ಅಂಕಣ ಸಂಗಾತಿ
ಸುತ್ತ-ಮುತ್ತ
ಸುಜಾತಾ ರವೀಶ್
ನಾಡಿಗರು ಕಂಡ “ನಾಡಿಗರು
ಮಂಕುತಿಮ್ಮನ ಕಗ್ಗ ಹೀಗೆನ್ನುತ್ತದೆ
ಕಾರಿರುಳಾಗಸದಿ ತಾರೆ ನೂರಿದ್ದೇನು?! ದಾರಿಗರ ಕಣ್ಗೆ ಬೇಕೊಂದು ಮನೆ ಬೆಳಕು॥ ದೂರದಾ ದೈವವಂತಿರಲಿ ಮಾನುಷ ಸಖನ। ಕೋರುವುದು ಬಡಜೀವ _ಮಂಕುತಿಮ್ಮ
ದಟ್ಟವಾದ ಕತ್ತಲೆಯಲ್ಲಿ ನಡೆಯುತ್ತಿರುವಾಗ ಆಕಾಶದಲ್ಲಿರುವ ನಕ್ಷತ್ರಗಳೋ ದಾರಿ ತೋರಿಸಬಹುದು. ಬೆಳಕು ಸಾಕಾಗಬಹುದು ಆದರೆ ಮನೆ ತಲುಪಿದಾಗ 1ಮೊಂಬತ್ತಿಯೋ ಬುಡ್ಢಿಯೋ ಅಂತಹ ಬೆಳಕು ಬೇಕಾಗುತ್ತದೆ. ಹಾಗೆಯೇ ಭಗವಂತನು ಜಗನ್ಮಿತ್ರ. ಅವನು ಕರೆದಾಗ ಬರುತ್ತಾನೆ. ಆದರೆ ತನ್ನಂತೆಯೇ ಮನುಷ್ಯನಾದ ತನ್ನಂತೆಯೇ ರಾಗ ದ್ವೇಷಗಳನ್ನು ಹೊಂದಿದ ಮನುಜನ ಸಖ್ಯ ಬೇಕಾಗುತ್ತದೆ. ಬೆಂಬಲ ಒತ್ತಾಸೆ ಬೇಡುತ್ತದೆ ಮನುಜ ಮನ . ಹಾಗೆ ಎಂಥಾ ಕವಿ ಮನವೂ ಅಷ್ಟೆ ತನಗೆ ಪ್ರಿಯರಾದ ಬೇಕೆನಿಸಿದವರ ಸಖ್ಯಕ್ಕೆ ಹಾತೊರೆಯುತ್ತದೆ ಅವರ ಬಗ್ಗೆ ಬರೆಯುತ್ತದೆ . ಗುರು ಮಾರ್ಗದರ್ಶಿ ಸ್ನೇಹಿತ ಅಥವಾ 1ರೀತಿಯಲ್ಲಿ ಪ್ರತಿಸ್ಪರ್ಧಿ ಆದರೂ ಮನುಜನ ಸಹಜ ಗುಣಗಳ ಬಗ್ಗೆ ಕವಿ ಖಂಡಿತಾ ತನ್ನ ಮನದಾಳವನ್ನು ತೋಡಿಕೊಂಡಿಯೇ ಇರುತ್ತಾನೆ.
ಈ ನಿಟ್ಟಿನಲ್ಲಿ ನೋಡಿದಾಗ ಸುಮತೀಂದ್ರ ನಾಡಿಗರು ತಮ್ಮ ಮಿತ್ರ ಕವಿಗಳ ಬಗ್ಗೆ ಬರೆದ ಕೆಲವೊಂದು ಕವನಗಳು ಗಮನ ಸೆಳೆದವು. ಅವುಗಳನ್ನು ಇಲ್ಲಿ ಹಂಚಿಕೊಳ್ಳುವ ಪ್ರಯತ್ನ.
ಪ್ರಸಿದ್ಧ ಕವಿಗಳನ್ನು ನಾವು ಕವಿ ಎಂಬ ದೃಷ್ಟಿಯಲ್ಲಿ ನೋಡುತ್ತಿರುತ್ತೇವೆ . ಹಾಗೆಯೇ ಅವರನ್ನು ತಮ್ಮ ಸಮಕಾಲೀನ ಸ್ನೇಹಿತ ಎಂಬ ಪರಿಯಲ್ಲಿ ನೋಡಿದವರ ಅನಿಸಿಕೆಗಳು ಹೊಸ ಆಯಾಮವನ್ನೇ ನೀಡಬಹುದು . ಎಲ್ಲಕ್ಕಿಂತ ಹೆಚ್ಚಾಗಿ ರೋಚಕ ಕುತೂಹಲಕಾರಿಯಾಗಂತೂ ಇರುತ್ತದೆ.
ಭಾವಲೋಕ ಕವನ ಸಂಕಲನದಲ್ಲಿ ಬೇಂದ್ರೆಯವರ ಬಗ್ಗೆ ಬೇಂದ್ರೆ ಮತ್ತು ಅಂಬಿಕಾತನಯ ಎಂಬ 2ಕವನಗಳನ್ನು ಬರೆದು ವರ ಕವಿಗಳನ್ನು ನೆನಪಿಸಿಕೊಳ್ಳುತ್ತಾರೆ . ಬೇಂದ್ರೆಯವರಅಗಲಿಕೆಯ ನೋವನ್ನು ಈ ರೀತಿ ತೋಡಿಕೊಳ್ಳುತ್ತಾರೆ .
ಇಲ್ಲೇ ಇದ್ದವರು ನಮ್ಮ ಜತೆಯಲ್ಲಿ
ಮಾತು ಮಾತು ಮಥಿಸಿ
ಇಲ್ಲದಿದ್ದರೂ ಇದ್ದ ಹಾಗೆ ಇದೆ
ನಿಮ್ಮ ಮಾತು ಧ್ವನಿಸಿ
ನಿಮ್ಮ ಮಾತಿಗಿನ್ನೂನು ಕೂಡ
ಓಗೊಡುತ್ತಿಹವು ಹೃದಯ
ಓ ಎಲ್ಲ ಕೂಡಿ ಓಂಕಾರವಾಗಿ
ಮರೆತೇವೇ ನಿಮ್ಮ ದನಿಯಾ
ಬೇಂದ್ರೆಯವರ ಕವಿತೆಗಳ ಶೀರ್ಷಿಕೆಗಳ ಸಾಲುಗಳ ಭಾವಗಳನ್ನು ತೆಗೆದಿಟ್ಟುಕೊಂಡು ಎಲ್ಲಿ ಹೋಗಿ ಹೋದಿರಿ ಮಾತುಮಾತಿನಲ್ಲಿ ಮಿಂಚಿದವರು ಮಿಂಚಿನಲ್ಲಿ ಸೇರಿ ಹೋದಿರಾ
ಎಂದೇ ಹೇಳಿಕೊಳ್ಳುತ್ತಾರೆ . ಬೇಂದ್ರೆಯವರ ಮಾತಿನ ಸೊಗಸು ಭಾವಗಳ ಅನುಭಾವವನ್ನು ಇಡೀ ಕವನದ ತುಂಬ ವರ್ಣಿಸುತ್ತಾರೆ . ಈ ಕಡೆಯ ಸಾಲುಗಳಂತೂ ತುಂಬಾ ಅರ್ಥಪೂರ್ಣ ಹಾಗೂ ವಿದಾಯದ ಧ್ವನಿಯ ಸಮರ್ಥ ಅಭಿವ್ಯಕ್ತಿ .
ನಾಡಿನಲ್ಲಿ ಮನೆಮಾತು ಆದವರು
ರಸ ಗಂಗೆಯನ್ನೇ ಹರಿಸಿ
ಹೋದಹೋದ ಕಡೆ ಹಾಡಿ ಬಂದವರು ಜನಮನದ ಕಣ್ಣು ತೆರೆಸಿ
ಮಣ್ಣ ದೋಣಿಯಲಿ ಭವದ ಸಾಗರವ
ನೀಸ ಹೊರಟ ಧೀರಾ
ನಿಮ್ಮ ದೋಣಿ ಕಣ್ಮಾಯವಾಗಿ
ಭಣಭಣಾ ನಮ್ಮ ತೀರ
ಆ ಧೀಮಂತ ವ್ಯಕ್ತಿತ್ವಕ್ಕೆ ತಕ್ಕನಾದ ಕಣ್ಣ ಹನಿಗಳೆ ಕಾಣಿಕೆ ತಾನೇ ಇದು ?
ಮತ್ತೊಂದು ಕವನ ಅಂಬಿಕಾತನಯ ದಲ್ಲಿ
ಬೇಂದ್ರೆಯವರ ಕವನ ಗಳನ್ನೇ ಆಧಾರವಾಗಿಟ್ಟುಕೊಂಡು ಗಿಡಗಂಟೆಗಳ ಕೊರಳಲ್ಲಿ ನಂದನದ ನಕಲಿ ಮಲ್ಲಿಗೆಯು ಸುರರ ಗಂಗೆಯಲ್ಲಿ ಮಸೆದ ಗಾಳಿಯು ತಕ್ಕ ಪಡೆಯುವಲ್ಲಿ ಒಲವು ಬದುಕಬೇಕಾದಲ್ಲಿ ಹುಣಸೀ ಕೂತಲ್ಲಿ ನಿನ್ನ ಗಾರುಡಿ ಅಂಬಿಕಾತನಯ ಎಂದು ಶೋಕಿಸುತ್ತಾರೆ.
ಹಾಗೆಯೇ ಮಾಯಾ ಕಿನ್ನರಿ ಯಲ್ಲಿ ಕನಸಲ್ಲಿ ಕನ್ಯೆಯರು ಏಳು ಎಂದಲ್ಲಿ ಪ್ರೀತಿ ಕಪ್ಪುರ ಗೊಂಬೆ ಹೊತ್ತಿ ಉರಿದಲ್ಲಿ ನಲ್ಲೇ ನಲ್ಲ ರಿರುಳ ಗುಜುಗುಜುವಿನಲ್ಲಿ ನಿನ್ನ
ಗಾರುಡಿಯುಂಟು ಎನ್ನುತ್ತಾರೆ .
ಕಡೆಯ ಸಾಲಿನಲ್ಲಿ ಪರಿಪರಿಯಾಗಿ ಬಾ ಎಂದು ಆಹ್ವಾನಿಸುತ್ತಿತ್ತಾ
ನಾ ನಿನ್ನ ಕೊರಳಾಗಿ ಹಾಡುವೆನು ಬಾರೋ ನೀ ಬಿಟ್ಟ ಕಿನ್ನರಿಯ ನುಡಿಸುವೆನು ಬಾರೋ
ಎಂದು ಕರೆಯುತ್ತಾರೆ .
ಕೆಎಸ್ನರಸಿಂಹಸ್ವಾಮಿ ಇದು ಮಲ್ಲಿಗೆಯ ಕವಿ ನರಸಿಂಹಸ್ವಾಮಿಯವರ ಬಗೆಗಿನ ತಮ್ಮ ಭಾವನೆಗಳನ್ನು ಸುಮತೀಂದ್ರ ನಾಡಿಗರು ನಿರೂಪಿಸುವ ಕವನ .
ನವಿರು ಭಾವಗಳ ಜೀವನ ಜೀವನ್ಮುಖಿ ಕವನಗಳ ಕವಿ ಕೆಎಸ್ನರಸಿಂಹಸ್ವಾಮಿ ಅವರ
ಇಂತಹ ಕಷ್ಟಗಳಿಗೂ ಸೋಲದ ನಗುನಗುತ್ತಲೇ ಇರುವ ಸ್ವಭಾವವನ್ನು ಕವಿ “ತಲೆಯ ಮೇಲಿದ್ದರೂ ಬಂಡೆ ನಿಮ್ಮ ನಗುವ ಮುಖವ ಕಂಡೆ” ಎಂಬ ಪದ ಸಾಲುಗಳಲ್ಲಿ ವರ್ಣಿಸುತ್ತಾ ಬೆಳದಿಂಗಳ ಕಡಲಲ್ಲಿ ಸಾಕ್ಷಾತ್ ಶಾರದೆಯೆ ನಡೆಸುವ ಕಾವ್ಯ ನೌಕೆಯ ಸಹಪಯಣಿಗರು ನೀವು ಎಂದು ಹೇಳುತ್ತಾರೆ .
ತಾಯಿ ಶಾರದೆಯ ವೀಣೆಯ ದನಿ ಯ ಜತೆಗೆ ಹೂಗಳ ಕಂಪು ಗಾಳಿಯ ಕಂಪು ಮತ್ತು ಬೆಳ್ಳನೆ ಅಲೆಗಳು ಸುತ್ತುವರೆದಿತ್ತು ಅಷ್ಟಾದರೂ ಎಷ್ಟೋ ಕಷ್ಟಗಳನ್ನುಂಡರೂ ನಿಮ್ಮ ಜೀವ ಸದಾ ನಗು ನಗುತ್ತಲೇ ಇತ್ತು ಎನ್ನುತ್ತಾರೆ . ಮಲ್ಲಿಗೆಯ ಕವಿ ಹಾಡಿದ ಹಾಡಿಗೆ ಶಾರದೆಯೇ ಬೆಳದಿಂಗಳಾದರೆ ಕವಿಯೇ ಹುಣ್ಣಿಮೆಯ ಚಂದಿರನಂತೆ ಎನ್ನುವ ಹೋಲಿಕೆ ನೀಡುತ್ತಾರೆ .
ಕೆಲವೊಮ್ಮೆ ನರಸಿಂಹಸ್ವಾಮಿಯವರದು ಬರೀ ಒಲುಮೆಯ ಗೀತೆಗಳು ಎಂಬ ಆರೋಪವೂ ಕೇಳಿಬಂದಿತ್ತು ಅದಕ್ಕೆ ಈ ಉತ್ತರ ಕೊಡುತ್ತಾರೆ .
ಬಿಸಿಲಿನ ಕಾವ್ಯದ ಹಾಗೆಯೇ ಬೇಕು ಬೆಳದಿಂಗಳು ಕೂಡ
ಕಾರ್ಮೋಡದ ಆರ್ಭಟ ದಂತೆಯೇ ಹಿಂಜಿದ ಬಿಳಿಮೋಡ
ಖಿಂ ಖಿಲಿ ಖಿಲಿಲಿಲಿ ಹಾಡಿನ ಜೊತೆಗೆ ಕುಹೂಕುಹೂ ಚಿಲಿಪಿಲಿ
ಪಾಪಪುಣ್ಯಗಳ ಚಿಂತನೆ ಉರಿಗೆ ಚಡಪಡಿಸುವವರೂ ಇರಲಿ ಬಿಡಿ
ಸಮಕಾಲೀನ ಕವಿ ಮಿತ್ರನಿಗೆ ಎಂತಹ ಸಾಂತ್ವನದ ನುಡಿಗಳು ಇವು!
ಕಡೆಯ ಸಾಲುಗಳಲ್ಲಿ ಕೆಎಸ್ ನ ಅವರನ್ನು ಮಹಾಂತ ಮಹಾಭಾಗ ಎಂದು ಬಣ್ಣಿಸುತ್ತಾ ಮಾನವ ಹೃದಯದ ಕರೆಗೆ ಕಿವಿಗೊಟ್ಟಿರಿ ಒಲವು ನೋವು ನಲಿವು ಕರುಣೆಯ ಭಾವಗಳನ್ನು ಕಾವ್ಯವಾಗಿಸಿ ಹಾಡಾಗಿಸಿದಿರಿ ಎನ್ನುತ್ತಾರೆ ನೀವು ಕೊಟ್ಟ ಕಾವ್ಯ ಸದಾ ತಾರುಣ್ಯದ ಕಾವ್ಯ ಎನ್ನುತ್ತಾ ಆದಿಕವಿ ಪಂಪನಿಗೂ ಮಲ್ಲಿಗೆ ಪ್ರಿಯ ಹಾಗೆ ಮಲ್ಲಿಗೆಯ ಕಾವ್ಯವನ್ನೇ ಕನ್ನಡನಾಡಿಗೆ ಕೊಟ್ಟ ನೀವು ಅವನದೇ ವಂಶದವರು ಎಂದು ಹೊಗಳುತ್ತಾರೆ .
ಒಂದೇ ರಂಗದವರಲ್ಲಿ ಪರಸ್ಪರ ಪೈಪೋಟಿ ಸ್ಪರ್ಧೆ ಹೊಟ್ಟೆಕಿಚ್ಚು ಮತ್ಸರಗಳೇ ಸಾಮಾನ್ಯ ಎನ್ನುವಂತಹ ಸಂಧರ್ಭದಲ್ಲಿ ಸಮಾನ ಸಾಹಿತ್ಯಾಸಕ್ತ ಮನಸ್ಸುಗಳನ್ನು ಸಮಕಾಲೀನ ಕವಿಗಳನ್ನು ನಿರ್ವಂಚನೆಯಿಂದ ಹಾಡಿ ಹೊಗಳಿರುವ ಉದಾಹರಣೆಗಳು ಬಹಳ ಕಡಿಮೆ. ಆ ನಿಟ್ಟಿನಲ್ಲಿ ಈ ಕವನ ಕವನದ ಹಿಂದಿನ ಭಾವ ಅನುಪಮ ಅಸದೃಶವಾಗಿ ನಿಲ್ಲುತ್ತದೆ.
ಆಪ್ತ ಗೆಳೆಯ ಮೇಕಪ್ ನಾಣಿಯವರ ಕಾಲ ಶಾಂತವಾದಾಗ “ಬರೀ ನೆನಪು” ಎಂಬ ಕವನದ ಮೂಲಕ ಅವರಿಗೆ ನಮನ ಸಲ್ಲಿಸುತ್ತಾರೆ . ಬುಧವಾರದ ದಿನ ಇವರ ಮಾತನಾಡಿದ್ದ ಇದ್ದಕ್ಕಿದ್ದಂತೆ ಗುರುವಾರ ದೂರವಾದ ಮಿತ್ರನ ಮರಣದ ವಾರ್ತೆ ಅವರನ್ನು ದಿಜ್ಞ್ಮೂಢನಾಗಿಸುತ್ತದೆ.
ಇದ್ದಕ್ಕಿದ್ದ ಹಾಗೆ ಎದ್ದು ಹೋಗಿ ಬಿಡಲು ನಿನ್ನನ್ನು ಯಾರೂ ಕರೆಯದಿದ್ದರು ಎಂದು ಕೇಳುವ ಈ ಸಾಲುಗಳ ನೋಡಿ
ಪರಲೋಕದಲ್ಲಿ ಅರ್ಜೆಂಟಾದ ಕೆಲಸ ಏನಿತ್ತು?
ಕೈಲಾಸಂ ಶ್ರೀರಂಗ ಸಂಸ ಪರ್ವತವಾಣಿ ಕರೆದಿದ್ದರೆ?
ಲಂಕೇಶ ಕರೆದಿದ್ದನೆ? ನಿನ್ನ ಗಂಟೇನು ಹೋಗುತ್ತಿತ್ತು
ಈಗ ಪುರುಸೊತ್ತಿಲ್ಲ ಅಂತ ಹೋಗುವುದನ್ನು ತಡೆದಿದ್ದರೆ?
ಕವನದ ಕಡೆಯ ಸಾಲುಗಳು ನಿಜಕ್ಕೂ ಮನಸ್ಸಿನಲ್ಲಿ ಅನುರಣಿಸುತ್ತವೆ. ವಿಷಾದದ ಛಾಯೆ ಆವರಿಸುತ್ತದೆ .
ದಿನವೂ ಎದ್ದು ಮೇಕಪ್ಪು ಮಾಡಿಕೊಳ್ಳುವ ಹೊತ್ತು
ನೆನಪಾಗುತ್ತೀಯ ಗೆಳೆಯ
ಈಗ ಬರೀ ನೆನಪಾಗಿ ಮಾತ್ರ ಉಳಿದಿದ್ದೀಯ.
ಮುನ್ನುಡಿಯಲ್ಲಿ ನಾಡಿಗರೇ ಹೇಳುವಂತೆ “ಕಾವ್ಯ ಒಂದು ರೀತಿಯ ದೂತ ಅಥವಾ ದೂತಿಯ ಅಥವಾ ಗೆಳೆಯ ಗೆಳತಿಯ ಮೂಲಕ ಸಂಪರ್ಕಿಸುವ ಕೆಲಸವನ್ನು ಮಾಡುತ್ತದೆ. ಆ ಕೆಲಸ ಅಂತರಂಗದ ಪಾತಳಿಯಲ್ಲಿ ನಡೆಯುತ್ತದೆ. ಆ ಕೆಲಸವನ್ನು ಕಾವ್ಯ ಮಾಡುವುದರಿಂದ ನಾವು ಕವಿತೆಗಳನ್ನು ಪ್ರೀತಿಸುತ್ತೇವೆ ಕವಿಗಳನ್ನು ಪ್ರೀತಿಸುತ್ತೇವೆ ಅವರ ಮೂಲಕ ನಮ್ಮ ಆತ್ಮೀಯ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತೇವೆ .
ಹೀಗೆ ನಾಡಿಗರ ಕಾವ್ಯದ ಮೂಲಕ ಬೇರೆ ಕವಿಗಳ ವಿಷಯವನ್ನು ಅರಿಯುವುದರ ಮೂಲಕ ಆ ಸಂಬಂಧಗಳ ಹೊಸ ಆಯಾಮವನ್ನು ಅರಿತಂತೆ ಆಗಿದೆ ಅಲ್ಲವೇ?
ತಿಳಿಯದ ಹೊಸದೊಂದು ಲೋಕಕ್ಕೆ ಪಯಣ ಗೊಂಡಂತೆ ಆಗಿದೆ ತಾನೇ?
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂaಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು