ಅಂಕಣ ಸಂಗಾತಿ
ಸಕಾಲ
ಶಿವಲೀಲಾ ಹುಣಸಗಿ
ಭೂಮಿಯ ಅಂತರಂಗ ಬರಿದಾದಷ್ಟು….
ಮಳೆ ಮಳೆ ಮಳೆ aಳೆ
ಆಲಿಂಗನಕೆ ಭರಣಿ ಮಳೆ
ಸಿಹಿ ಚುಂಬನಕೆ ಸ್ವಾತಿ ಮಳೆ
ಒಸಗೆಯ ಹಗಲು ಹಸ್ತ ಮಳೆ
ಬೆಸುಗೆಯ ರಾತ್ರಿ ಚಿತ್ತ ಮಳೆ
ಮಧುರ ಮಧುರ ಮೈತ್ರಿಯ ಮಳೆಯಲಿ ಶಯನ
ಒಡಲ ಒಳಗೆ ಉರಿಯುವ ಬಯಕೆಯ ಶಮನ
ಮುಂಗಾರುಹಿಂಗಾರುಮಳೆ ನೀರೇ
ಪನ್ನೀರು,ಮಳೆಯ ಹಾಡ ಮರೆಯಬಲ್ಲವೇ…
ಹಂಸಲೇಖ
ಗೀತೆಗಾವ ಬಂಧನ ಹದಿಹರೆಯದ ಮನಸುಗಳಿಗೆ ಗರಿಗೆದರುವ ಮನಸೋಲಂಘನ.ಮಳೆಯ ತಂಪಾದ ಗಾಳಿಯ ಗಾಳಕೆ ಸಿಲುಕಿ ತೇಲಾಡುವ ಮನಕ್ಕೊಂದು ಬೆಚ್ಚಗಿನ ಉಡುಗೊರೆ.ಬಿಸಿಬಿಸಿ ಚಹಾ ಕಾಫೀ ಹೀರುತ್ತಾ ಒಬ್ಬರಿಗೊಬ್ಬರು ಮಳೆಯ ಹನಿಗಳಿಗೆ ಮೈಮರೆವ ಕಾಲವೊಂದಿತ್ತು.ಈಗ ಅದಕ್ಕೊಂದು ಬ್ರೇಕ್ ಬಿದ್ದಂತೆ.ಮಳೆಗೊಂದು ಕಾಲ ಮನೆಯೊಂದು ಸೋರುತಿಹುದು ಅನುಗಾಲ.ಮನೆತುಂಬ ಲೋಟ,ಚೆಂಬು,ಬಕೇಟು,ಬಗೋಣಿ ಇಟ್ಟಿದ್ದೆ ಇಟ್ಟಿದ್ದು ಅವೆಲ್ಲ ಮಳೆಯ ಹನಿ ತೊಟ್ಟಿಕ್ಕಿದಂತೆಲ್ಲ ಮನೆತುಂಬ ತಾಳ ತಟ್ಟಿದ ಅನುಭವ.ಇವೆಲ್ಲ ಬದುಕಿಗೆ ಒಂದಲ್ಲ ಒಂದು ರೀತಿ ಪಾಠ ಕಲಿಸಿದಂತೆ.ನಮಗೆಲ್ಲ ಮಳೆಗಾಲವೆಂದರೆ ಖುಷಿಯೋ ಖುಷಿ.ಮಳೆಯಲ್ಲಿ ಒದ್ದೆಯಾಗಿ ಕುಣಿದ ಸಂತಸ ಒಂದೆಡಯಾದರೆ,ಅಮ್ಮ ಗುದ್ದು ಮರೆಯಲು ಸಾಧ್ಯವಿಲ್ಲ.ಇದು ನಮಗಷ್ಟೆ ಅಲ್ಲ,ಪ್ರಪಂಚದ ಎಲ್ಲರ ಬಾಲ್ಯ ಹೀಗೆಯೇ ಕಳೆದಿರುತ್ತದೆ.
ಒಂದಿಷ್ಟು ನಮ್ಮಂತಹ ತರಲೆಗಳಿಗೆ ಗುದ್ದು ಜಾಸ್ತಿನೆ.
ಜಾತಕಪಕ್ಷಿಯಂತೆ ಕಾಯ್ವ ಅನ್ನದಾತನಿಗೆ ಗೊತ್ತು ಮಳೆಯ ಮಹತ್ವ. ರೈತರಿಗೆ ಹೊಲ ಬಿತ್ತುವ ಆತುರ,ಬೀಜ ಮೊಳಕೆಯೊಡೆಯುವ ಹದಕ್ಕೆ ಹೊಲದ ಸಿದ್ದತೆ.ಪ್ರಕೃತಿ ಎಷ್ಟು ಸಾಧ್ಯವೋ ಅಷ್ಟು ಮನುಜನಿಗೆ ಸಹಕಾರದ ಛಾಯೆಯನ್ನು ಹೊದಿಸಿ,ಪರೋಕ್ಷವಾಗಿ ಸಲಹುತ್ತ ಬಂದಿರುವುದಕ್ಕೆ ಶತಮಾನಗಳೇ ಸಾಕ್ಷಿ.ಮಳೆಯನ್ನೇ ನಂಬಿರುವ ಕುಟುಂಬಗಳಿಗೆ ಬರಗಾಲದ ಛಾಯೆ ಬರೆಯೆಳೆದಂತಾದರೆ ಮುಂದೇನು ಎಂಬ ಆತಂಕದಿಂದ ಬರಗೆಟ್ಟು ಅದೆಷ್ಟೋ ಕುಟುಂಬ ಹತಾಶೆಯಿಂದ ನರಳಿ ಸಾಯುವಂತಾಗುತ್ತಿದೆ.ರೈತರ ಆತ್ಮಹತ್ಯೆಗಳು ಅಸಾಮಾನ್ಯ ಸಂಗತಿಗಳು. ಇದನ್ನು ಕಂಡು ಕಾಣದಂತೆ ಬದುಕುವ ಸ್ಥಿತಿ ನಿರ್ಮಾಣವಾಗಿದ್ದು ದಿಟ.
ಮತ್ಯಾವ ಮನಸಿಗೆ,ಮನವಿಗೆ ಕರುಗುವ ಗಳಿಗೆ ಬರಬಹುದೋ ಎಂಬ ಚಿಂತೆ.ಮೇಘನ ಬೇಟಿ ಧರೆಗೆ ವರ್ಷ ಪೂರ್ತಿ ಇದ್ದರೆ ಬದುಕು ಪ್ರವಾಹದ ನಡುವೆ ಕೊಚ್ಚಿ ಹೋಗುವುದಂತು ಗ್ಯಾರಂಟಿ.ನಮ್ಮವ್ವ ತಮ್ಮ ಸಮಯದ ಮಳೆಯ ಆರ್ಭಟ ನೆನೆಯುತ್ತ,ಮಳೆಯೆಂದರೆ ಅದೇ ದೆವ್ವನಂತ ಮಳಿ..ನೀರು…ನೀರು…ನೀರು…ವಾರಾಂತವಾರ ದುಡಿಮೆಯಿಲ್ಲದೆ…ಒದ್ದೆ ಸೌದೆಯ ಊದಿ ಊದಿ ಗಂಜಿ ಕುಡಿದು ಮಲಗೋ ಕಾಲವದು.ಕಂಬಳಿ,ಪ್ಲಾಸ್ಟಿಕ್ ಚೀಲ ಹೊದ್ದು ಕೆಲಸ ಮಾಡಿ ಮನಿಗೆ ಬಂದಾಗ ಕಾಲುಗಳು ನೀರಲ್ಲಿ ಸೆಲತಿದ್ದು,ಒಲಿಮುಂದ ಕಾಸಗೊಂತ ಕುಂತ ನೆನಪು ಮಾಡಿಕೊಂಡಾಗ ಅವಳ ಮುಖದಲ್ಲಿ ಅದೇನೋ ಕಳೆ…ಮಳೆಯೊಟ್ಟಿಗೆ ಗಾಳಿ ಸೇರಿ ನೆಲಕುರುಳುವ ಮರಗಿಡಗಳಿಗೇನು ಕಮ್ಮಿಯಿಲ್ಲ.ಮೊದಲೆಲ್ಲ ಅಷ್ಟೊಂದು ಮರಗಿಡಗಳು ನೆಲಕ್ಕುರುಳುತ್ತಿರಲಿಲ್ಲ.ಅದರೆ ಈಗ ಅವುಗಳ ಸಂಖ್ಯೆ ಜಾಸ್ತಿ.ಯಾವಾಗ ಯಾವ ಮರ ಹೇಗೆ ಉರುಳುತ್ತೊ ಗೊತ್ತಿಲ್ಲ.ಮಣ್ಣಿನ ಹಿಡಿತ ಸಡಿಲವಾಗಿದ್ದಂತೂ ಸತ್ಯ.ಅರಬೈಲ್ ಘಟ್ಟದ ತಿರುವುಮುರುಗಳು ಒಂದುಕಡೆ ವಾಲಿದಂತೆ.ಮತ್ತೊಂದುಕಡೆ ಜಾರುಬಂಡಿಯಂತೆ.ಕಳೆದ ಎರಡು ವರ್ಷಗಳ ಚಿತ್ರಣ ಗುಡ್ಡ ಕುಸಿದು ಸಂಕಷ್ಟಕ್ಕೆ ಇಡಾದ ಸಮಯ.ಕರ್ತವ್ಯ ಸ್ಥಳ ಅರಬೈಲ್ ತಲುಪುವಾಗೆಲ್ಲ ಮಳೆಯ ಅಬ್ಬರದ ನಡುವೆ ಕುಸಿವ ಧರೆಯ ಬರೆಗೆ ಒದ್ದಾಡಿದ ನೆನಪು ಮಾಸಿಲ್ಲ.ಅವೆಲ್ಲದರ ಹಿಂದೆ ಉತ್ತರ ಒಂದೇ ಪರಿಸರ ಸಂರಕ್ಷಣೆ.
ಉಳಿವಿನ ಭರದಲ್ಲಿ ಅಳಿವ ಬಯಸುವೆವು ನಾವು
ಬೆರಳ ತೋರಿಸಿ ಹಸ್ತನುಂಗುವ ಭಕ್ಷಕರು ನಾವು
ನಮಗಾರ ಭಯವಿಲ್ಲ,ಕ್ಷಣಿಕ ಸುಖದ ಬಂಟರು
ಊರು ಸುಟ್ಟರು ಹನುಮಂತ ಹೊರಗೆಂಬರು
ಶಿವಲೀಲಾಮೃತ
ಕಾಲ ಬದಲಾದಂತೆ ಪರಿಸರದ ಚಿತ್ರಣವು ಬದಲಾಗಿದೆ.ಕಾರಣ ಜನರ ಅವಶ್ಯಕತೆ ಪೂರೈಸಲು ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ನಿತ್ಯ ಮಾರಣಹೋಮದತ್ತ ಸಾಗುತ್ತಿರುವುದಂತು ಸತ್ಯ.ಗಣಿ ಕೈಗಾರಿಕೆಗಳು ಪ್ರಕೃತಿಯ ಒಡಲನ್ನು ಸೀಳಿದಷ್ಟು,ಅಂತರಶಕ್ತಿ ತನ್ನ ಬಲವನ್ನು ಕಳೆದುಕೊಳ್ಳುತ್ತ ಬರುತ್ತಿರುವುದನ್ನು ಯಾರು ಅಲ್ಲಗಳೆಯುವಂತಿಲ್ಲ. ಆದರೂ ಅದರೊಟ್ಟಿಗಿನ ಭಯ ನಮ್ಮನ್ನು ಇನ್ನೂ ಕಂಗಾಲಾಗಿಸಿಲ್ಲ ಅದಕ್ಕೆ ನಾವುಗಳು ಭಯಪಟ್ಟರೂ,ಸಂಪೂರ್ಣ ಬಲಿಯಾಗಿಲ್ಲ. ತಡವಾದರೆ ನಷ್ಟ ಯಾರಿಗೆ? ಎಂದೆಲ್ಲ ಬೊಬ್ಬಿಡುವ ಹೊತ್ತಿಗೆ ಶುರುವಾದ ಮಳೆಹನಿಯ ಅಬ್ಬರಕೆ ಸಡಿಲಾದ ಗುಡ್ಡಗಳು ರಸ್ತೆಗೆ ಅಡ್ಡಲಾಗಿ ನಿರಾಯಾಸವಾಗಿ ಆಯಾತಪ್ಪಿ ಮಗ್ಗುಲಾದಾಗ ರಸ್ತೆ ಸಂಚಾರ ಸ್ಥಗಿತ ಕ್ಷಣಕಾಲ…ಅಬ್ಬಾ! ಎಂತಹ ಮಳೆ ಎಂಬ ನಿಟ್ಟಿಸಿರು.
ನನಗ್ಯಾಕೋ ಮಳೆಯಲಿ ಜೀವನೋತ್ಸಾಹದ ಗುಂಗಿಲ್ಲವೆನಿಸಿತ್ತು.ಕಾರಣ ಮಳೆ ಕಂಡು ಖುಷಿ ಪಡುವ ಜನರ ದಂಡು ಮಾಯವಾಗಿರುವುದಕ್ಕೂ ಇರಬಹುದು.ಅತೀವವಾಗಿ ಸುರಿದ ಮಳೆ ಯಾರಿಗೆ ಸುಖ ನೀಡಿತು? ಕರೆ,ಹಳ್ಳ, ನದಿ ಉಕ್ಕಿಹರಿದು ಆತಂಕ ಸೃಷ್ಟಿಸಿದರೆ,ಅನೇಕ ಜೀವ ಹಾನಿಗಳು ಸಂಭವಿಸಿ ನರಳುವ ಸ್ಥಿತಿ ಯಾರಿಗೆಂದು ಯೋಚಿಸಬೇಕಿದೆ. ಹರಿವು ಇಳಿಜಾರಿನತ್ತವೆಂಬ ಚಿಂತನೆ ನಮಗಿಲ್ಲ.ಹರಿವ ಹರಿವಿಗೆ ಅಡ್ಡಲಾಗಿ ನಿಂತು ಅವಘಡಗಳ ಅನಾಹುತಕ್ಕೆ ಸಿಲುಕಿ ಮುಳುಗಿ ಹೋದ ನಂತರ ತತ್ತರಿಸಿ ಪರಿಹಾರವೆಂಬ ಪುಡಿಗಾಸಿಗೆ ಕೈಯೊಡ್ಡಿ ಸಮಾಧಾನ ಪಡುವ ಕೆಲಸವಾದ್ರೆ ಮುಗಿತು…ಮಳೆಗೊಂದು ಸಲಾಂ.ಬೆಳೆಗೆ ಬೆಲೆಕಟ್ಟಲಾದಿತೆ?ಬರಗಾಲದ ಸಾಲಕೆ ಮನ್ನಾ ಆದರೆ ಆತು.ಮತ್ತೆ ಸಾಲ ಮಾಡಲು ಹೆದರಿಕೆಯುಂಟೆ? ಅತಿವೃಷ್ಟಿ,ಅನಾವೃಷ್ಟಿ ಜೀವನದ ಏರಿಳಿತಕೆ ಮಾರಕವೆಂಬುದು ತಿಳಿದಿರಬೇಕಾದುದು ಅನಿವಾರ್ಯ.
“ಮಳೆ ಬಂತು ಮಳೆ ಮಳೆ ಹನಿಯಾಗಿ ಬಂದಿತು
ಬಾನಿಂದ ತಾಯೂರ ಕೆರೆಯ ತುಂಬಿತು
ಆನಂದಾ ಆಹಾ ಮಳೆ ಬಂತು ಮಳೆ..
ಎಂಬಹಾಡಿನಂತೆ ಉಲ್ಲಾಸ ಪಡುವ ಕ್ಷಣ ಗಣನೆಯಾಗಬೇಕಿದೆ.ಹೀಗಾಗಿ ಜಗದ ಸಂತಸ ಅಡಗಿರುವುದು,ಪ್ರಕೃತಿಯ ಉಳಿವಿನಲ್ಲಿ.ಜಗತ್ತು ವಿಶಾಲವಾಗಿದೆ.ದಿನೆ ದಿನೆ ಅರಣ್ಯ ಸಂಪತ್ತು ಕ್ಷೀಣಿಸುತ್ತಿದೆ.ಹಿಂದಿನ ಬದುಕಿಗಿಂತ ಇಂದು,ಮುಂದಿನ ಬದುಕು ಅಷ್ಟು ಸುಲಭವಲ್ಲ ಎಂಬ ನಿಜಾಂಶ ಅರಿತಷ್ಟು ಒಳ್ಳೆಯದು.ಭೂಮಿಯ ಅಂತರಂಗ ಬರಿದಾದಷ್ಟು ಮನುಷ್ಯನ ಜೀವನ ನೀರ ಮೇಲಿನ ಗುಳ್ಳೆಯಂತೆ,ಅಂತ್ಯವು ಖಚಿತ.ಪರಿಸರ ಸಮೃದ್ದಿಯಾದರೆ ಮಾತ್ರ ಎಲ್ಲವೂ ಸಮೃದ್ಧ ಬದ್ದ ಹಸಿರು ಉಸಿರಾಗಿ ಪರಿವರ್ತನೆಯಾಗಲು ಸಾಧ್ಯ.ಜೀವ ಜಲ ಜಲಪ್ರಳಯವಾಗದಂತೆ ತಡೆಯವ ಶಕ್ತಿ ಪರಿಸರಕ್ಕಿದೆ.
ಶಿವಲೀಲಾ ಹುಣಸಗಿ
ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ೧)ಬಿಚ್ಚಿಟ್ಟಮನ,೨)ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು ೩) ಗಿರಿನವಿಲನೆನಪುಗಳು ಪ್ರೇಮಲಹರಿಗಳು,೪) ಗೋರಿಯಸುತ್ತ ಸಪ್ತಪದಿ ತುಳಿದಾಗ ಕಥಾ ಸಂಕಲನ, ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿ,ಜಿಲ್ಲಾಧ್ಯಕ್ಷೆ ಕೇ.ಕ.ಸಾ.ವೇದಿಕೆ.ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ
ಮುಂಗಾರ ಮಳೆಯಂತೆ ಮನ ಮುಟ್ಟುವ ಅಕ್ಷರಗಳ ಸಾಲುಗಳ.ಅತೀ ಸುಂದರ…..
ತುಂತುರು ಮಳೆಯ ಉಲ್ಲಾಸಭರಿತ ಅನುಭವದ ಜ್ಞಾನಾಮೃತ ಹರಿಸುವ ಲೇಖನ… ಸುಂದರ✨️
ತುಂತುರು ಮಳೆಯ ಚಳಿಯಲ್ಲಿ..
ಚಿತ್ತ, ಮನಸ್ಸನ್ನ ಬೆಚ್ಚಗೆ ಮಾಡಿತು..
ಹಸಿರೊದ್ದ ನಿಮ್ಮ ಲೇಖನ..
ಸೊಗಸಾದ ಲೇಖನ ಸಿಸ್ಟರ್..
ಭೂಮಿಗೆ ಭಾರವಾಗದೆ,ನಾವು ಹಗುರಾದಷ್ಟು ಒಳ್ಳೆಯದು.ಮನುಜ ತಾ ಅರಿತು ಬಾಳಿದರೆ ನಿಜವಾಗಿಯೂ ಸಂಭ್ರಮಿಸಿ ಬದುಕಬಹುದು.ಆ ಬಾಲ್ಯ,ಆ ಯೌವ್ವನ….ಆಗಿನ ಜೀವನ ನಡೆಸಿದ ಅಮ್ಮನ ಕಾರ್ಯ ನೋಡಿದರೆ,ಈಗ ತುಂಬಾನೆ ವ್ಯತ್ಯಾಸ ಕಾಣಬಹುದು.ತುಂಬಾ ಸೊಗಸಾಗಿ ಹಿಂದೆ ನಾ ತಿಳಿಸಿದಂತೆ…ಇವರ ಲೇಖನ ಒಂದು ಸಂದೇಶ ಇನ್ನೊಂದು ಮನಸ್ಸಿಗೆ ತಟ್ಟುವಂತೆ ಇರುತ್ತದೆ. ಅವರಿಗೊಂದು ಸಲಾಮ್ ಶುಭವಾಗಲಿ
ಭೂಮಿಯ ಅಂತರಂಗ ಬರಿದಾದಷ್ಟು…..! ಸಕಾಲದಲ್ಲಿಯ ಅಂಕಣ ಶ್ರೀಮತಿ ಶಿವಲೀಲಾ ಹುಣಸಗಿ ಅವರಿಂದ. ಹಂಸಲೇಖ ಅವರ ಮಳೆ ಕುರಿತಾಗಿ ಹೇಳಿದ “ಮುಂಗಾರು ಹಿಂಗಾರು ಮಳೆ ನೀರೆ ಪನ್ನೀರ, ಹಾಡ ಮರೆಯ ಬಲ್ಲವೆ” ಮಾತಿನೊಂದಿಗೆ ಪ್ರಾರಂಭವಾಗುತ್ತದೆ. ಮಳೆ ಸುರಿಯುವ ಸಿರಿ ವೈಭವದ ಗದ್ಯಶೈಲಿಯು ಕಾವ್ಯ ಮಯವಾಗಿದೆ. ಕಾವ್ಯದ ಸಾಲುಗಳೂ ಗದ್ಯ ಬರಹದ ನಾಡಿ ಮಿಡಿತದಂತಿವೆ. ಮಲೆನಾಡ ಅರೆಬೈಲು ಘಟ್ಟದ ತಿರುವು ಮುರುವು ಹಾವಿನ ನಡೆಯ ರಸ್ತೆ…ಗುಡ್ಡ ಕುಸಿತ ಅನಾಹುತ.. ಇವೆಲ್ಲಕ್ಕೂ
ಅವೈಜ್ಞಾನಿಕ ಯೋಜನೆಗಳು ಕಾರಣವೆ? ಎಂಬ ಪ್ರಶ್ನೆಯ ಹುಡುಕಾಟವಿದೆ. ಚಾತಕ ಪಕ್ಷಿಯಂತೆ ಕಾಯಿದು ಜಾತಕವೇ ಬದಲಾದ ರೋಚಕ ಚಿತ್ರಣ ಹೃದಯಸ್ಪರ್ಶಿಯಾಗಿ ಮೂಡಿ ಬಂದಿದೆ. ಮಳೆಯನ್ನು ಆನಂದಿಸಿ ಅನುಭವಿಸುವ ಜೀವ ತಲ್ಲಣಗೊಳ್ಳಲು ಕಾರಣ ಮನುಷ್ಯ ನಿರ್ಮಿತ ಹಗರಣ ಎಂಬುದು ಕವಿ ಹೃದಯಿ ಲೇಖಕಿಯನ್ನು ಕಾಡಿಸಿದಂತೂ ನಿಜ. ವಸ್ತುನಿಷ್ಠವಾದ ವಿಷಯ ನಿವೇದನೆಯೇ ಲೇಖನದ ಗಟ್ಟಿತನ! ಓದಲೇ ಬೇಕಾದ ಅರ್ಥವತ್ತಾದ ಲೇಖನ. ಡಿ.ಎಸ್ನಾ.
ಮಳೆ ಬರುವ ಮೊದಲಿನ ಭಾವಕ್ಕೂ,ಬಂದ ನಂತರದ ಭಾವಕ್ಕೂ ಇರುವ.ವ್ಯತ್ಯಾಸ,,ಹಾಗು ಆಗುವ ಹಾನಿಗಳ ಬಗ್ಗೆ ಬರೆದ ಲೇಖನ ತುಂಬಾ ಚೆನ್ನಾಗಿದೆ.