ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಝಲ್
ಬಚ್ಚಿಟ್ಟ ಸಾವಿರ ನೆನಪುಗಳ ಪ್ರೀತಿಯಲಿ ಹೇಳುವೆನು ಕಿವಿಯಾಗುವೆಯಾ ಒಡೆಯ
ಹುದುಗಿದ ಪ್ರೇಮವ ಎಳೆಎಳೆಯಾಗಿ ಒಪ್ಪಿಸುವೆ ಧನಿಯಾಗುವೆಯಾ ಗೆಳೆಯಾ/
ಕಣ್ಣಂಚಲಿ ತುಳುಕುತಿಹ ನೊಂದ ಕಣ್ಣೀರಿನನಿಗಳಾ
ವಿರಹ ವೇದನೆಯ ಬಿಚ್ಚಿಡುವೆ ಒಪ್ಪಿಸಿಕೊಳ್ಳುವೆಯಾ ಒಡೆಯಾ//
ಜನುಮ ಜನುಮದ ಪ್ರೀತಿಯ ಪಿಸು ಮಾತುಗಳು
ತುಟಿಯಂಚಲಿ ಮನೆಮಾಡಿಹವು ಜೇನಸವಿಯುತ ತನಿಸುವೆಯಾ ಒಡೆಯಾ//
ಮನವು ತಲ್ಲಣದಿ ಕಂಪಿಸುತಿದೆ ತುಂಬಿ ನಿನ್ನ ನೆನಪುಗಳು
ಹೃದಯದ ಭಾರವಾ ಕೆಳಗಿಳಿಸಲು ಕೈಜೋಡಿಸುವೆಯಾ ಒಡೆಯಾ//
ಮಧು ತುಂಬಿದ ಹೂವಂತೆ ನಿನಗಾಗಿ ಕಾತರಿಸುತಿರುವೆ ಪರಾಗಗಳ
ಸ್ಪರ್ಶಿಸುತಲಿ ತನುವಿಗೆ ಹಿತನೀಡಿ ಮಿಡಿತಗಳ ಮೇಳೈಸುವೆಯಾ ಒಡೆಯ//
ಸರಸ ಸಲ್ಲಾಪಕೆ ಹಾತೊರೆಯುತ ಸವಿಗಳಿಗೆಗಳ
ನಿರೀಕ್ಷೆಗಳಲಿ ಕಾದು ಕಾತರಿಸುತಿರುವೆ ಪ್ರೀತಿ ಪ್ರಲಾಪದಿ ಒಂದಾಗುವೆಯಾ ಗೆಳೆಯ//
ಎದೆಗೊರಗಿ ಅತ್ತು ಮನ ಹಗುರಾಗಿಸುವ ಗಳಿಗೆಗಳಾ
ಎದುರು ನೋಡಿ-ನೋಡಿ ಸೋತಿದೆ ಮನ ತೋಳಲಿ ಸೆರೆಯಾಗಿಸಿಕೊಳ್ಳುವೆಯಾ ಗೆಳೆಯ//
ಡಾ ಅನ್ನಪೂರ್ಣ ಹಿರೇಮಠ