ಪುಸ್ತಕ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಪಾರ್ವತಿ ಎಸ್ ಬೂದೂರು
ಗಜಲ್ ಸಂಕಲನ
“ವಿಳಾಸವಿರದ ವೇದನೆಗಳು”


ಪುಸ್ತಕ ಪರಿಚಯ
ವಿಳಾಸವಿರದ ವೇದನೆಗಳು ಗಜಲ್ ಗಳು
ಪಾರ್ವತಿ ಎಸ್ ಬೂದೂರು ಮೊ.೯೯೦೦೧೬೪೯೦೦
ಪ್ರಕಟನೆ ..೨೦೨೪
ವೇದನೆಗಳಿಗೆ ವಿಳಾಸ ಹುಡುಕುವ ಗಜಲ್ ಗಳು
ಪ್ರಕೃತಿಯ ಅಗಮ್ಯ ಸೃಷ್ಟಿಯಲ್ಲಿ ಅನೇಕ ವಿಸ್ಮಯಗಳು ಅಡಗಿವೆ.ಮನುಷ್ಯನಿಗೆ ಅವೆಲ್ಲವುಗಳನ್ನು ಕಂಡು ಹಿಡಿದು ಅವುಗಳಿಗೆ ಉತ್ತರಿಸಲು ಸಾದ್ಯವಾಗುವುದಿಲ್ಲ. ಮನುಷ್ಯ ಎಷ್ಟೇ ವೈಜ್ಞಾನಿಕ ಪ್ರಗತಿ ಹೊಂದಿದ್ದರೂ ಸೃಷ್ಟಿಗೆ ಶರಣಾಗಲೇ ಬೇಕಾಗುತ್ತದೆ. ಅದೇ ರೀತಿಯಾಗಿ ಮನುಜನ ಮನದಲ್ಲಿ ಹುಟ್ಟುವ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ , ಅವುಗಳಿಗೆ ಉತ್ತರ ಹುಡುಕುವುದರಲ್ಲಿಯೇ ಅವನ ಆಯುಷ್ಯ ಮುಗಿದಿರುತ್ತದೆ. ಮನುಷ್ಯನ ಹುಟ್ಟು ಸಾವಿನ ಮಧ್ಯೆ ಇರುವ ಬದುಕಿನಲ್ಲಿ ಮನುಷ್ಯ ಜೀವನದಲ್ಲಿ ಎಷ್ಟೋ ನೋವು ನಲಿವುಗಳ ಘಟನೆಗಳು ಜರಗಿರುತ್ತವೆ. ಕೆಲವು ನೋವುಗಳಿಗೆ ಕಾರಣಗಳೇ ಸಿಗುವುದಿಲ್ಲ. ಮನುಷ್ಯ ಅವುಗಳಿಂದ ಕಳವಳ ಗೊಳ್ಳುತ್ತಾನೆ. ನೋವು ನಲಿವುಗಳನ್ನು ಸಮಾಜದ ಆಗು ಹೋಗುಗಳನ್ನು ನಾವು ಸಾಹಿತ್ಯದಲ್ಲಿ ಅಂದರೆ ಕಾವ್ಯದಲ್ಲಿ ದಾಖಲಿಸಿ ಮನಸ್ಸಿಗೆ ನೆಮ್ಮದಿ ಪಡೆಯುತ್ತೇವೆ. ಇಂಥಹ ಹೃದಯ ವೇದನೆಗಳಿಗೆ ಮುಲಾಮು ಆಗಿ ಕಾರ್ಯ ಮಾಡುವ ಕಾವ್ಯವೆಂದರೆ ಗಜಲ್ ಕಾವ್ಯವೆಂದು ಹೇಳ ಬಹುದು.
ಗಜಲ್ ಎಂದರೆ ಮೌನ ಕಡಲೊಳಗಿಂದ ಎದ್ದ ಅಲೆಯು ದಡವನ್ನು ಮತ್ತೆ ಮತ್ತೆ ಅಪ್ಪಳಿಸುವಂತೆ ಓದುಗರ ಹೃದಯ ತಟ್ಟುತ್ತದೆ ,ಮೌನದ ಅಲೆಯ ಅನುಸಂಧಾನ , ಮೌನದೊಳಗಿನ ಸಂವಾದ ,ಇದು ರೂಪಕಗಳೊಂದಿಗೆ ಹೃದಯ ಭಾಷೆಯೊಂದಿಗೆ ಮಾತನಾಡುತ್ತದೆ . ಗಜಲ್ ಸಾಹಿತ್ಯದಲ್ಲಿ ಇರುವ ಗುಣ ವಿಶೇಷಗಳೆಂದರೆ ರೂಪಕಗಳು ,ಸೌಂದರ್ಯ , ಮೋಹಕ,ಅನುರಾಗ ನಯ ,ನಾಜೂಕು ,ಲಾವಣ್ಯ, ರೋಮಾಂಚನ ,ವೇದನೆ ,ನೋವು , ನಲಿವುಗಳನ್ನು ಒಳಗೊಂಡ ಕಾವ್ಯ ಪ್ರಕಾರವಾಗಿದೆ . ಕವಿಯ ಅಂತರಂಗದಿಂದ ಹುಟ್ಟುತ್ತದೆ ,ಬೀಜ ಮೊಳಕೆ ಒಡೆಯುವಂತೆ , ನಕ್ಷತ್ರಗಳು ಮಿನುಗುವಂತೆ ,ಮರದೊಳಗಿನ ಅಗ್ನಿಯಂತೆ , ಅನುಭವದಿಂದ ಅನುಭಾವದ ಕಡೆಗೆ ಕರೆದುಕೊಂಡು ಹೋಗುವ ಪಿಸುಮಾತುಗಳೇ ಗಜಲ್ ಎಂದು ಹೇಳಬಹುದು .
ಗಜಲ್ ಮರುಭೂಮಿಯಲ್ಲಿ ಹುಟ್ಟಿದ ಖಜೂರ್ ಹಣ್ಣಿನಂತೆ ಮಾಧುರ್ಯ ತುಂಬಿದ ಕಾವ್ಯ, ಇದು ಅರಬ್ಬಿ ದೇಶದಲ್ಲಿ ಹುಟ್ಟಿದರು ಅಲ್ಲಿ ಕಾವ್ಯವಾಗಿ ಬೆಳೆಯಲಿಲ್ಲ ಇರಾನ್ ದೇಶಕ್ಕೆ ಹೋಗಿ ಅಲ್ಲಿಯ ಜನಮನ ಸೂರೆಗೊಂಡು ಹೃದಯ ಕಾವ್ಯ ವಾಗಿ ಬೆಳೆಯಿತು . ಅಲ್ಲಿಂದ ವಲಸೆ ಬಂದ ಗಜಲ್ ಕಾವ್ಯ ಭಾರತದಲ್ಲಿ ದಖನಿ ಉದು೯ ಭಾಷೆಯಲ್ಲಿ ಬೆಳೆದು ಜನರ ಮನ ಗೆದ್ದು ರಾಣಿಯಾಗಿ ಮೆರೆಯಿತು . ಗಜಲ್ ಬದುಕುವ ಕಲೆಯನ್ನು ಕಲಿಸುತ್ತದೆ. ಉಸಿರಾಟದ ಏರಿಳಿತ , ನೊಂದ ಜೀವಿಯ ಪ್ರೀತಿಯ ಊರುಗೋಲು ,ಸೌಂದರ್ಯ ಮಾಧುರ್ಯ ಅನುಭವವನ್ನು ನೀಡುವ ಕೋಮಲ ಅಂತಕರಣದ ಕಾವ್ಯ . ಉರ್ದು ಗಜಲ್ ದಲ್ಲಿ ಇರುವ ಭಾವತೀವ್ರತೆ ಕೋಮಲತೆ ಮೃದು ಸೌಂದರ್ಯವನ್ನು ಮೆಚ್ಚಿದ ಶಾಂತರಸರು ಇದನ್ನು ಕನ್ನಡಕ್ಕೆ ತರಲು ಬಹಳ ಪ್ರಯತ್ನ ಪಟ್ಟು ಕೊನೆಗೆ ಯಶಸ್ವಿಯಾಗಿ ಕನ್ನಡ ಗಜಲ್ ಗಳನ್ನು ರಚಿಸಿದ ಪಿತಾಮಹಾ ಎಂದು ಹೇಳಬಹುದು ,ಕನ್ನಡದ ಭಾಷೆ ಛಂದಸ್ಸಿಗೆ ಹೊಂದುವಂತೆ ಕನ್ನಡ ಗಜಲ್ ಛಂದಸ್ಸುನ್ನು ಕಂಡು ಹಿಡಿದು ಕೊಟ್ಟರು . ಇಂದು ಕನ್ನಡ ಗಜಲ್ ಗಳು ಬೆಳೆಯುತ್ತಿರುವುದು ಅವರು ಹಾಕಿದ ಹಂದರದ ಮೇಲೆ ಹರಡಿ ಗಜಲ್ ಕುಸುಮಗಳು ಅರಳಿ ಕರ್ನಾಟಕದ ತುಂಬಾ ಗಜಲ್ ಕಂಪು ಹರಡಿ ಕವಿ ಮನಗಳಿಗೆ ಮರಳು ಮಾಡಿವೆ .
ಗಜಲ್ ದ ಸ್ಥಾಯಿ ಗುಣವಾದ ಪ್ರೀತಿ ,ಪ್ರೇಮ ,ವಿರಹ ,ಕಾಯುವಿಗೆ ,ಧ್ಯಾನ ,ಅನುಸಂಧಾನ ,ಅನುರಾಗ ಇವುಗಳ ಜೊತೆಗೆ ಸಮಾಜದ ತಲ್ಲಣಗಳಿಗೆ ಸ್ಪಂದಿಸಿ ಗಜಲ್ ಕಾರರು ಸಮಾಜಮುಖಿಯಾದ, ಜಾತಿ ,ಧರ್ಮ ,ಮಹಿಳಾ ದೌರ್ಜನ್ಯ, ತುಳಿತಕ್ಕೆ ಒಳಗಾದ ಜನಾಂಗೀಯ ತಳಮಳ ,ರೈತರ ಕಷ್ಟ ನೋವುಗಳ ಬಗ್ಗೆ ಗಜಲ್ ಗಳನ್ನು ಬರೆಯುತ್ತಿದ್ದಾರೆ . ಇಂದು ಗಜಲ್ ಭಾರತದ ಎಲ್ಲಾ ಭಾಷೆಗಳಲ್ಲಿ ರಚನೆಯಾಗುತ್ತಿರುವುದು ಸಂತಸದ ವಿಷಯವಾಗಿದೆ .
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಜನಿಸಿದ ಪಾರ್ವತಿ ದೇಸಾಯಿ ಇವರು ತಮ್ಮ ಹೈಸ್ಕೂಲ್ ವಿದ್ಯಾರ್ಥಿ ಜೀವನದಲ್ಲಿಯೇ ಸಾಹಿತ್ಯದ ಒಲವು ಬೆಳೆಸಿಕೊಂಡು ಕನ್ನಡ ಸಾಹಿತ್ಯ ಓದು ಬರಹದಲ್ಲಿ ತೊಡಗಿಕೊಂಡು ಕಥೆ ಕವನಗಳನ್ನು ಬರೆದವರು , ಪ್ರತಿಭಾವಂತರಾದ ಪಾರ್ವತಿಯವರು ಸೈನ್ಸ್ ವಿದ್ಯಾರ್ಥಿಯಾದರೂ ಸಾಹಿತ್ಯದ ಮೋಹ ಬೆಳೆಸಿಕೊಂಡವರು , ನಂತರ ಶಿವರಾಜ ಬೂದೂರು ಅವರ ಧರ್ಮಪತ್ನಿಯಾಗಿ ಗೃಹಲಕ್ಷ್ಮಿಯಾಗಿ ಬದುಕನ್ನು ಪ್ರೀತಿಸುತ್ತಾ ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರಿಸಿಕೊಂಡು ಬಂದ ಇವರು ತಮ್ಮ ಪ್ರಥಮ ಕವನ ಸಂಕಲನವನ್ನು *ನನ್ನೊಳಗೆ ನಾನು* ಆನಂತರ *ಭಾವ ಬಾಂದಳ* ಶೀರ್ಷಿಕೆ ಹೊಂದಿರುವ ಎರಡು ಕವನ ಸಂಕಲನ ಪ್ರಕಟಿಸಿ ಲೋಕಾರ್ಪಣೆ ಮಾಡಿದ್ದಾರೆ . ಕನ್ನಡ ಗಜಲ್ ಸಾಹಿತ್ಯಕ್ಕೆ ಮೋಹಕೊಂಡು 2024ರಲ್ಲಿ *ವಿಳಾಸ ವಿರದ ವೇದನೆಗಳು* ಎಂಬ ಶೀರ್ಷಿಕೆಯ ಗಜಲ್ ಸಂಕಲನ ಲೋಕಾರ್ಪಣೆ ಮಾಡಿದ್ದಾರೆ. ಇದರ ಜೊತೆಗೆ ಇವರ ಅನೇಕ ಕವಿತೆಗಳು ಲೇಖನಗಳು , ವಿಮರ್ಶೆಗಳು, ಗಜಲ್ ಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ .
ಪಾರ್ವತಿ ಬೂದೂರು ಅವರು ತಮ್ಮ ಮನದಾಳದಲ್ಲಿ ಕೊರೆಯುವ ವೇದನೆಗಳಿಗೆ ರೂಪಕಗಳನ್ನು ಕೊಟ್ಟು *ವಿಳಾಸ ವಿರದ ವೇದನೆಗಳು* ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿದ್ದಾರೆ . ಈ ಸಂಕಲನದಲ್ಲಿ ಒಟ್ಟು 116 ಗಜಲ್ ಗಳಿದ್ದು ಸ್ಥಾಯಿ ಭಾವವಾದ ಪ್ರೀತಿ , ಪ್ರೇಮ , ವಿರಹ ,ಕಾಯುವಿಕೆ ,ಧ್ಯಾನ ,ಭಾವನೆಗಳ ಗಜಲ್ ಗಳಲ್ಲದೆ ಸಾಮಾಜಿಕ ವ್ಯವಸ್ಥೆ ಸಾವು, ನೋವು ,ರೈತರ ಸಂಕಟ ,ವ್ಯಕ್ತಿ ಚಿತ್ರಣ ,ಪ್ರಕೃತಿ ತಂದೆ ತಾಯಿ ,ಮುಂತಾದ ವಿಷಯಗಳ ಬಗ್ಗೆ ಗಜಲ್ ಗಳನ್ನು ರಚಿಸಿದ್ದಾರೆ . ಪರಕಾಯ ಪ್ರವೇಶ ಮಾಡಿ ಪುರುಷ ಧ್ವನಿಯಲ್ಲಿ ಕೆಲವು ಗಜಲ್ ಗಳನ್ನು ರಚಿಸಿದ್ದಾರೆ .ಮುರದ್ಧಪ್ ಗಜಲ್ ,ಗೈರ್ ಮುರದ್ಧಫ್ ಗಜಲ್ , ಸಂಪೂರ್ಣ ಮತ್ಲಾ ಗಜಲ್ ಹೀಗೆ ವಿವಿಧ ಗಜಲ್ ಪ್ರಕಾರಗಳನ್ನು ರಚಿಸಿದ್ದಾರೆ. ಓದುಗರಿಗೆ ಚಿಂತನೆಗೆ ಹಚ್ಚುತ್ತವೆ.
ಪಾರ್ವತಿಯವರು ತಮ್ಮ “ತಖಲ್ಲೂಸ ನಾಮ” ವನ್ನು *ಶಿವೆ* ಎಂದು ತಮ್ಮ ಗಜಲ್ ಮಕ್ತಾದಲ್ಲಿ ಉಪಯೋಗಿಸಿದ್ದಾರೆ .ಇವರ ಗಜಲ್ ಗಳು ನಾಲ್ಕು, ಐದು, ಆರು, ಏಳು, ಎಂಟು, ಒಂಬತ್ತು, ದ್ವಿಪತಿಗಳಲ್ಲಿ ಇವೆ . ಪಾರ್ವತಿ ಬೂದೂರು ರವರು *ವಿಳಾಸವಿರದ ವೇದನೆಗಳು* ಗಜಲ್ ಸಂಕಲನಕ್ಕೆ ಶ್ರೇಷ್ಠ ಗಜಲ್ ಕಾರರಾದ ಡಾ. ಮಲ್ಲಿನಾಥ ಎಸ್ ತಳವಾರ ಅವರು ವಿವರವಾದ ಮತ್ತು ಮೌಲಿಕವಾದ ಮುನ್ನುಡಿಯನ್ನು ಬರೆದಿದ್ದಾರೆ. ಇನ್ನೊಬ್ಬ ಶ್ರೇಷ್ಠ ಗಜಲ್ ಕಾರರು ದೈತ್ಯ ಬರಹಗಾರರು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಸದಸ್ಯರು ಆದ ಸಿದ್ದರಾಮ ಹೊನ್ಕಲ್ ಅವರು ತುಲನಾತ್ಮಕವಾದ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ. ಇನ್ನೊಬ್ಬ ಶ್ರೇಷ್ಠ ಗಜಲ್ ಕಾರರಾದ ಅಲ್ಲಾಗಿರಿರಾಜ್ ಕನಕಗಿರಿಯವರು ಕೃತಿ ಪ್ರಕಟಣೆಗೆ ಮೊದಲು ಗಜಲ್ ಗಳನ್ನು ಓದಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ . ಇನ್ನೊಬ್ಬ ಶ್ರೇಷ್ಠ ಗಜಲ್ ಕಾರರು ಕವಿಗಳು ವಿಮರ್ಶಕರು ಆದ ಅಬ್ದುಲ್ ಹೈ ತೋರಣಗಲ್ಲ ಅವರು ಗಜಲ್ ಗಳನ್ನು ಓದಿ ತಮ್ಮ ಅಮೂಲ್ಯವಾದ ಅನಿಸಿಕೆ ಹಾಗೂ ಶುಭ ಹಾರೈಕೆಗಳನ್ನು ಬರೆದಿದ್ದಾರೆ . ಇವೆಲ್ಲವುಗಳಿಂದಾಗಿ ಗಜಲ್ ಸಂಕಲನದ ಮೌಲ್ಯ ಹೆಚ್ಚಾಗಿದೆ . ಸಂಕಲನದ ಮುಖಪುಟ ವಿನ್ಯಾಸವನ್ನು ಕಲಾವಿದರಾದ ವಾಸುದೇವ ರಾಹುತ್ ಗದಗ ಅವರು ಅರ್ಥಪೂರ್ಣವಾದ ಮತ್ತು ಸುಂದರವಾದ ಚಿತ್ರವನ್ನು ರಚಿಸಿ ಸಂಕಲನದ ಸೊಬಗನ್ನು ಹೆಚ್ಚಿಸಿದ್ದಾರೆ.
*ಅವಳ ಮೌನ ನನ್ನಲೆ ನೂರು ಮಾತು ಹೇಳಿವೆ*
*ಎದೆ ಬನಕೆ ರಾಶಿಯಾಗಿ ಸುಮದ ಕಂಪು ಸೂಸಿವೆ*
ಇಲ್ಲಿ ಗಜಲ್ ಕಾರ್ತಿ ಪರಕಾಯ ಪ್ರವೇಶಿಸಿ ಪುರುಷ ದನಿಯಿಂದ ಗಜಲ್ ಕಟ್ಟಿದ್ದಾರೆ. ಮನದನ್ನೆ ಮೌನವಾದಾಗ ಆ ಮೌನಕ್ಕೆ ನೂರು ಅರ್ಥಗಳು ಮನದಲ್ಲಿ ಹುಟ್ಟಿಕೊಳ್ಳುತ್ತವೆ ಮತ್ತು ನೂರು ಕತೆ ಹೇಳುತ್ತವೆ ಎಂದು ಎದೆ ಬನದಲ್ಲಿ ರಾಶಿ ಸುಮಗಳು ಅರಳಿ ಕಂಪು ಸೂಸುತ್ತಿವೆಂದು ಹೇಳುತ್ತಾ , ಅವಳ ಮೊಗದ ಅಂದ ಗುಲಾಬಿ ಗಿಂತ ಸುಂದರವಾಗಿದೆ ಎಂದು ಅವಳ ಕಂಗಳಲ್ಲಿ ಏನೋ ಒಂದು ಸಂತಸದ ಹೊಳಪು ಹೊಮ್ಮಿದೆ ಅದನ್ನು ಕಂಡು ನಾನು ಕವಿಯಾಗಿ ಕವಿತೆಯನ್ನು ಗುನು ಗುನಾಯಿಸುವೆನೆಂದು ನಲ್ಲ ನಲ್ಲೆಯ ಅಂದ ಚಂದ ವರ್ಣಿಸುವ ಗಜಲ್ ಇದಾಗಿದ್ದು ರೂಪಕಗಳೊಂದಿಗೆ ವಿವರಿಸಿದ್ದಾರೆ
*ಮರಳಿ ಜನುಮವಿದ್ದರೆ ಮನೆಗೆ ತಿರುಗಿ ಬರುವೆಯಾ ಅಪ್ಪ*
*ಕಂದನಾಗಿ ಮಡಿಲ ಸೇರಿ ಸಂತಸವನು ತರುವೆಯಾ ಅಪ್ಪ*
ಎಲ್ಲಾ ಹೆಣ್ಣು ಮಕ್ಕಳಿಗೆ ತಂದೆ ಒಬ್ಬ ಹೀರೋ ಆಗಿರುತ್ತಾನೆ. ತನ್ನ ಎಲ್ಲಾ ಭಾವನೆಗಳನ್ನು ಅರ್ಥ ಮಾಡಿಕೊಂಡು ಸರಿಪಡಿಸುವ ನಾಯಕನಾಗಿರುತ್ತಾನೆ. ತಂದೆಯ ಗೈರ್ ಹಾಜರಿ ಮಗಳಿಗೆ ಬಹಳ ಕಾಡುತ್ತದೆ ,ತಂದೆಯನ್ನು ಮತ್ತೆ ಮಗನ ರೂಪದಲ್ಲಿ ಕಾಣ ಬಯಸುತ್ತಾಳೆ . ಗಜಲ್ ಕಾರ್ತಿಯಾದ ಪಾರ್ವತಿಯವರು ತಮ್ಮ ತಂದೆಯ ಬಗ್ಗೆ ಈ ಸಂಕಲನದಲ್ಲಿ ಮೂರು ವಿಧವಾಗಿ ಗಜಲ್ ಗಳನ್ನು ರಚಿಸಿದ್ದಾರೆ . ತಂದೆಯ ಗೈರ ಹಾಜರಿ ಮಗಳಿಗೆ ಕಾಡುತ್ತದೆ ಮತ್ತು ತನ್ನ ಮನದ ನೋವು ತಡೆಯಲು ನೀನಿರಬೇಕಿತ್ತು ಅಪ್ಪ ಎಂದು ಹೇಳಿದರೆ ಇನ್ನೊಂದು ಗಜಲ್ ನಲ್ಲಿ ನನ್ನ ಎಲ್ಲಾ ನೋವುಗಳಿಗೆ ಸಾಂತ್ವನ ಹೇಳಲು ನೀನು ಇರಬೇಕಾಗಿತ್ತೆಂದು ಹಂಬಲಿಕೆಯ ಗಜಲ್ ಇದಾಗಿದೆ. ಕನಸು ನನಸಾದಾಗ ಅದನ್ನು ನೋಡಿ ಸಂತೋಷ ಪಡಲು ನೀ ಇರಬೇಕಾಗಿತ್ತು ಅಪ್ಪ ಎಂದು ಗಜಲ್ ಕಾತಿ೯ ತಂದೆಯ ಬಗ್ಗೆ ವಿವರಿಸಿದ್ದಾರೆ. ಎಲ್ಲಾ ಹೆಣ್ಣು ಮಕ್ಕಳ ಮನದಾಸೆಯನ್ನು ಗಜಲ್ ದಲ್ಲಿ ಬಿತ್ತರಿಸಿದ್ದಾರೆ.
*ತಂಗಾಳಿಗೆ ತರಗೆಲೆಗಳು ಪಿಸುಗುಡುವಾಗ ಮೆಲ್ಲನೆ ನೆನಪಾಗುವೆ*
*ಇರುಳಿನಲಿ ಒಂಟಿ ಚೆಂದಿರ ಮಿನುಗುವಾಗ ಮೆಲ್ಲನೆ ನೆನಪಾಗುವೆ*
ಪ್ರೇಮಿಗಳಿಗೆ ನೆನಪೆಂಬುವುದು ಸದಾ ಕಾಡುತ್ತಿರುತ್ತದೆ. ಪ್ರಕೃತಿಯಲ್ಲಿ ಆಗುವ ಬದಲಾವಣೆಯಿಂದ ಅವಳ ನೆನಪು ಕಾಡುತ್ತದೆಂದು ಗಜಲ್ ಕಾರ್ತಿ ಪುರುಷ ದನಿಯಲ್ಲಿ ವಿವರಿಸಿದ್ದಾರೆ . ಸೂಸಿ ಬರುವ ತಂಗಾಳಿಗೆ ತರಗೆಲೆಗಳು ಪಿಸು ಮಾತುಗಳನ್ನು ಆಡಿದಾಗ ನಿನ್ನ ನೆನಪಾಗುತ್ತದೆ . ಇರುಳಲ್ಲಿ ಒಂಟಿಯಾಗಿ ಇದ್ದಾಗ ಚಂದಿರ ನಕ್ಕಾಗ ಬೆಳದಿಂಗಳು ಹರಡಿದಾಗ ನೀನು ನೆನಪಾಗುವೆ . ಹೂ ಅರಳಿ ಕಂಪು ಸುಸಿದಾಗ ನೀ ನೆನಪಾಗುವೆಂದು ಪ್ರಕೃತಿಯ ಪ್ರತಿಯೊಂದು ಕ್ರಿಯೆ ನಡೆದಾಗ ಅವಳ ನೆನಪು ಬರುವುದೆಂದು ಗಜಲ್ ಕಾತಿ೯ ಗಂಡು ದನಿಯಲಿ ರೂಪಕಗಳೊಂದಿಗೆ ಸೊಗಸಾಗಿ ವಿವರಿಸಿದ್ದಾರೆ .
*ಮೃಢನ ಮುಡಿಯಲಿರದೆ ಧರೆಯಲೆ ಮರು ನೆಲೆಸು ಬಾ ತಾಯೆ*
*ನೀ ಮುನಿದರೆ ನಿರ್ಮಲ ಜಲ ಬರದ ಹೊರೆ ಅಳಿಸು ಬಾ ತಾಯೆ*
ಶಿವನ ಮುಡಿಯಲ್ಲಿ ಇರುವ ಗಂಗೆ ನೀನು ಮರಳಿ ಧರೆಗೆ ಬಾ ತಾಯಿ, ನೀ ಮುನಿದರೆ ಜಗವೆಲ್ಲ ಬರಡಾಗುತ್ತದೆ ಎಂದು ಜನಧಾರೆಯನ್ನು ಕರೆಯುತ್ತಾರೆ ಗಜಲ್ ಕಾತಿ೯. ಮಳೆ ಇಲ್ಲದೆ ಹನಿ ನೀರಿಲ್ಲ ಕರಿ ಮೋಡಗಳ ಧರೆಗೆ ಇಳಿಸಿ ಮಳೆ ಸುರಿಸಿ ಧನ್ಯಳಾಗು ತಾಯಿ. ಪ್ರಕೃತಿಯ ಎಲ್ಲ ಜೀವ ರಾಶಿಗಳಿಗೆ ನೀನೇ ಜೀವದಾತೆ ನೀನು ಮುನಿದರೆ ಧರೆಗೆ ಬಾರದಿದ್ದರೆ ಎಲ್ಲಾ ಪಶು ಪಕ್ಷಿ ತರುಲತೆಗಳು ಜೀವ ರಾಶಿಗಳು ಜೀವ ಹೋಗುತ್ತದೆ ಎಲ್ಲರ ಜೀವನ ಉಳಿಸು ಬಾ ತಾಯೆ ಎಂದು ಗಂಗೆಯನು ಬೇಡಿಕೊಳ್ಳುವ ದಾರುಣದ ಗಜಲ್ ಇದಾಗಿದೆ .ರೂಪಕಗಳೊಂದಿಗೆ ಸೊಗಸಾಗಿ ವಿವರಿಸಿದ್ದಾರೆ.
*ಮಗಳಿರದ ಮನೆ ಲವಣವಿರದ ಭೋಜನ ಸವಿದಂತೆ*
*ಹರಿಯುವ ನದಿಯು ಒಮ್ಮೆಗೆ ಬರಿದಾಗಿ ಬತ್ತಿದಂತೆ*
ಇದು ಒಂದು ಸುಧೀರ್ಘವಾದ 9 ದ್ವಿಪತಿಗಳ ಗಜಲ್ , ಈ ಗಜಲ್ ದಲ್ಲಿ ಮನೆಯಲ್ಲಿ ಹೆಣ್ಣು ಧ ಶೂನ್ಯವಾಗಿ ಕಾಣುವುದೆಂದು ನಗೆ ಉಲ್ಲಾಸ ಬತ್ತಿ ಹೋಗಿರುತ್ತದೆಂದು ,ಅದಕ್ಕಾಗಿ ಗಜಲ್ ಕಾತಿ೯ಯು ಲವಣವಿಲ್ಲ ಸಪ್ಪೆ ಊಟವೆಂದು ಸೊಗಸಾದ ರೂಪಕದೊಂದಿಗೆ ಗಜಲ್ ಪ್ರಾರಂಭಿಸಿದ್ದಾರೆ . ಸಂಪೂರ್ಣ ಮತ್ಲಾದ ಗಜಲ್ ಇದಾಗಿದ್ದು ಪ್ರತಿಯೊಂದು ಶೇರ್ ದಲ್ಲಿ ಮಗಳಿಲ್ಲದಿದ್ದರೆ ಮನೆ ಹೇಗಿರುತ್ತದೆಂದು ಉತ್ತಮ ರೂಪಕದೊಂದಿಗೆ ವಿವರಿಸಿದ್ದಾರೆ . ಬಾನಲ್ಲಿ ಚಂದ್ರ ನಕ್ಷತ್ರಗಳು ಇಲ್ಲದಂತೆ ,ಚೈತ್ರದಲ್ಲಿ ಚಿಗುರು ಒಡೆಯದ ವನದಂತೆ ,ಒಮ್ಮೆಲೆ ಬತ್ತಿ ಹೋದ ನದಿಯಂತೆ , ಎಂದು ಹೀಗೆ ಅನೇಕ ಉತ್ತಮ ರೂಪಕಗಳೊಂದಿಗೆ ಗಜಲ್ ರಚಿಸಿದ್ದಾರೆ .
*ಕಾವಿಯ ನಿಯಮ ಗಾಳಿಗೆ ತೂರಿ ಕಾಮವನೇಕೆ ಅರಸುವಿರಿ*
*ಆಚಾರ ವಿಚಾರ ಹುಸಿಯಾಗಿಸಿದ ಪಾಮರನೇಕೆ ಮೆರೆಸುವಿರಿ*
ನಮ್ಮ ಸಂಸ್ಕೃತಿ ಸಂಪ್ರದಾಯದಲ್ಲಿ ಕಾವಿ ಬಟ್ಟೆಗೆ ಒಂದು ಮಹತ್ವವಾದ ಸ್ಥಾನಮಾನ ಇದ್ದು ಅದನ್ನು ಧರಿಸಿದವರು ಅರಿಷ್ಟಡ್ವರ್ಗಗಳನ್ನು ಗೆದ್ದು ಜಿತೇಂದ್ರನ ಆಗಬೇಕೆಂದು ನಿಯಮ ಇದೆ. ಆದರೆ ಇಂದು ಸಮಾಜದಲ್ಲಿ ಕಪಟ ಸನ್ಯಾಸಿಗಳು ಹೆಚ್ಚಾಗಿದ್ದು ಕಾವಿಯ ಮರ್ಯಾದೆ ಹೋಗಿದೆ. ಕಾವಿ ಧರಿಸಿ ಸನ್ಯಾಸಿಯಾಗಿದ್ದರು ಕಳ್ಳತನದಿಂದ ದೇಹದಾಹವನ್ನು ಕಾಮದ ದಾಹವನ್ನು ತೀರಿಸಿಕೊಳ್ಳುವವರು ಹೆಚ್ಚಾಗಿದ್ದಾರೆ . ಇಂತಹ ಕಪಟ ಸನ್ಯಾಸಿಗಳನ್ನು ಕಂಡುಹಿಡಿದು ಶೀಕ್ಷಿಸ ಬೇಕು , ಇಂತಹ ಮೋಸಗಾರರನ್ನು ದೊಡ್ಡವರೆಂದು ಮರ್ಯಾದೆ ಕೊಟ್ಟು ಪೂಜ್ಯ ಸ್ಥಾನದಲ್ಲಿ ಕೂಡಿಸುವುದು ಸರಿಯಲ್ಲವೆಂದು ಹೇಳುವ ಸಾಮಾಜಿಕ ಕಳಕಳಿಯ ಗಜಲ್ ಇದಾಗಿದೆ.ಗಜಲ್ ಕಾತಿ೯ ಧೈರ್ಯವಾಗಿ ನೇರವಾಗಿ ಕಾವಿಯ ಧರಿಸಿದ ಕಪಟ ಸನ್ಯಾಸಿಗಳ ಬಗ್ಗೆ ಗಜಲ್ ದಲ್ಲಿ ಖಂಡಿಸಿದ್ದಾರೆ .
*ಮತ ಪಂಥಗಳ ಅಮಲಿಗೆ ಆಣೆಕಟ್ಟು ಕಟ್ಟುತ ಮೆರೆಯುವ ಜಾಣರು ನಾವು*
*ಸ್ವಾರ್ಥ ದುರಾಸೆಗೆ ದೇಗುಲ ಗುಂಬಜ್ ಮೆಟ್ಟುತ ಮೆರೆಯುವ ಜಾಣರು ನಾವು*
ಇದು ಒಂದು ಸಮಾಜದಲ್ಲಿ ಇಂದು ಹೆಚ್ಚಾಗಿ ಚರ್ಚೆಯಾಗುತ್ತಿರುವ ಜಾತಿ ಧರ್ಮ ಪಂಥಗಳ ಅಮುಲು ಹೆಚ್ಚಾಗಿದ್ದು ತಮ್ಮ ಸ್ವಾರ್ಥಕ್ಕಾಗಿ ಜಾತಿಗಳ ಗುಂಪು ನಿರ್ಮಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವದನ್ನು ಗಜಲ್ ಕಾರ್ತಿಯವರು ಸೊಗಸಾಗಿ ವಿಡಂಬನಾತ್ಮಕವಾಗಿ ವಿವರಿಸಿದ್ದಾರೆ . ಈ ಗಜಲ್ ದಲ್ಲಿ ಬಳಿಸಿದ “ಮೆರೆಯುವ ಜಾಣರು ನಾವು “ಎಂಬ ರದೀಫ್ ವಿಡಂನಾತ್ಮಕವಾಗಿ ಹಾಗೂ ಮನಚಾಗಿ ಇರಿಯುವ ರದೀಪ ಆಗಿದೆ .ಸಾಮಾಜಿಕ ವ್ಯವಸ್ಥೆಯಲ್ಲಿ ಮನುಷ್ಯ ಜಾಣ ಕುರುಡನಾಗಿ ನಡೆಯುತ್ತಿರುವುದನ್ನು ಮತ್ತು ತಮ್ಮ ಸ್ವಾರ್ಥಕ್ಕಾಗಿ ಹೇಗೆ ತತ್ವಗಳನ್ನು ನಿರ್ಮಿಸುತ್ತಾರೆ ಎಂದು ಗಜಲ್ ಕಾರ್ತಿಯವರು ಸೊಗಸಾಗಿ ರೂಪಕದೊಂದಿಗೆ ವಿವರಿಸಿದ್ದಾರೆ.
*ಮನುವಾದಿಗಳ ಲೋಕದಲಿ ಸ್ತ್ರೀ ಕಸಕ್ಕಿಂತ ಕಡೆ*
*ಛಾಪಿಹುದು ಎಲ್ಲೆಡೆ ಅರಿಯದೆ ಮುಚ್ಚಿಹರು ಬಾಗಿಲು*
ಇದು ಒಂದು ಸ್ತ್ರೀ ಸಂವೇದನೆಯ ಗಜಲ್ ಆಗಿದ್ದು ಸಮಾಜದಲ್ಲಿ ಹೆಣ್ಣನ್ನು ಯಾವ ರೀತಿಯಾಗಿ ನಡೆಸಿಕೊಳ್ಳುತ್ತಾರೆಂದು ಗಜಲ್ ಕಾರ್ತಿ ವಿವರಿಸಿದ್ದಾರೆ . ವೇದಕಾಲದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ, ವಿದ್ಯೆ ಕೊಟ್ಟು ಸಮಾನರಾಗಿ ಕಾಣುತ್ತಿದ್ದರು ಮುಂದೆ ಮನುಕಾಲದಲ್ಲಿ ಈ ಪದ್ಧತಿ ಹೋಯಿತು ಮನು ಸ್ತ್ರೀ ಸ್ವಾತಂತ್ರ್ಯಕ್ಕೆ ಯೋಗ್ಯರಲ್ಲ ವೆಂದು ಸಾರಿದ ,ಮುಂದಿನ ಪೀಳಿಗೆ ಆ ಮನು ವಾದವನ್ನು ಕಾರ್ಯರೂಪಕ್ಕೆ ತಂದಿದ್ದು ಇಂದಿಗೂ ಅದು ಜಾರಿಯಲ್ಲಿ ಇದೆ. ಹೆಣ್ಣು ಇಂದು ಎಲ್ಲಾ ಕ್ಷೇತ್ರದಲ್ಲಿ ಸಮನಾಗಿ ದುಡಿದರೂ ಅವಳಿಗೆ ಸನ್ಮಾನಗಳು ಸಿಗುವುದು ಸಾಧ್ಯವಿಲ್ಲ ಸಮಾನತೆ ಎಂಬುವುದು ಕೇವಲ ಕಾಗದದಲ್ಲಿ ಉಳಿದಿದ್ದು ಇಂದು ಅವಳು ಕಸಕ್ಕಿಂತಲೂ ಕಡೆಯಾಗಿದ್ದಾಳೆ ಎಂದು ಗಜಲ್ ಕಾರ್ತಿಯವರು ರೂಪಕಗಳೊಂದಿಗೆ ವಿವರಿಸಿದ್ದಾರೆ.
*ಕೂಗದಿರು ಪಾಂಚಾಲಿ ಉಡುಪನೀಯಲು ಗೋವಿಂದ ಬರದ ಕಾಲವಿದು*
*ದಾನವ ವೇಷದಲಿ ಮೆರೆಯುವ ದುರುಳ ಸುಷಾಸನರೆ ತುಂಬಿದ ನೆಲವಿದು*
ದ್ವಾಪರ ಯುಗದಲ್ಲಿ ದ್ರೌಪದಿ ತನ್ನ ಮಾನ ಕಾಪಾಡಿಕೊಳ್ಳಲು ಶ್ರೀಕೃಷ್ಣನನ್ನು ಮೊರೆ ಹೋಗುತ್ತಾಳೆ ಆಗ ಕೃಷ್ಣ ಅವಳ ಮಾನ ಕಾಪಾಡಲು ವಸ್ತ್ರವನ್ನು ನೀಡಿದ ಕಥೆ ನಮಗೆಲ್ಲ ಗೊತ್ತಿದೆ ,ಆದರೆ ಇಂದು ಇದು ಕಲಿಯುಗ ಹೆಣ್ಣಿನ ಮಾನ ಕಾಪಾಡಲು ಯಾರು ಬರುವುದಿಲ್ಲ ಸಾಧ್ಯವಾದಷ್ಟು ಅವಳನ್ನು ಉಪಯೋಗಿಸಲು ಬಯಸುವ ದುರುಳರೆ ಈಗ ಜಗದಲ್ಲಿ ತುಂಬಿದ್ದಾರೆ . ಹೆಣ್ಣಿನ ಮೇಲೆ ನಿತ್ಯ ನಡೆಯುವ ಲೈಂಗಿಕ ದೌರ್ಜನ್ಯ ಗಳಿಗೆ ನ್ಯಾಯ ಸಿಗದೇ ಎಷ್ಟು ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಇಂದು ಸಮಾಜದಲ್ಲಿ ನಡೆಯುತ್ತಿದೆ ಎಂದು ಹೇಳುವ ಮಹಿಳಾ ಸಂವೇದನೆಯ ಗಜಲ್ ಇದಾಗಿದೆ . ಮಹಾಭಾರತದ ರೂಪಕಗಳನ್ನು ಆಧರಿಸಿ ಗಜಲ್ ನ್ನು ಸೊಗಸಾಗಿ ವಿವರಿಸಿದ್ದಾರೆ.
ಪಾರ್ವತಿ ಎಸ್ ಬೂದೂರುವರ *ವಿಳಾಸ ವಿರದ ವೇದನೆಗಳು* ಎಂಬ ಶೀರ್ಷಿಕೆಯ ಗಜಲ್ ಸಂಕಲನದ ಗಜಲ್ ಗಳು ಓದಿಸಿಕೊಂಡು ಹೋಗುತ್ತವೆ ಮತ್ತು ಚಿಂತನೆಗೆ ಹಚ್ಚುತ್ತವೆ. ಪಾರ್ವತಿಯವರ ಬಳಸಿದ ರದೀಫ್ ಗಳು ಓದುಗರೊಂದಿಗೆ ಸಂವಾದನೆಗೆ ಇಳಿಯುತ್ತವೆ ಮತ್ತು ಹೊಸ ಹೊಸ ರದೀಫ್ ಗಳನ್ನು ಉಪಯೋಗಿಸಿದ್ದಾರೆ. ಪಾರ್ವತಿ ಬೂದೂರು ಅವರು ಹಲವಾರು ವಿಷಯಗಳ ಮೇಲೆ ಗಜಲ್ ಗಳನ್ನು ಸೊಗಸಾಗಿ ರಚಿಸಿದ್ದಾರೆ .ಪ್ರೀತಿಯ ಕನವರಿಕೆಗಳ ಗಜಲ್ ಗಳು ಓದುಗರನ್ನು ಆವರಿಸುತ್ತವೆ ಮತ್ತು ಸುಂದರವಾಗಿವೆ. ಇವರಿಂದ ಇನ್ನೂ ಉತ್ತಮವಾದ ಗಜಲ್ ಗಳು ರಚನೆಯಾಗಿ ಕೃತಿಗಳು ಪ್ರಕಟವಾಗಿ ಕನ್ನಡ ಗಜಲ್ ಸಾಹಿತ್ಯ ಲೋಕವನ್ನು ಶ್ರೀಮಂತ ಗೊಳಿಸಲೆಂದು ಶುಭ ಹಾರೈಸುತ್ತ ನನ್ನ ಬರಹಕ್ಕೆ ವಿರಾಮ ಕೊಡುತ್ತೇನೆ .
ಪ್ರಭಾವತಿ ಎಸ್ ದೇಸಾಯಿ
