ಶಿವಾನಂದ ಕಲ್ಯಾಣಿಯವರ”ನನ್ನೂರ ಜನಪದ ವೈಭವಗಳು”ಡಾ. ಮೀನಾಕ್ಷಿ ಪಾಟೀಲ್

ಪುಸ್ತಕ ಸಂಗಾತಿ

ಶಿವಾನಂದ ಕಲ್ಯಾಣಿ

“ನನ್ನೂರ ಜನಪದ ವೈಭವಗಳು”

ಶಿವಾನಂದ ಕಲ್ಯಾಣಿಯವರ “ನನ್ನೂರ ಜನಪದ ವೈಭವಗಳು” ಕೃತಿಯ “ಹಿಂದೂ ಮೋಹರಂ,” ಲಲಿತ ಪ್ರಬಂಧದ ಒಂದು ಅವಲೋಕನ
                 ಧಾರ್ಮಿಕ ಸಹಿಷ್ಣುತೆಯನ್ನು ಬಿಂಬಿಸುವ ಮೊಹರಂ ಹಬ್ಬದಲ್ಲಿನ ಸಂಭ್ರಮವನ್ನು ಲೇಖಕರು ಇಲ್ಲಿ ಒಡಮೂಡಿಸಿದ್ದಾರೆ.ವಾಸ್ತವದ ನೆಲೆಗಟ್ಟಿನಲ್ಲಿ ಹಿಂದೂ ಮುಸ್ಲಿಂ ಬಾಂಧವ್ಯ ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಭಾಗದಲ್ಲಿ ಪ್ರೀತಿಯ ನೆಲೆಯಾಗಿ ಉಳಿದುಕೊಂಡಿದೆ. ಸ್ನೇಹ ಪ್ರೀತಿಯ ಜೊತೆಗೆ ಜನರು ರೂಢಿಸಿಕೊಂಡು ಬಂದಿರುವ ಆಚರಣೆ ಸಂಪ್ರದಾಯಗಳು ಹಬ್ಬ-ಹರಿದಿನಗಳು, ಜಾತ್ರೆ-ಉತ್ಸವಗಳು ಇನ್ನಿತರ ಸಾಂಸ್ಕೃತಿಕ ಅಂಶಗಳು ಕೋಮು ಸೌಹಾರ್ದತೆಗೆತಳಪಾಯವಾಗಿವೆ. ಹೀಗೆ ರೂಢಿಸಿಕೊಂಡು ಬಂದ ಆಚರಣೆಗಳಲ್ಲಿ “ಮೋಹರಂ” ಹಬ್ಬದ ಆಚರಣೆ ವಿಶಿಷ್ಟವಾಗಿದೆ.ಆಚರಣೆ ಸಂಪ್ರದಾಯಗಳಲ್ಲಿ ಎರಡು ಧರ್ಮಗಳು ಭಿನ್ನ ನೆಲೆಯನ್ನು ಹೊಂದಿದ್ದರೂ ಪರಸ್ಪರರು ಭಾವನೆಗಳನ್ನು ಒಗ್ಗೂಡಿಸುವ ಒಂದು ವಿಧಾನ ಈ ಹಬ್ಬ.

ಲೇಖಕರು ಇಲ್ಲಿ ಮೋಹರಂ
ಆಚರಣೆಯನ್ನು ಹಿಂದೂಗಳು ಹೇಗೆ ಆಚರಿಸುತ್ತಾರೆ ಮತ್ತು ದಸರೆ,ದೀಪಾವಳಿಯ ಸಂಭ್ರಮದಂತೆ ಈ ಹಬ್ಬವನ್ನು ಅತಿ ಸಂಭ್ರಮದಿಂದ ಆಚರಿಸುವ ಔಚಿತ್ಯವನ್ನು ಇಲ್ಲಿ ವಿವರಿಸಿದ್ದಾರೆ.ಅವರೇ ಹೇಳುವಂತೆ
“ಹಿಂದೂ ಹಬ್ಬಗಳಲ್ಲಿ ಗಂಡನ ಮನೆಯಿಂದ ಹೆಣ್ಣು ಮಕ್ಕಳು ಗಂಡ ಮಕ್ಕಳೊಡನೆ ತವರಿಗೆ ಬರುವ ಸಂಭ್ರಮ ಸಾಂಸ್ಕೃತಿಕ ಪುಳಕನ್ನುಂಟುಮಾಡುವುದು”
ಇಂದಿಗೂ ಗ್ರಾಮಾಂತರ ಪ್ರದೇಶಗಳಲ್ಲಿ ಭಾವೈಕ್ಯತೆಯಪವಿತ್ರ ಸಂಕೇತವಾಗಿ ಅತ್ಯಧಿಕ ಸಂಖ್ಯೆಯ ಹಿಂದೂಗಳಿಂದ ಮೋಹರಂ ಆಚರಿಸಲ್ಪಡತ್ತಿದೆ.ಮಂದಿರ ಮಸ್ಜಿದಗಳಿರುವ ಕಲಬುರ್ಗಿ, ಕೊಡೇಕಲ್, ಇಲಕಲ್, ರಾಯಚೂರು ಜಿಲ್ಲೆಯ ಮುದಗಲ್ ಇಂಥ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ವರ್ಷಕ್ಕೊಂದು ಬಾರಿ ಜಾತ್ರೆ-ಉರುಸುಗಳು ನಡೆಯುತ್ತವೆ.

 ಮೋಹರಂ ಅರಬ್ಬಿ ಭಾಷೆಯ ಪದ.ಹಿಜರಿ ಸವಂತ್ಸರದ ಮೊದಲನೆಯ ತಿಂಗಳು ಮೊಹರಂ ತಿಂಗಳು. ಇಸ್ಲಾಂ ಧರ್ಮಸ್ಥಾಪನೆಯ ಮುಂಚೆ ಈ ಹೆಸರು ‘ಸೈಯದ್ ಅಕ್ಬರ್ ‘ ಎಂದಿತ್ತು.ಮೊಹರಂ ಹಬ್ಬಕ್ಕೆ ಕಾರಣವಾದ ಈ ತಿಂಗಳಲ್ಲಿ ಹಜರತ್ ಇಮಾಮ್ ಹುಸೇನ್ ಹುತಾತ್ಮರಾದರು.ಈ ಕಾರಣಕ್ಕಾಗಿ ಮೊಹರಂ ತಿಂಗಳನ್ನು ಅಶುಭ ಮತ್ತು ದುಃಖದಾಯಕವೆಂದು ಭಾವಿಸಲಲ್ಪಟ್ಟಿದೆ.
       ಮೊಹರಂಗೆ ಹಲವೆಡೆ ಹಲವು ಹೆಸರಿನಿಂದ ಕರೆಯುತ್ತಾರೆ. “ಅಲಾಯಿ” ಹಬ್ಬ ಅಲಾಬ್ಬ ವೆಂದೇ ಪ್ರಚಲಿತ . ಲೇಖಕರು ಹಬ್ಬದಲಿ ಹಾಕುವ ಹೆಜ್ಜೆ ಕುಣಿತವನ್ನುಸ್ವಾರಸ್ಯವಾಗಿ ಹೇಳಿದ್ದಾರೆ. ಮುಸಲ್ಮಾನರ
ವರ್ಷ, ವಾರ, ತಿಥಿ, ನಕ್ಷತ್ರಕ್ಕೆ ಚಂದ್ರನೇ ಆದಿ. ಚಂದ್ರನನ್ನು ನೋಡಿಯೇ ಎಲ್ಲವನ್ನು ಮಾಡುವರು ಹಾಗೆ ಹಬ್ಬಗಳು ಕೂಡಾ. ಮೊಹರಂ ಮುಸಲ್ಮಾನರ ವರ್ಷದ ಪ್ರಾರಂಭದಲ್ಲಿ ಬರುವ ಮೊದಲನೆಯ ಹಬ್ಬ. ಈ ತಿಂಗಳ ಮೊದಲ ಹತ್ತು ದಿನ ಪವಿತ್ರ ಧರ್ಮ ರಕ್ಷಣೆಗಾಗಿ ರಣರಂಗದಲ್ಲಿ ಮಡಿದವರ ಸ್ಮರಣಾರ್ಥವಾಗಿ ಪೀರಗಳನ್ನಾಗಿ ಮಸೀದಿಯಲ್ಲಿಟ್ಟುಪೂಜಿಸುತ್ತಾರೆ. ಜಗತ್ತಿನ ಬೇರೆ ಬೇರೆ ಧರ್ಮಿಯರ ಆಚರಣೆಯ ಸಂಪ್ರದಾಯ ನಂಬಿಕೆಗಳು ತನ್ನದೇ ಆದ ಬದ್ಧತೆ, ಸಿದ್ಧಾಂತದ ನೆಲಗಟ್ಟಿನ ಮೇಲೆ ರೂಪುಗೊಂಡವುಗಳಾಗಿವೆ. ಕರ್ಬಲಾ ಕಾಳಗದಲ್ಲಿ ಮಡಿದವರ ನೆನಪಿಗೆ ಸುಮಾರು ಶತಮಾನಗಳಿಂದ ಆಚರಿಸಲ್ಪಡುವ ಮೊಹರಂ ಆಚರಣೆ ಅರಬ್ಬ ರಾಷ್ಟ್ರಗಳಿಂದ ಭಾರತಕ್ಕೆ ಬಂದಿತು. ಭಾರತದಲ್ಲಿ ಇಸ್ಲಾಂ ಧರ್ಮವನ್ನು ಏಳನೆಯ ಶತಮಾನದಲ್ಲಿ ಮಹಮ್ಮದ್ ಎಂಬ ಪ್ರವಾದಿ ಸ್ಥಾಪಿಸಿದನು ಏಕದೇವರಾದಕ ಧರ್ಮವನ್ನು ಅನುಸರಿಸುವವರು ಮುಸ್ಲಿಂ ಬಾಂಧವರು ಮೊಹರಂ ಆಚರಣೆ ನಮ್ಮ ನೆಲದಲ್ಲಿ ರೂಪಾಂತರಗೊಂಡು ಭಾರತೀಯ ಕೋಮು ಸೌಹಾರ್ದತೆಯ ಪ್ರತೀಕವಾಗಿದೆ.
                           ಅಮಾವಾಸ್ಯೆ ಚಂದ್ರನನ್ನು ಕಂಡು ಅಮಾವಾಸ್ಯೆ ಮುಗಿದ ಮರುದಿನದೊಳಗೆ ಮಸೀದಿಯ ಮುಂದಿನ ಜಾಗದಲ್ಲಿ ಕುಣಿ ತೆಗೆಯುವುದು. ಅಂದರೆ ಗ್ರಾಮೀಣರು ಇದನ್ನು ಗುದ್ದಲಿ ಬೀಳುವುದು ಎನ್ನುತ್ತಾರೆ. ಇದಾದ ನಂತರ ಪವಿತ್ರ ಬಾವಿಯಲ್ಲಿಯೋ ನದಿಯಲ್ಲಿಯೋ ದೇವರುಗಳನ್ನು ತೊಳೆದು ಪವಿತ್ರಗೊಳಿಸಿ ಹಾರ ತುರಾಯಿಗಳಿಂದ ಅಲಂಕರಿಸಿ ದೇವರಿಗಾಗಿಯೇ ಮಾಡಿದ ದೇವರ ರೂಪದಂತಿರುವ ಮಿಂಚಿನ ತುರಾಯಿಗಳಿಂದ ದೇವರುಗಳನ್ನು ಅಲಂಕರಿಸುತ್ತಾರೆ. ಈ ದೇವರುಗಳನ್ನು ಪೀರಾ ಎಂದು ಕರೆಯುತ್ತಾರೆ. ಪ್ರತಿದಿನ ರಾತ್ರಿ ದೇವರಿಗೆ ಹೂ ಮುಡಿಸುವ ಕಾರ್ಯಕ್ರಮವಿರುತ್ತದೆ. ಐದನೇ ದಿನ ದೇವರ ಸವಾರಿ ಏಳುವುದು ಅಂದರೆ ಪೀರಾ ಅಥವಾ ಪಂಜಾಗಳನ್ನು ರಾತ್ರಿಯಲ್ಲಿ ಮೆರವಣಿಗೆ ಮಾಡಿಸುವರು. ಮಸೀದಿ ಮುಂದೆ ತೋಡಿದ ಕುಣಿಯ ಮುಂದೆ ಅಲಾಯಿ ಆಡುವುದು ಊರಿನ ಪಡ್ಡೆ ಹುಡುಗರಿಗಂತೂ ಅತ್ಯಂತ ಆಕರ್ಷಣೀಯ ಕುಣಿತ ಆಗಿರುತ್ತಿತ್ತು. ಕೆಂವಸಲ್ ಧೂಲಾ ಎಂದು ರಾಗಬದ್ಧವಾಗಿ ಹಾಡುತ್ತಾ ತಾಳಬದ್ಧವಾಗಿ ಕುಣಿಯುತ್ತ ಹೆಜ್ಜೆ ಕುಣಿತದಲ್ಲಿ ಇಡೀ ರಾತ್ರಿ ಕಳೆದು ಹೋಗುತ್ತಿತ್ತು.

                ಹಳ್ಳಿಯಲ್ಲಿ ದೇವರು ಕುಳಿತಂದಿನಿಂದ “ಈದ್” ವಾತಾವರಣ ಇಮ್ಮಡಿಕೊಳ್ಳುತ್ತಿತ್ತು. ವಿವಿಧ ಉಪಾಸನೆಗಳು, ಉಪವಾಸ, ಅನ್ನದಾನ, ಭಿಕ್ಷಾಟನೆ,
ಎಡೆ ಕೊಡುವುದು ನಡೆಯುತ್ತಿತ್ತು. ಉಪವಾಸ ವೃತ ಕೈಕೊಂಡವರಿಗೆ ಪಕೀರರೆನ್ನುತ್ತಿದ್ದರು. ಅವರು ಊರಲ್ಲಿ ಭಿಕ್ಷೆ ನೀಡಿದ ಆಹಾರವನ್ನೇ ಸೇವಿಸುತ್ತಿದ್ದರು.
ಊರವರ ಮನೆ ಮುಂದೆ ತೆರಳಿ “ಮಾಮರಾಯಿಮೋ ಧುಯಿಲೋ………”ಎಂದು ಗಂಟಲು ಹರಿಯುವಂತೆ ಕೂಗುತ್ತಿದ್ದರೆಂದು ತಮ್ಮ ಬಾಲ್ಯದ ಸವಿನೆನಪುಗಳನ್ನು ಬಿಚ್ಚಿಡುತ್ತಾರೆ ಲೇಖಕರು. ಮಸೀದಿಗೆ ಬಂದು ಹರಕೆ ಎಡೆಯಿತ್ತು ಹೋಗುತ್ತಿದ್ದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳೇ ಆಗಿರುತ್ತಿದ್ದದ್ದು ವಿಶಿಷ್ಟವಾಗಿತ್ತು. ನಿರಂತರ ಮೂರು ದಿನ ಮಾದಲಿ-ಊದು, ಬೆಲ್ಲ-ಊದು, ಸಕ್ಕರೆ-ಊದು, ಚೊಂಗೆ-ಊದಿನ ನೈವೇದ್ಯ ಹೊತ್ತು ಮಸೀದಿ ಮುಂದಿನ ಅಲಾಯಿ ಕುಣಿಸುತ್ತ ಐದು ಸುತ್ತು ಹಾಕಿ ದೇವರೆದುರು ಫಾತೆ (ಫಾತಿಹಾ- ಮಂತ್ರ) ಕೊಡಿಸಿಕೊಂಡು (ಓದಿಸಿ) ಎಡೆ ನೀಡಿ ಬರುತ್ತಿದ್ದುದ್ದು ಮೊಹರಂ ಅನನ್ಯತೆಯಿಂದ ಕೂಡಿರುತ್ತಿತ್ತು. ಮೊಹರಂ ಪದಗಳನ್ನು ಜನರ ಮನಮುಟ್ಟುವಂತೆ ನೆರೆದವರ ದುಃಖ, ಭಾವುಕತೆ ಉಂಟಾಗುವಂತೆ ಮನಮೋಹಕವಾಗಿ ಹಾಡುವ ಒಂದು ಗುಂಪೇ ಅಲ್ಲಿ ನೆರೆದಿರುತ್ತದೆ.
 “ಖತಲ್ ರಾತ್ರಿಯ ಮತ್ತು ಬೆಳಗಿನ ದಫನ್ ದ ಕನಸಿನೊಂದಿಗೆ ನಿದ್ದೆ ಹೋದ ಹುಡುಗರೆಲ್ಲ ನಸುಕಿನ ವೇಳೆ ತಂತಮ್ಮ ಓಣಿ ಬಳಸಿಕೊಂಡು ಸಾಗುತ್ತಿದ್ದ ಎದುರು- ಬದುರಿನ ಉದ್ದುದ್ದ ಸಾಲುಗಳ ಅಲಾಯಿ ಕುಣಿತದಲ್ಲಿ ಪಾಲ್ಗೊಳ್ಳುತ್ತಿದ್ದರು” ಹೆಜ್ಜೆ ಕುಣಿತದ ಸ್ವಾರಸ್ಯವನ್ನು ಅತ್ಯಂತ ಹಾಸ್ಯಮಯವಾಗಿ ಇಲ್ಲಿ ವರ್ಣಿಸುತ್ತಾರೆ. ಒಂಭತ್ತು ತಾಳದ ಲೆಕ್ಕದಲ್ಲಿರುತ್ತಿದ್ದ ಕುಣಿತ ಮೂರೆಜ್ಜೆಯೂ ಸಾಮಾನ್ಯ ತಾಳದ್ದಾಗಿತ್ತು. ಹೆಜ್ಜೆಗಳು ತಾಳಕ್ಕೆ ಏಕಾತಾನತೆ, ಏಕ ಸ್ವರೂಪ ತರಲು ಸುತ್ತಿದ ಯಾರದೊ ತಲೆ ರುಮಾಲು ಕುಣಿಯುವವರ ಕೈಗೆ ಸಿಕ್ಕು ಬಿಚ್ಚಿಕೊಳ್ಳುತ್ತಿತ್ತು. ಮುಂಜಾನೆ ಹೊತ್ತು ಮಸೂತಿ ಕಟ್ಟೆ, ಚಾವಡಿ ಕಟ್ಟೆಯ ಮೇಲೆ ಹಬ್ಬದ ಹಿಗ್ಗಿನಲ್ಲಿರುತ್ತಿದ್ದ ಹದಿಹರೆಯರ ಹೆಂಗಳೆಯರನ್ನು ಕಂಡು ಕೆಂವಸಲ ಧೂಲಾ ದಿಕ್ಕೆಟ್ಟು ಹೋಗುವಂತೆ ಕುಣಿಯುತ್ತಿದ್ದ ಕುರುಬರ ಭೀಮಪ್ಪನಂತವರಿಗೆ ಬಾಟಲಿಯ ಸೆರೆಯ ನಶೆಯಲ್ಲಿ ಕಳಚಿ ಬೀಳುತ್ತಿದ್ದ ಧೋತರದ ಕಚ್ಚೆಯ ಪರಿವೆಯೂ ಇರುತ್ತಿರಲಿಲ್ಲ. ಮುಖಾ – ಮುಖಿ ದಿಟ್ಟತನಕ್ಕೆ ಉತ್ತೇಜನಗೊಂಡವರು ಕುಣಿಯುತ್ತಿದ್ದವರ ಮೈ ಮೇಲೆ ಚುರುಮುರಿ ಚುರುಮುರಿ ಸುರಿಮಳೆಗೈಯುತ್ತಿದ್ದರು. ಅಲಾಯಿ ಕುಣಿತವನ್ನು ಪವಿತ್ರವೆಂದು ಭಾವಿಸುತ್ತಿದ್ದ ಹೆಣ್ಣು ಮಕ್ಕಳು ತಮ್ಮ ಕಂಕುಳದ ಕೂಸುಗಳನ್ನು ಮಾಜಿ ಮಿತ್ರರ ಕೈಗಿಟ್ಟು ಅವರುಗಳ ಹೆಗಲವೇರಿಸುತ್ತಿದ್ದರು. ಈ ಪರಿ ಊರ ತುಂಬಾ ಹಾಯ್ದು ಬರುತ್ತಿದ್ದ ಅಲಾಯಿ ನೃತ್ಯ ಸೂರ್ಯೋದಯ ಮುನ್ನ ಮಸೀದಿ ತಲುಪಿತ್ತು. ದೇವರನ್ನು ಹಿಡಿದವರು ಅತ್ಯುಗ್ರವಾಗಿ ಅಲಾಯಿ ಕುಣಿಯುತ್ತ ಅಲಾಯಿ ಕುಣಿ ಸುತ್ತ ನಾಲ್ಕು ಸುತ್ತು ಸುತ್ತಿ ಐದನೇ ಬಾರಿಗೆ ನಿಗಿ – ನಿಗಿ ಉರಿಯುವ ಕುಂಡದ ಕೆಂಡ ಕಚ ಕಚ ತುಳಿದು ಮದವೇರಿದ ಗಜದಂತೆ ಅದೇ ಬಿರುಸಿನಲ್ಲಿ ಮಸೀದಿಯೇರಿ ಭೂಮಿಗಿಳಿದ ದೇವರೆಂದೇ ಭಾವಿಸಿ ಹಿಂದೂ ಭಕ್ತರು ಅವರ ಕಾಲು ಮುಟ್ಟಿ ನಮಸ್ಕರಿಸುತ್ತಿದ್ದರು.
  ಇತ್ತ ದೇವರೇಳುತ್ತಿದಂತೆ ಬಣ್ಣ ಬಣ್ಣದ ಹಾಳೆಗಳಿಂದ ಅಲಂಕರಿಸಲ್ಪಟ್ಟ ಡೋಲಿ ದೇವರೊಡನೆ ಅಲೆಯುತ್ತಿತ್ತು.ಡೋಲಿ ಪಾವಿತ್ರ್ಯದಸಂಕೇತ. ಅಲ್ಲಾನ ಪಾದ ಸೇರಿದ ಇಮಾಮ್ ಹುಸೇನರ ಸಮಾಧಿಯ ಸೂಚಕ ಪುಣ್ಯಾರ್ಜನೆಗಾಗಿಹರಕೆ ಹೊತ್ತವರು, ಮಕ್ಕಳಾಗದವರು ವಿಧುರರು,ನಿರುದ್ಯೋಗಿಗಳು ಹೆಚ್ಚಾಗಿರುತ್ತಿದ್ದರು.
ಇಮಾಮ್ ಹುಸೇನ್ ಮತ್ತವನ ಅನುಯಾಯಿಗಳುಧರ್ಮ ರಕ್ಷಣೆಗೆ ಬಲಿಯಾದ ತ್ಯಾಗಭರಿತ ಶೋಕಗೀತೆ ಗಳೇ ಮೂಲ ರಿವಾಯಲಗಳು. ಈ ರಿವಾಯಲಾಗಳನ್ನೆ ಲಾವಣಿ ರೂಪದಲ್ಲಿ ಹಾಡುತ್ತಿದ್ದದ್ದು ಸೋಜಿಗವೇನಿಸುತಿತ್ತು ಎನ್ನುತ್ತಾರೆ.
    ಸೂರ್ಯ ಮುಳುಗಿ ಶಶಿ ಉದಯಿಸುತ್ತಿದಂತೆ ಅಗ್ನಿ ಕುಂಡದ ಕುಣಿ ಮುಚ್ಚುತ್ತಿದ್ದಂತೆ ದಫನ್ ಸಂಕೇತ ಪೂರ್ಣಗೊಳ್ಳುತಿತ್ತು.ಆಗ ದೇವರುಗಳು ಹೊಳೆಗೆ ಹೋಗುತ್ತಿದ್ದವು.ಹುಸೇನಿ ಹುತಾತ್ಮನಾದ ಹಾಡನ್ನು ಮೇಳ ಹಿಮ್ಮೇಳದಲ್ಲಿ ಹಾಡುತ್ತಾ ಮನೆ ಮಸೀದಿಗೆ ತೆರಳುತ್ತಿದ್ದರು. ಅಲ್ವಿದಾಯಾ – ಅಲ್ವಿದಾಷಾ ಹೈ ಸೈದಾ
ಪ……….ಹುಸೇನಿ ಬಲಿ……..
ಮತ್ತೆ ಮುಂದಿನ ಮೊಹರಂ ವರ್ಷಕ್ಕೆ ಮನಸ್ಸು ಹಾತೊರೆದು ಕಾಯುತ್ತಿತ್ತು ಎನ್ನುವ ಲೇಖಕರ ಮಾತಿನಲ್ಲಿ ಮತ್ತೆ ಮೊಹರಂ ದ   ಕಾತುಕವನ್ನು ಕಾಯುತ್ತಿದ್ದರೆಂಬ ನಿರೀಕ್ಷೆ ಕಾಣುತಿತ್ತು.


ಡಾ. ಮೀನಾಕ್ಷಿ ಪಾಟೀಲ್ 

Leave a Reply

Back To Top