್ಷೆಯಲ್ಲ. ಪುಸ್ತಕಗಳು ಸಮಾನಾಂತರ ವಿಶ್ವಕ್ಕೆ ತೆರೆದ ಕಿಟಕಿಗಳಾಗಿವೆ. ಯಾರೋ ಒಬ್ಬರು ತಮ್ಮ ಪುಸ್ತಕವನ್ನು ಓದುವುದರಲ್ಲಿ ಸಂಪೂರ್ಣವಾಗಿ ಮುಳುಗಿರುವುದನ್ನು ನೋಡಿದಷ್ಟು ಬೇಗ ಯಾವುದೂ ಲೇಖಕನ ಹೃದಯವನ್ನು ತುಂಬುವುದಿಲ್ಲ. ಕೋಪವು ಮನಸ್ಸಿನ ದೀಪವನ್ನು ಬೀಸುವ ಗಾಳಿಯಾಗಿದೆ ಎಂಬುದನ್ನು ಅನಾದಿ ಕಾಲದಿಂದಲೂ ಸಾಹಿತ್ಯ ಅರುಹುತ್ತ ಬಂದಿದೆ. ನಾಗರಿಕ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಾಹಿತ್ಯದ ಹಾಗೂ ಅದರ ಎಲ್ಲ ಪ್ರಕಾರಗಳ ಕಾರ್ಯ ಅನುಪಮವಾದುದು. ಈ ನೆಲೆಯಲ್ಲಿ ಇಂದು ಜಾಗತಿಕ ಆಗಸದಲ್ಲಿ ಮಿಂಚುತ್ತಿರುವ ಗಜಲ್ ತಾರೆ ಎಲ್ಲರನ್ನೂ ಸೆಳೆಯುತ್ತಿದೆ, ವಿಶೇಷವಾಗಿ ಕನ್ನಡಿಗರನ್ನು!! ಪ್ರಸ್ತುತವಾಗಿ ಕನ್ನಡದ ಬಹು ಬರಹಗಾರರು ಗಜಲ್ ಕೃಷಿಯಲ್ಲಿ ತೊಡಗಿದ್ದಾರೆ. ಅವರಲ್ಲಿ ಡಾ. ಅಮೀರುದ್ದೀನ್ ಖಾಜಿಯವರೂ ಒಬ್ಬರು.

      ಡಾ. ಅಮೀರುದ್ದೀನ್ ಖಾಜಿಯವರು ವೃತ್ತಿಯಿಂದ ವೈದ್ಯರು ಹಾಗೂ ಪ್ರೊಫೆಸರ್. ಪ್ರವೃತ್ತಿಯಿಂದ ಸಾಹಿತಿಗಳು, ಆಪ್ತ ಸಮಾಲೋಚಕರು, ನಿರೂಪಕರು. ಶ್ರೀ ಅಬ್ದುಲ್ ರಹಿಮಾನ್ ಹಾಗೂ ಶ್ರೀಮತಿ ರಹಮತಬಿ ದಂಪತಿಗಳ ಮಗನಾಗಿ ಬಾಗಲಕೋಟೆಯಲ್ಲಿ ೧೯೬೪ ರ ಏಪ್ರಿಲ್ ೧೮ ರಂದು ಜನಿಸಿದ್ದಾರೆ. ಇವರು ೧೯೮೬ ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ.ಎಮ್.ಎಸ್ ಪದವಿಯನ್ನು ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಪೂರೈಸಿದ್ದಾರೆ. ಮುಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ‘ಡಿಪ್ಲೊಮಾ ಇನ್ ಎಮರ್ಜೆನ್ಸಿ ಮೆಡಿಸಿನ್’ ಎಂಬ ಸ್ನಾತಕೋತ್ತರ ಪದವಿಯನ್ನು, ನಂತರ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಿಂದ ‘ಕೌನ್ಸೆಲಿಂಗ್ ಆಂಡ್ ಸೈಕೋಥೆರಪಿ’ ಪದವಿಯನ್ನು ಪಡೆದಿದ್ದಾರೆ. ಮತ್ತೆ ಮುಂದೆ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನೂ ಗಳಿಸಿದ್ದಾರೆ. ಪ್ರಸ್ತುತವಾಗಿ ಶ್ರೀಯುತರು ಬಿಜಾಪುರ ನಗರದ ಪ್ರತಿಷ್ಠಿತ ಡಾ. ನಾಗೂರ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥ ಹಾಗೂ ಪ್ರೊಫೆಸರ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

      ಉತ್ತಮ ಸಂಘಟಕರಾಗಿರುವ ಇವರು ಹಲವು ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವ ಹೊಂದಿದ್ದು, ಅನೇಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಇವರು ಕಾವ್ಯ, ಅನುವಾದ, ಲೇಖನ, ಸಂಪಾದನೆ, ಪ್ರಬಂಧ, ಗಜಲ್.. ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ‘ನಾವು’ ಎಂಬ ಕವನ ಸಂಕಲನ, ‘ರೋಜತಲ್ ಔಲಿಯಾಯೇ ಬಿಜಾಪುರ’ ಎಂಬ ಅನುವಾದ ಕೃತಿ, ‘ಮಹಾಮರ’ ಎಂಬ ಸಂಪಾದಿತ ಕೃತಿ ಹಾಗೂ ‘ಭಾವಯಾನ’ ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಇವರು ನಾಡಿನ ವಿವಿಧ ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯದ ಒಲವನ್ನು ಹಂಚಿಕೊಂಡಿದ್ದಾರೆ. ಖಾಜಿಯವರ ಸಾಕಷ್ಟು ಬರಹಗಳು ರಾಜ್ಯದ ಬಗೆ ಬಗೆಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ವೈದ್ಯರಾದ ಇವರು ಸವ್ಯಸಾಚಿ ಎಂಬಂತೆ ಸಾಹಿತ್ಯದಲ್ಲೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ‘ಸಾಹಿತ್ಯದಿಂದ ಸೌಹಾರ್ದ’ ಎಂಬ ಇವರ ಕವಿತೆಯು ಮಹಾರಾಷ್ಟ್ರದ ೯ ನೇ ತರಗತಿಯ ಪಠ್ಯ ಪುಸ್ತಕದ ಒಂದು ಭಾಗವಾಗಿದೆ. ಈ ಸೇವೆಯನ್ನು ಗಮನಿಸಿ ಇವರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವಚನಶ್ರೀ, ಭಾವೈಕ್ಯತಾ ಪ್ರಶಸ್ತಿ, ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆಗಾಗಿ ಗೌರವ ಸನ್ಮಾನ… ಪ್ರಮುಖವಾಗಿವೆ.

        ಕಣ್ಣುಗಳು ಭಾವನಾಗಸದ ತಾರೆಯಾಗಿವೆ. ಅವುಗಳ ಹಿಂದೆ ಹೇಳಲಾಗದ ಕಥೆಗಳಿವೆ. ಅದರ ಅಂಚಿನಲ್ಲಿ ಶತಕೋಟಿ ಕಣ್ಣೀರಿನ ಹನಿಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಅವುಗಳು ಆಳವಾದ ಪ್ರೀತಿಯನ್ನು ಬಯಸುತ್ತ ನಾಚಿಕೆಯೊಂದಿಗೆ ಕೋಮಲವಾಗಿ ಮಾತನಾಡುತ್ತವೆ. ಅತ್ಯಂತ ಸುಂದರವಾದ ಕಣ್ಣುಗಳಿಂದ ಹೆಚ್ಚು ಕಣ್ಣೀರು ಸುರಿಸಲ್ಪಟ್ಟಿದೆ ಎಂಬುದಕ್ಕೆ ಮನುಷ್ಯನ ಜೀವನವೇ ಸಾಕ್ಷಿ. ಇಂಥಹ ಕಣ್ಣಿಗೂ ನಮ್ಮ ಗಜಲ್ ಗೂ ಅವಿನಾಭಾವ ಸಂಬಂಧವಿದೆ. ಪ್ರೀತಿಯ ಕಣ್ಣುಗಳಿಂದ ಕರುಣೆಯ ಕಿಟಕಿಯಿಂದ ಪ್ರತಿ ಜೀವಿಯನ್ನು ನೋಡಬೇಕು ಎಂಬುದನ್ನು ಗಜಲ್ ನ ಅಶಅರ್ ಪರಂಪರೆಯುದ್ದಕ್ಕೂ ಅಭಿವ್ಯಕ್ತಿಸುತ್ತ ಬಂದಿದೆ. ಕಣ್ಣುಗಳ ಶಕ್ತಿಯು ಕೆಲವೊಮ್ಮೆ ಮಾತನಾಡುವ ಯಾವುದೇ ಪದಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಇರುವುದನ್ನು ಗಜಲ್ ಸೆರೆ ಹಿಡಿಯುವುದರಲ್ಲಿ ಅವ್ವಲ್ ನಂಬರ್ ಎನ್ನಬಹುದು. ಸುಖನವರ್ ಡಾ. ಅಮೀರುದ್ದೀನ್ ಖಾಜಿಯವರ ‘ಭಾವಯಾನ’ ಗಜಲ್ ಸಂಕಲನವು ‘A journey of Emotions’ ಎಂಬ ಟ್ಯಾಗ್ ಲೈನ್ ನೊಂದಿಗೆ ಸಹೃದಯ ಓದುಗರ ಮನವನ್ನು ತಟ್ಟುವಲ್ಲಿ ಯಶಸ್ವಿಯಾಗಿದೆ. ಈ ಸಂಕಲನದಲ್ಲಿ ಬದುಕಿನ ವಿವಿಧ ಆಯಾಮಗಳು, ಪ್ರೀತಿಯ ಕಾಮನಬಿಲ್ಲು, ಸಾಮಾಜಿಕ ವ್ಯವಸ್ಥೆಯ ಹೆಜ್ಜೆ ಗುರುತುಗಳು, ಆಧ್ಯಾತ್ಮಿಕ ಬೆಳಗು, ಗುರು-ಶಿಷ್ಯ ಪರಂಪರೆ, ದಮನಿತರ ಪರವಾದ ದ್ವನಿ, ಕಂಬನಿಯ ಕಡಲು.. ಎಲ್ಲವೂ ರಸಿಕರಿಗೆ ಔತಣಕೂಟ ಏರ್ಪಡಿಸುವಂತೆ ಒಪ್ಪವಾಗಿ ಜೋಡಿಸಲಾಗಿದೆ.

        ನಮ್ಮ ಬದುಕನ್ನು ಹಾಗೂ ನಮ್ಮ ಸುತ್ತಲಿನವರ ಜೀವನವನ್ನು ಒಮ್ಮೆ ಗಮನಿಸಿದರೆ ಎಲ್ಲರೂ ಸುಖ, ಶಾಂತಿ ಹಾಗೂ ನೆಮ್ಮದಿಗಾಗಿ ಪರಿತಪಿಸುವುದನ್ನು, ಹಂಬಲಿಸುವುದನ್ನು ಕಾಣುತ್ತೇವೆ. ಹಂಬಲ ನಿಂತಿರುವುದೆ ನೋವು, ದುಗುಡ, ತಳಮಳಗಳ ಕಂಬನಿಯ ವೇದಿಕೆ ಮೇಲೆ! ಇಲ್ಲಿ ಶಾಯರ್ ಡಾ. ಅಮೀರುದ್ದೀನ್ ಖಾಜಿಯವರು ‘ಓ ನನ್ನ ಜೀವವೇ’ ಎಂಬ ರದೀಫ್ ಮೂಲಕ ನೋವಿಗೆ ಮುಲಾಮು ಹಚ್ಚುವ ಪ್ರಯತ್ನ ಮಾಡಿದ್ದಾರೆ. ಸಾಸಿವೆಯಷ್ಟು ಸುಖ ಅಡಗಿರುವುದೆ ಸಾಗರದ ಆಳದಲ್ಲಿ! ಅಂತೆಯೇ ನೋವುಗಳಿಗೆ ಕುಗ್ಗದೆ ಜೀವನ ಪ್ರೀತಿಯಿಂದ ಬದುಕು ಸಾಗಿಸಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.

“ನೋವುಗಳೇನು ಹೊಸವೇ ನಮ್ಮ ಬಾಳ ಬಂಡಿಗೆ
ತಗ್ಗು ದಿನ್ನೆಗಳಿಗೇಕೆ ಕಂಗೆಡುವೆ ಓ ನನ್ನ ಜೀವವೇ”

      ಇಂದು ಗಜಲ್ ಬರೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಸಂತಸದ ವಿಚಾರವಾದರೂ ಆತಂಕವನ್ನು ತಂದೊಡ್ಡುತ್ತಿದೆ! ಗಜಲ್ ನ ಪರಿಪೂರ್ಣತೆ ಬಗೆಗೆ ಮಾತಾಡುವಾಗಲೆಲ್ಲ ದೇಹ ಮತ್ತು ಆತ್ಮ ಕುರಿತು ಚರ್ಚೆಯಾಗುತ್ತದೆ. ಇಲ್ಲಿ ಎರಡೂ ಒಂದಕ್ಕೊಂದು ಪೂರಕವಾಗಿದ್ದು, ಯಾವುದನ್ನೂ ಪ್ರತ್ಯೇಕಿಸಲಾಗುವುದಿಲ್ಲ. ಲಕ್ಷಣಗಳೇ ಅದರ ಚಾಲೆಂಜ್, ಭಾವವೇ ಅದರ ಉಸಿರು. ಒಂದು ಬಿಟ್ಟು ಮತ್ತೊಂದಿಲ್ಲ. ಈ ಕೆಳಗಿನ ಷೇರ್ ನಲ್ಲಿ ಸುಖನವರ್ ಖಾಜಿ ಯವರು ‘ಮೂಡಿ ಬರಲಿ ಗಜಲ್’ ಎಂಬ ರದೀಫ್ ಮುಖಾಂತರ ಗಜಲ್ ಹೇಗಿರಬೇಕು ಎಂಬುದನ್ನು ತುಂಬಾ ಸರಳವಾಗಿ ಹೇಳಿದ್ದಾರೆ. ಹದವಾಗಿ, ಮುದವಾಗಿ ಎನ್ನುವ ಕವಾಫಿ ಭಾಷೆ ಹಾಗೂ ಭಾವ ಹೇಗಿರಬೇಕು ಎಂಬುದನ್ನು ಧ್ವನಿಸುತ್ತದೆ. ಗಜಲ್ ಪ್ರೀತಿ, ಪ್ರೇಮದೊಂದಿಗೆ ಹೆಜ್ಜೆ ಹಾಕುತ್ತ ಇಂದು ಬದುಕಿನ ವಿವಿಧ ಮಜಲುಗಳನ್ನು ಆವರಿಸುತ್ತ ಬಂದಿದೆ. ವಿಷಯ ಯಾವುದೇ ಇರಲಿ, ಅದರ ನಿರೂಪಣೆ ತುಂಬಾ ಸರಳವಾಗಿ, ಮೃದುವಾಗಿ ಮತ್ತು ಮೆದುವಾಗಿ ಇರಬೇಕು ಎಂಬುದನ್ನು ಇಲ್ಲಿ ಗಮನಿಸಬಹುದು.

“ಮೌನಕ್ಕಿಂತ ಮಿಗಿಲಾಗಿ ಹದವಾಗಿ ಮೂಡಿ ಬರಲಿ ಗಜಲ್
ಪೋಲಾಗದಿರಲಿ ಮಾತು ಮುದವಾಗಿ ಮೂಡಿಬರಲಿ ಗಜಲ್”

     ಪ್ರೇಮಿಗಳು ಮುಳುಗುವ, ಮುಳುಗಲು ಬಯಸುವ ಏಕೈಕ ಸಮುದ್ರವೆಂದರೆ ಅವರು ಪ್ರೀತಿಸುವ ಪರಸ್ಪರರ ಕಣ್ಣುಗಳು. ಕಂಗಳು ಭಾವದ ಹೊನಲನ್ನು ಸುರಿಸುವ ಸುಂದರ ಆಗಸ. ಇಂಥಹ ಆಗಸದ ಚಾಂದಿನಿಯೆಂದರೆ ಅದು ಗಜಲ್. ಗಜಲ್ ಗೋ ಡಾ. ಅಮೀರುದ್ದೀನ್ ಖಾಜಿಯವರಿಂದ ಚಾಂದನಿಯ ನೂರ್ ಎಲ್ಲೆಡೆ ಪಸರಿಸಲಿ, ಅವರಿಂದ ಮತ್ತಷ್ಟು; ಮೊಗೆದಷ್ಟೂ ಗಜಲ್ ಗಳು ರಚನೆಯಾಗಲಿ ಎಂದು ತುಂಬು ಹೃದಯದಿಂದ ಶುಭ ಕೋರುತ್ತೇನೆ.

“ಜೀವನವನ್ನು ಈ ರೀತಿಯಲ್ಲಿ ಕಳೆದಿದ್ದೇನೆ
ಇಡೀ ಆಯುಷ್ಯ ಬೇರೊಬ್ಬರ ಮನೆಯಲ್ಲಿರುವಂತೆ”
-ಅಹಮದ್ ಫರಾಜ್

ಗಜಲ್ ಬಗ್ಗೆ, ಗಜಲ್ ಕಾರರ ಬಗ್ಗೆ, ವಿಶೇಷವಾಗಿ ಗಜಲ್ ನ ಪರಂಪರೆ ಬಗ್ಗೆ ಬರೆಯುತಿದ್ದರೆ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಆದಾಗ್ಯೂ ಆ ಕಾಲದ ಮುಂದೆ ಮಂಡಿಯೂರಲೆಬೇಕಲ್ಲವೇ.‌ ಅಂತೆಯೇ ಈ ಲೇಖನಿಗೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಟೇಕೇರ್…!!

ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ, ರಾವೂರ 

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಬರೆಯುತ್ತಿದ್ದಾರೆ.’ರತ್ನ’ಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top