ಶಿಕ್ಷಣ ಸಂಗಾತಿ
ಪರವಿನ ಬಾನು ಯಲಿಗಾರ
ʼಹಾಸ್ಟೆಲ್ ಶಿಕ್ಷಣದ , ಸಾಧಕ – ಬಾಧಕಗಳುʼ


ಮಕ್ಕಳು ಮನೆಯ ನಂದಾ ದೀಪ , ಮಕ್ಕಳಿರಲವ್ವ…. ಮನೆ ತುಂಬಾ , ಮಳೆ ಬಂದರೆ ಕೇಡಿಲ್ಲ … , ಮಗಾ ಉಂಡರೆ ಕೇಡಿಲ್ಲ , ಇವೆಲ್ಲ ಆಗ ನಮ್ಮ ಹಿರಿಯರು ನಾವು ಚಿಕ್ಕವರಾಗಿದ್ದಾಗ ಹೇಳುತ್ತಿದ್ದ ಮಾತುಗಳು . ಆದರೆ ಈಗ , ಒಂದು ಬೇಕು , ಎರಡು ಸಾಕು ಎನ್ನುವ ಚಿಕ್ಕ ಪರಿವಾರ , ಇದು ಒಪ್ಪಿಕೊಳ್ಳುವ ಮಾತೇ ಸರಿ . ಆದರೆ , ಇರುವ ಒಂದೋ , ಎರಡೋ ಮಕ್ಕಳನ್ನು ನಾವು ಇವತ್ತು ನಮ್ಮಿಂದ ದೂರ ಇಡುತ್ತಿದ್ದೇವೆ . ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದು ಪೋಷಕರ ಜವಾಬ್ದಾರಿಯೂ ಹೌದು .
ಗುಣಮಟ್ಟದ ಶಿಕ್ಷಣ , ಶಿಸ್ತು , ಜವಾಬ್ದಾರಿ ನಿರ್ವಹಣೆ , ಸ್ವಯಂ ರಕ್ಷಣೆ , ಪ್ರಪಂಚದ ಪರಿಚಯ , ಈ ಎಲ್ಲಾ ಕಾರಣಗಳಿಗಾಗಿ ನಾವು ಮಕ್ಕಳನ್ನು ವಸತಿ ಶಾಲೆಗಳಿಗೆ ಸೇರಿಸುತ್ತಿದ್ದೇವೆ , ಪೈಪೋಟಿ ಯುಗದಲ್ಲಿ ಬದುಕುತ್ತಿದ್ದೆವಲ್ಲ ! ಯಾರೋ ಏನೋ ಮಾಡಿದರು , ಮಾಡತಾ ಇದ್ದಾರೆ ಅಂತ , ನಾವು ಅನುಕರಣೆ ಮಾಡುವುದು ಹೆಚ್ಚಾಗಿದೆ . ನಮಗೆ ಅವಶ್ಯಕತೆ ಇದೆಯೋ ಇಲ್ಲವೋ ಯೋಚಿಸಬೇಕು . ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ವಸತಿ ಶಿಕ್ಷಣವೂ ಒಂದು . ಸಮಾಜದ ಬಡ , ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ , ಬಹಳ ಹಿಂದೆಯೇ ಈ ಯೋಜನೆ ಜಾರಿಗೆ ಮಾಡಲಾಯಿತು . ಸರಕಾರದ ಉಚಿತ ವಸತಿ ಶಿಕ್ಷಣ ಯೋಜನೆ ಹಲವಾರು ಬಡ ಕುಟುಂಬದ ಮಕ್ಕಳಿಗೆ ವರದಾನವಾಗಿದೆ .
ಆದರೆ , ಇಂದು ಅವಶ್ಯಕತೆಯನ್ನು ಮೀರಿ ನಾವು ಈ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದ್ದೇವೆ ಅಂತ ನನ್ನ ಅನಿಸಿಕೆ , ಮಕ್ಕಳು ಎಳೆ ಪ್ರಾಯಕ್ಕೆ ಕಾಲಿಡುವ ವಯಸ್ಸು . ( ಹನ್ನೆರಡರಿಂದ ಹದಿಮೂರು )ಈ ವಯಸ್ಸಿನಲ್ಲಿ ಮಕ್ಕಳಿಗೆ ತಿಳುವಳಿಕೆ , ಅರಿವು ತುಂಬುವ ಸಮಯ , ಏಕೆಂದರೆ , ಈ ವಯಸ್ಸಿನಲ್ಲಿ ಮಕ್ಕಳಿಗೆ ದೈಹಿಕ , ಮಾನಸಿಕ ಬದಲಾವಣೆಗಳು ಆಗುವಂತವು , ಹೊಸತನಕ್ಕೆ ತೆರೆದುಕೊಳ್ಳುವ ಮನಸ್ಸು , ಹೊಸ ಕುತೂಹಲ , ಆಸಕ್ತಿ , ಜೊತೆಗೆ ಕೆಲವು ಸಮಸ್ಯೆಗಳು ಮಕ್ಕಳನ್ನು ಕಾಡುತ್ತವೆ , ಇಂಥಹ ಸಂದರ್ಭದಲ್ಲಿ ಪಾಲಕರು , ಪೋಷಕರು , ಮಕ್ಕಳ ಸಮಸ್ಯಗಳಿಗೆ ಸ್ಪಂದಿಸಬೇಕು , ಸಮಸ್ಯೆಗಳನ್ನು ಪರಿಹರಿಸಬೇಕು , ಅವರಲ್ಲಾದ ಈ ಬದಲಾವಣೆ ನೈಸರ್ಗಿಕವಾದದ್ದು ಎಂದು ಅವರಿಗೆ ಮನವರಿಕೆ ಮಾಡಿ ಧೈರ್ಯ ತುಂಬಬೇಕು , ಸದಾ ಅವರ ಮೇಲೆ ನಿಗಾ ಇಡಬೇಕು , ಅವರ ಹವ್ಯಾಸಗಳು , ಅವರ ಒಡನಾಡಿಗಳ ಗುಣದ ಬಗ್ಗೆ , ಸ್ನೇಹ , ಸಂಗ ಎಂಥವರ ಜೊತೆಯಿದೆ , ಇವೆ ಹಲವಾರು ಚಿಕ್ಕ ಚಿಕ್ಕ ವಿಷಯಗಳ ಬಗ್ಗೆ ಪ್ರತಿಯೊಬ್ಬ ಪಾಲಕರೂ ಗಮನ ಹರಿಸಬೇಕು . ಆದರೆ , ಇದನೆಲ್ಲ ಯೋಚಿಸುವ ಸಮಯ , ಸಂಯಮ ಎರಡೂ ನಮಗಿಲ್ಲ , ಇವತ್ತು ನಾವು ಮಕ್ಕಳನ್ನು ನಮ್ಮ ಜೊತೆ ಇಟ್ಟುಕೊಳ್ಳುವುದರ ಬಗ್ಗೆ ಯೋಚನೆಯೇ ಮಾಡುವುದಿಲ್ಲ . ಆದಷ್ಟು ಬೇಗ ಮಕ್ಕಳನ್ನು ಹಾಸ್ಟೆಲಿಗೆ ಸೇರಿಸಿಬಿಡಬೇಕು , ಎಲ್ಲಿಗೆ ಹೋದರೂ , ಏನ ಮಾಡತಾ ಇದ್ದಾರೆ ಎನ್ನುವ ಚಿಂತೆಯಿಂದ ಮುಕ್ತರಾಗಲು ಬಯಸುತ್ತೇವೆ . ಇದೆ ಇಂದು ನಮ್ಮ ಯೋಚನೆ . ಅದೇನು ಮನಸ್ಥಿತಿಯೋ ಗೊತ್ತಿಲ್ಲಾ …. ? ಮಕ್ಕಳನ್ನು ಹಾಸ್ಟೆಲಿನಲ್ಲಿ ಇಟ್ಟಿದ್ದೇವೆ ಅಂದರೆ , ಎನೋ ಒಂದು ರೀತಿಯ ಪ್ರತಿಷ್ಟೆ ಇಗಿನ ಜನರದ್ದು .

ಕೌಟುಂಬಿಕ ಆರ್ಥಿಕ ಪರಿಸ್ಥಿತಿ ಚನ್ನಾಗಿಲ್ಲ , ಅಥವಾ ತಂದೆ ತಾಯಿ ಇಬ್ಬರೂ ನೌಕರರು , ಅಥವಾ ಕೂಲಿ ಮಾಡದೆ ನಿರ್ವಾಹವೇ ಇಲ್ಲ , ಎಂಬ ಅನಿವಾರ್ಯತೆ ಇದ್ದ ಪಕ್ಷದಲ್ಲಿ ಮಕ್ಕಳ ಪೋಷಣೆ ದೃಷ್ಟಿಯಿಂದ ಹಾಸ್ಟೆಲ್ ಶಿಕ್ಷಣ ಒಂದು ಪರ್ಯಾಯ ಉಪಾಯ . ಆದರೆ ಇದ್ಯಾವುದೂ ಇಲ್ಲದ ಎಲ್ಲಾ ಅನುಕೂಲಗಳಿರುವ ಕುಟುಂಬದಲ್ಲಿಯೂ , ಮಕ್ಕಳನ್ನು ಹಾಸ್ಟೆಲ್ ಸೇರಿಸುವುದು ಏಕೆ ? ಹೆತ್ತಿರುವ ಒಂದೋ ಎರಡೋ ಮಕ್ಕಳನ್ನೂ ದೂರ ಇಟ್ಟು ಅವರ ಭವಿಷ್ಯದ ಕನಸು ಕಾಣುವುದು ಅರ್ಥವಿಲ್ಲದ್ದು . ಮಕ್ಕಳನ್ನು ಜೊತೆಯಲ್ಲಿ ಇಟ್ಟುಕೊಂಡು ಅವರಿಗೆ ಸಂಬಂಧಗಳ ಮೌಲ್ಯ , ಹಿರಿಯರ ಬಗ್ಗೆ ಗೌರವ , ಕಿರಿಯರ ಬಗ್ಗೆ ಪ್ರೀತಿ , ಸಂಸ್ಕಾರ , ಕರುಣೆ , ಸಹಬಾಳ್ವೆ , ಸಹಕಾರ , ಸಹಾಯ ಇವೇ ಮೊದಲಾದ ಮಾನವೀಯ ಮೌಲ್ಯಗಳನ್ನು ಕಲಿಸಿ , ಬಡತನದಲ್ಲಿ ಕುಗ್ಗದೆ , ಸಿರಿತನದಲ್ಲಿ ಹಿಗ್ಗದೆ ಎಲ್ಲರೊಳಗೊಂದಾಗುವ ಮನೋಭಾವ ಬೆಳೆಸಬೇಕು . ನಿರಾಸೆ , ಸೋಲು , ಹತಾಷೆ , ಇವುಗಳನ್ನೂ ಮೆಟ್ಟಿ ನಿಂತು , ಮೈಕೊಡವಿಕೊಂಡು ಮತ್ತೆ ಮೇಲೆಳುವ ಪಾಠವನ್ನು ಪ್ರತಿಯೊಬ್ಬ ಪಾಲಕರೂ ಹೇಳುವ ಅವಶ್ಯಕತೆ ಇದೆ.
ಯಾವ ಮಕ್ಕಳಿಗೂ ಅಪ್ಪಾ ಅಮ್ಮನ ಬಿಟ್ಟು ಮನೆಯ ಸದಸ್ಯರನ್ನು ಬಿಟ್ಟು ದೂರ ಇರುವ ಆಸೆ , ಮನಸು ಇರುವುದಿಲ್ಲ . ಆದರೆ ನಾವೆಲ್ಲಿ ಮಕ್ಕಳ ಭಾವನೆಗಳಿಗೆ ಸ್ಟಂದಿಸುತ್ತೇವೆ ಹೇಳಿ ? ನಾವು ಹೆತ್ತ ಮಕ್ಕಳು , ನಾವು ಹೇಳಿದ ಹಾಗೆ ಕೇಳಬೇಕು , ಮಾಡಬೇಕು ಕೂಡಾ , ಎನ್ನುವುದು ನಮ್ಮ ಧೋರಣೆ . ಹಾಸ್ಟೆಲಿಗೆ ಸೇರಿಸಲು ಹೋದಾಗ ಆ ಮಕ್ಕಳ ಅಳು , ಗೋಳಾಟ , ಚೂರು ಇಷ್ಟ ಇಲ್ಲದ , ವಲ್ಲದ ಮನಸ್ಸು , ನಾವೇನೆ ಸಮಜಾಯಿಷಿ ಕೊಟ್ಟರೂ ಅವರು ಖುಷಿಯಿಂದ ಇರಲು ಒಪ್ಪುವುದಿಲ್ಲ , ಆ ಸನ್ನಿವೇಶ ನೋಡುತ್ತಿದ್ದರೆ , ಎಂಥವರಿಗಾದರೂ ಕಣ್ಣಾಲಿಗಳು ನೀರಾಗುತ್ತವೆ, ಕರುಳು ಚುರುಕ್ ಎನ್ನಿಸುತ್ತದೆ . ಪಾಲಕರ ನೋವಿಗೂ ಕಡಿಮೆ ಇಲ್ಲ , ತಮ್ಮ ಕರುಳ ಬಳ್ಳಿಯನ್ನು ಅರಿಯದ ಜಾಗದಲ್ಲಿ ಬಿಟ್ಟು ಬರುವುದೆಂದರೆ ಜೀವ ಬಾಯಿಗೆ ಬಂದಿರುತ್ತದೆ , ಆದರೂ ನಾವು ಮಕ್ಕಳನ್ನು ಬಿಟ್ಟು ಬರುತ್ತೇವೆ , ಅಲ್ಲಿರುವ ಸಿಬ್ಬಂದಿಗಳಿಗೆ , ಶಿಕ್ಷಕರಿಗೆ “ ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ……ನಿಮ್ಮನ್ನೇ ನಂಬಿ ನಮ್ಮ ಮಕ್ಕಳನ್ನ ಬಿಟ್ಟು ಹೋಗತಾ ಇದ್ದೇವೆ …….ನಮ್ಮ ಮಗಾ /ಮಗಳು ಒಂದ ದಿನಾನೂ ನಮ್ಮನ್ನ ಬಿಟ್ಟು ಇರೋದಿಲ್ಲ …… ನೀವೇ ಎಲ್ಲಾ ಆಗಿ ನಮ್ಮ ಮಕ್ಕಳನ್ನ ಜೋಪಾನ ಮಾಡಿ… ಪುಣ್ಯಾ ಬರತ್ತೆ ….” ಎಂದು ಹೇಳಿ ಗೋಳಾಡುತ್ತ ಮನೆ ದಾರಿ ಹಿಡಿಯುವುದು . ನಮ್ಮ ಮಕ್ಕಳನ್ನ ನಾವು , ನಮಗೆ ಹೇಗೆ ಬೇಕೋ ಹಾಗೆ , ಜೋಪಾನ ಮಾಡುವುದನ್ನು ಬಿಟ್ಟು , ಸಂಬಳಕ್ಕಾಗಿ ದುಡಿಯುವ ನೌಕರರಿಗೆ ನಮ್ಮ ಮಕ್ಕಳನ್ನ ನೀವೂ ಚೆನ್ನಾಗಿ ನೋಡಿಕೊಳ್ಳಿ ಅಂದ್ರೆ , ಏನ ಅರ್ಥ . ಅವರು ಅವರ ಕುಟುಂಬ , ಮಕ್ಕಳು ಚೆನ್ನಾಗಿರಲಿ ಅಂತ ನೌಕರಿಗೆ ಸೇರಿರುತ್ತಾರೆ ಹೊರತು ನಮ್ಮ ಮಕ್ಕಳ ಎಲ್ಲಾ ಜವಾಬ್ದಾರಿ ಹೊರುವುದಕ್ಕಲ್ಲ . ವಾಸ್ತವ ಹೀಗಿದ್ದಾಗ ಪಾಲಕರು ನೆಮ್ಮದಿ ಇಂದ ಇರಲು ಹೇಗೆ ಸಾದ್ಯ ?
ಹೊಸ ವಾತಾವರಣ , ಹೊಸ ಜನ , ಬದಲಾದ ಊಟೋಪಚಾರ , ಓದುವ ಹೊರೆ , ತಮ್ಮ ವಸ್ತುಗಳ ಬಗ್ಗೆ ಕಾಳಜಿ , ತನಗೇನೆ ಆದರೂ ಅದನ್ನು ತಾನೇ ನಿಭಾಯಿಸಬೇಕು ಈಎಂಬ ಸ್ವಾವಲಂಬಿತನ , ಈ ಎಲ್ಲದರ ನಡುವೆ ಮಕ್ಕಳು ಮಾನಸಿಕವಾಗಿ ನುಜ್ಜುಗುಜ್ಜಾಗಿ ಹೋಗಿರುತ್ತವೆ . ಪಾಲಕರಾದ ನಾವು ತಿಂಗಳಿಗೊಮ್ಮೆ ಹೋದಾಗ ಮೊದಲು ಕೇಳುವುದು “ ಪರೀಕ್ಷೆ ಆಗಿದಾವಾ….? ಎಷ್ಟ್ ಮಾರ್ಕ್ಸ್ ತಗೊಂಡಿ…. ? ಕಡಿಮೆ ತಗೊಳ ಮಾತೇ ಇಲ್ಲ …. ಹಾಸ್ಟೆಲನಲ್ಲಿ ಇದ್ದೀಯಾ …. ಇಲ್ಲೇನು ಕೆಲಸ ಇರೋದಿಲ್ಲ ….. ಕುಂತಕೊಂಡ ಓದುವುದೊಂದ ಕೆಲಸ …… ಅದನ್ ಮಾಡೋದಕೆ ಇಲ್ಲೆ ಇಟ್ಟಿರೋದು …… ನೆನಪು ಇರಲಿ ……” . ಎಲ್ಲಾ ಪಾಲಕರು ಇದನ್ನೇ ಹೇಳೋದು ಮಕ್ಕಳಿಗೆ . ಪಾಲಕರ ಈ ವರ್ತನೆಯಿಂದಾಗಿ ಮಕ್ಕಳು ತಮ್ಮ ಸಮಸ್ಯೆ , ತೊಂದರೆಗಳ ಬಗ್ಗೆ ಯಾರ ಹತ್ತಿರವೂ ಹೇಳಲು ಆಗುವುದಿಲ್ಲ .
ಇಷ್ಟ ಇಲ್ಲದಿದ್ದರೂ , ಕಷ್ಟಪಟ್ಟು ಮಕ್ಕಳು ದಿನ ಕಳೆಯುತ್ತವೆ . ಪಾಲಕರ ಒತ್ತಾಯಕ್ಕೆ ಹಾಸ್ಟೆಲ್ ಸೇರಿದ ಮಕ್ಕಳು ಅಲ್ಲಿಂದ ತಪ್ಪಿಸಿಕೊಂಡು ಕಣ್ಮರೆಯೂ ಆಗಬಹುದು , ಇಲ್ಲವೆ ಇನ್ನೂ ಕೆಲವು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಇವೆ . ಇವಾಗಿನ ಚಿಕ್ಕ ಮಕ್ಕಳಲ್ಲಿ ಕಂಡು ಬರುವ ಹೃದಯ ಸ್ಥಂಬನಕೆ ಕಾರಣ , ಅವರ ಮೇಲಿನ ಹೆಚ್ಚು ಮಾನಸಿಕ ಒತ್ತಡವೂ ಇರಬಹುದು . ‘ ಅಪ್ಪಾ ಬರಬಹುದು , ಅಮ್ಮಾ ಬರಬಹುದು , ಓ ದೇವರೇ …. ಯಾರಾದರೂ ಬಂದು ನನ್ನ ಇಲ್ಲಿಂದ ಕರೆದುಕೊಂಡು ಹೋಗೊ ಹಾಗೆ ಮಾಡಪ್ಪ …… ? ಎಂದು ಆ ಪುಟ್ಟ ಹೃದಯಗಳು ಅಂಗಲಾಚುತ್ತವೆ , ಅಳುತ್ತವೆ , ಗೊಳಿಡುತ್ತವೆ , ಏನೂ ಪ್ರಯೋಜನ ಇಲ್ಲ ಎಂದು ತಿಳಿದು ನಿರಾಸೆಯಿಂದ , ಮತ್ತೇ ತಮಗೆ ತಾವೇ ಸಮಧಾನ ಮಾಡಿಕೊಂಡು ಯೋಚಿಸುತ್ತಾ ಶಾಲೆಯ ಗೇಟಿನಲ್ಲೇ ದೃಷ್ಟಿ ನೆಟ್ಟು ಕಾಯುವ ಮಕ್ಕಳ ಸ್ಥಿತಿಗೆ ನಿಜಕ್ಕೂ ನೋವಾಗುತ್ತದೆ , ಮನಸ್ಸು ಮಮ್ಮಲ ಮರುಗುತ್ತದೆ . ಅಲ್ಲೆಲ್ಲೋ ಮಕ್ಕಳನ್ನು ದೂರದಲ್ಲಿ ಇಟ್ಟು , ಇನ್ನೆಲ್ಲೋ ನಾವು ಅವರ ಭವಿಷ್ಯ ಕಟ್ಟುವ ಕೆಲಸ ಮಾಡುತ್ತೇವೆ.
ದಿನ ಕಳೆದು , ವರ್ಷಗಳು ಗತಿಸುತ್ತವೆ , ಮಕ್ಕಳು ಬೆಳೆಯುತ್ತಾರೆ . ಮನೆಗೆ ಬಂದಾಗ ನಮ್ಮ ಮಕ್ಕಳು ಬಹಳ ಬದಲಾಗಿರುವುದು ನಮ್ಮ ಗಮನಕ್ಕೆ ಬರುತ್ತದೆ . ಹಿರಿಯರ ಮಾತು ಕಿರಿಕಿರಿ , ಅವರ ಕಾಳಜಿ ತಲೆನೋವು , ಅಮ್ಮನ ಮಾತು ವಟಗುಡುವಿಕೆ ಆಗುತ್ತದೆ , ಅಪ್ಪಾ ಖಳನಾಯಕನಾಗಿ ಕಾಣುತ್ತಾನೆ. ಯಾರು ಬೇಡ , ಯಾವ ಸಂಬಂಧವೂ ಬೇಡವೆನ್ನುವ ಮನೋಸ್ಥಿತಿ ಅವರದಾಗಿರುತ್ತದೆ . ಕೆಲವು ಮಕ್ಕಳು ಕೆಟ್ಟ ಚಟಗಳಿಗೆ ಬಲಿಯೂ ಆಗಿರುತ್ತಾರೆ , ಕಳ್ಳತನ , ಬಾಲಾಪರಾಧ , ಸುಳ್ಳು ಹೇಳುವುದು , ಮೋಸ ಮಾಡುವುದು , ಮನೆಯಲ್ಲಿ ಅಕ್ಕ , ತಂಗಿ , ತಾಯಿ , ನೆರೆಹೊರೆಯ ಹೆಣ್ಣು ಹುಡುಗಿಯರ ಜೊತೆ ಬೆರೆತು ಬೆಳೆಯದ ಮಕ್ಕಳು ಮುಂದೊಂದು ದಿನ , ಅಪ್ರಾಪ್ತ ವಯಸ್ಸಿನಲ್ಲೇ ಅತ್ಯಾಚಾರಿಗಳು ಆಗಬಹುದು , ಇಂಥಹ ಆಘಾತಕಾರಿ ಸಂಭವಗಳು ಹೆಚ್ಚು . ಚಿಕ್ಕಂದಿನಲ್ಲಿ ತೋರಿಸದ ಅಕ್ಕರೆ , ದೊಡ್ಡವರದಾಗ ತೋರಿಸಿದರೆ ಸಹಜವಾಗೇ ಅದು ಕಿರಿಕಿರಿ ಅನಿಸುತ್ತದೆ . ಅವರ ಭವಿಷ್ಯದ ಬಗ್ಗೆ ನಮ್ಮ ಆಲೋಚನೆಯೇ ಬೇರೆ , ಮಕ್ಕಳ ಆಲೋಚನೆಯೇ ಬೇರೆ , ಅವರು ನಾವು ಹೇಳಿದ ಹಾಗೆ ಕೇಳಲು ತಯಾರು ಇರುವುದಿಲ್ಲ . ನಮ್ಮ ಹತೋಟಿ ಅವರ ಮೇಲೆ ಒತ್ತಾಯದ ನಿರ್ಭಂದವಾಗುತ್ತದೆ ಈ ವಾತಾವರಣದಲ್ಲಿ ಅವರು ಹೆಚ್ಚು ದಿನ ಇರಲು ಇಷ್ಟ ಪಡಲಾರರು . ಸ್ವಚ್ಚಂದವಾಗಿ ಹಾರಾಡಿದ ಮನಸ್ಸು ಅವರದು , ಈಗ ಕಡಿವಾಣ ಹಾಕಲು ಹೋದರೆ ಕೇಳಿತೇ ? . ದಂಡಿಸುವ ವಯಸ್ಸು ಮೀರಿರುತ್ತದೆ , ಬುದ್ಧಿ ಮಾತು ಅವರಿಗೆ ಪತ್ಯೆವಾಗುತ್ತದೆ . ಕೊನೆಗೆ ಒಂದ ದಿನ ನಮ್ಮಿಂದ , ಮನೆಯಿಂದ ಮತ್ತೆ ದೂರದಲ್ಲಿ ಇರಲು ಸಿದ್ಧರಾಗುತ್ತಾರೆ . ಹೊಂದಾಣಿಕೆ ಕೊರತೆಯಿಂದಾಗಿ ತಂದೆ ,ತಾಯಿನ ಬಿಟ್ಟು ದೂರ ಹೋಗಿ ತಮಗೆ ಇಷ್ಟವಾದ ಉದ್ಯೋಗವನ್ನು ತಾವೇ ಹುಡುಕಿಕೊಂಡು ಜೀವನ ಕಟ್ಟಿಕೊಂಡು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮಗೆ ಸರಿ ಹೊಂದುವ , ತಾವೇ ಇಷ್ಟ ಪಟ್ಟ ಜೀವನ ಸಂಗಾತಿಯನ್ನು ಅವರೇ ಹುಡುಕಿಕೊಂಡು ಬಾಳುತ್ತಾರೆ . ಎಲ್ಲವೂ ಸರಿಯಾಗಿದ್ದರೆ ಯಶಸ್ವಿ ಸಂಸಾರ ಜೀವನ ಅವರದ್ದಾಗುತ್ತದೆ , ಇಲ್ಲಿಯು ಹೊಂದಾಣಿಕೆ ಕೊರತೆ , ಅಪ್ಪಾ ಅಮ್ಮಾ ಜೊತೆಯಲ್ಲಿದ್ದರೆ ನೋಡಿಕೊಳ್ಳುವುದು ಆಗಲಾರದ ಸನ್ನಿವೇಶದಲ್ಲಿ ವೃದ್ಧಾಶ್ರಮಕೆ ಮೊರೆ ಹೋಗುವುದು , ಪರಸ್ಪರರಲ್ಲಿ ಗೌರವದ ಕೊರತೆ , ಸ್ವಾತಂತ್ರ್ಯದ ಹಂಬಲ, ಸ್ವಪ್ರತಿಷ್ಠೆ , ಅಹಂ, ಇವೆಲ್ಲ ಕಾರಣಕ್ಕೆ ಕುಟುಂಬ ಛಿದ್ರವಾಗುವುದು ವಿಚ್ಚೇದನದಲ್ಲಿ ಅಂತ್ಯವಾಗುವುದು . ಇದೆಲ್ಲವನ್ನೂ ಮೂಕ ಪ್ರೇಕ್ಷಕರಂತೆ ಹೆತ್ತವರು ನೋಡುತ್ತಾ ಕೊರಗುವುದು , ಒಂದು ರೀತಿಯ ಅಸಹಾಯಕತೆ ಆವರಿಸುತ್ತದೆ . ಮಕ್ಕಳಿಗೋಸ್ಕರ ಪಟ್ಟ ಕಷ್ಟ , ಏನೇ ತೊಂದರೆ ಇದ್ದರೂ ಮಕ್ಕಳು ಚೆನ್ನಾಗಿ ಓದಲಿ , ಚೆನ್ನಾಗಿ ಬದುಕಲಿ ಅಂತ , ಏನಾದರೂ ಕೇಳೋದಕಿಂತ ಮುಂಚೆನೇ ಕೊಡಿಸುವ ಅಪ್ಪಾ , ಅಮ್ಮಾ , ಕೊನೆಯಲ್ಲಿ ‘ ನಮಗಾಗಿ ನೀವು ಏನ ಮಾಡಿದೀರಾ ‘ ? , ಎಂದು ಮಕ್ಕಳು ಕೇಳುವ ಪ್ರಶ್ನೆಗೆ ಯಾವ ಉತ್ತರವೂ ಇರುವುದಿಲ್ಲ , ಯಾಕೆ ಅಂದ್ರೆ ನಮ್ಮ ಕಷ್ಟದ ಬಗ್ಗೆ , ಬಡತನದ ಬಗ್ಗೆ , ಅವರು ನೋಡಿರುವುದಿಲ್ಲ .
ಒಂದ ಸಮಯದಲ್ಲಿ ಮಕ್ಕಳು ನಮಗೆ ಭಾರ ಅಂತ ದೂರ ಇಟ್ಟರೆ , ಜೀವನದ ಇನ್ನೊಂದು ಹಂತದಲ್ಲಿ ನಾವು ಅವರಿಗೆ ಭಾರ ಆಗುತ್ತೇವೆ . ಹಿಂದಿನ ನಮ್ಮ ಹಿರಿಯರು ತಮಗೆ ಲೆಕ್ಕ ಇಡಲಾಗದಷ್ಟು ಮಕ್ಕಳನ್ನು ಹೆತ್ತರು , ಅವಿಭಕ್ತ ಕುಟುಂಬ ಇದ್ದರೂ , ಕಿತ್ತು ತಿನ್ನುವ ಬಡತನ ಇದ್ದರೂ , ಯಾರೂ ಸಹಾ ತಮ್ಮ ಮಕ್ಕಳನ್ನು ದೂರ ಎಲ್ಲೂ ಇಡುತ್ತಿರಲಿಲ್ಲಾ . ಆಗೆಲ್ಲಾ ಮಕ್ಕಳು ಮನೆಯಲ್ಲೇ ಹುಟ್ಟಿ ಬೆಳೆಯುತ್ತಿದ್ದರು , ಅವರ ಕೊನೆಯ ದಿನಗಳು ಸಂತೋಷದಿಂದ ಮೊಮ್ಮಕ್ಕಳ ಜೊತೆ ಕಳೆಯುತ್ತಿದ್ದವು . ಜೀವನದ ಮೌಲ್ಯಗಳನ್ನು ಕಲಿತ ಮಕ್ಕಳು , ಆದರ್ಶ ಜೀವನ ನಿರ್ವಹಣೆ ಕಲಿಯುತ್ತಿದ್ದರು . ಸಂಬಂಧಗಳ ಮೌಲ್ಯ , ಸಮಾಜದ ಮೌಲ್ಯ ತಿಳಿಯುತ್ತಿದ್ದರು . ಹಿರಿಯರಿಂದ ವೇದ , ಪುರಾಣಗಳ ಪರಿಚಯ ಆಗುತ್ತಿತ್ತು , ಹಂಚಿಕೊಂಡು ಬದುಕುವ ಕಲೆ ಕಲಿಸುತ್ತಿದ್ದರು . ಹೆಣ್ಣನ್ನು ಗೌರವಿಸಿ, ಆದರಿಸುವುದನ್ನು ಹಿರಿಯರನ್ನು ನೋಡಿ ಕಲಿಯುತ್ತಿದ್ದರು . “ ಮನೆಯೇ ಮೊದಲ ಪಾಠ ಶಾಲೆ , ಜನನಿ ತಾನೇ ಮೊದಲ ಗುರು ” , ಸತ್ಯವಲ್ಲವೇ ? ಒಬ್ಬ ಮನುಷ್ಯನ ಬದುಕು ನಡೆಯುವುದು ಇನ್ನೊಬ್ಬಮನುಷ್ಯನ ಜೊತೆ , ಅದಕ್ಕೆ ಬೇಕಿರುವುದು ಮಾನವೀಯ ಮೌಲ್ಯಗಳು ಅಷ್ಟೆ . ಎಲ್ಲವನ್ನೂ ಪುಸ್ತಕಗಳು , ಶಾಲೆಗಳು ಕಲಿಸುವುದಿಲ್ಲ . ಅಂಕಗಳ ಬೆನ್ನು ಹತ್ತಿ , ಹುದ್ದೆಗಳ ಗುದ್ದಾಟದಲ್ಲಿ , ಹಣ ಗಳಿಸುವ ಹೆಣಗಾಟದಲ್ಲಿ , ಪ್ರತಿಷ್ಠೆಯ ಪಿಕಲಾಟದಲ್ಲಿ , ಆಸ್ತಿ ಮಾಡುವ ಲಾಲಸೆಯಿಂದ , ನಮ್ಮ ಮಕ್ಕಳ ಸುಂದರ ದಿನಗಳನ್ನು , ಮುಗ್ಧ ಬಾಲ್ಯವನ್ನು ಕಿತ್ತುಕೊಂಡು , ಆವರ ದೈವದತ್ತ ಹಕ್ಕಾಗಿರುವ ಅಮ್ಮನ ಮಡಿಲು , ಅಪ್ಪನ ಹೆಗಲು ಕಿತ್ತುಕೊಳ್ಳುವಷ್ಟು ಕ್ರೂರಿಗಲಾಗುತ್ತಿದ್ದೇವೆ .
ಚೆನ್ನಾಗಿ ಓದಿದ ಮಕ್ಕಳು ಚೆನ್ನಾಗಿ ಬದುಕುತ್ತಾರೆ ಎನ್ನುವುದು ಮಿತ್ಯ. ನಮ್ಮ ಹಿರಿಯರು ಯಾವ ವಿಶ್ವವಿದ್ಯಾಲಯದ ಪದವಿ ಪಡೆಯದಿದ್ದರೂ ಸಾರ್ಥಕ ಜೀವನ ಕಳೆಯಲಿಲ್ಲವೇ? ಸಮಾಜದಲ್ಲಿ ಆದರ್ಷರಾಗಿ ಬದುಕಲಿಲ್ಲವೇ ? ಇವತ್ತು ವೃದ್ಧಾಶ್ರಮಗಳು ಹೆಚ್ಚಾಗಲು ಹಾಸ್ಟೆಲ್ ಶಿಕ್ಷಣವೂ ಒಂದು ಮುಖ್ಯ ಕಾರಣ . ನಾವು ಮಕ್ಕಳಿಗೆ ಆವರ ಎಳೆ ವಯಸ್ಸಿನಲ್ಲಿ ಏನು ಕೊಡುತ್ತೇವೋ , ಅದನ್ನೇ ನಾಳೆ ನಮ್ಮ ಇಳಿ ವಯಸ್ಸಿನಲ್ಲಿ ಅವರು ಕೊಡುವರು . ನಮ್ಮ ಪ್ರೀತಿ ಅವಶ್ಯಕತೆ ಇದ್ದಾಗ ದೂರ ಇಟ್ಟು , ನಮಗೆ ಪ್ರೀತಿ ತೋರಿಸುತ್ತಿಲ್ಲ ಎಂದು ದೂರುವುದು ಎಷ್ಟು ಸರಿ ?
ಮಕ್ಕಳನ್ನು ಹಾಸ್ಟೆಲಿನಲ್ಲಿ ಓದಿಸಲೇಬಾರದು ಎನ್ನುವ ವಾದ ನನ್ನದಲ್ಲ , ನಮ್ಮ ಜೊತೆಯಲ್ಲೇ ಇದ್ದು , ಓದಿದರೆ ಎಲ್ಲಾ ರೀತಿಯಲ್ಲೂ ಒಳ್ಳೆಯದು . ಮಕ್ಕಳ ಚೇಷ್ಟೆ , ಅವರ ಮೊಂಡುತನ , ಹಠಮಾರಿತನ , ಆಗಿನ ಸಮಯಕ್ಕೇ ಕೋಪ , ಬೇಸರ ತರಿಸಿದರೂ , ಮಕ್ಕಳ ಮುದ್ದು ಮುಖ ನೋಡಿದರೆ ಅದೆಲ್ಲವೂ ಮಾಯವಾಗುತ್ತದೆ . ಮನೆ ಕೆಲಸದ ಹೊರೆ , ಹೊರಗೆ ದುಡಿದು ಬಳಲಿದ ಮನಸ್ಸಿಗೆ , ಮನೆಗೆ ಬಂದಾಗ ಮಕ್ಕಳು ತೋರುವ ಪ್ರೀತಿ , ಅಮ್ಮನ ಮೇಲಿನ ಅವರ ದೂರು , ಸ್ನೇಹಿತರ ಜೊತೆಗೆ ಮಾಡಿದ ಜಗಳ , ಶಾಲೆಯಲ್ಲಾದ ಪಾಠ , ಶಿಕ್ಷಕರ ಬಗ್ಗೆ ಆವರ ಅಭಿಪ್ರಾಯ , ಒಂದಾ , ಎರಡಾ , ಅವರ ಮಾತು ಕೇಳುತ್ತ ದಣಿವು ಮರೆಯುವ ಅನುಭವಕ್ಕೇ ಯಾವ ಬೆಲೆನೂ ಕಟ್ಟಲು ಸಾದ್ಯವಿಲ್ಲ . ಈ ಖುಷಿ ಸ್ವಲ್ಪೇ ಕಾಲ ನಮಗೆ ಸಿಗುವುದು , ನೋಡನೋಡುತ್ತಿದ್ದಂತೆ ಮಕ್ಕಳು ಬೆಳೆದು ದೊಡ್ಡವರಾಗಿಬಿಡುತ್ತಾರೆ . ಗಂಡು ಮಕ್ಕಳಾದರೆ ಅಪ್ಪನ ಹೆಗಲಿನ ಭಾರ ಹಂಚಿಕೊಳ್ಳುತ್ತಾರೆ . ಹೆಣ್ಣು ಮಕ್ಕಳಾದರೆ ಅಮ್ಮನ ಅನುಭವದ ಪಾಠ ಕಲಿತು , ಮನೆಯ ಗೌರವದ ಸಂಕೇತವಾಗುತ್ತಾರೆ . ಸರಿ ತಪ್ಪುಗಳನ್ನು ತಿಳಿಹೇಳಿ ತಿದ್ದಿ , ಒಬ್ಬ ಒಳ್ಳೆಯ ಪ್ರಜೆಯನ್ನು ಸಮಾಜಕ್ಕೆ ಕೊಡುಗೆ ಕೊಡಲು ಸಾಧ್ಯವಾಗುತ್ತದೆ ಜೊತೆಗೆ ಆ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿ , ಆವರ ಪ್ರತಿಭೆಯ ಅನಾವರಣವಾಗುತ್ತದೆ , ಮಕ್ಕಳ ಬೆಳವಣಿಗೆಯ ಹಂತಳನ್ನು ನೋಡಲು ಹೆತ್ತವರಿಗೂ ಸಂತಸವಾಗುತ್ತದೆ. ಮುಂದೆ ಬೆಳೆದು ದೊಡ್ಡವರಾದ ಮೇಲೆ ಬೇರೆ ಬೇರೆ ಕಾರಣಕ್ಕೆ ದೂರ ಇರೋದು ಇದ್ದೆ ಇದೆ . ಕೊನೆ ಪಕ್ಷ ನಮ್ಮ ಬಗ್ಗೆ ಗೌರವ , ಅಭಿಮಾನ ಕೊನೆವರೆಗೂ ಇರುತ್ತದೆ , ವೃದ್ಧಾಶ್ರಮದ ಸಂಖ್ಯೆನಾದರು ಕಡಿಮೆ ಆಗಬಹುದು , ಎನ್ನುವುದು ನನ್ನ ಅನಿಸಿಕೆ. ಹಾಗೇ ಎಲ್ಲಾ ಮಕ್ಕಳು ಹೀಗೆ ಆಗುತ್ತಾರೆ ಎನ್ನಲೂ ಸಾದ್ಯವಿಲ್ಲ , ಆದರೆ ಇಂಥ ಪ್ರಕರಣಗಳು ಹೆಚ್ಚುತ್ತಿವೆ ಎನ್ನುವುದೇ ಆತಂಕಕಾರಿ ಸಂಗತಿ .
ಪರವಿನ ಬಾನು ಯಲಿಗಾರ




So nice writting mam.