ಮಡಿವಾಳ. ಮಾಚಿದೇವರ ವಚನ-ಜಿ ಎ ತಿಗಡಿ. ಸವದತ್ತಿ

ವಚನ ವಿಶ್ಲೇಷಣೆ

ಮಡಿವಾಳ. ಮಾಚಿದೇವರ ವಚನ

ಜಿ ಎ ತಿಗಡಿ. ಸವದತ್ತಿ

ಉಂಡಡೆ ಭೂತವೆಂಬರು, ಉಣ್ಣದಿರ್ದಡೆ ಚಕೋರಿಯೆಂಬರು.
ಊರೊಳಗಿರ್ದಡೆ ಸಂಸಾರಿಕನೆಂಬರು,
ಅಡವಿಯೊಳಗಿರ್ದಡೆ ಮರ್ಕಟನೆಂಬರು.
ಮಾತನಾಡಿದಡೆ ಪಾಪಕರ್ಮಿಯೆಂಬರು,
ಮಾತನಾಡದಿರ್ದಡೆ ಮುಸುಕರ್ಮಿಯೆಂಬರು.
ಮಲಗದಿರ್ದಡೆ ಚೋರನೆಂಬರು, ಮಲಗಿರ್ದಡೆ ಜಡದೇಹಿಯೆಂಬರು.
ಇಂತೀ ವಸುಧೆಯೊಳಗೆ ಎಂಟುವಿಧ ಕಳೆಯಲು ವಶವಲ್ಲ ಕಾಣಾ
ಕಲಿದೇವರದೇವಾ.

        ಊಟ ಮಾಡಿದರೆ ಭೂತನಂತೆ ಇದ್ದಾನೆನ್ನುವರು.   ಉಪವಾಸವಿದ್ದರೆ ಚಕೋರ ಪಕ್ಷಿಯಂತೆ ಇರುವವನೆನ್ನುವರು. ಊರಿನಲ್ಲಿ ನೆಲೆಸಿದರೆ ಸಂಸಾರಸ್ಥರೆನ್ನುವರು.   ಅಡವಿಯ ಪಾಲಾದರೆ ಮಂಗನೆನ್ನುವರು.  ಮಾತಾಡಿದರೆ ಪಾಪಿಷ್ಟನೆಂದರೆ,  ಮೌನಿಯಾಗಿದ್ದರೆ ಗುಮ್ಮನಗುಸುಕನೆನ್ನುವರು.   ಮಲಗದೆ ಎಚ್ಚರವಿದ್ದರೆ ಕಳ್ಳನೆನ್ನುವರು,  ಮಲಗಿದರೆ ಜಡದೇಹಿ ಹೆಣ ಎನ್ನುವರು.   ಈ ರೀತಿ ಲೋಕದಲ್ಲಿ ಎಂಟು ವಿಧದ ಜನ ಪ್ರತಿಕ್ರಿಯೆ ತೋರುತ್ತಿರುತ್ತಾರೆ.  ಹೀಗೆ ನಿಂದನೆ ಮಾಡುವವರನ್ನು ಇಲ್ಲವಾಗಿಸಲು ಸಾಧ್ಯವಿಲ್ಲವೆಂದು ಮಾಚಿದೇವರು ಹೇಳುತ್ತಾರೆ.  ಕಾರಣ ಈ ನಿಂದೆಗಳನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆ ಆತ್ಮಸಾಕ್ಷಿಯ ನಿರ್ದೇಶನದಂತೆ ನಡೆಯಬೇಕೆಂದು ಸೂಚಿಸುತ್ತಾರೆ.

 ಲೋಕದಲ್ಲಿ ಹೇಗೆ ಬದುಕಿದರೂ ಒಂದಲ್ಲ ಒಂದು ಮಾತು ಬಂದೇ ಬರುತ್ತದೆ.   ಜನರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ.   ಇಂತಹ ಪ್ರತಿಕ್ರಿಯೆ, ನಿಂದೆಗಳಿಂದ ಜಗಳ ಮನಸ್ತಾಪಗಳಾಗುವುದು ಸರ್ವೇಸಾಮಾನ್ಯವಾಗಿದೆ.  ಇದರಿಂದಾಗಿ ಜನ  ಮನಸ್ಸಿನ ನೆಮ್ಮದಿ ಕಳೆದುಕೊಂಡು  ದುಃಖಕ್ಕೀಡಾಗುತ್ತಾರೆ.  ತಿನ್ನು, ಉಣ್ಣೋದಕ್ಕೂ;  ಮಾತು - ಮೌನಕ್ಕೂ,  ಎಚ್ಚರ - ನಿದ್ರೆ,  ವಾಸಸ್ಥಳ   ಹೀಗೆ ನಿತ್ಯ ಜೀವನದಲ್ಲಿ ಸಾಮಾನ್ಯವಾಗಿರುವ ಸಂಗತಿಗಳ ಬಗ್ಗೆ  ಟೀಕಿಸುವವರು ಇದ್ದೇ ಇದ್ದಾರೆ.  ಇವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.  ಹಾಗೂ ಇವುಗಳನ್ನು ನಾಶ ಮಾಡಲೂ ಆಗದು.     ಶ್ರೀರಾಮ,  ಶ್ರೀ ಕೃಷ್ಣರಂಥವರನ್ನೂ ಇಂತಹ ಅಪವಾದಗಳು ಬಿಟ್ಟಿಲ್ಲ.   ಹೀಗಾಗಿ ಇವುಗಳನ್ನು ಲೆಕ್ಕಿಸದೆ ಉದಾಸೀನ ಮಾಡುವುದು ಒಳ್ಳೆಯದು.   ಜನರ ಪ್ರತಿಕ್ರಿಯೆಗಳಿಗನುಗುಣವಾಗಿ ಬದುಕಲು ಆಗದು;  ಹಾಗೆ ಬದುಕಲೂ ಬಾರದು, "ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿಂದೆಗಳು ಬಂದರೆ ಸಮಾಧಾನಿಯಾಗಿರಬೇಕು "  ಎಂಬ 'ಅಕ್ಕಮಹಾದೇವಿಯ' ನುಡಿಮುತ್ತನ್ನು ಸದಾ ಸ್ಮರಣೆಯಲ್ಲಿಟ್ಟುಕೊಳ್ಳಬೇಕು.   ಇದನ್ನು ಮನಗಂಡೇ ಮಾಚಿದೇವರು ನಿಮ್ಮರಿವಿನ ಅಂತರಾತ್ಮನ  ಆಣತಿಯಂತೆ ಜೀವನ ಸಾಗಿಸಬೇಕೆಂದು ಹೇಳುತ್ತಾರೆ.

ಈ ವಚನದ ಅರ್ಥ ಇಷ್ಟಕ್ಕೆ ನಿಲ್ಲದೆ, ಮತ್ತೇನನ್ನೋ ಧ್ವನಿಸುವಂತೆ ತೋರುತ್ತದೆ. ಅತಿಯಾದ ಊಟ ಹಾಗೂ ಇದಕ್ಕೆ ವಿರುದ್ಧವಾಗಿ ಪೂರ್ಣ ಉಪವಾಸಗಳು ಆರೋಗ್ಯಕ್ಕೆ ಮಾರಕಗಳು. ಅತಿ ಊಟ ಜೀರ್ಣಕ್ಕೂ, ಊಟವಿಲ್ಲದಿರುವುದು ಅಸಿಡಿಟಿಗೂ, ಅಶಕ್ತ್ಯತನಕ್ಕೂ ಕಾರಣವಾಗಬಹುದು.

” ಆಹಾರವ ಕಿರಿದು ಮಾಡಿರಣ್ಣ,
ಆಹಾರದಿಂ ವ್ಯಾಧಿ ಹಬ್ಬಿ ಬಲಿವುದಯ್ಯ”

ಎಂಬ ಅಕ್ಕನ ಮಾತನ್ನು ನೆನಪಿಸಿಕೊಳ್ಳಬೇಕು. ಇದರಂತೆ ಅತಿ ನಿದ್ರೆ, ನಿದ್ರಾಹೀನತೆಗಳು ಕೂಡ ಅನಾರೋಗ್ಯಕ್ಕೆ ಕಾರಣವಾಗಬಲ್ಲವು. ಹೀಗಾಗಿ ಹಿತಮಿತವಾದ ಭೋಜನ ಮತ್ತು ನಿದ್ರೆಗಳು ಶರೀರವನ್ನು ಆರೋಗ್ಯಪೂರ್ಣವಾಗಿಡಬಲ್ಲವು.
ಇನ್ನು ಊರೊಳಗಿರುವುದೆಂದರೆ ಲೌಕಿಕದಲ್ಲಿ ಮುಳುಗಿ ಸಂಸಾರಿಕ ಬಂಧನದಲ್ಲಿ ಸಿಲುಕಿಕೊಳ್ಳುವುದು, ಅಡವಿಪಾಲಾಗುವುದೆಂದರೆ, ಸಂಸಾರಕ್ಕೆ ಹೆದರಿ ಪಲಾಯನ ಮಾಡುವುದು. ಆಗ ಮನ ಮಂಗನಂತೆ ವರ್ತಿಸುವ ಅಪಾಯವಿದೆ. ಶರಣರು ಲೌಕಿಕದ ಸಂಸಾರವನ್ನು ತ್ಯಜಿಸಿದವರಲ್ಲ. ಅದರಲ್ಲಿದ್ದುಕೊಂಡೇ ಪಾರಮಾರ್ಥಿಕ ಸಾಧನೆ ಸಾಧ್ಯವೆಂಬುದನ್ನು ಸ್ವತ: ನಡೆದು ತೋರಿಸಿಕೊಟ್ಟ ಮಹಾನುಭಾವರು. ಇನ್ನು ಅತಿ ಮಾತು, ಅತಿ ಮೌನ ಎರಡೂ ವ್ಯಕ್ತಿತ್ವಕ್ಕೆ ಕುಂದು. ನಮ್ಮ ಮಾತು ಹೇಗಿರಬೇಕೆಂಬುದಕ್ಕೆ ಅಣ್ಣನವರ ಅಮರವಾಣಿಯೇ ಇದೆ.

ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು.
ನುಡಿದರೆ ಲಿಂಗ ಮೆಚ್ಚಿ ʼಅಹುದಹುದೆʼನಬೇಕು.
ನುಡಿಯೊಳಗಾಗಿ ನಡೆಯದಿದ್ದರೆ,
ಕೂಡಲಸಂಗಮದೇವನೆಂತೊಲಿವನಯ್ಯಾ?

ಹೀಗೆ ಆಹಾರ, ನಿದ್ರೆ, ಮಾತು, ಲೌಕಿಕದ ಸಂಸಾರ, ಜೀವನದಲ್ಲಿ ಈ ನಾಲ್ಕು ವಿಷಯಗಳಲ್ಲಿ ಜನರಾಡುವ ನಿಂದೆಗಳನ್ನು ಕೇಳುತ್ತಾ, ಅದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ಅದರ ಮರ್ಮವನ್ನರಿತು ನಡೆದಲ್ಲಿ ನಮ್ಮ ಬಾಳು ಸುಖಮಯವಾಗುತ್ತದೆ. ಇದನ್ನೇ ಮಾಚಿದೇವರು ನಮ್ಮರಿವಿನ ಅಂತರಾತ್ಮನ ಆಣತಿಯಂತೆ ನಡೆಯಬೇಕೆಂದು ಹೇಳಿರಬಹುದೆನಿಸುತ್ತದೆ.


ಜಿ ಎ ತಿಗಡಿ. ಸವದತ್ತಿ

Leave a Reply

Back To Top