ಮೀನಾಕ್ಷಿ ಸೂಡಿ ಕವಿತೆ-ಸತ್ತು ಹೋಗಲಿ…

ಕಾವ್ಯ ಸಂಗಾತಿ

ಮೀನಾಕ್ಷಿ ಸೂಡಿ

ಸತ್ತು ಹೋಗಲಿ…

ಬದುಕ ಸಂತೆಯಲ್ಲಿ
ಬಸವಳಿದ ಮನುಜನಿಗೆ ಸಾಂತ್ವನವಿಯದ ಸಾಹಿತ್ಯ
ಸತ್ತು ಹೋಗಲಿ…

ವ್ಯಾಕರಣದ ಓಕುಳಿಯಲಿ
ಉಸರವಳ್ಳಿ ಬಣ್ಣದ
ಪ್ರಶಸ್ತಿಗಳ ಮಾರುಕಟ್ಟೆಯಲ್ಲಿ
ಮಾರಾಟವಾಗುವ ಕವಿ
ಸಾಹಿತ್ಯ ಸತ್ತು ಹೋಗಲಿ….

ಹೊಲದ ದುಡುಮೆಯಲಿ
ಬೆಂದ ರೈತನೊಡಲಿಗೆ
ಬಿಸಿ ರೊಟ್ಟಿಯಾಗದಿದ್ದರೂ ಸರಿಯೇ
ತಂಗಳು ತುತ್ತಾಗದ ಸಾಹಿತ್ಯ
ಸತ್ತು ಹೋಗಲಿ….

ತುತ್ತು ಅನ್ನಕ್ಕೂ ತತ್ವಾರ್ ಪಡುವ ಬದುಕಿಗೆ
ಸುಖ ನೀಡದ ಸಾಹಿತ್ಯ
ಸತ್ತು ಹೋಗಲಿ…

ಬಡಿವಾರದ ವೇದಿಕೆಯೊಳು
ಬಾಯಿ ಬಡಿದುಕೊಳ್ಳುವ
ಗುಡಿಸಲಿನ ಕಮಟು ವಾಸನೆಗೆ
ದೂರ ಸರಿದು ನಿಲ್ಲುವ
ಸಾಹಿತ್ಯ ಸತ್ತು ಹೋಗಲಿ…

ಹಿಟ್ಟಾಗದು ಹೊಟ್ಟೆಗೆ
ಜುಟ್ಟಿಗೆ ಮಲ್ಲಿಗೆ
ಸಾಲು ಸಾಲು ಭಾಷಣಗಳು
ಮನುಷ್ಯತ್ವ ಹುಡುಕಬೇಕಷ್ಟೆ…


ಮೀನಾಕ್ಷಿ ಸೂಡಿ.

11 thoughts on “ಮೀನಾಕ್ಷಿ ಸೂಡಿ ಕವಿತೆ-ಸತ್ತು ಹೋಗಲಿ…

    1. ಸಾಹಿತಿಗಳನ್ನು ಬಡಿದೆಬ್ಬಿಸುವ. ಮತ್ತು ಸಮಾಜದ ಮುನ್ನಡೆಗೆ ದಾರಿ ದೀಪವಾಗಲಿ ನಿಮ್ಮ ಕವನವು
      ಧನ್ಯವಾದಗಳು ಮೀನಾಕ್ಷಿ ಮಾತೆಯವರಿಗೆ

  1. ನೀವು ಬರೆದ ಕವಿತೆ ಮೂಲಕ ಬಿಂಬಿಸಿರುವ ಭಾವನೆಗಳು ಸಾಹಿತ್ಯ ಮನುಜನಿಗೆ ಉಪಯೋಗವಾಗದಿದ್ದರೆ ಇದ್ದೇನು ಫಲ? ನಿಜವಾಗಿಯೂ ಸಾಯಬೇಕು.ಆದರೆ ಸಾಯಿಸಲು ನಾವ್ಯಾರು? ಸಾಹಿತ್ಯ ಸದಾ ಹುಟ್ಟುತ್ತಲೇ ಇರಬೇಕು.ಸಾಹಿತ್ಯದ ಮುಖಾಂತರ ಎಲ್ಲವನ್ನೂ ಖಂಡಿಸಬೇಕು.ಆ ಖಂಡನೆ ಕವಿತೆಯಲ್ಲಿ ವ್ಯಕ್ತವಾಗಿದೆ. ಅಭಿನಂದನೆಗಳು.by ಹನುಮಂತರಾವ್ ನಾಗಪ್ಪಗೋಳ ಗೋಕಾಕ

  2. ಉತ್ತಮವಾದ ಚಿಂತನೆಗಳುಳ್ಳ ಕವಿತೆ ಮೆಮ್. ಓದಿ ಹರ್ಷವಾಯಿತು

  3. ಕವನದ ಭಾವ ಮೆಚ್ಚಿ ಸ್ಪಂದಿಸಿದ ಕವಿಮನಗಳಿಗೆ ಧನ್ಯವಾದಗಳು. ಜನಸಾಮಾನ್ಯನ ಬದುಕಿಗೆ ಹತ್ತಿರವಾಗದ ಸಾಹಿತ್ಯ ಹಾಗೂ ಸಾಹಿತಿ ಇದ್ದು ಸತ್ತಂತೆ.
    ಸೃಜನಶೀಲ ಬದುಕಿಗೆ ಸದಾ ಪ್ರೇರಣೆ ನೀಡುವ ,ಸಾಮಾನ್ಯರನ್ನು ಮುಟ್ಟುವ,ತಟ್ಟುವ ಸಾಹಿತ್ಯ ಬರಬೇಕು ಎಂಬುದೇ ಕವಿತೆಯ. ಆಶಯ.

    ಕವಯತ್ರಿ

  4. ಮೇಡಮ್, ಕವಿತೆ ‌‌ಜನ ಸಾಮಾನ್ಯರ ನೋವು ತಲ್ಲಣಗಳಿಗೆ ಕನ್ನಡಿಯಾಗಬೇಕು, ಸಮಾಜಮುಖಿ ಚಿಂತನೆಗಳ ಹಣತೆಯಾಗಬೇಕು. ನಿಮ್ಮ ಕವಿತೆ ಸತ್ವ ಯುತ ಸಾಹಿತ್ಯ ಮೂಡಿ ಬರಲಿ ಎಂಬ ಆಶಯ ಹೊತ್ತು ಬಂದಿದೆ. ಹೊಸ ಆಲೋಚನೆಗಳನ್ನು ಹುಟ್ಟಿಸುವ ಕಾರಂಜಿಯಾಗಿದೆ. ಸಾ‌ಹಿತ್ಯ ಪ್ರಿಯರೆಲ್ಲರ
    ಆಶಯ ಇದೇ ಆಗಿದೆ.. ಬಸವರಾಜ ಘೋಡಗೇರಿ ಶಿಕ್ಷಕರು ಹಲಶಿ ಪ್ರೌಢಶಾಲೆ ಹಲಶಿ.

  5. ಕಾಸಿಗೆ ಮಾರಿಕೊಳ್ಳುವ ಸಾಹಿತ್ಯಿಕ ಪ್ರಶಸ್ತಿಗಳಿಗೆ ಧಿಕ್ಕಾರದ ಧ್ವನಿ ತಮ್ಮ ಕವನದಲ್ಲಿ ಪ್ರತಿಧ್ವನಿಸಿದೆ. ಉತ್ತಮ ಕವಿತೆ… ಅಭಿನಂದನೆಗಳು ಮೇಡಂ
    .

  6. ಕವಿತೆ ಜೀವನದ ಪಡಿನೆಳಲಾಗಿ ಮೂಡಿ ಬರಬೇಕೆಂಬ ತಮ್ಮ ಕವನದ ಆಶಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
    ಅಭಿನಂದನೆಗಳು.

  7. ಸೃಜನಶೀಲ ಬದುಕಿಗೆ ಸದಾ ಪ್ರೇರಣೆ ನೀಡುವ ,ಸಾಮಾನ್ಯರನ್ನು ಮುಟ್ಟುವ,ತಟ್ಟುವ ಸಾಹಿತ್ಯ ಬರಬೇಕು ಎಂಬುದೇ ಕವಿತೆಯ. ಆಶಯ.

Leave a Reply

Back To Top