ಡಾ ಅನ್ನಪೂರ್ಣ ಹಿರೇಮಠರವರ ಗಜಲ್

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಗಜಲ್

ಬೇಡ ಬೇಡವೆಂದರೂ ನಗು ನಗುತ ಮನದೊಳಗೆ ನುಸುಳಿದೆಯಾ ಗುಲಗಂಜಿ
ಸಾಕು ಸಾಕೆಂದರೂ ಆಡುತ ಆಡುತ ಉಸಿರೊಳಗೆ ಕಲಿತುಹೋದೆಯಾ ಗುಲಗಂಜಿ

ಏನೂ ಅರಿಯದ ಮುನ್ನ ಗರಿಕೆಯಂತೆ ನನ್ನೊಳು ಚಿಗುರಿ ಹಸಿರಾದೆಯಲ್ಲ
ದೂರ ದೂರವೆಂದರೂ ಸೆಳೆಯುತ ಬಯಕೆಯೊಳಗೆ ಹಸಿರಾದೆಯ ಗುಲಗಂಜಿ

ಕರೆದು ಸತ್ಕರಿಸಿ ಆಧರಿಸದೆ ಅರಿಯದೆ ಬಂಧುವಂತೆ ಕುದುರಿ ಬೆಸೆದೆಯಲ್ಲ
ನಿಧಾನ ನಿಧಾನವೆಂದರೂ ಬಳಿ ಸುಳಿಯುತ ಕಣ್ಣೊಳಗೆ ಉಳಿದೆಯಾ ಗುಲಗಂಜಿ

ಸೋತು ಶರಣಾಗದೆ ಒಲವ ಸುರಿಯುವ ಸಖನಂತೆ ಸವರಿ ಕೈ ಕುಲುಕಿದೆಯಾ
ಇರು ಇರುವೆಂದರೂ ಮಧುರ ಮಾತಾಡುತ ನನ್ನೊಳಗೆ ನೆಲೆಯಾದೆಯ ಗುಲಗಂಜಿ

ಬಯಕೆ ಬಾಂದಳದಲಿ ಚೆಂದದ ಹೂವಿನಂತೆ ಅರಳಿ ಚದುರಿ ಪಿಸುಗುಟ್ಟಿದೆಯಲ್ಲ
ಒಲ್ಲೆ ಒಲ್ಲೆನೆಂದರೂ ಪ್ರೀತಿಪರಿಮಳಿಸುತ ಜೀವದೊಳಗೆ ಬೇರೂರಿದೆಯಾ ಗುಲಗಂಜಿ

ಹೊರಳಿ ಕೆರಳಿಸದೆ ನನ್ನೊಡೆಯ ದೊರೆಯಂತೆ ಮುದುರಿ ಅಪ್ಪಿಕೊಂಡೆಯಲ್ಲ
ಬೆಪ್ಪು ಬೆಪ್ಪಾಗಿಸಿ ಒಪ್ಪಿಗೆಯ ಸವಿಯುತ ಒಡಲೊಳಗೆ ಒಂದಾದೆಯಾ ಗುಲಗಂಜಿ

ಒಪ್ಪಿಗೆ ಅನುಮತಿಯ ಕೇಳದೆ ಪ್ರಿಯಕರನಂತೆ ಅನುಳ ಅಧರಕೆ ಮುತ್ತಿಟ್ಟೆಯಲ್ಲ
ಇಂದೇಕೆ ಬಾ ಬಾಯೆಂದು ಕೂಗಿದರೂ ದೂರಾಗಿ ಹೃದಯ ಹಿಂಡಿದೆಯಾ ಗುಲಗಂಜಿ


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top