ರಾಧ.ಎಚ್.ಎಂ ಕವಿತೆ-ತಾಯ್ತನಕ್ಕೆ ನೋವಾದರೆ…

ಕಾವ್ಯ ಸಂಗಾತಿ

ರಾಧ.ಎಚ್.ಎಂ.

ತಾಯ್ತನಕ್ಕೆ ನೋವಾದರೆ…


ಮಲೆನಾಡೊ ಮಣಿಪುರವೋ
ಎರಡೂ ಬೇರಲ್ಲ
ಮಳೆಗಾಲಕ್ಕೆ ಜೀವಜಲವಿಲ್ಲ

ಅಪ್ಪನ ಕಣ್ಣಲ್ಲಿ
ಅರಿವೆ ಇಲ್ಲದ ಅರಿವು
ಇದ್ದರೆಷ್ಟು ಸತ್ತರೆಷ್ಟು

ಅಣ್ಣ ತಮ್ಮನಿಗೆ ಜೀವವಿಟ್ಟ
ಅವ್ವನ ಗರ್ಭಗೃಹ ಮಾಡಿದ
ತಪ್ಪಾದರೂ ಏನು?

ನಾಳೆಗಾದರೂ ಈ ಎದೆಹಾಲು
ಬತ್ತಿಹೋಗಿ ಗಂಡೆದೆಗೆ
ಒಡಲ ಹಸಿವು ತಾಕಲಿ ಬಿಡು

ರಕ್ತ ಒಸರಿ ಹಾಲು ಹರಿವ
ನಾಳೆಗಳ ಸಂಕಟಕ್ಕೆ
ಇನ್ಯಾವ ದರ್ದಿದೆ

ಮುಗಿಲ ಮೈ ತೊಳೆವ
ತಾಯ್ತನಕ್ಕೆ ನೋವಾದರೆ
ಇಳೆತೊಯ್ದು ಮುಳುಗಲಿ

ಆತ್ಮದ ಬಯಲೆದುರು
ಬೆತ್ತಲೆ ಶಾಪ ಎಂದರೆ
ಹಾಲು ಹಳ್ಳವಾಗುವುದಲ್ಲ !


ರಾಧ.ಎಚ್.ಎಂ.

Leave a Reply

Back To Top